ಇಂದು ಕ್ಯೂ ಆರ್ ಕೋಡು ಜಗತ್ತು. ಮನುಷ್ಯ ಈ ಕ್ಯೂ ಆರ್ ಕೋಡ್ ಮೇಲೆ ಅವಲಂಬಿತನಾಗಿ ನಾಳೆ ಒಬ್ಬರಿಗೊಬ್ಬರು ಕೋಡ್ ವರ್ಡ್ ನಲ್ಲಿ ಮಾತಾಡುವ ಪರಿಸ್ಥಿತಿ ಬಂದರೆ ಆಶ್ಚರ್ಯವೇನಲ್ಲ…ಕತೆಗಾರ್ತಿ ನಳಿನಿ ಟಿ. ಭೀಮಪ್ಪ ಅವರ ಈ ಕತೆಯನ್ನು ಪೂರ್ತಿಯಾಗಿ ಓದಿ…
ಪುರಾಣದ ಕತೆಯಲ್ಲಿ ಹಿರಣ್ಯಕಶಿಪು ಪ್ರಹ್ಲಾದನಿಗೆ ನಿನ್ನ ಹರಿ, ಈ ಕಂಬದಲ್ಲಿದ್ದಾನೆಯೇ, ಆ ಕಂಬದಲ್ಲಿದ್ದಾನೆಯೇ ಎಂದೆಲ್ಲ ಪ್ರಶ್ನಿಸಿದಾಗ, ಎಲ್ಲೆಲ್ಲಿಯೂ ಇದ್ದಾನೆ ಎಂದು ಪುಟ್ಟ ಪ್ರಹ್ಲಾದ ಉತ್ತರಿಸಿದ್ದ. ಅದೇ ರೀತಿ ಈಗ ಕ್ಯೂಆರ್ ಕೋಡ್ ಎನ್ನುವುದು ಕೂಡಾ ‘ಎಲ್ಲೆಲ್ಲೂ ಚಚ್ಚೌಕವೇ’ ಎನ್ನುವಂತೆ ಸರ್ವಾಂತರ್ಯಮಿಯಾಗಿದೆ. ಕಪ್ಪು ಬಿಳುಪು ಚೌಕಾಕೃತಿಯ ಮೂರು ಮೂಲೆಯಲ್ಲಿರುವ ಪುಟ್ಟಚೌಕಗಳ ನಡುವೆ ರಂಗೋಲಿಗೆ ಬಣ್ಣತುಂಬುವಂತೆ ಕಪ್ಪುಚುಕ್ಕಿಗಳು ಆವರಿಸಿರುತ್ತವೆ. ಚಚ್ಚೌಕದ ಅಚ್ಚಿನಲ್ಲಿ ಎರಕ ಹೊಯ್ದಂತೆ ಕ್ಯೂ ಆರ್ ಕೋಡುಗಳೆಲ್ಲ ನೋಡುವುದಕ್ಕೆ ಒಂದೇತೆರನಾಗಿದ್ದರೂ, ಸ್ಕಾ೦ಯನ್ ಮಾಡುತ್ತಿದ್ದಂತೆ, ದೇವನೊಬ್ಬ ನಾಮ ಹಲವು ಎನ್ನುವಂತೆ, ನಾಮ ಬೇರೆ, ವಿಷಯ ಬೇರೆ.
ಕಳ್ಳರಿಗಂತೂ ವರದಾನದಂತಾಗಿದೆ. ಮೊನ್ನೆ ಸ್ನೇಹಿತರ ಗುಂಪೊಂದು ಮದುವೆಗೆಂದು ರಾತ್ರಿಯ ಹೊತ್ತು ಹೈವೇನಲ್ಲಿ ಪ್ರಯಾಣಿಸುವಾಗ, ನಾಲ್ಕೈ೦ದು ಬೈಕುಗಳ ಮೇಲೆ ಬಂದ ಕಳ್ಳರು ಅಡ್ಡಗಟ್ಟಿದರಂತೆ. ಹಿಂದಿನ ಕಾಲದ ಕಳ್ಳರು ಹಿಂಭಾಗದ ಕಾಲರ್‌ನೊಳಗೆ ತೂರಿಸಿಟ್ಟಿದ್ದ ಲಾಂಗ್ ತೆಗೆದಂತೆ, ಈಗಿನ ಕಳ್ಳರು ಮುಂಭಾಗದ ಕಾಲರ್‌ನೊಳಗೆ ಐಡಿ ಕಾರ್ಡ್ಗಳ ಹಾಗೆ ಇಳೆಬಿಟ್ಟಿರುವ ಕ್ಯೂಆರ್ ಕೋಡ್ ತೆಗೆದು, ಎಲ್ಲರ ಮೊಬೈಲ್‌ನಲ್ಲಿರುವ ಹಣವನ್ನೆಲ್ಲ ಸ್ಕಾನ್ ಮಾಡಿಸಿಕೊಂಡು ಪರಾರಿಯಾದರಂತೆ. ಈ ಕೋಡು ಬರುವ ಕಾಲದ ಮುಂಚೆಯಾಗಿದ್ದರೆ ಎಟಿಎಂ ಕಾರ್ಡುಗಳನ್ನು ಬಳಸಿ ಹಣ ತರುವಂತೆ, ಅದಕ್ಕೂ ಹಿಂದಿನ ಕಾಲದಲ್ಲಿ, ಖರ್ಚಿಗೆಂದು ಹಣವನ್ನು ಮುರ‍್ನಾಲ್ಕು ಭಾಗ ಮಾಡಿಕೊಂಡು, ಅದು ಕಳೆದರೆ ಇದು, ಇದು ಕಳೆದರೆ ಅದು ನೆರವಾಗಬಹುದು ಎಂದು ಶರ್ಟು, ಪರ್ಸು, ಪ್ಯಾಂಟು, ಚಡ್ಡಿ ಜೇಬುಗಳಲ್ಲಿ ಬಚ್ಚಿಟ್ಟುಕೊಂಡ ಹಣವನ್ನು ಕಳ್ಳರು ಮುಲಾಜಿಲ್ಲದೆ ತಡಕಾಡಿ ಹೊರಗೆಳೆಯುತ್ತಿದ್ದರೂ ಸಹ, ಯಾವುದೋ ಒಂದು ಕಡೆಯ ಹಣ ಆಕಸ್ಮಿಕವಾಗಿ ಕಣ್ತಪ್ಪಬಹುದಿತ್ತು. ಹೆಂಗಸರ ಜಂಭದ ಚೀಲಕ್ಕಿಂತ ಹೆಚ್ಚಾಗಿ ಅವರ ರವಿಕೆಯೊಳಗಿನ ಪುಟ್ಟ ಪರ್ಸಿನಲ್ಲಿ ಮುದುಡಿಯಾದ ನೋಟುಗಳು ಬೆವರಿನ ವಾಸನೆ ಹೀರಿಕೊಳ್ಳುತ್ತ ಪವಡಿಸಿರುತ್ತವೆ ಎಂಬುದು ಎಂತಹ ಮೂರ್ಖಚೋರನೂ ತಿಳಿದಿರುತ್ತಿದ್ದ. ಈ ಕೋಡ್ ಬಂದ ಮೇಲೆ ಹಾಗಲ್ಲ, ಗಂಗಾಳವನ್ನೆಲ್ಲ ಒಂದಗುಳನ್ನೂ ಬಿಡದೆ ನೆಕ್ಕಿ ನೆಕ್ಕಿ ಬಳಿದಂತೆ ಹಣ ಖಾಲಿಯಾಗಿರುತ್ತದೆ. ಹಸುವಿನ ಜೊತೆಗೆ ಕರು ಇದ್ದಂತೆ, ಬಹುತೇಕ ಸ್ಮಾರ್ಟ್ಫೋನ್ ಇರುವವರ ಹಣ ಇದ್ದೇ ಇರುತ್ತದೆ ಎನ್ನುವ ಧೈರ್ಯ ಚೋರರಿಗೆ.
ಹೊಸಕೋಡುಗಳ್ಳರಂತೂ ಅಂಗಡಿಗಳಲ್ಲಿ ಹಚ್ಚಿದ ಕ್ಯೂಆರ್ ಕೋಡಿನ ಮೇಲೆ ತಮ್ಮದೇ ಕೋಡನ್ನು ಅಂಟಿಸಿ ಹಣ ಲಪಟಾಯಿಸುತ್ತಿರುವುದು ತೀರ ಇತ್ತೀಚೆಗೆ ಹೆಚ್ಚಾಗುತ್ತಿದೆ. ಕಾಡುಗಳ್ಳರನ್ನು ಹಾಗೋ ಹೀಗೋ ಮಾಲುಸಮೇತ ಹಿಡಿಯಬಹುದು, ಕೋಡುಗಳ್ಳರನ್ನು ಹಿಡಿಯುವುದು ಸುಲಭವಲ್ಲ.
ಅದರಲ್ಲೂ ಹಣ ವರ್ಗಾವಣೆಯಲ್ಲಿ ಈ ಕೋಡಿನ ಪಾತ್ರ ತುಂಬ ಮಹತ್ವದ್ದು. ಜೇಬಿನಲ್ಲಿ, ಪರ್ಸಿನಲ್ಲಿ ಹಣ ತುಂಬಿಕೊಂಡು ಜೊತೆಗೆ ಚಿಲ್ಲರೆಗಳನ್ನು ಜೋಡಿಸಿಕೊಂಡು, ಕೈಯಿಂದ ಕೈಗೆ ಹಣ ವರ್ಗಾಯಿಸುವ ಕಾಲ ಮರೆಯಾಗುತ್ತಿದೆ. ಮನೆಗಳಲ್ಲಿ ಕುಟುಂಬದವರ ಫೋಟೋಗಳನ್ನು, ತಾವು ಕೆಲಸ ಮಾಡುವ ಕಡೆ ಅಥವಾ ಅಂಗಡಿಯಲ್ಲಿ ಮನೆದೇವರ ಫೋಟೋಗಳನ್ನು ಫ್ರೇಮ್ ಮಾಡಿಸಿ, ಸ್ಕಾ೦ಯನ್ ಅಥವಾ ಗೋಡೆಯ ಮೇಲೆ ಪ್ರತಿಷ್ಠಾಪಿಸುವುದು ಸಾಮಾನ್ಯ. ಈಗ ಹೊಸದಾಗಿ ಸೇರಿಕೊಂಡ ಕ್ಯೂ ಆರ್ ಕೋಡ್ ಎಂಬ ಮನಿದೇವರ ಫೋಟೋಫ್ರೇಮ್ ಮಾತ್ರ ಅಲ್ಲಿ ಇಲ್ಲಿ ಎನ್ನದೆ ಎಲ್ಲೆಡೆ ಪಟ್ಟಾಂಗ ಹಾಕಿಕೊಂಡು ಕೂತಿರುತ್ತದೆ ಅಥವಾ ಕಂಬ, ಗೋಡೆಗಳಿಗೆ ಸ್ಟಿಕ್ಕರ್ ಅಂಟಿಸಿದ ಹಾಗೆ ಅಂಟಿಕೊಂಡಿರುತ್ತದೆ. ಇಲ್ಲಿ ಒಂದೇ ಮನೆದೇವರು ಎನ್ನುವ ಲೆಕ್ಕ ಬರುವುದಿಲ್ಲ, ನಾಲ್ಕೈ೦ದು ಮನಿದೇವರೂ ಇರಬಹುದು. ಮೊದಲು ನಂದಿಯ ಕೋಡುಗಳ ಮೂಲಕ ಶಿವನ ದರ್ಶನವನ್ನು ಮಾಡಿದಂತೆ, ಮನಿಕೋಡುಗಳ ದರ್ಶನ ಕಣ್ಣಿನಿಂದ ಮಾಡಿ, ಕೆಲಸವಾದ ನಂತರ, ಹಣ ಪಾವತಿಸುವಾಗ, ದೇವರಿಗೆ ಕೈಎತ್ತಿ ಮುಗಿಯುವಂತೆ, ಮೊಬೈಲ್ ಅನ್ನು ಕೋಡಿನ ಮುಖಕ್ಕೆ ಎತ್ತಿ ಹಿಡಿದು, ಫೋಕಸ್ ಮಾಡುತ್ತಿದ್ದಂತೆ, ಸರಕ್ಕನೆ ಬ್ರಾಕೆಟ್‌ನಲ್ಲಿ ಗುರುತು ಹಿಡಿದು, ಇದು ಈ ದೇವರ ಕೋಡು ಎಂದು ರಶೀದಿ ಬರೆದುಕೊಟ್ಟಂತೆ, ಸಾಕ್ಷಿಗೆ ಹೆಸರು ತೋರಿಸುತ್ತದೆ. ಹಾಕಬೇಕಾದ ರೊಕ್ಕ ಹಾಕುತ್ತಿದ್ದಂತೆ, ಬಹುತೇಕ ಕಡೆ ಇಷ್ಟಿಷ್ಟು ಹಣ ತಲುಪಿದೆ ಎಂದು ಮಂಗಳಾರತಿಯಂತೆ ಮಧುರವಾಣಿಯೊಂದು ಉಲಿಯುತ್ತದೆ. ದೇವಸ್ಥಾನಗಳಲ್ಲಿಯೂ ಸಹ ಕಾಣಿಕೆ ಸಲ್ಲಿಸಲು, ಹಾಂಡಿ ತರಹ ಇರುವ ಹುಂಡಿಗಳನ್ನು ಹುಡುಕುವ ಪ್ರಮೇಯವಿಲ್ಲದಂತೆ ಅಲ್ಲಲ್ಲಿ ಅಂಟಿಸಿರುವ ಕಾಗದದ ಮೇಲಿನ ಹುಂಡಿಯ ಕೋಡುಗಳು ಮರೆಯಲು ಬಿಡದಂತೆ ಕಾಣು(ಡು) ತ್ತಿರುತ್ತವೆ. ಕೆಲವು ಆಟೋಚಾಲರು, ಪ್ರಯಾಣಿಕರಿಗೆ ಸ್ಕಾ೦ಯನ್ ಮಾಡಲು ಸುಲಭವಾಗುವಂತೆ, ಪ್ರಯಾಣಿಕರ ಸೀಟಿನ ಅಕ್ಕಪಕ್ಕ ಗೋಡೆಗಳ ಮೇಲೆ ಅಥವಾ ಡ್ರೆವರ್ ಸೀಟಿನ ಹಿಂಭಾಗದಲ್ಲಿ ಕೋಡುಗಳನ್ನು ಅಂಟಿಸಿರುತ್ತಾರೆ. ಮತ್ತೂ ಕೆಲವರು ತಮ್ಮ ಖಾಕಿಕೋಟಿನ ಹಿಂಭಾಗದಲ್ಲಿಯೇ ಕೋಡಿನ ಪ್ರಿಂಟ್ ಹಾಕಿಸಿಕೊಂಡಿರುವುದರಿಂದ ಕೋಡಂಗಿಗಳೆಂದು ಕರೆಯಬಹುದು. ಅವರ ಬೆನ್ನು ಸ್ಕ್ಯಾನ್ ಮಾಡಿಯೇ ಇಳಿಯಬೇಕು. ಮುಖಪುಟದಲ್ಲಿಯೂ ಸಹ ಈಗ ಮದುವೆಗೆ, ವಿದ್ಯಾಭ್ಯಾಸಕ್ಕೆ, ಆರೋಗ್ಯ ಸಮಸ್ಯೆಗಳಿಗೆ ಸಹಾಯ ಕೇಳಲು, ಹನುಮಂತನ ಬಾಲದಂತೆ ಬ್ಯಾಂಕ್ ಖಾತೆಯ ಇಷ್ಟುದ್ದದ ಪ್ರವರ, ವಿವರ ಹಾಕುವ ಅವಶ್ಯಕತೆಯೇ ಇಲ್ಲ. ಕೋಡುಪಟವೊಂದೇ ಸಾಕು.

ಫೋಟೋ ಕೃಪೆ : ಅಂತರ್ಜಾಲ
ಶಾಲಾ ಪಠ್ಯದಲ್ಲೂ ಪ್ರಶ್ನೆಗಳು ಪ್ರಿಂಟಾಗಿ, ಉತ್ತರಕ್ಕೆ ಆ ಪುಟ ನೋಡಿ ಈ ಪುಟ ನೋಡಿ ಎನ್ನುವ ಪ್ರಮೇಯವಿಲ್ಲದೆ, ಕೆಳಗಡೆ ಒಂದು ಕೋಡು ಅಂಟಿಸಿ ಬಿಟ್ಟಿರುತ್ತಾರೆ. ಮರಗಳ ಬಗ್ಗೆ ಮಾಹಿತಿ ಹಾಕುವಾಗಲೂ, ಮರದ ಹೆಸರು ಹಾಕಿ ಜೊತೆಗೊಂದು ಕೋಡು. ಶಿಕ್ಷಣ ಕ್ಷೇತ್ರದ ಕೋರ್ಸುಗಳು ಅಂತ ಒಂದು ಸಾಲು ಬರೆದು ಕೆಳಗೊಂದು ಕೋಡು. ಮೇಳಗಳಲ್ಲಿಯೂ ಸಹ ಪ್ರದರ್ಶನಕ್ಕಿಟ್ಟ ವಸ್ತು, ಗಿಡಗಳ ಮುಂದೆಲ್ಲ ದೇವರ ಪಾದಕ್ಕೆ ಹೂವಿಟ್ಟಂತೆ ಕೋಡಿನ ಚಿತ್ರ. ಪತ್ರಿಕೆ, ಮ್ಯಾಗ್‌ಜಿನ್, ವಸ್ತುಗಳು, ಉತ್ಪನ್ನಗಳು, ಜಾಹೀರಾತುಗಳು, ಆಮಂತ್ರಣ ಪತ್ರಿಕೆಗಳಲ್ಲಿ ಲೊಕೇಶನ್‌ಗಾಗಿ ಹೀಗೆ ಎಲ್ಲದರಲ್ಲೂ ಕೋಡುಗಳದೇ ಕಾರುಬಾರು. ಮುಂದೆ ಅಕ್ಷರಗಳನ್ನು ಹೆಚ್ಚಾಗಿ ಪ್ರಿಂಟ್ ಮಾಡುವ ಗೊಡವೆಯಿಲ್ಲದೆ ಶೀರ್ಷಿಕೆಗಳ ಜೊತೆಗೆ ಕೋಡುಗಳನ್ನೇ ಸಾಲಾಗಿ ಮುದ್ರಿಸುವ ಕಾಲ ಬರಬಹುದು. ಇದೊಂದು ರೀತಿ ಪ್ರಮಾಣವಚನ ಸ್ವೀಕರಿಸುವಾಗ, ಬೋಧಿಸುವವರು ‘ನಾನು’ ಎಂದಷ್ಟೇ ಹೇಳುತ್ತಿದ್ದಂತೆ, ಸ್ವೀಕರಿಸುವವರು ಕೋಡಿನ ಹಾಗೆ ವಿಸ್ತಾರವಾಗಿ ವಿಷಯ ಓದಿದಂತೆ. ಮುಂದೆ ಮನುಷ್ಯರೂ ಸಹ ಎಲ್ಲೆಡೆ ತಮ್ಮ ಬಯೋಡೇಟಾಕ್ಕಾಗಿ ನಾನಾ ಡಾಕ್ಯುಮೆಂಟ್ಸ್ ಹೊತ್ತೊಯ್ಯುವ ಬದಲು, ಎಲ್ಲವನ್ನೂ ಕೋಡ್‌ನಲ್ಲಿ ಕ್ರೋಢೀಕರಿಸಿ, ಅದನ್ನು ಹಚ್ಚೆಯಂತೆ ದೇಹದ ಮೇಲೆ, ಸುಲಭವಾಗಿ ಸ್ಕ್ಯಾನ್ ಮಾಡುವ ಸ್ಥಳದಲ್ಲಿ ಕಡ್ಡಾಯವಾಗಿ ಕೋಡ್ ಟ್ಯಾಟೂ ಹಾಕಿಸಿಕೊಳ್ಳುವ ಕಾಲ ಬರಬಹುದೇನೋ??
ಕೇವಲ ಪ್ರಾಣಿಗಳಿಗೆ ತಮ್ಮ ಆತ್ಮರಕ್ಷಣೆಗಾಗಿ ತಲೆಯ ಮೇಲೆ ಕೋಡುಗಳಿರುತ್ತವೆ ಎಂದು ತಿಳಿದಿರುವ ತನಕ ಮನುಷ್ಯ ತುಂಬ ಸುಖಿಯಾಗಿದ್ದ. ಮನುಷ್ಯನಲ್ಲಿಯೂ ಅಹಂಕಾರ, ಹೆಮ್ಮೆಗೆ ಕೋಡುಗಳು ಮೂಡುವುದಿದೆ. ಪ್ರೇಮಿಗಳು ಸಹ ಮತ್ತೊಬ್ಬರಿಗೆ ತಿಳಿಯದಂತೆ ಪರಸ್ಪರ ತಮ್ಮ ಕಣ್ಣುಗಳ ಮೂಲಕ ಕೋಡ್ ಮೆಸೇಜ್ ಕಳಿಸಿಕೊಂಡು, ತಮ್ಮಷ್ಟಕ್ಕೆ ತಾವೇ ಡಿಕೋಡ್ ಮಾಡಿಕೊಂಡು ಸಂಭ್ರಮಿಸುತ್ತಿದ್ದರು. ಮಿಲಿಟರಿಯವರು ಶತ್ರುದೇಶದಿಂದ ಯಾವುದಾದರೂ ಕೋಡ್ ಸಿಗ್ನಲ್ ಸಿಗುತ್ತಿದ್ದಂತೆ, ಅವುಗಳನ್ನು ಡಿಕೋಡ್ ಮಾಡಲು ಶತಗತಾಯ ಪ್ರಯತ್ನಿಸುತ್ತಿದ್ದರು. ಇಷ್ಟು ಬಿಟ್ಟರೆ ಕೋಡಿನ ತಂಟೆಗೆ ಹೋಗುತ್ತಿದ್ದವರು ಕಡಿಮೆ ಎನ್ನಬಹುದು. ಪಿನ್ ಕೋಡ್, ಇಂಡಿಯನ್ ಫೀನಲ್ ಕೋಡ್ ಎನ್ನುವ ಕೆಲವು ಕೋಡ್‌ಗಳು ಹಿಂದಿನಿಂದಲೂ ಪರಿಚಯವಿದ್ದರೂ, ಆಯಾ ಸಂಧರ್ಭಕ್ಕೆ ಮಾತ್ರ ಬಳಸುವಾಗ ಉಪಯೋಗಿಸುತ್ತಿದ್ದರಿಂದ ಗಮನಕ್ಕೆ ಬರುತ್ತಿದ್ದುದು ಕಡಿಮೆ. ಇನ್ನು ಸಣ್ಣನೆಯ, ದಪ್ಪನೆಯ ಬಿದಿರುಗಳಗಳನ್ನು ಪಕ್ಕಪಕ್ಕದಲ್ಲಿ ಸೇರಿಸಿದಂತಿರುತ್ತಿದ್ದ ಬಾರ್‌ಕೋಡ್‌ಗಳನ್ನು ವಸ್ತುಗಳ ಮೇಲೆ ಅಂಟಿಸುವ ಪರಿಪಾಠ ಶುರುವಾಗಿ, ಅದನ್ನು ಸ್ಕ್ಯಾನರ್ ಮೂಲಕ ಪರಿಶೀಲಿಸುವುದನ್ನೇ ಬಾಯಿ ಬಿಟ್ಟುಕೊಂಡು ನೋಡುವ ಕಾಲವಿತ್ತು. ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್, ಎಂ ಆರ್‌ಐ ಸ್ಕ್ಯಾನ್ ಮಾಡಿಸುವುದು ಮಾತ್ರ ತಿಳಿದಿದ್ದ ಜನರಿಗೆ, ಈಗ ಕೋಡುಗಳನ್ನು ಸ್ವತಃ ಸ್ಕ್ಯಾನ್ ಮಾಡುವ ಸಂಗತಿಯೇ ರೋಮಾಂಚನಕಾರಿ ಅನುಭವ ನೀಡುತ್ತಿದೆ. ಹಾಗಾಗಿ ಈ ಕ್ಯೂ ಆರ್ ಕೋಡ್‌ಗಳು ಸರ್ವಜನರಿಗೂ ಸರ್ವರ್ ಆಗಿ ಜಗತ್ತನ್ನೇ ಸರ್ವೈವ್ ಮಾಡುತ್ತಿವೆ ಎನ್ನಬಹುದು.
ಪ್ರತಿಯೊಬ್ಬರೂ ಪ್ರತಿಯೊಂದು ವಿಷಯಕ್ಕೂ ಕಂಡಕ0ಡಲ್ಲಿ, ಸಿಕ್ಕಸಿಕ್ಕಲ್ಲಿ ಕೋಡ್ ಸ್ಕ್ಯಾನ್ ಮಾಡುವ ಕೋಡಂಗಿಗಳ0ತಾಗಿ, ಜಗತ್ತೇ ಕೋಡ್‌ವರ್ಲ್ಡ್ ಆಗಿ ಬದಲಾಗುತ್ತಿರುವ ಈ ಘಟ್ಟವನ್ನು ಗಮನಿಸುತ್ತಿದ್ದರೆ, ಮುಂದೆ ಮನುಷ್ಯ ಮನುಷ್ಯರ ನಡುವೆ ಸಂವಹನದ ಅವಶ್ಯಕತೆಯೇ ಕಡಿಮೆಯಾಗುತ್ತ, ಇಡೀ ಜಗತ್ತಿಗೆ ಜಗತ್ತೇ ನಿಧಾನವಾಗಿ ತಣ್ಣನೆಯ ಮೌನಕ್ಕೆ ಜಾರಿ ಕೋಡ್ ವರ್ಲ್ಡ್ ಆಗುವ ಆತಂಕ ಕಾಡದಿರದು.
- ನಳಿನಿ ಟಿ. ಭೀಮಪ್ಪ – ಧಾರವಾಡ
