ತೆಲುಗು ಸಿನಿಮಾ “ಸಂಕ್ರಾಂತಿಕಿ ವಸ್ತುನಾಂ” ಸಿನಿಮಾದಲ್ಲಿ ಶಕ್ತಯುತ ಕಥೆಯಾಗಲೀ, ಗಂಭೀರವಾದ ಪಾತ್ರಗಳಾಗಲೀ, ಸಿಕ್ಕಾಪಟ್ಟೆ ಸೀರಿಯಸ್ ಸ್ಕ್ರಿಪ್ಟ್ ಆಗಲೀ ಇಲ್ಲವೇ ಯಾವುದೋ ಸಾಮಾಜಿಕವಾಗಿ ಚಿಂತನೆಗೊಳಗಾಗುವ ಸಂದೇಶವಾಗಲೀ ಇಲ್ಲ. ಈ ಸಿನಿಮಾದ ಕತೆ ಏನು ಎಂಬುದಕ್ಕಿಂತ ಏನನ್ನೂ ನಿರೀಕ್ಷಿಸದೇ ಸುಮ್ಮನೇ ಸಕುಟುಂಬ ಸಹಿತ ಥಿಯೇಟರ್ ಗೆ ಹೋಗಿ ಸಿನಿಮಾ ನೋಡಿ…
ನಿಮ್ಮ ನಿತ್ಯ ಬದುಕಿನ ಎಲ್ಲಾ ಜಂಜಾಟಗಳನ್ನು ಎರಡೂವರೆ ಘಂಟೆ ಮರೆತು, ಜೀವನದ ಎಲ್ಲಾ ಥರದ ಸೀರಿಯಸ್‌ನೆಸ್ಸನ್ನು ಮೂಟೆ ಕಟ್ಟಿಟ್ಟು , ಜಸ್ಟ್ ನಗುವಿನಲೆಯಲ್ಲಿ ನವಿರಾದ ಭಾವನೆಗಳಲ್ಲಿ ಕಚಗುಳಿ ಇಟ್ಟಂತಹ ದೃಶ್ಯಗಳಲ್ಲಿ ಹಾಗೇ ಸುಮ್ಮನೇ ಕಳೆದುಹೋಗ ಬಯಸುವಿರಾದರೆ , ಒಮ್ಮೆ ನನ್ನ ಆಲ್ ಟೈಮ್ ಫ಼ೇವರೀಟ್ ಹೀರೋ ವೆಂಕಿ (ವಿಕ್ಟರಿ ವೆಂಕಟೇಶ್ ) ಯ ಹೊಸ ತೆಲುಗು ಸಿನಿಮಾ ” ಸಂಕ್ರಾಂತಿಕಿ ವಸ್ತುನಾಂ ” ಗೆ ಹೀಗೆ ಹೋಗಿ ಹಾಗೆ ಬನ್ನಿ. ಹಾಂ… ಹೋಗುವಾಗ ಕುಟುಂಬ ಸಮೇತ ಹೋಗಿ ನೋಡಿ.
ಥಿಯೇಟರ್ ಒಳಕ್ಕೆ ಹೋಗುವಾಗ ನಿಮ್ಮ ಮನದಲ್ಲಿ ಏನೇ ದುಗುಡವಿರಲಿ ಅಥವಾ ಮುಖದಲ್ಲಿ ಎಂತಹದೇ ಗಂಟುಗಳೇ ತುಂಬಿರಲಿ, ಸಿನಿಮಾ ಮುಗಿದು ಹೊರಕ್ಕೆ ಬಂದಾಗ ಮೈ ಮನಸ್ಸು ಎಲ್ಲವೂ ಹಗುರವಾಗಿ ಕೆಲಹೊತ್ತು ರಿಲ್ಯಾಕ್ಸ್ ಮೂಡಿಗೆ ಹೊರಳಿರುತ್ತೀರ.

ಫೋಟೋ ಕೃಪೆ :google
ಹಾಗಂತ ಈ ಸಿನಿಮಾದಲ್ಲಿ ಶಕ್ತಯುತ ಕಥೆಯಾಗಲೀ, ಗಂಭೀರವಾದ ಪಾತ್ರಗಳಾಗಲೀ, ಸಿಕ್ಕಾಪಟ್ಟೆ ಸೀರಿಯಸ್ ಸ್ಕ್ರಿಪ್ಟ್ ಆಗಲೀ ಇಲ್ಲವೇ ಯಾವುದೋ ಸಾಮಾಜಿಕವಾಗಿ ಚಿಂತನೆಗೊಳಗಾಗುವ ಸಂದೇಶವಾಗಲೀ ಇಲ್ಲ. ಅಸಲು ಇಡೀ ಸಿನಿಮಾವನ್ನು ಯಾವುದೇ ತರ್ಕ, ರ್‍ಯಾಷನಲ್, ಲಾಜಿಕ್ಕು ಇಟ್ಟುಕೊಂಡು ನೋಡುವುದೂ ತರವಲ್ಲ. ಸೀರಿಯಸ್ ನೆಸ್ ಅಂತೂ ಮೊದಲೇ ಇಲ್ಲ. ಹೀಗಾಗಿ ಯಾವುದೇ ನಿರೀಕ್ಷೆ ಇಟ್ಟುಕೊಳ್ಳದೇ ಸುಮ್ಮನೆ ಹೋಗಿ ಸಿನಿಮಾ ಮುಂದೆ ಕೂತರೆ ಎಂಜಾಯ್ ಮಾಡಿ ಬರುತ್ತೀರ ಎಂಬ ಗ್ಯಾರಂಟಿ ಮಾತ್ರ ಕೊಡಬಲ್ಲೆ.
ಸಿನಿಮಾಕ್ಕೆ ಬೇಕಾದ ಗಟ್ಟಿ ಕತೆ ಗಂಭೀರ ಪಾತ್ರಗಳೇ ಇಲ್ಲವೆಂದ ಮೇಲೆ ಅದೆಂಥಾ ಸಿನಿಮಾರೀ… ಎನ್ನುವಿರಾ ?
ಈ ಸಿನಿಮಾದ ಮನರಂಜನಾತ್ಮಕ ಓಘ, ಪ್ರತೀ ಸನ್ನಿವೇಶ ಇಡುವ ಕಚಗುಳಿ, ವೆಂಕಿಯ ಎಂದಿನ ಮೆಚೂರ್ಡ್ ಅಭಿನಯ, ಪಕ್ಕದ ಮನೆಯ ಹುಡುಗಿಯರಂತೆ ಕಾಣುವ ಇಬ್ಬರು ಕ್ಯೂಟ್ ಹೀರೋಯಿನ್ಸ್ ಐಶ್ಬರ್ಯ ರಾಜೇಶ್ ಮತ್ತು ಮೀನಾಕ್ಷಿ ಚೌಧರಿಯವರ ದಂಗಲ್ ಸಾಥ್, ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಕೇಳಿದಂತೆಲ್ಲಾ ಮತ್ತೆಮತ್ತೆ ಕೇಳಬೇಕೆನಿಸುವ , ಮನಸಿಗೆ ಮುದ ನೀಡುವ ಹಾಗೂ ಯೂಟ್ಯೂಬ್ ವೀಕ್ಷಣೆಯಲ್ಲಿ ದೊಡ್ಡ ದಾಖಲೆ ಬರೆದ ಸೊಗಸಾದ ಹಾಡುಗಳು ನಿಮ್ಮೆಲ್ಲಾ ಮನರಂಜನೆಯ ಬೇಡಿಕೆಗೆ ಅಸ್ತು ಎನ್ನುತ್ತವೆ.
ಅತಿ ಹೆಚ್ಚು ಫ಼್ಯಾಮಿಲಿ ಆಡಿಯೆನ್ಸ್ ಹೊಂದಿರುವ ಅದ್ಭುತ ಟೈಮಿಂಗ್ಸ್ ಇರುವ ಸ್ಪುರಧ್ರೂಪಿ ನಾಯಕ ನಟ ವೆಂಕಿಯ ಈ ಸಿನಿಮಾ ಈಗಾಗಲೇ 300 ಕೋಟಿ ಕ್ಲಬ್ ಸೇರಿದೆಯಂತೆ. ಜೊತೆಗೆ ಪ್ರೇಕ್ಷಕರ ನಾಡಿಮಿಡಿತ ಬಲ್ಲ ನಿರ್ದೇಶಕ ಅನಿಲ್ ರಾವಿಪುಡಿಯ ನಿರೂಪಣೆ ಹಾಗೂ ಸನ್ನಿವೇಶಗಳನ್ನು ಕಟ್ಟಿಕೊಟ್ಟ ರೀತಿ ಎಲ್ಲೂ ಬೋರ್ ಹೊಡೆಸುವುದಿಲ್ಲ. ಸಿನಿಮಾದಲ್ಲಿನ ಎಲ್ಲಾ ಪಾತ್ರಗಳೂ ನವಿರಾದ ಕಚಗುಳಿ ಇಡುವಲ್ಲಿ ಯಶಸ್ವಿಯಾಗಿವೆ. ವೆಂಕಿ ಸಿನಿಮಾಗಳೆಂದರೆ ಕೊಟ್ಟ ಕಾಸಿಗೆ ಮೋಸವಿಲ್ಲದೇ ನಿಮ್ಮನ್ನು ಖುಷಿಪಡಿಸುವ ಸಾಂಸಾರಿಕ ಕತೆಗಳುಳ್ಳ ಸಿನಿಮಾಗಳು ಎಂಬುದು ಮತ್ತೇ ಸಾಬೀತಾಗಿದೆ.
ಈ ಸಿನಿಮಾದ ಕತೆ ಏನು ಎಂಬುದಕ್ಕಿಂತ ಏನನ್ನೂ ನಿರೀಕ್ಷಿಸದೇ ಸುಮ್ಮನೇ ಸಕುಟುಂಬ ಸಹಿತ ಥಿಯೇಟರ್ ಗೆ ಹೋಗಿ ಸಿನಿಮಾನೋಡಿ. ನಿಮ್ಮ ವೀಕೆಂಡ್ ಮಾತ್ರ ಎಂಜಾಯೆಬಲ್ ಆಗಿರುತ್ತೆ.
ಚಿತ್ರದ ಮೊದಲರ್ಧ ಸಿಕ್ಕಾಪಟ್ಟೆ ಮಜವಾಗಿದ್ದರೆ ಎರಡನೇ ಭಾಗದಲ್ಲಿ ಕೆಲವು ದೃಶ್ಯಗಳನ್ನು ಬಲವಂತವಾಗಿ ತುರುಕಿದಂತಿದೆ. ಇಡೀ ಸಿನಿಮಾದಲ್ಲಿ ಸೀರಿಯಸ್ ದೃಶ್ಯಗಳೆಂಬ ಮಾತೇ ಇಲ್ಲ. ಹೀಗಾಗಿ ಯಾವ ತರ್ಕಕ್ಕೂ ತಲೆ ಕೆಡಿಸಿಕೊಳ್ಳದೇ ಸಿನಿಮಾನೋಡಿದಲ್ಲಿ ಇದೊಂದು ಪಕ್ಕಾ ಪೈಸಾ ವಸೂಲ್ ಮನರಂಜನೆಯ ಸಿನಿಮಾ.

ಫೋಟೋ ಕೃಪೆ :google
* ಮರೆಯುವ ಮುನ್ನ *
ಸಂಕ್ರಾಂತಿಕಿ ವಸ್ತುನ್ನಾಂ ಸಿನಿಮಾ ಔಟ್ ಅಂಡ್ ಔಟ್ ಕಾಮಿಡಿಯಾದರೂ ಕೆಲವೊಂದು ಸಾಮಾಜಿಕ ಹಾಗೂ ಸಾಂಸಾರಿಕ ಸಂದೇಶ ಕೊಡುವಲ್ಲಿಯೂ ಹಿಂದೆ ಬಿದ್ದಿಲ್ಲ.
ಮದುವೆಗೆ ಮುನ್ನ ನಿಮಗೊಬ್ಬಳು ಪ್ರಿಯತಮೆ ಇದ್ದರೆ, ಅಂತಹ ವಿಷಯವನ್ನು ಯಾವ ಕಾರಣಕ್ಕೂ ಮುಂದೆ ನಿಮ್ಮ ಹೆಂಡತಿಯೊಂದಿಗೆ ಹಂಚಿಕೊಳ್ಳಬೇಡಿ ಎಂಬ ಮಜ ಕೊಡುವ ಡೈಲಾಗು ಇರುವಲ್ಲಿಯೇ… ಅಕ್ಷರ ಕಲಿಸಿದ ಗುರುವನ್ನು, ಜೀವನ ತಿದ್ದಿದ ಮೇಷ್ಟ್ರನ್ನು ಎಂದಿಗೂ ಮರೆಯಬಾರದೆಂಬ ನೀತಿ ಪಾಠವೂ ಉಂಟು.
ಎಲ್ಲಕ್ಕಿಂತ ಮುಖ್ಯವಾಗಿ ಕುಳಿತಲ್ಲೇ ಕಾಲುಗಳು ಚಲನೆ ಮಾಡುವಂತೆ ಮಾಡಬಲ್ಲ ಅದ್ಭುತ ಟ್ಯೂನ್ ಗಳಿರುವ ಹಾಡುಗಳು ಈ ಚಿತ್ರ ಹಿಟ್ ಆಗಲು ವೆಂಕಿಯಷ್ಟೇ ಸಮಾನ ಕಾರಣ. ಈಗಾಗಲೇ ಹೇಳಿದಂತೆ ದುಗುಡವಿರುವ ಮನಸಿಗೆ ನವಿರಾದ ಕಚಗುಳಿ ಕೊಡುವಂತಹ, ಎರಡೂವರೆ ಗಂಟೆ ನಿಮ್ಮ ಮೊಗದಲ್ಲಿ ನಗುವನ್ನೇ ಮೂಡಿಸುವಂತಹ, ಯಾವ ತರ್ಕ ಲಾಜಿಕ್ಕಿಗೂ ಆಸ್ಪದವಿಲ್ಲದಂತಹ ಶುದ್ಧ ಮನರಂಜನೆಯ ಸಿನಿಮಾ ” ಸಂಕ್ರಾಂತಿಕಿ ವಸ್ತುನ್ನಾಮ್ “.
ತೆಲುಗು ಭಾಷೆ , ವಿಕ್ಟರಿ ವೆಂಕಟೇಶ್ , ಸೂಪರ್ ಸಾಂಗ್ಸ್ ಹಾಗೂ ಕಾಮಿಡಿ ಟೈಂ….. ಇವುಗಳ ಬಗ್ಗೆ ಒಲವಿದ್ದರೆ ಈ ಸಿನಿಮಾ ಖುಷಿಖುಷಿಯಾಗಿ ನೋಡಬಹುದು.
ಪ್ರೀತಿಯಿಂದ….
- ಹಿರಿಯೂರು ಪ್ರಕಾಶ್
