ಬಿ.ಎಸ್.ಮಧುಮತಿ ಯವರ ಅಪರೂಪದ ಕಾವ್ಯ ಗುಚ್ಛ
ನಿಮಗೆ ಗೊತ್ತಿರಬಹುದು. ಎಂ.ಕೆ ಇಂದಿರಾ ಅವರು ಮೊದಲ ಕಾದಂಬರಿಯನ್ನು ಪ್ರಕಟಿಸಿದ್ದು ತಮಗೆ ನಲವತ್ತು ವರ್ಷ ವಯಸ್ಸಾದ ನಂತರ. ತದನಂತರ ಆ ಪಕ್ವತೆಯ ಬರವಣಿಗೆಯಲ್ಲಿ ಮೂಡಿ ಬಂದದ್ದು ಹಲವಾರು ಅಪರೂಪದ ಕಾದಂಬರಿಗಳು. ಹಾಗೇ ಮಧುಮತಿಯವರು ಪ್ರಕಟಣೆಯ ಅವಸರಕ್ಕೆ ಬೀಳದೆ ಬಹು ತಾಳ್ಮೆಯ ದಿನಗಳನ್ನು ದೂಡಿ ಇದೀಗ ಕವನ ಸಂಗ್ರಹವೊಂದನ್ನು ಪ್ರೀತಿ ಪುಸ್ತಕ ಪ್ರಕಾಶನದ ಮೂಲಕ ಹೊರ ತಂದಿದ್ದಾರೆ. ಇದರ ಹೆಸರು- ನೆನಹು ತುಂಬಿ.
ಮುದ್ರಣವಂತೂ ಅತ್ಯಾಕರ್ಷಕವಾಗಿದ್ದು ಕೈಗೆ ಪುಸ್ತಕವನ್ನು ತಗೆದು ಕೊಳ್ಳಲು ಸಂತೋಷವಾಗುತ್ತದೆ. ಇದರ ಮದ್ರಣ, ಅಂದಗಾರಿಕೆಯ ಹಿಂದಿನ ಶ್ರಮವೆಲ್ಲಾ ಪತಿ ದೊಡ್ಡ ಹುಲ್ಲೂರು ರುಕ್ಕೋಜಿಯವರದು ಎಂದು ವಿನಯದಿಂದ ಮಧುಮತಿ ಹೇಳುತ್ತಾರೆ. ಇದಕ್ಕೆ ಡಾ. ಹೆಚ್.ಎಸ್. ವೆಂಕಟೇಶಮೂರ್ತಿಯವರು ಸುಂದರ ಬೆನ್ನುಡಿ ಬರೆದಿದ್ದಾರೆ. ಅವರ ನುಡಿಗಳನ್ನು ಇಲ್ಲಿ ಪ್ರತ್ಯೇಕವಾಗಿ ಕೊಡಲಾಗಿದೆ. ಮನಸ್ಸಿಗೆ ಹಿತ ಮತ್ತು ಮುದ ಕೊಡುವ ಅನೇಕ ಕವಿತೆಗಳು ಇಲ್ಲಿವೆ. ಮಧುಮತಿಯವರು ಬರೀ ಕತೆಗಾರರಲ್ಲ. ಕವಿಯಿತ್ರಿ ಯಾಗಿಯೂ ಇಲ್ಲಿ ಹೊರ ಹೊಮ್ಮಿದ್ದಾರೆ. ಪುಸ್ತಕಕ್ಕಿರುವ ಹಿರಿಯ ಕವಿ ವೆಂಕಟೇಶ ಮೂರ್ತಿಗಳ ಬೆನ್ನುಡಿಯನ್ನು ಒಮ್ಮೆ ಓದಿ. – ಸಂಪಾದಕ
ಬಿ.ಎಸ್.ಮಧುಮತಿಯವರನ್ನು ನಾನು ಅವರ ನವ ತಾರುಣ್ಯದ ಕಾಲದಿಂದಲೂ ಬಲ್ಲೆ. ಅವರದ್ದು ಸೂಕ್ಷ್ಮವಾದ ಮನಸ್ಸು. ಅಷ್ಟೇ ಸೂಕ್ಷ್ಮವಾದ ಮೆಲು ದನಿಯ ಭಾಷೆ. ಆ ಭಾಷೆಯ ಹಾಸು ಹೊಕ್ಕಲ್ಲಿ ಕವಿತೆ ಹೊಳಹು ಕಣ್ಣಾ ಮುಚ್ಚಾಲೆಯಾಡುತ್ತಿತ್ತು. ಅದು ಹುಲ್ಲೆಸಳ ಮೇಲಿನ ಹಿಮ ಬಿಂದುವಿನಲ್ಲಿ ಆಕಾಶವನ್ನು ಪ್ರತಿಫಲಿಸುವ ರೋಚಕ ಆಟ. ಹರೆಯದ ದಿನಗಳ ಆ ಆಟ ವಯಸ್ಸಾಗುತ್ತಾ ಮಧುಮತಿಗೆ ಮರತೇ ಹೋಗಿರಬಹುದು ಅಂದುಕೊಳ್ಳುತ್ತಿರುವಾಗ ಅವರು ತಮ್ಮ ಕವಿತೆಗಳ ಮೂಲಕ ಮತ್ತೆ ಪ್ರಕಟ
ಗೊಳ್ಳುತ್ತಿದ್ದಾರೆ.
ಬದುಕಿನ ಕೊನೆಯಿರದ ಸಂಗ್ರಾಮದ ನಡುವೆಯೂ ಧ್ಯಾನಸ್ಥ ಗಳಿಗೆಗಳನ್ನು ಕಾಣಬಲ್ಲ ಕಣ್ಣು ಮಧುಮತಿಗೆ ಉಂಟು. ಆ ರಾತ್ರಿ, ಕತೆ ಹೇಳು ಬಾ, ಮುಗ್ಧತೆ, ಅಪ್ಪ, ಕ್ಯಾಲೆಂಡರ್ ವಂಡರ್, ಬಿಟ್ರೇಯಲ್, ಆಟ ಕೊಡಿ, – ನಮ್ಮ ಓದನ್ನು ಆಕ್ರಮಿಸುವ ಕಸುವು ಉಳ್ಳ ಕವಿತೆಗಳು. ಸಹಜತೆಯೇ ಅವುಗಳ ಸೌಂದರ್ಯ. ಅಲ್ಲಿ ವಿಷಾದವೂ ಒಂದು ಆಲಾಪದಂತಿದೆ.
– ಡಾ. ಎಚ್.ಎಸ್.ವಂಕಟೇಶಮೂರ್ತಿ
#ಪಸತಕ