ಖಾಸಗಿ ವನ್ಯಸಂರಕ್ಷಣೆಗಾಗಿ ಕೈ ಜೋಡಿಸಿ

ಹೋಂ ಸ್ಟೇ, ರಿಸಾರ್ಟುಗಳು ಹೆಚ್ಚಾದಂತೆ ಸಸ್ಯ ಪ್ರಪಂಚ ಬಡವಾಗುತ್ತಿದೇ, ವನ್ಯ ಸಂರಕ್ಷಣೆಯ ಕುರಿತು ಲೇಖಕ, ಪರಿಸರವಾದಿ ಅಶೋಕ ವರ್ಧನ ಅವರು ಬರೆದಿರುವ ಲೇಖನವನ್ನು ತಪ್ಪದೆ ಓದಿ…

ಇದು ವನ್ಯಕ್ಕೆ ವಿಪರೀತ ಕಾಲ. ಸರಕಾರೀ ವನ್ಯ ಕಾಳಜಿಯಲ್ಲಿ ಸಂರಕ್ಷಣೆ ಕೊನೆಯ ಸಾಲಿನಲ್ಲಿದೆ. ದುರ್ಗಮ ಪಶ್ಚಿಮ ಘಟ್ಟದ ದಟ್ಟಾರಣ್ಯಗಳಲ್ಲೂ ರೈಲ್ವೇ, ಚತುಷ್ಪಥ, ಸುರಂಗಮಾರ್ಗ, ವಿದ್ಯುತ್ ಸರಿಗೆ, ಪೆಟ್ರೋ ಕೊಳವೆ, ಜಲವಿದ್ಯುತ್, ನದಿ ತಿರುವು ಎಂದಿತ್ಯಾದಿ ‘ಜನಪರ’ ಅಭಿವೃದ್ಧಿ ಕಾರ್ಯಗಳಿಗೆ, ಕಿರೀಟವಿಟ್ಟಂತೆ ಜನರೂ ಸುಳ್ಳೇ ಪರಿಸರ ಪ್ರವಾಸೋದ್ದಿಮೆಯ ಹೆಸರಿನಲ್ಲಿ ಕಗ್ಗಾಡ ಮೂಲೆಯನ್ನೂ ಹೋಂ ಸ್ಟೇ, ರಿಸಾರ್ಟು ಎಂದೆಲ್ಲಾ ಹೊರೆ ಹೆಚ್ಚಿಸಿ ಮೂಕ ಸಸ್ಯ ಪ್ರಪಂಚ ಬಡವಾಗುತ್ತಿವೆ, ಪ್ರಾಣಿಪ್ರಪಂಚವಂತೂ ಅಲ್ಲೋಲ ಕಲ್ಲೋಲದಲ್ಲಿದೆ. ಅವುಗಳ ಮುನ್ನೆಲೆಯಲ್ಲಿ ನನ್ನ ತೀರಾ ಸಣ್ಣ ಪ್ರಯೋಗ – ಖಾಸಗಿ ಕಾಡು ಅಶೋಕವನ, ಹೊಸ ತಲೆಮಾರಿನ ಹಲವು ಮಂದಿಗೆ ವನ್ಯ ಸಂರಕ್ಷಣೆಯ ಹೊಸ ಸಂದೇಶವನ್ನೇ ಕೊಟ್ಟಿದೆ.
ಹದಿನಾರು ವರ್ಷಗಳ ಹಿಂದೆ ಪುಷ್ಪಗಿರಿ ವನಧಾಮದ ಬಿಸಿಲೆ ಘಾಟಿಯ ಒತ್ತಿನಲ್ಲಿ, ಹದಿನೈದು ಎಕ್ರೆಯ ಹಾಳುಬಿದ್ದ ಕೃಷಿ ನೆಲದಲ್ಲಿ ತೊಡಗಿದ ‘ಅಶೋಕವನ’ ಅರ್ಥಾತ್ ಶುದ್ಧ ವನ್ಯ ಸಂರಕ್ಷಣೆಯ ಪ್ರಯೋಗ, ಇನ್ನೊಂದರ್ಥದಲ್ಲಿ ‘ಖಾಸಗಿ ಸಹಜಾರಣ್ಯ’ ದ ಹೊಸ ಕಲ್ಪನೆ. ಅದಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ ಕನಿಷ್ಠ ಎರಡು ಮೂರು ಮಂದಿಯಾದರೂ ತಾವೂ ‘ಹೀಗೆ ಹಾಳುಬಿದ್ದ ಖಾಸಗಿ ಕೃಷಿಭೂಮಿಗಳನ್ನು ಸಹಜಾರಣ್ಯವಾಗಿ ವಿಕಸಿಸುವ ಪ್ರಯೋಗಕ್ಕೆ ಪಾಲುದಾರರಾಗುತ್ತೇವೆ’ ಎಂದೇ ಮುಂಬಂದಿದ್ದರು. ಆದರೆ ಆ ಸಮಯದಲ್ಲಿ ನಾನಿನ್ನೂ ಪುಸ್ತಕೋದ್ಯಮದಲ್ಲೇ ಪೂರ್ಣ ವ್ಯಸ್ತನಾಗಿದ್ದುದರಿಂದ ಅವರಿಗೆ ನಾಯಕತ್ವ ಕೊಡುವ ಸಾಮರ್ಥ್ಯವಿಲ್ಲದೇ ಕೈಬಿಟ್ಟಿದ್ದೆ. ಆದರೆ…

ಈಚೆಗೆ ಅಪಾರ ಬುದ್ಧಿಮತ್ತೆ ಮತ್ತು ಆದಾಯವಿದ್ದರೂ ಜೀವಮಾನವಿಡೀ ಎಂಬಂತೆ, ಕುಳಿತಲ್ಲೇ ಗಣಕದ ಕೃತಕ ಲೋಕದಲ್ಲಿ ಕಳೆದು ಹೋಗುವ ಹಲವರು ನಿಜದ ವನ್ಯ ಸಂರಕ್ಷಣೆಗೆ ಇಳಿಯಲು ಮುಂದಾಗಿದ್ದಾರೆ. ನನ್ನ ವೈಯಕ್ತಿಕ ಮಿತಿಯಲ್ಲಿ ಅದಕ್ಕೆ ಪೂರ್ಣ ನೈತಿಕ ಬೆಂಬಲ ಹಾಗೂ ಮಾರ್ಗಸೂಚನೆಗಳನ್ನು ಕೊಡುವಂತೆ ಅಂಥವರನ್ನು ಕೂಡಿಕೊಂಡು ಬಿಸಿಲೆಗೆ ಈಚೆಗೆ ಎರಡು ಯಾತ್ರೆ ನಡೆಸಿದೆ. ಕಳೆದ ತಿಂಗಳು ಜೋಡುಮಾರ್ಗದ ಕಿರಿಯ ಗೆಳೆಯ ಅನಿಲ್ ನೇತೃತ್ವದಲ್ಲಿ ಎರಡು ಮೂರು ಮಂದಿ ಹೊರಟಿದ್ದರು. ಕಡೇ ಗಳಿಗೆಯಲ್ಲಿ ಉಳಿದವರಿಗೆ ಬಿಡುವಾಗದಿದ್ದರೂ ನಿಮ್ಮೊಡನಿದ್ದೇವೆ ಎನ್ನುವಂತೆ ದೇವಕಿ, ನರೇಂದ್ರ ಪೈ ಮತ್ತು ಅರವಿಂದ ಕುಡ್ಲ ಜತೆಗೊಟ್ಟಿದ್ದರು. ಮೂರು ದಿನದ ಹಿಂದೆ ಕೋಟದ ಇನ್ನೀರ್ವರು ಕಿರಿಯ ಗೆಳೆಯರು – ಸುಬ್ರಹ್ಮಣ್ಯ ಉರಾಳ ಮತ್ತು ಕಪಿಲ್ ಭರತ ಬಂದಾಗ ಹಳೆಗೆಳೆಯ ಸುಂದರರಾವ್ ಕೂಡಾ ಜತೆಗೊಟ್ಟರು. ಸುಬ್ರಹ್ಮಣ್ಯ ಕೈಕಂಬದ ಭುವನೇಶ್ ಮತ್ತು ಮಾಂಕನ ಹಳ್ಳಿಯ ಶಿವರಾಜಪ್ಪ ನಮ್ಮ ‘ಸಂಪನ್ಮೂಲ’ ವ್ಯಕ್ತಿಗಳು. ಸದ್ಯ ನಾಲ್ಕೈದು ವಿವಿಧ ಗಾತ್ರದ (ನಾಲ್ಕರಿಂದ ಮೂವತ್ತು ಎಕ್ರೆಯವರೆಗೂ) ಮತ್ತು ಯೋಗ್ಯತೆಯ (ಕಾಡು, ಜವುಗು ನೆಲ, ಏಲಕ್ಕಿ ಮಲೆ, ಹಡ್ಲು ಬಿಟ್ಟ ಗದ್ದೆ, ಹಾಳುಬಿದ್ದ ತೋಟ…) ತರಹೇವಾರಿ ದರಗಳ ಸ್ಥಳಗಳನ್ನು ನೋಡಿದ್ದಾಗಿದೆ, ಆಶಯಗಳ ಎತ್ತರಕ್ಕೆ ಹೆಜ್ಜೆ ಇಡುವ ಮುನ್ನ ನಮ್ಮ ವೈಚಾರಿಕ ಸ್ಪಷ್ಟತೆಗೆ ಈ ಕೆಲವು ಮೌಲ್ಯಗಳನ್ನು ನೆಚ್ಚಿಯೇ ಮುಂದುವರಿಯುತ್ತಿದ್ದೇವೆ.

This slideshow requires JavaScript.

 

ನೆಲ ಹೇಗೇ ಇರಲಿ, ಮೂಲ ಯಜಮಾನಿಕೆ ಹಾಗೂ ಮಾರಾಟದ ದಾಖಲೆ ಪತ್ರಗಳು ಶುದ್ಧವಿರಬೇಕು. ಅದು ಶುದ್ಧ ಕಾಡು ಅಥವಾ ಹಾಳಾದ ತೋಟವೇ ಇರಬಹುದು. ಆದರೆ ವನ್ಯ ಜೀವಿಗಳ ಸುಲಭ ಸಂಚಾರಕ್ಕೆ ಅನುಕೂಲವಾಗುವಂತೆ ಕಾಯ್ದಿರಿಸಿದ ಅಥವಾ ಪೂರ್ಣ ಸಂರಕ್ಷಿತ ಅರಣ್ಯಕ್ಕೆ ತಾಗಿಕೊಂಡಂತಿರಬೇಕು. ಮುಂದೆ ಅವುಗಳ ಕೃಷಿತ ಸಸ್ಯ ಸಂಪತ್ತು, ಅಂದರೆ, ಆ ನೆಲ ಮತ್ತು ಪರಿಸರದಲ್ಲಿ ಸಹಜವಾಗಿ ಬದುಕಲಾರದ ಅಡಿಕೆ, ತೆಂಗು, ಬಾಳೆ, ಕಾಫಿ ಮುಂತಾದವುಗಳ ವಾಣಿಜ್ಯ ಆಕರ್ಷಣೆಯನ್ನು ನಿರಾಕರಿಸಿ ಕಡಿದು ಕಳೆಯಬೇಕು. ಅಲ್ಲದಿದ್ದರೂ ಅವುಗಳಿಗೆ ಪೋಷಣೆಯನ್ನು (ನೀರು, ಗೊಬ್ಬರ, ಪೀಡೆ ನಿವಾರಣೆ, ರಕ್ಷಣೆ..) ಪೂರ್ಣ ನಿಲ್ಲಿಸಿ, ಪ್ರಾಕೃತಿಕ ಸ್ಪರ್ಧೆಗೆ ಬಿಟ್ಟುಬಿಡಬೇಕು. ಏತನ್ಮಧ್ಯೆ ಅಯಾಚಿತವಾಗಿ ಬರುವ ಫಸಲು ಮತ್ತು ಕಾಡುತ್ಪನ್ನಗಳು ಎಂದೇ ತಪ್ಪು ಸಂದೇಶ ಬೀರುವ ಕಣಿಲೆ, ಸೀಗೆ, ಪತ್ರೆಯೇ ಮೊದಲಾದವುಗಳನ್ನು ‘ಮಣ್ಣು’ ಆಗಲು ಬಿಡುವುದು ಉತ್ತಮ. ಹಾಗಿದ್ದರೆ ಅವು ಕಳ್ಳ ಸಾಗಣೆಯವರಿಗೆ ಆಕರ್ಷಣೆ ಉಂಟು ಮಾಡುವ ಭಯವಿದ್ದರೆ, ನಾವೇ ಸಂಗ್ರಹಿಸಿ, ಮಾರಲೂ ಬಹುದು. ಆದರೆ ಆದಾಯವನ್ನು ವನ್ಯ ಸಂರಕ್ಷಣಾ ಕಲಾಪಗಳಿಗೇ ಒದಗಿದ ಸಂಪತ್ತು ಎಂಬಂತೇ ಭಾವಿಸಿ, ಬಳಸಬೇಕು. ನಾವಾಗಿಯೇ ಆ ನೆಲಗಳಲ್ಲಿ ಯಾವುದೇ ಬೀಜ ಅಥವಾ ಸಸ್ಯ (ವನ್ಯ ಜಾತಿಯವೂ) ಪರಿಚಯಿಸುವುದಿಲ್ಲ ಮತ್ತು ಸಾಕು ಪ್ರಾಣಿಗಳನ್ನು (ನಾಯಿ, ಬೆಕ್ಕು, ಮೇಯಲು ಬರುವ ಹಳ್ಳಿಯ ಜಾನುವಾರು…) ಸಾಕುವುದೂ ಇಲ್ಲ. ಮೊದಲೇ ಇರಬಹುದಾದ ಎಲ್ಲ ಮಾನವ ರಚನೆಗಳನ್ನೂ (ಮನೆ, ಕೊಟ್ಟಿಗೆ, ಪಂಪು, ಕಟ್ಟ, ಬೇಲಿ, ಪಾಗಾರ…) ಕಳಚಿ, ಪ್ರಾಕೃತಿಕ ಪುನರುಜ್ಜೀವನಕ್ಕೆ ಪೂರ್ಣ ಸಹಕರಿಸಬೇಕು. ತೀರಾ ಅಗತ್ಯವೆನ್ನಿಸಿದಲ್ಲಿ ಸಂರಕ್ಷಣಾಕಾರನಿಗೇ ಸರಳ ವಸತಿಯನ್ನಷ್ಟೇ ಉಳಿಸಿಕೊಳ್ಳುವುದು ಅಥವಾ ರಚಿಸಿಕೊಳ್ಳುವುದು ಆಗಬೇಕು. ಇದಕ್ಕೆ ಸಣ್ಣ ಉದಾಹರಣೆ ‘ಅಶೋಕವನ’ದ ಕಪ್ಪೇಗೂಡು. ( ಇದು ಪ್ರವಾಸೀ ಮೋಜಿಗಲ್ಲ, ಪ್ರಕೃತಿ ವೀಕ್ಷಣೆ ಅಥವಾ ವನ್ಯಸಂರಕ್ಷಣೆಗೇ ಮೀಸಲು. ತುಂಬಾ ಮುಖ್ಯ ವಿಷಯ….

ಹೀಗೆ ಖರೀದಿಸುವ ನೆಲದ ಪೂರ್ಣ ಯಜಮಾನಿಕೆ ಹಣ ಕೊಡುವವನದೇ ಇದ್ದರೂ ೧. ಅದು ಯಾವುದೇ ರೀತಿಯ ಆರ್ಥಿಕ ಆದಾಯ ತರುವಂತ ಚಟುವಟಿಕೆಗೆ ಭಾಗವಾಗುವುದಿಲ್ಲ. ೨. ಅದು ಕುಶಿ ಬಂದಾಗ ಹೆಚ್ಚಿನ ಹಣಕ್ಕೆ ಮಾರಿಕೊಳ್ಳುವ ಹೂಡಿಕೆ ಅಲ್ಲ. ೩ ಹಾಗೂ ಮುಂದೊಂದು ಕಾಲದಲ್ಲಿ ಯೋಜನೆಯ ಬಗ್ಗೆ ಪ್ರೀತಿ ಉಳಿಯದಿದ್ದರೆ ಅಥವಾ ಹಾಕಿದ ಹಣ ತೆಗೆಯಲೇ ಬೇಕೆಂಬ ಅನಿವಾರ್ಯತೆ ಉಂಟಾದರೆ ಸಂರಕ್ಷಣಾ ಕೂಟದ ಸದಸ್ಯರಿಗೆ ಪ್ರಥಮ ಆದ್ಯತೆಯನ್ನು ಅವಶ್ಯ ಕೊಡಬೇಕು. ೪. ಸದಸ್ಯರು ತಮ್ಮ ನೆಲ ಅಥವಾ ಸಂರಕ್ಷಣಾ ಕೂಟದ ಇತರ ಸದಸ್ಯರ ನೆಲಗಳಲ್ಲಿ ಅನೌಪಚಾರಿಕವಾಗಿ ತತ್ಕಾಲೀನ (ಗುಡಾರ) ವಸತಿ ಹೂಡಿ ಪ್ರಕೃತಿ ವೀಕ್ಷಣಾ ವಿರಾಮವನ್ನು ಅನುಭವಿಸಬಹುದು. ಇದು ಎಂದೂ ವನ್ಯ ವಿರೋಧೀ (ಮದ್ಯಪಾನವೇ ಮೊದಲಾದ ಮೋಜಿನ ಚಟುವಟಿಕೆ, ಧ್ವನಿವರ್ಧಕಗಳ ಗದ್ದಲ, ಬೆಂಕಿ, ಕೊಳಚೆ…) ಮತ್ತು ವಾಣಿಜ್ಯಾತ್ಮಕ ಚಟುವಟಿಕೆಗಳು ಆಗಲೇ ಬಾರದು. ೫. ಸದಸ್ಯರ ಸಂಖ್ಯೆ ಹೆಚ್ಚಿದಂತೆ ಎಲ್ಲರ ಚರ್ಚೆಯಲ್ಲಿ ಒಟ್ಟಾರೆ ಈ ಸಂರಕ್ಷಣಾ ಕೂಟಕ್ಕೊಂದು ಸಂವಿಧಾನವನ್ನು ರಚಿಸಿ ಎಲ್ಲರ ಜವಾಬ್ದಾರಿಯನ್ನು ನಿಶ್ಚೈಸುವುದು ಬಾಕಿಯುಳಿದ ಕೆಲಸ.

ಯಾವುದೇ ಆರ್ಥಿಕ ಆದಾಯ ತಾರದ ಅಥವಾ (ಇವತ್ತು ಹೂಡಿ ನಾಳೆ ಹೆಚ್ಚಿನ ಬೆಲೆಗೆ ಮಾರಿಕೊಳ್ಳುವ ಮಾಲಿನಂತೆ) ಹಣಕಾಸಿನ ವಹಿವಾಟೂ ಅಲ್ಲದ, ಕೇವಲ ಅಂದರೆ ಕೇವಲ ವನ್ಯ ಸಂರಕ್ಷಣೆಗಾಗಿ ಕಾಡು ಕೊಳ್ಳ ಬಯಸುವವರು ಕೂಡಲೇ ಅನಿಲ್ ಯು.ಕೆ ಅಥವಾ ನನ್ನನ್ನು ಫೇಸ್ ಬುಕ್ ಮೆಸೆಂಜರ್ ಮೂಲಕ ಸಂಪರ್ಕಿಸಿರಿ.

(ನೋಡಿ: https://www.athreebook.com/2010/03/blog-post_27.html)


  • ಅಶೋಕ ವರ್ಧನ – ಅತ್ರಿ ಬುಕ್ ಸೆಂಟರ್ ನಿರ್ದೇಶಕರು, ಲೇಖಕರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW