ಲೇಖಕರಾದ ರವೀಂದ್ರ ಮುದ್ದಿ ಅವರು ವರದಾ ನದಿ ತೀರದಲ್ಲಿ ತಾವು ಕಂಡ ಜಗತ್ತನ್ನು ‘ವರದಾ ತೀರದ ಕಥೆಗಳು’ ಕೃತಿಯಲ್ಲಿ ಉತ್ತರ ಕರ್ನಾಟಕದ ಶೈಲಿಯಲ್ಲಿ ಹಿಡಿದಿಟ್ಟು ಓದುಗರಿಗೆ ವಿಭಿನ್ನ ವ್ಯಕ್ತಿತ್ವಗಳನ್ನು ಪರಿಚಯಿಸಿದ್ಧಾರೆ. ಈ ಕೃತಿಯ ಕುರಿತು ರಾಘವೇಂದ್ರ ಅಪರಂಜಿ ಅವರು ತಮ್ಮ ಅಭಿಪ್ರಾಯವನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ವರದಾ ತೀರದ ಕಥೆಗಳು.
ಲೇಖಕರು: ರವೀಂದ್ರ ಮುದ್ದಿ
ಬೆಲೆ: 160
ಮೊ.ಸಂಖ್ಯೆ: 7022122121
ದೃಶ್ಯ ಮಾಧ್ಯಮದ ಸೆಳೆತ ಇರುವ ವ್ಯಕ್ತಿಯೊಬ್ಬರು ಅಕ್ಷರಗಳಲ್ಲೂ ದೃಶ್ಯವನ್ನು ಕಟ್ಟಿಕೊಡುವುದಿದೆಯಲ್ಲ ಅದೇ ಸೋಜಿಗ. ಟಿವಿ 9 ಸುದ್ದಿವಾಹಿನಿ ಹಿರಿಯ ನಿರ್ಮಾಪಕ ರವೀಂದ್ರ ಮುದ್ದಿ ಅವರು ‘ವರದಾ ತೀರದ ಕಥೆಗಳು’ ಎನ್ನುವ ತಾವು ಬರೆದ ಪುಸ್ತಕವೊಂದನ್ನು ಕಳಿಸಿದ್ರು.
ಧಾರವಾಹಿಯೊಂದಕ್ಕೆ ಸಹಾಯಕ ನಿರ್ದೇಶಕರಾಗಿ, ಸುವರ್ಣ ನ್ಯೂಸ್ ನಲ್ಲಿ ಕಾರ್ಯಕ್ರಮ ನಿರ್ಮಾಪಕರಾಗಿ, ‘ತಲೆಹರಟೆ’ ಎನ್ನುವ ರಾಜಕೀಯ ವಿಡಂಬನಾ ಕಾರ್ಯಕ್ರಮದ ಮೂಲಕ ಮನೆಮಾತಾಗಿ, ಸದ್ಯ ಟಿವಿ 9 ಸುದ್ದಿ ವಾಹಿನಿಯಲ್ಲಿ ಹಿರಿಯ ನಿರ್ಮಾಪಕರಾಗಿರುವ ರವೀಂದ್ರ ಮುದ್ದಿ ಅವರ ಪುಸ್ತಕ ನನ್ನ ಕೈ ಸೇರಿದಾಗ ನಾನು ಓದಲು ಸಾಕಷ್ಟು ಉತ್ಸುಕನಾಗಿದ್ದೆ. ಆ ಉತ್ಸಾಹವನ್ನು ಪುಸ್ತಕವನ್ನು ತಣಿಸಿತು.

ಹುಟ್ಟಿದ ಊರು, ಊರ ಬಳಿ ಹರಿಯುವ ಹೊಳೆ, ಊರಿನ ವಿಭಿನ್ನ ವ್ಯಕ್ತಿಗಳು, ಆಟ ಆಡುವಾಗಲೂ ತೋರುವ ವಿಭಿನ್ನತೆ, ಗಂಡ ಇದ್ದಾಗಲೂ ಮನೆಯಿಂದ ಹೊರಗೆ ಬಂದು ಜೀವನ ನಡೆಸುವ ಗಟ್ಟಿಗಿತ್ತಿ ಮಹಿಳೆ, ಕ್ರಿಕೆಟ್ ಕೊಟ್ರೇಶಿ ಎನ್ನುವ ವಿಭಿನ್ನ ವ್ಯಕ್ತಿತ್ವ, ನಾಟಕ, ನಟಿಮಣಿಗಳು, ನಾಟಕ ಕಂಡು ಊರಿನ ಜನ ಪಡುವ ಸಂತಸ, ಈಶಪ್ಪನ ಕಬಡ್ಡಿ ಆಟ, ಹೊಳಿ ದಂಡೆಯಲ್ಲಿ ಬೆಂಕಿ ದೆವ್ವ, ಇಂಗ್ಲಿಷ ಜಮಾಲಣ್ಣ, ಆತ ತಾನಿರುವುದೇ ಸುಳ್ಳು ಎಂದು ಹೇಳಿ ಹೋದ ರೀತಿ, ಮೂರು ಕಾಸಿನ ಕುದುರೆ ಊರಿಗೆ ಹೇಗೆ ಮೆಚ್ಚುಗೆಗೆ ಪಾತ್ರವಾಗಿತ್ತು. ಅದಕ್ಕೆ ಹೆಣ್ಣು ಕುದುರೆ ವಾಸನೆ ಬಡಿದರೆ ಓಡಿಹೋಗುತ್ತಿತ್ತು ಎನ್ನುವ ನವಿರಾದ ಹಾಸ್ಯ, ಅದೇ ರೂಢಿ ಅದರ ಜೀವಕ್ಕೆ ಕುತ್ತಾದಾಗ ರೋಧಿಸುವ ಕುದುರೆ ಮಾಲೀಕನ ಪರಿಸ್ಥಿತಿ, ನಿಧಿಯ ಬೆನ್ನು ಹತ್ತಿದ ಅಮರಾಪುರದ ಜುಂಜಪ್ಪ ಹೇಗೆ ತನ್ನೆದೆಲ್ಲವನ್ನು ಕಳೆದುಕೊಂಡು ಬಿಟ್ಟ ಎನ್ನುವ ಕಥೆ ಸಮಾಜಕ್ಕೊಂದು ಪಾಠವೇ ಸರಿ., ವರದೆಯ ಆರ್ಭಟ, ಅದರಲ್ಲಿ ಕಳೆದು ಹೋದ ಎಮ್ಮೆ, ಎಮ್ಮೆ ಕಳೆದುಕೊಂಡ ಸಾವಂತ್ರಮ್ಮನ ಸಂಕಟ, ರೊಟ್ಟಿ ಬಸಪ್ಪನ ಪುರಾಣ ವೆರಿ ಇಂಟರೆಸ್ಟಿಂಗ್ ಆಗಿದೆ. ಮಮತೆಯ ಕರೆಯೋಲೆ ಕಥೆಯಂತೂ ಮನಸ್ಸಿನ ವರದಾ ತೀರವನ್ನು ಕಲುಕಿ ಬಿಡತದೆ. ಇದರಲ್ಲಿನ ಫಕ್ಕಿರಗೌಡನ ಕ್ಯಾರೆಕ್ಟರ್, ಕಥೆಗಾರನ ತಂದೆಯ ಮಮಕಾರ, ತಾಯಿಯ ಮಮತೆ, ನಂಬಿಕೆ ಎಲ್ಲವೂ ಮನಸ್ಸನ್ನು ಆವರಿಸುವ ಜತೆಗೆ ಕಣ್ಣಲ್ಲೊಂದಿಷ್ಟು ನೀರು ಜಿನುಗಿಸಿಬಿಡತಾವೆ.

ಲೇಖಕರು ವರದಾ ನದಿ ತೀರದಲ್ಲಿ ತಾವು ಕಂಡ ಜಗತ್ತನ್ನು ಉತ್ತರ ಕರ್ನಾಟಕದ ಶೈಲಿಯಲ್ಲಿ ಹಿಡಿದಿಟ್ಟು ಓದುಗರಿಗೆ ವಿಭಿನ್ನ ವ್ಯಕ್ತಿತ್ವಗಳನ್ನು ಪರಿಚಯಿಸಿದ್ಧಾರೆ. ವೀರಲೋಕದ ‘ಉತ್ತರ ಪರ್ವ’ದ ಸಂಪಾದಕ ರಾಗಂ ಈ ಕಥೆಗಳು ಪುಸ್ತಕ ರೂಪದಲ್ಲಿ ಓದುಗರ ಕೈ ಸೇರುವಂತೆ ಮಾಡಿದಾರೆ. ಪುಸ್ತಕದಲ್ಲಿ ಕಥೆಗಳನ್ನು ಓದುತ್ತಾ ನಮ್ಮ ಸುತ್ತಲಿನ ವಿಭಿನ್ನ ವ್ಯಕ್ತಿತ್ವದ ಕಥೆಗಳು ನೆನಪಿಗೆ ಬರತಾವೆ.
ನೀವು ‘ವರದಾ ತೀರದ ಕಥೆಗಳು’ ಪುಸ್ತಕ ತಪ್ಪದೆ ಓದಿ. ವಿಭಿನ್ನ ವ್ಯಕ್ತಿಗಳು ನಮ್ಮ ನಡುವೆ ಇರುವವರು ಹೇಗೆ ನಮ್ಮನ್ನು ಆವರಿಸಿಕೊಂಡುಬಿಡತಾರೆ ಎನ್ನುವ ಅರಿವು ನಮಗಾಗುತ್ತೆ. ನೀವು ಓದಿ.
- ರಾಘವೇಂದ್ರ ಅಪರಂಜಿ – ಪತ್ರಕರ್ತರು, ಹುಬ್ಬಳ್ಳಿ
