ಸ್ವರ್ಣಲತಾ ಮೂರು ದಶಕಗಳ ಹಿಂದೆಯೇ ಪತ್ರಕರ್ತೆಯಾಗಿದ್ದವರು, ಅದನ್ನು ಬಿಟ್ಟುಕೊಟ್ಟು ತಮ್ಮ ಪತಿಯ ಜೊತೆ ಅವರ ಊರಿಗೆ ತೆರಳಿ ತೆಂಗಿನ ತೋಟ ಮಾಡಿ ಯಶಸ್ವಿಯಾದವರು, ಅವರ ‘ಸಂಕ್ರಾಂತಿ’ ಕೃತಿಯ ಕುರಿತು ಲೇಖಕರಾದ ರಘುನಾಥ್ ಕೃಷ್ಣಮಾಚಾರ್ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ….
ಪುಸ್ತಕ : ಸಂಕ್ರಾಂತಿ
ಲೇಖಕರು : ಸ್ವರ್ಣಲತಾ ಎ.ಎಲ್
ಪುಟ : ೨೫೨
ಬೆಲೆ : ೨೫೦.೦೦
ಕಲ್ಪವೃಕ್ಷಗಳಿಂದ ಫಲಿಸಿದ ಜೀವಯಾನ, ನಾವು ಅಮೇರಿಕಾದಲ್ಲಿ ಇದ್ದಾಗ ಅಲ್ಲಿನ ನೂರಾರು ಎಕರೆ ಜಮೀನಿನ ಒಡೆಯರೊಬ್ಬರನ್ನು – ತೊಂಬತ್ತು ವರ್ಷ ಮೀರಿದ ಭೌತಶಾಸ್ತ್ರದ ಪ್ರಾಧ್ಯಾಪಕರನ್ನು ಭೇಟಿ ಮಾಡಿ ಅವರ ಸಂದರ್ಶನ ಮಾಡುತ್ತಾ ಅವರಿಗೆ ಅಲ್ಲಿನ ರೈತರ ಸ್ಥಿತಿಗಳ ಬಗ್ಗೆ ಪ್ರಶ್ನೆ ಕೇಳಿದೆವು.ಅದಕ್ಕೆ ಅವರು ಉತ್ತರ ನೀಡಿ ” ಸಾವಿರಾರು ಎಕರೆಗಳ ಒಡೆಯರಾದ ಶ್ರೀಮಂತ ಜಮೀನುದಾರರು ಮತ್ತು ಬಡ ರೈತರ ನಡುವೆ ಇರುವ ಅಪಾರ ಅಂತರದ ಮೇಲೆ ಬೆಳಕು ಚೆಲ್ಲಿ ಸರ್ಕಾರದ ಕೃಷಿ ನೀತಿಯನ್ನು ಕಟುವಾಗಿ ಟೀಕಿಸಿ “ರೈತರು ಬೆಳೆದ ಎಲ್ಲವನ್ನೂ ರಫ್ತು ಮಾಡಿ ಬಡರೈತರನ್ನು ಯಾವುದೇ ಬೆಂಬಲ ಬೆಲೆ ನೀಡದೆ, ಶೋಷಣೆ ಮಾಡುವ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು ಅದರಿಂದ ನಲವತ್ತೇಳರಷ್ಟು ಇದ್ದ ಕೃಷಿಕರ ಸಂಖ್ಯೆ ಈಗ ಶೇಕಡಾ ಒಂದಕ್ಕೆ ಇಳಿದಿದೆ’ ಎಂದು ವಿಷಾದಿಸಿದರು.( ಪ್ರಕಟವಾಗುತ್ತಿರುವ ನಮ್ಮ ಅಮೇರಿಕಾಯಣ ಪ್ರವಾಸ ಕಥನದಿಂದ)
ಈ ಕೃತಿಯನ್ನು ಓದಿದಾಗ ಅಮೇರಿಕಾದ ಪ್ರಾಧ್ಯಾಪಕರ ಮಾತುಗಳು ನೆನಪಿಗೆ ಬಂತು. ಎಲ್ಲಾ ಕಡೆ ಬಡ ರೈತರ ಕುರಿತು ಸರ್ಕಾರದ ನೀತಿ ಒಂದೇ. ಸಂಕ್ರಾಂತಿ ಹಬ್ಬ ರೈತರ ಹಬ್ಬ.ಅದನ್ನು ಮಲೆನಾಡಿನಲ್ಲಿ ಹಟ್ಟಿ ಹಬ್ಬ ಎಂದು ಕರೆಯುತ್ತಾರೆ ಎಂದು ಹಾ.ಮಾ.ನಾಯಕರು ಬರೆದು ಅದನ್ನು ಆಚರಿಸುವ ರೈತರ ಸಂಭ್ರಮವನ್ನು ವರ್ಣಿಸಿದ್ದಾರೆ.

ಸಂಕ್ರಾಂತಿ ಎಂದರೆ ಪಲ್ಲಟ ಎಂದು ಕೂಡ ಅರ್ಥ ಇದೆ. ರೈತರ ಬದುಕಿನಲ್ಲಿ ಆಗುತ್ತಿರುವ ನೇತ್ಯಾತ್ಮಕ ಪಲ್ಲಟಗಳ ಅನಾವರಣ ಈ ಕೃತಿಯ ಕೇಂದ್ರ ವಸ್ತು. ಅದಕ್ಕೆ ಸರ್ಕಾರ ಕೃಪಾಪೋಷಿತ ರೈತರು ಅವರು ಕೊಳ್ಳುವ ಸೀಮೆ ಗೊಬ್ಬರದ ಮೇಲೆ ಸರ್ಕಾರ ನೀಡುವ ಅಪಾತ್ರ ಸಬ್ಸಿಡಿ ಮತ್ತು ವಿದ್ಯುತ್ ಶುಲ್ಕ ಇಲ್ಲದಿರುವುದು ಪ್ರಧಾನ ಕಾರಣ. ಎಂದು ಸರ್ಕಾರದ ನೀತಿಯ ಕಟುಟೀಕೆ ಮಾಡಿ ಎ.ಪಿ.ಎಂ.ಸಿ ಗಳಲ್ಲಿ ದಲ್ಲಾಳಿಗಳಿಗೆ ರೈತರು ನೀಡಬೇಕಾದ ಕಮಿಷನ್ ಅನ್ನು ನಿಲ್ಲಿಸಿ , ರೈತರು ಬೆಳೆದ ಬೆಳೆಗೆ ನ್ಯಾಯ ಬೆಲೆ ನಿಗದಿ ಪಡಿಸಿದರೆ, ಮೇಲೆ ಹೇಳಿದ ಸಬ್ಸಿಡಿಗಳ ಕೊಡುವ ಅಗತ್ಯವಿಲ್ಲ ಎಂದು ಸಕಾರಣವಾಗಿ ಒತ್ತಾಯಿಸಿದ್ದಾರೆ. ಸಬ್ಸಿಡಿಗಳಿಂದ ಕ್ರಿಮಿನಾಶಕ ಔಷಧಗಳನ್ನು ಸಿಂಪಡಿಸಿ ಬೆಳೆದ ಬೆಳೆ ವಿಷವಲ್ಲದೆ ಬೇರೆ ಅಲ್ಲ ,, ಅದರಿಂದ ರೈತರ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮವನ್ನು ಅನಾವರಣ ಮಾಡಿದ್ದಾರೆ. ಅದರ ಜೊತೆಗೆ ವಿಧವೆ ಮತ್ತು ವೃದ್ಧಾಪ್ಯ ವೇತನ ನೀಡುವ ಸರ್ಕಾರದ ನೀತಿಯನ್ನು ಶ್ಲಾಘಿಸಿದ್ದಾರೆ . ಇದು ಅವರ ವಸ್ತುನಿಷ್ಠ ದೃಷ್ಟಿಯ ಬರಹಕ್ಕೆ ನಿದರ್ಶನ.
ಇವರು ಸಾವಯವ ಕೃಷಿಗೆ ಒತ್ತು ನೀಡಿ ಸ್ವತಃ ಪರಿಶ್ರಮದಿಂದ ಹದಿನೈದು ವರ್ಷಗಳ ಕಾಲ ನಿರಂತರವಾಗಿ ದುಡಿದು, ಕಲ್ಪವೃಕ್ಷಗಳನ್ನು ನೆಟ್ಟು ಬೆಳೆಸಿದ ಅವರ ಸಾಹಸದ ಗಾಥೆಯನ್ನು ಬಿಚ್ಚಿಟ್ಟಿದ್ದಾರೆ . ಕಲ್ಪವೃಕ್ಷಗಳಿಗೆ ಸುಳಿ ಹತ್ತಿದಾಗ ಅದರ ನಿವಾರಣೆಗೆ ಅವರು ಬೇವಿನ ಎಲೆಗಳನ್ನು ಬುಡದಲ್ಲಿ ಹಾಕಿ, ಅದನ್ನು ತಡೆಗಟ್ಟುವ ಸಾವಯವ ವಿಧಾನವನ್ನು ವಿವರಿಸಿದ್ದಾರೆ. ಇದರಿಂದಾಗಿ ಕಲ್ಪವೃಕ್ಷಗಳಿಗೆ ತಗಲುವ ರೋಗ ಮಾತ್ರವಲ್ಲದೆ ರೋಗ ನಿರೋಧಕಗಳನ್ನು ಏಕಕಾಲಕ್ಕೆ ಸೂಚಿಸಿದ್ದಾರೆ .
ಕಳೆದ ವರ್ಷ ತಾನೇ ನನ್ನ ಗೆಳೆಯರ ಅಣ್ಣನ ಮಗ ಪರೀಕ್ಷಿತ , ಪತ್ರಕರ್ತರಾಗಿದ್ದವರು, ಅದನ್ನು ಬಿಟ್ಟು ತೆಂಗಿನ ತೋಟ ಮಾಡಿ ಯಶಸ್ವಿಯಾದದ್ದನ್ನು, ಇದೇ ಮೊಗ ಹೊತ್ತಿಗೆಯಲ್ಲಿ ಬರೆದು ಹಂಚಿಕೊಂಡ ನೆನಪು ಇದರಿಂದ ಮರುಕಳಿಸಿತು.ಅವರು ಇದನ್ನು ಮಾಡಿದ್ದು ಈಚೆಗೆ.
ಆದರೆ ನನ್ನ ಗೆಳೆಯರಾದ ಚಂದ್ರು ತಂಗಿ ಸ್ವರ್ಣಲತಾ ಮೂರು ದಶಕಗಳ ಹಿಂದೆಯೇ, ಇದೆ ಬೆಂಗಳೂರಿನಲ್ಲಿ ತಮ್ಮ ಅಣ್ಣನ ಸಹಾಯದಿಂದ ಪತ್ರಕರ್ತೆಯಾಗಿದ್ದವರು, ಅದನ್ನು ಬಿಟ್ಟುಕೊಟ್ಟು ತಮ್ಮ ಪತಿಯ ಜೊತೆ ಅವರ ಊರಿಗೆ ತೆರಳಿ ಈ ಸಾಹಸಗಾಥೆ ಮಾಡಿದ್ದು ಒಂದು ಅನನ್ಯ ಸಾಧನೆ ಎಂದೇ ಹೇಳಬಹುದು. ಎಲ್ಲರೂ ನಗರಮುಖಿಗಳಾಗಿ ಹಳ್ಳಿಗಳು ಪಾಳುಬಿದ್ದ ಈ ಸಂದರ್ಭದಲ್ಲಿ, ಗಾಂಧಿಯವರ ಗ್ರಾಮ ಸ್ವರಾಜ್ಯದ ಕರೆಗೆ ಓಗೊಟ್ಟಂತೆ, ಕೇಂದ್ರ ಸರ್ಕಾರದ ಕೆಲಸದಿಂದ ನಿವೃತ್ತಿಯ ನಂತರ ನಾಲ್ಕು ದಶಕಗಳ ಹಿಂದೆ ,ತಮ್ಮ ತಂದೆ ಹಳ್ಳಿಗೆ ಹೋಗಿ ಕೃಷಿಯಲ್ಲಿ ತೊಡಗಿ ಇವರನ್ನೆಲ್ಲ ಬೆಳೆಸಿದ ಹಾಗೆ, ಅವರನ್ನು ಅನುಸರಿಸಿ ಇವರು c. ಇವರ ಈ ಪುಸ್ತಕಕ್ಕೆ ಮತ್ತು ಅವರ ಅಣ್ಣ ಚಂದ್ರಶೇಖರ ಆಲೂರು ಅವರ ಪ್ರಬಂಧಗಳಿಗೆ ಕೆಲವು ಸಾಮಾನ್ಯ ಲಕ್ಷಣಗಳನ್ನು ಹೊಂದಿವೆ.
ಅವು:
- ಅವರ ನಿಸರ್ಗ ಪ್ರೇಮ ಮತ್ತು ಸ್ವಾರ್ಥಕ್ಕಾಗಿ ಹಾಳು ಮಾಡುವವರ ವಿರುದ್ಧ ಸಾತ್ವಿಕ ಸಿಟ್ಟು . ಇದಕ್ಕೆ ಅವರ ಊರಿನ ಹೊಳೆಯನ್ನು ನುಂಗಿ ನೊಣೆದವರ ಕುರಿತ ಬರಹಗಳು ನಿದರ್ಶನ.
- ಸಾಮಾಜಿಕ ನೇತ್ಯಾತ್ಮಕ ಪಲ್ಲಟಗಳ ಕುರಿತ ವಿಷಾದ : ಗ್ರಾಮೀಣ ಹಾಗೂ ನಾಗರಿಕ ಜೀವನದಲ್ಲಿ. ಏಕಪ್ರಕಾರವಾಗಿ
- ಕಾವ್ಯಾತ್ಮಕ ಭಾಷೆ: ಇವರು ತೋಟದಲ್ಲಿ ಸುತ್ತಾಡಲು ಹೋದಾಗ ನವಿಲುಗಳ ನರ್ತನ ಮತ್ತು ತೆಂಗುಗರಿಗಳ ನಡುವೆ ಮೂಡಿ ಬರುವ ಸೂರ್ಯನ ವರ್ಣನೆ. ಇವರಲ್ಲಿ ಅದು ಕ್ವಚಿತ್ತಾಗಿ ಬಳಕೆಯಾದರೆ ಚಂದ್ರು ಬರಹಗಳಲ್ಲಿ ಅದು ಹಾಸುಹೊಕ್ಕಾಗಿದೆ.
- ತಂಗಿಯ ಸಾಧನೆ ಕುರಿತು ಅಣ್ಣನ ಬರಹದಲ್ಲಿ ಹೆಮ್ಮೆ ಕಂಡುಬರುತ್ತದೆ.ತಂಗಿ ಅಣ್ಣನ ಕುರಿತು ತಾನು ಅವನ ಕಾಪಿಚೆಟ್ ಎಂದು ಕರೆದುಕೊಂಡು ಋಣಸಂದಾಯ ಮಾಡಿದ್ದಾರೆ.

ಈ ಕೃತಿಯ ವೈಶಿಷ್ಟ್ಯಗಳು
- ಮೊದಲ ಬಾರಿಗೆ ಮೂರು ದಶಕಗಳಿಂದ ನಾಗರಿಕ ದಂಪತಿ ಗ್ರಾಮೀಣ ಪ್ರದೇಶದ ಕೃಷಿ ಬದುಕನ್ನು ಕಟ್ಟಿಕೊಳ್ಳಲು ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿಕೊಂಡು ,ಅದರ ಸವಾಲುಗಳನ್ನು ಸಮರ್ಥವಾಗಿ ಎದುರಿಸಿ ಅದರಲ್ಲಿ ಸಾಫಲ್ಯ ಕಂಡಿದ್ದು.
- ಅಪೂರ್ವವಾದ ಸಾಮಾಜಿಕ ಕಾಳಜಿ ಅನನ್ಯವಾಗಿ ಕೃತಿಯುದ್ದಕ್ಕೂ ಅನುಸ್ಯೂತವಾಗಿ ಪ್ರಕಟವಾಗಿದೆ.
- ಕೂಡು ಕುಟುಂಬದ ಸಂಭ್ರಮದ ಕ್ಷಣಗಳನ್ನು ಸೆರೆಹಿಡಿದಿರುವುದು ಇಂದು ಒಂದು ಮಾಯಕದ ಪ್ರಪಂಚದಂತೆ ಕಾಣಿಸುತ್ತದೆ.ಇದೆ ಕೂಡು ಕುಟುಂಬದ ಸಂಭ್ರಮದೊಂದಿಗೆ ಕೃತಿ ಕೊನೆಗೊಳ್ಳುವುದು ಒಂದು ಸಾವಯವ ಸಂಬಂಧವನ್ನು ಕೃತಿಗೆ ನೀಡಿದೆ.
- ಎಲ್ಲಾ ಸರ್ಕಾರಿ ಯೋಜನೆಗಳ ದುರುಪಯೋಗ ನರೇಗಾದಿಂದ ಮೊದಲುಗೊಂಡು ಪಂಚಾಯಿತಿಯವರೆಗೆ. ಭ್ರಷ್ಟಾಚಾರದ ಕೂಪಗಳಾಗಿ ಬಿಟ್ಟಿರುವ ಗಾಢವಾದ ವಿಷಾದ.
- ಕಾವ್ಯಮಯ ಆಕರ್ಷಕ ಶೀರ್ಷಿಕೆಗಳು: ಊರು ಉಪಕಾರ ಬಲ್ಲದೆ ಶವ ಶೃಂಗಾರ ಬಲ್ಲದೇ, ಜಗವೆಲ್ಲ ಮಲಗಿರಲು ಇತ್ಯಾದಿ
ಅದಕ್ಕೇ ನನ್ನ ಅಕ್ಕ ಡಾ. ಮಂಗಳಾ ಪ್ರಿಯದರ್ಶನಿ ಅದರ ಗ್ರಾಮೀಣ ಸೊಗಡನ್ನು ತಮ್ಮ ಮುನ್ನುಡಿಯಲ್ಲಿ ಕೊಂಡಾಡಿದ್ದಾರೆ.ಅದರ ಜೊತೆ ಸೇರಿಸಬೇಕಾದ ಮಾತೆಂದರೆ ಅವರು ಭಾಷಾ ಬಳಕೆಯ ಕುರಿತು ತೋರಿಸುವ ಕಾಳಜಿ.ಶಿಷ್ಟ ಭಾಷೆಗಿಂತ ಗ್ರಾಮೀಣ ಭಾಷೆಗೆ, ಇಂಗ್ಲಿಷ್ ಗಿಂತ ಕನ್ನಡಕ್ಕೆ ಹೆಚ್ಚು ಒಲಿದಿದ್ದಾದರೂ, ಅಲ್ಲಲ್ಲಿ ಕ್ವಚಿತ್ತಾಗಿ ಇಂಗ್ಲಿಷ್ ಭಾಷೆಯ ಬಳಕೆ ಕೂಡ ಇದೆ.ಅದು ಕೆಲವು ಸಲ ಸಂವಹನಕ್ಕೆ ತೊಡಕನ್ನು ಉಂಟು ಮಾಡುತ್ತದೆ.ಇದರೊಂದಿಗೆ ಕೆಲವು ಸಂಗತಿಳ ಪುನರುಕ್ತಿ ಕೂಡ ಕಿರಿ ಕಿರಿಯನ್ನು ಮೂಡಿಸುತ್ತದೆ. ಅದರ ಹಿಂದಿನ ಅವರ ಭಾವುಕತನ ಅರ್ಥವಾದರೂ. ಜೊತೆ ಜೊತೆಗೆ ಲಿಪಿ ಸ್ಖಾಲಿತ್ಯಗಳು ಕೂಡ ಇವೆ. ಆದರೆ ಇವೆಲ್ಲ ಅವರ ಸಾಹಸಗಾಥೆ ಮತ್ತು ಸಾಮಾಜಿಕ ಕಾಳಜಿಯ ಎದುರು ಗೌಣ ಸಂಗತಿಗಳು.
ನನ್ನ ಮೆಚ್ಚಿನ ಗೆಳೆಯರಾದ ಚಂದ್ರು ಅವರ ತಂಗಿ ಇವರು ಎಂದು ತಿಳಿದಾಗ, ಗೆಳೆಯರ ಪ್ರಬಂಧಗಳನ್ನು ಕಳಿಸಿ ಎಂದು ಅವರನ್ನು ಕೋರಿದೆ.ನನ್ನ ಕೋರಿಕೆಯನ್ನು ಮನ್ನಿಸಿದ ಅವರು ಕೂಡಲೇ ತಮ್ಮ ಅಣ್ಣನ ಪುಸ್ತಕದ ಜೊತೆಗೆ, ತಮ್ಮ ಪುಸ್ತಕವನ್ನು ಕೂಡ ಕಳಿಸಿ ,ನಮ್ಮ ಗ್ರಾಮೀಣ ಜಗತ್ತಿನ ಪಲ್ಲಟಗಳ ಕುರಿತು ನನ್ನ ಅರಿವಿನ ವಿಸ್ತಾರಕ್ಕೆ ಕಾರಣರಾಗಿದ್ದಾರೆ.ಅವರಿಗೆ ವಂದನೆ ಅಭಿನಂದನೆ.
ಮನುಷ್ಯ ನಾಗರೀಕನಾಗುವುದು , ಆಧುನಿಕತೆ ಬೆಳೆಸಿಕೊಳ್ಳುವುದು ಎಂದರೆ ಅಂತ:ಕರಣ, ಮಾನವೀಯತೆಗಳನ್ನು ಕಳೆದುಕೊಳ್ಳುವುದು ಎಂದು ಅರ್ಥವೆ”? (ಪುಟ:೨೧೮) ಎಂದು ಲೇಖಕಿ ಒಂದು ಕಡೆ ಕೇಳುವ ಪ್ರಶ್ನೆ, ಇದನ್ನು ಓದುವವರಲ್ಲಿ ಅನುರಣಿಸಿದರೆ, ಆಗ ಈ ಕೃತಿಯ ಸಾರ್ಥಕತೆ.
- ರಘುನಾಥ್ ಕೃಷ್ಣಮಾಚಾರ್ – ಲೇಖಕರು, ರಾಮನಿರಂಜನ್ ಝುನ್ಝುನ್ವಾಲ ಕಾಲೇಜು ಉಪನ್ಯಾಸಕರು
