ಖ್ಯಾತ ಕಾದಂಬರಿಕಾರ ತರಾಸು ಅವರ ‘ರಕ್ತರಾತ್ರಿ’ ಕಾದಂಬರಿಯ ಕುರಿತು ಲೇಖಕಿ ಅಮೃತ ಎಂ ಡಿ ಅವರು ಪುಸ್ತಕ ಪರಿಚಯವನ್ನು ಬರೆದಿದ್ದಾರೆ, ತಪ್ಪದೆ ಓದಿ…
ಪುಸ್ತಕ : ರಕ್ತರಾತ್ರಿ
ಲೇಖಕರು : ತ.ರಾ.ಸು
ವಿಭಾಗ : ಕಾದಂಬರಿ
ಪ್ರಕಾಶಕರು : ಹೇಮಂತ ಸಾಹಿತ್ಯ, ಬೆಂಗಳೂರು
ಬೆಲೆ : ರೂ ೧೦೦/-
ಓಬಣ್ಣನ ಕ್ರೂರ ಹತ್ಯೆ ,ಓಬವ್ವನ ನಾಗತಿಯ ಆತ್ಮಹತ್ಯೆ ಭುವನಪ್ಪನಾಯಕನವರ ಧಾರುಣ ಸಾವು, ಕಸ್ತೂರಿ ನಾಯಕನ ಸ್ವಾಮಿ ನಿಷ್ಠೆಯ ಪ್ರತಿಫಲ ಆತನ ಸ್ವಯಂ ಶಿರಶ್ಚೇಧನ, ನಾಯಕರ ಪರ ನಿಂತನೆಂದು ವೀರಣ್ಣನ ಹತ್ಯೆ ಇದರಲ್ಲದರಿಂದ ಬೇಸತ್ತ ಕಸ್ತೂರಿ ನಾಯಕನ ಹೆಂಡತಿ ಸಾವು, ಮುನ್ಸೂಚನೆ ಇಲ್ಲದೆ ಜರುಗಿದಂತಹ ಇಷ್ಟೆಲ್ಲ ಸಾವುಗಳಿಗೆ ಮನನೊಂದು ಜೀವನದಲ್ಲಿ ಹತಾಶೆಯನ್ನೇ ಹೊದ್ದು ಮೂಲೆಗುಂಪಾದ ಲಿಂಗಣ್ಣನಾಯಕ, ಇವುಗಳಿಂದ ಬೇಸತ್ತ ಗಿರಿಜೆ ಹುಚ್ಚಿಯಂತೆ ಬೀದಿ ಅಲೆಯುವ ಪರಿಸ್ಥಿತಿ ಬಂದಿದ್ದು ಇವುಗಳ ಜೊತೆಯಲ್ಲಿ ರಕ್ತ ರಾತ್ರಿ ಆರಂಭ ಆಗುತ್ತದೆ.
ಹೀಗೆ ಕ್ರೂರ ಹತ್ಯೆಗಳ ನಡುವೆ ವಿಷಾದವೊಂದು ಮನೆ ಮಾಡಿ 12 ವರ್ಷಗಳ ಚಿಕ್ಕಣ್ಣನ ನಾಯಕ,ಮುದ್ದಣನ ದರ್ಬಾರು ಮುದ್ದಣನ ಕೈ ಗೊಂಬೆಯಾಗಿ ಚಿಕ್ಕಣ್ಣನ ಕಾರುಬಾರು ಇವುಗಳೆಲ್ಲವೂ ಸಾಗುತ್ತಿರುವಾಗಲೇ ಚಿಕ್ಕಣ್ಣನ ಸಾವು, ದುರ್ಗಕ್ಕೆ ಮತ್ತದೆ ಕರಾಳತನವನ್ನು ತಂದುಡುತ್ತದೆಯೋ ಎಂಬ ಆಲೋಚನೆಯಿಂದ ಶುರುವಾಗುವ ರಕ್ತರಾತ್ರಿ ಕೊನೆಯಲ್ಲಿ ಅದೇ ಕರಾಳತೆಯನ್ನು ಅದೇ ಘೋರ ಕೃತ್ಯವನ್ನು ತೋರಿಸಿಬಿಡುತ್ತದೆ.
ಉಸಿರುಗಟ್ಟಿದ ಭಾವದಲ್ಲಿ ಲಿಂಗಣ್ಣ ನಾಯಕ ತಹತಹಿಸಿ ಹೋಗುತ್ತಾನೆ. ಇದೆಲ್ಲದರಿಂದ ಮುಕ್ತಿ ಪಡೆಯಲು ಸಾಧ್ಯವಾಗದು. ಮುದ್ದಣ್ಣನ ಉದ್ದಟತನ ದಿನೇ ದಿನೇ ಹೆಮ್ಮೆರವಾಗಿ ಬೆಳೆಯುತ್ತ ಹೋಗುವುದಲ್ಲದೆ ಆಳವಾಗಿ ಬೇರೂರಿ ಬಿಡುತ್ತದೆ, ಚಿಕ್ಕಣ್ಣ ನಾಯಕನ ಸಾವಿನಿಂದ ಕಂಗೆಟ್ಟ ಜನ, ಮತ್ಯಾರು ದುರ್ಗದ ಗದುಗೆ ಏರುವರು ಎಂಬ ತೊಯ್ದಾಟ ಸುತ್ತಣ ದುರ್ಗದ ಪ್ರದೇಶದಲ್ಲಿ ಯಕ್ಷ ಪ್ರಶ್ನೆಯಾಗಿ ಉಳಿಯುತ್ತದೆ.

ತರಾಸು
ಲಿಂಗಣ್ಣ ನಾಯಕ ಪಟ್ಟಕ್ಕೆ ಬರಬೇಕೆಂದು ಒಂದು ಪಂಗಡ ಹೋರಾಡಿದರೆ ಮತ್ತೊಂದು ಪಂಗಡ ಮುದ್ದಣ ಸಿಂಹಾಸನವೇರಲಿ ಎಂದು ಹಪಹಪಿಸುತ್ತವೆ. ಭುವನಪ್ಪನವರ ಮಗನಾದ ಪರಶುರಾಮ, ಭರಮಣ್ಣ ಅವರ ಮುಂದಾಳತ್ವದಲ್ಲಿ ಲಿಂಗಣ್ಣನಾಯಕನೊಟ್ಟಿಗೆ ಮಾತುಕತೆ ಆರಂಭವಾಗುತ್ತದೆ.
ಇದರ ಕುರಿತು ಮುದ್ದಣ್ಣನಿಗೆ ಯಾವ ಮುನ್ಸೂಚನೆಯಾಗಲಿ ಸೂಚನೆಯಾಗಲಿ ಇರುವುದಿಲ್ಲ ಪಟ್ಟದ ಅಭಿಲಾಷೆಯುಳ್ಳ ಮುದ್ದಣ್ಣ, ಪಟ್ಟಾಭಿಷೇಕ ಮಾಡಬೇಕೆಂಬ ಆಲೋಚನೆಯಲ್ಲೂ ಕೂಡ ಇರುವುದಿಲ್ಲ. ವಿರಕ್ತನಾಗಿದ್ದ ಲಿಂಗಣ್ಣ ಮನವೊಲಿಸಲು ಪರಶುರಾಮ ಮತ್ತು ಭರಮಣ್ಣ ಬಹಳ ತ್ರಾಸ ತೆಗೆದುಕೊಳ್ಳುತ್ತಾರೆ. ಮಂದ ಬುದ್ದಿ ಕವಿದಂತೆ ಲಿಂಗಣ್ಣನ ವರ್ತನೆ. ದ್ವೇಷ, ಕಿಚ್ಚು ಎಲ್ಲವನ್ನು ತನ್ನೊಳಗೆ ದಹಿಸಿ ಎಲ್ಲವನ್ನು ತೊರೆದು ಬದುಕುವ ಉದ್ಧಟತನದಲ್ಲಿ ಇರುತ್ತಾನೆ.
ಪರಶುರಾಮ ಮತ್ತು ಭರಮಣ್ಣನ ಜೊತೆಗೆ ಹುಚ್ಚಿಯ ವೇಷದಲ್ಲಿದ್ದ ಗಿರಿಜೆ ಬಂದು, ಓಬಣ್ಣ ನಾಯಕನ ಸಾವಿಗೂ ಓಬವ್ವನಾಗುತಿಯ ಸಾವಿಗೂ ನ್ಯಾಯದಕ್ಕಲೇಬೇಕು ರಕ್ತ ಪಿಪಾಸಿನಂತೆ ತನ್ನ ದರ್ಪ ಮೆರೆಯುತ್ತಿರುವ ಮುದ್ದಣ್ಣನಿಗೆ ಪಾಠ ಕಲಿಸಲೇಬೇಕು ಎಂಬ ಮಾತುಗಳಿಂದ ಜ್ಞಾನೋದಯವಾದ ಲಿಂಗಣ್ಣ ನಾಯಕ ಪಟ್ಟವೇರಲು ಸಮ್ಮತಿಸುತ್ತಾನೆ..
ಆದರೂ ಮುದ್ದಣ್ಣ ಇದಕ್ಕೆ ಒಪ್ಪುವನೆ ಎಂಬ ಅನುಮಾನ ಆತನಲ್ಲಿಯೂ ಇರುತ್ತದೆ. ಇದನ್ನು ಪರಶುರಾಮ ಮತ್ತು ಭರಮಣ್ಣನ ಗಮನಕ್ಕೆ ತಂದಾಗ ಅವರ ಆಲೋಚನೆಯ ದಿಕ್ಕು ಮತ್ತೆ ಎತ್ತಲೋ ಸಾಗುತ್ತದೆ. ಅಧಿಕಾರದ ಮದವೇರಿದ ಮುದ್ದಣ್ಣ ತಂತಾನೆ ಈ ವಿಷಯ ಕುರಿತು ಮಾತನಾಡುವುದಿಲ್ಲ. ಈ ವಿಷಯ ಪ್ರಸ್ತಾಪಿಸಲು ಚಿಕ್ಕಣ್ಣ ನಾಯಕನ ಮಡದಿಯಾದ ಮಲ್ಲವ್ವ ನಾಗತಿಯೆ ಸೂಕ್ತವಾದ ವ್ಯಕ್ತಿ ಎಂದು ಆಲೋಚಿಸಿ , ಅವರ ಪಾದ ನಾಗತಿಯ ಮನೆ ಕಡೆಗೆ ಸಾಗುತ್ತದೆ.
ಚಿಕ್ಕಣ್ಣ ನಾಯಕನ ಜೊತೆಗೆ ನಾಗತಿಯರೆಲ್ಲರೂ ಸತಿ ಸಹಗಮನವೇರಿದರು. ಚಿಕ್ಕಣ್ಣನಾಯಕ ಮತ್ತು ಉಳಿದ ನಾಯಕರು ಲಿಂಗ ದೀಕ್ಷೆ ಪಡೆದು, ಚಿಕ್ಕಣ್ಣ ನಾಯಕ ಲಿಂಗ ದೀಕ್ಷೆ ತೊರೆದನೆಂದು ಉಳಿದವರು ಸಹ ತೊರೆಯುತ್ತಾರೆ ಆದರೆ ಮಲ್ಲವ್ವ ನಾಗತಿ ಆ ಶಿವ ದೀಕ್ಷೆಗೆ ಬೆಲೆಕೊಟ್ಟು ಶಿವ ದೀಕ್ಷೆ ತೆಗೆದ ಉಳಿಯುವುದರಿಂದ ಚಿಕ್ಕಣ್ಣನಾಯಕ ಆಕೆಯನ್ನು ಹೊರಗಟ್ಟುತ್ತಾನೆ ಇದರಿಂದ ಮಠ ಸೇರುವ ಆಕೆ ಅರಮನೆಯಿಂದ ಸಂಪೂರ್ಣ ಬೆಂಬಲವನ್ನು ಅಥಿತ್ಯವನ್ನು ಕಳೆದುಕೊಂಡಿರುತ್ತಾಳೆ.
ಇದೆಲ್ಲದರ ಕಿಚ್ಚು, ಮಲ್ಲವನಾಗುತಿಯಲ್ಲೂ ಇರುತ್ತದೆ ಅರಮನೆಯಿಂದ ಸಂಬಂಧವನ್ನು ಕಳೆದುಕೊಂಡ ನನಗೆ ಅರಮನೆಯವರಿಗೂ ನನಗೂ ಸಂಬಂಧವಿಲ್ಲವೆಂದೆ ಸನ್ಯಾಸಿಯಾಗಿ ಬದುಕನ್ನು ದೂಡುತ್ತಿರುತ್ತಾಳೆ ಈ ಸಮಯದಲ್ಲಿ ಪರಶುರಾಮ ಮತ್ತು ಭರಮಣ್ಣ ಆಕೆಯನ್ನು ಸಂಧಿಸಿ ಮಾತನಾಡಿದಾಗ ಆಕೆಯ ಉತ್ತರವೆಲ್ಲವೂ ನಿರುತ್ತರವಾಗಿ ತನಗೆ ಸಂಬಂಧವೆ ಇಲ್ಲವೆಂಬ ರೀತಿಯಾಗಿ ಇರುತ್ತದೆ..
ಮಠದ ಸ್ವಾಮಿಯ ಸಹಾಯದಿಂದ ಅವರ ಉದಾರ ಗುಣಗಳಿಂದ ಮಲ್ಲವ ನಾಗತಿ ಈ ವಿಷಯ ಕುರಿತು ಮಾತನಾಡಲು ಸಮ್ಮತಿಸಿ ಸೂಚಿಸುತ್ತಾಳೆ. ಅದರಂತೆ ಮುದ್ದಣ್ಣ, ಪರಶುರಾಮ, ಭರಮಣ್ಣ ಕಲಿತು ಕೂಡಿ ಮಾತನಾಡಿದಾಗಲು, ಮುದ್ದಣನ ನಿರ್ಲಕ್ಷ್ಯದ ಮಾತುಗಳು ಆತನ ಅತಿರೇಕತೆ ಆತನ ದುರಾಸೆ ಇವೆಲ್ಲವನ್ನು ಸೇರಿಸಿಕೊಂಡು ಮಾತುಕತೆ ಆಡಿ ಲಿಂಗಣ್ಣನಾಯಕನನ್ನು ಪಟ್ಟಕ್ಕೇರಿಸುವುದು ಎಂದು ನಿರ್ಧರಿಸುತ್ತಾರೆ.
ಇದರಿಂದ ಒಳಗೊಳಗೆ ಬೆಂದರು ಮೇಲೆ ಮಾತ್ರ ನಗುವಿನ ಸೆಲೆ ಧರಿಸಿ ತನಗೆ ಎಲ್ಲವೂ ಸಮ್ಮತವೆಂದು ತೋರುತ್ತಾ ಮುದ್ದಣ್ಣನ ಪಾದಾರ್ಪಣೆ ಲಿಂಗಣ್ಣ ನಾಯಕನ ಮನೆ ಮೆಟ್ಟಿಲ ಮುಟ್ಟುತ್ತದೆ. ದ್ವೇಷದ ಕಿಚ್ಚಿನಲ್ಲಿ ಸೋದರ ಮತ್ತು ತಾಯಿಯ ಸಮನಾದ ಎರಡು ಜೀವಗಳನ್ನು ಒಟ್ಟಿಗೆ ಬಲಿ ತೆಗೆದುಕೊಂಡ ಎಂಬ ರೋಷದಲಿ ಬೆಂದರು ಲಿಂಗಣ್ಣನು ಸಹ ತಾಳ್ಮೆಯಿಂದ ಮುಖದಲ್ಲಿ ಪ್ರಸನ್ನತೆ ಆವರಿಸಿದೆ ಎಂಬಂತೆ ಮಾತನಾಡುತ್ತಾನೆ.
ಹೀಗೆ ಮಾತುಕತೆಯಲ್ಲಿ ಪ್ರಧಾನಮಂತ್ರಿಯ ಪಟ್ಟ ಬಿಟ್ಟುಕೊಟ್ಟ ಭುವನಪ್ಪನವರ ಮಗನಿಗೆ ಪ್ರಧಾನಿ ಸ್ಥಾನ ಸಿಗಬೇಕು ಹಾಗಿದ್ದರೆ ಮಾತ್ರ ನಾನು ಸಿಂಹಾಸನವಯವನ್ನು ಅಲಂಕರಿಸುತ್ತೇನೆ ಎಂಬ ತಾಕೀತು ಮಾಡುತ್ತಾನೆ ಲಿಂಗಣ್ಣ ನಾಯಕ.

ನಾಲ್ಕು ಜನ ಒಪ್ಪಿದರೆ ಅವರಿಷ್ಟದಂತೆ ನಡೆಯುವ ಎನ್ನುತ್ತಾ ಮುದ್ದಣ ನಾಯಕನಿಂದ ಜನಿಸಿದ ಕಿಚ್ಚೆಲ್ಲವನ್ನು ಎದೆಯಲ್ಲೆದಹಿಸಿ ನಗುವಿನ ಮುಖ ಒತ್ತು ಲಿಂಗಣ್ಣ ನಾಯಕನ ಮನೆಯಿಂದ ಹೊರ ಹೊರಡುತ್ತಾನೆ. ದ್ವೇಷದ ದಳ್ಳುರಿಯಲ್ಲಿ ಬೇಯುತ್ತಾ ಮನೆ ತಲುಪಿದವ ಎಲ್ಲವನ್ನು ಒಪ್ಪವಾಗಿ ತನ್ನ ತಮ್ಮಂದಿರಾದ ರಾಯಣ್ಣ, ಚುಕ್ಕಣ್ಣ, ಚಿಕ್ಕಣ್ಣನಿಗೆ ವರದಿ ಒಪ್ಪಿಸಿದಾಗ ನೀ ಸಮ್ಮತಿಸು ಈಗಲೇ ಲಿಂಗಣ್ಣನಾಯಕನ ತಲೆ ಉರುಳಿಸುವೆ , ಪರಶುರಾಮ ಮತ್ತು ಭರಮಣ್ಣನವರ ಅಂತ್ಯಗೈಯುವೆ ಎಂದು ಬಡ ಬಡಿಸುತ್ತಾರೆ.
ಇದರೊಟ್ಟಿಗೆ ದುರ್ಗದ ಊರಿನಲ್ಲಿ ಕಾಲಜ್ಞಾನನ ಮಾತು ಸುಳ್ಳು ಎಂದು ಕಾಲಜ್ಞಾನ ಎಂಬ ಮುಖವಾಡದವನ್ನು ಥಳಿಸಿ, ನೂರು ಜನರೆಲ್ಲ ಪಟ್ಟವೇರಲು ದಳವಾಯಿಯ ಮಸಲತ್ತು, ಲಿಂಗಣ್ಣ ನಾಯಕನನ್ನು ಕಡೆಗಣಿಸುತ್ತಿದ್ದಾರೆ, ಲಿಂಗಣ್ಣನಾಯಕ ಪಟ್ಟವೇರಲಿಲ್ಲವೆಂದರೆ ದಳವಾಯಿ ಅಧಿಕಾರಕ್ಕೆ ಬಂದರೆ ಆತನಿಗೆ ಬುದ್ಧಿ ಕಲಿಸಬೇಕೆಂದು ಊರಿನ ಜನ ಮಾತನಾಡುವುದು ಊರ ಗೌಡನ ಮೂಲಕ ಮುದ್ದಣ್ಣನ ಕಿವಿಗೆ ರಾಚುತ್ತದೆ.
ಇದರಿಂದ ಎಚ್ಚೆತ್ತ ಮುದ್ದಣ್ಣ ಗತಕಾಲದ ತನ್ನ ಕೃತ್ಯಗಳನ್ನು ಜನ ಮರೆತಿಲ್ಲ ದೇಸಣ್ಣನ ಕೊಲೆ , ಓಬಣ್ಣ ನಾಯಕನ ಕೊಲೆ, ಪರೋಕ್ಷವಾಗಿ ಓಬವ್ವ ನಾಗತಿಯ , ಭುವನಪ್ಪನವರ ಸಾವಿಗೂ ತಾನೇ ಕಾರಣ ಎಂಬ ಎಲ್ಲಾ ಕೃತ್ಯಗಳು ಜನರ ಮನದಲ್ಲಿ ಅಚ್ಚಳಿಯದೆ ಉಳಿದಿದೆ ಮತ್ತೆದೆ ಕೃತ್ಯವನ್ನು ಪುನಃ ಎಸಗಿದರೆ ರೊಚ್ಚಿಗೆದ್ದ ಜನ ಉಳಿಸುವುದಿಲ್ಲ ಎಂಬ ಮನವರಿಕೆಯಾದ ನಂತರ ನೆಪ ಮಾತ್ರಕ್ಕೆ ಲಿಂಗಣ್ಣ ಪಟ್ಟವೇರಲಿ ಅಧಿಕಾರದ ಚುಕ್ಕಾಣಿ ನಮ್ಮೊಟ್ಟಿಗಿರಲಿ ಎಂದು ಎಲ್ಲಾ ಕಡೆಯೂ ಊಳಿಗದಿಂದ ಹಿಡಿದು ಅರಮನೆಯ ಕಾವಲಿನ ತನಕ ಮುದ್ದಣನ ಮಾತನ್ನೇ ಶಿರಶ ವಹಿಸಿ ಪಾಲಿಸುವಂತಹ ಆಳುಗಳನ್ನು ನೇಮಕ ಮಾಡುತ್ತಾನೆ.
ಸಮಯಕ್ಕೆ ಕಾದು ನೋಡೋಣ ಎಂದು ಮುದ್ದಣ್ಣ ಹೇಳುತ್ತಾ, ಒಳಗೊಳಗೆ ಮಸಲತ್ತು ಮಸೆಯುತ್ತಾನೆ. ನಯವಾಗಿ ಪ್ರಧಾನಮಂತ್ರಿಯ ಪಟ್ಟವನ್ನು ಪರಶುರಾಮ ಬೇಡವೆಂದು ನವರಾತ್ರಿಯ ವಿಜಯದಶಮಿಯಂದು ಲಿಂಗಣ್ಣ ನಾಯಕರಿಗೆ ಪಟ್ಟಾಭಿಷೇಕ ಮಾಡುವುದೆಂದು ಮತ್ತೊಂದು ಸಮಾಲೋಚನೆಯಲ್ಲಿ ನಿರ್ಧರಿಸುತ್ತಾರೆ..
ಈ ಸಂಧಾನಕ್ಕೆ ನಾಯಕರು ಸಮ್ಮತಿಸು ಸೂಚಿಸಿ ಸಮ್ಮತಿ ಸೂಚಿಸುತ್ತಾರೆ. ಅಣ್ಣ ತಮ್ಮಂದಿರು ಮೊದಲು ಸಿಂಹಾಸನವೇ ಬೇಡ ಎಂದ ನಂತರ ಸಿಂಹಾಸನಕ್ಕೆ ಆಸೆಪಟ್ಟು ಪ್ರಧಾನಿ ಪಟ್ಟವನ್ನು ಪರಶುರಾಮರವರಿಗೆ ನೀಡಬೇಕೆಂದ ತದನಂತರ ಅದಕ್ಕೂ ಒಪ್ಪಿಗೆ ನೀಡಿ ಪ್ರಧಾನಿಯಾಗು ಎಂದ ಎಂದು ಚಿಕ್ಕಣ್ಣ ಚುಕ್ಕಣ್ಣ ರಾಯಣ್ಣ ಮುದ್ದಣ್ಣನಿಗೆ ಹೇಳುತ್ತಾರೆ. ಇದ್ದರು ಇರಬಹುದು ಲಿಂಗಣ್ಣನಾಯಕ ನಮ್ಮ ಕೈ ಗೊಂಬೆಯಾಗುವುದರಲ್ಲಿ ಅನುಮಾನವೇ ಇಲ್ಲವೆಂದು ತರ್ಕಕ್ಕೆ ಬರುತ್ತಾರೆ. ಮೊದಲ ದಿನಗಳಲ್ಲಿ ನಾಮಕ ವ್ಯವಸ್ಥೆಗೆ ಲಿಂಗಣ್ಣ ನಾಯಕ ರಾಜನಾದರೂ ಆಡಳಿತ ಪ್ರಧಾನಿಯಾದ ಮುದ್ದಣ್ಣನದೆ ಆಗಿರುತ್ತದೆ.
ಪರಶುರಾಮ ಮತ್ತು ಭರಮಣ್ಣ ತಿಳಿಸಿ ತಿಳಿ ಹೇಳಿದರೂ ಲಿಂಗಣ್ಣನಾಯಕ ತನ್ನ ವಿರಕ್ತ ಭಾವದಿಂದ ಹೊರ ಬರುವುದಿಲ್ಲ. ಎಲ್ಲಾ ಕಡೆಯೂ ಕಟ್ಟಾಜ್ಞೆಗಳು ಜರುಗಿ ಮಠದ ಸುತ್ತ ಸರ್ಪಗಾವಲಾಕಿ, ಪ್ರಧಾನಿಯವರ ಅಪ್ಪಣೆ ಇಲ್ಲದೆ ಯಾರು ಸಹ ನಾಯಕರನ್ನು ನೋಡಬಾರದು ಎಂದು ಕಾರ್ಯ ಬಾರಿಯವರಿಗೆ ಕಟ್ಟಪ್ಪಣೆ ನೀಡಿ ತನ್ನ ಅಧಿಕಾರದ ದರ್ಪವನ್ನು ದುರುಪಯೋಗದಲ್ಲಿ ಮೆರೆಸುತ್ತಾನೆ, ಮುದ್ದಣ್ಣನ ಅತಿರೇಕ ವರ್ತನೆಗಳು, ಪರಶುರಾಮ ಮತ್ತು ಭರಮಣ್ಣ ನವರ ಆಸೆಯಂತೆ ಮಲ್ಲವ್ವ ನಾಗತಿಯ ಸಹಯೋಗದಲ್ಲಿ ಲಿಂಗಣ್ಣ ನಾಯಕನಿಗೆ ಮದುವೆ ಮಾಡಲು ಹೊರಡುವ ತಯಾರಿ, ಅದಕ್ಕೆ ತಕ್ಕಂತೆ ಮುದ್ದಣ್ಣ ಕುತಂತ್ರದಿಂದ ಹೆಣ್ಣನ್ನು ಕಳುಹಿಸುವುದು ಶಯನ ಗೃಹಕ್ಕೆ, ಇದೆಲ್ಲವನ್ನು ಕಂಡ ಲಿಂಗಣ್ಣ ನಾಯಕನಿಗೆ ಮನವರಿಕೆಯಾಗುತ್ತದೆ ನಿಜವಾದ ಅಧಿಕಾರ ಯಾರು ಮಾಡುತ್ತಿದ್ದಾರೆ ಎಂದು.
ಗಿರಿಜೆಯ ಮಾತಿನಿಂದ ಎಚ್ಚೆತ್ತ ಲಿಂಗಣ್ಣ ನಾಯಕ, ಹೊರೆ ನಾಯಕ ನೆಂಬ ಕಾರ್ಯಬಾರಿ ತನ್ನ ಸಹಾಯಕ್ಕೆ ಇದಾನೆ ಎಂದು ಅರಿತು, ಇನ್ನೂ ಆರು ಜನ ಭಟರು ಲಿಂಗಣ್ಣ ನಾಯಕ ಆಡಳಿತವನ್ನು ಬಯಸುತ್ತಿದ್ದಾರೆ ಎಂದು ಅರಿತವನಿಗೆ ಕತ್ತಲಲ್ಲಿ ಬೆಳಕಿನ ಬುಗ್ಗೆ ಕಾಣುತ್ತದೆ, ನಿರಾಶೆ ಕಡಲಲ್ಲಿ ದಡ ಸೇರುವ ಆಸೆ ಮೊಳೆಯುತ್ತದೆ. ಇಲ್ಲಿಂದ ದಳವಾಯಿಯನ್ನು ಪ್ರಶ್ನಿಸುತ್ತ ಹೊರಡುವ ನಾಯಕನ ವಿರುದ್ಧ ಒಳ ಸಂಚುಗಳು ಏರ್ಪಡುತ್ತದೆ. ತಾನು ಅಧಿಕಾರ ಮಾಡುತ್ತಿರುವೆ ಎಂಬ ಸೂಚನೆ ದಳವಾಯಿ ಮುಟ್ಟಲು , ಕಾರ್ಯ ಬಾರಿಯಾಗಿ ನೇಮಕವಾದ ಚುಕ್ಕಣ್ಣನನ್ನು ವಜಾ ಮಾಡಿದ್ದು, ನಡು ರಾತ್ರಿಯಲ್ಲಿ ಪರಶುರಾಮ ಮತ್ತು ಭರಮಣ್ಣ ಕಾಣದೆ ಉಳಿದಕ್ಕೆ ದಳವಾಯಿ ಮುದ್ದಣ್ಣನನ್ನು ಕರೆಸಿ ಜಾಡಿಸಿದ್ದು ಇದೆಲ್ಲದರ ಪರಿಣಾಮವಾಗಿ ದಳವಾಯಿ ನಾಯಕನ ವಿರುದ್ಧ ತಿರುಗಿ ಬೀಳುತ್ತಾನೆ.
ಇಷ್ಟೇ ಅಲ್ಲದೆ ಅವನದೇ ಕೋಟೆಯೊಳಗೆ ಅವನನ್ನೇ ಸೆರೆ ಹಿಡಿದು ಚಿತ್ರ ಹಿಂಸೆ ಮಾಡಿ, ಮಾರಣ ಹೋಮ ಮಾಡುತ್ತಾನೆ. ಮುಂಗೈ ಕತ್ತರಿಸಿ, ಒಡ್ಡೋಲಗ ಹೊರಡಿಸಿ ನಾಯಕನನ್ನು ಅವಮಾನ ಮಾಡಿ ಕೊಲ್ಲುವ ಸಂದರ್ಭವೇ ರಕ್ತ ರಾತ್ರಿ. ಹೀಗೆ ದುರ್ಗದ ಸಿಂಹಾಸನ ಏರಲು ಮೂಲ ವಂಶವನ್ನು ನಾಶ ಮಾಡಿ ಮುದ್ದಣ್ಣ ಗದ್ದುಗೆ ಏರುತ್ತಾನೆ ..
ಮುಂದಿನ ಸರಣಿ ಕಥೆಯಲ್ಲಿ ತಿರುಗುಬಾಣವಿದೆ.
ಎಂದಿನಂತೆ ಓದಿ ನಿಮ್ಮೆದುರು ಹಾಜರಾಗುವೆ.
- ಅಮೃತ ಎಂ ಡಿ (ಗಣಿತ ಶಾಸ್ತ್ರ ವಿಭಾಗ ಸ್ನಾತಕೋತ್ತರ ಪದವೀಧರೆ, ಶಿಕ್ಷಕಿ, ಕವಯತ್ರಿ, ಲೇಖಕಿ)
