ಆಕೆ ಮನೆಯವರ ಅಸಮ್ಮತಿಯ ನಡುವೆಯೂ ತಾನು ಮೆಚ್ಚಿದ ತರುಣನನ್ನು ಮದುವೆಯಾಗಿದ್ದಳು.ಆತ ಅವ್ವ ಮತ್ತು ನಮ್ಮನ್ನು ತೊರೆದು ಹೋದ,ಅತಂಕದಲ್ಲಿಯೇ ಬೆಳೆದ ನಾನು ಮುಂದೆ ಅದೇ ನನ್ನ ಬರವಣಿಗೆಗೆ ಪ್ರೇರಣೆಯಾಯಿತು ಎಂದು ಲೇಖಕಿ ಇಸಬೆಲ್ ಅಹೆಂಡೆ ಅವರು ಹೇಳುತ್ತಾರೆ, ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಅನುವಾದಕರಾದ ಕೇಶವ ಮಳಗಿ ಅವರು, ಮುಂದೆ ಓದಿ…
ನಮ್ಮ ಕುಟುಂಬದ ಸದಸ್ಯರ ಕಿವಿಗೆ ಸ್ತ್ರೀವಾದ ಎಂಬ ವಿಚಾರ ಬೀಳುವ ಬಹಳ ಮೊದಲೇ, ಅಂದರೆ, ಶಿಶುವಿಹಾರದಲ್ಲಿ ಓದುವ ಸಮಯದಲ್ಲಿಯೇ ನಾನೊಬ್ಬ ಸ್ತ್ರೀವಾದಿಯಾಗಿದ್ದೆ! ಇದೇನೂ ಅತಿಶಯವಾದ ಮಾತಲ್ಲ! ನನ್ನ ಅವ್ವನ ಸ್ಥಿತಿಗತಿಗಳು ನಾನು ಪುರುಷಾಧಿಕಾರದ ವಿರುದ್ಧ ಬಂಡೇಳುವಂತೆ ಮಾಡುತ್ತಿದ್ದವು. ಆಕೆ ಮನೆಯವರ ಅಸಮ್ಮತಿಯ ನಡುವೆಯೂ ತಾನು ಮೆಚ್ಚಿದ ತರುಣನನ್ನು ಮದುವೆಯಾಗಿದ್ದಳು. ಆದರೆ, ಆತನೋ ಮೊಲೆಯುಣ್ಣುವ ಮತ್ತು ಅಂಬೆಗಾಲಿಕ್ಕುವ ತನ್ನ ಎರಡು ಹಸುಳೆಗಳನ್ನು ಅನಾಥರನ್ನಾಗಿ ಮಾಡಿ, ಅವ್ವನನ್ನು ತೊರೆದು ಪರಾರಿಯಾಗಿದ್ದ. ನನ್ನ ಬಾಲ್ಯ ಭಯ ಮತ್ತು ಕಳವಳಗಳಿಂದ ತುಂಬಿತ್ತು. ನಮ್ಮ ಅಜ್ಜಿ ಅಕಾಲಿಕವಾಗಿ ಮರಣ ಹೊಂದಿದ್ದೆ ನಮ್ಮ ಬದುಕು ಅತಂತ್ರವಾಯಿತು. ನನಗೆ ಎದೆ ನಡುಗಿಸುವ ಭಯ. ಹೆದರಿಕೆಯಾದರೂ ಎಂಥದು? ಅವ್ವ ಸಾಯುತ್ತಾಳೆ. ನಮ್ಮನ್ನು ಅನಾಥ ಆಶ್ರಮಕ್ಕೆ ಸೇರಿಸುತ್ತಾರೆ. ಆಮೇಲೆ ನನ್ನನ್ನು ಕಡಲ್ಗಳ್ಳರು ಅಪಹರಿಸುತ್ತಾರೆ. ಕನ್ನಡಿಯಿಂದ ದೆವ್ವಗಳ ಎದ್ದು ಬಂದು ಕುಣಿಯುತ್ತವೆ. ಹೀಗೆ ಅತಂಕವೇ ತುಂಬಿಕೊಂಡಿದ್ದ ನನ್ನ ಬಾಲ್ಯಕ್ಕೆ ತುಂಬ ಋಣಿಯಾಗಿರುವೆ. ಅದು ನನ್ನ ಬರವಣಿಗೆಗೆ ಸಾಕಷ್ಟು ವಸ್ತುವನ್ನು ಒದಗಿಸುತ್ತದೆ. ತಮ್ಮ ಮನೆಗಳಲ್ಲಿ ಸುಖದ ಬಾಲ್ಯವನ್ನು ಕಳೆದವರು ಹೇಗೆ ಲೇಖಕರಾಗುತ್ತಾರೋ ಎಂಬ ಅಚ್ಚರಿ ನನಗೆ!

ಫೋಟೋ ಕೃಪೆ : google
ಬಾಲ್ಯದಲ್ಲಿ ನನ್ನ ಅವ್ವನನ್ನು ಮತ್ತು ಮನೆಕೆಲಸದ ಹೆಂಗಸರನ್ನು ಗಮನಿಸುತ್ತ ಪುರುಷಸೊಕ್ಕಿನ ವಿರುದ್ಧ ನನ್ನ ಸಿಟ್ಟು ಹೆಚ್ಚುತ್ತ ಹೋಯಿತು. ಅವರು ಅಡಿಯಾಳುಗಳಾಗಿದ್ದರು. ಅವರಿಗೆ ತಮ್ಮದೇ ಸ್ವತ್ತು, ಸ್ವಂತಧ್ವನಿ ಏನೊಂದೂ ಇರಲಿಲ್ಲ. ನನ್ನವ್ವ ಕಂದಾಚಾರವನ್ನು ಧಿಕ್ಕರಿಸಿದ್ದಳು. ಮನೆವಾರ್ತೆಯ ಹೆಂಗಸರು ಬಡವರಾಗಿದ್ದರು. ಈ ಕಾರಣಕ್ಕಾಗಿಯೇ ತಿರಸ್ಕಾರಕ್ಕೆ ಒಳಗಾಗುತ್ತಿದ್ದರು. ಇಂತಹ ವಿಚಾರ ಬಾಲ್ಯದಲ್ಲಿ ತಿಳಿಯುತ್ತಿರಲಿಲ್ಲವಾದರೂ ನಾನು ನ್ಯಾಯದ ಪರ ಹೆಚ್ಚು ಹೆಚ್ಚು ವಾಲತೊಡಗಿದೆ. ಪುರುಷಾಳ್ವಿಕೆಯ ವಿರುದ್ಧ ಎದೆ ಸೆಟೆಸತೊಡಗಿದೆ. ತಮ್ಮನ್ನು ತಾವು ಬುದ್ಧಿವಂತರೂ, ಆಧುನಿಕರೂ ಎಂದುಕೊಂಡಿದ್ದ ನನ್ನ ಕುಟುಂಬದವರಿಗೆ ನನ್ನ ಕಡುಕೋಪದ ನಡತೆ ನುಂಗಲಾರದ ಬಿಸಿ ತುಪ್ಪವಾಗಿತ್ತು.
ನನಗೇನಾಗಿದೆ ಎಂದು ತಿಳಿಯಲು ಅವ್ವ ಅನೇಕ ವೈದ್ಯರ ಬಳಿ ಎಡತಾಕಿದಳು. ಮಗಳಿಗೆ ಹೊಟ್ಟೆನೋವೋ, ಜಂತುಹುಳುಗಳ ಕಾಟವೋ ಎಂದಾಕೆ ತಿಳಿದಿದ್ದಳು. ಆಕೆ ಹಾಗೆ ತಲೆಕೆಡಿಸಿಕೊಂಡು ಕೂರಲು ಕಾರಣವೂ ಇತ್ತು: ನನ್ನ ಆರನೆಯ ವಯಸ್ಸಿನಲ್ಲಿಯೇ ದಾದಿಯರು ನಡೆಸುತ್ತಿದ್ದ ಜರ್ಮನ್ ಮಿಶನರಿ ಶಾಲೆಯಿಂದ ನನ್ನನ್ನು ಹೊರಹಾಕಿದ್ದರು! ಅದು ನನ್ನ ಬದುಕಿನ ಮುನ್ನುಡಿಯಂತೆ ಕಾಣುತ್ತಿತ್ತು! ಶಾಲೆಯಿಂದ ನನ್ನನ್ನು ಹೊರ ಹಾಕಲು ಅವ್ವ ಮೂರು ಮಕ್ಕಳನ್ನು ಹೆತ್ತ ಒಂಟಿ ಪೋಷಕಳಾಗಿದ್ದುದು ಬಹುಶಃ ಕಾರಣವಾಗಿದ್ದಿರಬೇಕು!
ನನ್ನವ್ವ ಒಬ್ಬ ‘ಬಲಿಪಶು’ ಎಂದು ದಶಕಗಳ ಕಾಲ ನಾನು ನಂಬಿದ್ದೆ. ಆದರೆ, ಕ್ರಮೇಣ ಬದುಕಿನ ಸನ್ನಿವೇಶಗಳನ್ನು ನಿಯಂತ್ರಿಸುವ ಅಧಿಕಾರದ ಮೇಲೆ ಹತೋಟಿ ಹೊಂದಿಲ್ಲದಿರುವುದೇ ‘ಬಲಿಪಶುತನ’ಎಂದು ಅರಿತುಕೊಂಡೆ. ಆದರೆ, ತನ್ನ ಬದುಕಿನ ಆಮೇಲಿನ ವರ್ಷಗಳಲ್ಲಿ ಅವ್ವನ ಸ್ಥಿತಿ ಹಾಗೇನೂ ಇರಲಿಲ್ಲ. ಆಕೆ ಬಯಸಿದ್ದರೆ ಇನ್ನಷ್ಟು ಸ್ವತಂತ್ರ ಮನೋಭಾವವನ್ನು, ಸ್ವಯಂಪೂರ್ಣ ವ್ಯಕ್ತಿತ್ವವನ್ನು ಗಳಿಸಿಕೊಳ್ಳಬಹುದಿತ್ತು. ಆದರೆ, ನಾನೊಬ್ಬಳು ಹೊಸಕಾಲಮಾನದ ಸ್ತ್ರೀವಾದಿಯಾಗಿ ಈ ಮಾತನ್ನು ಹೇಳುವುದು ನನಗೆ ಸುಲಭ. ಏಕೆಂದರೆ, ನನಗೆ ಅಂಥ ಅವಕಾಶಗಳಿವೆ. ಆಕೆಗೆ ಇರಲಿಲ್ಲ.

ಫೋಟೋ ಕೃಪೆ : google
ಸ್ತ್ರೀವಾದವೆನ್ನುವುದು ಹಲವೊಮ್ಮೆ ಹೆದರಿಕೆ ಹುಟ್ಟಿಸುವಂತೆಯು, ತೀವ್ರಗಾಮಿಯಾಗಿಯೂ ಕಾಣುತ್ತ ಮೂಲತಃ ಪುರುಷದ್ವೇಷಿ ಎನ್ನುವಂತೆ ವ್ಯಾಖ್ಯಾನಿಸಲಾಗಿದೆ. ಓದುಗರಿಗೆ ಈ ಕುರಿತು ಒಂದಿಷ್ಟು ವಿವರವಾಗಿ ವಿಶದಪಡಿಸಬೇಕು. ಪುರುಷಾಧಿಪತ್ಯದಿಂದಲೇ ಆರಂಭಿಸೋಣ.
ಪುರುಷಾಧಿಪತ್ಯದ ಕುರಿತ ನನ್ನ ವಿಶ್ಲೇಷಣೆ ನಿಘಂಟು ಮತ್ತು ವಿಶ್ವಕೋಶಗಳಲ್ಲಿನ ವಿವರಣೆಗೆ ಹೊಂದಿಕೊಳ್ಳದಿರಬಹುದು. ಇದರ ಬೇರಿನ ಪರಿಕಲ್ಪನೆಯಲ್ಲಿ ಹೆಣ್ಣನ್ನು, ನಿಸರ್ಗವನ್ನು, ಒಟ್ಟಾರೆ ಜೀವಸಂಕುಲವನ್ನು ಪುರುಷ ತನ್ನೆಲ್ಲ ತನ್ನೆಲ್ಲ ಶಕ್ತಿ-ಸಾಮರ್ಥ್ಯ-ಅಧಿಕಾರವನ್ನು ಬಳಸಿ ಸಂಪೂರ್ಣವಾಗಿ ನಿಯಂತ್ರಣದಲ್ಲಿಟ್ಟುಕೊಳ್ಳ ಬಯಸುತ್ತಾನೆ. ಇದ್ದರೂ, ಸ್ತ್ರೀವಾದಿ ಆಂದೋಲನಗಳು ಈ ಪರಮಾಧಿಕಾರವು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದ್ದರೂ ಈ ಸಮಗ್ರ ಅಂಶಗಳನ್ನು ಒಂದಿಷ್ಟು ಕಡೆಗಣಿಸಿವೆ ಎನ್ನಿಸುತ್ತದೆ.
ತಾರತಮ್ಯ ನೀತಿಯನ್ನು ಕೊನೆಗಾಣಿಸಲು ಅನೇಕಾನೇಕ ಕಾನೂನುಗಳನ್ನು ಪರಿಷ್ಕರಣೆ ಮಾಡಲಾಗಿದೆ. ಆದಾಗ್ಯೂ, ಪುರುಷಾಧಿಪತ್ಯ ಮಾತ್ರ ಆರ್ಥಿಕ-ಸಾಂಸ್ಕೃತಿಕ ಮತ್ತು ಮತಧರ್ಮಗಳ ದಬ್ಬಾಳಿಕೆಯಲ್ಲಿ ಹಾಗೆಯೇ ಮುಂದುವರೆದುಕೊಂಡು ಬಂದಿದೆ. ಪುರುಷರಿಗೆ ಯಾವತ್ತೂ ಪರಮಾಧಿಕಾರದ ಸವಲತ್ತನ್ನು ತಾನೇ ತಾನಾಗಿ ಕಲ್ಪಿಸಿಕೊಡುತ್ತದೆ. ಹೆಣ್ಣಿನ ಕುರಿತ ತಿರಸ್ಕಾರ ಭಾವವಂತೂ ಇದ್ದೇ ಇರುತ್ತದೆ. ಜತೆಜತೆಗೆ, ವರ್ಣ-ಜನಾಂಗೀಯ ತಾರತಮ್ಯ, ವರ್ಗನೀತಿ, ಅಕಾರಣ ಭಯಾವಹತೆ, ಅನ್ಯದೇಶದವರ ಕುರಿತ ದ್ವೇಷ ಹಾಗೂ ಭಿನ್ನವಾಗಿ ಯೋಚಿಸುವ ಜನರನ್ನು, ವಿಭಿನ್ನ ನಿಲುವನ್ನು ಹೊಂದಿದವರ ಕುರಿತು ಅಪಾರ ಅಸಹನೆ ಮತ್ತು ಅಸೂಯೆಗಳಂಥವು ಕೂಡ ಅದಕ್ಕೆ ಸೇರಿಕೊಂಡಿವೆ. ಈ ಅಧಿಪತ್ಯಕ್ಕೆ ಬೇಕಿರುವುದು ಅಸೀಮ ವಿಧೇಯತೆ. ಮೀರಿದರೆ ಶಿಕ್ಷೆ!
ನನ್ನ ಸ್ತ್ರೀವಾದ ವ್ಯಾಖ್ಯಾನ ಹೇಗಿದೆ? ನಮ್ಮ ತೊಡೆ ಸಂದುಗಳ ನಡುವೆ ನಾವೇನು ಹೊಂದಿದ್ದೇವೆ ಎಂದು ನೋಡುವುದಲ್ಲ. ನಮ್ಮ ಕಿವಿಗಳ ಮಧ್ಯೆ ನಾವೇನು ಹೊಂದಿದ್ದೇವೆ ಎನ್ನುವುದು ಮುಖ್ಯ. ಅದೊಂದು ತಾತ್ವಿಕ ನಿಲುವು. ಪುರುಷಾಧಿಪತ್ಯದ ವಿರುದ್ಧ ಏಳುವ ಬಂಡಾಯ. ಅದೊಂದು ಮಾನವ ಸಂಬಂಧಗಳನ್ನು ಅರಿತುಕೊಳ್ಳುವ ವಿಧಾನ. ನಮ್ಮ ಸುತ್ತಲಿನ ಲೋಕವನ್ನು ನೋಡುವ ಬಗೆ. ಅದೊಂದು ನ್ಯಾಯಪರತೆಯಲ್ಲಿ ನಂಬಿಕೆಯಿರಿಸಿದ ನಿಲುವು. ಹೆಣ್ಣನ್ನು, ಪುರುಷರನ್ನೂ ಸೇರಿಸಿಕೊಂಡಂತೆ ವಿಶಿಷ್ಟ ದೈಹಿಕ ಸಂವೇದನೆಯನ್ನು ಪಡೆದವರನ್ನು (LGBTQIA+) ಬಿಡುಗಡೆಗೊಳಿಸಲು ಕೈಗೊಳ್ಳುವ ಹೋರಾಟ. ಉಳಿದವರು ಸೇರಿಕೊಳ್ಳುವುದಾದರೆ ಅಂಥವರಿಗೆ ಸ್ವಾಗತ. ನಮ್ಮ ಸಂಖ್ಯೆ ಅಧಿಕವಾಗಿದ್ದಷ್ಟೂ ಉತ್ತಮ.

ಫೋಟೋ ಕೃಪೆ : google
ನಾನು ತರುಣಿಯಾಗಿದ್ದಾಗ ಸಮಾನತೆಗಾಗಿ ಹೋರಾಡುತ್ತಿದ್ದೆ. ಪುರುಷರ ಆಟ-ಹೂಟದಲ್ಲಿ ಭಾಗವಹಿಸಬಯಸುತ್ತಿದ್ದೆ. ಆದರೆ, ವಯಸ್ಸಾಗಿ ಮಾಗಿದಂತೆ ಆ ಆಟವೊಂದು ಕಪಟ ಹೂಟವೆಂದು ಅರಿವಾಗತೊಡಗಿತು. ಈ ಕ್ರೀಡೆ ಲೋಕದ; ಮಾನವಕುಲದ ನೈತಿಕತೆಯನ್ನು ಸರ್ವನಾಶ ಮಾಡುತ್ತಿದೆ ಎಂದು ತಿಳಿಯತೊಡಗಿತು. ಸ್ತ್ರೀವಾದವೆಂದರೆ ಈ ಮಹಾವಿಪತ್ತನ್ನು ಪಲ್ಲಟಗೊಳಿಸುವುದಲ್ಲ. ಅದನ್ನು ನೇರ್ಪುಗೊಳಿಸುವುದು. ನಿಜ, ಹಾಗೆ ಮಾಡುವಾಗ ಮೂಲಭೂತವಾದವನ್ನು, ಫ್ಯಾಸಿಸ್ಟ್ ಸಿದ್ಧಾಂತವನ್ನು, ಕಂದಾಚಾರ ಮತ್ತು ಇತರೆಲ್ಲ ಪ್ರತಿಗಾಮಿ ಶಕ್ತಿಗಳನ್ನು ಎದುರಿಸಬೇಕಾಗುವುದು. ಈ ವಿರೋಧಿಪಡೆಯಲ್ಲಿ ಬದಲಾವಣೆಯೆಂದರೆ ಭಯವಿಹ್ವಲರಾಗುವ, ವಿಭಿನ್ನ ಭವಿಷ್ಯವನ್ನು ಕಲ್ಪಿಸಿಕೊಳ್ಳಲು ಅಸಮರ್ಥರಾದ ಅಸಂಖ್ಯ ಹೆಂಗಳೆಯರೂ ಇದ್ದಾರೆ ಎನ್ನುವುದು ದುಃಖದಾಯಕ.
ಪುರುಷಾಧಿಪತ್ಯವೆನ್ನುವುದು ಬಂಡೆಯಂತೆ. ಸ್ತ್ರೀವಾದವಾದರೂ ದ್ರವರೂಪಿ, ಬಲಶಾಲಿ, ಬದುಕಿನ ಅಗಣಿತ ಸಂಕೀರ್ಣತೆಯನ್ನು ತನ್ನೊಳಗೆ ಸುತ್ತಿಕೊಂಡ ಆಳಗಲದ ವಿಚಾರ. ಅದು ಅಲೆಗಳೊಂದಿಗೆ, ತೆರೆಗಳೊಂದಿಗೆ, ಭರತವಿಳಿತದೊಂದಿಗೆ ಮತ್ತು ಕೆಲವೊಮ್ಮೆ ಪ್ರವಾಹದೊಂದಿಗೆ ಚಲಿಸಬಲ್ಲುದು. ಸ್ತ್ರೀವಾದ ಸಮುದ್ರದಂತೆ, ಎಂದೂ ಮೌನವಾಗಿರಲಾರದು.
*
ಇಲ್ಲ, ನೀನು ಮೌನಿಯಲ್ಲ. ಚೆಲುವೆಯೂ ಅಲ್ಲ.
ನಿನಗೆ ಸಲ್ಲಬೇಕಿದ್ದುದಕಾಗಿ ನೀನು ಸೆಣೆಸುವಾಗ,
ಹೆಣಗುವಾಗ, ಕಾಂತಿಯಿಂದ ಹೊಳೆಯುವೆ.
ಮೂಕಿಯಾಗಿರದೆ ಬಾಯ್ದೆರೆದು
ಸುಡು ಮಾತುಗಳನಾಡುವಾಗ
ನಿನ್ನ ಸುತ್ತಲಿನದೆಲ್ಲ ಸುಟ್ಟು ಕರಕಾಗಿ
ಬಡಿದಾಡುವಾಗ ನೀನು ಹೊಳೆ-ಹೊಳೆಯುವೆ.
ಇಲ್ಲ, ನೀನು ಮೌನವಾಗಿಲ್ಲ.
ನೀನೇನೂ ಸುರಸುಂದರಿಯಲ್ಲ
ಕೊಂಚ ಮಾತ್ರ ನಿರ್ಜೀವಗೊಂಡಿರುವೆ.
ನಿನ್ನ ಬಗೆಗೆ ನನಗೆ ತಿಳಿದಿರುವುದೊಂದೆ:
‘ಬದುಕಿರುವುದಕಾಗಿಯೇ
ಕಿರುಚಿ ಅಬ್ಬರಿಸುವ ಬೇರೊಬ್ಬರನು
ನಾನು ಕಾಣೆ’, ಎಂಬುದು.
(BURN: ಉರಿಬೆಂಕಿ: ಮಿಗೇಲ್ ಗೇನ್‌ರ ಕವಿತೆ)
*
(ಇಸಬೆಲ್ ಅಹೆಂಡೆ ನಾನು ಬಹುವಾಗಿ ಮೆಚ್ಚುವ ಚಿಲಿ ದೇಶದ ಕಾದಂಬರಿಕಾರ್ತಿ. ಹುಟ್ಟಿದ್ದು ೧೯೪೨-ಈಗ ಎಂಬತ್ತು ವರ್ಷ. ಅವರ ಕಥೆ-ಕಾದಂಬರಿಗಳು ನನ್ನನ್ನು ಮಂತ್ರಮುಗ್ಧಗೊಳಿಸಿವೆ. ಈ ಕೆಲವು ಸಾಲುಗಳು ಅವರ ‘ದಿ ಸೋಲ್ ಆಫ್ ಎ ವುಮನ್’ನಿಂದ ಅನುವಾದಿಸಿರುವುದು.)
- ಕೇಶವ ಮಳಗಿ – ಖ್ಯಾತ ಕತೆಗಾರರು,ಅನುವಾದಕರು, ಲೇಖಕರು, ಕವಿಗಳು, ಬೆಂಗಳೂರು
