ಅಂದು ವೈದ್ಯರ ದಿನಾಚರಣೆ. ಓ ಪಿ ಡಿ ಯ ದಿನವಾದುದರಿಂದ, ಕೊಂಚ ಬೇಗನೇ ರೌಂಡ್ಸ್ ಮುಗಿಸಿ ವಾರ್ಡ್ ನಿಂದ ಹೊರಬರುತ್ತಿದ್ದೆ. ದಡಬಡನೆ ಬರುತ್ತಿದ್ದ ಮೂರ್ನಾಲ್ಕು ಯುವಕರ ಗುಂಪೊಂದು ಎದುರಾಯಿತು. ಮುಂದೇನಾಯಿತು ವೈದ್ಯ ಡಾ. ಕೆ.ಬಿ. ರಂಗಸ್ವಾಮಿ ಅವರ ಜೀವನದಲ್ಲಿ ನಡೆದ ಒಂದು ಅನುಭವ ಕಥನ, ತಪ್ಪದೆ ಮುಂದೆ ಓದಿ…
ನನ್ನನ್ನು ತಡೆದು ನಿಲ್ಲಿಸಿದ ಅವರಲ್ಲೊಬ್ಬ, ಕೈಯಲ್ಲಿದ್ದ ಚುಚ್ಚುಮದ್ದೊಂದರ ಖಾಲಿ ಡಬ್ಬಿಯನ್ನು ನನ್ನ ಕಣ್ಮುಂದೆ ಹಿಡಿದು ‘ಸಾರ್, ಎಕ್ಸ್ ಪೈರಿ ಆಗಿರುವ ಈ ಇಂಜೆಕ್ಷನ್ ನ್ನು ಮಗುವಿಗೆ ಕೊಟ್ಟುಬಿಟ್ಟಿದ್ದಾರೆ. ಮಗುವಿಗೆ ಏನಾದರೂ ಅಪಾಯವಾಗುತ್ತದೆಯಾ?’ ಎಂದು ಕೇಳಿದ.
ಅದು ಆ್ಯಂಟಿಬಯೋಟಿಕ್ ಚುಚ್ಚುಮದ್ದೊಂದರ ಖಾಲಿ ಡಬ್ಬಿಯಾಗಿತ್ತು. ಯಾವ ಮಗು? ಏನು? ಎತ್ತ? ಎಂದು ಏನನ್ನೂ ವಿಚಾರಿಸದ ನಾನು, ನನಗಿದ್ದ ಜ್ಞಾನದ ಸಹಾಯದಿಂದ ‘ಇಲ್ಲಪ್ಪಾ ಏನೂ ಆಗುವುದಿಲ್ಲ’ ಎಂದೆ. ಥಟ್ಟನೆ ದೆವ್ವ ಮೆಟ್ಟಿದವನಂತಾದ ಆತ ‘ಏನ್ಸಾರ್ ನೀವು; ಡಾಕ್ಟರು ಅಂತ ಕೇಳಿದರೆ ಹೀಗಾ ಹೇಳೋದು?’ ಎಂದು ಜೋರು ಧ್ವನಿಯಲ್ಲಿ ಕಿರಿಚಾಡತೊಡಗಿದ. ‘ಅರೆ! ನಾನೇನು ತಪ್ಪು ಹೇಳಿದೆ? ಇದ್ದದ್ದನ್ನು ಇದ್ದ ಹಾಗೇ ಹೇಳಿದರೆ ಹೀಗೇಕೆ ಕಿರಿಚಾಡುತ್ತಿದ್ದಾನೆ ಈ ಮನುಷ್ಯ?’ ಎಂದು ನನ್ನನ್ನೇ ನಾನು ಪ್ರಶ್ನಿಸಿಕೊಳ್ಳತೊಡಗಿದೆ. ಬಹುಶಃ ‘ಹೌದಪ್ಪಾ ಇದರಿಂದ ನಿನ್ನ ಮಗುವಿನ ಜೀವಕ್ಕೆ ಖಂಡಿತ ಅಪಾಯವಿದೆ’ ಎಂಬ ಸುಳ್ಳು ಉತ್ತರವನ್ನು ಆತ ನನ್ನಿಂದ ನಿರೀಕ್ಷಿಸಿದ್ದನೇನೋ! ಎಂದು ಆಲೋಚಿಸುತ್ತಾ ಆತನ ಜೊತೆಗಿದ್ದವರನ್ನು ವಿಚಾರಿಸಲಾಗಿ, ಅದು ಬೇರೆ ಯಾರದೋ ಕಣ್ತಪ್ಪಿನಿಂದಾದ ಪ್ರಮಾದವಾಗಿತ್ತು. ‘ಹಾಗಾದರೆ ಒಂದು ವರ್ಷದ ಅವಧಿ ಮುಗಿದ ಔಷಧ ಕೊಟ್ಟರೂ ಏನೂ ಆಗುವುದಿಲ್ಲವಾ ಸಾರ್?’ ಎಂದು ಪ್ರಶ್ನಿಸಿದರು ಆ ಯುವಕರು. ‘ಜೀವಕ್ಕೇನೂ ಅಪಾಯವಿರುವುದಿಲ್ಲ. ಆದರೆ ಅದರ ಪ್ರಭಾವ ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು ಅಷ್ಟೆ’ ಎಂದೆ ತಣ್ಣನೆಯ ಸ್ವರದಲ್ಲಿ. ನಮ್ಮ ಈ ಸಂಭಾಷಣೆಗೂ ತನಗೂ ಯಾವುದೇ ಸಂಬಂಧವಿಲ್ಲ ಎಂಬಂತೆ ಆ ಯುವಕ ಇನ್ನೂ ಕಿರಿಚಾಡುತ್ತಲೇ ಇದ್ದ. ಈ ಘಟನೆಯಲ್ಲಿ ನನ್ನ ಪಾತ್ರ ಕಿಂಚಿತ್ತೂ ಇರಲಿಲ್ಲ. ನನಗೆ ಸಂಬಂಧವಿರದ ಸಂಗತಿಯಲ್ಲಿ ಅನಗತ್ಯವಾಗಿ ಸಿಲುಕಿಕೊಂಡು ಆ ವ್ಯಕ್ತಿಯ ಆವೇಶಭರಿತ ಮಾತುಗಳಿಗೆ ಗುರಿಯಾಗಬೇಕಾಯಿತಲ್ಲ ಎಂದು ಮನಸ್ಸು ಕ್ಲೇಶಕ್ಕೊಳಗಾಯಿತು. ಆತನನ್ನು ಸಮಾಧಾನಪಡಿಸಲು ಹೆಣಗಾಡುತ್ತಿದ್ದ ನಾನು ‘ನೋಡಪ್ಪಾ ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಯಾರಿಂದ ಈ ತಪ್ಪಾಗಿದೆಯೋ ಅವರ ಬಳಿ ಹೋಗಿ ನಿನ್ನ ಸಮಸ್ಯೆ ಹೇಳಿಕೋ’ ಎಂದು ಹೇಳಿ ಅಲ್ಲಿಂದ ಜಾಗ ಖಾಲಿಮಾಡಿದೆ.

ವೈದ್ಯರ ದಿನಾಚರಣೆಯ ಮುಂಜಾನೆಯೇ ಇಂಥ ಅನುಭವವಾಯಿತಲ್ಲಾ ಎಂದು ಕಿರಿಕಿರಿ ಅನುಭವಿಸುತ್ತಿದ್ದ ಮನಸ್ಸನ್ನು ಹೊತ್ತು ಹಾಗೇ ಕಾರಿಡಾರ್ ನಲ್ಲಿ ಹೆಜ್ಜೆ ಹಾಕುತ್ತಿದ್ದೆ. ಎದುರಲ್ಲಿ ಸಿಕ್ಕ ಹಿರಿಯ ಮಿತ್ರರೊಬ್ಬರು ನನ್ನನ್ನು ತಡೆದು ನಿಲ್ಲಿಸಿ ‘ಈ ಡ್ರೆಸ್ ನಿಮಗೆ ಚೆನ್ನಾಗಿ ಒಪ್ಪುತ್ತದೆ’ ಎಂದರು. ಅದುವರೆಗಿನ ಕಿರಿಕಿರಿ ಥಟ್ಟನೆ ಮಾಯವಾದಂತಾಗಿ ಆನಂದದ ಅಲೆಯೊಂದು ಮನದಲ್ಲಿ ಹಾದುಹೋಯಿತು. ಅವರಿಗೆ ಥ್ಯಾಂಕ್ಸ್ ಹೇಳಿದ ನಾನು, ಎಂದಿನಂತೆ ನನ್ನ ಚೇಂಬರ್ ಗೆ ಹೋಗಿ ಕೆಲಸಕಾರ್ಯಗಳಲ್ಲಿ ತೊಡಗಿಕೊಂಡೆ. ಸ್ವಲ್ಪ ಹೊತ್ತಿನಲ್ಲಿ, ಆಗಷ್ಟೇ ನಮ್ಮ ವಿಭಾಗದಲ್ಲಿ ಇಂಟರ್ನ್ ಶಿಪ್ ಮುಗಿಸಿಕೊಂಡಿದ್ದ ನಾಲ್ವರು ಹುಡುಗ ಹುಡುಗಿಯರು ಬಂದು ಕಂಪ್ಲೀಷನ್ ಗೆ ಸಹಿ ಪಡೆದುಕೊಂಡರು. ಹೊರಡುವ ಮುನ್ನ ‘ಸಾರ್ ನಿಮ್ಮ ಜೊತೆ ಒಂದು ಫೋಟೋ ತೆಗೆಸಿಕೊಳ್ಳಬೇಕು’ ಎಂದು ಕೇಳಿ ತೆಗೆಸಿಕೊಂಡರು. ಅವರ ಪ್ರೀತಿಗೆ ಕರಗಿದ ಮನಸ್ಸು ಇನ್ನಷ್ಟು ನಿರಾಳವಾಯಿತು.
ಸಂಜೆ ಮನೆಗೆ ಹಿಂತಿರುಗಿದ ನಾನು, ಮೊಬೈಲ್ ತೆರೆದಾಗ ಸಾಮಾಜಿಕ ಜಾಲತಾಣಗಳಲ್ಲಿ ವೈದ್ಯರ ದಿನಾಚರಣೆಯ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಅವುಗಳ ಮೇಲೆ ಕಣ್ಣಾಡಿಸಿದ ನಂತರ ಮನಸ್ಸಿಗೆ ಕೊಂಚ ಹಾಯೆನಿಸಿತು. ವೈದ್ಯರ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಟೀವಿ ಚಾನೆಲ್ ಒಂದರ ನೇರಪ್ರಸಾರದ ಚರ್ಚೆಯಲ್ಲಿ ಭಾಗವಹಿಸುವ ಅವಕಾಶ ನನಗೂ ಒದಗಿಬಂದಿತ್ತು. ಆ ಸಂಜೆ ಸಂದರ್ಶಕರು ಕೇಳಿದ ಪ್ರಶ್ನೆಗಳಿಗೆ ಸಮಯೋಚಿತ ಉತ್ತರಗಳನ್ನು ನೀಡಿದ ಬಳಿಕವಂತೂ ಒಂದು ಬಗೆಯ ಸಂತೃಪ್ತ ಭಾವ ಮನವನ್ನಾವರಿಸಿತು. ಕಾರ್ಯಕ್ರಮ ಮುಗಿಯುವಷ್ಟರಲ್ಲಿ ಕೊಂಚ ತಡವಾಗಿದ್ದುದರಿಂದ ಯಾರಾದರೂ ಕಾಯುತ್ತಿರುವರೇನೋ ಎಂದು ಯೋಚಿಸುತ್ತಲೇ ಕ್ಲಿನಿಕ್ ಗೆ ಹಿಂತಿರುಗಿದೆ. ಒಳಗೆ ಪ್ರವೇಶಿಸುತ್ತಿದ್ದಂತೆ ವ್ಯಕ್ತಿಯೊಬ್ಬರು ಹಿಂದೆಯೇ ಒಳಬಂದರು. ‘ಸುಮಾರು ಹೊತ್ತಿನಿಂದ ನಿಮಗಾಗಿಯೇ ಕಾಯುತ್ತಿದ್ದೆ ಸಾರ್’ ಎಂದ ಅವರಿಗೆ ತಡವಾಗಿ ಬಂದುದರ ಕಾರಣ ತಿಳಿಸಿದೆ. ಅವರಿಬ್ಬರ ಮಕ್ಕಳಿಗೆ ನಾನೇ ಖಾಯಂ ವೈದ್ಯ. ಚಿಕ್ಕ ವಯಸ್ಸಿನಿಂದಲೂ ನನ್ನ ಆರೈಕೆಯಲ್ಲೇ ಬೆಳೆದು ದೊಡ್ಡವರಾಗಿರುವ ಅವರ ಮಗ ಪಿಯುಸಿಯಲ್ಲೂ ಮಗಳು ಎಸ್ಸೆಸ್ಸೆಲ್ಸಿಯಲ್ಲೂ ಓದುತ್ತಿದ್ದಾರೆ. ‘ವೈದ್ಯರ ದಿನಾಚರಣೆಯ ಶುಭಾಶಯ ಹೇಳಿಹೋಗಲು ಬಂದಿದ್ದೇನೆ ಸಾರ್’ ಎನ್ನುತ್ತಾ ಕೈಯಲ್ಲಿ ಹಿಡಿದು ತಂದಿದ್ದ ಹಣ್ಣುಗಳ ಪೊಟ್ಟಣವನ್ನು ನನ್ನ ಕೈಗಿತ್ತಾಗ ನಿಜಕ್ಕೂ ನನ್ನ ಪಾಲಿಗೆ ವೈದ್ಯರ ದಿನಾಚರಣೆ ಸಾರ್ಥಕವಾಯಿತೆನಿಸಿತು. ಮನಸ್ಸು ಆರ್ದ್ರವಾಯಿತು. ದಿನದಾರಂಭದ ಕಿರಿಕಿರಿ ಯಾವಾಗಲೋ ಮನಸ್ಸಿನಿಂದ ಹೇಳಹೆಸರಿಲ್ಲದಂತೆ ಹಾರಿಹೋಗಿತ್ತಷ್ಟೆ?! ಈಗಂತೂ ಮನಸ್ಸು ಖುಷಿಯ ಉತ್ತುಂಗದಲ್ಲಿ ತೇಲಾಡತೊಡಗಿತು.
ಅಂದು ಮುಂಜಾನೆಯಿಂದ ಸಂಭವಿಸಿದ ಘಟನೆಗಳನ್ನು ಮೆಲುಕುಹಾಕುತ್ತಾ ಅವಲೋಕಿಸಿದಾಗ, ಅನಗತ್ಯ ಮಾನಸಿಕ ಕಿರಿಕಿರಿಯಿಂದ ಆರಂಭವಾಗಿ ಖುಷಿಯಲ್ಲಿ ಅಂತ್ಯಗೊಂಡ ಘಟನೆಗಳು ಬದುಕಿನೊಂದಿಗೆ ತಳುಕುಹಾಕಿಕೊಂಡ ಅನುಭವವಾಯಿತು. ಬದುಕೂ ಅಷ್ಟೇ ಅಲ್ಲವೇ? ಕಿರಿಕಿರಿಗಳು, ತಾಪತ್ರಯಗಳೆಲ್ಲವೂ ಶಾಶ್ವತವೆಂದುಕೊಳ್ಳುತ್ತೇವೆ. ಆದರೆ ತಿರುಗುಚಕ್ರದಂತೆ ಕತ್ತಲ ನಂತರ ಬೆಳಕು ಆವರಿಸಲೇಬೇಕು; ಅಮಾವಾಸ್ಯೆಯ ನಂತರ ಹುಣ್ಣಿಮೆ ಬರಲೇಬೇಕು. ಈ ಸತ್ಯವನ್ನು ಅರ್ಥ ಮಾಡಿಕೊಂಡರೆ ಬದುಕು ಸುಂದರವೂ ಸಹ್ಯವೂ ಎನಿಸೀತು ಅಲ್ಲವೇ?
- ಡಾ. ಕೆ.ಬಿ. ರಂಗಸ್ವಾಮಿ
