ರಾಮಾಯಣಕ್ಕೆ ಪ್ರಾಮುಖ್ಯತೆ ತಂದ ಪಾತ್ರ ಪ್ರಸಂಗಗಳು

ಕೋಸಲ ದೇಶದ ರಾಜಕುಮಾರಿ ಕೌಸಲ್ಯೆ. ಈ ಪಾತ್ರಕ್ಕೆ ಅಷ್ಟೇನೂ ಪ್ರಾಮುಖ್ಯತೆ ಇಲ್ಲದೇ ಇರಬಹುದು. ಆದರೆ ಎಲ್ಲ ಸಾಮಾನ್ಯ ಮಹಿಳೆಯಂತೆ ನೋವು ದುಃಖಗಳನ್ನು ನುಂಗಿಕೊಂಡು ಬದುಕಿದ್ದಳು. ಕೌಸಲ್ಯೆಯನ್ನು ನಮ್ಮ ನಿಮ್ಮೆಲ್ಲರಂತೆ ಒಬ್ಬ ಸಾಮಾನ್ಯ ಹೆಣ್ಣಾಗಿ, ಗೃಹಿಣಿಯಾಗಿ, ತಾಯಿಯಾಗಿ ಚಿತ್ರಿಸಿದ್ದಾರೆ  ಸುಮ ಉಮೇಶ್ ಅವರು ತಪ್ಪದೆ ಮುಂದೆ ಓದಿ…

ಕೌಸಲ್ಯೆ

ಈ ಪಾತ್ರಕ್ಕೆ ಅಷ್ಟೇನೂ ಪ್ರಾಮುಖ್ಯತೆ ಇಲ್ಲದೇ ಇರಬಹುದು. ಆದರೂ ತಾಯಿಗಿಂತ ಮಿಗಿಲು ಇನ್ಯಾರು ಎಂಬ ಭಾವನೆಯಲ್ಲಿ ಮತ್ತು ಈ ಪಾತ್ರಕ್ಕೆ ಹೊಂದಿಕೊಂಡಂತೆ ಅನೇಕ ಪ್ರಮುಖ ಪ್ರಸಂಗಗಳು ಇರುವುದರಿಂದ ಕೌಸಲ್ಯೆಯ ದೃಷ್ಟಿಕೋನದಿಂದ ಬರೆಯೋಣ ಅನ್ನಿಸಿತು. ರಾಮಾಯಣದಲ್ಲಿ ಸೀತೆ ಊರ್ಮಿಳೆ ಮೊದಲ್ಗೊಂಡು ಅನೇಕ ಮನಮಿಡಿಯುವ ಪಾತ್ರಗಳು ಇದ್ದರೂ, ನಾನು ಕೌಸಲ್ಯೆಯ ಬಗ್ಗೆ ಬರೆಯಲು ಇನ್ನೊಂದು ಬಲವಾದ ಕಾರಣ ಇದೆ. ತಾಯಿ ಮತ್ತು ಮಕ್ಕಳ ಅಗಲಿಕೆ ಸಹಿಸದ ನಾನು ಕೌಸಲ್ಯೆಗೂ ನನ್ನ ಹಾಗೆಯೇ ಅನ್ನಿಸಿರಬಹುದೇ ಎಂಬ ಕಲ್ಪನೆಯಲ್ಲಿ ಹೆಣೆದ ಲೇಖನ ಇದು.

ಕೌಸಲ್ಯೆ ಶ್ರೀರಾಮನ ಹೆತ್ತ ತಾಯಿ. ದಶರಥನ ಮೊದಲ ಹೆಂಡತಿ ಹಾಗೂ ಅಯೋಧ್ಯೆಯ ಮಹಾರಾಣಿ. ಕೋಸಲ ದೇಶದ ರಾಜಕುಮಾರಿ. ತ್ಯಾಗಕ್ಕೆ ಪ್ರೀತಿಗೆ ಹೆಸರುವಾಸಿಯಾದವಳು. ದಶರಥನಿಗೆ ಕೌಸಲ್ಯ ಸುಮಿತ್ರ ಕೈಕೇಯಿ ಎಂಬ ಮೂರು ಜನ ಪತ್ನಿಯರು. ಇಷ್ಟು ಮಾಹಿತಿ ಎಲ್ಲರಿಗೂ ತಿಳಿದಿರುವಂಥದೇ.

ಆದರೆ ಕೌಸಲ್ಯೆ ಕೂಡ ಸಾಮಾನ್ಯ ಮಹಿಳೆಯಂತೆ ಎಲ್ಲ ನೋವು ದುಃಖಗಳನ್ನು ನುಂಗಿಕೊಂಡು ಬದುಕಿದ್ದಳು ಎಂಬ ಕಲ್ಪನೆಯಲ್ಲಿ ಇದನ್ನು ಬರೆಯುತ್ತಿದ್ದೇನೆ. ಇಲ್ಲಿ ಕೌಸಲ್ಯೆಯನ್ನು ನಮ್ಮ ನಿಮ್ಮೆಲ್ಲರಂತೆ ಒಬ್ಬ ಸಾಮಾನ್ಯ ಹೆಣ್ಣಾಗಿ, ಗೃಹಿಣಿಯಾಗಿ, ತಾಯಿಯಾಗಿ ಚಿತ್ರಿಸಿದ್ದೇನೆ. ಹಾಗಾಗಿ ವಿಶೇಷ ಪದಪುಂಜಗಳ ಬಳಕೆ ಮಾಡದೆ ಸರಳವಾಗಿ ಬರೆದಿದ್ದೇನೆ. ಅದನ್ನು ಕೌಸಲ್ಯೆಯ ಮಾತುಗಳಲ್ಲೇ ಕೇಳೋಣ.

ಕೋಸಲ ರಾಜನ ಮುದ್ದಿನ ಮಗಳು ನಾನು. ವೀರಾಧಿವೀರ ಪರಾಕ್ರಮಿಯಾದ ರಘುಕುಲದ ಮಹಾರಾಜ ದಶರಥನನ್ನು ವರಿಸಿ ಈ ಅರಮನೆಗೆ ಕಾಲಿಟ್ಟೆ. ನಾನೇ ಪಟ್ಟದ ರಾಣಿ ಎಂದು ಘೋಷಿಸಿದರು. ಮಹಾರಾಜರಿಗೆ ಇನ್ನೂ ಇಬ್ಬರು ರಾಣಿಯರು… ಸುಮಿತ್ರಾ ಮತ್ತು ಕೈಕೇಯಿ. ಅರಮನೆಯಲ್ಲಿ ಏನೇ ಸುಖ ವೈಭೋಗಗಳು ಇರಬಹುದು. ಆದರೆ ತಾಳಿ ಕಟ್ಟಿದ ಗಂಡನನ್ನು ಬೇರೆ ಹೆಣ್ಣಿನೊಂದಿಗೆ ಹಂಚಿ ಕೊಳ್ಳುವುದೆಂದರೆ ಎಂಥ ಹೆಣ್ಣಿಗೂ ಇದಕ್ಕಿಂತ ಬೇರೆ ಅವಮಾನವಿಲ್ಲ. ಆದರೆ ನಾನು ಇದನ್ನು ಎಂದು ಅವಮಾನವೆಂದು ಭಾವಿಸಲೇ ಇಲ್ಲ. “ರಾಜಾ ಬಹುಭಾರ್ಯ ವಲ್ಲಭ” ಅಂತ ಗಾದೆಯೇ ಇಲ್ಲವೇ. ಅದರಂತೆ ಮಹಾರಾಜರು ನಡೆದುಕೊಂಡಿದ್ದಾರೆ ಎಂದು ನನ್ನನ್ನು ನಾನೇ ಸಮಾಧಾನ ಪಡಿಸಿಕೊಂಡೆ. ನಾನು ಸುಮಿತ್ರೆ ಕೈಕೇಯಿಯರನ್ನು ಸ್ವಂತ ತಂಗಿಯರಿಗಿಂತ ಹೆಚ್ಚಾಗಿಯೇ ಕಂಡೆ. ಅವರಿಬ್ಬರೂ ಕೂಡ ನನ್ನನ್ನು ದೊಡ್ಡಕ್ಕನ ಸ್ಥಾನದಲ್ಲಿ ಕೂಡಿಸಿ ಬಹಳ ಗೌರವ ತೋರಿಸಿ ಆತ್ಮೀಯರಾಗಿದ್ದರು.
ಮೂವರಿಗೂ ಕಾಡುತ್ತಿದ್ದ ಒಂದೇ ಒಂದು ಕೊರತೆಯೆಂದರೆ ಹೆಣ್ಣಿನ ಜನ್ಮ ಯಾವುದರಿಂದ ಪರಿಪೂರ್ಣ ಎಂದು ಎಲ್ಲರೂ ಭಾವಿಸುತ್ತಾರೋ ಅದೇ ಇಲ್ಲದೆ ವಂಚಿತರಾಗಿದ್ದೆವು. ಮೂರು ಜನ ರಾಣಿಯರಿದ್ದರೂ ನಮಗೆ ಸಂತಾನ ಭಾಗ್ಯವಿಲ್ಲದೆ ಅಯೋಧ್ಯೆಗೆ ಮುಂದೆ ಉತ್ತರಾಧಿಕಾರಿ ಬರುತ್ತಾನೋ ಇಲ್ಲವೋ ಎಂಬ ಚಿಂತೆ ಹಗಲಿರುಳು ನಮ್ಮನ್ನು ಚುಚ್ಚಿ ಕೊಲ್ಲುತ್ತಿತ್ತು. ನಾವೇನೋ ಹೆಂಗಸರು.. ಮನದ ದುಗುಡವನ್ನು ಯಾರ ಬಳಿಯಾದರೂ ಹೇಳಿಕೊಂಡು ಅತ್ತು ಮನಸ್ಸು ಹಗುರ ಮಾಡಿಕೊಳ್ಳಬಹುದು. ಆದರೆ ಮಹಾರಾಜರು ಒಳಗೊಳಗೇ ಚಿಂತಿತರಾದರು.

ಹಲವಾರು ವರ್ಷಗಳು ಹೀಗೇ ಕಳೆಯಿತು. ನಂತರ ಮಹರ್ಷಿ ವಸಿಷ್ಠರ ಸಲಹೆ ಸೂಚನೆ ಮೇರೆಗೆ ಮಹಾರಾಜರು ಬಹಳ ಶ್ರದ್ಧಾಭಕ್ತಿಯಿಂದ ಪುತ್ರಕಾಮೇಷ್ಟಿಯಾಗವನ್ನು ನೆರವೇರಿಸಿ ಅನೇಕ ದಾನ ಧರ್ಮಗಳನ್ನು ಮಾಡಿದರು. ಮಹಾರಾಜರ ಭಕ್ತಿಗೆ ಮೆಚ್ಚಿ ಅಗ್ನಿದೇವನು ಪ್ರತ್ಯಕ್ಷನಾಗಿ ಒಂದು ಬಟ್ಟಲು ಪಾಯಸವನ್ನು ಕೊಟ್ಟು ಮೂರು ರಾಣಿಯರಿಗೆ ಕೊಡುವಂತೆ ತಿಳಿಸಿದನು. ಮಹಾರಾಜರು ಅರ್ಧ ಭಾಗ ನನಗೂ ಅರ್ಧ ಭಾಗ ಕೈಕೇಯಿಗೂ ಕೊಟ್ಟರು. ಸುಮಿತ್ರ ಅಂದೇಕೋ ತಡವಾಗಿ ಆಗಮಿಸಿದ್ದಳು. ಅವಳನ್ನು ಬಿಟ್ಟು ನಾವಿಬ್ಬರೇ ಪ್ರಸಾದ ಸೇವಿಸುವುದೇ?? ಮೂವರು ಮೂರು ದೇಹ ಅಷ್ಟೇ.. . ಆದರೆ ಒಂದೇ ಪ್ರಾಣದಂತಿದ್ದೆವು. ಹಾಗಾಗಿ ನನ್ನ ಪಾಲಿನ ಅರ್ಧಭಾಗ ಪಾಯಸವನ್ನು ಸುಮಿತ್ರೆಗೆ ಕೊಟ್ಟೆ. ನನ್ನನ್ನು ನೋಡಿದ ಕೈಕೇಯಿ ಕೂಡ ಮರುಮಾತಾಡದೆ ನನ್ನನ್ನು ಅನುಸರಿಸಿದಳು. ಹೆಣ್ಣಿಗೆ ದುರಾಸೆ ಎನ್ನುತ್ತಾರೆ ಆದರೆ ನಾವ್ಯಾರೂ ಅಂಥಾ ದುರಾಲೋಚನೆ ಎಂದಿಗೂ ಮಾಡಿರಲಿಲ್ಲ. ಆದರೆ ಮುಂದೆ ನಾನಂದು ಕೊಂಡಿದ್ದು ಸುಳ್ಳು ಎಂದು ಸಾಬೀತಾಗಿ ಹೋಯಿತು. ಇರಲಿ. ಅದನ್ನು ನಿಧಾನಕ್ಕೆ ಹೇಳುತ್ತೇನೆ.

ಯಜ್ಞದ ಫಲ ಬೇಗನೆ ಫಲಿಸಿತು. ನಾವು ಮೂವರೂ ಗರ್ಭವತಿಯರಾದೆವು. ಅರಮನೆಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಯಿತು. ಇಡೀ ಅಯೋಧ್ಯೆಯಲ್ಲಿ ಸಂಭ್ರಮವೋ ಸಂಭ್ರಮ. ರಘುವಂಶೋದ್ಧಾರಕನ ಜನನದ ನಿರೀಕ್ಷೆಯಲ್ಲಿ ಪ್ರಭುಗಳು ಅಯೋಧ್ಯೆಯ ಪ್ರಜೆಗಳಿಗೆ ಕೈಯಾರೆ ಸಿಹಿ ಹಂಚಿ ಸಂಭ್ರಮಿಸಿದರು. ಎಲ್ಲ ಹೆಣ್ಣಂತೆ ನಾನು ಬಸಿರು ಹೊತ್ತು ಸಂಭ್ರಮ ಪಟ್ಟೆ. ನನ್ನ ಹೊಟ್ಟೆಯಲ್ಲಿ ವಿಷ್ಣುವಿನ ಅವತಾರವಾದ ಶ್ರೀರಾಮಚಂದ್ರನೇ ಜನಿಸುತ್ತಾನೆಂದು ನನಗೆ ಆಗ ಗೊತ್ತೇ ಇರಲಿಲ್ಲ.

ಚೈತ್ರಮಾಸದ ನವಮಿಯ ದಿನ ಆ ಚಂದ್ರನನ್ನೇ ಮೀರಿಸುವ ಕಾಂತಿಯುಳ್ಳ ರಘುಕುಲತಿಲಕ ನನ್ನ ಮುದ್ದು ರಾಮ ಜನಿಸಿದ. ಕೈಕೇಯಿಗೆ ಭರತ ಹುಟ್ಟಿದರೆ ಪಾಯಸದ ಪ್ರಮಾಣ ಹೆಚ್ಚಾಗಿ ಸೇವಿಸಿದ ಸುಮಿತ್ರೆ ಅವಳಿ ಮಕ್ಕಳಿಗೆ ಜನ್ಮವಿತ್ತಳು. ಅವರೇ ಲಕ್ಷ್ಮಣ- ಶತ್ರುಘ್ನರು.

ನಂದನವನದಂತೆ ಕಂಗೊಳಿಸಿತು ನಮ್ಮ ಅರಮನೆ. ಹೆಸರಿಗೆ ನಾನು ಹೆತ್ತ ತಾಯಿಯಾದರೂ ನನ್ನ ಮುದ್ದು ರಾಮ ಮೂವರು ತಾಯಂದಿರ ಕಣ್ಮಣಿಯಾಗಿ ಬೆಳೆದ. ನಾಲ್ಕು ಮಕ್ಕಳು ಯಾವ ತಾಯಿಯ ಮಕ್ಕಳು ಎಂದೇ ಗೊತ್ತಾಗದಷ್ಟು ಅನ್ಯೋನ್ಯವಾಗಿ ಬೆಳೆಯುತ್ತಿದ್ದರು. ಮುಂಚಿನಿಂದಲೂ ಲಕ್ಷ್ಮಣ ಸದಾ ರಾಮನ ಜೊತೆಯಿರಲು ಇಷ್ಟಪಡುತ್ತಿದ್ದ. ಇಬ್ಬರಿಗೂ ಒಟ್ಟಿಗೆ ಸ್ನಾನ, ಊಟೋಪಚಾರಗಳು. ಕೈಕೇಯಿಯಂತೂ ಭರತನಿಗಿಂತ ನನ್ನ ರಾಮನನ್ನು ಎತ್ತಾಡಿಸಿ ಮುದ್ದು ಮಾಡಿದ್ದೇ ಹೆಚ್ಚು. ಅಷ್ಟು ಪ್ರೀತಿ ಅವಳಿಗೆ ರಾಮನ ಮೇಲೆ. ರಾಮನ ಬಗ್ಗೆ ಅಷ್ಟೊಂದು ವಾತ್ಸಲ್ಯ ತೋರಿತ್ತಿದ್ದ ಕೈಕೇಯಿಯ ಮಾತೃ ವಾತ್ಸಲ್ಯಕೆ ನಂತರದ ದಿನಗಳಲ್ಲಿ ಅದ್ಯಾವ ಗ್ರಹಣ ಬಡಿಯಿತೋ ಕಾಣೆ!!!!

ಶುಕ್ಲಪಕ್ಷದ ಚಂದ್ರನಂತೆ ತೇಜೋಮಯರಾಗಿ ಬೆಳೆಯುತ್ತಿದ್ದ ಮಕ್ಕಳನ್ನು ಹರಸಲು ಬಂದ ಋಷಿವರ್ಯರು ರಾಮನು ಶ್ರೀಮನ್ನಾರಾಯಣನ ಅವತಾರ ಮತ್ತು ಲಕ್ಷ್ಮಣನು ಆದಿಶೇಷನ ಅವತಾರ ಎಂದು ಘೋಷಿಸಿದರು. ಆ ವೈಕುಂಠವಾಸಿಯೇ ನನ್ನುದರದಲ್ಲಿ ರಾಮನಾಗಿ ಮತ್ತು ಅವನ ಬೆಂಗಾವಲಾಗಿ ಆದಿಶೇಷ ಲಕ್ಷ್ಮಣನಾಗಿ ಜನ್ಮ ತಾಳಿದ್ದಾನೆ ಎಂದು ತಿಳಿದು ಈ ಮಾತೃಹೃದಯ ಧನ್ಯವಾಯಿತು. ಆದರೂ ಇನ್ನೊಂದು ಆತಂಕ ಶುರುವಾಯಿತು. ಭಗವಂತನ ಜನ್ಮ ನಮ್ಮಲ್ಲಿ ಆಗಿದೆಯೆಂದರೆ, ಯಾವುದೋ ಘನೋದ್ದೇಶಕ್ಕಾಗಿ ಇರಬಹುದು, ಆ ಉದ್ದೇಶ ಪೂರ್ತಿಯಾದ ತಕ್ಷಣ ರಾಮ ನನ್ನಿಂದ ದೂರವಾಗಿಬಿಟ್ಟರೆ ಎಂದು ಯೋಚಿಸಿ ತೀವ್ರ ಕಳವಳವಾಯಿತು. ತಕ್ಷಣವೇ ಮನಸ್ಸನ್ನು ಹತೋಟಿಗೆ ತಂದು ಕೊಂಡು…ಇಲ್ಲಾ.. ಇಲ್ಲ..ಇವನು ನನ್ನ ರಾಮ ಅಷ್ಟೇ, ನಾನವನ ತಾಯಿ, ಎಂದು ಮನಸ್ಸು ಕೂಗಿ ಕೂಗಿ ಹೇಳಿತು. ನನ್ನ ಜೀವ ಇರುವವರೆಗೂ ಈ ತಾಯಿ ಮಗನನ್ನು ಅಗಲಿಸಿಬೇಡ ತಂದೆ ಎಂದು ಬೇಡಿಕೊಳ್ಳುತ್ತಾ ಪೂಜಾಗೃಹದಲ್ಲಿ ಆ ಭಗವಂತನನ್ನು ಅನವರತ ಪೂಜಿಸುತ್ತಿದ್ದೆ.

ತಾಯ್ತನದ ಸುಖವನ್ನು ಮೂವರು ಪೂರ್ಣವಾಗಿ ಅನುಭವಿಸುವ ಮುಂಚೆಯೇ ಮಕ್ಕಳು ಶೋಡಷಾವಸ್ಥೆಗೆ ಕಾಲಿಟ್ಟರು. ನನ್ನ ರಾಮನನ್ನು ವಿದ್ಯಾಭ್ಯಾಸಕ್ಕಾಗಿ ಮಹರ್ಷಿ ವಸಿಷ್ಠರ ಜೊತೆ ಕಳುಹಿಸುವ ಪ್ರಸಂಗ ಬಂತು. ಮೊದಲ ಬಾರಿಗೆ ಮಗನನ್ನು ಬಿಟ್ಟಿರಲಾರದೆ ಆ ರಾತ್ರಿ ಅತ್ತು ಅತ್ತು ಪಲ್ಲಂಗದಲ್ಲಿ ಹೊರಳಾಡಿ ದಿಂಬು ತೋಯಿಸಿದೆ. ಮಹಾರಾಜರಲ್ಲಿ ಬೇಡಿದೆ.. ಗೋಗರೆದೆ.. ಇಲ್ಲೇ ವಿದ್ಯಾಭ್ಯಾಸ ಮಾಡಬಹುದಲ್ಲ ಎಂದು ಕೇಳಿದೆ. ನನ್ನ ಮಾತಿಗೆ ಎಲ್ಲಿ ಬೆಲೆ.. ಎಲ್ಲ ಸಾಮಾನ್ಯ ಮಕ್ಕಳಂತೆ ರಾಜಕುಮಾರರು ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಲಿ ಎಂದು ಬಿಟ್ಟರು. ವಿಧಿ ಇಲ್ಲದೆ ಕಣ್ಣೀರುಗರೆಯುತ್ತಾ ಕಳಿಸಿಕೊಟ್ಟೆ. ರಾಮನ ಜತೆ ಲಕ್ಷ್ಮಣ ಕೂಡ ಹೋಗಿದ್ದರಿಂದ ಒಬ್ಬರಿಗೊಬ್ಬರು ಜೊತೆ ಇರುತ್ತಾರೆ ಎಂದು ಮತ್ತೆ ನನಗೆ ನಾನೇ ಸಮಾಧಾನ ಮಾಡಿಕೊಂಡೆ. ಅವರೇನೋ ವಿದ್ಯಾಭ್ಯಾಸದಲ್ಲಿ ತಲ್ಲೀನರಾಗಿದ್ದರು. ಆದರೆ ಇಲ್ಲಿ ನನ್ನ ಸ್ಥಿತಿ..?? ಅರಮನೆಯ ಭಕ್ಷ್ಯ ಭೋಜ್ಯಗಳು, ರಾಮನಿಗೆ ಇಷ್ಟವಾದ ತಿನಿಸುಗಳನ್ನು ಕಂಡಾಗ ನನ್ನ ಮನ ವಿಲವಿಲನೆ ಒದ್ದಾಡುತ್ತಿತ್ತು. ಇಬ್ಬರೂ ಬೇಗ ವಿದ್ಯಾಭ್ಯಾಸ ಮುಗಿಸಿ ಬರಲಿ ಎಂದು ದಿನವೂ ಆ ದೇವರಿಗೆ ಕೈ ಮುಗಿಯುತ್ತಿದ್ದೆ. ಅಂತೂ ಇಂತೂ ನನ್ನ ಮಕ್ಕಳು ವಿದ್ಯಾಭ್ಯಾಸ ಪೂರ್ತಿಗೊಳಿಸಿ ಬೇಗ ಮರಳಿದಾಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ.

ಒಂದು ದಿನ ವಿಶ್ವಾಮಿತ್ರರೂ ಅರಮನೆಗೆ ಬಂದು ಯಜ್ಞ ಯಾಗಾದಿಗಳನ್ನು ಮಾಡಲು ರಾಕ್ಷಸರ ಉಪಟಳ ಹೆಚ್ಚಾಗಿದೆ, ಅವರನ್ನು ಮಟ್ಟ ಹಾಕಲು ರಾಮಲಕ್ಷ್ಮಣರನ್ನು ಕಳುಹಿಸಿಕೊಡಿ ಎಂದು ಪ್ರಭುಗಳಲ್ಲಿ ಕೇಳಿದರು. ಇನ್ನು ಹರೆಯದ ಬಾಲಕರು ರಾಕ್ಷಸರನ್ನು ಎದುರಿಸಲು ಸಾಧ್ಯವೇ ಎನ್ನಿಸಿದರೂ, ಒಲ್ಲದ ಮನಸ್ಸಿನಿಂದಲೇ ಕಳಿಸಿ ಕೊಟ್ಟೆವು. ಕೆಲವು ದಿನಗಳಲ್ಲೇ ಒಂದು ಸುದ್ದಿ ಬಂತು. ಶ್ರೀರಾಮ ತಾಟಕಿ ಎಂಬ ರಾಕ್ಷಸಿಯ ಸಂಹಾರ ಮಾಡಿ ಋಷಿಗಳನ್ನು ಕಾಪಾಡಿದನಂತೆ ಎಂದು. ನನ್ನ ರಾಮ ರಾಕ್ಷಸರನ್ನು ಕೊಲ್ಲುವಷ್ಟು ದೊಡ್ಡವನಾಗಿಬಿಟ್ಟನೇ ಎಂದು ಬಹಳ ಆಶ್ಚರ್ಯ ಮತ್ತು ಸಂತೋಷವಾಯಿತು. ನಾನು ನನ್ನ ರಾಮ ಇನ್ನೂ ಪುಟ್ಟ ಮಗು ಎಂದೇ ತಿಳಿದಿದ್ದೆ ಎಂದು ನಗು ಬಂತು, ಜೊತೆಗೆ ಹೆಮ್ಮೆಯೂ ಆಯಿತು. ನನ್ನ ರಾಮ ವಿಷ್ಣುವಿನ ಅಂಶ ಎನ್ನುವುದು ಖಚಿತವಾಯಿತು. ಪುಟ್ಟ ಬಾಲಕರು ಬೃಹತ್ ಗಾತ್ರದ ರಾಕ್ಷಸರನ್ನು ಸಂಹಾರ ಮಾಡಿದ್ದಾರೆ ಎಂದರೆ ಇವರು ಸಾಮಾನ್ಯ ಬಾಲಕರಲ್ಲ ಎನ್ನುವ ವಿಷಯ ಎಲ್ಲಾ ಕಡೆ ಹರಡಿತು.

ಒಂದೆರಡು ದಿನದಲ್ಲಿಯೇ ವಿಶ್ವಾಮಿತ್ರರಿಂದ ಮತ್ತೊಂದು ಸುದ್ದಿ‌ ಬಂತು. ಆದರೆ ಈ ಬಾರಿ ಸುದ್ದಿ ಬಂದಿದ್ದು ಆಶ್ರಮದಿಂದಲ್ಲ. ಸುದ್ದಿ ಬಂದಿದ್ದು ಮಿಥಿಲೆಯಿಂದ. ಸ್ವಯಂವರದಲ್ಲಿ ಶಿವಧನಸ್ಸು ಮುರಿದ ಶ್ರೀರಾಮನು ಮಿಥಿಲೆಯ ರಾಜಕುಮಾರಿ ಜನಕರಾಜನ ಸುಪುತ್ರಿ ಸೀತೆಯನ್ನು ವರಿಸುತ್ತಾನೆ ಎಂದು. ಈ ಸುದ್ದಿ ತಿಳಿದು ಸಂತಸಪಡಬೇಕೋ, ರಾಜಮಾತೆಯಾಗಿ ಅಯೋಧ್ಯೆಯ ಕುಲವಧುವನ್ನು ನಾನು ಆರಿಸಲಾಗಲಿಲ್ಲವಲ್ಲ ಎಂದು ಖೇದ ಪಡಬೇಕೋ ಗೊತ್ತಾಗಲಿಲ್ಲ. ಆದರೆ ಆ ಮಿಥಿಲೆಯ ರಾಜಕುಮಾರಿ ಬೇರಾರೂ ಅಲ್ಲ, ಸಾಕ್ಷಾತ್ ಲಕ್ಷ್ಮಿ ಸ್ವರೂಪಿಣಿಯೇ ಈ ಸೀತೆ ಎಂದು ತಿಳಿದಾಗ ಮಗನ ಆಯ್ಕೆಗೆ ಸಂತಸಪಟ್ಟು ಹೃತ್ಪೂರ್ವಕವಾಗಿ ಒಪ್ಪಿಕೊಂಡೆ. ಸೀತೆ ಅರಮನೆಯ ಹೊಸಿಲು ತುಳಿದು ಬಂದ ಮೇಲೆ ಎಲ್ಲೆಲ್ಲೂ ಹರ್ಷೋಲ್ಲಾಸ. ನಾನು ಅತ್ತೆಯಲ್ಲ.. ಅವಳನ್ನು ತಾಯಿಯಂತೆ ಕಂಡೆ. ಕೈಕೇಯಿ ಸುಮಿತ್ರೆ ಕೂಡ ಅವಳನ್ನು ಮಗಳಂತೆ ಕಂಡರು. ಆದರೆ ಮುಂದೆ ಆದದ್ದೇನು??

ಶ್ರೀರಾಮನಿಗೆ ಪಟ್ಟಾಭಿಷೇಕ ಮಾಡಿ ಅವನು ಸಿಂಹಾಸನದ ಮೇಲೆ ವಿರಾಜಿಸುವುದನ್ನು ನೋಡುವ ನನ್ನ ಕನಸು ನುಚ್ಚು ನೂರಾಯಿತು. ಏನಾಯ್ತೋ ಏನೋ… ಕೈಕೇಯಿಗೆ ಅದ್ಯಾರು ಕಿವಿ ಹಿಂಡಿದರೋ.. ಮಹಾರಾಜರಿಗೆ ಯಾವುದೋ ಹಳೆಯ ಮಾತನ್ನು ನೆನಪಿಸಿ ಕೈಕೇಯಿ ತನ್ನ ಕಾರ್ಯ ಸಾಧಿಸಿಕೊಂಡಳು. “ಅಕ್ಕ, ನನ್ನ ಮಗ ಭರತ ರಾಜನಾಗಲಿ” ಎಂದು ಒಂದೇ ಒಂದು ಮಾತು ನನ್ನಲ್ಲಿ ಹೇಳಿದ್ದರೆ ನಾನು ಸಂತೋಷವಾಗಿ ಒಪ್ಪಿಕೊಳ್ಳುತ್ತಿದ್ದೆ. ಆದರೆ ಕೈಕೇಯಿ ನನಗೆ ಮತ್ತು ಮಹಾರಾಜರಿಗೆ ನಿರಂತರ ಪುತ್ರಶೋಕ ಪ್ರಾಪ್ತಿಯಾಗುವಂತೆ ಮಾಡಿಬಿಟ್ಟಳು. ರಾಮನಿಗೆ ತಾನೇ ಸಿಂಹಾಸನವನ್ನೇರಬೇಕು ಎಂಬ ವ್ಯಾಮೋಹವೇನು ಇರಲಿಲ್ಲ. ಹಿರಿಯರ ಮಾತಿನಂತೆ ಒಪ್ಪಿಕೊಂಡಿದ್ದ ಅಷ್ಟೇ.

ನಾನು ತಂಗಿಯಂತೆ ಆದರಿಸುತ್ತಿದ್ದ ಕೈಕೇಯಿ ನನ್ನ ಮಗನನ್ನು ನಿರ್ದಾಕ್ಷಿಣ್ಯವಾಗಿ ಕಾಡುಪಾಲು ಮಾಡಿದಳು. ನಾನೇನು ದ್ರೋಹ ಮಾಡಿದ್ದೆ ಆಕೆಗೆ??? ಅವಳು ತವರು ತೊರೆದು ಮಹಾರಾಜರನ್ನು ಮದುವೆಯಾಗಿ ಅರಮನೆಗೆ ಕಾಲಿಟ್ಟ ಗಳಿಗೆಯಿಂದಲೂ ನಿಷ್ಕಲ್ಮಶ ಪ್ರೀತಿ, ವಾತ್ಸಲ್ಯಗಳನ್ನು ಮನಸಾರೆ ಧಾರೆಯೆರೆದಿದ್ದೆ. ಇದೆಲ್ಲ ಕ್ಷಣ ಮಾತ್ರದಲ್ಲಿ ಮರೆತು ಹೋದಳೇ?? ಪದವಿಯ ವ್ಯಾಮೋಹ ಅವಳನ್ನು ಇಷ್ಟು ಕೀಳು ಮಟ್ಟಕ್ಕೆ ಇಳಿಸಿತೇ?? ಇಂಥ ಕಠಿಣವಾದ ಶಿಕ್ಷೆ ವಿಧಿಸುವ ಮುನ್ನ ಮುದ್ದು ರಾಮ, ಲಕ್ಷ್ಮಣ ಮತ್ತು ಸೀತೆಯ ಮುಖ ಕಣ್ಮುಂದೆ ಬರಲಿಲ್ಲವೇ ಅವಳಿಗೆ?? ಚಿಕ್ಕಮ್ಮ ಚಿಕ್ಕಮ್ಮ ಎಂದು ಹಿಂದೆ ಮುಂದೆ ಸುತ್ತುವ ರಾಮನು ಈಗ ಅವಳ ಕಣ್ಣಿಗೆ ಕೇವಲ ಸವತಿಯ ಮಗನಾಗಿ ಬಿಟ್ಟನೆ!!?

ಆದರೆ ನಂತರ ತಿಳಿದದ್ದು.. ಹೀಗೆಲ್ಲಾ ಕಿವಿ ಚುಚ್ಚಿ ಕೈಕೇಯಿಯ ಮನಸ್ಸು ಹಾಳು ಮಾಡಿದ್ದು ಆ ದುಷ್ಟ ಮಂಥರೆ ಎಂದು. ಹೋಗಲಿ.. ಇಷ್ಟೆಲ್ಲಾ ಮಾಡಿ ಕೈಕೇಯಿ ಸಾಧಿಸಿದ್ದಾದರೂ ಏನು?? ವಿಷಯ ತಿಳಿದ ಭರತ ಹೆತ್ತ ತಾಯಿಯ ತಪ್ಪು ಎತ್ತಿ ತೋರಿಸಿ ನಾಯಿಯಂತೆ ದೂರ ಅಟ್ಟಿದ.

ಈಗಲೂ ಹೇಳುತ್ತೇನೆ ಪ್ರಿಯ ತಂಗಿ.. ನೀನು ಹೀಗೆ ಮಾಡಬಾರದಿತ್ತು. ನೋಡೀಗ… ಏನಾಗಿ ಹೋಯಿತು. ಇಬ್ಬರಿಗೂ ಪತಿವಿಯೋಗ ಆಗಿ, ಪುತ್ರಪ್ರೇಮದಿಂದ ವಂಚಿತರಾಗಿ ನರಳುತ್ತಿದ್ದೇವೆ. ಮುತ್ತೈದೆ ಸೌಭಾಗ್ಯ ಕಳೆದುಕೊಂಡ ನಮ್ಮ ಮುಖಗಳು ಪ್ರೇತಕಳೆಯಿಂದ ಕೂಡಿವೆ. ಅಯೋಧ್ಯೆಯ ಸಿಂಹಾಸನ ಒಡೆಯನಿಲ್ಲದೆ ಕಳಾಹೀನವಾಗಿದೆ. ಅಯೋಧ್ಯೆಯ ಪ್ರಜೆಗಳು ದುಃಖದಿಂದ ಶ್ರೀರಾಮ ಹಿಂತಿರುಗಿ ಬರುವವರೆಗೂ ರಾಜ್ಯದಲ್ಲಿ ಯಾವ ಹಬ್ಬ ಸಂಭ್ರಮ ಬೇಡ ಎಂದು ಪಟ್ಟು ಹಿಡಿದು ಕೂತಿದ್ದಾರೆ. ಇಷ್ಟೆಲ್ಲಾ ಸೌಭಾಗ್ಯ ಅನುಭವಿಸಲು ನೀನು ಮಹಾರಾಜರಿಂದ ಆಣೆ ಮಾಡಿಸಿಕೊಂಡೆಯ?

ತಂದೆ ತಾಯಿಯರನ್ನು ದೇವರಂತೆ ಕಾಣುವ ನನ್ನ ಮಗ ಈಗ ನನ್ನ ಹತ್ತಿರದಲ್ಲಿ ಇಲ್ಲ. ನಿನ್ನ ಮಗ ಹತ್ತಿರದಲ್ಲಿ ಇದ್ದರೂ ನಿನ್ನ ಮೇಲೆ ಅವನಿಗೆ ಕಿಂಚಿತ್ತೂ ಈಗ ಗೌರವ ಉಳಿದಿಲ್ಲ. ಸಿಂಹಾಸನದ ಮೇಲಿನ ಆಸೆಗಾಗಿ ತಾಯಿ ಮಗನನ್ನು ಅಗಲಿಸಿದ ತಪ್ಪಿಗೆ ನೀನೂ ಕೂಡ ಮಗನ ಪ್ರೇಮದಿಂದ ವಂಚಿತಳಾಗಿ ‌ಬದುಕೇ ರಸಹೀನವಾಯ್ತಲ್ಲ!!!!. ಭರತನನ್ನು ನೋಡುತ್ತಿದ್ದರೆ ಹೊಟ್ಟೆಯಲ್ಲಿ ವಿಚಿತ್ರ ಸಂಕಟವಾಗುತ್ತದೆ. ಅಣ್ಣ ಬಂದು ಸಿಂಹಾಸನ ಏರುವವರೆಗೂ ತಾನು ಕೂಡ ತಪಸ್ವಿಗಳ ಹಾಗೆ ಜೀವಿಸುತ್ತೇನೆ ಎಂದು ಅರಮನೆ ತೊರೆದು ಆಶ್ರಮವಾಸಿಯಾಗಿದ್ದಾನೆ.

ಅಯ್ಯೋ, ಮೂರ್ಖ ಹೆಣ್ಣೇ, ಯಾರಿಗೂ ಸುಖವಿಲ್ಲವಾಯ್ತಲ್ಲ ಇದರಿಂದ !!! ಲಕ್ಷ್ಮಣನನ್ನೂ‌ ಸುಮಿತ್ರೆಯಿಂದ ಅಗಲಿಸಿ ಅವಳಿಗೂ ನೋವು ಕೊಟ್ಟೆಯಲ್ಲ. ನಾನಾದರೂ ಹೊಟ್ಟೆಯ ಸಂಕಟ ಹೇಳಿಕೊಂಡು ಅಳುತ್ತಾ ಇದ್ದೇನೆ. ಪಾಪ ಸುಮಿತ್ರೆ!!!!

ಹೆತ್ತ ಮಗನೇ ತಾಯಿಯನ್ನು ಛಿ.. ಥೂ.. ಎಂದ ಮೇಲೆ ಈಗ ಕೈಕೇಯಿಗೆ ತನ್ನ ತಪ್ಪು ಗೊತ್ತಾಗಿದೆ. “ಅಕ್ಕ.. ಕ್ಷಮಿಸಿ” ಎಂದು ಗೋಗರೆಯುತ್ತಿದ್ದಾಳೆ. ಕ್ಷಮೆಯೇ ಹೆಣ್ಣಿನ ದೊಡ್ಡ ಗುಣ. ನಾನೆಂದೋ ಅವಳನ್ನು ಕ್ಷಮಿಸಿದ್ದೇನೆ. ರಾಮ ಬರುವವರೆಗೂ ಒಬ್ಬರಿಗೊಬ್ಬರು ಸಮಾಧಾನ ಮಾಡಿಕೊಳ್ಳುವುದಷ್ಟೆ ನಮಗಿರುವ ದಾರಿ.

ಇನ್ನಾರೋ ಹೇಳಿದರು. ಎಲ್ಲಾ ಆಗುತ್ತಿರುವುದು ಲೋಕ ಕಲ್ಯಾಣಕ್ಕಾಗಿ… ಶ್ರೀರಾಮನಿಂದ ದುಷ್ಟಸಂಹಾರ ಮಾಡಿಸಲಿಕ್ಕಾಗಿ ಕೈಕೇಯಿಗೆ ದೇವರು ಈ ಬುದ್ಧಿ ಕೊಟ್ಟ ಎಂದು. ನೋಡೋಣ ಏನಾಗುತ್ತೋ. ಆ ದಿನಕ್ಕಾಗಿ ಕಾಯುತ್ತಿದ್ದೇನೆ. ನನ್ನ ಮಗ ಸೊಸೆ ಲಕ್ಷ್ಮಣ ಮರಳಿ ಅಯೋಧ್ಯೆಗೆ ಬಂದರೆ ಅವರ ಸುಖ ಸಂಸಾರವನ್ನೊಮ್ಮೆ ಕಣ್ತುಂಬಾ ನೋಡಿ ವಾನಪ್ರಸ್ಥಕ್ಕೆ ತೆರಳಿ ಬಿಡುವೆ.

ಪುಟ್ಟ ಪುಟ್ಟ ಹೆಜ್ಜೆ ಇಟ್ಟು ತನ್ನ ತೊದಲು ಮಾತಿನಿಂದ ಅರಮನೆ ತುಂಬ ಹರ್ಷದ ಹೊನಲು ತುಂಬಿದ್ದ ನನ್ನ ರಾಮ.. ಯಾಕಪ್ಪಾ ದೊಡ್ಡವನಾದೆ?? ನನ್ನ ಮಡಿಲಿನಲ್ಲಿ ಆಡುತ್ತಾ ಇನ್ನೂ ಪುಟ್ಟ ಮಗುವೇ ಆಗಿರಬೇಕಿತ್ತು ನೀನು. ಆ ನಿನ್ನ ಸುಕೋಮಲ ಪಾದಗಳು ಕಾಡಿನ ಕಲ್ಲು ಮುಳ್ಳು ತುಳಿಯುತ್ತಾ ನೀನು ಕಷ್ಟ ಪಡುವುದನ್ನು ಕಲ್ಪಿಸಿಕೊಂಡು ನಾನು ಹೇಗೆ ಬದುಕಿರಲಿ. ಸಮಸ್ತ ಪರಿವಾರದೊಡನೆ ರತ್ನಖಚಿತ ಸುವರ್ಣದ ಹರಿವಾಣದಲ್ಲಿ ವಿವಿಧ ಭಕ್ಷ್ಯ ಭೋಜ್ಯಗಳನ್ನು ಸೇವಿಸುತ್ತಿದ್ದ ನೀನು ಕಾಡಿನಲ್ಲಿ ಕಂದಮೂಲಾದಿ, ಹಣ್ಣು ಹಂಪಲುಗಳನ್ನು ತಿಂದು ಬದುಕಬೇಕು ಎಂಬುದನ್ನು ಹೇಗಪ್ಪಾ ಕಲ್ಪಿಸಿಕೊಳ್ಳಲಿ. ಹಂಸತೂಲಿಕಾತಲ್ಪದಲ್ಲಿ ವಿರಮಿಸುತ್ತಿದ್ದ ನಿನಗೆ ಈಗ ಹುಲ್ಲು ಹಾಸಿನ ಮೇಲೆ ನಿದ್ದೆ ಬರುತ್ತಿದೆಯಾ ಕಂದ.. ಅಯ್ಯೋ ದುರ್ವಿಧಿಯೇ.. ನನ್ನ ಮಗನನ್ನು ಮದುವೆಯಾದ ತಪ್ಪಿಗೆ ಆ ಬಾಲಕಿ ಸೀತೆಯೂ ಕಷ್ಟಪಡುವಂತಾಗಿದೆ.. ನಾನೇನೂ ಮಾಡದ ಸ್ಥಿತಿಯಲ್ಲಿ ಇರುವೆನಲ್ಲ. ಹಠ ಮಾಡಿ ಕರೆಸಿಕೊಳ್ಳಬಹುದು. ಆದರೆ ತನ್ನ ತಂದೆ ತಾಯಿಗೆ ಕೊಟ್ಟ ಮಾತನ್ನು ಈ ರಾಮ ಉಳಿಸಿಕೊಳ್ಳಲಿಲ್ಲ ಎಂಬ ಅಪವಾದ ಬರುತ್ತದೆ. ಹೀಗಾಗುವುದು ಬೇಡ. ಹದಿನಾಲ್ಕು ವರ್ಷ ನನ್ನ ಜೀವ ಹಿಡಿದು ನನ್ನ ರಾಮನಿಗಾಗಿ ಕಾಯುತ್ತೇನೆ. ಆ ದಿನ ಬೇಗ ಬರಲಿ.


  •  ಸುಮ ಉಮೇಶ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW