ನೀನು ಸೋತು ನೊಂದಾಗ ನನ್ನೊಳಗೆ ನಾನು ಯಾಕೋ ಕಣ್ಣೀರಾಗುತ್ತಿದ್ದೆ…ಕವಿ ನಾಗರಾಜ ಜಿ. ಎನ್. ಬಾಡ ಅವರ ಲೇಖನಿಯಲ್ಲಿ ಮೂಡಿದ ಕವಿತೆಯನ್ನು ತಪ್ಪದೆ ಮುಂದೆ ಓದಿ…
ನೀನು ಸೋಲಬಾರದೆಂದು
ನಾನು ಸೋಲುತ್ತಿದ್ದೆ
ನಿನ್ನ ಗೆಲುವಿಗಾಗಿ
ನಾನು ಹಂಬಲಿಸುತ್ತಿದ್ದೆ
ನಿನ್ನ ಗೆಲುವಲ್ಲಿ
ನಾನು ಗೆಲುವಾಗುತ್ತಿದ್ದೆ
ನೀನು ಸಂಭ್ರಮಿಸುವಾಗ
ನಾನು ಕೇಕೆ ಹಾಕಿ ಕುಣಿಯುತ್ತಿದ್ದೆ
ಹುಣ್ಣಿಮೆಯ ಚಂದಿರನ ಬೆಳಕ
ನಿನ್ನ ಕಂಗಳಲ್ಲಿ ಕಾಣುತ್ತಿದ್ದೆ
ಬಹುಶಃ ಇದನ್ನು
ನೀನೂ ಅರಿತಿದ್ದೆ
ಆದರೂ ಗೊತ್ತೇ ಇರದಂತೆ
ಸುಮ್ಮನೆ ನಟಿಸುತ್ತಿದ್ದೆ
ಒಮ್ಮೊಮ್ಮೆ ನೀನು ಸೋತು
ನೊಂದಾಗ
ನನ್ನೊಳಗೆ ನಾನು
ಯಾಕೋ ಕಣ್ಣೀರಾಗುತ್ತಿದ್ದೆ
ನಿನ್ನ ಕಾಲ್ಗಳಿಗೆ
ಮುಳ್ಳು ಚುಚ್ಚಿದಾಗ
ನಾನು ನೋವಿನಿಂದ
ಮನದೊಳಗೆ ನರಳುತ್ತಿದ್ದೆ
ನಿನ್ನ ಬದುಕು ಸದಾ
ಬೆಳದಿಂಗಳಿಂದ ತುಂಬಿರಲಿ
ಎಂದು ಬೇಡಿಕೊಳ್ಳುತ್ತಿದ್ದೆ
ಎಷ್ಟೊಂದು ನೆನಪುಗಳಿತ್ತು
ನಮ್ಮೊಳಗೊಳಗೆ
ಎಲ್ಲವನ್ನೂ ಹಂಚಿಕೊಂಡು
ಹಗುರಾಗುತ್ತಿದ್ದೆ
ಮತ್ತದೇ ನೆನಪುಗಳ
ಬಿಚ್ಚಿಕೊಂಡು
ಮೆಲುಕು ಹಾಕುತ್ತಿದ್ದೇನೆ
ಚೆಲ್ಲಾ ಪಿಲ್ಲಿಯಾದ
ಭಾವನೆಗಳನ್ನು ಹೆಕ್ಕಿ ಹೆಕ್ಕಿ
ಮೂಟೆ ಕಟ್ಟಿಕೊಂಡು
ಬಾಲ್ಯದ ಸ್ಮರಣೆಗೆ
ಜಾರಿ ಹೋಗಿದ್ದೇನೆ
ಬದುಕಿನ ಖಾಲಿತನವ
ಮರೆಯುತ್ತಿದ್ದೇನೆ
ಹೊಸ ಚೈತನ್ಯವ
ತುಂಬಿಕೊಳ್ಳುತ್ತಿದ್ದೇನೆ
- ನಾಗರಾಜ ಜಿ. ಎನ್. ಬಾಡ
