ಪಂಢರಪುರದ ಪಾಂಡುರಂಗ ವಿಠಲನ ಭಕ್ತರಲ್ಲಿ ಸಂತ ಜ್ಞಾನೇಶ್ವರ, ಸಂತ ತುಕರಾಮ, ನಾಮದೇವ ,ಗೋರಾ ಕುಂಬಾರ, ದಾಮಾಜಿ ಪಂತ , ಮುಕ್ತಾಬಾಯಿ, ಇನ್ನೂ ಅನೇಕ ಮಹಾ ಮಹಿಮರು ಇದ್ದಾರೆ. ಪಾರಮಾರ್ಥಿಕ ಜೀವನದಲ್ಲಿ ತಮ್ಮನ್ನು ಉದ್ಧಾರ ಮಾಡಿ ಕೊಳ್ಳುವದರ ಜೊತೆಗೆ ಅನೇಕ ಪಾಮರರಿಗೂ ಮಾರ್ಗದರ್ಶನ ಮಾಡಿದ್ದಾರೆ. ತಪ್ಪದೆ ಮುಂದೆ ಓದಿ…
ಇತ್ತೀಚೆಗೆ ನಮ್ಮ ಸಹೋದರ ನಾರಾಯಣ ಪಾಟೀಲ ಅವರ ಧಾರವಾಡ ಮನೆಯಲ್ಲಿ ಹೂಲಿ ಗ್ರಾಮದಿಂದ ಬಂದ ಸಂತರಿಂದ ಭಜನೆ ಕೀರ್ತನೆ ಅಹೋರಾತ್ರಿ ನಡೆಯಿತು. ಶ್ರೀ ಮಾರುತಿ ವಂಟಿಗಡದ ಇವರಿಂದ ಹರಿಕೀರ್ತನೆ ಶ್ರೀ ಯಲ್ಲಪ್ಪ ಮೆಗೇರಿ ಇವರು ಸಹಯೋಗ ನೀಡಿದರು. ಇನ್ನೂ ಅನೇಕ ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಣ್ಯ ಭಾಜನರಾದರು. ಸಂತರ ಮಹಿಮೆ ಎಷ್ಟು ಅಪಾರ ಇದೆ ಮತ್ತು ಅವರ ಭಕ್ತಿಯ ಮುಂದೆ ದೇವರೂ ಸಹಿತ ಚಿಕ್ಕವನಾಗುತ್ತಾನೆ. ಮತ್ತು ಪಾಂಡುರಂಗನೂ ಸಹಿತ ಸಂತರ ಪೂಜೆ ಮಾಡುತ್ತಾನೆ, ಇವುಗಳನ್ನು ದೃಷ್ಟಾಂತದ ಮೂಲಕ ಹೇಳಿದರು.

ನಾರಾಯಣ ಅವರ ಶ್ರೀಮತಿ ಪದ್ಮಾ ಪಾಟೀಲ ಇವರು ಸಂತ ತುಕಾರಾಮರ ಬಗ್ಗೆ ತುಂಬಾ ಅರ್ಥ ಗರ್ಬಿತವಾಗಿ ಮಾತನಾಡಿ ಭಕ್ತಿಯ ಮಹಿಮೆ ಎಷ್ಟು ಅಪಾರ ಎನ್ನುವ ಬಗ್ಗೆ ಹೇಳಿದರು.
ತುಕಾರಾಮ ಅವರ ಬಡತನ ಮತ್ತು ಐಹಿಕ ತೊಂದರೆ ಅವರ ಪಾರಮಾರ್ಥಿಕ ಸಾಧನೆಗೆ ಅಡ್ಡ ಬರಲಿಲ್ಲ. ಅದನ್ನು ಮೀರಿ ತಮ್ಮ ಭಕ್ತಿ ಸಾಧನೆ ಮಾಡಿದರು. ಅಂಥಹ ಸಂತರನ್ನು ನಾವು ನೆನೆಯ ಬೇಕು.

ಸಂತ ನಾಮದೇವರ ಬಗ್ಗೆ ಒಂದು ದೃಷ್ಟಾಂತ ನೆನಪಾಗುತ್ತದೆ. ನಾಮದೆವವರೂ ಕೂಡ ಪಾಂಡುರಂಗನ ಸಾಕ್ಷಾತ್ಕಾರ ಮಾಡಿಕೊಂಡವರು. ಒಮ್ಮೆ ಎಲ್ಲ ಸಂತರು ಅಂದರೆ ಭಕ್ತ ಗೋರಾ ಕುಂಬಾರ , ಜ್ಞಾನದೇವ, ಮುಕ್ತಾಬಾಯಿ, ಸಂತನಾಮದೇವ , ಇನ್ನೂ ಅನೇಕ ಸಂತರು ಪಾರಮಾರ್ಥಿಕ ಚಿಂತನೆಯಲ್ಲಿ ತೊಡಗಿದಾಗ ಮುಕ್ತಾಬಾಯಿ “ಗೋರಾ ನಮ್ಮ ಎಲ್ಲ ಸಂತರಲ್ಲಿ ಪಾರಮಾರ್ಥಿಕ ಪ್ರಗತಿ ಎಸ್ಟಾಗಿದೆ ಮತ್ತು ನೀನು ಘಟ (ಗಡಿಗೆ) ಮಾಡುವವನು ಹೀಗಾಗಿ ನಮ್ಮ ಎಲ್ಲರ ಘಟ ಪರೀಕ್ಷೆ ಮಾಡು ” ಎಂದಳು.
ಅದರಂತೆ ಗೋರಾ ಕುಂಬಾರ ತನ್ನ ಕಟ್ಟಿಗೆಯ ಫಳಿ , (ಘಟಕ್ಕೆ ಹೊಡೆಯುವದು.) ಅದನ್ನು ತೆಗೆದುಕೊಂಡು ಎಲ್ಲರ ತಲೆಗೆ ಒಂದು ಪೆಟ್ಟು ಕೊಡುತ್ತಾ ಪರೀಕ್ಷೆ ಮಾಡುತ್ತಿದ್ದನು. ಎಲ್ಲರೂ ಅದಕ್ಕೆ ತಲೆ ಬಾಗಿದ್ದರು.ಆದರೆ ನಾಮದೇವರಿಗೆ ಮಾತ್ರ ಅಹಂ ಅಡ್ಡ ಬಂದಿತು. “ನಾನು ಪಾಂಡುರಂಗನ ಜೊತೆಗೆ ಪಗಡಿ ಆಡುತ್ತೇನೆ. ನಾನು ಅವನ ಭಕ್ತ ಇದ್ದೇನೆ. ಇವರು ಏನು ನನ್ನನ್ನು ಪರೀಕ್ಷೆ ಮಾಡುವದು ”
ಗೋರಾ ಕುಂಬಾರ
“ಈ ಘಟ ಇನ್ನೂ ಕಚ್ಚಾ ಇದೆ ಪಕ್ವವಾಗಿಲ್ಲ.”
ನಾಮದೇವರು ನಾನು ಪಾಂಡುರಂಗನನ್ನೆ ಕೇಳುತ್ತೇನೆ ಎಂದು ಸಿಟ್ಟಿನಿಂದ ಎದ್ದು ಹೋದರು
ಪಾಂಡುರಂಗ ದೇವರು
“ಇಲ್ಲ ಅವರು ಹೇಳಿದ್ದು ಖರೆ ಇದೆ ನಿನಗೆ ಗುರು ಉಪದೇಶ ಆಗಬೇಕು.”
ನಾಮದೇವರು ಗುರುವನ್ನು ಹುಡುಕುತ್ತ ಹುಡುಕುತ್ತ ದೂರದ ವಿಶೋಭಾ ಖೇಚರ್ ಹತ್ತಿರ ಬಂದರು. ವಿಷೋಭಾ ಖೇಚರ ಅವರಿಗೆ ತುಂಬ ವಯಸ್ಸಾಗಿತ್ತು. ನಾಮದೇವರು ಅಲ್ಲಿಗೆ ಹೋದಾಗ ಅವರು ಈಶ್ವರ ಲಿಂಗದ ಮೇಲೆ ತಮ್ಮ ಚಪ್ಪಲ್ಲ ಸಹಿತವಾಗಿ ಕಾಲು ಇಟ್ಟುಕೊಂಡು ಮಲಗಿದ್ದರು. ಇವರೆಂಥಹ ಗುರುಗಳು ಎನ್ನುವ ಮನೋಭಾವ ದೊಂದಿಗೆ
“ಏನು ಲಿಂಗದ ಮೇಲೆ ಕಾಲು ಇಟ್ಟಿದ್ದೀರಿ ”
ವಯೋವೃದ್ಧ ಖೇಚರ ಅವರು “ಏನು ಮಾಡಲಿ ನನಗೆ ವಯಸ್ಸಾಗಿದೆ.ನೀನೇ ನನ್ನ ಕಾಲನ್ನು ಬೇರೆ ಕಡೆ ಇಟ್ಟು ಉಪಕಾರ ಮಾಡು.” ಅದರಂತೆ ನಾಮದೇವರು ಅವರ ಕಾಲು ಎತ್ತಿ ಬೇರೆ ನೆಲದ ಮೇಲೆ ಇಟ್ಟರು ಅಲ್ಲಿ ಕೂಡ ಒಂದು ಈಶ್ವರ ಲಿಂಗ ಉದ್ಭವ ಆಯಿತು. ಮತ್ತೆ ಬೇರೆ ಇಟ್ಟರು ಅಲ್ಲಿ ಕೂಡ ಒಂದು ಈಶ್ವರ ಲಿಂಗ ಉದ್ಭವ ಆಯಿತು. ಅವರು ಎಲ್ಲಿ ಇಟ್ಟರೂ ಅಲ್ಲಿ ಲಿಂಗ ಉದ್ಭವ ಆಗಲಿಕ್ಕೆ ಹತ್ತಿತು. ಆಗ ನಾಮದೇವರಿಗೆ ಜ್ಞಾನೋದಯ ಆಯಿತು. ಇವರೇ ನನ್ನ ಗುರುಗಳು. ದೇವರು ಇಲ್ಲದ ಸ್ಥಳ ಯಾವದಿದೆ. ಎಲ್ಲ ಕಡೆ ದೇವರು ವ್ಯಾಪಿಸಿದ್ದಾನೆ. ಗುರುಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ
“ನನ್ನ ಕಣ್ಣು ತೆರೆದಿಸಿರಿ”
“ನಿಮಗೆ ಕೋಟಿ ಕೋಟಿ ಪ್ರಣಾಮಗಳು ”
ಎಂಥಹ ಅದ್ಭುತ ದೃಷ್ಟಾಂತ. ಇಂತಹ ಪುಣ್ಯ ಪುರುಷರ ಬಗ್ಗೆ ನೆನೆದು ನಾವು ಪಾವನರಾಗೋಣ.
- ಅರವಿಂದ ಬಾ ಕುಲ್ಕರ್ಣಿ – ಹೂಲಿ
