ಇತ್ತೀಚೆಗಷ್ಟೇ ಸುಚಿತ್ರ ಫಿಲಂ ಸೊಸೈಟಿಯಲ್ಲಿ ಸುದರ್ಶನ್ ಭಟ್ಕಳ ಅವರ ನಿರ್ದೇಶನದ “ಸಂವಾದಿ ” ಕಿರುಚಿತ್ರ ಬಿಡುಗಡೆಯಾಯಿತು. ಬೆಳಕು ಹಾಗೂ ಸೌಂದರ್ಯದ ಕುರಿತು ವಿಭಿನ್ನ ಕಥಾಹಂದರವಿರುವ ಚಿತ್ರವಿದು, ಸದ್ಯದಲ್ಲೇ ಯು ಟ್ಯೂಬ್ ನಲ್ಲಿ ಬಿಡುಗಡೆಗೊಳ್ಳಲಿದೆ. ಈ ಕಿರುಚಿತ್ರದ ಕುರಿತು ನನ್ನ ಅಭಿಪ್ರಾಯವನ್ನು ಹಂಚಿಕೊಂಡಿದ್ದೇನೆ, ತಪ್ಪದೆ ಮುಂದೆ ಓದಿ…
ಬೆಳಕು ಎಂದರೇನು ? ಸೌಂದರ್ಯ ಎಂದರೇನು? ಬೆಳಕು ಹಾಗೂ ಸೌಂದರ್ಯದ ನಡುವೆ ಏನು ಸಂಬಂಧ?… ಬೆಳಕಿನ ಕುರಿತು ವಿಜ್ಞಾನಿ ಆಲ್ಬರ್ಟ್ ಐನ್ ಸ್ಟೈನ್ ಅವರ ಸಿದ್ದಾಂತಗಳನ್ನು ಹಾಗೂ ಸೌಂದರ್ಯದ ಕುರಿತು ಕಲಾವಿದ ಅಥವಾ ಕವಿಗಳ ಸಿದ್ದಾoತಗಳನ್ನು ಬಿಟ್ಟು ನೋಡುವುದಾದರೆ ಬೆಳಕೇ ಸೌಂದರ್ಯವಾ? ಅಥವಾ ಸೌಂದರ್ಯವೇ ಬೆಳಕಾ?…. ಈ ಪ್ರಶ್ನೆಗಳು ಸಾಕಷ್ಟು ಗೊಂದಲವನ್ನು ಹುಟ್ಟು ಹಾಕುತ್ತವೆ.
ನಿರ್ದೇಶಕ ಸುದರ್ಶನ್ ಭಟ್ಕಳ ಅವರ “ಸಂವಾದಿ ” ಕಿರುಚಿತ್ರವನ್ನು ನೋಡುವಾಗ ಏನಿದು ಬೆಳಕು? ಏನಿದು ಸೌಂದರ್ಯ?… ನಿರ್ದೇಶಕರು ಈ ಚಿತ್ರದಲ್ಲಿ ಏನನ್ನು ಹೇಳಲು ಹೊರಟಿದ್ದಾರೆ ಎನ್ನುವ ಸಾಕಷ್ಟು ಕುತೂಹಲಗಳು, ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತದೆ. ಚಲನಚಿತ್ರ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ಭಾ ಮಾ ಹರೀಶ್ ಅವರು ಮತ್ತು ಹಾಸ್ಯನಟ ಅಪ್ಪಣ್ಣ ರಾಮದುರ್ಗ ಅವರು “ಸಂವಾದಿ ” ಕಿರುಚಿತ್ರವನ್ನು ಬಿಡುಗಡೆ ಮಾಡಿದರು.

ಚಿತ್ರದಲ್ಲಿನ ನಾಯಕ ಒಬ್ಬ ಚಿತ್ರ ಕಲಾವಿದ. ಅವನ ಕುಂಚದಲ್ಲಿ ಅರಳಿದ ಚಿತ್ರದ ಸೌಂದರ್ಯವನ್ನು ಸವಿಯಲು ಬೆಳಕು ಬೇಕು. ಹಾಗಾಗಿ ಅವನ ದೃಷ್ಟಿಯಲ್ಲಿ ಬೆಳಕು ಸೌಂದರ್ಯ ಎನ್ನುವ ಸಿದ್ದಾoತವನ್ನು ಬಲವಾಗಿ ನಂಬಿದವನು. ಆಲಸ್ಯವಾದ ದೇಹದ ಮೇಲೆ ಬೆಳಕು ಬಿದ್ದಾಗ ಮನಸ್ಸಿಗೆ ಉಲ್ಲಾಸ ತುಂಬುತ್ತದೆ. ಕಲಾವಿದ ತನ್ನ ಕಲಾಕೃತಿಯಲ್ಲಿ ಸೌಂದರ್ಯವನ್ನು ಕಾಣುತ್ತಾನೆ, ಛಾಯಾಗ್ರಾಹಕ ಪ್ರಕೃತಿಯಲ್ಲಿ ಸೌಂದರ್ಯವನ್ನು ಕಾಣುತ್ತಾನೆ. ಈ ಎಲ್ಲಾ ಸೌಂದರ್ಯ ಅಡಗಿರುವುದು ಬೆಳಕಿನಲ್ಲಿ. ಹಾಗಾಗಿ ಬೆಳಕು ಇಲ್ಲಿ ಸೌಂದರ್ಯವಾಗಿ ಕಾಣುತ್ತದೆ.
ಬೆಳಕು ಸೌಂದರ್ಯ ಎಂದು ಸಿದ್ದಾoತವನ್ನು ರೋಢಿಸಿಕೊಂಡವನಿಗೆ ಅಂದನೊಬ್ಬ ಚಿತ್ರ ಕಲಾವಿದನಿಗೆ ಸವಾಲಾಗಿ ಕಾಣುತ್ತಾನೆ. ಕಣ್ಣಿಲ್ಲದ ಅಂಧನೂ ಕೂಡಾ ಸೌಂದರ್ಯವನ್ನು ಸವಿಯುತ್ತಾನೆ. ಅವನಿಗೆ ಬೆಳಕಿನ ಅವಶ್ಯಕತೆಯೇ ಇಲ್ಲಾ. ಹಾಗಿದ್ದಾಗ ಚಿತ್ರಕಲಾವಿದ ನಂಬಿದ್ದ ಸೌಂದರ್ಯವೆಂದರೆ “ಬೆಳಕು” ಎನ್ನುವ ಸಿದ್ದಾoತಕ್ಕೆ ವಿರೋಧವಾಗುತ್ತದೆ.
ಕಿರುಚಿತ್ರದ ಕೊನೆಯಲ್ಲಿ ನಮಗೆ ಅರ್ಥವಾಗುವುದು ಸೌಂದರ್ಯ ಬೆಳಕಿಗಿಂತ ವಿಸ್ತಾರವಾದದ್ದು. ಕಣ್ಣಿದ್ದವನಿಗೆ ಬಾಹ್ಯ ಸೌಂದರ್ಯ ಕಂಡರೆ, ಅಂದನಿಗೆ ಅಂತರಂಗದಿಂದ ಸೌಂದರ್ಯ ಕಾಣುತ್ತದೆ. ಚಿತ್ರ ಚಿಕ್ಕದಾದರೂ ಕತೆ ಅರ್ಥಗರ್ಭಿತವಾಗಿದೆ. ಇದರ ಪರಿಕಲ್ಪನೆ ಹಾಗೂ ನಿರ್ದೇಶನ ಸುದರ್ಶನ್ ಭಟ್ಕಳ ಅವರದು. ಅವರ ವಿಭಿನ್ನ ಆಲೋಚನೆ ಹಾಗೂ ಹೊಸ ಪ್ರಯತ್ನವನ್ನು ಮೆಚ್ಚುವಂತದ್ದು.
ಶೋಭನ್ ಬಸ್ರೂರು, ಚಂದ್ರ ನಿನಾಸಂ, ಅಂಜನ್ ನಾಗೇಂದ್ರ, ಚಂದ್ರಶೇಖರ್ ಕೆ ಅವರವರ ಪಾತ್ರಕ್ಕೆ ಜೀವ ತುಂಬಿದ್ದಾರೆ. ಕರೀಷ್ಮಾ ಹೆಗ್ಡೆಕರ್ ಮತ್ತು ನಿಸರ್ಗ ಮಯೂರ ಅವರು ಇನ್ನೂ ಪಾತ್ರಕ್ಕೆ ಜೀವ ತುಂಬ ಬಹುದಿತ್ತು ಅನಿಸಿತು.
‘ಸಂವಾದಿ’ ಕಿರುಚಿತ್ರ ನಿಧಾನವಾಗಿ ಸಾಗಿದರೂ ಮನಸ್ಸಿಗೆ ಹತ್ತಿರವಾಗುತ್ತದೆ. ಚಿತ್ರದಲ್ಲಿ ಆಗಾಗ ಕೇಳುವ ತಿಲಕ್ ರಾಂ ಅವರ ಕೊಳಲಿನ ನಾದ, ಬೆಳಕಿನ ವಿನ್ಯಾಸ, ಪರ್ವೀಜ್ ಅಹ್ಮದ್ ಅವರ ಹಾಡು ನೋಡುಗರಿಗೆ ಇಷ್ಟವಾಗುತ್ತದೆ. ಸಂವಾದಿ ಇದೊಂದು ಕಲಾತ್ಮಕ ಪ್ರಾಯೋಗಿಕ ಚಿತ್ರವಾಗಿರುವುದರಿಂದ ಅಭಿರುಚಿ ಇರುವ ಪ್ರೇಕ್ಷಕರಿಗೆ ಇದು ಖಂಡಿತ ಇಷ್ಟವಾಗುತ್ತದೆ. ಸದ್ಯದಲ್ಲೇ ಈ ಕಿರುಚಿತ್ರ ಯು ಟ್ಯೂಬ್ ಬರಲು ಸಿದ್ಧವಾಗಿದೆ, ಚಿತ್ರತಂಡಕ್ಕೆ ಆಕೃತಿ ಕನ್ನಡ ಶುಭವಾಗಲಿ ಎಂದು ಶುಭಹಾರೈಸುತ್ತದೆ.
- ಶಾಲಿನಿ ಹೂಲಿ ಪ್ರದೀಪ್ (ಆಕೃತಿ ಕನ್ನಡ ಸಂಪಾದಕಿ )
