‘ರಾಮ ರಾಮ ಜಯತು ರಾಮ ನನ್ನ ರಾಮ ರಾಮ’…ನಮಸ್ತ ಜನತೆಗೂ ಜೈ ಶ್ರೀರಾಮ್ ಹೇಳುತ್ತಾ ಅಭಿಜ್ಞಾ ಪಿ.ಎಮ್ ಗೌಡ ಅವರ ಒಂದು ಕವನ, ತಪ್ಪದೆ ಮುಂದೆ ಓದಿ..
ವರ್ಣ ನೀನು ಪರ್ಣ ನೀನು
ಹೇಮ ನೀನು ರಾಮ
ಸತ್ಯ ನಿಷ್ಟೆ ನ್ಯಾಯ ಧರ್ಮ
ರಕ್ಷೆ ನೀಡೊ ರಾಮ….
ಕಷ್ಟ ಸುಖವು ನೋವು ನಲಿವು
ಎಲ್ಲದರಲು ರಾಮ
ಶಕ್ತಿ ನೀನು ಯುಕ್ತಿ ನೀನು
ಮುಕ್ತಿ ನೀಡೊ ರಾಮ….
ನಿಸೆಯ ದೂಡಿ ಬೆಳಕ ಹರಿಸೊ
ಜ್ಞಾನ ಪುರುಷ ರಾಮ
ಧ್ಯಾನದೊಳಗು ಧಾಮ ಬೆಳಗೊ
ದಿವ್ಯ ದೇವ ರಾಮ..
ರಾಮ ರಾಮ ಜಯತು ರಾಮ
ಹನುಮ ಪ್ರಿಯನೆ ರಾಮ
ಸೃಷ್ಟಿ ಪುರುಷ ಉಳಿಸೊ ಜನಕ
ನೇಮದೊಡೆಯ ರಾಮ
ದುರಿತರೆದೆಯ ಸೀಳಿ ನಡೆವ
ಶೂರ ನಮ್ಮ ರಾಮ
ದಶಕಂಠನ ತಲೆ ಉರುಳಿಸಿ
ಸತ್ಯ ಮೆರೆದ ರಾಮ…
ಪಿತೃ ವಾಕ್ಯ ಪರಿಪಾಲಕನು
ಜಗವ ಉಳಿಸೊ ರಾಮ
ಚಿಂತನೆಯ ದಾರಿ ತೋರೋ
ವಿಬುಧ ಮನದ ರಾಮ…
ಜೀವ ಉಳಿಸಿ ಒಳಿತು ಮಾಡೊ
ಹೃದಯ ಗುಡಿಯ ರಾಮ
ಭಾಮದೆಳೆಯ ರೂಪದೊಳಗೆ
ಮಿನುಗುತಿರುವ ರಾಮ..
ನನ್ನ ಉಸಿರ ಕಣಕಣದಲು
ನಿತ್ಯ ತೇಜ ರಾಮ
ದುಃಖವಳಿಸಿ ಮುಕ್ತಗೊಳಿಸೊ
ಬಾಳಯಾನ ರಾಮ…
ವಿಶ್ವ ರೂಪ ಮನದ ದೀಪ
ನನ್ನ ತಂದೆ ರಾಮ
ಜಗದ ಅಳುವ ಅಳಿಸಿ ನೀನು
ಸುಖವ ನೀಡೊ ರಾಮ…
ದಶರಥ ಸುತ ರಾಮ ನೀನು
ಸೀತ ರಮಣ ರಾಮ
ಕೊಟ್ಟ ಮಾತ ತಪ್ಪಲಾರೆ
ಕಾಯೊ ನನ್ನ ರಾಮ…
ನಿನ್ನ ನಾಮ ಜಪಿಸಿ ನಾನು
ಆಸೆ ಬಿಟ್ಟೆ ರಾಮ
ಮೋಕ್ಷ ನೀಡಿ ದಾರಿ ತೋರೊ
ನನ್ನ ಒಲವ ರಾಮ…
ಋತವ ನುಡಿದು ನಿಷ್ಟೆ ಮೆರೆದು
ದಿನವ ಕಳೆವೆ ರಾಮ
ಕಾಯಕದಲಿ ಸುಖವ ಕಂಡು
ಸದಾ ನಡೆವೆ ರಾಮ…
ನನ್ನೆದೆಗುಡಿ ಉಸಿರು ನೀನು
ನನ್ನ ದೇವ ರಾಮ
ಸ್ವಾಸ್ಥ್ಯ ನೀಡಿ ಮನವ ತಣಿಸೊ
ಸೀತ ರಮಣ ರಾಮ…
ಮೊಗದ ರೂಪ ಕಾಂತಿ ದೀಪ
ಪರಿಪುಷ್ಟಿಯ ರಾಮ
ಜಗದ ಖುಷಿಯ ಪಡೆದು ನೀನು
ನೆಲಸು ಬಾರೊ ರಾಮ…
- ಅಭಿಜ್ಞಾ ಪಿ.ಎಮ್ ಗೌಡ
