ನನ್ನ ಕನಸಿನಲ್ಲಿ ಯಾರೋ ಬಂದು ದಂತದ ಪೆಟ್ಟಿಗೆಯೊಂದನ್ನು ನೀಡಿ, ‘ಈ ಕಾಣಿಕೆಯನ್ನು ಸ್ವೀಕರಿಸು’ ಎಂದು ಹೇಳಿದರು. ನಾನು ಎಚ್ಚರಗೊಂಡಾಗ ಆ ಪೆಟ್ಟಿಗೆ ನನ್ನ ದಿಂಬಿನ ಮೇಲಿತ್ತು. ನಜೀಬ್ ಮೆಹಫೂಸ್ ಅವರ ಕತೆಗಳನ್ನ ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಅನುವಾದಕ ಕೇಶವ ಮಳಗಿ ಅವರು, ತಪ್ಪದೆ ಮುಂದೆ ಓದಿ…
ಬೆಳಗು ಮೂಡುವ ಮೊದಲು :
ಇಬ್ಬರೂ ಒಂದೇ ಸೋಫಾದಲ್ಲಿ ಕಾಲಮೇಲೆ ಕಾಲು ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಗೆಳೆತನದ ಉಲ್ಲಾಸದಿಂದ ಮನದುಂಬಿ ಹರಟುತ್ತಾರೆ. ವಿಧವೆಗೆ ಎಪ್ಪತ್ತರ ಆಸುಪಾಸು. ಆಕೆಯ ಅತ್ತೆಗೆ ಎಂಬತ್ತೈದರ ಹರೆಯ. ತಮ್ಮಿಬ್ಬರ ನಡುವೆ ಬಹುದೀರ್ಘ ಕಾಲ ಈರ್ಷೆ, ದ್ವೇಷ-ಅಸೂಯೆ, ಹಗೆತನಗಳು ತುಂಬಿ ತುಳುಕಿದ್ದವು ಎಂಬುದನ್ನು ಅವರು ಮರೆತೇ ಹೋಗಿದ್ದಾರೆ.
ಸ್ವರ್ಗವಾಸಿಯಾದವನಿಗೆ ಲೋಕನ್ಯಾಯ ಎಂದರೇನು? ಎಂಬ ತಿಳುವಳಿಕೆ ತುಂಬ ಚೆನ್ನಾಗಿತ್ತು. ಆದರೆ, ತನ್ನ ಹೆಂಡಿರು ಮತ್ತು ಅವ್ವರ ನಡುವೆ ಮಾತ್ರ ನ್ಯಾಯಪಂಚಾಯಿತಿ ಬಗೆಹರಿಸುವುದು ಆತನಿಗೆ ಸಾಧ್ಯವಾಗುತ್ತಿರಲಿಲ್ಲ. ಆತ ಒಬ್ಬರ ಪಕ್ಷ ವಹಿಸದಂತೆ ತಪ್ಪಿಸಿಕೊಳ್ಳುವುದು ಕೂಡ ಸಂಕಟಕರವೇ ಆಗಿತ್ತು. ಆ ವ್ಯಕ್ತಿಯಂತೂ ನೀಗಿ ಹೋದ. ಮೊದಲಬಾರಿಗೆ ಆ ಇಬ್ಬರೂ ಹೆಂಗಳೆಯರು ಸಮಾನ ಅಂಶವೊಂದನ್ನು ಕಂಡುಕೊಂಡರು. ಅದು ಅವರಿಬ್ಬರಲ್ಲಿಯೂ ಆ ವ್ಯಕ್ತಿಗಾಗಿ ಏಕಪ್ರಕಾರವಾಗಿದ್ದ ದುಃಖ.
ನಜೀಬ್ ಮೆಹಫೂಸ್ (Naguib Mahfouz) ಫೋಟೋ ಕೃಪೆ : cairoscene
ವೃದ್ಧಾಪ್ಯ ಅವರ ಜಗಳಗಂಟತನವನ್ನು ಮೃದು ಮಾಡಿತು. ಕಿಟಕಿಗಳು ತೆರೆದುಕೊಂಡು ಮಾರ್ದವತೆ, ಪಕ್ವತೆಯ ತಂಗಾಳಿ ಸುಳಿಯಿತು. ಅತ್ತೆ, ವಿಧವೆ ಸೊಸೆಗಾಗಿ ಮತ್ತು ಆಕೆಯ ಸಂತಾನಕ್ಕಾಗಿ ಒಳಿತು, ಆಯುರಾರೋಗ್ಯ, ಸುಖ-ಸಂಪತ್ತುಗಳು ದೊರಕಲೆಂದು ಮನದಾಳದಿಂದ ಹಾರೈಸುತ್ತಾಳೆ. ಇದೇ ವೇಳೆ, ವಿಧವೆ ಸೊಸೆ, ಅತ್ತೆಯ ಆಯುಷ್ಯ ಹೆಚ್ಚಲೆಂದೂ, ಅವರೆಂದೂ ಒಂಟಿಯಾಗಿ ನರಳುತ್ತ ಬದುಕದಂತೆ ಆಗದಿರಲಿ ದೇವಾ, ಎಂದೂ ಬೇಡಿಕೊಳ್ಳುತ್ತಾಳೆ.
ಸುಖ :
ಅಂತಿಮಯಾತ್ರೆಯೊಂದರಲ್ಲಿ ಪಾಲ್ಗೊಳ್ಳಲು ಬಹುಕಾಲದ ಬಳಿಕ ನಾನೀ ಪುರಾತನ ಓಣಿಗೆ ಬಂದಿರುವೆ. ತನ್ನ ವೈಭವವನ್ನು ಸಾರುವ, ಖುಷಿಯಿಂದ ನೆನಪಿಸಿಕೊಳ್ಳುವಂಥ ಯಾವ ಕುರುಹುಗಳೂ ಈ ಬೀದಿಯಲ್ಲೀಗ ಉಳಿದಿಲ್ಲ. ಬೀದಿಯ ಎರಡೂ ಬದಿಗೆ ಹಳೆಯ ಬಂಗಲೆಗಳ ಸ್ಥಳದಲ್ಲಿ ಗಗನಚುಂಬಿ ಕಟ್ಟಡಗಳೆದ್ದಿವೆ. ಎಲ್ಲೆಡೆ ಕಾರು, ದೂಳು, ಗದ್ದಲವೆಬ್ಬಿಸುವ ಜನಸಂದಣಿ ಕಿಕ್ಕಿರಿದಿವೆ.
ನಾನು ಬಹು ಹೆಮ್ಮೆಯಿಂದ ಎಂಬಂತೆ ಬೀದಿಯ ಹೊಳಪು, ಎಲ್ಲೆಡೆ ಸುತ್ತುತ್ತಿದ್ದ ಮಲ್ಲಿಗೆ ಸುವಾಸನೆಯನ್ನು ನೆನಪಿಸಿಕೊಂಡೆ. ಜತೆಗೆ, ಹೊಳಪಿನ ಮುಖದಲ್ಲಿ ಕಿಟಕಿಯಲ್ಲಿ ಕಾಣಿಸಿಕೊಂಡು ಬರುವ-ಹೋಗುವ ಜನರನ್ನು ನೋಡುತ್ತಿದ್ದ ಆ ಸುಂದರ ಹುಡುಗಿಯನ್ನೂ.
ತೊರೆದು ಹೋದ ಈ ನಗರದ ಯಾವ ಭಾಗದಲ್ಲಿ ಆ ತರುಣಿಯ ಗೋರಿ ಅಡಗಿದೆಯೋ ಬಲ್ಲವರು ಯಾರು?
ಅನುಭವದಲ್ಲಿ ಮಾಗಿ ಹಣ್ಣಾದ ನನ್ನ ಗೆಳೆಯನ ದನಿ ಹೇಳುತ್ತಿದೆ:
“ಮೊದಲ ಅನುರಾಗವು ದೇವರ ಪ್ರೇಮವನು ಗಳಿಸುವ ಅದೃಷ್ಟವಂತರಿಗೆ ದೊರಕುವ ತರಬೇತಿಯಲ್ಲದೆ ಮತ್ತೇನೂ ಅಲ್ಲ!”
ಒಂದು ಮುತ್ತಿನ ಕಥೆ :
ನನ್ನ ಕನಸಿನಲ್ಲಿ ಯಾರೋ ಬಂದು ದಂತದ ಪೆಟ್ಟಿಗೆಯೊಂದನ್ನು ನೀಡಿ, ‘ಈ ಕಾಣಿಕೆಯನ್ನು ಸ್ವೀಕರಿಸು’ ಎಂದು ಹೇಳಿದರು.
ನಾನು ಎಚ್ಚರಗೊಂಡಾಗ ಆ ಪೆಟ್ಟಿಗೆ ನನ್ನ ದಿಂಬಿನ ಮೇಲಿತ್ತು. ನಾನು ಗಾಬರಿಯಿಂದ ಅದನ್ನು ತೆರೆದಾಗ ಬಾದಾಮಿ ಗಾತ್ರದ ಮುತ್ತೊಂದು ಕಂಡಿತು. ಈ ಮುತ್ತನ್ನು ಗೆಳೆಯರಿಗೋ ಅಥವ ಆಭರಣ ಪರಿಣಿತರಿಗೋ ತೋರಿಸುತ್ತ,
‘ಈ ಅನುಪಮ ಚೆಲುವಿನ ಮುತ್ತಿನ ಬಗ್ಗೆ ಏನು ಹೇಳುತ್ತೀರಿ?’ ಎಂದು ಕೇಳುತ್ತಿದ್ದೆ.
ಆಗ ಅವರೆಲ್ಲ ನಸುನಗುತ್ತ, ತಲೆಯಲಗಿಸುತ್ತ ಹೇಳುತ್ತಿದ್ದುದು-
‘ಯಾವ ಮುತ್ತು? ಪೆಟ್ಟಿಗೆ ಖಾಲಿಯಾಗಿದೆಯಲ್ಲ?’, ಎಂದು.
ನನ್ನ ಕಣ್ಣೆದುರು ಕಾಣುತ್ತಿರುವುದನ್ನು ಈ ವ್ಯಕ್ತಿ ನಿರಾಕರಿಸುತ್ತಿದ್ದಾರಲ್ಲ?, ಎಂದು ನನಗೆ ಅಚ್ಚರಿ ಮತ್ತು ಆಘಾತವಾಗುತ್ತಿತ್ತು.
ಈ ವಿಷಯದಲ್ಲಿ ನನ್ನನ್ನು ಯಾರೂ ಈವರೆಗೂ ನಂಬಿದಂತೆ ಕಾಣುವುದಿಲ್ಲ. ಅದು ಏನೇ ಇರಲಿ, ಆ ಹತಾಶೆ ನನ್ನ ಹೃದಯದ ವಿಶ್ವಾಸವನ್ನೇನೂ ಕಡಿಮೆ ಮಾಡಿಲ್ಲ.
ಮರುಕಳಿಕೆ :
ನಮ್ಮ ಬಡಾವಣೆಯಲ್ಲಿದ್ದ ಕೆಫೆಯಲ್ಲಿ ನಾವೆಲ್ಲ ಭೇಟಿಯಾಗಿದ್ದೆವು. ನಮ್ಮ ಗೆಳೆಯ ತಾನು ಬರೆದಿದ್ದ ಪತ್ತೇದಾರಿ ಕಥೆಯೊಂದನ್ನು ನಮಗೆ ಓದಿ ಹೇಳಲಿದ್ದ. ಕಥೆ ಇನ್ನೇನು ಕೊನೆ ತಲುಪುತ್ತಿದೆ ಎನ್ನುವಾಗ ಕೊಲೆಗಾರ ಯಾರು ಮತ್ತು ಆತನಿಗೆ ಈ ಅಪರಾಧ ಎಸಗಲು ಯಾರು ಹಣ ನೀಡಿದ್ದರು ಎಂಬುದನ್ನು ಊಹಿಸಿ ಎಂದು ನಮ್ಮನ್ನು ಹುರಿದಿಂಬಿಸಿದ. ನಾನು ಸರಿಯಾದ ಉತ್ತರವನ್ನು ಗ್ರಹಿಸಿದೆ. ಅದು ನನ್ನನ್ನು ಅತೀವ ಆನಂದದಲ್ಲಿ ತೇಲಿಸಿತು.
ಆಮೇಲೆ ಗಂಟೆಯ ಬಳಿಕ ಮನೆಗೆ ತೆರಳುವುದಾಗಿ ಹೇಳಿ ಅವರನ್ನು ಬೀಳ್ಗೊಂಡೆ. ಅಪರಾಧಿಯನ್ನು ಊಹಿಸಿದ ನನ್ನ ಜಾಣ್ಮೆಯಿಂದ ನಾನೆಷ್ಟು ಉಬ್ಬಿಹೋಗಿದ್ದೆನೆಂದರೆ ಓಣಿ, ಬೀದಿಗಳನ್ನು ಸುತ್ತಿ ಸುತ್ತಿ ಮತ್ತೆ ಕೆಫೆಯ ಬಳಿಯೇ ಬಂದು ತಲುಪಿದ್ದೆ. ಎಲ್ಲರಿಗೂ ನಗೆಪಾಟಲಾಗಿದ್ದೆ. ಗೆಳೆಯರಲ್ಲೊಬ್ಬ ನನ್ನನ್ನು ಮನೆಯವರೆಗೂ ಬಿಟ್ಟು ಕೊಡಲು ಸ್ವಯಂಪ್ರೇರಣೆಯಿಂದ ಸಿದ್ಧನಾದ. ಮನೆ ತಲುಪಿದ್ದೇ ವಿದಾಯ ಹೇಳಿ ಹೊರಟುಹೋದ.
ನಮ್ಮದು ಒಂದೇ ಮಹಡಿಯ, ಪುಟ್ಟ ಕೈತೋಟವಿರುವ ಜಾಗದಲ್ಲಿ ಕಟ್ಟಿದ ಮನೆ. ನನಗೆ ಬಟ್ಟೆಗಳನ್ನು ಕಳಚಬೇಕು ಅನ್ನಿಸಿತು. ನಾನು ಇನ್ನೇನು ಒಳಚೆಡ್ಡಿಯನ್ನು ತೆಗೆಯಬೇಕು ಎಂಬಷ್ಟರಲ್ಲಿ ಕೋಣೆಯೊಂದರ ಮೂಲೆಯಿಂದ ಧೂಳಿನ ಮಹಾಪೂರವೇ ಹರಿದು ಬಂತು. ಕಥೆಗಾರ ಗೆಳೆಯ ನಮಗೆ ಓದಿದ ಕಥೆಯಲ್ಲಿಯೂ ಇಂಥದ್ದೇ ರೂಪಕವಿತ್ತು. ಮನೆಯೊಳಗಿರುವವರ ಮೇಲೆ ಮನೆಯು ಕುಸಿದು ಬೀಳಲಿತ್ತು.
ತಲೆಯ ಮೇಲೆ ಮನೆ ಕುಸಿದು ಬೀಳಲಿದೆ ಎಂದು ನಾನು ರೋಧಿಸಿದೆ. ಭಯಭೀತನಾಗಿ ಎಷ್ಟು ಬೇಗ ಸಾಧ್ಯವೋ ಅಷ್ಟು ವೇಗವಾಗಿ ತಪ್ಪಿಸಿಕೊಳ್ಳಬೇಕೆಂದು, ಗಾಳಿ ನನ್ನನ್ನು ಹಾರಿಸಿಕೊಂಡು ಹೋಗುವುದು ಎಂಬಂತೆ ರಭಸದಿಂದ ಜಿಗಿದೆ.
- ಕೇಶವ ಮಳಗಿ (ಖ್ಯಾತ ಕತೆಗಾರರು,ಅನುವಾದಕರು ,ಲೇಖಕರು, ಕವಿಗಳು), ಬೆಂಗಳೂರು