ಹಣ್ಣಿನ ತೋಟಕೆ ಲಗ್ಗೆಯ ಹಾಕಿ ಮನದಣಿ ಮೆಲ್ಲುತ ಕುಣಿಯುವೆನು….ವೀರೇಶ ಬ.ಕುರಿ ಸೋಂಪೂರ ಅವರ ಮಕ್ಕಳ ಕವಿತೆಯನ್ನು ತಪ್ಪದೆ ಮುಂದೆ ಓದಿ…
ನನ್ನಯ ತೋಳಿಗೆ ರೆಕ್ಕೆಯ ಕಟ್ಟಿ
ನೀಲಾಗಸದೊಳು ಹಾರುವೆನು.
ಪಟ ಪಟ ರೆಕ್ಕೆ ಬಡಿಯುತಲಿ
ಮೇಲಕೆ ಮೇಲಕೆ ಏರುವೆನು.
ಹಣ್ಣಿನ ತೋಟಕೆ ಲಗ್ಗೆಯ ಹಾಕಿ
ಮನದಣಿ ಮೆಲ್ಲುತ ಕುಣಿಯುವೆನು.
ನದಿ-ಸರೋವರ, ಬೆಟ್ಟ-ಕಾಡುಗಳ
ಚೆಲುವನು ಕಾಣುತ ನಲಿಯುವೆನು.
ಹಸಿರಿನ ಗಿಡ-ಮರ ಏರಿ ಕುಳಿತು
ನಸುನಗೆ ಬೀರುತ ಹಾಡುವೆನು.
ಸುಂದರ ಸೃಷ್ಟಿಯ ವಿಸ್ಮಯಗಳನು
ಬೆಕ್ಕಸ ಬೆರಗಾಗಿ ನೋಡುವೆನು.
ಊರಿನ ಎಲ್ಲಾ ಗೆಳೆಯರ ಬಳಗಕೆ
ಸವಿ ಸವಿ ಅನುಭವ ಹೇಳುವೆನು.
ಜೊತೆಯಲಿ ನೀವು ಬರುವಿರೇನು
ಎನ್ನುತ ಪ್ರೀತಿಯಲಿ ಕೇಳುವೆನು.
ಪಕ್ಷಿ ಸಂಕುಲದ ಸ್ನೇಹವ ಬೆಳೆಸಿ
ಅವುಗಳ ಜೀವನ ತಿಳಿಯುವೆನು.
ಅಪ್ಪ-ಅವ್ವನ ನೆನಪಾದ ಕೂಡಲೆ
ನಮ್ಮನೆ ಮುಂದೆ ಇಳಿಯುವೆನು.
- ವೀರೇಶ ಬ.ಕುರಿ ಸೋಂಪೂರ
