೨೦೨೨ರಲ್ಲಿ ರಿಷಿಯವರು ಪ್ರಧಾನಿಯಾಗಿಯಾಗುವ ಹೊತ್ತಿಗೆ ಕರ್ನಾಟಕದವರೇ ಆದ ಪ್ರಧಾನಿಯವರ ಪತ್ನಿ ಅಕ್ಷತಾ ಮೂರ್ತಿಯವರು ಕಟ್ಟುವ ತೆರಿಗೆಯ ವಿಷಯ, ರಾಷ್ಟ್ರೀಯತೆ, ಅವರ ಮನೆಯಲ್ಲಿ ಟೀ ಕೊಡುವ ಕಪ್ಪು ಮತ್ತು ಸಾಸರ್ ಬೆಲೆಯ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಆ ವಿಷಯಗಳು ಹಿಂದೆ ಸರಿದಿದೆ. ಅದು ರಿಷಿಯವರ ಯಶಸ್ವಿ ನಾಯಕತ್ವದ ಗುಣವನ್ನು ಕೂಡ ತೋರಿಸುತ್ತದೆ.
ಸಾಮಾನ್ಯವಾಗಿ ಇಂಗ್ಲೆಂಡಿನಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರತದ ಜನ ಸಾಮಾನ್ಯರು ಜಾಸ್ತಿ ಕುತೂಹಲ ತೋರಿಸುವುದಿಲ್ಲ. ಆದರೆ ಈ ಸಾರಿ ಕನ್ಸರ್ವೇಟಿವ್ ಪಕ್ಷದ ನಾಯಕರು ಭಾರತೀಯ ಮೂಲದ ‘ರಿಷಿ ಸುನಕ್’ರವರು. ರಿಷಿ ಒಂದು ವಿಶೇಷ ಸಂದರ್ಭದಲ್ಲಿ ಇಂಗ್ಲೆಂಡಿನ ಪ್ರಧಾನಿಯಾಗಿ ೨೦೨೨ರಲ್ಲಿ ಅಧಿಕಾರ ವಹಸಿಕೊಂಡರು. ಆಗ ತಮ್ಮನ್ನು ಎರಡು ಶತಮಾನಗಳಷ್ಟು ಆಳಿದ ದೇಶವೊಂದರ ಚುಕ್ಕಾಣಿಯನ್ನು ಭಾರತದ ಮೂಲದ ವ್ಯಕ್ತಿಯೊಬ್ಬರು ಹಿಡಿದಿದ್ದು ಒಂದು ರೀತಿಯ ಕುತೂಹಲದ ಜೊತೆಗೆ ಸಂತೋಷ ಕೂಡ ಕೊಟ್ಟಿತ್ತು. ಹಾಗಾಗಿ ಈ ಬಾರಿ ಏನಾಗಬಹುದು ಎನ್ನುವ ಬಗ್ಗೆ ಒಂದಿಷ್ಟು ಕುತೂಹಲವಿದೆ.
ಈಗ ಘೋಷಿಸಿರುವ ಅವಧಿ ಪೂರ್ವ ಚುನಾವಣೆ ಜುಲೈ ನಾಲ್ಕರಂದು ನಡೆಯಲಿದೆ. ಈ ಸಮಯದಲ್ಲಿ ರಿಷಿ ಸುನಕ್ ನಡೆಸಿದ ಆಡಳಿತವನ್ನು ಬ್ರಿಟೀಷರು ನಿಷ್ಕರ್ಷೆಗೆ ಒಳಪಡಿಸುವುದು ಮತ್ತು ತಮ್ಮ ಮುಂದಿರುವ ಆಯ್ಕೆಗಳ ಬಗ್ಗೆ ಯೋಚಿಸುವುದು ಸಹಜವೇ ಆಗಿದೆ.
ಪ್ರಪಂಚವೆಲ್ಲಾ ಕೊರೋನ ಸುಳಿಯಲ್ಲಿ ಸಿಕ್ಕಿಕೊಂಡಾಗ ಇಂಗ್ಲೇಂಡಿನ ಹಣಕಾಸಿನ ಸಚಿವರಾಗಿದ್ದವರು ‘ರಿಷಿ ಸುನಕ್’. ಇವರು ಹಣಕಾಸಿನ ಪರಿಸ್ಥಿತಿಯನ್ನು ಸಂಕಷ್ಟ ಸಮಯದಲ್ಲಿ ನಿಭಾಯಿಸಿದ ರೀತಿ ಎಲ್ಲರ ಗಮನ ಸೆಳೆಯಿತು. ಆದರೆ ಆ ಪರಿಸ್ಥಿತಿಯಲ್ಲಿ ನಡೆದ ‘ಪಾರ್ಟಿಗೇಟ್’ ಹಗರಣ ಮತ್ತು ಇತರ ಪ್ರಕರಣಗಳಿಂದ ಅಂದಿನ ಪ್ರಧಾನಿ ಬೋರಿಸ್ ಜಾನ್ಸನ್ ಸಾರ್ವಜನಿಕವಾಗಿ ಟೀಕೆಗೆ ಒಳಗಾದರು. ಆಗ ರಿಷಿಯವರು ಸಂಪುಟದಿಂದ ಹೊರ ನಡೆದಾಗ ಪ್ರಧಾನಿ ರಾಜೀನಾಮೆ ಕೊಡ ಬೇಕಾಗಿ ಬಂತು. ನಂತರ ಲಿಜ್ ಟ್ರಸ್ ರವರು ಪ್ರಧಾನಿಯಾಗಿ ಆಯ್ಕೆಯಾದರು. ಆ ಸಮಯದಲ್ಲಿ ಲಿಜ್ ಟ್ರಸ್ ಮಾಡಿದ ಅನುದಾನ ರಹಿತ ದೊಡ್ಡ ಮಟ್ಟದ ತೆರಿಗೆ ಕಡಿತ ಟೀಕೆಗೆ ಒಳಗಾಗಿ, ಅವರು ನಿರ್ಗಮಿಸ ಬೇಕಾಯಿತು. ಕೊರೋನದ ಸಮಯದಲ್ಲಿ ಉಂಟಾದ ಹಣದುಬ್ಬರದಿಂದ ನಿತ್ಯ ಬಳಕೆಯ ವಸ್ತುಗಳು ಬೆಲೆ ಎರಿಕೆ ಕಂಡಿದ್ದವು. ಅದರಿಂದ ಚೇತರಿಸಿಕೊಳ್ಳುವ ಮೊದಲೇ ಪ್ರಾರಂಭವಾದ ರಷ್ಯಾ -ಉಕ್ರೇನ್ ಯುದ್ಧ ತೈಲ ಬೆಲೆಯ ಮೇಲೆ ಪರಿಣಾಮ ಬೀರಿ, ಜನ ಸಾಮಾನ್ಯರ ಕೊಳ್ಳುವ ಶಕ್ತಿಯ ಮೇಲೆ ಪರಿಣಾಮ ಬೀರಿತ್ತು. ಇಂತಹ ಸಮಯದಲ್ಲಿ ಇಂಗ್ಲೆಂಡಿನ ಅರ್ಥಿಕತೆಯನ್ನು ಸರಿಮಾಡುವ ಆಶ್ವಾಸನೆ ಕೊಟ್ಟು ರಿಷಿ ಸುನಕ್ ಪ್ರಧಾನಿಯಾಗಿದ್ದರು.

ಕನ್ಸರ್ವೇಟಿವ್ ಪಕ್ಷ ೨೦೧೯ರಲ್ಲಿ ಚುನಾವಣೆ ಎದುರಿಸಿದಾಗ ಬೋರಿಸ್ ಜಾನ್ಸನ್ ನಾಯಕರಾಗಿದ್ದರು. ಹಾಗಾಗಿ, ರಿಷಿ ಸುನಕ್ ನಾಯಕರಾಗಿ ಚುನಾವಣೆ ಎದುರಿಸುತ್ತಿರುವುದು ಇದು ಪ್ರಥಮ ಬಾರಿ. ಈ ಚುನಾವಣೆ ಕನ್ಸರ್ವೇಟಿವ್ ಪಕ್ಷದ ಆಡಳಿತ ಮಾತ್ರವಲ್ಲದೆ ರಿಷಿಯವರ ನಾಯಕತ್ವದ ಪರೀಕ್ಷೆ ಕೂಡ ಆಗಿದೆ. ಸಾಂಪ್ರದಾಯಿಕವಾಗಿ ಮುಕ್ತ ಮಾರುಕಟ್ಟೆಯನ್ನು ಪ್ರತಿಪಾದಿಸುವ ಮತ್ತು ತೆರಿಗೆಯನ್ನು ಕಡಿಮೆ ಮಾಡುವುದನ್ನು ನೀತಿಯಾಗಿ ಒಪ್ಪಿಕೊಂಡಿರುವ ಕನ್ಸರ್ವೇಟಿವ್ ಪಕ್ಷ ಈಗ ತನ್ನ ಸಿದ್ಧಾಂತಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. ಅನೇಕ ಸಾರ್ವಜನಿಕ ಕಾರ್ಯಗಳಲ್ಲಿ ಮತ್ತು ಮೂಲಭೂತ ಸೌಕರ್ಯ ಒದಗಿಸಲು ಹಣ ಖರ್ಚು ಮಾಡುವುದರ ಜೊತೆಗೆ ಕಲ್ಯಾಣ ಯೋಜನೆಗಳಿಗೂ ಆದ್ಯತೆ ನೀಡುತ್ತಿದೆ.
೨೦೨೪ರ ಮೊದಲ ತ್ರೈಮಾಸಿಕದಲ್ಲಿ ಇಂಗ್ಲೆಂಡಿನ ಒಟ್ಟು ದೇಶೀಯ ಉತ್ಪನ್ನ (ಜಿ.ಡಿ.ಪಿ) ೦.೬% ಏರಿಕೆ ಕಂಡುಬಂದಿದೆ. ಇದೇ ಸಮಯದಲ್ಲಿ ನಿರುದ್ಯೋಗದ ಪ್ರಮಾಣ ಸುಮಾರು ೪%ರಷ್ಟಿದ್ದರೆ, ಹಣದುಬ್ಬರ ಸುಮಾರು ೫.೭%ರಷ್ಟಿದೆ. ಇವೆಲ್ಲವೂ ಕೊರೋನದ ನಂತರ ಆರ್ಥಿಕತೆ ಮತ್ತೆ ಸರಿದಾರಿಗೆ ಬರುತ್ತಿರುವುದನ್ನು ಸೂಚಿಸುತ್ತದೆ.
ಹೆಚ್ಚಿದ ಇಂಧನ ಬೆಲೆಯಿಂದ ಜನ ಸಾಮಾನ್ಯರ ಮೇಲೆ ಆದ ಆರ್ಥಿಕ ಹೊರೆ ತಗ್ಗಿಸಲು ಇಂದನ ಬೆಲೆ ಖಾತರಿ (ಎನರ್ಜಿ ಪ್ರೈಜ್ ಗ್ಯಾರಂಟಿ) ಯೋಜನೆ ಮೂಲಕ ಸಹಾಯ ಧನ ನೀಡಲಾಗಿದೆ. ಸಣ್ಣ ಕೈಗಾರಿಕೆಗಳಿಗಾಗಿ ಸಹಾಯ ಧನ ಮತ್ತು ಸಾಲಗಳ ರೂಪದಲ್ಲಿ ೨೦೨೨ರಿಂದ ಸುಮಾರು £ ೧೨ಬಿಲಿಯನ್ ನೀಡಲಾಗಿದೆ.
ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್.ಹೆಚ್.ಎಸ್.)ಯನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಈಗ ಎರಡು ವರ್ಷಗಳ ಅವಧಿಯಲ್ಲಿ ಸುಮಾರು £ ೧೫ ಬಿಲಿಯನ್ ಹೆಚ್ಚಿನ ಹಣ ವಿನಿಯೋಗ ಮಾಡಲಾಗಿದೆ. ಈ ಆರೋಗ್ಯ ಸೇವೆಯ ಬಜೆಟ್ ೨೦೨೩-೨೪ರಲ್ಲಿ ಸುಮಾರು £ ೧೫೭ಬಿಲಿಯನ್ ಎಂದು ತಿಳಿದಾಗ ಇದರ ಆಳ ಮತ್ತು ಅಗಲದ ಪರಿಚಯವಾಗುತ್ತದೆ. ಆರೋಗ್ಯ ಸೇವೆಗಾಗಿ ಕಾಯುವ ಸಮಯವನ್ನು ಕಡಿಮೆ ಮಾಡಲು ೨೦೨೪ರ ಅಂತ್ಯದೊಳಗೆ ೫೦೦೦೦ ನರ್ಸುಗಳ ಸೇರ್ಪಡೆಯ ಗುರಿಯನ್ನು ಮೀರುವ ಸಾಧ್ಯತೆಯಿದೆ.
ಇದೇ ರೀತಿ ಶಿಕ್ಷಣ ಕ್ಷೇತ್ರದಲ್ಲಿ, ನವೀಕರಿಸಬಹುದಾದ ಇಂಧನ ಶಕ್ತಿ ಯೋಜನೆಗಳಿಗೆ, ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಹೆಚ್ಚಿನ ಆಧ್ಯತೆ ಕೊಡಲಾಗಿದೆ. ಕಠಿಣವಾದ ವಲಸೆಯ ನಿಯಂತ್ರಣದ ಯೋಜನೆಗಳನ್ನು ಜಾರಿಗೊಳಿಸಿದೆ. ಯುರೋಪಿಯನ್ ಒಕ್ಕೂಟದಿಂದ ಹೊರಬಂದ ಮೇಲೆ ಅನೇಕ ದೇಶಗಳ ಜೊತೆ ವ್ಯಾಪಾರ ಒಪ್ಪಂದಗಳನ್ನು ಮಾಡಿಕೊಳ್ಳಲಾಗಿದೆ. ಒಂದು ಚುನಾವಣೆಯಲ್ಲಿ ಗೆಲ್ಲಲು ಇಷ್ಟು ಸಾಕೇ ಎನ್ನುವುದೇ ಈಗಿನ ಪ್ರಶ್ನೆ.
ಕೊರೋನ ನಂತರ ಆದ ಆರ್ಥಿಕ ಸಂಕಷ್ಟ, ಹಣದುಬ್ಬರ, ಬೆಲೆ ಏರಿಕೆ, ರಷ್ಯಾ-ಉಕ್ರೇನ್ ಯುದ್ಧದಿಂದ ಆದ ಸಂಕಷ್ಟ ವಿಶ್ವದ ಎಲ್ಲಾ ದೇಶಗಳಲ್ಲೂ ಆಗಿದೆ. ಬೆಲೆ ಏರಿಕೆ ಪ್ರಮಾಣ ಈಗ ಸ್ವಲ್ಪ ಮಟ್ಟಿಗೆ ತಹಬಂದಿಗೆ ಬಂದಿದ್ದರೂ, ಬ್ಯಾಂಕುಗಳು ಇನ್ನೂ ವಿಧಿಸುತ್ತಿರುವ ಹೆಚ್ಚಿನ ಬಡ್ಡಿದರ ಎಲ್ಲವೂ ಸರಿಯಾಗಿಲ್ಲವೆಂದು ತೋರಿಸುತ್ತದೆ. ಇಂತಹ ಸಂದರ್ಭದಲ್ಲಿ ಭಾರತವೂ ಸೇರಿದಂತೆ ಕೆಲವು ದೇಶಗಳು ಚುನಾವಣೆ ಎದುರಿಸಿದಾಗ ಆಳುವ ಪಕ್ಷಗಳಿಗೆ ಸ್ವಲ್ಪ ಮಟ್ಟಿಗೆ ಹಿನ್ನೆಡೆಯಾಗಿರುವುದನ್ನು ನೋಡಬಹುದು. ಅದರ ಜೊತೆಗೆ ಇತ್ತೀಚೆಗೆ ಯುರೋಪಿನ ಪಾರ್ಲಿಮೆಂಟಿಗೆ ನಡೆದ ಚುನಾವಣೆಗಳಲ್ಲಿ ಬಲಪಂಥೀಯ ಪಕ್ಷಗಳು ಮೇಲುಗೈ ಸಾಧಿಸಿವೆ.
ಇಂತಹ ಸಂದರ್ಭದಲ್ಲಿ ಬ್ರಿಟಿಷರಿಗೆ ಇರುವ ಆಯ್ಕೆಯ ಅವಕಾಶಗಳನ್ನು ನೋಡಬೇಕು. ಇಂಗ್ಲೆಂಡಿನಲ್ಲಿ ಈಗ ವಿರೋಧ ಪಕ್ಷದ ಸ್ಥಾನದಲ್ಲಿ ಲೇಬರ್ ಪಕ್ಷವಿದೆ. ಲೇಬರ್ ಪಕ್ಷ ಕಾರ್ಮಿಕ ವರ್ಗದ ಹಿತಾಸಕ್ತಿಗಳನ್ನು ಪ್ರತಿನಿಧಿಸುವ, ಕಲ್ಯಾಣ ರಾಜ್ಯವನ್ನು ಸ್ಥಾಪಿಸುವ ಗುರಿಯನ್ನು ಹೊಂದಿತ್ತು. ಕಾಲಕ್ರಮೇಣ ಅದು ತನ್ನ ಅನೇಕ ನೀತಿಗಳಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದೆ. ಅನೇಕ ಸೈದ್ಧಾಂತಿಕ ಕಾರಣಗಳಿಂದ ಕೆಲವೊಮ್ಮೆ ಆಂತರಿಕವಾಗಿಯೂ ನಡೆದ ವಿಭಜನೆ ಪ್ರಯತ್ನಗಳಿಂದ ಲೇಬರ್ ಪಕ್ಷ ಸೊರಗಿತ್ತು. ೨೦೨೦ರಲ್ಲಿ ಕಿಯರ್ ಸ್ಟಾರ್ಮರ್ ಲೇಬರ್ ಪಕ್ಷದ ನಾಯಕತ್ವ ವಹಸಿಕೊಂಡು ಪಕ್ಷದಲ್ಲಿ ಒಗ್ಗಟ್ಟು ತರಲು ಪ್ರಯತ್ನ ಪಡುವುದಲ್ಲದೇ, ಸಮಕಾಲೀನ ವಿಷಯಗಳನ್ನು ಪರಿಹರಿಸಲು ಪ್ರಾಶಸ್ತ್ಯ ಕೊಟ್ಟಿದ್ದಾರೆ. ಈಗ ಕೆಲವು ಸಮೀಕ್ಷೆಗಳು ಜನಾಭಿಪ್ರಾಯದಲ್ಲಿ ಲೇಬರ್ ಪಕ್ಷ ಮುಂದಿರುವುದನ್ನು ಸೂಚಿಸುತ್ತಿದೆ.

ಫೋಟೋ ಕೃಪೆ : google
ಈ ಸಮಯದಲ್ಲಿ ನೂರು ವರ್ಷಗಳ ಹಿಂದೆ ೧೯೨೪ರಲ್ಲಿ ನಡೆದ ಇಂಗ್ಲೆಂಡಿನ ಚುನಾವಣೆಯ ಫಲಿತಾಂಶ ನೋಡೋಣ. ಆ ಚುನಾವಣೆಯಲ್ಲಿ ಆಡಳಿತದಲ್ಲಿ ಇದ್ದ ಲಿಬರಲ್ ಪಕ್ಷ ಪರಾಭವ ಹೊಂದಿತು. ಅಂದಿನಿಂದ ಬ್ರಿಟನ್ನಿನಲ್ಲಿ ಕನ್ಸರ್ವೇಟಿವ್ ಮತ್ತು ಲೇಬರ್ ಎರಡು ಪಕ್ಷದ ವ್ಯವಸ್ಥೆಯ ಸ್ಥಾಪನೆಗೆ ಕಾರಣವಾಯಿತು. ಲಿಬರಲ್ ಪಕ್ಷ ಆನಂತರ ಒಂದು ಸಣ್ಣ ಪಕ್ಷವಾಗಿ ಮಾತ್ರ ಉಳಿದಿದೆ. ಆಗಲೂ ಬ್ರಿಟನ್ನಿನ ಅರ್ಥಿಕತೆ ಮೊದಲ ಮಹಾಯುದ್ಧದ ಪರಿಣಾಮವಾಗಿ ತೊಂದರೆಯಲ್ಲಿತ್ತು. ಆಗ ನಡೆದ ಚುನಾವಣೆಯಲ್ಲಿ ಕನ್ಸರ್ವೇಟಿವ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದಿತ್ತು.
ಇತ್ತೀಚಿನ ವರ್ಷಗಳಲ್ಲಿ ಬ್ರಿಟನ್ ಆರ್ಥಿಕ ತೊಂದರೆಗಳನ್ನು ಅನುಭವಿಸುತ್ತಿರುವಾಗ ನಡೆದ ಚುನಾವಣೆಗಳ ಫಲಿತಾಂಶಗಳನ್ನು ಅವಲೋಕನ ಮಾಡುವ ಸಂದರ್ಭ ಈಗ ಬಂದಿದೆ.
೧೯೭೯ರಲ್ಲಿ ಬೆಲೆ ಏರಿಕೆ, ನಿರುದ್ಯೋಗ ಮತ್ತು ಹಿಂದುಳಿದ ಆರ್ಥಿಕತೆಯ ಸಂದರ್ಭದಲ್ಲಿ ಜೇಮ್ಸ್ ಕ್ಯಾಲಘನ್ ನಾಯಕತ್ವದ ಲೇಬರ್ ಸರ್ಕಾರವನ್ನು ಸೋಲಿಸಿ, ಮಾರ್ಗರೆಟ್ ನಾಯಕತ್ವದ ಕನ್ಸರ್ವೇಟಿವ್ ಪಕ್ಷ ಅಧಿಕಾರಕ್ಕೆ ಬಂದಿತ್ತು.
೧೯೯೨ರಲ್ಲಿ ಆರ್ಥಿಕ ಕುಸಿತ, ಹೆಚ್ಚಿನ ನಿರುದ್ಯೋಗ ಇನ್ನಿತರ ಆರ್ಥಿಕ ಸವಾಲುಗಳಿದ್ದಾಗ ಕಷ್ಟದಿಂದ ಕನ್ಸರ್ವೇಟಿವ್ ಪಕ್ಷ ಗೆದ್ದು ಜಾನ್ ಮೇಜರ್ ಪ್ರಧಾನಿಯಾಗಿ ಉಳಿದರು.
೨೦೦೮ರ ಜಾಗತಿಕ ಆರ್ಥಿಕ ಆಘಾತದ ಪರಿಣಾಮವಾಗಿ ಉಂಟಾದ ಅಧಿಕ ಸರ್ಕಾರಿ ಸಾಲ ಮತ್ತು ಆರ್ಥಿಕ ಸಂಕಷ್ಟದಲ್ಲಿ ಬ್ರಿಟನ್ ಕೂಡ ಇತ್ತು. ೨೦೧೦ರಲ್ಲಿ ನಡೆದ ಚುನಾವಣೆಯಲ್ಲಿ ಕನ್ಸರ್ವೇಟಿವ್ಸ್ ಪಕ್ಷ, ಡೇವಿಡ್ ಕ್ಯಾಮರಾನ್ ನೇತೃತ್ವದಲ್ಲಿ, ಲಿಬರಲ್ ಡೆಮಾಕ್ರಟ್ಸ್ ಜೊತೆ ಮೈತ್ರಿ ಸರ್ಕಾರವನ್ನು ರಚಿಸಿತ್ತು.
೨೦೧೯ರಲ್ಲಿ ಬ್ರೆಕ್ಸಿಟ್ ನಿಂದ ಉಂಟಾದ ಆರ್ಥಿಕ ಅನಿಶ್ಚಿತತೆ ಮತ್ತು ಮುಂದೆ ನಡೆಯಲು ಸ್ಪಷ್ಟ ಮಾರ್ಗದ ಅವಶ್ಯಕತೆ ಇದ್ದಾಗ ನಡೆದ ಚುನಾವಣೆಯಲ್ಲಿ ಬೋರಿಸ್ ಜಾನ್ಸನ್ ನಾಯಕತ್ವದಲ್ಲಿ ಕನ್ಸರ್ವೇಟಿವ್ ಪಕ್ಷ ಜಯಗಳಿಸಿತ್ತು.
ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡುವುದು ಕೂಡ ಒಂದು ರೀತಿಯ ಯುದ್ಧವೇ ಸರಿ. ಆರ್ಥಿಕ ತೊಂದರೆಗಳ ಸಮಯದಲ್ಲಿ ಕನ್ಸರ್ವೇಟಿವ್ ಪಕ್ಷ ಅನೇಕ ಬಾರಿ ಚುನಾವಣೆಗಳನ್ನು ಗೆದ್ದಿವೆ. ಆದರೆ, ಜನತೆಯ ಬದಲಾವಣೆ ಅಥವಾ ನಿರಂತರತೆಯ ಬೇಡಿಕೆ, ಅಸ್ತಿತ್ವದಲ್ಲಿರುವ ಸರ್ಕಾರದ ಆರ್ಥಿಕ ನೀತಿಗಳ ಪರಿಣಾಮ, ಮತ್ತು ವಿರೋಧ ಪಕ್ಷದ ವಿಶ್ವಾಸಾರ್ಹ ಪರ್ಯಾಯವನ್ನು ಪ್ರಸ್ತುತಪಡಿಸುವ ಸಾಮರ್ಥ್ಯದ ಮೇಲೆ ನಿರ್ಧಾರವಾಗುತ್ತದೆ.
ಯುದ್ಧದ ಸಮಯದಲ್ಲಿ ಹೊರತು ಪಡಿಸಿ ಉಳಿದ ಸಮಯಗಳಲ್ಲಿ ಭಾವನಾತ್ಮಕವಾದ ವಿಚಾರಗಳು ಚುನಾವಣೆಯ ಮೇಲೆ ಹೆಚ್ಚು ಪ್ರಭಾವ ಬೀರುವುದಿಲ್ಲವೆಂದು ಅನೇಕ ಬಾರಿ ಕಂಡುಬಂದಿದೆ. ಈ ಹಿಂದೆ ಎರಡನೇಯ ಮಹಾ ಯುದ್ಧ ಮುಗಿದ ಮೇಲೆ ಶಾಂತಿ ಕಾಲದಲ್ಲಿ ಕನ್ಸರ್ವೇಟಿವ್ ಪಕ್ಷವನ್ನು ಸೋಲಿಸಿ ಲೇಬರ್ ಪಕ್ಷ ಅಧಿಕಾರಕ್ಕೆ ಬಂದ ಉದಾಹರಣೆಯಿದೆ. ಆದೇ ತರಹ ೧೯೯೭ರಲ್ಲಿ ಬ್ರಿಟನ್ನಿನ ಆರ್ಥಿಕತೆ ಸುಧಾರಿಸಲು ಪ್ರಾರಂಭವಾಗಿತ್ತು. ಆದರೆ ೧೯೯೦ರ ಆರ್ಥಿಕ ಕುಸಿತದ ಕೆಲವು ಸಮಸ್ಯೆಗಳು ಇನ್ನೂ ಕೆಲವು ಇದ್ದವು. ಆಗ ಟೋನಿ ಬ್ಲೇರ್ ನೇತೃತ್ವದ ಲೇಬರ್ ಪಕ್ಷ ಭರ್ಜರಿ ಜಯ ಸಾಧಿಸಿತ್ತು. ಈಗಲೂ ಕೂಡ ಬ್ರಿಟನ್ನಿನ ಆರ್ಥಿಕತೆ ಸುಧಾರಿಸಲು ಪ್ರಾರಂಭವಾಗಿದೆ. ಆದರೆ ಕಳೆದ ನಾಲ್ಕು ವರ್ಷಗಳಿಂದ ಅನುಭವಿಸಿದ ಕೆಲವು ಸಮಸ್ಯೆಗಳು ಇನ್ನೂ ಕೆಲವು ಇದೆ. ಹಾಗಾಗಿ, ಇತಿಹಾಸ ಮರುಕಳಿಸಿ ಲೇಬರ್ ಪಕ್ಷ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯ ಅನೇಕ ಕುರುಹುಗಳು ಕಾಣುತ್ತಿವೆ. ಹಾಗಾದರೆ ರಿಷಿಯವರು ಕೇವಲ ಯುದ್ಧ ಕಾಲದ ಸೇನಾಧಿಪತಿಯಾಗಿ ಉಳಿಯುವ ಸಂಭವವಿದೆ.
೨೦೨೨ರಲ್ಲಿ ರಿಷಿಯವರು ಪ್ರಧಾನಿಯಾಗಿಯಾಗುವ ಹೊತ್ತಿಗೆ ಕರ್ನಾಟಕದವರೇ ಆದ ಪ್ರಧಾನಿಯವರ ಪತ್ನಿ ಅಕ್ಷತಾ ಮೂರ್ತಿಯವರು ಕಟ್ಟುವ ತೆರಿಗೆಯ ವಿಷಯ, ರಾಷ್ಟ್ರೀಯತೆ, ಅವರ ಮನೆಯಲ್ಲಿ ಟೀ ಕೊಡುವ ಕಪ್ಪು ಮತ್ತು ಸಾಸರ್ ಬೆಲೆಯ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಈಗ ನಡೆಯುತ್ತಿರುವ ಚುನಾವಣೆಯಲ್ಲಿ ಆ ವಿಷಯಗಳು ಹಿಂದೆ ಸರಿದಿದೆ. ಅದು ರಿಷಿಯವರ ಯಶಸ್ವಿ ನಾಯಕತ್ವದ ಗುಣವನ್ನು ಕೂಡ ತೋರಿಸುತ್ತದೆ.
ಹಣದುಬ್ಬರ ನಿಯಂತ್ರಿಸುವ, ಕಲ್ಯಾಣ ಕಾರ್ಯಕ್ರಮಗಳನ್ನು ನಿರ್ವಹಿಸುವ, ವಿದೇಶಾಂಗ ನೀತಿಯಲ್ಲಿ, ಅಕ್ರಮವಾಗಿ ಬಂದ ವಲಸೆ ಕಾರ್ಮಿಕರ ವಿಷಯಗಳೇ ಆಗಿರಲಿ, ಎರಡೂ ಪಕ್ಷಗಳ ನೀತಿಗಳಲ್ಲಿ ಈಗ ಹೆಚ್ಚಿನ ವ್ಯತ್ಯಾಸವಿಲ್ಲ. ಆದರೆ ವಲಸೆ ನೀತಿಗಳಲ್ಲಿ ಮಾನವೀಯತೆ ಮೆರೆಯುವ, ಪಿಂಚಣಿ ಮತ್ತು ಆರೋಗ್ಯ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಲೇಬರ್ ಪಕ್ಷವು ಹೆಚ್ಚು ಒತ್ತು ಕೊಡಬಹುದು. ಇಂತಹ ಸಂದರ್ಭದಲ್ಲಿ ಕಾರ್ಯಕ್ರಮಗಳ ಜೊತೆಗೆ ನಾಯಕತ್ವದ ಗುಣ ಕೂಡ ಮುಖ್ಯವಾಗುತ್ತದೆ. ಇದು ಚುನಾವಣಾ ಫಲಿತಾಂಶವನ್ನು ಕಾತುರದಿಂದ ಕಾಯುವಂತೆ ಮಾಡಿದೆ.
- ಎನ್.ವಿ.ರಘುರಾಂ
