ಸರಿ… ಹೌದು…ಎನ್ನುವುದರಿಂದ ಸಮಸ್ಯೆಗಳು ಪರಿಹರಿಸುವುದಿಲ್ಲ. ಪ್ರೊ ರೂಪೇಶ್ ಪುತ್ತೂರು ಅವರು ಸಣ್ಣಕತೆಯ ಮೂಲಕ ಸಮಸ್ಯೆಗಳಿಗೆ ರಾಮಬಾಣ ಯಾವುದು ಎಂದು ಓದುಗರಿಗೆ ಅಭಿಪ್ರಾಯಕ್ಕೆ ಬಿಟ್ಟಿದ್ದಾರೆ. ಮುಂದೆ ಓದಿ…
ದುಗ್ಗಪ್ಪ ಮೇಸ್ತ್ರಿಯವರ ಜೊತೆ ನಾನು ಕನಿಷ್ಟ ಐದಾರು ಬಾರಿ ಕೆಲಸಕ್ಕೆ ಹೋಗಿದ್ದೆ. ಅವರಿಗೆ ಚಿಕ್ಕ ಚಿಕ್ಕ ಕೆಲಸಗಳು ಸಿಗುತ್ತಿತ್ತು. ಅಂದರೆ ಮನೆಯ ಅಡಿಪಾಯ ತೋಡುವುದು. ಹಳೇ ಮನೆಗೆ ಹೊಸಾ ಗೋಡೆ, ಅಡುಗೆ ಕೋಣೆ ವಿನೂತನತೆ,…. ಹೀಗೆ ಅಂಚರ್-ಪಂಚರ್ ಕೆಲಸ. ಕೂಲಿ ಮಾತ್ರ ತುಂಬಾ ಕಡೆಮೆ.
ಕೆಲಸ ಕೊಟ್ಟ ಮಾಲೀಕರು ಏನೇ ಹೇಳಿದರೂ, ದುಗ್ಗಪ್ಪ ಮೇಸ್ತ್ರಿ ಅಭಿಪ್ರಾಯ
“#ಹೌದೌದು…. ”
“ಸರಿ… ಸರಿ… ಸರಿ…”
” ಮತ್ತೆ ನೀವು ಹೇಳಿದ್ದು ಸಮಯೋಚಿತ…” ಎನ್ನುತ್ತಿದ್ದರು.

ಫೋಟೋ ಕೃಪೆ : economictimes.indiatimes
ಸಂಜೆ ಕೆಲಸ ಮುಗಿದು ಹೊರಟ ದಾರಿಯಲ್ಲಿ ಮೇಸ್ತ್ರಿಗೆ ” ಯಾಕೆ ಹಾಗೆ ನುಡಿದಿರಿ? ” ಅಂದ್ರೆ.
” ಅಯ್ಯೋ ಪರಮಾತ್ಮ, ನನಗೆ ಕೆಲಸ ಎಲ್ಲಾ ವರ್ಗದ ಜನ ಕೊಡುತ್ತಾರೆ. ಇವನೊಂದಿಗೆ ಸರಿ… ಹೌದು… ಸಮಯೋಚಿತ ಅಂದ್ರೆ, ಸಂಜೆ ಸ್ವಲ್ಪ ಕೂಲಿ ಚೌಕಾಸಿ ಮಾಡುವುದರಲ್ಲಿ , ಕೂಲಿ ಕೊಡುವುದರಲ್ಲಿ ಸಮಯ ಹಾಳು ಮಾಡದಿರುತ್ತಾರೆ.”
ಮತ್ತೆ ಹಲವು ವರುಷ ನನಗೆ ಅವರೊಂದಿಗೆ ಕೆಲಸ ಸಿಗಲಿಲ್ಲ. ಕೆಲ ವರುಷದ ನಂತರ, ಒಂದೇ ವರುಷ… ಕೆಲ ತಿಂಗಳ… ಅಂತರದಲ್ಲಿ ಎರಡು ಬಾರಿ ದುಗ್ಗಪ್ಪ ಮೇಸ್ತ್ರಿ ಜೊತೆ ಕೆಲಸಕ್ಕೆ ಹೋಗಬೇಕಾಗಿ ಬಂತು. ಒಂದು ಈ ತಿಂಗಳಾದರೆ ಮತ್ತೊಂದು ಮೂರು ತಿಂಗಳ ನಂತ್ರ ಎನ್ನಬಹುದು.
ಅಲ್ಲಿ ಎರಡೂ ಕಡೆ ಮಾಲೀಕರು ಮಾತನಾಡುತ್ತಿದ್ದಂತೆ ದುಗ್ಗಪ್ಪ ಮೇಸ್ತ್ರಿ ಕೈ ಸನ್ನೆ ಮಾಡಿ ತನಗೆ ಹಲ್ಲು ನೋವು ಎಂದು ತೋರಿ ಮೌನವಾದರು. ಆದರೆ ಬೆಳಿಗ್ಗೆ ನಮ್ಮನ್ನು ಕೆಲಸಕ್ಕೆ ಕರೆದೊಯ್ಯುವಾಗ, ಕೆಲಸಕ್ಕೆ ಹೋಗುವ ದಾರಿಯಲ್ಲಿ ಮೈಮರೆತು ಮಾತನಾಡುವಾಗ ಇದ್ದ ಅವರ ಮುಖ ಕೆಲಸದ ಪರಿಸರದಲ್ಲಿ ಬದಲಾಯಿತು. ಸಂಜೆ ಕೂಲಿ ಸಿಗದೆ ಹೊರಟು ದೂರದ ಬಸ್ ನಿಲ್ದಾಣ ತಲುಪಿದಾಗ
” ನೋಡಿ… ಆ ಮನೆ ಮಾಲೀಕ ಕೂಲಿ ಕೊಟ್ಟ ಮೇಲೆ ನಿಮಗೆ ನಿಮ್ಮ ಕೂಲಿ ಅದರಿಂದ ಕೊಡುತ್ತೇನೆ” ಎಂದರು.
ದುಗ್ಗಪ್ಪ #ಮೇಸ್ತ್ರಿಯವರು ಹಾಗೆಯೇ….
ಕೂಲಿಯನ್ನು ಮಾಲೀಕರು ಕೊಟ್ಟ ತಕ್ಷಣ ದಾರಿಯಲ್ಲಿ ಹಂಚುತ್ತಿದ್ದರು, ಇಲ್ಲವೇ ಮಾಲೀಕರು ಕೊಡದೆ ಇದ್ದರೆ ಮತ್ತೊಂದು ದಿನ, ಆ ಮಾಲೀಕರು ಕೊಟ್ಟ ತಕ್ಷಣ ಯಾರದಾದರೂ ಕೈಯಲ್ಲಿ ಕೊಟ್ಟು ಕಳುಹಿಸುತ್ತಿದ್ದರು, ಇಲ್ಲವೇ ಖುದ್ದಾಗಿ ಬಂದು, ನನ್ನ ಸೈಕಲ್ ರಿಪೇರಿ ಮಾಡುವ ಪುಟ್ಟಣ್ಣನ ಅಂಗಡಿಗೆ ಕೊಟ್ಟು ಹೋಗುತ್ತಿದ್ದರು ಅದು ಅವರ ವಾಡಿಕೆ.
ಹಾಂ… ಅಂದು ಆ ದಾರಿಯಲ್ಲಿ ಕೆಲಸ ಮುಗಿದು ಹೋಗುವಾಗ ತಪ್ಪದೆ ಕೇಳಿದೆ ” ಅಲ್ಲಾ ಮೇಸ್ತ್ರಿಯವರೇ …. ಈಗ ತಾನೆ ಕೆಲಸದ ಮಾಲೀಕರಿಗೆ ಹಲ್ಲು ನೋವು ಅಂತ ಹೇಳಿ, ಇಡೀ ಕೆಲಸ ಮಾಡಿ , ಕೆಲಸ ಮುಗಿದ ಮೇಲೆ ಕೂಲಿಯೂ ಸಿಗದೆ ನಮ್ಮತ್ರ ಇಷ್ಟು ಚೆನ್ನಾಗಿ ಮಾತಾಡ್ತೀರಲ್ಲಾ!!! ಏನಾಯ್ತು ಹಲ್ಲು ನೋವಿಗೆ??”.
” ಅಯ್ಯೋ ಪರಮಾತ್ಮ… ಹಿಂದೆಲ್ಲಾ ಮಾಲೀಕರ ಮಾತಿಗೆ ಸರಿ …ಹೌದು…ಸಮಯೋಚಿತ ಅನ್ನುತ್ತಿದ್ದೆ. ಇದರಿಂದ ನಾನು ಆ ಪಕ್ಷದ ಪರ, ಅವರ ಪರ, ಇವರ ಪರ ಎಂದು ತುಂಬಾ ಕಡೆ ಕೆಲಸ ಸಿಗದಾಯಿತು. ಕೆಲವು ಮಾಲೀಕರು ಕೂಲಿಗೆ ಸತಾಯಿಸಿದರು, ಕೊಡದಾದರು. ಅದಕ್ಕೆ ನನ್ನ ಮನೆಯೊಡತಿ ಹಲ್ಲು ನೋವು ಅಂತ ಸುಮ್ಮನೆ ಮೌನವಾಗಿ ಕೆಲಸಮಾಡಿ. ಕೂಲಿ ಹೇಗಾದರೂ ಪಡೆಯಿರಿ. ನೀವು ಸರಿ…ಹೌದು…ಸಮಯೋಚಿತ ಹೇಳೋದ್ರಿಂದ ನಿಮ್ಮ ಮನೆ ಹಾಳಾಗೋದು ಅಂದ್ಲು. ನಂತ್ರ ಎಲ್ಲಿ ಕೆಲಸ ಮಾಡುವಾಗ್ಲೂ ಹಲ್ಲು ನೋವು ಎಂದು ಹೇಳಿ ಕೆಲಸ ಮಾಡೋದು ಅಷ್ಟೇ. ನಾನು ನನ್ನ ಪರ ಆದ್ರಿಂದ ನೋಡು ಹೀಗಿದ್ದೇನೆ ಮಾರೆಯಾ… ಅಯ್ಯೋ ಪರಮಾತ್ಮಾ ಬಸ್ಸು ಬಂತು” ಎಂದು ನಕ್ಕರು.
ವಂದನೆಗಳೊಂದಿಗೆ..
ನಿಮ್ಮವ ನಲ್ಲ
*ರೂಪು*
- ಪ್ರೊ. ರೂಪೇಶ್ ಪುತ್ತೂರು (ರಾಸಾಯನ ಶಾಸ್ತ್ರ ವಿಭಾಗ, ಉಪನ್ಯಾಸಕರು, ಲೇಖಕರು)
