ಅಜ್ಜಿ ಮಗಳನ್ನು ನೋಡಲು ಊರಿಗೆ ಹೊರಟ್ಟಿದ್ದಳು ದಾರಿಯ ಮಧ್ಯೆದಲ್ಲಿ ಹುಲಿರಾಯ ಎದುರಾದ. ಅಜ್ಜಿಯನ್ನು ಗಬ್ಬಕ್ಕನ್ನೆ ತಿನ್ನುವುದಾಗಿ ಹುಲಿರಾಯ ಹೇಳಿದ. ಆಗ ಅಜ್ಜಿ ಏನು ಹೇಳಿದಳು, ಭುವನೇಶ್ವರಿ. ರು. ಅಂಗಡಿ ಅವರ ಮಕ್ಕಳ ಕತೆಯನ್ನು ತಪ್ಪದೆ ಮುಂದೆ ಓದಿ….
ನೀತಿ : ಉಪಾಯ ಬಲ್ಲವನಿಗೆ ಅಪಾಯವಿಲ್ಲ.
ಸಂಗ್ರಹ : ಭುವನೇಶ್ವರಿ. ರು. ಅಂಗಡಿ
ಮೂಲ : ಅಜ್ಜಿ ಕಥೆಗಳು
ಒಂದೂರಲ್ಲಿ ಒಬ್ಬ ಅಜ್ಜಿ ತನ್ನ ಮಗಳೊಂದಿಗೆ ವಾಸವಾಗಿದ್ದಳು. ಮದುವೆ ವಯಸ್ಸಿಗೆ ಬಂದ ಮಗಳನ್ನು ಬೇರೆ ಊರಿಗೆ ಮದುವೆ ಮಾಡಿಕೊಟ್ಟಳು. ಈಗ ಮನೆಯಲ್ಲಿ ಅಜ್ಜಿ ಒಬ್ಬಳೇ ಆಗಿಬಿಟ್ಟಳು. ಮಗಳು ಹೋದ ಮೇಲೆ ಅಜ್ಜಿಗೆ ಊಟ, ನಿದ್ದೆ ಯಾವುದು ಸರಿಯಾಗಿ ಆಗ್ತಾ ಇರಲಿಲ್ಲ. ಸುಮಾರು ಮೂರು ನಾಲ್ಕು ತಿಂಗಳಿನ ನಂತರ ಅಜ್ಜಿಗೆ ತನ್ನ ಮಗಳನ್ನು ಹೋಗಿ ನೋಡಿ ಬರಬೇಕು ಎನ್ನುವ ಆಸೆ ಬಂತು. ಇರೋ ಬರೋ ಬಟ್ಟೆಯನ್ನೆಲ್ಲ ಒಂದು ಗಂಟು ಕಟ್ಟಿಕೊಂಡು ಮಗಳ ಊರಿಗೆ ಹೊರಟಳು.
ಮಗಳ ಊರಿಗೆ ಹೋಗುವ ದಾರಿಯಲ್ಲಿ ಮಧ್ಯೆ ಒಂದು ದಟ್ಟ ಕಾಡು. ಕಾಡಿನ ತುಂಬಾ ಕಾಡು ಪ್ರಾಣಿಗಳು. ಮಗಳನ್ನು ನೋಡಬೇಕು ಎಂದರೆ ಅಜ್ಜಿ ಅನಿವಾರ್ಯವಾಗಿ ಆ ಕಾಡನ್ನು ದಾಟಲೇಬೇಕಿತ್ತು. ಮನಸಿಗೆ ಧೈರ್ಯ ತಂದುಕೊಂಡು ಮುಂದೆ ಮುಂದೆ ಹೆಜ್ಜೆ ಹಾಕಿದಳು. ದಾರಿಯ ನಡುವೆ ಏಕಾಯೇಕಿ ದೈತ್ಯ ಹುಲಿಯೊಂದು ಅಜ್ಜಿಗೆ ಎದುರಾಯಿತು. ಹುಲಿ ಅದಾಗಲೇ ಹಸಿವಿನಿಂದ ಕಂಗೆಟ್ಟಿತ್ತು. ಅಜ್ಜಿಯನ್ನು ನೋಡಿದ ಕೂಡಲೇ ತಿನ್ನಲು ಮುಂದಾಯಿತು. ಆಗ ಅಜ್ಜಿ -“ನೋಡು ಹುಲಿರಾಯ, ಈಗ ನನ್ನನ್ನು ನೀನು ತಿಂದರೆ ನನ್ನ ದೇಹ ನಿನಗೆ ಅಷ್ಟು ರುಚಿಸದು, ಏಕೆಂದರೆ ಕೇವಲ ಎಲುಬುಗಳೇ ನನ್ನ ಮೈ ತುಂಬಾ ಕಾಣುತ್ತಿವೆ. ಮಗಳ ಮನೆಗೆ ಹೋಗಿ ಚೆನ್ನಾಗಿ ತಿಂದು ಉಂಡು ಮಾಂಸ ಖಂಡಗಳನ್ನು ಬೆಳೆಸಿಕೊಂಡು ಬರುತ್ತೇನೆ. ಆವಾಗ ತಿನ್ನುವೆ ಅಂತೆ. ಈಗ ನನ್ನನ್ನು ಬಿಟ್ಟು ಬಿಡು” ಎಂದು ಬೇಡಿಕೊಂಡಳು.
“ಆಯ್ತು ಹೋಗು, ನಿನಗಾಗಿ ಕಾಯುತ್ತಿರುವೆ ಬೇಗ ಬಾ” ಎಂದು ಹುಲಿ ಹೇಳಿತು.
ಸ್ವಲ್ಪ ದೂರ ಹೋದ ನಂತರ, ಸಿಂಹವೊಂದು ಎದುರಾಗಿ ಅಜ್ಜಿಯನ್ನು ತಿನ್ನುವುದಾಗಿ ಹೇಳಿತು. ಹುಲಿಗೆ ಹೇಳಿದಂತೆಯೇ ಅಜ್ಜಿ ಸಿಂಹಕ್ಕೂ ಕೂಡ ಹೇಳಿದಳು. “ಮಗಳ ಮನೆಗೆ ಹೋಗಿ ದಪ್ಪವಾಗಿ ಬರುವೆ, ಆಗ ನೀನು ನನ್ನನ್ನು ತಿನ್ನುವೆಯಂತೆ. ಈಗ ನನ್ನನ್ನು ಬಿಟ್ಟು ಬಿಡು” ಎಂದು ಕೇಳಿಕೊಂಡಳು. ಅಜ್ಜಿಯ ಮನವಿಗೆ ಒಪ್ಪಿಕೊಂಡು ಸಿಂಹ ಅವಳನ್ನು ಬಿಟ್ಟಿತು.
ಹೀಗೆ ದಾರಿಯಲ್ಲಿ ಸಾಗುತ್ತಾ ಸಾಗುತ್ತಾ ತೋಳ, ಚಿರತೆ ಮುಂತಾದ ಮಾಂಸಾಹಾರಿ ಪ್ರಾಣಿಗಳೆಲ್ಲ ಅವಳನ್ನು ತಿನ್ನಲು ಮುಂದಾದವು. ಎಲ್ಲ ಪ್ರಾಣಿಗಳಿಗೂ ಅದೇ ಉತ್ತರವನ್ನು ಕೊಟ್ಟು ಎಲ್ಲವುಗಳಿಂದ ತಪ್ಪಿಸಿಕೊಂಡು ಮಗಳ ಮನೆಯನ್ನು ಸೇರಿದಳು.

ಒಂದು ತಿಂಗಳ ಕಾಲ ಮಗಳ ಮನೆಯಲ್ಲಿ ಯಾವ ಚಿಂತೆ ಇಲ್ಲದೇ ಚೆನ್ನಾಗಿ ತಿಂದು ಉಂಡು ಅಜ್ಜಿ ಜೀವನ ಸಾಗಿಸಿದಳು. ಈಗ ಮರಳಿ ತನ್ನ ಊರಿಗೆ ಹೋಗುತ್ತೇನೆ ಎಂದು ಮಗಳ ಹತ್ತಿರ ಹೇಳಿದಳು. ಆಗ ಅಜ್ಜಿಗೆ ಚಿಂತೆಯು ಕಾಡತೊಡಗಿತು. ಕಾಡು ಪ್ರಾಣಿಗಳಿಗೆಲ್ಲ ನನ್ನನ್ನು ತಿನ್ನುವ ಆಸೆ, ನಾನು ಅವುಗಳಿಂದ ಹೇಗೆ ಪಾರಾಗಲಿ? ಎಂದು ತನ್ನ ಮನಸ್ಸಿನ ನೋವನ್ನು ಮಗಳ ಹತ್ತಿರ ಹೇಳಿಕೊಂಡಳು. ಏನಾದರೂ ಒಂದು ಪರಿಹಾರವನ್ನು ಹುಡುಕೋಣ ಬಾ ಎಂದು ಮಗಳು ಮತ್ತು ಅಜ್ಜಿ ಇಬ್ಬರೂ ಸೇರಿ ಕೆಲಸ ಮುಗಿದ ನಂತರ ಹಿತ್ತಲಿನ ತೋಟಕ್ಕೆ ಹೋದರು. ಆಗ ಮಗಳ ಕಣ್ಣಿಗೆ ಬಳ್ಳಿಯಲ್ಲಿ ಒಂದು ದೊಡ್ಡದಾದ ಕುಂಬಳಕಾಯಿ ಕಾಣಿಸಿತು. ಆಗ ತಕ್ಷಣ ಅವಳಿಗೆ ಒಂದು ಉಪಾಯ ಹೊಳೆಯಿತು. ಕುಂಬಳಕಾಯಿಯ ಒಳಗಿನ ತಿರುಳನ್ನೆಲ್ಲ ತೆಗೆದು ಒಂದು ಖಾಲಿ ಮಡಿಕೆಯ ತರ ಅದನ್ನು ಮಾಡಿ, ಅಜ್ಜಿಯ ಮುಖಕ್ಕೆ ಹಾಕಿದಳು. ನೀನು ಊರು ಸೇರುವ ತನಕ ಈ ಕುಂಬಳಕಾಯಿ ಮುಖವಾಡವನ್ನು ತೆಗೆಯಬೇಡ ಅಂತ ಹೇಳಿ ಊರಿಗೆ ಕಳಿಸಿದಳು.
ದಾರಿಯಲ್ಲಿ ಸಿಂಹ ಕಾಣಿಸಿತು. ಕುಂಬಳಕಾಯಿಯ ಮುಖ ಹೊತ್ತ ಅಜ್ಜಿಯನ್ನು ನೋಡಿ, “ಹಿಂದೆ ಏನಾದರೂ ಒಬ್ಬ ಅಜ್ಜಿ ಬರುತ್ತಿದ್ದಾಳೆಯೇ? ನಾನು ಅವಳನ್ನು ತಿನ್ನಲು ಕಾದಿರುವೆ.” ಎಂದು ಅವಳನ್ನು ಕೇಳಿತು.
“ಹೌದೌದು, ನನ್ನ ಹಿಂದೆ ಒಬ್ಬ ವಯಸ್ಸಾದ ಅಜ್ಜಿ ಬರುತ್ತಿದ್ದಾಳೆ, ನೋಡಲು ದಪ್ಪ ಇದ್ದಾಳೆ, ಅವಳೇ ಇರಬಹುದು.” ಎಂದು ಹೇಳಿ ಮುಂದಕ್ಕೆ ಸಾಗಿದಳು.
ನಂತರ ಹುಲಿರಾಯನಿಗೂ ಅದೇ ಉತ್ತರ ಕೊಟ್ಟಳು. ಚಿರತೆ, ತೋಳ….. ಹೀಗೆ ದಾರಿಯಲ್ಲಿ ಸಿಕ್ಕ ಎಲ್ಲ ಪ್ರಾಣಿಗಳಿಗೂ ಹಿಂದೆ ಬರುತ್ತಿದ್ದಾಳೆ ಅಜ್ಜಿ….ಹಿಂದೆ ಬರುತ್ತಿದ್ದಾಳೆ ಅಜ್ಜಿ…. ಎಂದು ಹೇಳಿ ತಾನು ಮಾತ್ರ ಕುಂಬಳಕಾಯಿ ಮುಖವನ್ನು ಹೊತ್ತು ತನ್ನ ಊರನ್ನು ಯಾವ ತೊಂದರೆಯೂ ಇಲ್ಲದೆ ತಲುಪಿದಳು. ಅಲ್ಲಿಗೆ ಮಗಳು ಮಾಡಿದ ಉಪಾಯ ಅಜ್ಜಿಯನ್ನು ಅಪಾಯದಿಂದ ಪಾರು ಮಾಡಿತ್ತು. ಅಜ್ಜಿ ಮುಂದೆ ತನ್ನ ಮಗಳ ಮನೆಗೆ ಹೋಗುವಾಗ ಕುಂಬಳಕಾಯಿಯ ಮುಖವಾಡವನ್ನು ಹೊತ್ತು ಸಾಗುತ್ತಿದ್ದಳು.
- ಭುವನೇಶ್ವರಿ. ರು. ಅಂಗಡಿ
