ಹೂಲಿ ಶೇಖರ ಅವರು ಉತ್ತರ ಕನ್ನಡ ಜಿಲ್ಲೆಗೂ ಭಾವ. ಬೆಳಗಾವಿ ಜಿಲ್ಲೆಗೂ ಭಾವ. ಇವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯಲ್ಲಾದರೂ, ಇವರ ಜೀವನದ ಶೇಕಡ 50ರಷ್ಟು ಭಾಗ ಕಳೆದಿದ್ದು ಉತ್ತರ ಕನ್ನಡದಲ್ಲೇ. ಹೀಗಾಗಿ ಉತ್ತರ ಕನ್ನಡದ ಮಟ್ಟಿಗೆ ಇವರನ್ನು ಮನೆ ಅಳಿಯ ಎಂದರೂ ತಪ್ಪಿಲ್ಲ. ಪತ್ರಕರ್ತರಾದ ರಾಜು ಅಡಕಳ್ಳಿ ಅವರು ಹೂಲಿಶೇಖರ್ ಅವರ ಸಾಧನೆ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ…
ದಾಂಡೇಲಿ- ಸೂಪಾ ಕಡೆಯ (ಅ) ಭಯಾರಣ್ಯದಲ್ಲಿ ಆಗಾಗ ಹುಲಿ ಕಾಣಿಸಿಕೊಳ್ಳುವುದುಂಟು. ಹಾಗೆಯೇ ಅಲ್ಲಿಯ ಸಾಂಸ್ಕೃತಿಕ ನೆಲದಲ್ಲೂ ಹುಲಿಯಂತೆ ವಿರಾಜಿಸಿರುವವರುಂಟು. ಇವರೇ ನಮ್ಮ ಹೂಲಿ ಶೇಖರ್. ಸಾಹಿತ್ಯ, ನಾಟಕ, ರಂಗ ಸಂಘಟನೆ, ಸಿನಿಮಾ, ಟಿವಿ ಧಾರಾವಾಹಿ, ಸರ್ಕಾರಿ ಕೆಲಸ… ಹೀಗೆ ಈ ಹೂಲಿಯವರ ಹೊಲದಲ್ಲಿ ಅನೇಕ ಕ್ರಿಯಾಶೀಲ ಬೆಳೆಗಳು !
ಉತ್ತರ ಕನ್ನಡದ ದಾಂಡೇಲಿ ಅಣಶಿ ಸುತ್ತಮುತ್ತಲ ಪ್ರದೇಶಗಳೆಂದರೆ ಅದು ಘೋರಾಕಾರ ಅರಣ್ಯ. ಸಾಲದುದಕ್ಕೆ ಅಲ್ಲಿ ಹಲವು ವಿದ್ಯುತ್ ಉತ್ಪಾದನೆಯ ಅಣೆಕಟ್ಟುಗಳ ಆಟಾಟೋಪದಲ್ಲಿ ಮುಳುಗಿ ಅಪಾರ ಗಿಡಮರಗಳು ಜಲ ಸ್ಮಶಾನಗಳಾಗಿ ಶೂನ್ಯ ಸೃಷ್ಟಿಸಿವೆ. ಇಂತಹ ನಿರ್ವಾತದಲ್ಲಿ ಪಕ್ಕದ ಸವದತ್ತಿಯಿಂದ ಇಲ್ಲಿಗೆ ಕಿಂದರಿ ಜೋಗಿಯಂತೆ ಬಂದು, ಗೆಜ್ಜೆ ಕಟ್ಟಿ, ಹೆಜ್ಜೆ ಹಾಕಿ, ಹಾಡಿನಲ್ಲಿ ಕಾಡಿನಲ್ಲಿ ಜೀವನ ಪ್ರೀತಿ ಬೆರೆಸಿ, ಅಲ್ಲಿಯ ಜನರಲ್ಲಿ ಉತ್ಸಾಹದ ರೆಕ್ಕೆ ಪುಕ್ಕ ಮೂಡುವಂತೆ ಮಾಡಿದ ಗಾರುಡಿಗ ಈ ಹೂಲಿ ಶೇಖರ್. ಇವರು ಉತ್ತರ ಕನ್ನಡ ಜಿಲ್ಲೆಯಲ್ಲಿದ್ದ 35 ವರ್ಷಗಳೆಂದರೆ ಅದೊಂದು ಹೊಸ ರಂಗ ಪರ್ವ. ಇವರ ಪ್ರಭಾವಳಿಯಲ್ಲಿದ್ದವರಿಗೆ ಅದು ಚಂದದ ಗರ್ವ.

ಸೂಪಾ, ಬೊಮ್ಮನಹಳ್ಳಿ, ತಟ್ಟಿಹಳ್ಳಿ, ಕದ್ರಾ, ಕುಂಬಾರವಾಡ ಅಣೆಕಟ್ಟುಗಳ ನಿರ್ಮಾಣ ಯೋಜನೆಯಲ್ಲಿ ಮತ್ತು ನಾಗಝರಿ ವಿದ್ಯುದಾಗಾರ ನಿರ್ಮಾಣ ಕಾಮಗಾರಿಗಳಲ್ಲಿ ಕೆಲಸಕ್ಕೆ ಎಂದು ಇವರು ತಮ್ಮ ಹುಟ್ಟೂರು ಸವದತ್ತಿಯ ಹೂಲಿಯನ್ನು ಬಿಟ್ಟು ಬಂದಿದ್ದರಿಂದ ಸವದತ್ತಿ ಯಲ್ಲಮ್ಮನಿಗೆ ಲಾಸ್ ಆದರೂ, ದಾಂಡೇಲಿಯ ದಾಂಡೇಲಪ್ಪನಿಗೆ ಪ್ರಾಫಿಟ್ ಆಗಿದ್ದಂತೂ ಸತ್ಯ. ಏಕೆಂದರೆ ಇವರು ಹೋದೆಡೆಯಲ್ಲೆಲ್ಲಾ ಕಲೆಯ ಲೋಬಾನು ಹಚ್ಚಿಬಿಡುತ್ತಾರೆ. ಆದರೆ ಯಾವತ್ತೂ ಕೂಡ ಅಲ್ಲಿರುವುದು ನಮ್ಮನೆ, ಇಲ್ಲಿರುವುದು ಸುಮ್ಮನೆ ಎಂದು ಇವರು ಅಲವತ್ತುಕೊಂಡವರಲ್ಲ.
ಇವರದ್ದು ಸರಕಾರಿ ಕೆಲಸವಾಗಿತ್ತಾದರೂ, ಇವರು ವ್ಯಕ್ತಿಯಾಗಿ ಶಕ್ತಿಯಾಗಿ, ತಮಗೆ ತಾವೇ ಗುರುವಾಗಿ ಅನೇಕ ವಿಚಾರ ಪ್ರಚೋದಕ ನಾಟಕಗಳನ್ನು ಬರೆದರು. ಅಂಬಿಕಾ ನಗರದಂತಹ ದಂಡಕಾರಣ್ಯದಲ್ಲೂ ಜೋಕುಮಾರಸ್ವಾಮಿ ಎಂಬ ಬಳಗ ಕಟ್ಟಿಕೊಂಡು, ಕಾರುಣ್ಯ ಮೂರ್ತಿಯಾಗಿ ಕಲೆಯ ತಂಬೂರಿ ಮೀಟಿದರು. ಸಾಕ್ಷರತಾ ಆಂದೋಲನ, ಆ ಜಾಥಾ, ಈ ಜಾತ್ರೆ ಎನ್ನುತ್ತಾ ಎಲ್ಲ ಕಡೆಯೂ ಕಲಾ ಪ್ರದರ್ಶನಗಳನ್ನು ಅಥವಾ ನಾಟಕಗಳನ್ನು ತೂರಿಸುತ್ತಾ , ತೋರಿಸುತ್ತಾ, ಸರ್ಕಸ್ಸಿನ ರಿಂಗ್ ಮಾಸ್ಟರ್ ರೀತಿಯಲ್ಲಿ ಮರಿ ಕಲಾವಿದರಿಗೆ ತರಬೇತಿ ನೀಡುತ್ತಾ, ಅವರ ಕಲಿಕೆಗೆ ಹುರಿದುಂಬಿಸುತ್ತಾ, ಹುರಿದುಂಬಿಯಾದವರು ಇವರು.
ಒಂದು ಜಿಂಕೆ ಬಂದರೆ, ಹಿಂದೆ ನೂರೆಂಟು ಜಿಂಕೆಗಳು ಬರುವಂತೆ, ತಮ್ಮ ಜೊತೆ ನೂರಾರು ಮಂದಿಯ ತಂಡ ಕಟ್ಟಿಕೊಂಡು ಅವರಿಗೆ ನಾಟಕದ ಆಟ ಪಾಠ ಕಲಿಸಿದರು. ತಮ್ಮ ಬಿಡುವಿನ ಅವಧಿಯಲ್ಲಿ ಇಸ್ಪೀಟಿನ ಮಂಡಲದಲ್ಲಿ ಕಾಲ ಕಳೆಯುತ್ತಿದ್ದವರನ್ನು ರಂಗ ಮಂಟಪಕ್ಕೆ ಕರೆತಂದು ನಾಟಕ, ಕುಣಿತಗಳ ಕಮಂಡಲದಲ್ಲಿ ಅದ್ದಿ ಗುದ್ದಿ ಕಲಾವಿದರನ್ನಾಗಿ ಮಾಡಿದ್ದು ಇವರ ಅಮೋಘ ಸಾಧನೆ. ಅಂಬಿಕಾನಗರದಂತಹ ನಮ್ಮ ರಾಜ್ಯದ ಮೂಲೆ ಪ್ರದೇಶ, ಅದರಲ್ಲೂ ದುರ್ಗಮ ಕಾಡು ಕಣಿವೆಯಲ್ಲಿ ಜೋಕುಮಾರ ಸ್ವಾಮಿ ಕಲಾ ಬಳಗ ಕಟ್ಟಿ, 25 ವರ್ಷಗಳ ಕಾಲ ಅದರ ಅಧ್ಯಕ್ಷರಾಗಿ ಕೆಲಸ ಮಾಡಿದ್ದು, ಕನ್ನಡ ಸಾಹಿತ್ಯ ಸಂಘ ಸ್ಥಾಪಿಸಿದ್ದು, ತನ್ಮೂಲಕ ಅನೇಕ ಯುವಕ ಯುವತಿಯರಿಗೆ ರಂಗಾಭರಣ ತೊಡಿಸಿ, ಅವರ ಬದುಕಿನಲ್ಲಿ ಹೊಸ ಹೊಳಪು ಮೂಡಿಸಿದ ಶ್ರೇಯಸ್ಸು ಇವರದ್ದು. ಇದರಿಂದಾಗಿ ಶೇಖರರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ನಾಟಕ ಅಕಾಡೆಮಿ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ ಮುಂತಾದ ಅನೇಕ ಪುರಸ್ಕಾರಗಳು ತಾನಾಗಿಯೇ ಒಲಿದು ಬರುವಂತಾದವು.

ಹಳೆಯ ಅಂಕಲಿಪಿಯ ತುಂಬೆಲ್ಲ ಅಕ್ಷರಗಳೇ ತುಂಬಿಕೊಂಡಿರುವಂತೆ, ಹೂಲಿಯವರ ಸಾಧನೆಯ ಪಟ್ಟಿಯಲ್ಲಿ ಅನೇಕ ಸ್ವ ರಚಿತ ಪ್ರಸಿದ್ಧ ನಾಟಕಗಳೇ ತುಂಬಿಕೊಂಡು ಇವರು ಕೇವಲ ಹೂಲಿ ಶೇಖರ್ ಅಷ್ಟೇ ಅಲ್ಲ, ಕ್ರಿಯಾಶೀಲತೆಯಲ್ಲಿ ಹೋಲಿ ಶೇಖರ್ ಕೂಡ ಆಗಿ ಮಾಗಿದ್ದಾರೆ. ಇವರ ನಾಟಕ ಮತ್ತು ಸಾಹಿತ್ಯದ ಬರವಣಿಗೆ ಎಂದರೆ ಅದು ಮೆರವಣಿಗೆ. ಕಾರಣ ಇವರು ಬರೆದಿದ್ದು ಕೊಚ್ಚಿ ನವಾಬನ ಮದುವೆಯ ದಿಬ್ಬಣದಷ್ಟು ದೀರ್ಘ. ವಿಸ್ತಾರ.
ಇವರ ನಾಟಕಗಳು ವಿಚಾರ ಪ್ರಚೋದಕ. ಜೊತೆಗೆ ಜವಾರಿ ರುಚಿ. ಹಾವು ಹರಿದಾಡತಾವ, ಅರಗಿನ ಬೆಟ್ಟ, ನಿರಪರಾಧಿ ಕಳ್ಳ, ಬಡತನದ ಭೂತ, ಅಮಟೂರು ಬಾಳಪ್ಪ, ಮೌನ ತಪಸ್ವಿ, ಜೈ ಜವಾನ್ ಜೈ ಕಿಸಾನ್, ರಾಕ್ಷಸ, ದಫನ್, ಗಾಂಧಿ ನಗರ, ಹಲಗಲಿ ಬೇಡರ ದಂಗೆ, ಸತ್ಯವತಿ, ಬಂಟ ಬಾಳಪ್ಪ, ರಂಗ ಪುರಂದರ, ಅಹಿರಾವಣ ಮಹಿರಾವಣ, ಪೇಯಿಂಗ್ ಗೆಸ್ಟ್, ರಾಣಿ ಅದಿಲ್ ಶಾಹ್, ಭವ್ಯ ಕರ್ನಾಟಕ, ಬೆಕುವ ಮುಂತಾದ ಅರ್ಥಪೂರ್ಣ ನಾಟಕಗಳನ್ನು ಇವರು ಬರೆದು ಆಡಿಸಿದರು. ಇವರ ಅನೇಕ ನಾಟಕಗಳನ್ನು ಎನ್. ಎಸ್. ಡಿ, ಸಮುದಾಯ, ಬೆನಕ ಮುಂತಾದ ಪ್ರಸಿದ್ಧ ತಂಡಗಳು ದೇಶದಾದ್ಯಂತ ಪ್ರದರ್ಶಿಸಿವೆ. ಖ್ಯಾತ ರಂಗ ನಿರ್ದೇಶಕರಾದ ಸಿ. ಬಸವಲಿಂಗಯ್ಯ, ಬಿ ಜಯಶ್ರೀ, ಮಾಲತೇಶ ಬಡಿಗೇರ, ಎಸ್. ಮಾಲತಿ, ಕೃಷ್ಣಮೂರ್ತಿ ಕವತಾರ ಮುಂತಾದ ಮಹಾಮಹಿಮರ ನಿರ್ದೇಶನದಲ್ಲಿ ಈ ಹೂಲಿಯವರ ನಾಟಕಗಳು ಪ್ರದರ್ಶನ ಕಂಡಿರುವುದು ಗಮನಾರ್ಹ.

ಇವರ ಕೆಲವು ನಾಟಕಗಳು ಹಿಂದಿ, ತಮಿಳು, ತುಳು, ಮರಾಠಿ ಭಾಷೆಗಳಿಗೂ ಅನುವಾದಗೊಂಡಿವೆ. ಮಕ್ಕಳ ನಾಟಕ ಮತ್ತು ಬೀದಿ ನಾಟಕ ರಚನೆಯಲ್ಲಿಯೂ ಹೂಲಿಯವರದ್ದು ಸಿದ್ದಹಸ್ತ. ಭೂತ ಬಂತು ಭೂತ, ಮಂತ್ರದ ತಾಯತ, ಇಲಿಯಪ್ಪ,ಚಂಡಕ ಪಿಂಡಕ ಪುರಾಣ, ಮಹಾನ್ ಭಾರತ, ಇಮ್ಮಡಿ ಪುಲಕೇಶಿ ಮುಂತಾದ ನಾಟಕಗಳನ್ನು ಬರೆದು, ನಿರ್ದೇಶಿಸಿ, ಮಕ್ಕಳಿಂದ ಆಡಿಸಿ, ಅವರಿಗೆ ಖುಷಿಯ ಚಾಕಲೇಟ್ ಕೊಡಿಸಿದ ಸಾಹಸ ಹೂಲಿಯವರದ್ದು.
ಜನ ಜಾಗೃತಿಗಾಗಿ ಇವರು ರಚಿಸಿದ ಬೀದಿ ನಾಟಕಗಳು 700 ಕ್ಕಿಂತಲೂ ಹೆಚ್ಚು ಪ್ರದರ್ಶನಗಳನ್ನು ಕಂಡಿವೆ. ಸರ್ಕಾರದ ಬೇರೆ ಬೇರೆ ಇಲಾಖೆಗಳ ತಂಡಗಳೂ ಜನ ಜಾಗೃತಿಗಾಗಿ ಇವರ ನಾಟಕಗಳನ್ನೇ ಆಯ್ಕೆ ಮಾಡಿಕೊಂಡಿದ್ದವು. ಆಕಾಶವಾಣಿಗಾಗಿ 13ಕ್ಕೂ ಹೆಚ್ಚು ನಾಟಕಗಳನ್ನು ಬರೆದಿರುವ ನಾಟಕಕಾರರೂ ಇವರು. ರಂಗಭೂಮಿಯಲ್ಲಿ ಹೂಲಿಯವರು ಆಲ್ರೌಂಡರ್. ನಾಟಕ ರಚನೆಯ ಜೊತೆಗೆ, ನಿರ್ದೇಶನ, ರಂಗ ನಟನೆ, ರಂಗ ವಿನ್ಯಾಸ ಮತ್ತು ಮೇಕಪ್ ಕಲಾವಿದರಾಗಿಯೂ ಇವರು ಅಚ್ಚುಕಟ್ಟಾಗಿ ಕೆಲಸ ಮಾಡುವ ರಂಗಕರ್ಮಿ. ಕುಳಗಿ, ಗೌಳಿವಾಡ ಮುಂತಾದ ತೀರಾ ಹಿಂದುಳಿದ ಹಳ್ಳಿಗಳಲ್ಲೂ ಕೂಡ ರಂಗ ಶಿಬಿರ ನಡಸಿ ರಂಗ ಪತಾಕೆ ಹಾರಿಸಿದ ಸಾಧನೆ ಇವರದ್ದು.
ಕಾಳಿ ಕಣಿವೆಯ ಒಡಲಲ್ಲಿ ನಿರ್ಲಿಪ್ತವಾಗಿದ್ದರೂ, ಶೇಖರ್ ಅವರು ನಿರಂತರವಾಗಿ ಸಾಹಿತ್ಯ ರಚನೆಯಲ್ಲಿ ಕ್ರಿಯಾಶೀಲರಾಗಿ 13 ಕಾದಂಬರಿಗಳನ್ನು ಮತ್ತು ಇನ್ನೂರಕ್ಕೂ ಹೆಚ್ಚು ಕಥೆಗಳನ್ನು ಪ್ರಕಟಿಸಿ ” ಕಾಳಿ ಕಣಿವೆಯ ಕಾಳಿದಾಸ”ನಾಗಿದ್ದಾರೆ. ಹಲವಾರು ಟಿವಿ ಧಾರಾವಾಹಿಗಳ ಕಥೆಗಾರರಾಗಿ, ಸಂಭಾಷಣೆಕಾರರಾಗಿ ತಮ್ಮ ಛಾಪು ಮೂಡಿಸಿದ್ದಾರೆ. ವ್ಯಾಸ ಮಹರ್ಷಿ ಮಹಾ ಭಾರತ ಬರೆದಂತೆ, ಇವರು ಮೂಡಲ ಮನೆ ಧಾರಾವಾಹಿಗಂತೂ ಒಂದು ಲಕ್ಷಕ್ಕಿಂತಲೂ ಹೆಚ್ಚು ಪುಟಗಳನ್ನು ಬರೆದು ಬರೆದು ಸೈ ಎನ್ನಿಸಿಕೊಂಡಿದ್ದರು.

ವಿಚಿತ್ರವೆಂದರೆ ಗೀಗಿ ಪದ ಮತ್ತು ಲಾವಣಿಗಳನ್ನು ಇವರು ರಚಿಸಿ ಹಾಡಿದಂತಹ ಆಶು ಕವಿ. ಎಸ್.ಎಂ. ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಅವರ ಮಾಧ್ಯಮ ಮತ್ತು ಪ್ರಚಾರ ವಿಭಾಗದಲ್ಲಿ ಕೆಲಸ ಮಾಡಿ ಇವರು ಹೆಸರು ಮಾಡಿದ್ದರು. ಹೀಗೆ ಇವರಿಗಿರುವುದು ಒಂದು ಮುಖವಾದರೂ, ಇವರ ಕೆಲಸಗಳಿಗೆ ಹಲವು ಮುಖಗಳು. ಹಾಗಂತ ಇವರೇನೂ ಯಾವುದೇ ವಿಶ್ವವಿದ್ಯಾಲಯದ ಪ್ರೊಫೆಸರ್ ಏನಲ್ಲ. ಕರ್ನಾಟಕ ವಿದ್ಯುತ್ ನಿಗಮದ ಪವರ್ ಹೌಸ್ ವಿಭಾಗದಲ್ಲಿ ಉದ್ಯೋಗದಲ್ಲಿದ್ದರೂ, ಸಾಂಸ್ಕೃತಿಕವಾಗಿ ತಾವೆಷ್ಟು ಪವರ್ ಫುಲ್ ಎಂಬುದನ್ನು ಕಲಾ ಜಗತ್ತಿಗೆ ತೋರಿಸಿಕೊಟ್ಟ ಅಪರೂಪದ ರಂಗ ಮಾಂತ್ರಿಕ ಇವರು.
ಹೂಲಿಯವರಿಗೆ ಈಗ 70 ದಾಟಿದ್ದರೂ ಕಂಬದ ಮ್ಯಾಲಿನ ಗೊಂಬೆಯಂತೆ ಯಾವತ್ತೂ ಇವರು ಸುಮ್ಮನೆ ಕೂರುವವರಲ್ಲ. ಬದಲಿಗೆ ಅರಳಿ ಮರದ ರೆಂಬೆ ಕೊಂಬೆಯಂತೆ ಸದಾ ಚುರುಕಿನಿಂದ ತೊನೆದಾಡುವವರು. ಈ ರೆಂಬಿ ಕೊಂಬಿಯ ಮೇಲೆ ಹಕ್ಕಿ, ಪಿಕ್ಕಿಗಳಂತೆ ಕುಳಿತು, ಕುಣಿದು, ಪುಳುಕಾಡಿ ಜೀವನವನ್ನು ಸಂಭ್ರಮಿಸಿದ ಮಂದಿಯೆಷ್ಟೋ. ಇದು ಹೆಂಡತಿಗೆ ಲೆಕ್ಕಕ್ಕೇ ಸಿಗದ ಗಂಡನ ಬ್ಯಾಂಕ್ ಪಾಸಬುಕ್ಕಿನಂತೆ.

ಹೀಗೆ ಸೃಜನಶೀಲತೆಯಲ್ಲಿ ಈ ಹೂಲಿ ನಿಜಕ್ಕೂ ಮೂಗುದಾರವಿಲ್ಲದ ಗೂಳಿ. ಇಷ್ಟೆಲ್ಲವಿದ್ದರೂ ಶೇಖರ್ ಅವರು ತಮ್ಮ ಬಗ್ಗೆ ತಾವು ಬಣ್ಣದ ತಗಡಿನ ತುತ್ತೂರಿ ಊದಿಕೊಳ್ಳುವ ಆಸಾಮಿಯಲ್ಲ. ತಕ್ಕಡಿಯಲ್ಲಿ ತೂಕ ಹಾಕಿದಂತೆ ಅಳತೆಶೀರು ಮಾತನಾಡುವುದರಿಂದ ಇವರು ತಾಳ-ತಂತು ಎಂದಿಗೂ ತಪ್ಪುವುದಿಲ್ಲ. ಈ ಬಗ್ಗೆ ಹೆಚ್ಚಿನದನ್ನು ತಿಳಿದುಕೊಳ್ಳಬೇಕೆಂದರೆ, ಶೇಖರ್ ಅವರ ಇಷ್ಟ ಮಿತ್ರರು ಸೇರಿ ಬರೆದು ಪ್ರಕಟಿಸಿರುವ ಹೂಲಿ ರಂಗ ಶಿಖರ ಎಂಬ ಅಭಿನಂದನಾ ಗ್ರಂಥವನ್ನು ಓದಬೇಕು.
ಹೂಲಿಯವರ ವ್ಯಕ್ತಿತ್ವವನ್ನು ಗಟ್ಟಿಯಾಗಿ ಬೆಳೆಸುವಲ್ಲಿ ಉತ್ತರ ಕರ್ನಾಟಕದ ಜಾನಪದದ ಹಿನ್ನೆಲೆ, ದೊಡ್ಡಾಟ, ಸಣ್ಣಾಟ, ದಪ್ಪಿ ನಾಟ, ಬಯಲಾಟ, ಶ್ರೀಕೃಷ್ಣ ಪಾರಿಜಾತ, ಭಜನೆ, ನೃತ್ಯ ಗಾಯನಗಳ ಜೊತೆಗಿನ ಗ್ರಾಮ್ಯ ಬದುಕು ಹೇಗೆ ಇವರ ಮೇಲೆ ಗಾಢ ಮತ್ತು ಗೂಢ ಪ್ರಭಾವ ಬೀರಿದೆ ಎಂಬುದು ಇವರ ಅಂತರಂಗದಲ್ಲಿ ಬೆಳೆದ ಕಲಾ ಪ್ರಜ್ಞೆಯನ್ನು ಅವಲೋಕಿಸಿದರೆ ಅರ್ಥವಾಗುತ್ತದೆ.
ಬಾಲ್ಯದಲ್ಲಿ ಇವರು ತಮ್ಮೂರು ಹೂಲಿಯಲ್ಲಿ ದನ ಎಮ್ಮೆ ಕಾಯ್ದವರೇ. ನಾಲ್ಕಾರು ಬಾರಿ ಚೇಳಿನಿಂದ ಕಚ್ಚಿಸಿಕೊಂಡ ಶ್ರೀಮಂತ ಅನುಭವವೂ ಇವರಿಗಿದೆಯಂತೆ. ಈ ಎಲ್ಲಾ ಕಾರಣಗಳಿಂದಾಗಿಯೇ ಹಳ್ಳಿ ಜಾನಪದದ ತಿಳಿ ಎಸರನ್ನು ತಮ್ಮ ನಾಟಕಕ್ಕೆ ಬಸಿದುಕೊಂಡು ಮತ್ತಷ್ಟು ಆಕರ್ಷಕವಾಗಿಸಲು ಶೇಖರ್ ಅವರಿಗೆ ಸಾಧ್ಯವಾಗಿದೆ. ಇವರ ಮಗಳು ಶಾಲಿನಿ ಹೂಲಿ ಪ್ರದೀಪ್ ಕೂಡ ಅಪ್ಪ ನಾಟಿ ಮಾಡಿಟ್ಟಿದ್ದ ಸಾಹಿತ್ಯದ ಗಟ್ಟಿ ನೆಲದಲ್ಲೇ ಬೆಳೆಯುತ್ತಿರುವ ಪ್ರತಿಭೆಯ ಫಸಲು. ಇವರ ಪದ್ದಣ ಮನೋರಮೆ ಕೃತಿಯನ್ನು ಓದಬೇಕು. ನಾಗರ ಪಂಚಮಿಯಲ್ಲಿ ಮದರಂಗಿ ಹಚ್ಚಿಕೊಂಡು ಜೋಕಾಲಿಯಲ್ಲಿ ಜೀಕಿದಂತಹ ಸುಮಧುರ ಅನುಭೂತಿ ಇವರ ಬರಹಗಳ ಓದಿನ ತೆಕ್ಕೆಯಲ್ಲಿ ಸಿಗುವುದು ಸಾಧ್ಯ.

ಕಥೆ, ಕವನ, ಪ್ರಬಂಧ ಹೀಗೆ ಸಾಹಿತ್ಯದ ವಿಭಿನ್ನ ಪ್ರಕಾರಗಳಲ್ಲಿ ಸಂಚು ಹೂಡಿ, ಕೆಂಚಾಗಿ ಈ ಮರಿ ಹೂಲಿ ಶಾಲಿನಿ ಬರೆಯುವುದರಿಂದ, ಪುಂಡಿ ನಾರಿನಂತೆ ವಸ್ತು ವಿಷಯಗಳನ್ನು ಹಿಗ್ಗಿಸುವ ಅಭಿವ್ಯಕ್ತಿಯಂತಾಗಿ, ಓದುಗರ ಕುತೂಹಲಕ್ಕೆ ಹೆಚ್ಚಿನ ಕಾವು ಕೊಡುವುದು ಸಾಧ್ಯವಾಗಿದೆ.
ಬೆಂಗಳೂರಿನಲ್ಲಿ ತಮ್ಮ ಸ್ವಂತ ಆಕೃತಿ ಪುಸ್ತಕ ಪ್ರಕಾಶನವನ್ನು ಕೂಡ ಅಚ್ಚುಕಟ್ಟಾಗಿ ಇವರು ನಡೆಸುತ್ತಾ, ಅನೇಕ ಲೇಖಕರಿಗೆ ಪ್ರೋತ್ಸಾಹ ನೀಡುತ್ತಿರುವ ಪುಣ್ಯಾತ್ಗಿತ್ತಿಯೂ ಇವರಾಗಿದ್ದಾರೆ. ಶೇಖರ್ ಅವರ ಇನ್ನೊಬ್ಬ ಮಗಳು ನಂದಿನಿ ಸ್ವಂತ ಬರಹಕ್ಕಿಂತಲೂ ಹೆಚ್ಚಿನ ಓದಿನಲ್ಲೇ ತಲ್ಲೀನರಾಗಿರುವವರು. ಇವರ ಅವ್ವ ಕಾಶಮ್ಮ ಹೂಲಿಯವರು ಮಕ್ಕಳ, ಮೊಮ್ಮಕ್ಕಳ ಸಂತೋಷವೇ ತಮ್ಮ ಸಂತೋಷವೆಂಬ ಸಿದ್ಧಾಂತ ಇಟ್ಟುಕೊಂಡಿರುವ ಮಹಾ ತಾಯಿ.
ಇವರ ಬಗ್ಗೆ ಒಂದು ಜೋಕ್ : ಹೂಲಿಯವರು ಉತ್ತರ ಕನ್ನಡ ಜಿಲ್ಲೆಗೂ ಭಾವ. ಬೆಳಗಾವಿ ಜಿಲ್ಲೆಗೂ ಭಾವ. ಇವರು ಹುಟ್ಟಿದ್ದು ಬೆಳಗಾವಿ ಜಿಲ್ಲೆಯಲ್ಲಾದರೂ, ಇವರ ಜೀವನದ ಶೇಕಡ 50ರಷ್ಟು ಭಾಗ ಕಳೆದಿದ್ದು ಉತ್ತರ ಕನ್ನಡದಲ್ಲೇ. ಹೀಗಾಗಿ ಉತ್ತರ ಕನ್ನಡದ ಮಟ್ಟಿಗೆ ಇವರನ್ನು ಮನೆ ಅಳಿಯ ಎಂದರೂ ತಪ್ಪಿಲ್ಲ.
- ರಾಜು ಅಡಕಳ್ಳಿ – ಪತ್ರಕರ್ತರು, ಲೋಕ ಧ್ವನಿ ‘ವ್ಯಕ್ತಿ ಶಕ್ತಿ’ ಅಂಕಣ, ಬೆಂಗಳೂರು.
