ಜಲಂಧರ ಪೌರಾಣಿಕ ಕೃತಿ ಪರಿಚಯ – ಪದ್ಮನಾಭ. ಡಿ

ಇಂದು ಉತ್ಥಾನ ದ್ವಾದಶಿ ಅಥವಾ ತುಳಸೀಪೂಜೆಯ ಹಬ್ಬವಾದ್ಜರಿಂದ ಅದರ ಹಿನ್ನೆಲೆಯ ಒಂದು ಪೌರಾಣಿಕ ಕೃತಿಯ ಬಗ್ಗೆ ಹಂಚಿಕೊಳ್ಳುವೆ. ಬಹುತೇಕ ಪೌರಾಣಿಕ ನಾಟಕಗಳು ರಾಮಾಯಣ ಮಹಾಭಾರತ ಭಾಗವತದ ಆಧಾರದಲ್ಲೇ ರಚಿತವಾದವು. ಇವುಗಳಿಗಿಂತ ಭಿನ್ನವಾದ ಅಪರೂಪದ ಕಥಾಹಂದರವುಳ್ಳ ನಾಟಕ ‘ ಜಲಂಧರ’ ಕುರಿತು ಪದ್ಮನಾಭ. ಡಿ ಅವರು ಬರೆದ ಪರಿಚಯವನ್ನು ತಪ್ಪದೆ ಓದಿ…

ಪುಸ್ತಕ : ಜಲಂಧರ
ಲೇಖಕರು: ಚಿ ಸಿದ್ದರಾಮಯ್ಯ
ಪ್ರಕಾರ : ಪೌರಾಣಿಕ ನಾಟಕ

“ಜಲಂಧರ” ಇದರ ಕಥಾ ಸಾರಾಂಶ ಹೀಗಿದೆ.

ಪಾರ್ವತಿಯೂ ಶಿವನೂ ಕೈಲಾಸದಲ್ಲಿ ವಿನೋದವಾಡುತ್ತಿರುವಾಗ ಅಲ್ಲಿಗೆ ದೇವೇಂದ್ರನ ಪ್ರವೇಶವಾಗುತ್ತದೆ. ಅವನ ಆಗಮನಕ್ಕೆ ಕಾರಣವೇನು ಎಂದು ಶಿವನು ಕೇಳಿದಾಗ ಇಂದ್ರನು “ಸ್ವಾಮಿ, ನಿನ್ನ ದಯೆಯಿಂದ ಋಲ್ಲರೂ ಕುಶಲರಾಗಿದ್ದೇವೆ. ಆದರೆ, ನನ್ನ ಮನದಾಳದಲ್ಲಿ ಬಹುದಿನದಿಂದ ಬಯಕೆಯೊಂದು ಕಾಡುತ್ತಿದೆ. ಅದನ್ನು ನೆರವೇರಿಸು” ಎಂದು ಪ್ರಾರ್ಥಿಸುತ್ತಾನೆ. ಅದೇನು ಬಯಕೆ ಎಂದು ಶಿವನು ಕೇಳಿದಾಗ ಇಂದ್ರನು” ಬಹುದಿನಗಳಿಂದ ನನ್ನೊಡನೆ ನಿಂತು ಯುದ್ಧ ಮಾಡುವವರೇ ಇಲ್ಲ. ಇದು ಬೇಸರವನ್ನು ಉಂಟುಮಾಡಿದೆ. ನನ್ನ ಶಕ್ತಿ ಸಾಮರ್ಥ್ಯ ಗಳನ್ನು ತೋರಿಸಲು ನನಗೆ ಸರಿಸಮನಾಗಿ ಹೋರಾಡುವ ವೈರಿಯನ್ನು ಕರುಣಿಸು” ಎಂದು ಕೇಳುತ್ತಾನೆ. ಆಗ ಶಿವನು “ಇಂದ್ರ ರೋಗವನ್ನಾಗಲೀ ಶತ್ರುವನ್ನಾಗಲೀ ಆಹ್ವಾನಿಸಬಾರದು. ಇದು ವಿನಾಶಕಾರಿಯಾಗುತ್ತದೆ. ಸಂತೋಷ ಷಡಲು ಅವಕಾಶ ಒದಗಿದಾಗ ಸಂತೋಷಪಡು. ಇತರರನ್ನು ಸಂತೋಷಪಡಿಸು ಅದನ್ನು ಬಿಟ್ಟು ವಿನಾಶಕಾಲೇ ವಿಪರಿತಬುದ್ದಿಃ ಎಂಬಂತೆ ಆಡಬೇಡ” ಎಂದಾಗ ಇಂದ್ರ ಗಹಗಹಿಸಿ ನಗುತ್ತಾನೆ. ಇದು ಶಿವನನ್ನು ಕೆರಳಿಸುತ್ತದೆ. ಅವನ ಹಣೆಗಣ್ಣು ತೆರೆಯುತ್ತದೆ. ಆಗ ಇಂದ್ರ ಭಯಭೀತನಾಗಿ ಅಪರಾಧವನ್ನು ಮನ್ನಿಸೆಂದು ಪ್ರಾರ್ಥನೆ ಮಾಡುತ್ತಾನೆ. ಆಗ ಶಿವ ನನ್ನ ಕ್ರೋಧಾಗ್ನಿಯನ್ನು ಸಮುದ್ರದಲ್ಲಿ ವಿಸರ್ಜಿಸುವೆ. ಆದರೆ ನಿನ್ನ ದುರಹಂಕಾರಕೆ ಶಿಕ್ಷೆ ಕಾದಿದೆ ಎಂದು ಹೇಳುತ್ತಾನೆ. ಇತ್ತ ಸಮುದ್ರರಾಜನು ಪುತ್ರಪ್ರಾಪ್ತಿಗಾಗಿ ಶಿವ ಪಾರ್ವತಿಯರನ್ನು ಕುರಿತು ತಪಸ್ಸು ಮಾಡುತ್ತಿರುತ್ತಾನೆ.

ಪಾರ್ವತಿಯು ಶಿವನಿಗೆ ಇದನ್ನು ತಿಳಿಸುತ್ತಾಳೆ. ಸಮುದ್ರರಾಜನ ಬಳಿ ಬಿದ್ದ ಶಿವನ ನೇತ್ರಜ್ವಾಲೆಯು ಶಿಶುರೂಪ ತಾಳುತ್ತದೆ. ಆ ಸಮಯಕ್ಕೆ ಸರಿಯಾಗಿ ಬ್ರಹ್ಮ ದೇವನು ಅಲ್ಲಿಗೆ ಹೋಗಿ ನಿನಗೆ ಶಿವನು ಕರುಣಿಸಿದ ಶಿಶು ಇದು ಸ್ವೀಕರಿಸು ಎಂದು ಸಮುದ್ರರಾಜನಿಗೆ ಹೇಳಿದಾಗ ಆತ ಸಂತೋಷಪಡುತ್ತಾನೆ. ಬ್ರಹ್ಮನೂ ಸಂತೋಷಗೊಂಡು ಆನಂದಭಾಷ್ಪಗಳು ಉದುರುತ್ತವೆ. ನೀರಿನ ಬಿಂದುಗಳು ಬಿದ್ದ ಮಗುವಿಗೆ ಜಲಂಧರ ಎಂದು ನಾಮಕರಣವಾಗುತ್ತದೆ. ಈತ ಭವಿಷ್ಯದಲ್ಲಿ ಇಂದ್ರನನ್ನೂ ಸೋಲಿಸುವ ಅಪ್ರತಿಮ ವೀರನಾಗುವನು ಎಂದು ಆಶೀರ್ವಾದ ನೀಡಿ ಬ್ರಹ್ಮ ಅದೃಶ್ಯನಾಗುವನು.

ಕಾಲಕಳೆದಂತೆ, ಜಲಂಧರನು ನೆರೆರಾಜ್ಯಗಳನ್ನು ಜಯಿಸಿ ವಿಜಯಯಾತ್ರೆ ಮುಗಿಸಿ ಬರುವಾಗ ಚಿತ್ರಾವತೀ ನಗರದ ಬಳಿಯ ಉದ್ಯಾನಕ್ಕೆ ಬರುತ್ತಾನೆ. ಅಲ್ಲಿಗೆ ಆ ರಾಜ್ಯದ ರಾಜ ಕಾಲನೇಮಿಯ ಮಗಳು ಬಂದೆ ವಿಹಾರಕ್ಕಾಗಿ ಬರುತ್ತಾಳೆ. ಅವಳ ಸೌಂದರ್ಯ ಗಾಯನಕ್ಕೆ ಮನಸೋತ ಜಲಂಧರನು ಆಕೆಯಲ್ಲಿ ಪ್ರಣಯಭಿಕ್ಷೆ ಯಾಚಿಸುತ್ತಾನೆ. ಆಕೆ ತಾನು ಇನ್ನೂ ಅವಿವಾಹಿತೆ. ತನ್ನ ವಿವಾಹಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರವೂ ತನ್ನ ತಂದೆಗೇ ಸೇರಿದ್ದೆಂದು ನುಡಿಯುತ್ತಾಳೆ. ಕಾಲನೇಮಿಯು ಇವರಿಬ್ಬರ ವಿವಾಹಕ್ಕೆ ಸಮ್ಮತಿ ನೀಡುತ್ತಾನೆ.

ಎಲ್ಲವೂ ಸುಖಮಯವಾಯಿತೆನ್ನುವ ವೇಳೆಯಲ್ಲಿ ಒಂದು ಘಟನೆ ನಡೆಯುತ್ತದೆ. ವಿವಾಹದ ಸಮಯದಲ್ಲಿ ವಧುವರರು ಪರಸ್ಪರ ಮಾಲಾರ್ಪಣೆ ಮಾಡುವಾಗ ಬೃಂದೆಯು ಮಾಲೆ ಹಾಕುವಾಗ ಜಲಂಧರನ ಕಿರೀಟಕ್ಕೆ ಕೈ ತಾಗಿ ಬಿದ್ದು ಹೋಗುತ್ತದೆ. ಕಿರೀಟ ಕಳಚಿ ಬೀಳುವುದು ರಾಜರಿಗೆ ಅಶುಭ ಸಂಕೇತ.

ಜಲಂಧರನು ಗುರುಗಳತ್ತ ತಿರುಗಿ ಗುರುಗಳೇ “ಜಾತಕ ಚೆನ್ನಾಗಿ ಕೂಡುತ್ತದೆ ಈಕೆಯಿಂದ ಮಂಗಳವಾಗುತ್ತದೆ” ಎಂದು ಹೇಳಿದ್ದಿರಿ ಆರಂಭದಲ್ಲೇ ಅಪಶಕುನವಾಯಿತು. ನಾನು ಈಕೆಯನ್ನು ಜೊತೆಗೆ ಕರೆದುಕೊಂಡು ಹೋಗುವುದಿಲ್ಲ ” ಎಂದು ಹೇಳುತ್ತಾನೆ.

ಆಗ ಗುರುಹಿರಿಯರು ” ವಿವಾಹ ಪ್ರಸ್ತಾಪ ಅಥವ ಆರಂಭದಲ್ಲಿ ಹೀಗಾಗಿದ್ದರೆ ಅಶುಭಶಕುನ ಎನ್ನಬಹುದಿತ್ತು. ಆದರೆ ತಾಳಿ ಕಟ್ಟಿಯಾಗಿದೆ ಎಲ್ಲ ಶಾಸ್ತ್ರಗಳು ಮುಗಿದಿವೆ. ಕೊನೆಯಲ್ಲಿ ಅಕಸ್ಮಾತ್ ಕೈ ತಗುಲಿದೆ. ಇದನ್ನು ದೊಡ್ಡದಾಗಿ ಪರಿಗಣಿಸಬೇಕಿಲ್ಲ” ಎಂದು ಹೇಳುತ್ತಾರೆ. ಬೃಂದೆಯು ನಾನು ತಿಳಿಯದೇ ಮಾಡಿದ ಅಕಸ್ಮಾತ್ತಾಗಿ ಆದ ತಪ್ಪಿಗೆ ಕ್ಷಮೆ.ಯಾಚಿಸುವೆ. ಆದರೆ ನೀವು ಎಲ್ಲ ತಿಳಿದವರು ನಾನು ಒಬ್ಬಳೇ ಇದ್ದಾಗ ಪ್ರೆಮಭಿಕ್ಷೆ ಬೇಡಿದವರು, ಎಲ್ಲರೆದುರು ವಿವಾಹವಾಗಿ ಈಗ ತ್ಯಜಿಸುವುದು ಸರಿಯೆ”? ಎಂದು ಪ್ರಶ್ನಿಸುತ್ತಾಳೆ.

ಜಲಂಧರನು “ಸರಿ ನಿನ್ನನ್ನು ಜೊತೆಗೆ ಕರೆದೊಯ್ಯುವೆ. ನಿನಗಾಗಿ ಪ್ರತ್ಯೆಕ ಭವನ ನಿರ್ಮಿಸುವೆ ಅಲ್ಲಿಯೇ ನೀನಿರಬೇಕು” ಎಂದು ಷರತ್ತು ಹಾಕಿ ಕರೆದೊಯ್ಯುತ್ತಾನೆ. ಅದರಂತೆ ಆಕೆ ಪ್ರತ್ಯೇಕವಾಗಿ ಇದ್ದು ತನ್ನ ಮಾಂಗಲ್ಯ ರಕ್ಷೆಗಾಗಿ ಅನುದಿನ ಗೌರಿಯನ್ನು ಆರಾಧಿಸುತ್ತಿರುತ್ತಾಳೆ.

ಒಮ್ಮೆ ನಾರದರು ಜಲಂಧರನ ಬಳಿ ಬಂದು “ಅಯ್ಯಾ ಜಲಂಧರ ನಿನ್ನ ವೈಭವಕ್ಕೆ ಸಾಟಿಯಿಲ್ಲ ಎಂದು ಎಲ್ಲ ಹೇಳುತ್ತಿದ್ದರು ಅದನ್ನು ನೋಡಲೆಂದೇ ಬಂದೆ. ಆದರೆ ನನಗೆ ನಿರಾಸೆಯಾಗಿದೆ. ಇಂದ್ರನ ಬಳಿ ಇರುವ ವೈಭವ ನಿನ್ನಲ್ಲಿ ಇಲ್ಲ. ಐರಾವತ, ಕಲ್ಪ ವೃಕ್ಷ, ಕಾಮಧೇನು ಇತ್ಯಾದಿಗಳು ಅಲ್ಲದೆ ಅಮೃತ ನಿನ್ನಲ್ಲಿ ಇದೆಯೇ ಇವೆಲ್ಲವೂ ವಾಸ್ತವದಲ್ಲಿ ನಿನಗೆ ಸೇರಬೇಕಿತ್ತು. ನಿನ್ನ ತಂದೆಯಾದ ಸಮುದ್ರರಾಜನ ಸೊತ್ತುಗಳಿವು ಆದರೆ ಇಂದ್ರನ ವಶದಲ್ಲಿವೆ” ಎಂದಾಗ ಜಲಂಧರನಿಗೆ ಆಕ್ರೋಶ ಉಕ್ಕಿ ಯುದ್ಧಕ್ಕೆ ಹೊರಡುತ್ತಾನೆ. ಯುದ್ಧದಲ್ಲಿ ಇಂದ್ರ ಸೋತು ಪಲಾಯನ ಮಾಡಿ ಕಾಡು ಸೇರುತ್ತಾನೆ. ಜಲಂಧರನನ್ನು ಸೋಲಿಸಬೇಕಾದರೆ ಶಿವನಿಂದ ಮಾತ್ರ ಸಾಧ್ಯ ಅಲ್ಲದೆ ಬೃಂದೆಯ ಪತಿವ್ರತಾಶಕ್ತಿ ಅವನ ಏಳಿಗೆಗೆ ಕಾರಣವಾಗಿದೆ. ಆಕೆಯ ಪಾತೀವ್ರತ್ಯಕ್ಕೆ ಭಂಗ ತರದೆ ಶಿವನು ಮುನಿಯದೆ ಜಲಂಧರನ ಸೋಲು ಅಸಂಭವ ಎಂದು ತಿಳಿದು ದೇವತೆಗಳು ಈ ದಿಸೆಯಲ್ಲಿ ಕಾರ್ಯೋನ್ಮುಖರಾಗುತ್ತಾರೆ. ದೇವತೆಗಳು ಶಿವನನ್ನು ಪ್ರಾರ್ಥಿಸುತ್ತಾರೆ. ನಾರದನು ಜಲಂಧರನನ್ನು ಪ್ರಚೋದಿಸಿ ಕೈಲಾಸಕ್ಕೆ ಕಳಿಸುತ್ತಾನೆ. ಅಲ್ಲಿ ಪಾರ್ವತಿಯ ರೂಪಲಾವಣ್ಯಗಳಿಂದ ಈತ ಮೋಹಿತನಾದಾಗ ಶಿವ ಮುನಿಯುತ್ತಾನೆ. ಅದೇ ಸಮಯದಲ್ಲಿ ವಿಷ್ಣುವು ಜಲಂಧರನ ವೇಷ ಧರಿಸಿ ಬೃಂದೆಯ ಬಳಿ ಬರುತ್ತಾನೆ. ಮಧು ರವಚನಗಳಿಂದ ಬೃಂದೆಯ ಬಳಿ ಬಂದು ಯುದ್ದಗಳಿಂದ.ಬಳಲಿ ನಿನ್ನನ್ನು ನೋಡಬೇಕೆನಿಸಿತು. ಕೆಲಸಮಯ ನಿನ್ನೊಡನೆ ಇರುವೆ ಎನ್ನುತ್ತಾನೆ. ಆಗ ಬಹಳ ದಿನಗಳ ನಂತರ ಪತಿ ತನ್ನ ಬಳಿ ಬಂದಾಗ ಸ್ತ್ರಿಸಹಜ ಭಾವನೆಗಳಿಂದ ಬೃಂದೆ ಆದರಿಸುತ್ತಾಳೆ. ತಕ್ಷಣವೇ ಜಲಂಧರನ ಶಿರ ಆಕೆಯ ಎದುರು ಬೀಳುತ್ತದೆ. ಇದೇನು ಯಾರದ ಈ ಶಿರ ಎಂದು ನೋಡಿದರೆ ಪತಿಯದು. ಪಕ್ಕಕ್ಕೆ ತಿರುಗಿ ನೋಡಿದರೆ ಯಾರೂ ಇರುವುದಿಲ್ಲ. ಇದು ದೇವಮಾಯೆ, ಮೋಸ ಎಂದರಿತ ಅವಳು “ನನ್ನ ಪತಿವ್ರತಾಧರ್ಮಕ್ಕೆ ಕಪ್ಪು ಹಚ್ಚಲು ಬಂದವನು ಕಪ್ಪು ಶಿಲೆಯಾಗಲಿ ಎಂದು ಶಪಿಸಿ ಬೆಂಕಿಗೆ ಬೀಳುತ್ತಾಳೆ.ಹೀಗೆ ವಿಷ್ಣು ಸಾಲಿಗ್ರಾಮ ಶಿಲೆಯಾಗುವನು.

ನಂತರ ಶಿವನ ಕರುಣೆಯಿಂದ ಬೃಂದಾ, ಜಲಂಧರರು ಮರಳಿ ಜೀವ ಪಡೆಯುತ್ತಾರೆ. ನಿನ್ನ ಪತಿವ್ರತಾಶಕ್ತಿಗೆ ಮಣಿದು ನಾರಾಯಣ ಇಲ್ಲಿ ಶಿಲೆಯಾಗಿದ್ದಾನೆ ಎಂದು ಶಂಕರ ನುಡಿದಾಗ ನನ್ನ ತಪ್ಪನ್ನು ಮನ್ನಿಸಿ ಎಂದು ಬೃಂದಾ ಬೇಡುತ್ತಾಳೆ. ಆಗ ನಾರಾಯಣನು “, ನಿನ್ನ ಪತಿ ಪರಿಶುದ್ಧನು ಈಗಾಗಲೇ ಶಿವಗಣದಲ್ಲಿ ಸೇರಿಹನು. ನೀನು ಭಸ್ಮರಾಶಿಯಲ್ಲಿ ತುಳಸೀ ರೂಪದಲ್ಲಿ ಜನಿಸುವೆ… ನನ್ನ ಭಕ್ತೆಯೂ ಪ್ರಿಯಳೂ ಆದ ನಿನ್ನನ್ನು ಎದೆಯಲ್ಲಿ ಧರಿಸಿರುತ್ತೇನೆ. ತುಳಸೀಪೂಜೆಯನ್ನು ಮಾಡುವವರಿಗೆ ಸೌಭಾಗ್ಯ ಉಂಟಾಗಲಿ ಎಂದು ಆಶೀರ್ವದಿಸುತ್ತಾನೆ. ಇದೇ ತುಳಸಿ ಹಬ್ಬದ ವೃತ್ತಾಂತ. ಇದನ್ನು ಆಧಾರವಾಗಿಇಟ್ಟುಕೊಂಡು ಬರೆದ ಅಪರೂಪದ ನಾಟಕ ಕೃತಿ ಜಲಂಧರ.


  • ಪದ್ಮನಾಭ. ಡಿ  – ನಿವೃತ್ತ ಪೋಸ್ಟ್ ಮಾಸ್ಟರ್,  ಸಾಹಿತ್ಯ ಕೃತಿಗಳು : ಸಂತೋಷ-ಸಂದೇಶ ಕವನ ಸಂಕಲನ – 2018, ಭಾವಲಹರಿ ಕವನಸಂಕಲನ -2018,  ಹೂಬನ ಕವನಸಂಕಲನ – 2019, ಭಾವಸರಿತೆ – ಕಥಾ ಸಂಕಲನ – 2020, ರಾಜ್ಯ ಮಟ್ಟದ ಸಾಹಿತ್ಯ ಚಿಗುರು ಪ್ರಶಸ್ತಿ, ಪ್ರೇಮಕ್ಕೆ ಜಯ ಕಾದಂಬರಿ – 2021, ತರಂಗಿಣಿ – ಕವನಸಂಕಲನ– 2022 ಕವಿಗಳು, ಲೇಖಕರು, ಮೈಸೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW