ಸ್ವಾಮಿ ವಿವೇಕಾನಂದರ ಮಹಾಸಮಾಧಿಯ ದಿನದಂದು ಕವಿ ಬೆಂಶ್ರೀ ರವೀಂದ್ರ ಅವರ ಕವಿತೆಯನ್ನು ತಪ್ಪದೆ ಮುಂದೆ ಓದಿ….
ಅವ ಕರ್ಪೂರದಂತೆ
ಅಡರಿದ ಮೂಲೆಮೂಲೆಯ ಕತ್ತಲೆಯ ಅಟ್ಟಿ
ಬೆಳಕನ್ನು ಚೆಲ್ಲಿಬಿಟ್ಟ
ನುಡಿದಂತೆ ನಲವತ್ತು ಮುಟ್ಟದೆ ನಡೆದುಬಿಟ್ಟ
ಅವ ಗದಾಧರನ ಸುದರ್ಶನದಂತೆ
ಅಜ್ಞಾನದಸುರನ ಶಿರವ ಕತ್ತರಿಸಿ
ಜಡದ ತಿಮಿರವ ಝಾಡಿಸಿ
ಸುಜ್ಞಾನ ಸುಧೈರ್ಯದ ವೃಕ್ಷಗಳ ಬಿತ್ತಿಕೊಟ್ಟ
ಕಡಲಾಳದಿಂದೊಮ್ಮೆಗೆ ಕೈಲಾಸಕ್ಕೆ ಜಿಗಿದುಬಿಟ್ಟ
ಆರ್ಯಮಾತೆಯ ಅಮೃತಪುತ್ರರಿರಾ
ಮಹರ್ಷಿಕುಲ ಸಂಜಾತ ಧನ್ಯಾತ್ಮರಿರಾ
ಎಂದು ಮಡಿಲಲಾಡಿಸಿ
ಕುಸಿದ ಹೆಮ್ಮೆಯ ಬಳ್ಳಿಗೆ
ನೀರುಣಿಸಿ ನಡೆದುಬಿಟ್ಟ
ಮುಟ್ಟದಿರೆಂಬ ಕಡುನಡೆಗೆ ಕಣೆ ಎಸೆದು
ಮಾಲಿನ್ಯದ ಕಟ್ಟೆಯನೊಡೆದು
ಗಂಗೆಯ ಜುಳಜುಳನೆ ಪಾತ್ರದೊಳು ಬಿಟ್ಟ
ನೊರೆಂಟು ಹಕ್ಕಿಗಳ ಕಲರವವ ಕಿವಿಯೊಳಿಟ್ಟ
ವಿವೇಕದಿ ಆನಂದ ಪಡೆದ ನರೇಂದ್ರ
ವಿಶ್ವದಿಗಂತದಿ ಸೇರಿಬಿಟ್ಟ
ಅವ ಕರ್ಪೂರದಂತೆ.
- ಬೆಂಶ್ರೀ ರವೀಂದ್ರ
