ಅಜಾತಶತ್ರು ಎಸ್ .ಎಂ .ಕೃಷ್ಣ- ಡಾ. ಗುರುಪ್ರಸಾದ ರಾವ್

ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಿದ್ದರ ಹಿಂದೆ ಒಂದು  ಕಥೆ ಇದೆ. ಕರ್ನಾಟಕ ಮುತ್ಸದ್ದಿ ರಾಜಕಾರಣಿ ಎಸ್ ಎಂ ಕೃಷ್ಣ ವರನ್ನು ಅಜಾತಶತ್ರುವಾಗಿದ್ದರು, ಕೃಷ್ಣವರು ತಮ್ಮ 92ವಯಸ್ಸಿನಲ್ಲಿ ಬಾರದ ಲೋಕಕ್ಕೆ ತೆರಳಿದ್ದು, ಅವರಿಗೆ ಡಾ. ಗುರುಪ್ರಸಾದ ರಾವ್ ಹವಲ್ದಾರ್ ಅವರ ಲೇಖನದ ಮೂಲಕ ಅಕ್ಷರ ನಮನಗಳು…

ಭಾರತೀಯ ರಾಜಕಾರಣದಲ್ಲಿ ಅಜಾತಶತ್ರು ಎಂದು ಅಟಲ್ ಬಿಹಾರಿ ವಾಜಪೇಯಿವರನ್ನು ರಾಷ್ಟ್ರ ರಾಜಕಾರಣದಲ್ಲಿ ಕರೆದರೆ, ಕರ್ನಾಟಕ ರಾಜಕಾರಣದ ಮಟ್ಟಿಗೆ ಮುತ್ಸದ್ದಿ ರಾಜಕಾರಣಿ ಎಸ್ ಎಂ ಕೃಷ್ಣ ವರನ್ನು ಅಜಾತಶತ್ರು ಎಂದೇ ಕರೆಯಲಾಗುತ್ತದೆ ,ಅವರ 60 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ವಿಧಾನಸಭೆ, ಲೋಕಸಭೆ, ರಾಜ್ಯಸಭೆ ಸದಸ್ಯರಾಗಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸ್ಪೀಕರ್, ಮತ್ತು ಕೇಂದ್ರ ಸಚಿವರಾಗಿ ಸೇವೆ ಸಲ್ಲಿಸಿದವರು ಬಿಸಿಯೂಟ,  ಬೆಂಗಳೂರನ್ನು ಐಟಿಬಿಟಿ ನಗರವನ್ನಾಗಿ, ವರನಟ ರಾಜಕುಮಾರ್ ಸುರಕ್ಷಿತವಾಗಿ ಕರೆ ತಂದಿದ್ದು, ವಿದೇಶಾಂಗ ಸಚಿವ ರಾಗಿ ಲಿಬಿಯಾ ದಲ್ಲಿ ಸಿಲುಕಿ ದ 18ಸಾವಿರ ಭಾರತೀಯರ ರಕ್ಷಣೆ ಹೀಗೆ  ಕರ್ನಾಟಕದ ಹಲವು ಮೊದಲುಗಳಿಗೆ ಸಾಕ್ಷಿಯಾಗಿದ್ದರು. ಕೃಷ್ಣವರು ತಮ್ಮ 92ವಯಸ್ಸಿನಲ್ಲಿ ಬಾರದ ಲೋಕಕ್ಕೆ ತೆರಳಿದ್ದಾರೆ.

1999-2004 ರವರೆಗೆ ಕರ್ನಾಟಕದ 10 ನೇ ಸಿಎಂ ಆಗಿ ಸೇವೆ ಸಲ್ಲಿಸಿದ ಕೃಷ್ಣರವರು,  ಮಾಹಿತಿ ಹಾಗೂ ಜೈವಿಕ ತಂತ್ರಜ್ಞಾನದ ಪ್ರಗತಿಗೆ ಒತ್ತು ನೀಡಿದ್ದರು. ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದ್ದರು. ಬೆಂಗಳೂರಿಗೆ ಐಟಿ, ಬಿಟಿ ಕಂಪನಿಗಳನ್ನು ಕರೆ ತರುವಲ್ಲಿ ಅವರ ಪಾತ್ರ ಅವಿಸ್ಮರಣೀಯ.

ಐಟಿಬಿಟಿಗೆ ಭದ್ರ ಬುನಾದಿ ಹಾಕಿದ ನಾಯಕ- ಬೆಂಗಳೂರಿನತ್ತ ವಿಶ್ವವೇ ತಿರುಗಿನೋಡುವಂತೆ ಮಾಡಿದರು- ಐಟಿ-ಬಿಟಿ ನಗರಿಯನ್ನಾಗಿ ಮಾಡಿ ಕರ್ನಾಟಕದ ಆರ್ಥಿಕತೆಗೆ ಬಹುದೊಡ್ಡ ಕೊಡುಗೆಯಾಗಿ ನೀಡುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.

ಫೋಟೋ ಕೃಪೆ : google

ಬೆಂಗಳೂರು ನಗರದ ಬೆಳವಣಿಗೆಗೆ ಹಾಕಿಕೊಟ್ಟ ಭದ್ರ ಬುನಾದಿಯಿಂದ ಜಾಗತಿಕ ಮಟ್ಟದಲ್ಲಿ ಬೆಂಗಳೂರು ಸಿಲಿಕಾನ್ ವ್ಯಾಲಿ ಎಂದು ಹೆಸರು ಗಳಿಸಿ ಅಮೇರಿಕಾದ ಕ್ಯಾಲಿಪೋರ್ನಿಯ ನಗರಕ್ಕೆ ಪರ್ಯಾಯವಾಗಿ ಹೆಸರು ಗಳಿಸಿತ್ತು. ಇಂದು ರಾಜ್ಯದ ಆಯವ್ಯಯ ಮೂರು ಲಕ್ಷ ಕೋಟಿ ದಾಟಿದ್ದರೆ ಅದಕ್ಕೆ ಕಾರಣ ಕೃಷ್ಣರವರು ಐಟಿ ಕ್ಷೇತ್ರಕ್ಕೆ ನೀಡಿದ ಅವಕಾಶಗಳೇ ಕಾರಣ. ಲಕ್ಷಾಂತರ ಉದ್ಯೋಗ ಸೃಷ್ಟಿಸಿ ಹಲವು ಮೂಲಭೂತ ಸೌಕರ್ಯಗಳನ್ನು ನೀಡಿ ಕನ್ನಡ ನಾಡನ್ನು ವಿಶ್ವವೇ ತಿರುಗಿ ನೋಡುವಂತೆ ಮಾಡಿದ್ದು  ಕೃಷ್ಣರವರ ಪಾತ್ರ ಅತ್ಯಂತ ಹಿರಿದಾದು.

ಕರ್ನಾಟಕದಲ್ಲಿ ಕೈಗಾರಿಕಾ ಸ್ಥಾಪನೆ ಬೇಕಾದಂತಹ ಹಲವು ಇಲಾಖೆ ಗಳ ನಿರಾಕ್ಷೇಪಣಾ ಪತ್ರಗಳನ್ನು ಪಡೆಯಲು ಇದ್ದಂತಹ ತೊಡಕುಗಳನ್ನು ಸರಿಪಡಿಸಲು, ಅವರ ಅಧ್ಯಕ್ಷತೆಯಲ್ಲಿ ಉನ್ನತಾಧಿಕಾರ ಮಂಜೂರಾತಿ ಸಮಿತಿಗಳನ್ನು ರಚಿಸುವ ಮೂಲಕ ಕೈಗಾರಿಕೆಗಳಿಗೆ ಒಂದೇ ಸೂರಿನಡಿ ಕಂದಾಯ, ವಿದ್ಯುತ್, ಅಗ್ನಿಶಾಮಕ, ಅರಣ್ಯ, ಪರಿಸರ ಮಾಲಿನ್ಯ ಸೇರಿದಂತೆ ಹಲವು ರೀತಿಯ ಪ್ರಮಾಣಪತ್ರಗಳು ಹಾಗೂ ನಿರಾಕ್ಷೇಪಣಾ ಪತ್ರಗಳನ್ನು ಕೊಡುವ ವ್ಯವಸ್ಥೆಯನ್ನು ಏಕಗವಾಕ್ಷಿ ಪದ್ಧತಿ ಮೂಲಕ ಜಾರಿಗೆ ತಂದರು.
ಕೇವಲ ಐಟಿ-ಬಿಟಿಯಷ್ಟೇ ಅಲ್ಲದೆ ಆಟೋಮೊಬೈಲ್, ಎಲೆಕ್ಟ್ರಾನಿಕ್, ಎಲೆಕ್ಟ್ರಿಕಲ್, ಟೋಲ್ ಮೇಕಿಂಗ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರೀ ಪ್ರಮಾಣದ ಹೂಡಿಕೆಯಾಯಿತು. ಇಂದು ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಆದಾಯ ಹಾಗೂ ಜಿಎಸ್ಟಿ ಪಾವತಿಸುವ ರಾಜ್ಯವಾಗಿದ್ದರೆ ಅದಕ್ಕೆ ಎಸ್.ಎಂ.ಕೃಷ್ಣ ಅವರ ದೂರದೃಷ್ಟಿ ಏಕಗವಾಕ್ಷಿ ಪದ್ಧತಿ ಪ್ರಮುಖ ಕಾರಣ.ಅವರನ್ನು ಹೈಟೆಕ್ ಮುಖ್ಯ ಮಂತ್ರಿ ಎಂದೇ ಕರೆಯುತ್ತಿದ್ದರು.

ಸರಕಾರಿ ಶಾಲಾ ಮಕ್ಕಳಿಗೆ ಹಸಿವು ನೀಗಿಸಿದ ನಾಯಕ- ಇಂದು ಕರ್ನಾಟಕದ  44ಸಾವಿರಕ್ಕೂ ಹೆಚ್ಚು ಸರಕಾರಿ ಶಾಲೆಗಳಲ್ಲಿ ಮಕ್ಕಳು ಮಧ್ಯಾಹ್ನದ ಬಿಸಿಯೂಟ,  ಮಾಡುತ್ತಿದ್ದರೆ ಈ ಯೋಜನೆಯಿಂದಾಗಿ ಲಕ್ಷಾಂತರ ಬಡ ಮಕ್ಕಳ ಹಸಿವನ್ನು ನೀಗಿಸಿದ ಕೀರ್ತಿ ಅದಕ್ಕೆ ಕಾರಣ ಎಸ್ ಎಂ ಕೃಷ್ಣರವರು.

ಫೋಟೋ ಕೃಪೆ : google

ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ಆರಂಭಿಸಿದ್ದರ ಹಿಂದೆ ಒಂದು  ಕಥೆ ಇದೆ. ಮುಖ್ಯಮಂತ್ರಿಯಾಗಿದ್ದ ಕೃಷ್ಣ ಅವರು 2001ರಲ್ಲಿ ಕಾರ್ಯನಿಮಿತ್ತ ಉತ್ತರ ಕನ್ನಡ ಜಿಲ್ಲೆಗೆ ತೆರಳಿದ್ದರು. ಸಂಜೆ 5 ಗಂಟೆ ಸುಮಾರಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ರಸ್ತೆ ಬದಿಯಲ್ಲಿ ಶಾಲೆ ಮುಗಿಸಿಕೊಂಡು ಕೆಲವು ಹೆಣ್ಣು ಮಕ್ಕಳು ನಡೆದುಕೊಂಡು ಹೋಗುತ್ತಿದ್ದರು. ಆಗ ಥಟ್ಟನೆ ಕಾರು ನಿಲ್ಲಿಸಿ ಆ ಮಕ್ಕಳ ಬಳಿ ತೆರಳಿದ ಕೃಷ್ಣ, ‘ನೀವು ಬೆಳಗ್ಗೆ ಎಷ್ಟೊತ್ತಿಗೆ ಮನೆಯಿಂದ ಹೊರಡುತ್ತೀರಿ?’ ಎಂದು ಕೇಳಿದರು. ಅದಕ್ಕೆ ಮಕ್ಕಳು ಬೆಳಗ್ಗೆ 7 ಗಂಟೆಗೆ ಎಂದು ಉತ್ತರಿಸಿದರು. ‘ಶಾಲೆ ಮುಗಿಸಿ ವಾಪಸ್ ಮನೆಗೆ ತಲುಪುವುದು ಯಾವಾಗ?’ ಎಂದು ಮರು ಪ್ರಶ್ನಿಸಿದಾಗ, ಮಕ್ಕಳು 6.30ರಿಂದ 7 ಗಂಟೆಯಾಗುತ್ತದೆ ಎಂದರು. ಆಗ ಹೌಹಾರಿದ ಕೃಷ್ಣ ‘ಈ ಅವಧಿಯಲ್ಲಿ ಊಟಕ್ಕೇನು ಮಾಡುತ್ತೀರಿ?’ ಎಂದಾಗ ಮಕ್ಕಳ ಬಳಿ ಸಮರ್ಪಕ ಉತ್ತರವಿರಲಿಲ್ಲ.

ವಾಪಸ್ ಬೆಂಗಳೂರಿಗೆ ಬಂದ ಕೃಷ್ಣ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ ಮಕ್ಕಳಿಗೆ ‘ಮಧ್ಯಾಹ್ನದ ಬಿಸಿಯೂಟ’ ಯೋಜನೆ ಆರಂಭಿಸಲು ನಿರ್ಧರಿಸಿದರು. ಮೊದಲು 8 ಜಿಲ್ಲೆಗಳಲ್ಲಿ ಆರಂಭಿಸಿ ನಂತರ ರಾಜ್ಯಾದ್ಯಂತ ವಿಸ್ತರಿಸಲಾಯಿತು. ಬಜೆಟ್ನಲ್ಲಿ ಪ್ರತಿವರ್ಷ 300 ಕೋಟಿ ಮೀಸಲಿರಿಸಿದರು. ಇಂದಿಗೂ ಈ ಯೋಜನೆ ಮುಂದುವರಿಯುತ್ತಿದೆ.

ಭೂಮಿ ತಂತ್ರಾಂಶ ಕಂದಾಯ ಇಲಾಖೆಯಲ್ಲಿ ಬದಲಾವಣೆ ಮಾಹಿತಿ ತಂತ್ರಜ್ಞಾನದಲ್ಲಿ ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಎಸ್.ಎಂ.ಕೃಷ್ಣ ಅವರು ಅದೇ ತಂತ್ರಜ್ಞಾನವನ್ನು ಆಡಳಿತ ಹಾಗೂ ಜನಸಾಮಾನ್ಯರ ಬದುಕಿನ ಸುಧಾರಣೆಗೆ ಬಳಸುವ ಮೂಲಕ ಗಣನೀಯ ಸಾಧನೆ ಮಾಡಿದರು.

2001 ರಲ್ಲಿ ಆರಂಭಗೊಂಡ ಭೂಮಿ ಸಾಫ್ಟವೇರ್ ಕಂದಾಯ ದಾಖಲಾತಿಗಳಲ್ಲಿ ಇಂದಿಗೂ ಅಗ್ರಗಣ್ಯವಾಗಿದೆ. ಜೊತೆಗೆ ಕಾಲಕಾಲಕ್ಕೆ ಉನ್ನತೀಕರಣದ ಮೂಲಕ ಜನಸಾಮಾನ್ಯರ ಜೀವನಮಟ್ಟವನ್ನು ಸುಧಾರಣೆ ಮಾಡುತ್ತಿದೆ.ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕಂದಾಯ ದಾಖಲಾತಿಗಳನ್ನು ಕಾಗದರಹಿತವನ್ನಾಗಿ ಮಾಡುವ ಸಲುವಾಗಿ ರೂಪುಗೊಂಡ ಭೂಮಿ ಸಾಫ್ಟ್ ವೇರ್ ಸುದೀರ್ಘ ಕಾಲದವರೆಗೂ ಚಾಲ್ತಿಯಲ್ಲಿದೆ.

ಈ ಮೊದಲೆಲ್ಲಾ ಒಂದು ಪಹಣಿ ಪಡೆಯಬೇಕಾದರೂ ವಾರಗಟ್ಟಲೆ ಕಂದಾಯ ಇಲಾಖೆಗೆ ಅಲೆಯಬೇಕಿತ್ತು. ಅಧಿಕಾರಿಗಳ ಮರ್ಜಿಯನ್ನು ಹಿಡಿಯಬೇಕಿತ್ತು. ಇದನ್ನು ತಪ್ಪಿಸಲು 2001 ಮತ್ತು 2002 ನೇ ಸಾಲಿನಲ್ಲಿ ತನ್ನ ಬಜೆಟ್ನಲ್ಲಿ ಎಸ್.ಎಂ.ಕೃಷ್ಣ ಭೂಮಿ ಸಾಫ್ಟ್ ವೇರ್ ಅನ್ನು ಘೋಷಿಸಿದ್ದರು. 2001ರ ಮಾರ್ಚ್ 31 ರಂದು ಅದಕ್ಕೆ ಆರಂಭಿಕವಾಗಿ ಕೆಲವೇ ತಾಲ್ಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದು, 2004 ರ ವೇಳೆಗೆ ಅದು ರಾಜ್ಯಾದ್ಯಂತ ಅನುಷ್ಠಾನಕ್ಕೆ ಜಾರಿಗೆ ಬಂದಿತು.
ಇಂದು  ಮೊಬೈಲ್ನಲ್ಲೇ ಪಹಣಿಯನ್ನು ಪಡೆಯಬಹುದಾದಷ್ಟರ ಮಟ್ಟಿಗೆ ಭೂಮಿ ಸಾಫ್ಟ್ ವೇರ್ ಅಭಿವೃದ್ಧಿಗೊಂಡಿದೆ.

ಫೋಟೋ ಕೃಪೆ : google

ವೀರಪ್ಪನ್​ನಿಂದ ರಾಜ್​​ಕುಮಾರ್ ರಕ್ಷಣೆ :

ಇವರು ಸಿಎಂ ಆಗಿದ್ದ ವೇಳೆ ರಾಜ್ಯದಲ್ಲಿ ಎರಡು ಘಟನೆಗಳು ದೊಡ್ಡ ಮಟ್ಟದ ಚರ್ಚೆ ಉಂಟಾಯಿತು. ವರನಟ ರಾಜಕುಮಾರ್ ಅಪಹರಣ ಮತ್ತು ಕಾವೇರಿ ಗಲಾಟೆ,
ಡಾ. ರಾಜ್ಕುಮಾರ್ ಅವರನ್ನು ವೀರಪ್ಪನ್ ಮೂರು ತಿಂಗಳ ಕಾಲ ಅಪಹರಣ ಮಾಡಿದ್ದ. ಆಗ ರಾಜ್ಯದ್ಯಾಂತ ಸರಕಾರದ ವಿರುದ್ಧ ಹೋರಾಟಗಳು ನಡೆದವು. ಬಳಿಕ ಕೃಷ್ಣ ಅವರು ಅಂದಿನ ತಮಿಳುನಾಡು ಸಿಎಂ ಜಯಲಲಿತ ಅವರೊಮದಿಗೆ ಮಾತುಕತೆ ನಡೆಸಿ, ಬಳಿಕ ವೀರಪ್ಪನ್ ಸಂಪರ್ಕ ಮಾಡಿ ರಾಜ್ಕುಮಾರ್ ಅವರನ್ನು ಕ್ಷೇಮವಾಗಿ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಮಹಿಳಾ ಸಬಲೀಕರಣಕ್ಕಾಗಿ ಸ್ತ್ರೀಶಕ್ತಿ ಸ್ವಸಹಾಯ ಸಂಘ:

ಸ್ತ್ರೀ ಸಬಲೀಕರಣಕ್ಕೆ ಮೊಟ್ಟ ಮೊದಲ ಬಾರಿಗೆ ನೈಜ ಬುನಾದಿ ಹಾಕಿದ್ದು ಎಸ್.ಎಂ.ಕೃಷ್ಣ ಅವರು. ಆಗಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ ಮೋಟಮ ಅವರನ್ನು ಮುಂಚೂಣಿಯಲ್ಲಿ ನಿಲ್ಲಿಸಿ ಸ್ತ್ರೀಶಕ್ತಿ ಸ್ವಸಹಾಯ ಸಂಘಗಳನ್ನು ರಚನೆ ಮಾಡಿದ್ದರು.

ಆ ಸಂದರ್ಭದಲ್ಲಿ ಸಾಕಷ್ಟು ಟೀಕೆಗಳು ಕೇಳಿಬಂದವು. ಮಹಿಳೆಯರನ್ನು ಅಡುಗೆಮನೆಯಿಂದ ಹೊರತಂದು ಏನು ಮಾಡಲು ಹೊರಟಿದ್ದಾರೆ ಎಂಬೆಲ್ಲಾ ವ್ಯಾಖ್ಯಾನಗಳು ಕೇಳಿಬಂದಿದ್ದವು. ಆದರೆ ಯಾವುದಕ್ಕೂ ತಲೆಕೆಡಿಸಿಕೊಳ್ಳದ ಎಸ್.ಎಂ.ಕೃಷ್ಣ ಅವರು ದಿಟ್ಟ ನಿಲುವು ಮತ್ತು ನಿರ್ಧಾರದ ಮೂಲಕ ಸ್ತ್ರೀಶಕ್ತಿ ಸಂಘಗಳನ್ನು ಮುಂದುವರೆಸಿದ್ದರು. ಅದರ ಪರಿಣಾಮ ಇಂದು ಮಹಿಳೆಯರ ಸಶಕ್ತೀಕರಣಕ್ಕೆ ಆನೆಬಲ ಬಂದಂತಾಗಿದೆ.

ಸ್ತ್ರೀಶಕ್ತಿ ಸಂಘಗಳು ರಾಷ್ಟ್ರಮಟ್ಟದಲ್ಲಿ ಸ್ಥಾಪನೆಯಾಗಿವೆ. ಕೈಗಾರಿಕಾ ಉತ್ಪನ್ನ, ವಾಣಿಜ್ಯ ಚಟುವಟಿಕೆಗಳ ಮೂಲಕ ದೇಶದ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿವೆ.
ಎಸ್.ಎಂ.ಕೃಷ್ಣ ಅವರು ತೆಗೆದುಕೊಂಡ ಹಲವು ಕ್ರಾಂತಿಕಾರಕ ನಿರ್ಧಾರಗಳು ಇಂದಿಗೂ ಪ್ರಸ್ತುತವಾಗಿವೆ.

ಬಡವರಿಗಾಗಿ ಯಶಸ್ವಿನಿ ಯೋಜನೆ :

ಅನಾರೋಗ್ಯ ಪ್ರತಿಯೊಬ್ಬ ಬಡವರಿಗೂ ದೊಡ್ಡ ಶಾಪ. ಸರ್ಕಾರಿ ಆಸ್ಪತ್ರೆಗಳಲ್ಲಿ ಉತ್ತಮ ಚಿಕಿತ್ಸೆ ಸಿಗುವುದಿಲ್ಲ. ಖಾಸಗಿ ಆಸ್ಪತ್ರೆಗಳಲ್ಲಿ ಹಣ ಖರ್ಚು ಮಾಡುವಷ್ಟು ಸಾಮರ್ಥ್ಯ ಇರುವುದಿಲ್ಲ. ಇಂತಹ ಸಂಕಷ್ಟ ಸಂದರ್ಭದಲ್ಲಿದ್ದವರಿಗೆ ಯಶಸ್ವಿನಿ ಯೋಜನೆ ವರದಾನವಾಗಿತ್ತು.

ಯಶಸ್ವಿನಿ ಯೋಜನೆ ಯನ್ನು 2003 ರಲ್ಲಿ ಜಾರಿಗೊಳಿಸುವ ಮೂಲಕ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿ ಮಹತ್ವದ ಹೆಜ್ಜೆಯನ್ನು ಮುಂದಿಟ್ಟಿದ್ದರು.ಸಹಕಾರ ಸಂಸ್ಥೆಗಳಲ್ಲಿ ಸದಸ್ಯರಾಗಿರುವ ರೈತರಿಗೆ ಗಂಭೀರ ಸ್ವರೂಪದ ಅನಾರೋಗ್ಯ ಕಾಣಿಸಿಕೊಂಡಾಗ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲು ಟ್ರಸ್ಟ್ವೊಂದನ್ನು ರಚಿಸಿದರು. ಅದಕ್ಕಾಗಿ 1882 ರ ಇಂಡಿಯನ್ ಟ್ರಸ್ಟ್ ಕಾಯಿದೆಗೆ 2003 ರ ನವೆಂಬರ್ 10 ರಂದು ತಿದ್ದುಪಡಿ ಮಾಡಿದರು.

ಅದೇ ವರ್ಷದ ಜೂನ್ 1 ರಿಂದ ಯೋಜನೆ ಜಾರಿಗೆ ಬಂದಿತ್ತು. ಗ್ರಾಮೀಣ ಪ್ರದೇಶದಲ್ಲಿ ಸಹಕಾರ ಸಂಘದ ಸದಸ್ಯರಿಗೆ ಪ್ರತಿಷ್ಟಿತ ಆಸ್ಪತ್ರೆಗಳಲ್ಲಿ ನಗದುರಹಿತವಾಗಿ ಚಿಕಿತ್ಸೆ ಕೊಡಿಸಲು ಯಶಸ್ವಿನಿ ಯೋಜನೆ ಯಶಸ್ವಿಯಾಗಿತ್ತು.ಯೋಜನೆಗೆ ನೋಂದಾಯಿಸಿಕೊಳ್ಳಲು ಆರಂಭದಲ್ಲಿ ಸಹಕಾರ ಸಂಘಗಳ ಸದಸ್ಯರಿಂದ 710 ರೂ.ಗಳನ್ನು ಪಡೆಯಲಾಗುತ್ತಿತ್ತು. ಉಳಿದಂತೆ ಲಕ್ಷಾಂತರ ರೂ. ಖರ್ಚು ಮಾಡಿ ಚಿಕಿತ್ಸೆ ಕೊಡಲಾಯಿತು.

ಸುಮಾರು 300ಕ್ಕೂ ಹೆಚ್ಚು ಖಾಸಗಿ ಆಸ್ಪತ್ರೆಗಳನ್ನು ಆರಂಭದಲ್ಲಿ ಯೋಜನೆಯ ಎಂ ಪ್ಯಾನಲ್ಗೆ ಸೇರ್ಪಡೆಗೊಳಿಸಲಾಗಿತ್ತು. ಈಗ ಅದು 1200ಕ್ಕೂ ಹೆಚ್ಚು ಆಸ್ಪತ್ರೆಗಳ ಪಟ್ಟಿಯಾಗಿ ಬೆಳೆದಿದೆ. ಈ ನಡುವೆ ಕೆಲಕಾಲ ಯೋಜನೆಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ಜನರ ಬೇಡಿಕೆಗನುಗುಣವಾಗಿ ಮರುಜಾರಿಗೊಳಿಸಲಾಗಿತು.

ಕಾವೇರಿ ಗಲಾಟೆ, ಬರಗಾಲ, ಮೋಡ ಬಿತ್ತನೆ :
ಕೃಷ್ಣ ಆಡಳಿತದ ವೇಳೆ ರಾಜ್ಯಕ್ಕೆ ಬರಗಾಲವು ಸಹ ಬಂದೊದಗಿತ್ತು. ಆ ವೇಳೆ ರಾಜ್ಯ ಜನರ ರಕ್ಷಣೆಗೆ ವೈಜ್ಞಾನಿಕವಾಗಿ ಮೋಡ ಬಿತ್ತನೆ ಮಾಡಿ ಮಳೆ ಬರಿಸಲು ಸಹ ಕೃಷ್ಣ ಅವರು ಮುಂದಾಗಿದ್ದರು. ಆದರೆ ದುರಾದೃಷ್ಟವಶಾತ್ ಈ ಪ್ಲಾನ್ ಕೈಕೊಟ್ಟಿತು. ಈ ವೇಳೆ ತಮಿಳುನಾಡು ಕಾವೇರಿ ನೀರಿಗಾಗಿ ಕ್ಯಾತೆಯನ್ನು ಸಹ ತೆಗೆಯಿತು. ಮಂಡ್ಯ ಸೇರಿದಂತೆ ಹಳೆ ಮೈಸೂರು ಭಾಗದಲ್ಲಿ ತೀವ್ರ ಸ್ವರೂಪದ ಹೋರಾಟಗಳು ಸಹ ಜರುಗಿದವು.

ರಾಜ್ಯಪಾಲ, ವಿದೇಶಾಂಗ ಸಚಿವ :

2004ರ ಹೊತ್ತಿಗೆ ಕೃಷ್ಣ ರಾಜ್ಯ ರಾಜಕಾರಣದಿಂದ ಸ್ವಲ್ಪ ದೂರ ಉಳಿಯುವ ಕಾಲ ಎದುರಾಯಿತು. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇದ್ದರೂ ಕೃಷ್ಣ ಅವರನ್ನು ಮಹಾರಾಷ್ಟ್ರದ ರಾಜ್ಯಪಾಲರಾಗಿ ನೇಮಿಸಲಾಯಿತು. ಸುಮಾರು 3 ವರ್ಷಗಳ ಕಾಲ ಮಹಾರಾಷ್ಟ್ರದ ರಾಜ್ಯಪಾಲರಾಗಿ ಮುಂಬೈನಲ್ಲಿ ನೆಲೆಸಿದ್ದರು. 2008ರ ವೇಳೆಗೆ ಮತ್ತೆ ರಾಜ್ಯ ರಾಜಕಾರಣಕ್ಕೆ ಮರಳಿದರೂ ಕಾಂಗ್ರೆಸ್ಗೆ ಅಧಿಕಾರ ಸಿಗಲಿಲ್ಲ. ಹೀಗಾಗಿ ರಾಜ್ಯಸಭೆ ಸದಸ್ಯರನ್ನಾಗಿ ಆಯ್ಕೆ ಮಾಡಲಾಯಿತು. ಕೃಷ್ಣ ಅವರ ಚಾಕಚಕ್ಯತೆ ಹಾಗೂ ರಾಜತಾಂತ್ರಿಕ ನೈಪುಣ್ಯತೆ ಅರಿತು ಮನಮೋಹನ್ ಸಿಂಗ್ ನೇತೃತ್ವದ ಯುಪಿಎ-2 ಸರ್ಕಾರದಲ್ಲಿ ವಿದೇಶಾಂಗ ಸಚಿವರಾಗಿ ವಿದೇಶಗಳೊಂದಿಗೆ ಭಾರತದ ಸಂಬಂಧ ಬೆಸೆಯುವ ಹಾಗೂ ಅದನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಎಸ್.ಎಂ. ಕೃಷ್ಣ ಅವರು ಭಾರತದ 72ನೇ ವಿದೇಶಾಂಗ ಸಚಿವರಾಗಿ ಆಮೆರಿಕಾ  ಬ್ರಿಟನ್, ರಷ್ಯಾ, ದಕ್ಷಿಣ ಆಫ್ರಿಕಾ,ಪಾಕಿಸ್ತಾನ, ಚೀನಾ ದೇಶಗಳ ಜೊತೆಗೆ ಸುಮಾರು 80ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದರು. ದ್ವಿಪಕ್ಷೀಯ ಸಂಬಂಧ ಸೇರಿದಂತೆ ಜಾಗತಿಕ ವಿಷಯವಾಗಿ ಹಲವು ರಾಷ್ಟ್ರಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತಮ್ಮ ಜವಾಬ್ದಾರಿಯನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿದ್ದರು.

ಪಾಸ್ಪೋರ್ಟ್ ಸರಳೀಕರಣ :

ಮೊದಲೆಲ್ಲಾ ಪಾಸ್ಪೋರ್ಟ್ ಪಡೆದುಕೊಳ್ಳುವ ಪ್ರಕ್ರಿಯೆ ಅಷ್ಟು ಸರಳವಾಗಿರಲಿಲ್ಲ. ಇದಕ್ಕಾಗಿ ಸಾಕಷ್ಟು ಪ್ರಕ್ರಿಯೆಗಳಿದ್ದವು. ಇವುಗಳನ್ನು ಪೂರೈಸುವಷ್ಟರಲ್ಲಿ ಜನರು ಹೈರಾಣಾಗಿ ಬಿಡುತ್ತಿದ್ದರು. ಈ ಸಮಸ್ಯೆ ಎಸ್ಎಂಕೆ ಗಮನಕ್ಕೆ ಬಂದಿತ್ತು. ಈ ಕಾರಣಕ್ಕಾಗಿಯೇ ಅವರು ಪಾಸ್ಪೋರ್ಟ್ ನೀತಿಯನ್ನು ಸರಳೀಕರಣಗೊಳಿಸಲು ಮುಂದಾದರು. ಜತೆಗೆ ಆಧುನೀಕರಣಗೊಳಿಸಿದರು. ಹೀಗಾಗಿ ದೇಶದ ವಿವಿಧ ಕಡೆ 77 ಪಾಸ್ಪೋರ್ಟ್ ಸೇವಾ ಕೇಂದ್ರಗಳನ್ನು ತೆರೆದರು. ಇನ್ನು ಪಾಸ್ಪೋರ್ಟ್ ನೀಡಿಕೆಯಲ್ಲಿ ಸಾಕಷ್ಟು ವಿಳಂಬವಾಗುತ್ತಿದ್ದ ದೂರಿಗೆ ಪರಿಹಾರವನ್ನು ಕಂಡುಕೊಳ್ಳಲು ಇ-ಗವರ್ನೆನ್ಸ್ ಕಾರ್ಯಕ್ರಮವನ್ನು ಜಾರಿಗೆ ತಂದರು. ಇದರ ಮೂಲಕ ಪಾಸ್ಪೋರ್ಟ್ ನೀಡಿಕೆಗೆ ವ್ಯವಸ್ಥೆ ಮಾಡಿದರು. ಇದು ಕೋಟ್ಯಂತರ ಭಾರತೀಯರಿಗೆ ಅನುಕೂಲವಾಯಿತು.

ಲಿಬಿಯಾದಲ್ಲಿ ಸಿಲುಕಿದ 18ಸಾವಿರ ಭಾರತೀಯರ ರಕ್ಷಣೆ :

2011ರಲ್ಲಿ ಲಿಬಿಯಾ ಕ್ರಾಂತಿ ಪ್ರಾರಂಭವಾಗಿತ್ತು. ಇದರಿಂದ ಅಲ್ಲಿದ್ದ ಸರಿಸುಮಾರು 18 ಸಾವಿರ ಭಾರತೀಯರ ಜೀವ-ಜೀವನ ಸಂಕಷ್ಟಕ್ಕೆ ಸಿಲುಕಿತ್ತು. ಆಗ, ಅವರೆಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆತರುವಲ್ಲಿ ಎಸ್ಎಂಕೆ ಮಹತ್ವದ ಪಾತ್ರವನ್ನು ವಹಿಸಿದ್ದರು. ನಿರಂತರ ಸಂಪರ್ಕದಲ್ಲಿದ್ದುಕೊಂಡು ಸುರಕ್ಷತೆಗೆ ಬಹಳ ಆದ್ಯತೆಯನ್ನು ನೀಡಿದ್ದರು.

ಇನ್ನು ಎಸ್.ಎಂ.ಕೃಷ್ಣಾ ಅವರು 2004ರಿಂದ 2008 ರವರೆಗೆ ದೇಶದ ಗೌರವಯುತ ಸಾಂವಿಧಾನಿಕ ಹುದ್ದೆಯನ್ನೂ ನಿರ್ವಹಿಸಿ ಅದರಲ್ಲೂ ಸೈ ಎನಿಸಿಕೊಂಡರು. ಮಹಾರಾಷ್ಟ್ರದ 18ನೇ ರಾಜ್ಯಪಾಲರಾಗಿ ಅವರು 4 ವರ್ಷ ಸೇವೆ ಸಲ್ಲಿಸಿದ್ದರು .

ಮೊದಲ ಬಾರಿಗೆ ವಿಧಾನಸಭೆಗೆ ಪ್ರವೇಶ ಮಾಡಿದ್ದು 1962ರಲ್ಲಿ,  ಮುಖ್ಯ ಮಂತ್ರಿ ಹುದ್ದೆಗೇರಿದ್ದು 1999ರಲ್ಲಿ, ಅವರು ರಾಜಕೀಯ ಜೀವನದಲ್ಲಿ ಒಟ್ಟು 10 ಚುನಾವಣೆಗಳನ್ನು ಎದುರಿಸಿದ್ದರು. 6 ವಿಧಾನಸಭಾ ಚುನಾವಣೆಗಳನ್ನು ಎದುರಿಸಿದ್ದರು, ಇವುಗಳಲ್ಲಿ 4 ರಲ್ಲಿ ಗೆಲುವು, 2 ಚುನಾವಣೆಯಲ್ಲಿ ಸೋಲನ್ನು ಎದುರಿಸಿದ್ದರು. 4 ಲೋಕಸಭಾ ಚುನಾವಣೆಗಳನ್ನು ಎದುರಿದ್ದು ಈ ಪೈಕಿ 3 ಚುನಾವಣೆಯಲ್ಲಿ ಗೆಲುವು ಪಡೆದು, 1 ಚುನಾವಣೆಯಲ್ಲಿ ಸೋಲು ಕಂಡಿದ್ದರು. ಮದ್ದೂರು ಕ್ಷೇತ್ರದಿಂದ 3 ಬಾರಿ ಹಾಗೂ ಚಾಮರಾಜಪೇಟೆಯಿಂದ 1 ಬಾರಿ ಶಾಸಕರಾಗಿದ್ದರು. ಮೂರು ಬಾರಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಂಸದರಾಗಿದ್ದರು. 1 ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು. 2 ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು.ಜೊತೆಗೆ ಮುಖ್ಯಮಂತ್ರಿ,ಉಪಮುಖ್ಯಮಂತ್ರಿ,ಸ್ಪೀಕರ್ ,ಕೈಗಾರಿಕೆ, ವಾಣಿಜ್ಯ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಸೇವೆ,ಕೇಂದ್ರದ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವ, ಕೈಗಾರಿಕಾ ಹಾಗೂ ಹಣಕಾಸು ಖಾತೆಯ ಸಚಿವ, ಕಾಮನ್ವೆಲ್ತ್ ಪಾರ್ಲಿಮೆಂಟರಿ ಭಾರತದ ಸದಸ್ಯ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ ತಾವು ನಿರ್ವಹಿಸಿದ ಪ್ರತಿ ಹುದ್ದೆಯಲ್ಲೂ ಹೆಜ್ಜೆ ಗುರುತು ಮೂಡಿಸಿದವರು.

ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿಯ ಸ್ಥಿತಿವಂತ ಕುಟುಂಬದಲ್ಲಿ ಹುಟ್ಟಿ, ತಮ್ಮ ಅಪಾರ ವಿದ್ವತ್, 60 ವರ್ಷ ಗಳ ಸುದೀರ್ಘ ಅನುಭವದ ಮೂಲಕ ಆಡಳಿತದಲ್ಲಿ ಹಲವು ಹೆಗ್ಗುರುತು ಮೂಡಿಸಿ, ಜನನಾಯಕರಾಗಿ ರೂಪುಗೊಂಡವರು ಶ್ರೀ ಎಸ್.ಎಂ. ಕೃಷ್ಣರವರು.

ಅವರ ರಾಜಕೀಯ ಸೇವೆಯನ್ನು ಗುರುತಿಸಿ ಕೇಂದ್ರ ಸರ್ಕಾರ ಅತ್ಯುನ್ನತ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿತ್ತು. ತಮ್ಮ ವಿರೋಧಿಗಳ ಬಗ್ಗೆ ಟೀಕೆ ಮಾಡಿದರೂ ಅದು ಸದಭಿರುಚಿಯಿಂದ ಕೂಡಿದ್ದು ಯಾರ ಮನಸ್ಸಿಗೂ ಘಾಸಿ ಮಾಡದೆ, ಹೇಳಿಕೆಗಳನ್ನು ನೀಡುತ್ತಿದ್ದರು.ಪ್ರತಿಪಕ್ಷದವರನ್ನು ಟೀಕಿಸುವಾಗಲೂ ಹದ್ದು ಮೀರಿ ವರ್ತಿಸಿದವರಲ್ಲ. ವೈಯಕ್ತಿಕ ಟೀಕೆ, ಟಿಪ್ಪಣೆ ಮಾಡಿದವರಲ್ಲ. ಹಾಗಂತ ರಾಜಕೀಯ ತತ್ವ, ಸಿದ್ಧಾಂತಗಳಲ್ಲಿ ಎಂದೂ ರಾಜಿಯಾದವರೂ ಅಲ್ಲ. ತಮ್ಮ ಬಾಲ್ಯ ಜೀವನದಲ್ಲಿ ರಾಮಕೃಷ್ಣ ಆಶ್ರಮದಿಂದ ಪ್ರಭಾವಿತರಾಗಿದ್ದ ಕೃಷ್ಣ ರವರು ಎಂದು ಸೋಲಿಗೆ ಕುಗ್ಗಲಿಲ್ಲ, ಗೆದ್ದಾಗ ಬೀಗಲಿಲ್ಲ.

ಇಂದು ಅವರ ಗರಡಿಯಲ್ಲಿ ಪಳಗಿದ ಅದೆಷ್ಟೋ ಮಂದಿ ರಾಜಕೀಯ ಕ್ಷೇತ್ರದಲ್ಲಿ ಹಲವು ಉತ್ತಮ ಸ್ಥಾನಮಾನಗಳನ್ನು ಪಡೆದುಕೊಂಡಿದ್ದಾರೆ. ಆಡಳಿತ ಪ್ರಕ್ರಿಯೆಯಲ್ಲಿ ಹೇಗೆ ತೊಡಗಿಕೊಳ್ಳಬೇಕೆಂಬ ಚಾಕಚಕ್ಯತೆಯನ್ನು ಅಳವಡಿಸಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಪ್ರತಿಯೊಬ್ಬರಿಗೂ ಒಬ್ಬ ಆದರ್ಶ ರಾಜಕಾರಣಿಯಾಗಿ ಪ್ರಭಾವ ಬೀರಿದವರು ಕೃಷ್ಣರವರು.ಎಸ್.ಎಂ.ಕೃಷ್ಣ ಅವರ ಕಾಲದಲ್ಲಿ ಆರಂಭಗೊಂಡ ಯೋಜನೆಗಳು ರಾಜ್ಯದಲ್ಲಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲೂ ಮಾದರಿಯಾಗಿ ಉಳಿದಿದ್ದು ಚಿರಸ್ಥಾಯಿಯಾಗಿವೆ. ಮಧ್ಯಾಹ್ನದ ಬಿಸಿಯೂಟ, ಸ್ತ್ರೀಶಕ್ತಿ ಸಂಘಟನೆಗಳು, ಭೂಮಿ ತಂತ್ರಾಂಶ ಸೇರಿದಂತೆ ಅನೇಕ ಯೋಜನೆಗಳು ರಾಜ್ಯದಲ್ಲಷ್ಟೇ ಅಲ್ಲ, ರಾಷ್ಟ್ರಮಟ್ಟದಲ್ಲೂ ಜನಸಾಮಾನ್ಯರ ಬದುಕನ್ನು ಸುಧಾರಣೆ ಮಾಡುವಲ್ಲಿ ಮಾದರಿಯಾಗಿವೆ.


  • ಡಾ. ಗುರುಪ್ರಸಾದ ರಾವ್ ಹವಲ್ದಾರ್ –  ಲೇಖಕರು ಮತ್ತು ಉಪನ್ಯಾಸಕರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW