ಸಮಗ್ರ ರಂಗಭೂಮಿಯ ಸಾಂಗತ್ಯಕ್ಕಾಗಿ ರಂಗ ನೇಪಥ್ಯ ಪತ್ರಿಕೆ

ಗೆಳೆಯರಾದ ಶ್ರಿ ಗುಡಿಹಳ್ಳಿ ನಾಗರಾಜ್‌ ಅವರು ‘ ರಂಗ ನೇಪಥ್ಯ ‘ ಎಂಬ ಹೊಸ ರಂಗ ಪತ್ರಿಕೆಯನ್ನು ತರುತ್ತಿದ್ದಾರೆ. ರಂಗಭೂಮಿಗಾಗಿ ಪ್ರಾಮಾಣಿಕ ಕಳ ಕಳಿಯ ಪತ್ರಿಕೆಗಳೇ ಇಲ್ಲ ಅನ್ನುವಷ್ಟರ ಮಟ್ಟಿಗೆ ಇಂದಿನ ಸ್ಥಿತಿ ಇದೆ. ರಾಜ್ಯದ ಅನೇಕ ರಂಗ ತಂಡಗಳ ಸಂಪರ್ಕ ಹೊಂದಿರುವ ಗುಡಿಹಳ್ಳಿಯವರು ರಂಗವಿಮರ್ಶಕರಾಗಿಯೂ ಪ್ರಸಿದ್ಧರು. ಪ್ರಜಾವಾಣಿ ಪತ್ರಿಕೆಯ ಹಿರಿಯ ಸಂಪಾದಕರಾಗಿ ನಿವೃತ್ತರಾದ ಅವರು ಹವ್ಯಾಸಿ, ಮತ್ತು ವೃತ್ತಿ ರಂಗಭೂಮಿಯ ಕೊಂಡಿಯಂತಿದ್ದಾರೆ. ಅವರು ಆರಂಭಿಸಿದ ರಂಗ ನೇಪಥ್ಯ ಪತ್ರಿಕೆಯ ಉದ್ದೇಶ ಕುರಿತು ಇಲ್ಲಿ ಅವರೇ ಮಾತಾಡಿದ್ದಾರೆ. – ಸಂಪಾದಕ

* ಗುಡಿಹಳ್ಳಿ ನಾಗರಾಜ

ರಂಗಭೂಮಿಗಾಗಿ ಮೀಸಲಿರುವ ಪತ್ರಿಕೆಗಳು ಕನ್ನಡದಲ್ಲಿರುವುದು ಬೆರಳೆಣಿಕೆಯಷ್ಟು.ಇದು ಸಾಲದು. ಹಾಗಾಗಿ ‘ ರಂಗ ನೇಪಥ್ಯ’ ಎಂಬ ಪತ್ರಿಕೆ ಶುರು ಮಾಡಿದ್ದೇವೆ. ರಂಗ ಚಟುವಟಿಕೆಗಳ ದಾಖಲೆ, ವಿಶ್ಲೇಷಣೆ, ವಿಮರ್ಶೆಯನ್ನು ಇದು ಒಳಗೊಂಡಿರುತ್ತದೆ. ಜತೆಗೆ ಮುನ್ನೋಟವನ್ನು ಕೊಡುವ ಆಶಯ ಪತ್ರಿಕೆಯದು. ಸಾಧಕರ ಪರಿಚಯ ಇರುತ್ತದೆ. ಸಂದರ್ಶನವಿರುತ್ತದೆ. ನಾಟಕಗಳ ವಿಮರ್ಶೆ ಇರುತ್ತದೆ. ರಂಗ ಪುಸ್ತಕಗಳ ಮಾಹಿತಿ ಇರುತ್ತದೆ. ರಂಗತಂಡಗಳನ್ನೂ ಇದರಲ್ಲಿ ಪರಿಚಯಿಸುತ್ತೇವೆ. ವೃತ್ತಿ, ಅರೆವೃತ್ತಿ, ಹವ್ಯಾಸಿ, ಗ್ರಾಮೀಣ, ಪೌರಾಣಿಕ, ಜಾನಪದ – ಹೀಗೆ ರಂಗಭೂಮಿಯ ಎಲ್ಲ ಪ್ರಾಕಾರಗಳು, ಆಯಾಮಗಳನ್ನು ಇದು ಒಳಗೊಂಡಿರುತ್ತದೆ. ಅಂತೆಯೇ ಇದನ್ನು ಸಮಗ್ರ ರಂಗಭೂಮಿಯ ಸಾಂಗತ್ಯ ಎಂದು ಹೆಸರಿಸಿದ್ದೇವೆ.

ಕಳೆದ ಆರೇಳು ದಶಕಗಳಲ್ಲಿ ರಂಗಭೂಮಿಗಾಗಿಯೇ ಹಲವು ಪತ್ರಿಕೆಗಳು ಬಂದಿವೆ. ಉಳಿದಿವೆ. ನಿಂತಿವೆ. ನಿಂತು ದಣಿವಾರಿಸಿಕೊಂಡು ಮತ್ತೆ ಪಯಣ ಆರಂಭಿಸಿವೆ. ಆಯಾ ಕಾಲದ ರಂಗ ಚಟುವಟಿಕೆಗಳನ್ನು ದಾಖಲಿಸಿಲು ತಮ್ಮದೇ ಇತಿಮಿತಿಗಳಲ್ಲಿ ಪ್ರಯತ್ನಿಸಿವೆ. ರಂಗ ಚರಿತ್ರೆ ನಿರ್ಮಾಣದಲ್ಲಿ ತಮ್ಮದೇ ಆದ ಕಾಣಿಕೆ ಸಲ್ಲಿಸಿವೆ. ಈ ಪರಂಪರೆ ಮುಂದುವರಿಕೆಯನ್ನು ರಂಗ ನೇಪಥ್ಯ ನಿಭಾಯಿಸುತ್ತದೆ.

ಈ ಪತ್ರಿಕೆ ಶುರು ಮಾಡಲು ಮತ್ತೂ ಒಂದು ಕಾರಣ ಇದೆ. ನಾಟಕದ ವಿಮರ್ಶೆ, ಚರ್ಚೆ, ಎಂದರೆ ಅದು ನಗರದ ಕೆಲವು ಪ್ರಯೋಗಶೀಲ ನಾಟಕಗಳಿಗೆ ಮಾತ್ರ ಎಂಬಂತಾಗಿದೆ. ನಡೆಯಬೇಕಾದಷ್ಟು ಚರ್ಚೆ, ದಾಖಲೆ ನಗರ ರಂಗ ಚಟುವಟಿಕೆಲ್ಲೂ ನಡೆದಿಲ್ಲ. ಪ್ರತಿಷ್ಠಿತ ಎನಿಸಿಕೊಂಡ ಕೆಲವು ತಂಡಗಳಲ್ಲೇ ಸರಿಯಾದ ಮಾಹಿತಿಯಿಲ್ಲ. ಗ್ರಾಮೀಣ, ಪೌರಾಣಿಕ, ವೃತ್ತಿಗಳನ್ನಂತೂ ಕೇಳಲೇಬೇಡಿ. ಇಲ್ಲವೇ ಇಲ್ಲ ಅನ್ನುವಷ್ಟು ಮಾತ್ರ ಮಾಹಿತಿ ಇದೆ. ಕೈ ಬಿಟ್ಟರೆ ಕಾಲಕ್ರಮೇಣ ಅದೂ ನಶಿಸುತ್ತದೆ. ಇವೆಲ್ಲವುಗಳ ಉಳಿಕೆ- ಬೆಳಿಕೆ ಪತ್ರಿಕೆಯ ಹೊಣೆಯಾಗಿದೆ.

ನಾಟಕ ಅಂದೇ ಹುಟ್ಟುತ್ತದೆ. ಅಂದೇ ಸಾಯುತ್ತದೆ ಎಂಬ ಮಾತಿದೆ. ಒಂದು ಸುಂದರ ಹೂವು ಮನಸ್ಸಿಗೆ ಆಹ್ಲಾದ ನೀಡುವಂತೆ ನಾಟಕ ಆನಂದ ಮತ್ತು ವಿಚಾರಗಳನ್ನು ಮನುಷ್ಯನಲ್ಲಿ ಸೃಜಿಸುತ್ತದೆ. ಹೂವು ಬಾಡಿ ಹೋದಂತೆ ಒಂದು ಪ್ರಯೋಗದ ಆಯುಷ್ಯವು ಅಂದೇ ಮುಗಿದಿರುತ್ತದೆ. ದಾಖಲಿಸಿದರೆ ಅದು ಉಳಿಯುತ್ತದೆ ಎನ್ನುತ್ತಾರೆ ಪ್ರಯೋಗಶೀಲ ನಿರ್ದೇಶಕ ಗೋಪಾಲಕೃಷ್ಣ ನಾಯಿರಿ ಅವರು.ಅಂಥಹ ಹೂಗಳನ್ನು ಪೋಣ್ಸ್‌ ರಕ್ಷಿಸುವ ಕೆಲಸವನ್ನು ಪತ್ರಿಕೆಗಳು ಮಾಡಬೇಕು. ಮಾಡಬಹುದು ಎಂಬ ಸಂಕಲ್ಪದಿಂದ ಈ ಪತ್ರಿಕೆ ಸುರು ಮಾಡಿದ್ದೇವೆ.

ನಾಟಕ ವಾಚ್ಯವಾಗಬಾರದು. ಪ್ರತಿಮೆ, ಸಂಕೇತ ರೂಪಕಗಳಲ್ಲಿ ಕಟ್ಟಿಕೊಡಬೇಕು. ವಿಚಾರ ಎಷ್ಟೇ ಘನವಾದ್ದಿರಲಿ. ಕಲಾತ್ಮಕ ವಾಗಿರಬೇಕು. ಕತೆ, ಕಾವ್ಯ, ಕಲೆಗೆ ಇವೆಲ್ಲ ಮೂಲಭೂತ ಗುಮಗಳು. ಈ ಕಲಾತ್ಮಕತೆ ಹಳ್ಳಿಯಲ್ಲಿ ಹುಟ್ಟಿರಬಹುದು. ನಗರದಲ್ಲಿ ಮೂಡಿರಬಹುದು. ವೃತ್ತಿ, ಅರೆವೃತ್ತಿಯಲ್ಲೂ ಅರಳಿರಬಹುದು. ಯಾವುದೇ ರೆಪರ್ಟಿಯಲ್ಲಿ ಜನ್ಮ ತಾಳಿರಬಹುದು. ಅದಕ್ಕೆ ಸ್ಥಾನಮಾನದ ಹಂಗಿಲ್ಲ. ಆದರೆ ಸ್ಥಾನ ನೋಡಿ ಇವರಿಗೆ ಮಾನ ಇದೆ ಎಂದು ಜೋರು ಗಂಟಲಿನಲ್ಲಿ ಹೇಳುವ ಚಿಕ್ಕ ಬೌದ್ಧಿಕ ವಲಯ[?] ಬಹುಶಃ ಎಲ್ಲ ಕಾಲದಲ್ಲೂ ಇದೆಯೇನೋ. ಇದು ಒಂದು ರೀತಿಯ ಗಿಳಿ ಪಾಠ. ಹಲವರು ಇದನ್ನು ಅಪ್ರಜ್ಞಾಪೂರ್ವ ಕವಾಗಿಯೇ ಅನುಸರಿಸಿಬಿಡುತ್ತಾರೆ. ಅಂಥವರಲ್ಲಿ ನಿರ್ಲಕ್ಷಿತ ವಲಯದಿಂದ ಬಂದವರೂ ಇರುವುದು ವಿಪರ್ಯಾಸ.

ಅಂತೆಯೇ ಈ ಪತ್ರಿಕೆ ಕೆಲವರಿಗೆ ಮಾತ್ರ ಮಣೆ ಹಾಕುವ ಕೆಲಸ ಮಾಡುವುದಿಲ್ಲ. ಪ್ರತಿಭೆ, ಪರಿಶ್ರಮ ಇರುವ ಯಾರಿಗೇ ಆಗಲಿ ವೇದಿಕೆ ಕಲ್ಪಿಸುವ ಕೆಲಸ ಮಾಡುತ್ತದೆ. ಅಲಕ್ಷಿತರನ್ನು ತುಸು ಹೆಚ್ಚಾಗಿಯೇ ಒಳಗೊಳ್ಳುತ್ತದೆ. ಪತ್ರಿಕೆ ತನ್ನ ಘೋಷಿತ ಆಶಯಗಳಿಗೆ ಅನುಗುಣವಾಗಿ, ರಂಗಭೂಮಿಗೆ ಈಗಿರುವ ಪತ್ರಿಕೆಗಳು ಸಾಲವು. ಇನ್ನೂ ನಾಲ್ಕಾರು ಪತ್ರಿಕೆಗಳು ಮೂಡಿ ಬರಲಿ.

Home
News
Search
All Articles
Videos
About
%d bloggers like this:
Aakruti Kannada

FREE
VIEW