ಯಾವ ಹಾವು ಕಾರಣವಿಲ್ಲದೆ ಕಚ್ಚೋಲ್ಲ, ಯಾವ ಹಸು ಕೂಡ ಕಾರಣವಿಲ್ಲದೆ ಗುದ್ದಲ್ಲ. ನಾಯಿ ಕೂಡಾ ಕಾರಣವಿಲ್ಲದೆ ಕಚ್ಚೋಲ್ಲ…ಅವುಗಳ ಸ್ವಭಾವ ಅರ್ಥ ಮಾಡಿಕೊಳ್ಳಬೇಕು ಎನ್ನುತ್ತಾರೆ ಸಮಾಜಸೇವಕರು ಹಾಗೂ ಪ್ರಾಣಿ ಸಂವರಕ್ಷಕರಾದ ರವಿಕುಮಾರ್ ಎಂ ಗೌಡ ಅವರು, ಅವರ ಜೀವನದ ಅನುಭವವನ್ನು ತಿಳಿಸುವ ಸಣ್ಣ ಪ್ರಯತ್ನ…ತಪ್ಪದೆ ಮುಂದೆ ಓದಿ…
ಹಾವು ಎಂದರೆ ಎಲ್ಲರಿಗೂ ಭಯ. ಅದರಲ್ಲಿಯೂ ನಾಗರಹಾವು, ಕೊಳಕು ಮಂಡಲದಂತಹ ವಿಷಕಾರಿ ಹಾವುಗಳನ್ನು ದೂರದಿಂದ ನೋಡಿದರಯೇ ನಮ್ಮ ಜೀವ ಬಾಯಲ್ಲಿ ಬಂದಂತಾಗುವುದು. ಹೀಗಿರುವಾಗ ಹಾವು ಹಿಡಿಯುವವರ ಗುಂಡಿಗೆ ಎಷ್ಟು ಗಟ್ಟಿ ಇರಬೇಕಲ್ಲವೇ?. ತಮ್ಮ ಜೀವದ ಹಂಗು ತೊರೆದು ಯಾವುದೇ ಭಯವಿಲ್ಲದೆ ಹಾವು ಹಿಡಿಯುವವರು ಸಾಕಷ್ಟು ಜನ ನಮ್ಮ ನಡುವೆ ಇದ್ದಾರೆ. ಬಹುತೇಕರು ಹಾವು ಹಿಡಿಯುವುದನ್ನೇ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಇದೊಂದು ಸಮಾಜಸೇವೆ ಎಂದು ಪರಿಗಣಿಸಿದವರು ಬಹಳ ಕಮ್ಮಿ.

ಆದರೆ ರವಿಕುಮಾರ್ ಎಂ ಗೌಡ ಅವರು ಯಾರಿಂದಲೂ ಒಂದು ರೂಪಾಯಿಯನ್ನು ನಿರೀಕ್ಷಿಸದೆ ಹಾವು ಹಿಡಿಯುತ್ತಾರೆ.ಅದು ಯಾವುದೇ ಹಾವಾಗಿರಲಿ, ಯಾವುದೇ ಸಮಯವಾಗಿರಲಿ… ಯಾರೇ ಕರೆ ಮಾಡಿ ಹಾವು ಇದೆ, ದಯವಿಟ್ಟು ಬನ್ನಿ… ಎಂದರೆ ಸಾಕು ರವಿಕುಮಾರ್ ಅವರು ಅಲ್ಲಿ ಹಾಜರ್ ಇರುತ್ತಾರೆ. ಅವರು ಸಾರ್ವಜನಿಕರಿಗೆ ಹಾವಿನ ಕುರಿತು ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ “ಎಲ್ಲಿಯೇ ಹಾವುಗಳು ಕಂಡರೆ ತೊಂದರೆ ಕೊಡಬೇಡಿ, ಸಾಯಿಸಬೇಡಿ. ಆ ಸಮಯದಲ್ಲಿ ನನ್ನನ್ನು ಕರೆಯಿರಿ. ನಾನು ಅದನ್ನು ಹಿಡಿದು ಸುರಕ್ಷಿತ ಸ್ಥಳಕ್ಕೆ ಕಳಿಸುತ್ತೇನೆ”… ಎಂದು ಎಲ್ಲರಲ್ಲೂ ವಿನಂತಿಸಿ ಕೊಳ್ಳುತ್ತಾರೆ.
ಎಂತಹ ವಿಷಕಾರಿ ಹಾವಾದರು ಅವರಿಗೆ ಅವುಗಳು ಚಿನ್ನ, ಬಂಗಾರಿಗಳೇ. ಹಾವನ್ನು ಪ್ರೀತಿಯಿಂದ ಮಾತಾಡಿಸುವ ಇವರು ಹಿಡಿಯುವಾಗ ಅವುಗಳಿಗೆ ನೋವಾಗದಂತೆ ಕಾಳಜಿವಹಿಸುತ್ತಾರೆ. ಈಗಾಗಲೇ ಕನಿಷ್ಟವೆಂದರೂ 25,000 ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದಾರೆ.
ರವಿಕುಮಾರ್ ಅವರು ಕೇವಲ ಹಾವನ್ನು ರಕ್ಷಿಸುವುದಷ್ಟೇ ಅಲ್ಲ, ಪ್ರಕೃತಿ, ಪ್ರಾಣಿ ಸಂರಕ್ಷಕರು ಹೌದು. ಪ್ರಕೃತಿಯನ್ನು ಪ್ಲಾಸ್ಟಿಕ್ ಮುಕ್ತವಾಗಿಸಬೇಕು, ಪ್ರಾಣಿ ಪಕ್ಷಿಗಳಿಗೆ ಯಾವುದೇ ತೊಂದರೆಯಾಗದಂತೆ ಸರಿಯಾದ ವ್ಯವಸ್ಥೆ ಮಾಡಿಕೊಡಬೇಕು ಎನ್ನುವುದು ಅವರ ಜೀವನದ ಬಹುದೊಡ್ಡ ಆಸೆ.
ರಸ್ತೆ ಬದಿಯಲ್ಲಿ ನರಳುತ್ತಿದ್ದ 2000 ಕ್ಕೂ ಹೆಚ್ಚು ನಾಯಿ, ಬೆಕ್ಕು, ಹಸು, ಕರುಗಳನ್ನು ಚಿಕಿತ್ಸೆ ನೀಡಿ ರಕ್ಷಿಸಿದ್ದಾರೆ.
ಇದಕ್ಕೆಲ್ಲ ಬೆನ್ನೆಲುಬಾಗಿ ನಿಂತವರು ಅವರ ಧರ್ಮಿಪತ್ನಿ ಹಂಸ ರವಿಕುಮಾರ್ ಅವರು. ಇವರು ಕೂಡಾ ಪ್ರಾಣಿ ಪ್ರಿಯರು. ಗಂಡ ಹಾವು ಹಿಡಿಯಲು ಹೊರಟರೆ ಯಾವುದೇ ಸಮಯವಿರಲಿ, ಭಯವಿಲ್ಲದೆ ಸಂತೋಷದಿಂದಲೇ ಅವರನ್ನು ಕಳುಹಿಸಿಕೊಡುತ್ತಾರೆ. ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ನೀಡಬೇಕು ಎನ್ನುವ ನಿಲುವು ಅವರದು. ಈ ದಂಪತಿಗೆ ಓರ್ವ ಮಗನಿದ್ದಾನೆ. ಅವರ ಹೆಸರು ಪ್ರೀತಮ್ ರವಿಕುಮಾರ್. ಅವರು ಕೂಡಾ ತಂದೆಯಂತೆ ಪ್ರಾಣಿ ಸಂರಕ್ಷಕರು. ಇಡೀ ಕುಟುಂಬ ನಿಸ್ವಾರ್ಥವಾಗಿ ಮುಖಜೀವಿಗಳ ಸೇವೆ ಮಾಡುತ್ತಿದ್ದಾರೆ.
ಕೋಟಿ ಹಣ ಕೊಟ್ಟು ನಾಯಿ, ಬೆಕ್ಕು ಸಾಕುವ ಶೋಕಿ ಜನರ ಮಧ್ಯೆ ರವಿಕುಮಾರ್ ರವರ ಮನೆಯಲ್ಲಿ ಗಾಯಗೊಂಡ ಬೆಕ್ಕು, ಹಸು, ನಾಯಿಗಳನ್ನು ಕಾಣಬಹುದು. ಬಾಡಿಗೆ ಮನೆಯಲ್ಲಿ ಬದುಕು ಕಳೆಯುತ್ತಿರುವ ಇವರು ಯಾರಿಂದಲೂ ಏನನ್ನು ನಿರೀಕ್ಷಿಸದೆ ಸಮಾಜಸೇವೆಗೆ ತಮ್ಮ ಜೀವನವನ್ನು ಮೀಸಲಿಟ್ಟಿದ್ದಾರೆ.
ಆರ್ಥಿಕ ಹಾಗೂ ಅಧಿಕಾರ ಬಲ ಇದ್ದರೇ ಪ್ರಾಣಿ ಹಾಗೂ ಪ್ರಕೃತಿಗಾಗಿ ಇನ್ನಷ್ಟು ಕೆಲಸ ಮಾಡುವೆ ಎನ್ನುವ ಹುಮ್ಮಸ್ಸು ತೋರಿಸುತ್ತಾರೆ ರವಿಕುಮಾರ್ ಅವರು. ಆ ಭಗವಂತ ರವಿಕುಮಾರ್ ಅವರಿಗೆ ಸಮಾಜಸೇವೆ ಮಾಡಲು ಇನ್ನಷ್ಟು ಶಕ್ತಿ ನೀಡಲಿ ಎಂದು ಆಕೃತಿಕನ್ನಡ ಶುಭ ಕೋರುತ್ತದೆ.
- ಶಾಲಿನಿ ಹೂಲಿ ಪ್ರದೀಪ್ – ಆಕೃತಿಕನ್ನಡ ಸಂಪಾದಕಿ http://www.aakrutikannada.com
