ಸವಣೂರಿನ ವಿಶ್ವದ ದೊಡ್ಡ ಹುಣಸೆ ಮರ – ಡಾ.ಪ್ರಕಾಶ ಬಾರ್ಕಿ



ಸವಣೂರಿನ “ದೊಡ್ಡ ಹುಣಸೆ ಮರ ದ ಕುರಿತು ಡಾ.ಪ್ರಕಾಶ ಬಾರ್ಕಿ ಅವರು ಬರೆದ ಲೇಖನವಿದು, ಈ ಗಿಡದ ವಿಶೇಷತೆ, ಔಷಧಿ ಗುಣಗಳು ಇತ್ಯಾದಿಯ ಬಗ್ಗೆ ಒಂದು ಸುದೀರ್ಘ ಮಾಹಿತಿಯನ್ನು ಓದುಗರೊಂದಿಗೆ ಹಂಚಿಕೊಂಡಿದ್ದಾರೆ.ಮುಂದೆ ಓದಿ…

ನನಗೆ ಸಮಯ ಸಿಕ್ಕರೆ ಸಾಕು ಹೆಗಲಿಗೆ ಬ್ಯಾಗೇರಿಸಿ ಹೊರಟು ಬಿಡುವ ಅಲೆಮಾರಿ ಖಯ್ಯಾಲಿ ರೋಚಕದ ಬದುಕು. ಇಲ್ಲವಾದರೆ ಪುಸ್ತಕದೊಳಗೆ ಹುದುಗಿ ಹೋಗುವ ಧ್ಯಾನಸ್ಥ ಜೀವನ. ಪುಸ್ತಕಗಳನ್ನ ಬದಿಗಿಟ್ಟು, ಈ ಸಾರೆ ಹೊರಟಿದ್ದು ಸವಣೂರಿಗೆ… ಬೃಹತ್ ಬಾವೊಬಾಬ್ ವೃಕ್ಷಗಳನ್ನು ಕೆದಕಲು.

#ಹುಣಸೆಯಲ್ಲಿ ವಿಶ್ವದ ಹಿರಿಯಣ್ಣ ದೊಡ್ಡ ಹುಣಸೆ ಮರ ಹಾವೇರಿ ಜಿಲ್ಲೆಯ ತಾಲೂಕುಗಳಲ್ಲಿ ಒಂದಾದ ಸವಣೂರು.

ಈ ಹಿಂದೆ ನವಾಬರಿಂದ ಹೆಚ್ಚು ಕಾಲ ಆಳ್ವಿಕೆಗೆ ಒಳಪಟ್ಟ ಪ್ರದೇಶ. ಈಗ ಹೆಚ್ಚು ಪ್ರಚಲಿತವಾಗಿದ್ದು “ದೊಡ್ಡ ಹುಣಸೆ ಮರಗಳಿಂದ”.

ಅದೂ ಬಿಟ್ಟರೆ 75 ವರ್ಷ ವಯಸ್ಸಿನ ಸಿಹಿ- ಖಾರ ಮಿಶ್ರಿತ, ಕುರುಕಲುತನದಿಂದ ಮೈದಳೆದ ಖಾರಾ (ದಾಣಿ) “ಶಿವಲಾಲ ಸವಣೂರ ಖಾರಾ”, ಅಷ್ಟೇ ವಯಸ್ಸಿನ ಸಿಂಧೂರ ಬೀಡಿಯ ತವರುಮನೆಯಿಂದ ಮತ್ತು ಊರ ಸುತ್ತಲೂ ಆಗಲೊ ಈಗಲೋ ಧರಶಾಹಿಯಾಗುವ ತವಕದಲ್ಲಿರುವ ನವಾಬರ ಪರಂಪರೆಯ ಕೋಟೆ, ಕಟ್ಟಡಗಳಿಂದ.

ಕಲ್ಮಠದ ಆವರಣಕ್ಕೆ ಧಾವಿಸಿದಾಗ…

ಆಲದ ಮರ, ಹುಣಸೆ ಮರ, ಮಾವಿನ ಮರ, ಅಶ್ವಥ ವೃಕ್ಷಗಳೆ ದೊಡ್ಡವು ಎಂದುಕೊಂಡವನಿಗೆ ನಿಬ್ಬೆರಗ್ಗೊಳಿಸುವ “ದಪ್ಪ ಟೊಂಕದ, ವಿಶಾಲ ಮರಗಳು” ಗಜದಂತೆ ಎದುರಾದವು. ಅನೇಕ ಶತಮಾನಗಳಿಂದ ತಪಗೈಯುತ್ತಿರುವ ಹಠಯೋಗಿಯಂತೆ ಗಜ ಗಾತ್ರ ಬೆಳದು ನಿಂತಿರುವ ಮೂರು “ಬೃಹತ್ ಹುಣಸೆ ಮರ”ಗಳು, ನಿಸರ್ಗದ ಭವ್ಯ ಪರಂಪರೆಗೆ ಸಾಕ್ಷಿಯಂತಿವೆ. ಮೊದಲ ನೋಟಕ್ಕೆ ಬೆರಗು ಹುಟ್ಟಿಸುವ ಬೃಹತ್ ವೃಕ್ಷಗಳು, ಬೊಡ್ಡೆಯ ಸುತ್ತಳತೆಯಲ್ಲಿ ಕಣ್ಣಳತೆಗೆ ನಿಲುಕದೆ ವಿಸ್ತಾರವಾಗಿವೆ. ನೋಡುಗರನ್ನ ಮೂಕವಿಸ್ಮಿತರನ್ನಾಗಿ ಮಾಡುತ್ತವೆ. ಇದು ನಿಸರ್ಗದ ವೈಚಿತ್ರ್ಯವೆ ಸರಿ.
ಸುಮಾರು 2000 ಹಳೆಯದಾದ ಮೂರು ದೊಡ್ಡ ಹುಣಸೆ ಮರಗಳು ಸವಣೂರು ನಗರದ ಕಲ್ಮಠ ಆವರಣದಲ್ಲಿ ಆಳ ಧ್ಯಾನದಲ್ಲಿರುವಂತೆ ಭಾಸವಾಗುತ್ತವೆ.

ಸದಾ ಪರಿಸರ ಪ್ರೇಮಿಗಳನ್ನು, ಪ್ರವಾಸಿಗರನ್ನು, ಆಧ್ಯಾತ್ಮ ಜೀವಿಗಳನ್ನು ತಮ್ಮ ಭವ್ಯತೆಯಿಂದ ಸೆಳೆಯುತ್ತಿವೆ.



ದೊಡ್ಡ ಹುಣಸೆ ಮರಗಳು “(Baobab trees) ಭೂಮಿಯ ಮೇಲಿನ ಅತಿ ಪುರಾತನ ವೃಕ್ಷ ಸಂತತಿ ಪಟ್ಟಿ ಸೇರಿವೆ. 2000 ವರ್ಷಗಳಷ್ಟು ಹಳೆಯದಾದ ಇವುಗಳ ಜೀವಂತಿಕೆ ಇತಿಹಾಸದ ಕೊಂಡಿಯಂತೆ ಭಾಸವಾಗುತ್ತೆ. ದೊಡ್ಡ ಹುಣಸೆ ಮರಗಳೆಂದು ಸಾಮಾನ್ಯವಾಗಿ ಕರೆಯಲಾಗುವ ಈ ಮರ “ಬಾಂಬುಕೇಶಯಾ” (Bombucacia) ಕುಟುಂಬಕ್ಕೆ ಸೇರಿದ್ದು, ವೈಜ್ಞಾನಿಕ ಹೆಸರು “ಅಡನ್ಸೊನಿಯಾ ಡಿಜಿಟಾಟಾ” (Adansonia digitata). ಕನ್ನಡದಲ್ಲಿ ದೊಡ್ಡ ಹುಣಸೆ, ಆನೆ ಹುಣಸೆ, ಮಗಿ ಮಾವು, ಬ್ರಹ್ಮಾಮ್ಲಿಕ್ ಮರ ಎಂದು ಕರೆಯುವರು. ಸಂಸ್ಕೃತದಲ್ಲಿ “ಚಿತ್ರಾಲಾ” ಎಂದು ನಾಮಕರಣ ಮಾಡಲಾಗಿದೆ.

ಸಾಮಾನ್ಯವಾಗಿ ಉಷ್ಣ ಆಫ್ರಿಕಾ ಖಂಡದಲ್ಲಿ ಕಂಡುಬರುವ ದೊಡ್ಡ ಹುಣಸೆ ಮರಗಳು (ಬಾವೋಬಾಬ್ ವೃಕ್ಷ), ಬೊಡ್ಡೆ ಗಾತ್ರ, ವಿಸ್ತೀರ್ಣ ಬೃಹತ್ತಾಗಿರುತ್ತವೆ ಏಕೆಂದರೆ ಮರವು ತನ್ನ ಬೊಡ್ಡೆಯಲ್ಲಿ ಯಥೇಚ್ಛ ನೀರು ಸಂಗ್ರಹಿಸಿಟ್ಟುಕೊಂಡಿರುತ್ತೆ. ಬೇಸಿಗೆಯಲ್ಲಿ ತಾನು ಜೀವಂತವಿರಲು ಎಲೆ ಉದುರಿಸಿ ಕೊಂಡು, ಬದುಕಲು ಬೇಕಾದಷ್ಟು ನೀರನ್ನು ಸಂಗ್ರಹಿಸಿಡುವ ಪರಿ ಇದು. ಈ ಮರಗಳು ಭಾರತದಲ್ಲಿ ಬೆರಳೆಣಿಕೆಯಷ್ಟಿವೆ.

ಅವು ಕರ್ನಾಟಕ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ್ ರಾಜ್ಯದಲ್ಲಿ. ಸವಣೂರಿನ ಬೃಹತ್ ಬಂಡೆಗಳಂತಿರುವ “ದೊಡ್ಡ ಹುಣಸೆ ಮರಗಳು” ತ್ರಿಭುಜಾಕಾರದಲ್ಲಿ ಮೂರು ಬೆಳೆದು ಎದೆಯುಬ್ಬಿಸಿ ನಿಂತಿವೆ. ತಳದಲ್ಲಿ ಗಾಜಿನ ಬಾಟಲಿಯಂತೆ ವಿಸ್ತಾರದಲ್ಲಿ ದೊಡ್ಡದಾಗಿದ್ದು, ಕ್ರಮೇಣ ಮೇಲೆ ಹೋದಂತೆ ಮೊನಚಾಗಿ, ಹಲವಾರು ಟೊಂಗೆಗಳಾಗಿ ಚಾಚಿಕೊಂಡು ವಿಶ್ರಮಿಸಿವೆ. ಮರಗಳ ತುಂಬ ಜೋತಾಡುವ ಮೈದುಂಬಿದ ಫಲಗಳು ಒಂದಡೆಯಾದರೆ, ಇನ್ನೊಂದೆಡೆ ನಿಶಾಚರಿ ದೊಡ್ಡ ಬಾವಲಿಗಳು. ಅವುಗಳ ಚಿತ್ಕಾರ ಸಾಮಾನ್ಯ. ವೃಕ್ಷಗಳು ಸೊಂಟದ ಸುತ್ತಳತೆಯಲ್ಲಿ ಒಂದಕ್ಕೊಂದು ಪೈಪೋಟಿಗೆ ಬಿದ್ದಂತದಿದ್ದು, ಎತ್ತರದಲ್ಲಿ ಸಮಾನತೆ ಮೆರೆಯುತ್ತವೆ.

ಒಂದನೇ ವೃಕ್ಷದ ವಿಸ್ತಿರ್ಣ: 15.70 ಮೀಟರ್ ಸುತ್ತಳತೆ, 18.50 ಮೀಟರ್ ಎತ್ತರವಾಗಿದೆ.

ಎರಡನೆ ವೃಕ್ಷ: 12.92 ಮೀಟರ್ ಸುತ್ತಳತೆ, 16.40 ಮೀಟರ್ ಎತ್ತರವಾಗಿದೆ.

ಮೂರನೇ ವೃಕ್ಷ: 12.63 ಮೀಟರ್ ಸುತ್ತಳತೆ, 17.50 ಮೀಟರ್ ಎತ್ತರವಾಗಿದೆ.

ಆಫ್ರಿಕಾ ವೃಕ್ಷಗಳು ಇಲ್ಲಿಗೆ ಬಂದ ದಾರಿ :

ಆಫ್ರಿಕಾ ತವರು ಮನೆಯ “#ದೊಡ್ಡ_ಹುಣಸೆ_ಮರಗಳು” ಅದು ಇಲ್ಲಿಗೆ ಹೇಗೆ ಧಾವಿಸಿ ಬಂದು ಧ್ಯಾನಸ್ಥವಾಗಿವೆ ಎನ್ನುವ ಕುತೂಹಲಕ್ಕೆ ಹಲವು ಸಮಜಾಯಿಷಿಗಳಿವೆ. ಆದರೆ ನಿಖರ ದಾಖಲೆಗಳಿಲ್ಲ. ಪೌರಾಣಿಕವಾಗಿ, ಈ ಮರಗಳನ್ನು ಸ್ವತಃ ಶ್ರೀ ಕೃಷ್ಣನೆ ಆಫ್ರಿಕಾದಿಂದ ಭಾರತಕ್ಕೆ ತಂದನೆಂಬ ಉಲ್ಲೇಖವಿದೆಯಂತೆ.

ಇನ್ನೊಂದು ಮೂಲದ ಪ್ರಕಾರ, ಈ ಮರಗಳನ್ನು ಹಠಯೋಗಿ ಗೋರಖನಾಥರು ಪ್ರಪಂಚ ಪರ್ಯಟನೆಯ ವೇಳೆ #ದಕ್ಷಿಣ_ಆಫ್ರಿಕಾಕ್ಕೆ ಭೇಟಿ ಕೊಟ್ಟಿದ್ದರು. ಅಲ್ಲಿಂದ ಈ ಹುಣಸೆ ಸಸಿಯನ್ನು ತಂದು ಕಲ್ಮಠದಲ್ಲಿ ಕಠಿಣ ತಪಸ್ಸನ್ನಾಚರಿಸುತ್ತಿದ್ದ ಸಂದರ್ಭದಲ್ಲಿ ನೆಟ್ಟಿರುವ ಕಾರಣದಿಂದ ಈ ಮರಕ್ಕೆ ಗೋರಖನಾಥ ವೃಕ್ಷಗಳೆಂಬ ಹೆಸರೂ ಬಂದಿದೆ ಎನ್ನುತ್ತಾರೆ.

ಈ ಮರದ ಬುಡದಲ್ಲಿಟ್ಟ ಯಾವ ಆಹಾರ ಪದಾರ್ಥಗಳು ಕೆಡವುದಿಲ್ಲ, ಶವಗಳೂ ಕೊಳೆಯುವುದಿಲ್ಲವೆಂಬ ಮಾತಿದೆ. ಅತೀತ ದಿವ್ಯ ಶಕ್ತಿಯ ಈ ಮರಗಳ ತೊಗಟೆ, ಕಾಯಿ, ಎಲೆ ಔಷಧಿಯ ಗುಣ ಹೊಂದಿವೆ. ಇಲ್ಲಿನ ಮರಗಳು ಸವಣೂರಿನ “ಕಲ್ಪವೃಕ್ಷ” ಅಂತಲೆ ಪ್ರಸಿದ್ಧಿ ಪಡೆದಿವೆ. ಮರದ ಕೆಳಗೆ ಶಾಂತವಾಗಿ ತದೇಕಚಿತ್ತದಿಂದ ಕೂತು ಮನದಾಳದ ಕೋರಿಕೆಗಳನ್ನು ಹೇಳಿಕೊಂಡರೆ ಎಲ್ಲವೂ ಈಡೇರುತ್ತವೆ, ಇವು ದಿವ್ಯ ದೈವಿ ವೃಕ್ಷಗಳು ಎಂಬುದು ಭಕ್ತರ ನಂಬಿಕೆ.

ವೃಕ್ಷದ ಫಲಗಳು “#ತೆಂಗಿನ_ಕಾಯಿ“ಯ ಗಾತ್ರದಲ್ಲಿರುತ್ತವೆ. ರುಚಿಯಲ್ಲಿ ಸಿಹಿ- ಹುಳಿಯಾಗಿದ್ದು “#ದೊಡ್ಡ_ಹುಣಸೆ” ಅಂತಲೆ ಪರಿಚಿತ. ಕಾಯಿಯ ಮೇಲ್ಭಾಗ ಮುಟ್ಟಿದರೆ “ಕುತನಿ” ಬಟ್ಟೆ (Velvet cloth) ಮೇಲೆ ಕೈಯಾಡಿಸಿದಂತೆ ಭಾಸವಾಗತ್ತೆ.

  • ಮರದ ತೊಗಟೆ ಖಡ್ಗಮೃಗದ ಚರ್ಮದಂತೆ ಮಡಿಕೆಯಾಗಿ ಒರಟಾಗಿದೆ.
  • ವೃಕ್ಷದ ಫಲಗಳನ್ನು ಹಲವು ಕಾಯಿಲೆಗಳಿಗೆ ಔಷಧಿಯಾಗಿ ಉಪಯೋಗಿಸುತ್ತಾರೆ.
  • ಔಷಧಿ ಮತ್ತು ದೈವಿ ಶಕ್ತಿ ಮೈಗೂಡಿಸಿಕೊಂಡಿರುವ ಫಲಗಳೆಂದು ಹಲವರ ಮನೆಯಲ್ಲಿ ಪ್ರತಿದಿನ ಪೂಜೆಗೊಳ್ಳುತ್ತಿವೆ.
  • ಕಲ್ಮಠದ ಗದ್ದುಗೆಯಲ್ಲಿ ಈಗಲೂ 30 ವರ್ಷಗಳಷ್ಟು ಹಳೆಯದಾದ ದೊಡ್ಡ ಹುಣಸೆ ಫಲಗಳು ಪೂಜೆಗೊಳ್ಳುತ್ತಿವೆ.

ಔಷಧಿಯ ಆಗರ ಫಲಗಳು :

#ದೊಡ್ಡ_ಹುಣಸೆ_ಫಲ ಕೊಬ್ಬು(Fat), ಪೊಟ್ಯಾಷಿಯಂ(Potassium), ಕಾರ್ಬೋಹೈಡ್ರೇಟ್ (Carbohydrate),ನಾರು(Fiber), ಪ್ರೋಟಿನ್ (Protein), ಹೇರಳ ವಿಟಮಿನ್ ಸಿ(Vitamin C)
ಕ್ಯಾಲ್ಸಿಯಂ (Calcium), ಕಬ್ಬಿಣಾಂಶ (Iron ), ಮ್ಯಾಗ್ನಿಷಿಯಂ (Magnesium), ಫಾಸ್ಪರಸ್(Phosphorous) ಪೋಷಕಾಂಶಗಳನ್ನ ಹೊಂದಿದ್ದು, ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸಲು, ಮಧುಮೇಹ, ತೀವ್ರ ರಕ್ತದೊತ್ತಡ, ಕೆಮ್ಮು, ದಮ್ಮು, ಚರ್ಮದ ಕಾಯಿಲೆಗಳು, ಬಂಜೆತನ ಚಿಕಿತ್ಸೆಗೆ ಔಷಧವಾಗಿ ಕೆಲವರು ಬಳಸುತ್ತಾರೆ.

ನಮ್ಮ ನಾಡಿನ ಚರಿತ್ರೆಯಲ್ಲಿ ಬೃಹದಾಕಾರವಾಗಿ ದಾಖಲಾಗಿರುವ “#ದೊಡ್ಡ_ಹುಣಸೆ_ಮರ” ಕಣ್ತುಂಬಿಕೊಳ್ಳಲು,

ಸ್ಥಳ: ಉತ್ತರ ಕರ್ನಾಟಕದ ಹಾವೇರಿ ಜಿಲ್ಲೆಯಲ್ಲಿರುವ ಸವಣೂರು ಪಟ್ಟಣವು ಹಾವೇರಿ ನಗರಕೇಂದ್ರದಿಂದ 32 ಕಿ.ಮೀ ಹಾಗೂ ಹುಬ್ಬಳ್ಳಿ ನಗರದಿಂದ 65 ಕಿ.ಮೀ ಗಳಷ್ಟು ದೂರದಲ್ಲಿದೆ. ತೆರಳಲು ಬಸ್ಸಿನ ಸೌಲಭ್ಯವುಂಟು.


  • ಡಾ.ಪ್ರಕಾಶ ಬಾರ್ಕಿ (ವೈದ್ಯರು, ವೈದ್ಯಕೀಯ ಬರಹಗಾರರು), ಕಾಗಿನೆಲೆ. 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW