ಜುಬ್ಬಾ ಪೈಜಾಮ, ಉಲ್ಲನ್ ಟೋಪಿ, ಮಫ್ಲರ್. ಹಲ್ಲಿನ ಬಣ್ಣ ಕೂಡ ಪಾನ್ ಜಗಿದು ಹಳದಿ ಬಣ್ಣಕ್ಕೆ ತಿರುಗಿತ್ತು. ಒಂದಿಬ್ಬರ ಕಿವಿಯಲ್ಲಿ ವಾಲೆ ಬೇರೆ ಹಾಕಿದ್ದರು. ಕೇಳಬೇಕೋ ಬೇಡವೋ ಎಂಬ ಅನುಮಾನದಲ್ಲಿಯೇ ಹೆದರುತ್ತ ಇವರೆಲ್ಲ ಎಲ್ಲಿಂದ ಬಂದವರೆಂದು ಕೇಳಿದೆ. ಮುಂದೇನಾಯಿತು ಕೆ. ಸತ್ಯನಾರಾಯಣ ಚೀನಾದಲ್ಲಿ ರಾಮದೇವರ ಗುಡಿಯ ಕುರಿತಾದ ಕಿರು ಕತೆಯನ್ನು ತಪ್ಪದೆ ಮುಂದೆ ಓದಿ….
ನಾನು ಚೀನಾ, ಟಿಬೆಟ್ ಪ್ರವಾಸ ಹೋಗುವ ಹೊತ್ತಿಗೆ ಸಾಂಸ್ಕೃತಿಕ ಕ್ರಾಂತಿ (cultural revolution) ಮುಗಿದೇ ಸುಮಾರು ಇಪ್ಪತ್ತೈದು ವರ್ಷಗಳಾದರೂ ಆಗಿತ್ತು. ಸಾಂಸ್ಕೃತಿಕ ಕ್ರಾಂತಿಯ ಸಂದರ್ಭದಲ್ಲಿ ಧಾರ್ಮಿಕ-ಪೂಜಾ ಕೇಂದ್ರಗಳನ್ನು ಒಡೆಯಲಾಯಿತಂತೆ. ಮಾವೋ ಪತನವಾದ ನಂತರ, ಸಾಂಸ್ಕೃತಿಕ ಕ್ರಾಂತಿಯ ಸಂದರ್ಭದಲ್ಲಿ ನಾಶ ಮಾಡಲಾಗಿದ್ದ ಎಲ್ಲ ಧಾರ್ಮಿಕ-ಪೂಜಾ ಕೇಂದ್ರಗಳನ್ನು ಪುನರ್‌ನಿರ್ಮಿಸಲು ಸರ್ಕಾರದ ಅತ್ಯುನ್ನತ ಸ್ತರಗಳಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತಂತೆ.
ನಾವೆಲ್ಲ ಹಿಂದೂಸ್ಥಾನದಿಂದ ಬಂದ ಯಾತ್ರಿಗಳೆಂಬ ಕಾರಣಕ್ಕೆ ನಮ್ಮನ್ನು ಸರ್ಕಾರದ ಕಣ್ಗಾವಲಿನಲ್ಲೇ ಕರೆದುಕೊಂಡು ಹೋದ ಪ್ರವಾಸಿ ತಾಣಗಳಲ್ಲಿ ರಾಮದೇವರ ಪ್ರಾಂಗಣವೂ ಒಂದು. ಗ್ರಾಮದ ಹತ್ತಿರ ಹೋದಾಗ, ಇದು ಗ್ರಾಮವಲ್ಲ, ವಾಡೆ, ಹತ್ತು ಹಲವು ಗುಡಿಸಲುಗಳಿರುವ ಒಂದು ಕೊಂಪೆಯೆನಿಸತು. ಎಲ್ಲವೂ ಇನ್ನೂ ಸಗಣಿ, ಮಣ್ಣಿನ ಮನೆಗಳು/ಗುಡಿಸಲುಗಳು. ದೇವಸ್ಥಾನದ ಪ್ರಾಂಗಣ ಕೂಡ ಸ್ವಲ್ಪ ಭಾಗ ಕಲ್ಲು ಕಟ್ಟಡವಾದರೆ, ಉಳಿದ ಭಾಗವೆಲ್ಲ ಮಣ್ಣಿನದು. ಜಗುಲಿ ಡೊಂಕು ಡೊಂಕಾಗಿತ್ತು. ರಾಮ, ಲಕ್ಷ್ಮಣ, ಸೀತೆಯರ ಭಂಗವಾಗಿದ್ದ ಮೂರ್ತಿಗಳನ್ನು ಮತ್ತೆ ಕೆತ್ತುತ್ತಿರುವಂತೆ ಕಾಣುತ್ತಿತ್ತು. ಹೀಗೆ ಕೆತ್ತುವುದು, ರಚಿಸುವುದು ಎಷ್ಟೋ ವರ್ಷಗಳಿಂದ ನಡೆಯುತ್ತಲೇ ಇದೆಯಂತೆ. ಅಲ್ಲಿ ಕುಳಿತ ಸ್ಥಪತಿಗಳು, ಕುಶಲ ಕರ್ಮಿಗಳನ್ನೆಲ್ಲ ನೋಡಿದರೆ, ಪಂಜಾಬ್, ಉತ್ತರ ಪ್ರದೇಶ, ಹಿಮಾಚಲದ ಗಡಿ ಭಾಗಗಳಿಂದ ಬಂದವರಂತೆ ತೋರುತ್ತಿದ್ದರು. ಅದೇ ರೀತಿಯ ಜುಬ್ಬಾ ಪೈಜಾಮ, ಉಲ್ಲನ್ ಟೋಪಿ, ಮಫ್ಲರ್. ಹಲ್ಲಿನ ಬಣ್ಣ ಕೂಡ ಪಾನ್ ಜಗಿದು ಹಳದಿ ಬಣ್ಣಕ್ಕೆ ತಿರುಗಿತ್ತು. ಒಂದಿಬ್ಬರ ಕಿವಿಯಲ್ಲಿ ವಾಲೆ ಬೇರೆ.

ಕೇಳಬೇಕೋ ಬೇಡವೋ ಎಂಬ ಅನುಮಾನ ಭರಿತ ಪುಕ್ಕಲು ಧ್ವನಿಯಲ್ಲಿ ಇವರೆಲ್ಲ ಎಲ್ಲಿಂದ ಬಂದವರೆಂದು ಕೇಳಿದೆ. ಅಧಿಕಾರಿಗಳು ಆಶ್ಚರ್ಯಚಕಿತರಾಗಲಿಲ್ಲ. ಇವರೆಲ್ಲ ಪಾಕಿಸ್ಥಾನ, ಬಲೂಚಿಸ್ಥಾನ, ಗಾಂಧಾರ, ನೇಪಾಳಗಳ ಬೇರೆ ಬೇರೆ ಭಾಗಗಳಿಂದ ಬಂದವರು. ದೇವಸ್ಥಾನಗಳ ಕೆಲಸದಲ್ಲಿ ಪಳಗಿದವರ ಮನೆತನಗಳಿಗೆ ಸೇರಿದವರು. ಈ ವರ್ಗದವರೆಲ್ಲ ಹೀಗೇ. ಯಾವುದೇ ದಾಖಲೆಗಳು, ಪರವಾನಗಿ ಇಲ್ಲದೆ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಹೋಗುತ್ತಾರೆ, ಬರುತ್ತಾರೆ, ಗಡಿಯಲ್ಲಿ ನುಸುಳಿಕೊಂಡು ಬರುವ ರೀತಿ. ಇಲ್ಲೂ ಕೂಡ ಕಂಡೂ ಕಾಣದ ಹಾಗೆ ಇರಬಲ್ಲ ರೀತಿ ನೀತಿಗಳಲ್ಲಿ ಪರಿಣತರು. ಯಾವಾಗ ಬೇಕಾದರೂ ಬರುತ್ತಾರೆ. ಯಾವಾಗ ಬೇಕಾದರೂ ಹೋಗುತ್ತಾರೆ. ಯಾವ ನಿಯಮಕ್ಕೂ ಕೂಡ ಒಳಪಡುವುದಿಲ್ಲ. ಇದರಿಂದಾಗಿಯೇ ಈ ದೇವರ ಮೂರ್ತಿಗಳ ನಿರ್ಮಾಣ ನಿಧಾನವಾಗುತ್ತಿದೆ.
ಕಬ್ಬಿಣ, ತಾಮ್ರ, ಸುತ್ತಿಗೆ, ಉಳಿ, ಮೊಳೆ, ಮರದ ತುಂಡುಗಳು, ಸಿಪ್ಪೆ ಎಲ್ಲವೂ ಚೆಲ್ಲಾಪಿಲ್ಲಿಯಾಗಿ ಹರಡಿಕೊಂಡಿದ್ದವು.
ಅಂದು ಅಧಿಕಾರಿಗಳು ಹೇಳಿದ ಇನ್ನೊಂದು ಮಾತು ತಮಾಷೆಯಾಗಿ ಕಂಡಿತ್ತು. “ಈ ರಾಮ, ಸೀತೆ, ಲಕ್ಷ್ಮಣ ಮೂರ್ತಿಗಳೂ ಅಷ್ಟೇ, ಇಲ್ಲೇ ಇರುವುದಿಲ್ಲ. ಬೇಕು ಬೆಂಕೆಂದಾಗ ಎಲ್ಲೋ ಹೋಗುತ್ತವೆ. ಮತ್ತೆ ಮನಸ್ಸಿಗೆ ಬಂದಾಗ ಬರುತ್ತವೆ. ಒಂದೇ ಸಂಗತಿಯೆಂದರೆ, ಸದ್ಯ ಎಲ್ಲ ಮೂರ್ತಿಗಳೂ ಒಟ್ಟಾಗಿ ಹೊರಟುಹೋಗುವುದಿಲ್ಲ. ಒಂದಷ್ಟು ದಿನ ಜಾನಕಿ ದೇವಿ ಎಲ್ಲೆಲ್ಲೋ ಹೊರಟುಹೋಗುತ್ತಾಳೆ. ಅವಳು ಮತ್ತೆ ಬರುವ ಹೊತ್ತಿಗೆ ರಾಮದೇವರ ಮೂರ್ತಿ ಎಲ್ಲೋ ಹೊರಟುಹೋಗಿರುತ್ತದೆ. ಲಕ್ಷ್ಮಣನೂ ಅಷ್ಟೇ. ಎಲ್ಲರ ಮೂರ್ತಿಗಳು ಯಾವಾಗಲೂ ಒಟ್ಟಿಗಿದ್ದರೆ ಇಷ್ಟು ಹೊತ್ತಿಗೆ ದೇವಾಲಯದ ಪುನರ್‌ನಿರ್ಮಾಣ ಎಂದೋ ಮುಗಿದುಹೋಗುತ್ತಿತ್ತು. ಏಕೆಂದರೆ ಮೂರ್ತಿಗಳನ್ನು ನಿರ್ಮಿಸುವಾಗ, ನಿರ್ಮಿಸಿದ ಮೇಲೆ, ಪರಸ್ಪರ ಅವುಗಳಿಗೂ ಒಪ್ಪಿಗೆ ಇರಬೇಕಲ್ಲ.”
- ಕೆ. ಸತ್ಯನಾರಾಯಣ – ಹಿರಿಯ ಸಾಹಿತಿಗಳು, ಕತೆಗಾರರು, ಯು ಎಸ್ ಎ
