‘ಸಂತೆಗಳು’ ಎಂಬ ಕೆ. ರಾಜಕುಮಾರ್ ಅವರ ಮೊಗಬರಹ ಬೆಂಗಳೂರು ವಿಶ್ವವಿದ್ಯಾಲಯದ ಬಿ.ಕಾಂ. ಪದವಿಯ ೩ ನೆಯ ಸೆಮಿಸ್ಟರ್ ನ ಕನ್ನಡ ಪಠ್ಯ ಪುಸ್ತಕ ‘ವಾಣಿಜ್ಯ ಕನ್ನಡ-3’ ಕ್ಕೆ ಒಂದು ಪಾಠವಾಗಿ ಸೇರ್ಪಡೆಯಾಗಿದ್ದು ಹೆಮ್ಮೆಯ ವಿಷಯ. ಆ ಪಠ್ಯ ಪುಸ್ತಕ ಹೀಗಿದೆ ತಪ್ಪದೆ ಮುಂದೆ ಓದಿ…
ಇದು 2025, 2026 ಮತ್ತು 2027 ಈ ಮೂರು ವರ್ಷಗಳ ಕಾಲ ಚಾಲ್ತಿಯಲ್ಲಿರುತ್ತದೆ. 2025ನೆಯ ಸಾಲಿನ ಮೂರನೆಯ ಸೆಮಿಸ್ಟರಿನ ವಿದ್ಯಾರ್ಥಿಗಳು 2026ರ ಜನವರಿ 3ರಂದು ಪರೀಕ್ಷೆ ಬರೆದರು. ನಾಲ್ಕು ಪುಟಗಳ ಸಂತೆಗಳು ಪಾಠದಿಂದ ಮೂರು ಪ್ರಶ್ನೆಗಳನ್ನು ಕೇಳಲಾಗಿದೆ. 80 ಅಂಕಗಳ ಪ್ರಶ್ನೆಪತ್ರಿಕೆಯಲ್ಲಿ ಕ್ರಮವಾಗಿ 2+5+4 ಅಂಕಗಳ ಪ್ರಶ್ನೆಗಳು ಸಂತೆಗಳು ಪಾಠಕ್ಕೆ ಸಂಬಂಧಿಸಿದ್ದು. ಪ್ರಶ್ನೆಪತ್ರಿಕೆ ರೂಪಿಸಿದ ಅಜ್ಞಾತರಿಗೆ ಅಭಿವಂದನೆಗಳು. ಇಂತಹ ಸಣ್ಣಪುಟ್ಟ ಸಂಗತಿಗಳೇ ನನ್ನ ಪಾಲಿಗೆ ಮಂಗಳ ಮೊಳಗು. ನನ್ನ ಲೇಖನವೊಂದು ಪದವಿ ತರಗತಿಯ ಪಠ್ಯಪುಸ್ತಕದಲ್ಲಿ ಪಾಠವಾದದ್ದು ಸಡಗರವನ್ನು ಮೊಗೆಮೊಗೆದು ತಂದಿದೆ. ನೀರವದ ಕ್ಷಣಗಳಲ್ಲಿ ಕಲರವವನ್ನು ಕೇಳಿಸಿದೆ. ಉಮ್ಮಳವ ತುಸು ನೀಗಿ ನಿರುಮ್ಮಳವನ್ನು ಸಂಪ್ರೋಕ್ಷಿಸಿದೆ. ಕನ್ನಡವನ್ನು ಪ್ರೌಢಶಾಲೆಯಲ್ಲಿ ಪ್ರಥಮ ಭಾಷೆಯಾಗಿ ಓದಿದ್ದಷ್ಟೇ. ಅನಂತರ ಕೆಲವಂ ಬಲ್ಲವರಿಂದ ಅರಿತು, ಕೆಲವಂ ಕೃತಿಗಳ ಓದುತ, ಕನ್ನಡದೊಂದಿಗೆ ಒಡನಾಡುತ ಕಲಿತಿದ್ದು. ಬರೆಹಕ್ಕೆ ಇಳಿದು ನನ್ನದೇ ಸ್ವೋಪಜ್ಞ ಶೈಲಿಯನ್ನು ರೂಪಿಸಿಕೊಂಡಿದ್ದು ಇತ್ತೀಚಿನ ವರ್ಷಗಳಲ್ಲಷ್ಟೇ. ಹಿರಿಯರ ಚೆಂದದ ಪಾಠ ಗಳನ್ನು ಓದುತ್ತ, ಕನ್ನಡದ ಪರಂಪರೆಯನ್ನು ಅರಿಯುತ್ತ, ನೆಲದ ನುಡಿಯನ್ನೇ ಧೇನಿಸಿ ಮುದಗೊಳ್ಳುತ್ತಿದ್ದ ತಲೆಮಾರಿನವನು ನಾನು. ಆದರೆ ಕನ್ನಡವೆಂದರೆ ಒಲ್ಲೆ ಒಲ್ಲೆ; ಇಸ್ಸಿ ಇಸ್ಸಿ ಎನ್ನುವ ತಾರುಣ್ಯದ ಬಿಸುಪಿನ ಪ್ರಸ್ತುತ ವಿದ್ಯಾರ್ಥಿ ವೃಂದವನ್ನು ಕಂಡಾಗ ಮನಸ್ಸು ಜರ್ಜರಿತವಾಗು ತ್ತದೆ; ವಿಹ್ವಲಗೊಳ್ಳುತ್ತದೆ. ತತ್ತ್ವ-ಸಿದ್ಧಾಂತ, ಎಡ-ಬಲ, ಪಕ್ಷ-ಪಂಥ-ಪಂಗಡಗಳ ಜಂಜಾಟದಲ್ಲಿ ಈಗಿನ ಕನ್ನಡ ಪಠ್ಯಪುಸ್ತಕಗಳು ಸೊರಗಿವೆ. “ಆಡುವ ನಾವಾಡುವ ಆಡುತ ನಲಿದಾಡುವ” ಎಂದು ಆಡಿ, ಪಾಡಿ ಸಂಭ್ರಮಿಸುತ್ತಿದ್ದ ಪಠ್ಯಪುಸ್ತಕವೆಂಬ ಅಂಗಳದ ತಾವು ಇಂದು ಸಮರಾಂಗಣವಾಗಿ ರೂಪುಗೊಂಡಿದೆ. ಮೌಲ್ಯಗಳ ವ್ಯಾಖ್ಯೆಯೇ ಬದಲಾಗಿಬಿಟ್ಟಿದೆ. ಯಥೇಚ್ಛವಾದ ಜೀವನಪ್ರೀತಿಯನ್ನೂ, ಕನ್ನಡದ ಮೇಲಿನ ಅಭಿಮಾನವನ್ನೂ ದೀಪ್ತಗೊಳಿಸಿ; ಸಂಜೀವಿನಿ ಶಕ್ತಿಯನ್ನು ತುಂಬಿದ್ದೇ ಕನ್ನಡ ಪಠ್ಯಪುಸ್ತಕಗಳು. ಅವು ಕತ್ತಿ, ಗುರಾಣಿಗಳಾಗದೆ ಏನಾದರೂ ಸರಿಯೇ ಮೊದಲು ನಮ್ಮನ್ನು ಮಾನವರನ್ನಾಗಿಸಲಿ. ಅಂಧಕಾರವ ನೀಗಿಸಿ ಸೌಹಾರ್ದತೆಯನ್ನು ಸ್ಥಾಪಿಸಲಿ.

ಕೆಳಗೆ ಈ ಸಲದ ಪ್ರಶ್ನೆಪತ್ರಿಕೆಯಲ್ಲಿ ಬಂದಿರುವ ಸಂತೆಗಳು ಪಾಠದ ಕುರಿತ ಪ್ರಶ್ನೆಗಳನ್ನು ನೀಡಿದ್ದೇನೆ. ಆ ಲೇಖನವನ್ನೂ ನಿಮ್ಮ ಮರು ಓದಿಗೆ ನೀಡಿರುವೆ. ಈಗಾಗಲೇ ವಿದ್ಯಾರ್ಥಿಗಳು 20 ಅಂಕಗಳ ಕಾರ್ಯನಿಯೋಜನೆ/Assignmentಗಾಗಿ ಸಂತೆಗಳು ಲೇಖನ ಕುರಿತ ಅಭ್ಯಾಸವನ್ನು ಮಾಡಿರಬಹುದು.
- ಸಂತೆಯ ವಿಧಗಳನ್ನು ಲೇಖಕರು ಹೇಗೆ ಅರ್ಥೈಸಿದ್ದಾರೆ? – (4 ಅಂಕಗಳು)
- ಸಂತೆಗಳ ಕುರಿತು ಲೇಖಕರ ಅಭಿಪ್ರಾಯ ವೇನು? – (5 ಅಂಕಗಳು)
- ‘ಪುಸ್ತಕ ಸಂತೆ’ಯ ಬಗ್ಗೆ ಟಿಪ್ಪಣಿ ಬರೆಯಿರಿ. – (4 ಅಂಕಗಳು)

ಸಂತೆಗಳು :
ನಮ್ಮ ಸಂತೆಗಳೆಂದರೆ ಗೌಜು-ಗದ್ದಲ. ಸಂಭ್ರಮ-ಸಡಗರ. ಗ್ರಾಮೀಣ ಸಂಸ್ಕೃತಿಯ ಅನಾವರಣ. ಕೊಡು-ಕೊಳು ಅಷ್ಟೇ ಅಲ್ಲದೇ, ಸಾಮರಸ್ಯದ ಬದುಕಿಗೆ ಆಸರೆಯಾಗುವ ಪ್ರಯತ್ನ. ಹಣ ಪ್ರಸರಣದ ಮೂಲಕ ಗ್ರಾಮೀಣ ಭಾರತದ ಆರ್ಥಿಕ ಚೇತರಿಕೆಗೆ ನಾಂದಿ ಹಾಡುವ ಕ್ರಮ. ಅವು ಸಾಮಾಜಿಕ, ಸಾಮುದಾಯಿಕ ಸಂಬಂಧಗಳನ್ನು ದೃಢಗೊಳಿಸುವ ವ್ಯವಸ್ಥೆಯೂ ಹೌದು. ಅವು ಜೀವ-ಭಾವದ ರಸಮೇಳ. ಇಲ್ಲಿ ಪರಿಸರ ಕಲುಷಿತವಾಗಿದ್ದರೂ ಮನವು ಪರಿಶುದ್ಧ. ಮಾಲುಗಳ ಮಹಾಮೌನಕ್ಕಿಂತ, ಅವುಗಳ ನಿಸ್ತೇಜ ಗಂಭೀರ ವದನಗಳಿಗಿಂತ ಸಂತೆ, ಪರಿಷೆಗಳ ಸದ್ದು-ಗದ್ದಲವು ಜೀವ-ಜೀವದ ಸ್ವರ ಸಂಚಾರದಂತೆ ಕೂಡಿರುತ್ತದೆ. ಇಲ್ಲಿ ಶಬ್ದ ಎಂಬುದು ಶಾಂತಿಯನ್ನು ಕದಡುವುದಿಲ್ಲ. ಕೊಳ್ಳುಬಾಕ ಸಂಸ್ಕೃತಿಯನ್ನು ಉತ್ತೇಜಿಸುವ ಮಾಲುಗಳಲ್ಲಿನ ಬಿಂಕ- ಬಿಗುಮಾನ; ಹಮ್ಮು- ಬಿಮ್ಮು ಇಲ್ಲಿರದು. ಇಲ್ಲಿ ಎಲ್ಲವೂ ಮುಕ್ತ ಮುಕ್ತ.
ಹಲವರಿಗೆ ಬದುಕನ್ನು ಕಟ್ಟಿಕೊಡುವ ಸಂತೆಗಳು ನಮ್ಮ ಬಾಲ್ಯದ ನೆನಪನ್ನು ಮೀಟಿ, ಎದೆತುಂಬಿ ಹಾಡಾಗುವ ಸಾಧನಗಳು. ವಾರದ ಸಂತೆಯನ್ನು ಮನುಷ್ಯ ಸಂಬಂಧಗಳ ಸಾಪ್ತಾಹಿಕ ನವೀಕರಣ ಎನ್ನಬಹುದು. ಅದು ಇನ್ನೇನೂ ಅಲ್ಲ; ಕನ್ನಡ ಕವಿವರ್ಯ ಆನಂದಕಂದರ “ನಾ ಸಂತಿಗೆ ಹೋಗಿವ್ನಿ, ಆಕಿ ತಂದಿದ್ದಳೋ ಬೆಣ್ಣಿ” ಎಂಬ ಮಧುರ ಜಾನಪದ ಗೀತೆ.
ನಮ್ಮಲ್ಲಿ “ಚಿಂತೆ ಇಲ್ಲದವನಿಗೆ ಸಂತೆಯಲ್ಲಿ ನಿದ್ದೆ” ಎಂಬ ಗಾದೆಯು ಮೊಗದಲ್ಲಿ ಅಚ್ಚರಿಯ ರಂಗೋಲಿಯನ್ನು ಬಿಡಿಸುತ್ತದೆ. ಇಂಗ್ಲೆಂಡಿನ ಸಂತೆಗಳಾಗಲೀ, ಅಮೆರಿಕದ ಸಂತೆಗಳಾಗಲೀ ಶಬ್ದಮುಕ್ತ, ಕಸಮುಕ್ತ. ಆದುದರಿಂದ ಯಾರು ಬೇಕಾದರೂ ಅಲ್ಲಿ ನಿದಿರಾಂಗನೆಯ ಸೆಳವಿಗೆ ಸಿಲುಕಬಹುದು! ನಮ್ಮ ಅಕ್ಕಮಹಾದೇವಿ ವಿದೇಶಿ ಸಂತೆಗಳನ್ನು ನೋಡಿದ್ದರೆ “ಸಂತೆಯೊಳಗೊಂದು ಮನೆಯ ಮಾಡಿ ಶಬ್ದಕ್ಕೆ ಅಂಜಿದೊಡೆ ಎಂತಯ್ಯ” ಎಂದು ಕೇಳುತ್ತಿರಲಿಲ್ಲ. ನಮ್ಮಲ್ಲಿ ಸಂತೆ ಎಂಬುದು ಸದ್ದಿಗೊಂದು ರೂಪಕ. ಸಂಬಂಧಗಳ ಹೊಸ ಬೆಸುಗೆಗೆ, ಹಳೆಯ ಪರಿಚಯಗಳ ನವೀಕರಣಕ್ಕೆ ಹೇಳಿ ಮಾಡಿಸಿದ ಬಯಲು.
ಬಯೋಸ್ಕೋಪುಗಳಲ್ಲಿ ನಾಯಕ ನಟ ಬಾಲ್ಯದಲ್ಲಿ ಕಳೆದುಹೋಗುವುದು ಅಥವಾ ಪ್ರಥಮ ನೋಟದಲ್ಲೇ ನಾಯಕಿಯೊಂದಿಗೆ ಅವನಿಗೆ ಪ್ರಣಯಾಂಕುರ ಆಗುವುದು ಇಂತಹ ಸಂತೆ, ಜಾತ್ರೆ, ಪರಿಷೆಗಳಲ್ಲೇ. ಇಲ್ಲದಿದ್ದರೆ “ದುನಿಯಾ ಹೈ ಮೇಲ, ಮೇಲೆ ಮೇ ಲಡಕೀ, ಲಡಕೀ ಅಕೇಲಿ; ಶನ್ನೋ ನಾಮ್ ಉಸಕಾ, ಸಬಕೋ ಸಲಾಮ್ ಉಸಕಾ” ಎಂಬ ದೊಂಬರಗೀತೆ ಮೂಡುತ್ತಲೇ ಇರಲಿಲ್ಲ. ಮಣಿ ಮಣಿ ಮಣಿ ಮಣಿ ಮಣಿಗೊಂದು ದಾರ ಅಥವಾ ಇವಳ್ಯಾರ ಮಗಳೋ ಹಿಂಗವಳಲ್ಲ, ಬಾರೋ ಸಂತೆಗೆ ಹೋಗೋಣ ಬಾ ಸಿನಿಮಾ ಟೆಂಟಲ್ಲಿ ಕೂರೋಣ ಬಾ ಎಂಬ ಚಿತ್ರಗೀತೆಗಳು ಮೂಡುತ್ತಲಿರಲಿಲ್ಲ.

ಅವು ನಮ್ಮಲ್ಲಿ ಕೇವಲ ವಸ್ತು ವಿನಿಮಯಕ್ಕಷ್ಟೇ ಮೀಸಲಾದ ಸ್ಥಳವಲ್ಲ. ಅವು ಭಾವ ವಿನಿಮಯದ ಜಾಗವೂ ಹೌದು. ಅವು ಗ್ರಾಮ ಭಾರತದ ಜೀವಂತ ಸಂಸ್ಕೃತಿಯೊಂದರ ಚಹರೆ. ಸಂತೆ ಎಂಬುದು ನಮ್ಮ ಚಲನಶೀಲ ಜೀವನ ವಿಧಾನವನ್ನು ಅನ್ಯಾಕ್ರಮಣಕ್ಕೆ ತುತ್ತಾಗದೆ ಕಾಯುವ ಶಕ್ತ ಪಹರೆಗಳಲ್ಲಿ ಒಂದು. ಸಂತೆ ನಮ್ಮ ಶ್ರೀಮಂತ ಪರಂಪರೆಯ ಭಾಗ. ಅದು ನಮ್ಮ ಜನಪದ ಸಂಸ್ಕೃತಿಯ ಧಾತು. ಸಂತೆ ನಮ್ಮ ಸಾಂಪ್ರದಾಯಿಕ ಬದುಕಿನ ಅವಿಚ್ಛಿನ್ನ ಭಾಗ. “ಸಂತೆಯ ಹೊತ್ತಿಗೆ ಮೂರು ಮೊಳ ಸೀರೆ ನೇಯ್ದರು” ಎಂಬುದು ಒಂದು ಗಾದೆ ಮಾತು. ಆದರೆ ಬದುಕಿನ ಜತೆಗೆ ಸಂತೆಗಳು ಹೆಣೆದುಕೊಂಡಿರುವ ಪರಿಯನ್ನೂ, ಸಂತೆಯಲ್ಲಿ ಮಾರಲು ಮೊದಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿರಬೇಕೆಂಬ ಎಚ್ಚರವನ್ನೂ ಇದು ಉಸುರುತ್ತದೆ.
ಇಂದು ಸಂತೆಗಳು ಮಾಲ್, ಸೂಪರ್ ಮಾಲ್, ಹೈಪರ್ ಮಾಲುಗಳಾಗಿ ಪರಿವರ್ತನೆಗೊಂಡಿವೆ. ಇದು ಒಂದೇ ಸೂರಿನಡಿಯಲ್ಲಿ ಕೊಳ್ಳುವ ಕ್ರಿಯೆಯನ್ನು ಸಾಗಿಸಬಹುದಾದ ವ್ಯಾಪಾರಿ ತಾಣಗಳು. ಅವಕ್ಕೆ ವ್ಯಾಪಾರಿ ಉದ್ದೇಶ ಹೊರತುಪಡಿಸಿ ಕಿಂಚಿತ್ ಸಾಂಸ್ಕೃತಿಕ ಮಹತ್ತ್ವವೂ ಇರದು.
ನಮ್ಮ ತಲೆಮಾರಿಗೆ ಮಾಲು ಸಂಸ್ಕೃತಿ ಹೊಸತು. ಈಚಿನ ತಲೆಮಾರಿನವರಿಗೆ ಅವು ಕಮಾಲ್ ಕಿ ಚೀಜುಗಳು. ಮಾಲುಗಳ ಭೇಟಿ ನನ್ನಂತಹವರಲ್ಲಿ ಭಯಮಿಶ್ರಿತ ಭಾವವನ್ನು ಉಂಟುಮಾಡುತ್ತದೆಯೇ ಹೊರತು ಬೆರಗನ್ನಲ್ಲ. ಸಂತೆಗಳೆಲ್ಲಾ ಮಾಲುಗಳ ಮುಂದೆ ಮಂಡಿಯೂರಿ, ಮೌನವಾಗಿವೆ. ಭಾರತೀಯರ ಜೀವನ ಶೈಲಿ ಮಗ್ಗಲು ಬದಲಿಸಿದೆ. ಹಳತು ಎಂಬುದು ನೆನಪಾಗಿ ಕಾಡುತ್ತದೆ.
ಸಂತೆಯಲ್ಲಿ ಸಂಪತ್ತು ಗಳಿಕೆ ಹಲವರ ತುತ್ತಿನ ಚೀಲಕ್ಕೆ ಆಧಾರವಾಗಿರುತ್ತಿತ್ತು. ಏಕಕಾಲಕ್ಕೆ ಹಲವು ಕುಟುಂಬಗಳ ದೀಪ ಹಚ್ಚುವ ಕೆಲಸ ಸಂತೆಗಳಿಂದಾಗುತ್ತಿತ್ತು. ಅಂಬಾನಿ, ಬಿರ್ಲಾ ಅವರಂತಹ ಏಕ ಮಾಲೀಕತ್ವದ ಮಾಲುಗಳಿಂದಾಗಿ ಹಳ್ಳದ ಕಡೆಗೇ ನೀರು ಹರಿದು, ಹಣವಂತರಿಗೇ ಹಣ ಸೇರುವಂತಾಗಿದೆ.
ಇಷ್ಟಾದರೂ ಮಾಲ್ ಎಂಬುದು ಉಳ್ಳವರ ಶಿವಾಲಯವೇನಲ್ಲ. ಕೆಲವೊಮ್ಮೆ ಅಲ್ಲಿ ಸ್ಪರ್ಧಾತ್ಮಕ ಬೆಲೆಗಳಲ್ಲಿ ಸರಕು ಲಭ್ಯ. ಆದರೆ ಕೊಳ್ಳುಬಾಕ ಸಂಸ್ಕೃತಿಗೆ ಪ್ರೇರಕ. ಸಂತೆಗಳು ಅಂತಲ್ಲ; ಅವು ವಾರದ ಅಗತ್ಯವನ್ನು ಮಾತ್ರ ಪೂರೈಸುವಂತಹವು. ಸಂತೆ ಎಂಬುದು ಅಗತ್ಯಾಧಾರಿತ; ಮಾಲ್ ಎಂಬುದು ಅಗತ್ಯಕ್ಕಿಂತ ‘ಮೋರ್’!
ಕಾಲ ಬದಲಾದಂತೆ, ಬದುಕು ಹೊಸ ತಿರುವು ಪಡೆದುಕೊಂಡಂತೆ ಸಂತೆಗಳ ಪರಿಕಲ್ಪನೆಯೂ ವಿಸ್ತಾರಗೊಳ್ಳುತ್ತಿದೆ. ಸಂತೆಗಳ ವ್ಯಾಪ್ತಿಗೆ ಹತ್ತು ಹಲವು ವಸ್ತು, ವಿಷಯ ಸೇರಿಕೊಳ್ಳುತ್ತಿವೆ. ಅದರ ಸೀಮಿತ ಚೌಕಟ್ಟು ಇತ್ತೀಚೆಗೆ ಹಿಗ್ಗುತ್ತಲೇ ಸಾಗಿದೆ. ಅವುಗಳ ಚಲನೆ ಮೊದಲು ಪಟ್ಟಣ ಪ್ರದೇಶಗಳಿಂದ ನಗರ ಪ್ರದೇಶಗಳ ಕಡೆಗಿತ್ತು. ಹೊಸ ರೀತಿಯ ಪರಿಕಲ್ಪನೆಗಳಿಂದಾಗಿ ಆಧುನಿಕ ಸಂತೆಗಳು ನಗರಗಳಿಂದ ಪಟ್ಟಣಗಳ ಎಡೆಗೆ ಮುಖಮಾಡಲು ಆರಂಭಿಸಿವೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ‘ಚಿತ್ರಸಂತೆ’ ಎಂಬ ಅಚ್ಚರಿ ಘಟಿಸುತ್ತಿದೆ. 2008ರಲ್ಲಿ ಆರಂಭವಾದ ಅದಕ್ಕೆ ಈಗ ತುಂಬು ಹರೆಯ. ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸುತ್ತಿರುವ ಈ ವಿಶಿಷ್ಟ ಸಂತೆಯು ಚಿತ್ರಕಲಾವಿದರನ್ನೂ, ಶ್ರೀಸಾಮಾನ್ಯ ಕಲಾರಸಿಕರನ್ನೂ ನೇರ ಮುಖಾಮುಖಿಯಾಗಿಸುತ್ತದೆ. ಸಾವಿರ ಸಾವಿರ ಸಂಖ್ಯೆಯ ಕಲಾಕೃತಿಗಳು ಅಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ದೊರೆಯುತ್ತವೆ. ಚಿತ್ರಸಂತೆ ಎಂಬುದು ಭಾರತೀಯ ಚಿತ್ರಕಲಾ ಕ್ಷೇತ್ರದಲ್ಲಿನ ನವ ಸಂಚಲನ. ವರ್ಷದಲ್ಲಿ ಒಂದು ದಿನ ಮಾತ್ರ ನಡೆಯುವ ಈ ಸಂತೆ ಕಲಾವಿದರ ಕಿಸೆಗಳನ್ನು ತುಂಬಿಸುತ್ತಿದೆ. ಅವರ ಒಣಗಿದ ಕುಂಚಗಳಿಗೆ ಮತ್ತೆ ಬಣ್ಣ ತುಂಬಿ ಚಿತ್ತಾರ ಬಿಡಿಸುವಂತೆ ಮಾಡಿದೆ. ಕಲಾವಿದರಲ್ಲಿ ಆತ್ಮವಿಶ್ವಾಸವನ್ನೂ, ಸಾರ್ಥಕತೆಯ ಭಾವವನ್ನೂ ಬಿತ್ತಿದೆ.
ಬೆಂಗಳೂರಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ‘ವೀರಲೋಕ ಬುಕ್ಸ್’ ಆಯೋಜಿಸುತ್ತಿರುವ ಪುಸ್ತಕ ಸಂತೆ ಜನಪ್ರಿಯಗೊಳ್ಳುತ್ತಿದೆ. ಅಚ್ಚುಕಟ್ಟಾದ ವ್ಯವಸ್ಥೆಯಿಂದಾಗಿ ಸಾಹಿತ್ಯ ಪ್ರೇಮಿಗಳು ಇಲ್ಲಿಗೆ ದಾಂಗುಡಿ ಇಡುತ್ತಾರೆ. ವರ್ಷದಲ್ಲಿ ಮೂರು ದಿನ ನಡೆಯುವ ಈ ಸಂತೆಯು ಓದುಗರು ತಮಗೆ ಬೇಕಾದ ಪುಸ್ತಕಗಳನ್ನು ಕೊಳ್ಳುವ ಅವಕಾಶವನ್ನು ಒದಗಿಸುತ್ತಿದೆ. ಇದರೊಟ್ಟಿಗೆ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಇದರ ಉಪಯುಕ್ತತೆಯನ್ನು ಹೆಚ್ಚಿಸಲಾಗುತ್ತಿದೆ. ಇಲ್ಲಿ ಆಯೋಜಿಸಲಾಗುವ ಉಪನ್ಯಾಸ, ಕವಿಗೋಷ್ಠಿ, ಗೀತಗಾಯನ, ನೃತ್ಯ, ನಾಟಕ ಪ್ರದರ್ಶನಗಳು ಜನರನ್ನು ತಂಡೋಪ ತಂಡವಾಗಿ ಸೆಳೆಯುತ್ತಿವೆ. ಇದರಿಂದ ಪ್ರಭಾವಿತವಾದ ಕರ್ನಾಟಕ ಸರ್ಕಾರ ವಿಧಾನಸೌಧದ ಹೊರ ಆವರಣದಲ್ಲಿ ಪುಸ್ತಕ ಸಂತೆಯನ್ನು ಏರ್ಪಡಿಸಿ ಇತರ ರಾಜ್ಯಗಳಿಗೆ ಮಾದರಿಯಾಗಿದೆ.
ರಾಷ್ಟ್ರದ ರಾಜಧಾನಿ ನವದೆಹಲಿಯ ಪ್ರಗತಿ ಮೈದಾನದ ದೈತ್ಯಗಾತ್ರದ ಶೆಡ್ಡುಗಳಲ್ಲಿ ವರ್ಷವಿಡೀ ನಡೆಯುವ ವಿಧವಿಧ ಸಂತೆಗಳನ್ನು ನೋಡಿಯೇ ತಣಿಯಬೇಕು. ಇಲ್ಲಿ ಏಕಕಾಲಕ್ಕೆ ಸಾವಿರಕ್ಕೂ ಹೆಚ್ಚು ಮಳಿಗೆಗಳನ್ನು ನಿರ್ಮಿಸಲು ಬೇಕಾದ ಸ್ಥಳಾವಕಾಶವಿದೆ; ಸಂಪನ್ಮೂಲವಿದೆ. ಇಲ್ಲಿನ ಸಂತೆಗಳಿಗೆ ಅರ್ಧಶತಮಾನಕ್ಕೂ ಮೀರಿದ ಇತಿಹಾಸವಿದೆ. ಇಲ್ಲಿ ಪುಸ್ತಕಗಳಿಗೆ ಒಂದು ಸಂತೆ; ವಿಧವಿಧ ವಿನ್ಯಾಸದ ದೀಪಗಳಿಗೆ ಮಗದೊಂದು, ಗೃಹೋಪಯೋಗಿ ವಸ್ತುಗಳ ಮಾರಾಟಕ್ಕೆ ಇನ್ನೊಂದು. ಹೀಗೆ ಸಂತೆ ಎಂಬುದು ನವದೆಹಲಿಯಲ್ಲಿ ನಿತ್ಯ ಕಲರವವಾಗಿದೆ.
ಸಮಾಧಾನದ ಸಂಗತಿಯೆಂದರೆ ಕಿನ್ನಿಗೋಳಿ ಸೇರಿದಂತೆ ನಮ್ಮ ನಾಡಿನ ಹಲವು ಪಟ್ಟಣ ಪ್ರದೇಶಗಳಲ್ಲಿ ನಡೆಯುವ ಸಂತೆಗಳು ಅಲ್ಲಿನ ಮಾಲುಗಳ ಸ್ಪರ್ಧೆ ಎದುರಿಸಿ ಗೆದ್ದಿವೆ. ಮಾಲುಗಳಿಗೆ ಸಡ್ಡು ಹೊಡೆದು ಗುಟುರು ಹಾಕುತ್ತಿವೆ.
ಮತ್ತೊಂದು ಬೆಳವಣಿಗೆಯೆಂದರೆ ಹಳೆಯ ವಸ್ತುಗಳನ್ನು ತಂದು ವಾರಕ್ಕೊಮ್ಮೆ ನಿಗದಿತ ತಾಣದಲ್ಲಿ ಮಾರುವಂತಹ ಸಂತೆಗಳು ಇದೀಗ ಹೆಚ್ಚುತ್ತಿರುವುದು. ಗ್ರಾಹಕರಿಗೆ ಇಲ್ಲಿ ಕಬ್ಬಿಣದ ಸಲಕರಣೆಗಳಿಂದ ಹಿಡಿದು ಹಳೆಯ ಬಟ್ಟೆಗಳವರೆಗೆ ಲಭ್ಯ. ವಿದೇಶಗಳಲ್ಲಿ ಇಂತಹ ಸಂತೆಗಳನ್ನು ‘ಫ್ಲೀ ಮಾರುಕಟ್ಟೆ’ ಎಂದು ಕರೆಯಲಾಗುತ್ತದೆ. ಜಾಲತಾಣಗಳ ಮೂಲಕವೇ ಹಳೆಯ ವಸ್ತುಗಳನ್ನು ಬಿಕರಿ ಮಾಡುವ ವ್ಯವಸ್ಥೆಯೂ ಈಗ ಚಾಲ್ತಿಯಲ್ಲಿದೆ.
ಒಟ್ಟಿಗೆ ಬಾಳುವ ತೆರದಲಿ ಹರಸು ಎಂದು ಬೇಡಿದರು ಕುವೆಂಪು. ಕೂಡಿ ಬಾಳಿದರೆ ಸ್ವರ್ಗಸುಖವೆಂದರು ಹಿರಿಯರು. ಸಂತೆ, ಜಾತ್ರೆ, ಪರಿಷೆ ಇವೆಲ್ಲವೂ ಒಟ್ಟಿಗೆ ಬೆರೆತು ಬಾಳುವ ಪರಿಯನ್ನು ಕಲಿಸಿದವು. ಅವು ”ಜನರೆಲ್ಲ ಒಂದೇ ಶಿವ, ಎಲ್ಲಾ ನಿನ್ನಂತೆ ಶಿವ” ಎಂದು ಸಮಾನತೆಯನ್ನೂ, ಸಹಬಾಳ್ವೆಯನ್ನೂ ಸಾರಿದ ರಸದಾಣಗಳು. ಅಸಹನೀಯವಾದುವನ್ನು ಸಹನೀಯವಾಗಿಸಿ ನಿತ್ರಾಣ ಕಳೆವ ತಾಣಗಳು.
ಸಂತ ಶಿಶುನಾಳ ಶರೀಫರಿಗೆ ಬದುಕೇ ಹುಲುಗೂರ ಸಂತೆ. ಬೇಂದ್ರೆ ಅಜ್ಜನಿಗೆ ಅದು ಜನುಮದ ಜಾತ್ರೆ! ಅಧ್ಯಾತ್ಮದ ಕಣ್ಣಿಂದ ನೋಡುವವರಿಗೆ ಬದುಕು ಸಂತೆಯಂತೆ ಕ್ಷಣಿಕವಾದದ್ದು, ವ್ಯಾಪಾರ ಮುಗಿಸಿದ ಕೂಡಲೇ ಕರಗಿ ಹೋಗುವಂತಹುದು. ಜೀವನೋತ್ಸಾಹಿಗಳಿಗೆ ಸಂತೆ ಎಂಬುದು ಸಂತಸ, ಸಂಭ್ರಮ ಹಾಗೂ ಸಡಗರಗಳ ಮುಪ್ಪುರಿ.
ಬಯಲು ಆಲಯದೊಳಗೋ, ಆಲಯವು ಬಯಲಿನೊಳಗೋ ಎಂಬ ಜಿಜ್ಞಾಸೆಯನ್ನು ಬಲ್ಲವರಿಗಾಗಿ ಬದಿಗೆ ಇಡೋಣ. ಅರಿವು ಕಣ್ತೆರೆಯುತ್ತಿರುವ ನಮ್ಮಂತಹವರಿಗೆ ಬಯಲಿನಲ್ಲಿ ಸಂತೆ, ಸಂತೆಯಲ್ಲಿ ಬಯಲು ಎಂಬುದೇ ನಿತ್ಯ ಸತ್ಯ!
- ಕೆ. ರಾಜಕುಮಾರ್ – ಖ್ಯಾತ ಲೇಖಕರು, ಬೆಂಗಳೂರು.
