ಅಮೀರ್ ಖಾನ್ ಅವರ ಮಗ ಜುನೈದ್ ಅವರ ಮೊದಲ ಚಿತ್ರ ‘ಮಹಾರಾಜ್’ ವಾಗಿದ್ದು, ಇದೊಂದು 1800 ರ ಹೊತ್ತಿನಲ್ಲಿ ಸುಪ್ರೀಂ ಕೋರ್ಟ್ ನಲ್ಲಿ ನಡೆದ ಮೊಕದ್ದಮೆಯೊಂದರ ನೈಜ್ಯ ಕತೆಯಾಗಿದೆ. ಸಿನಿಮಾದ ಕುರಿತು ರಂಗಕರ್ಮಿ ಮತ್ತು ಲೇಖಕರಾದ ಕಿರಣ್ ಭಟ್ ಹೊನ್ನಾವರ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ತಪ್ಪದೆ ಮುಂದೆ ಓದಿ…
Netflix ನಲ್ಲಿ ಮಹಾರಾಜ್ ಸಿನಿಮಾ ನೋಡೋದಕ್ಕೆ ಎರಡು ಕಾರಣಗಳಿದ್ವು. ಮೊದಲನೇದು, ಸಿನಿಮಾವನ್ನು ಬ್ಯಾನ್ ಮಾಡ್ಬೇಕು ಅಂತ ಗಲಾಟೆಯಾಗಿ ಅದು ಕೋರ್ಟಿಗೂ ಹೋಗಿ ಅಲ್ಲಿಂದ ಬಿಡುಗಡೆ ಪಡೆದು ಹೊರಬಂದದ್ದು. ಎರಡನೇದು ಇದು ಅಮೀರ್ ಖಾನ್ ನ ಮಗ ಜುನೈದ್ ಖಾನ್ ನ ಮೊದಲ ಸಿನಿಮಾ.
ಸಿನಮಾ ನೋಡಿದ ಮೇಲೆ ನನಗೆ ಅದರಲ್ಲಿ ಬ್ಯಾನ್ ಮಾಡೋವಂಥದ್ದೇನೂ ಕಾಣಲಿಲ್ಲ. 1800 ರ ಹೊತ್ತಿಗೆ ಸುಪ್ರೀಂ ಕೋರ್ಟ್ ನಲ್ಲಿ ನಡೆದ ಮೊಕದ್ದಮೆಯೊಂದರ ನಿಜ ಕತೆ ಇದು. ಹಾಗಂತ ಇದು ಎತ್ತಿಕೊಳ್ಳುವ ಪ್ರಶ್ನೆ ಸಾಕಷ್ಟು ತೀವ್ರವಾದದ್ದೇ. ತಾನೇ ದೇವದೂತನೆಂದು ಹೇಳಿಕೊಳ್ಳುವ ಧಾರ್ಮಿಕ ಮುಖಂಡ ಜದುನಾಥ್ ಮಹಾರಾಜ್ (ಜೈದೀಪ್ ಅಹಲಾವತ್) ‘ಚರಣ್ ಸೇವಾ’ ಎನ್ನೋ ಹೆಸರಲ್ಲಿ ಭಕ್ತೆಯರ ಮೇಲೆ ನಡೆಸುವ ಲೈಂಗಿಕ ಶೋಷಣೆಯನ್ನು ಕತ್ತು ಹಿಡಿದು ಪ್ರಶ್ನಿಸುವಂಥದ್ದು.

ಸಮಾಜ ಸುಧಾರಕ ದಾದಾಭಾಯಿ ನವರೋಜಿಯವರ ಕಾಲದ ಕರಸನದಾಸ್ ಎನ್ನೋ ಯುವ ಪತ್ರಕರ್ತನ ಹೋರಾಟದ ಕತೆಯಿದು. ಅತನ ಭಾವೀಪತ್ನಿ ಕಿಶೋರಿ ಯೇ (ಶಾಲಿನಿ ಪಾಂಡೆ) ಜದುನಾಥ್ ನ ಶೋಷಣೆಗೆ ಬಲಿಯಾದಾಗ ಆತ ಇಂಥ ಹೋರಾಟಕ್ಕೆ ಧುಮುಕುತ್ತಾನೆ.
ಹೀಗೆ ಸ್ತ್ರೀ ಶೋಷಣೆಯ ವಿರುದ್ಧದ ಹೋರಾಟವಾಗಿ ಶುರುವಾಗುವ ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಹೋರಾಟವೂ ಆಗುತ್ತ ಕೊನೆಗೆ ಅಂಧ ಭಕ್ತಿಯಿಂದ ಧರ್ಮವನ್ನ ಬಿಡುಗಡೆಗೊಳಿಸುವ ಹೋರಾಟವೂ ಆಗುತ್ತದೆ. ಅಂತ್ಯದ ಕೋರ್ಟ್ ಸೀನ್ ನಲ್ಲಿ ಜದುನಾಥ್ ನ ವಿರೋಧದದನಿಗೆ ಶೋಷಣೆಗೊಳಗಾದ ಮಹಿಳೆಯರ ಒಂದೊಂದು ದನಿಯೂ ಸೇರುತ್ತ ‘ ಮಿ ಟೂ’ ಚಳುವಳಿಯನ್ನೂ ನೆನಪಿಸುತ್ತದೆ.
ಇನ್ನು….
ಅಮೀರ್ ಮಗ ಜುನೈದ್ ತನ್ನ ಮೊದಲ ಚಿತ್ರವಾಗಿ ಇಂಥ ಚಿತ್ರವನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಆತನನ್ನು ಅಭಿನಂದಿಸಲೇಬೇಕು. ಒಂಥರಾ ದಿನದ ಪಾಠ ದಿನವೂ ಓದಿಕೊಂಡು ಬರೋ ಹುಡುಗನ ಹಾಗೆ ಸಾಕಷ್ಟು ತಯಾರಿ ಮಾಡಿಕೊಂಡೇ ಬಂದು ನಟಿಸಿದ ಹಾಗಿದೆ. ಸಿಕ್ಕಾಪಟ್ಟೆ ಚಲೋ ಸಿನಿಮಾವೇನಲ್ಲ. ಆದರೂ ಒಮ್ಮೆ ನೋಡಿ…
- ಕಿರಣ್ ಭಟ್ ಹೊನ್ನಾವರ
