‘ವಚನ ಕಾರಂಜಿ’ ಕೃತಿ ಪರಿಚಯ

ಎನ್.ಸಿ. ಸುಂದರರಾಜ್ ರಾವ್ ಅವರ ಕೃತಿ ‘ವಚನ ಕಾರಂಚಿ’ ನಾಲ್ಕು ನೂರು ವಚನಗಳನ್ನು ಹೊಂದಿದ್ದು, ಈ ಕೃತಿಯನ್ನು ಅವರು ಕವನ ಸಂಕಲನ ಎಂದು ಕರೆದಿದ್ದಾರೆ. ಡಾ. ಲಕ್ಷ್ಮಣ ಕೌಂಟೆ ಅವರು ‘ವಚನ ಕಾರಂಚಿ’ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ..

ಪುಸ್ತಕ : ವಚನ ಕಾರಂಜಿ
ಲೇಖಕರು : ಎನ್. ಸಿ. ಸುಂದರರಾಜ್ ರಾವ್
ಪ್ರಕಾರ : ವಚನಗಳ ಸಂಕಲನ

ಅನುಭವಗಳಿಂದ ಪರಿಪೂರ್ಣನಾದ ಮನುಷ್ಯ ಹಿರಿಯನಾಗಿರುತ್ತಾನೆ ಎನ್ನುವ ಮಾತೊಂದಿದೆ. ಹಳೆಯ ಮರದ ಫಲಗಳು ಸ್ವಾಧಿಷ್ಟವಾಗಿರುತ್ತವೆ. ಹಾಗೆಯೇ ದೊಡ್ಡ ಮರದ ನೆರಳು ತಂಪಾಗಿ ಇರುತ್ತದೆ. ಈ ತರಹದ ಎಲ್ಲ ಮಾತುಗಳು ಸುದೀರ್ಘ ಕಾಲ ಬಾಳಿ ಬದುಕಿ ವಿಶ್ರಾಂತಿಯ ಹೊಸ್ತಿಲೊಳಗೆ ಇರುವ ಹಿರಿಯರ ಹಿರಿತನಕ್ಕೂ ಹೋಲಿಕೆಯಾಗುತ್ತವೆ. ಮಾನವನ ಬದುಕಿನಲ್ಲಿ ಬಾಲ್ಯದಲ್ಲಿ ಹುಡುಗಾಟಿಗೆ ಹೆಚ್ಚಿದ್ದರೆ, ತಾರುಣ್ಯದಲ್ಲಿ ದುಡುಕುತನ, ಉದ್ರೇಕ, ಕೋಪ, ವಿಚಾರಿಸದೆ ಮುನ್ನುಗ್ಗುವಿಕೆ ವ್ಯಕ್ತವಾಗುತ್ತದೆ. ಹಾಗೆಯೇ ವಯೋಮಾನದ ಇಳಿ ಹಂತದಲ್ಲಿರುವವರು, ವೃದ್ಧಾಪ್ಯಾವಸ್ಥೆಯಲ್ಲಿ ಇರುವವರಲ್ಲಿ ಬಾಲ್ಯ ಯೌವನದ ಭಾವಗಳೆಲ್ಲ ಬರಿದಾಗಿ ಇಲ್ಲವೆ ಮೆತ್ತಗಾಗಿ ಶಾಂತಿ ಸಮಾಧಾನ ತಿಳುವಳಿಕೆ ಮಂದಗಮನ ಹಿತೋಪದೇಶ ಮೊದಲಾದವುಗಳಿಗೆ ಮಹತ್ವ ಪ್ರಾಪ್ತಿಯಾಗುತ್ತದೆ. ಹೀಗಾಗಿ ದಿನದಲ್ಲಿ ಅರೆಘಳಿಗೆಯಾದರೂ ಸರಿಯೇ, ತರುಣರು ಹಿರಿಯರ ಸನಿಹ ಕುಳಿತು ಅವರ ಮಾತುಗಳನ್ನು ಆಲಿಸಬೇಕು. ಆ ಅರೆಘಳಿಗೆಯ ಲಾಭ ಹಿರಿಯರು ಜೀವಮಾನವಿಡೀ ಕಂಡುಂಡ ನೋವು ನಲಿವುಗಳನ್ನು ಕೇಳಿಸಿಕೊಳ್ಳುವ ಮೂಲಕ ಅವರ ಜೀವನಾನುಭವದ ಆಧಾರದ ಮೇಲೆ ತರುಣರು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಾಗುತ್ತದೆ.

ಇನ್ನು ಜೀವಾನುಭವ ಹೊಂದಿದ ಹಿರಿಯರು ಬರಹಗಾರರಿದ್ದರಂತೂ ಅವರು ಬರೆದ ಗ್ರಂಥಗಳನ್ನು ಓದುವುದರಿಂದ ಯುವಕರು ಇನ್ನೂ ಹೆಚ್ಚಿನ ಲಾಭ ಪಡೆಯಬಹುದಾಗಿದೆ.
ಎನ್.ಸಿ. ಸುಂದರರಾಜ್ ರಾವ್ ಅವರು ಈ ಹಿಂದೆ ‘ವಚನಧಾರೆ’ ಎನ್ನುವ ವಚನಗಳ ಸಂಕಲನವನ್ನು ರಚಿಸಿ ಪ್ರಕಟಿಸಿದ್ದಾರೆ. ಆ ಕೃತಿಯನ್ನು ನಾನು ಓದಿ ಮುಖಪುಸ್ತಕ (ಫೇಸ್ ಬುಕ್)ನಲ್ಲಿ ನನ್ನ ಅಭಿಪ್ರಾಯವನ್ನು ಈ ಹಿಂದೆ ಹಂಚಿಕೊಂಡಿದ್ದೆ. ರಾವ್ ಅವರು ನಿತ್ಯವೂ ಫೇಸ್ ಬುಕ್ ನಲ್ಲಿ ಒಂದೊಂದು ವಚನ ಬರೆದು ಪ್ರಕಟಿಸುತ್ತ ಬರುವ ಪರಂಪರೆಯನ್ನು ರೂಢಿಸಿಕೊಂಡು ಬಂದಿದ್ದಾರೆ. ನಾನೂ ಅವುಗಳನ್ನು ಓದಿ ಆನಂದಿತನಾಗಿದ್ದೇನೆ. ಈಗ ಅವರು ಪ್ರಕಟಿಸುತ್ತಿರುವ ಎರಡನೆಯ ಕೃತಿ ‘ವಚನ ಕಾರಂಚಿ’ ನಾಲ್ಕು ನೂರು ವಚನಗಳನ್ನು ಹೊಂದಿದೆ. ಈ ಕೃತಿಯನ್ನು ಅವರು ಕವನ ಸಂಕಲನ ಎಂದು ಕರೆದಿದ್ದಾರೆ. ಅದು ಏಕೆ ಹಾಗೆ ಕರೆದರೋ ನನಗೆ ತಿಳಿಯದು. ಹಾಗೆ ನೋಡಿದರೆ ಇದೂ ಒಂದು ವಚನ ಸಂಕಲನವೇ. ಈ ಮೊದಲು ಪ್ರಕಟಿತ ‘ವಚನ ಕಾರಂಜಿ’ ಮುಂದುವರೆದ ಭಾಗವೇ ಆಗಿದೆ.

ಎನ್. ಸಿ. ಸುಂದರರಾಜ್ ರಾವ್ ಅವರು ಹಾಗೆ ನೋಡಿದರೆ ವೃತ್ತಿಯಲ್ಲಿ ಪಿಡಬ್ಲೂಡಿಯಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿ ಬಹಳ ಹಿಂದೆಯೇ ನಿವೃತ್ತಿ ಹೊಂದಿದವರು. ವಯೋಮಾನದಲ್ಕಿ ನನಗಿಂತ ಹದಿನಾಲ್ಕು ವರ್ಷಗಳಷ್ಟು ಹಿರಿಯರಾದ ಅವರು ಈಚೆಗೆ ನನ್ನನ್ನು ನಿಸ್ತಂತು ಮೂಲಕ ಸಂಪರ್ಕಿಸಿ ತಮ್ಮ ಈಚಿನ ಕೃತಿಗೆ ಮುನ್ನುಡಿ ಬರೆಯಲು ಕೋರಿದರು. ಹಾಗೆ ನೋಡಿದರೆ ಇತ್ತೀಚೆಗೆ ನಾನು ಮುನ್ನುಡಿ ಬರೆಯುವುದನ್ನೇ ನಿಲ್ಲಿಸಿರುವೆ. ರಾವ್ ಹಿರಿಯರು. ಅವರ ಆಶಯವನ್ನು ನಾನು ನಿರಾಕರಿಸುವುದು ಔಚಿತ್ಯವಲ್ಲ ಎನ್ನಿಸಿ ಈ ಹೊಸ್ ಕೃತಿಯ ಕುರಿತು ನಾಲ್ಕು ಸಾಲು ಬರೆಯಲು ಒಪ್ಪಿಕೊಂಡೆ.

ಎನ್.ಸಿ. ಸುಂದರರಾಜ ರಾವ್ ಅವರು ವಚನಗಳನ್ನು ಬರೆಯುವುದಕ್ಕೆ ಒಂದು ಕಾರಣವೂ ಇದೆ. ಅವರು ಕೇವಲ ಡಿಪ್ಲೋಮಾ ಇನ್ ಮೆಕಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿ ವೃತ್ತಿಗೆ ತೊಡಗಿಕೊಂಡವರಷ್ಟೆ ಅಲ್ಲ , ಮುಂದೆ ಅವರು ೧೯೯೩ರಲ್ಲಿ ಮೈಸೂರು ವಿ.ವಿ. ಅಂಚೆಶಿಕ್ಷಣದ ಮೂಲಕ ಕನ್ನಡದಲ್ಲಿ ಎಮ್. ಎ. ಪದವಿ ಪಡೆದು ಕನ್ನಡ ಸಾಹಿತ್ಯವನ್ನು ಅಧ್ಯಯನ ಮಾಡಿದವರು. ಪ್ರಯುಕ್ತ ಅವರಲ್ಲಿ ಬರೆಯುವ ಹವ್ಯಾಸ ಮೂಡಿದಂತಿದೆ.

ಈ ಆಧುನಿಕ ವಿದ್ಯುನ್ಮಾನ ಮಾಧ್ಯಮ ಲೋಕಕ್ಕೆ ಪ್ರವೇಶ ಮಾಡಿದ ಮೇಲೆ ಪ್ರಪಂಚದ ಸ್ಥಿತಿಗತಿಗಳು, ಮನುಷ್ಯರ ಯೋಚನೆ, ಆಲೋಚನೆ, ಹವ್ಯಾಸ ಮೊದಲಾದವುಗಳು ಹಲವು ಬಗೆಯ ಬದಲಾವಣೆಗೆ ಒಳಪಟ್ಟಿವೆ. ಪ್ರಪಂಚದ ಎಲ್ಲ ಬಗೆಯ ಮಾಹಿತಿ ಕೊಡುವ, ಒಬ್ಬರಿಂದ ಒಬ್ಬರಿಗೆ ಸಂಪರ್ಕ ಕೊಡಿಸುವ ನಿಸ್ತಂತು (ಮೊಬೈಲ್) ಮನುಷ್ಯನ ಕೈಗೆ ಬಂದ ಮೇಲಂತೂ ಅವನಲ್ಲಿ ಹಲವು ಬಗೆಯ ಆಸಕ್ತಿಗಳು ಗರಿಗೆದರಿವೆ. ವಿವಿಧ ಬಗೆಯ ಲಲಿತ ಕಲೆಗಳು ಮೊಬೈಲ್ ಮೂಲಕ ಸನಿಹ ದೂರದಲ್ಲಿರುವ ಸಮಾನ ಆಸಕ್ತರನ್ನು ಬೆಸೆಯುವ ಕಾರ್ಯ ಮಾಡುತ್ತಲೇ ಬಂದಿದೆ. ಜೊತೆಗೆ ಬರೆಯುವವರ ಸಂಖ್ಯೆಯನ್ನು ವೃದ್ಧಿಸಿದೆ. ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧ ಪಡದ ಹಲವರು ಅದರತ್ತ ಒಲವು ತೋರಿ ಓದುವುದಷ್ಟೇ ಅಲ್ಲ, ಬರವಣಿಗೆಗೂ ತೊಡಗುವಂತೆ ಮಾಡಿಸಿದೆ. ಕೇವಲ ಬರೆಯುವುದಷ್ಟೇ ಅಲ್ಲ, ಬರೆದದ್ದನ್ನು ಒಟ್ಟುಗೂಡಿಸಿ ಪುಸ್ತಕ ರೂಪದಲ್ಲಿ ಹೊರತರುವ ಕಾರ್ಯಕ್ಕೂ ಅವರಿಗೆ ಇಂಬು ಕೊಟ್ಟಿದೆ. ಮುಖ್ಯವಾಗಿ ಸಾಹಿತ್ಯದಲ್ಲಿ ಕವಿತೆಗಳ ಮಹಾಪೂರವೇ ಈಗ ಹರಿದು ಬರುತ್ತಿದೆ. ಜೊತೆಗೆ ಬಿಡಿ ಲೇಖನಗಳು, ಶಾಯರಿ, ಗಜಲ್, ಆಧುನಿಕ ವಚನ, ಟಂಕಾ, ಕಗ್ಗದಂತಹ , ಕಥೆ ಕಾದಂಬರಿ ಅದು ಇದೂ ಅಂತ ಹಲವು ಸಾಹಿತ್ಯದ ಬಗೆಗಳು ಹೇರಳವಾಗಿ ಸೃಷ್ಟಿಯಾಗಿ ಅದ್ಧೂರಿ ಕಾರ್ಯಕ್ರಮಗಳ ಮೂಲಕ ಲೋಕಾರ್ಪಣೆಗೊಂಡು ಎಫ್.ಬಿ.ಯಲ್ಲಿ ಮೆರೆಯುತ್ತಿವೆ. ಇಂತಹವುಗಳಿಂದ ಪುಸ್ತಕ ಮುದ್ರಣ ಮಾಡುವ ಸಂಸ್ಥೆಗಳಿಗೂ ಲಾಭವಾಗುತ್ತಿರುವುದು ಸುಳ್ಳೇನಲ್ಲ. ಬಹು ಹಿಂದೆ ಪುಸ್ತಕ ಬರೆದರೂ ಪ್ರಕಾಶನ ಮಾಡುವವರು ದೊರೆಯುತ್ತಿರಲಿಲ್ಲ. ಬರೆದವರೇ ಪ್ರಕಟ ಮಾಡಲು ದುಡ್ಡು ದೊರೆಯುತ್ತಿರಲಿಲ್ಲ. ಇವತ್ತು ಆ ತರಹದ ಯಾವ ತೊಂದರೆಗಳೂ ಇಲ್ಲ. ಬರೆದ ಒಂದೇ ವಾರದಲ್ಲಿ ಬರೆದವುಗಳನ್ನು ಒಟ್ಟುಗೂಡಿಸಿ ರಂಗುರಂಗಿನ ಆಕರ್ಷಕ ಮುಖಚಿತ್ರವುಳ್ಳ ಪುಸ್ತಕ ಮುದ್ರಣ ಮಾಡಿಸಬಹುದು. ಹೆಸರು ಮಾಡಿ ಪ್ರಶಸ್ತಿಗಳನ್ನೂ ಪಡೆಯ ಬಹುದು.

ಈ ಸಂಕಲನದಲ್ಲಿರುವ ವಚನಗಳಲ್ಲಿ ಕಂಡುಂಡ ಅನುಭಾವಗಳನ್ನು ಸರಳವಾದ ಭಾಷೆಯಲ್ಲಿ ರಚಿಸಲಾಗಿದೆ. ಸಾಮಾನ್ಯರೂ ಓದಿ ಸರಳವಾಗಿ ಅರ್ಥ ಮಾಡಿಕೊಳ್ಳಬಹುದಾದಂತಹ ಬರಹ ಇಲ್ಲಿಯದು. ವಚನ ರಚನೆಯಲ್ಲಿ ಭಾಷಾ ಪಾಂಡಿತ್ಯ ಇಲ್ಲದಿದ್ದರು ಎನ್.ಸಿ. ಸುಂದರ ರಾಜ್ ಅವರು ಅಭಿವ್ಯಕ್ತ ಮಾಡುವ ಕ್ರಮ ಅಪ್ಯಾಯಮಾನವಾಗಿದೆ. ಅವರ ವಚನಗಳನ್ನು ಓದುತ್ತ ಹೋದಂತೆ ಆ ಅಂಶ ಹೃದ್ಯವಾಗುತ್ತದೆ. ಉದಾಹರಣೆಗಾಗಿ ಕೆಲವನ್ನು ನೋಡಬಹುದು :

ಆಳು ಕಾಳು ತುಂಬಿದ ಶ್ರೀಮಂತ ಮನೆ
ಮಹಾಮನೆ ಎನಿಸಲಿಲ್ಲಾ
ಅಧಿಕಾರ ಅಂತಸ್ತು ಓಲಾಡುವ ಅಧಿಕಾರಿ ಮನೆ
ಮಹಾಮನೆ ಎನಿಸಲಿಲ್ಲ
ರಾಜ ಮಹಾರಾಜರು ವಾಸಿಸುವ ಅರಮನೆ
ಮಹಾಮನೆ ಎನಿಸಲಿಲ್ಲ
ದೀನ ದಲಿತರಿಗಾಗಿ ಸದಾ ತೆರೆದಿದ್ದ ಅಣ್ಣ ಬಸವಣ್ಣನ ಮನೆ
ಮಹಾಮನೆ ಎನಿಸಿತು ನೋಡಾ ಸುಂದರೇಶ್ವರ..

ಮೇಲಿನ ವಚನದಲ್ಲಿ ಎಲ್ಲ ದೊಡ್ಡ ದೊಡ್ಡವರ ಮನೆಗಿಂತ ದೀನ ದಲಿತರಿಗಾಗಿ ತೆರೆದಿಟ್ಟ ಅಣ್ಣ ಬಸವಣ್ಣನವರ ಮನೆಯೇ ಮಹಾಮನೆ ಅನ್ನಿಸಿದೆ. ಅದಕ್ಕೆ ಕಾರಣ ಬಸವಣ್ಣನವರಲ್ಲಿದ್ದ ಎಲ್ಲರೂ ಸಮಾನರು, ಪ್ರೀತಿ ಸ್ನೇಹಕ್ಕೆ ಅರ್ಹರು ಎನ್ನುವ ಭಾವ. ಎನಗಿಂತ ಕಿರಿಯರಿಲ್ಲ ಎನ್ನುವ ಅವರ ಮನೋಭಾವವೇ ಅವರನ್ನು ಎಲ್ಲ ತೋರಿಕೆಯ ದೊಡ್ಡವರಿಗಿಂತ ಔನತ್ಯಕ್ಕೆ ಏರಿಸಿದ್ದು.

ಅವರ ಇನ್ನೊಂದು ವಚನ :

ಗಂಗಾ ಯಮುನಾ ಬ್ರಹ್ಮಪುತ್ರ
ಗೋದಾವರಿ ಕೃಷ್ಣೆ ಕಾವೇರಿಗಳು
ಸಮುದ್ರ ಸೇರುವವರೆಗೆ ಮಾನ್ಯರು
ಸಮುದ್ರ ಸೇರಿದ ಮೇಲೆ ಸಮುದ್ರವೇ ಆಗುವರು..
ಆತ್ಮ ದೇಹದಲ್ಲಿ ಇರುವವರೆಗೆ
ಆ ಋಷಿ ಈ ಋಷಿ ಎನಿಪರು
ದೇಹ ಕಳೆದ ಮೇಲೆ ಪರಮಾತ್ಮ ಆಗುವರು
ಜೀವನದಲ್ಲು ಗುರಿ ಎಂದರೆ ತನ್ನತನ ಕಳೆದುಕೊಳ್ಳುವುದು
ಪರಮಾತ್ಮನೇ ಆಗುವುದು ಸುಂದರೇಶ್ವರ..

ಮಳೆ ಬರುವ ಮುಂಚೆ ಹನಿಗಳೆಲ್ಲ ನೀರೇ. ಬರುವಾಗ ಹನಿಗಳು, ಕೂಡಿ ಹರಿದು ಹೋಗುವಾಗ ಮತ್ತೆ ನೀರು ಒಂದೇ. ಈ ಭೂಮಿಯ ಮೇಲೆ ಇರುವಾಗ ಎಲ್ಲರೂ ಬೇರೆ ಬೇರೆಯೇ, ಹರಿವ ಹಲವು ನದಿಗಳಂತೆ. ಅದೇ ಈ ಲೋಕ ತೊರೆದು ನಿರ್ಗಮಿಸಿದ ಮೇಲೆ, ನದಿಗಳೆಲ್ಲ ಸಮುದ್ರ ಸೇರಿದ ನಂತರ ಆಗುವುದು ಒಂದೇ..ಮಹಾಜಲ! ಪ್ರಾಣಿಗಳ ಪ್ರಾಣ ಸೇರುವುದು ಅಖಂಡ ತತ್ತ್ವವನ್ನೇ.

ಇನ್ನೊಂದು ವಚನ ಹೀಗಿದೆ :

ಹೂವು ದೇವರ ಪೂಜೆಗೆ ಬಂದರೆ
ಅದು ಪ್ರಸಾದವಾಗುವುದು
ಹೂವು ಹಾಸಿಗೆಗೆ ಬಂದರೆ
ಅದು ಮೊದಲ ರಾತ್ರಿಯಾಗುವುದು
ಹೂವು ದೇಹದ ಮೇಲೆ ಬಿದ್ದರೆ
ಅದು ಕೊನೆಯಾತ್ರೆ ಆಗುವುದು
ಹೂವು ಒಂದೇ, ಸಂದರ್ಭ ಬೇರೆ ಬೇರೆ ಸುಂದರೇಶ್ವರ..

ನಿಜ ಅಲ್ಲವೇ!! ವಸ್ತುವಿನ ಮೌಲ್ಯ ಹೆಚ್ಚೂ ಕಡಿಮೆ ಆಗುವುದು ಅದು ಹೊಂದಿರುವ ಸ್ಥಾನದ ಮೇಲೆಯೇ. ಮನುಷ್ಯರಿಗೆ ಮಾನ ಸನ್ಮಾನಗಳು ಅವಮಾನ ಅಪಮಾನಗಳು ದೊರೆಯುತ್ತಿರುವುದು ಅವರು ಹೊಂದಿದ ಅರ್ಹತೆ ಅಧಿಕಾರ ಅಥವಾ ಅನಾಧಿಕಾರದ ಮೇಲೆಯೇ.. ಮೇಲಿನ ವಚನ ಆ ಭಾವವನ್ನು ಸಮರ್ಥವಾಗಿ ಧ್ವನಿಸುತ್ತದೆ.

ಹಣ್ಣು ಹಂಪಲು ದವಸ ಧಾನ್ಯ
ಪಶು ಪಕ್ಷಿ ಪ್ರಾಣಿಗಳು ಉಪಯೋಗಿಸಿದರೆ
ಆಹಾರವಾಗಿ ಜೀವರಸವಾಗುವುದು
ಹಾಗೆ ಬಿಟ್ಟರೆ ಗೊಬ್ಬರ ಮಣ್ಣಾಗುವುದು
ಜೀವನದಲ್ಲಿ ನೀನು ಹಣ್ಣಾಗುವುದು
ಇಲ್ಲಾ ಮಣ್ಣಾಗುವುದು ನಿನ್ನ ಕೈಯಲ್ಲಿದೆ ಸುಂದರೇಶ್ವರ..

ಹೀಗೆಯೇ ಎನ್.ಸಿ. ಸುಂದರರಾಜ್ ರಾವ ಅವರು ರಚಿಸಿದ ಎಲ್ಲ ವಚನಗಳು ವಿಶೇಷವಾದ ಧ್ವನಿಯನ್ನು ಹೊರಹೊಮ್ಮಿಸುತ್ತವೆ. ಅವರು ಇನ್ನೂ ಮುಂದೆಯೂ ಅರ್ಥಪೂರ್ಣವಾದ ಇಂತಹ ಸಾಹಿತ್ಯವನ್ನು ರಚಿಸಲಿ ಎಂದು ಆಶಿಸುತ್ತೇನೆ.


  • ಡಾ. ಲಕ್ಷ್ಮಣ ಕೌಂಟೆ – ಕಲಬುರಗಿ

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW