ಕಾದಂಬರಿಕಾರರಾದ ಕೆ ಸತ್ಯನಾರಾಯಣ ಅವರ ಸಾವಿನ ದಶಾವತಾರಗಳು ಕಾದಂಬರಿಯ ಕುರಿತು ಡಾ.ಗಿರಿಜಾ ಶಾಸ್ತ್ರಿ ಅವರು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ…
ಪುಸ್ತಕ : ಸಾವಿನ ದಶಾವತಾರಗಳು
ಲೇಖಕರು : ಕೆ ಸತ್ಯನಾರಾಯಣ
ಪ್ರಕಾರ : ಕಾದಂಬರಿ
ನಿಮ್ಮ “ ಸಾವಿನ ದಶಾವತಾರಗಳು” ಕಾದಂಬರಿಯನ್ನು ಮತ್ತೊಂದು ಸಲ ಅಲ್ಲಲ್ಲ್ಲಿ ಓದಿದೆ. ಬಹಳ ಆಶ್ಚರ್ಯದ ವಿಷಯವೆಂದರೆ ನಿಮ್ಮ ಪ್ರಾರಂಭದ ಬರಹಗಳಿಂದಲೂ ನೀವು ಕಾಯ್ದುಕೊಂಡು ಬಂದಿರುವ ನಿಮ್ಮ ಹಾಸ್ಯಪ್ರಜ್ಞೆ ಮತ್ತು ಲೋಕವ್ಯಾಪಾರಗಳನ್ನು ಒಂದು ವಸ್ತುನಿಷ್ಠ ದೂರದಲ್ಲಿಟ್ಟು ನೋಡುವ ಬಗೆ. ಹೀಗೆ ನೋಡುವಾಗ ಯಾವುದರ ವಕಾಲತ್ತನ್ನೂ ವಹಿಸದೆ ಬರೀ ನೋಡುವುದಷ್ಟೇ ಪರಮ ಕಾಯಕ ಎಂಬ ಹಾಗೆ ಚಿತ್ರಿಸುವುದು ಒಂದು spiritual ಆದ ಕ್ರಿಯೆ. ಈ ಸಾಕ್ಷಿಪ್ರಜ್ಞೆ ನನಗೆ ಉಪನಿಷತ್ತಿನಲ್ಲಿ ಬರುವ ಬರಿದೇ ನೋಡುವ ಹಕ್ಕಿಯ ನೆನಪನ್ನು ತರಿಸುತ್ತಿದೆ.
ಸಾವಿನ ದಶಾವತಾರಗಳಲ್ಲಿಯೂ ನೀವು ಮಾಡಿರುವ ಕೆಲಸ ಇದೇ ಎಂಬುದು ನನ್ನ ಮಿತಿಯ ತಿಳುವಳಿಕೆ. ಸಾವಿನ ಬಗೆಗೆ ಜನರಿಗೆ ಇರುವ ಹಿಪಾಕ್ರಸಿಯನ್ನು ನೀವು ಹೇಳುತ್ತಿದ್ದೀರಿ. ಸಾವಿನ ದಶಾವತಾರಗಳೆಂದು ಕರೆದಿದ್ದರೂ ಇದು ಸಾವಿನ ಬಗೆಗೆ ನಮಗಿರುವ ನಮ್ಮ ಹಿಪಾಕ್ರಸಿಯ ದಶಾವತಾರಗೆಳೆಂದೇ ನಾನು ಗ್ರಹಿಸಿದ್ದೀನಿ.

ಸಾವೆಂದರೆ ಬದುಕೇ. ಸಾವಿನ ಸಂದರ್ಭದಲ್ಲಿ ಸೈಟಿನ ಬೆಲೆ ಎಷ್ಟಿರಬಹುದೆಂದು ಲೆಕ್ಕ ಹಾಕುವುದು, ಮಧ್ಯ ವಯಸ್ಕ ಮಹಿಳೆಯರ ರವಿಕೆಯ ತೋಳಿನ ಮೇಲೆ ಕಣ್ಣುಹಾಯಿಸುವುದು ಇತ್ಯಾದಿ ವಿವರಗಳು ಸಾವಿನ ಭಯವನ್ನೋ , ಬದುಕಿನ ಆಸೆಯನ್ನೋ ವ್ಯಕ್ತಪಡಿಸುತ್ತದೆ. ನಿರೂಪಕ ಅನುಪಲ್ಲವಿಯನ್ನು ರಮಿಸುವ ಫ್ಯಾಂಟಸೀ ಕೂಡ ಸಾವಿಗೂ ಕಾಮಕ್ಕೂ ಇರುವ ತೀವ್ರವಾದ ಸಂಬಂಧವನ್ನು ಎತ್ತಿಹಿಡಿಯುತ್ತದೆ. ಸಾವಿನ ತೀವ್ರ ಭಯವನ್ನು ಕಾಮದ ಮೂಲಕ ಗೆಲ್ಲುವ ಬಗೆ ಇರಬಹುದೇ? ಹೀಗೆ ಅನೇಕ ಫ್ಯಾಂಟಸಿಗಳಿಂದ ತುಂಬಿದ ನಿಮ್ಮ ಕೃತಿ ನಮ್ಮ ಸಾವಿನ ಬಗ್ಗೆ ನಾವೇ ಕಟ್ಟಿಕೊಂಡ ಫ್ಯಾಂಟಸಿಯನ್ನೂ ಬಯಲಾಗಿಸುತ್ತದೆ. ನಿರೂಪಕ ಅವನದೇ ಹೆಸರಿನ ವ್ಯಕ್ತಿ ಸತ್ತಾಗ ಚಡಪಡಿಸುವ ರೀತಿ ಕೂಡ ಇಂತಹ ಫ್ಯಾಂಟಸಿಗೇ ಸಂಬಂಧಿಸಿದುದಾಗಿದೆ. ಇದು ಕೆ. ಎಸ್.ನ ಅವರ ತೆರೆದ ಬಾಗಿಲು ಕವಿತೆಯನ್ನು ನೆನಪಿಗೆ ತರುತ್ತದೆ.

ಮಗುವೊಂದನ್ನು ಕಳೆದುಕೊಂಡ ತಂದೆ ತಾಯಿಯರ ರೋದನದ ಚಿತ್ರಣ ಬಹಳ ಮಾರ್ಮಿಕವಾಗಿದೆ ಎನ್ನುವುದಕ್ಕಿಂತಲೂ ನಿರೂಪಕ ಅದನ್ನು ಒಂದು ಸಿನಿಮಾ ನೋಡುವಂತೆ ನೋಡುತ್ತಿರುವ ವ್ಯಂಗ್ಯವೇ ಮೇಲೆದ್ದು ಕಾಣುತ್ತದೆ. ನಿಜವಾಗಿ ಹೇಳಬೇಕೆಂದರೆ ಅಂತ್ಯಕ್ರಿಯಗೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡುವುದು ನಿರೂಪಕನಿಗೆ ಒಂದು “ಉದ್ಯಮ”. ಇದನ್ನು ಯಾಂತ್ರಿಕವಾಗಿ ನಡೆಸುತ್ತಾನೆ. ಇಲ್ಲಿ ಸಾವಿನ ಬಗ್ಗೆ ಯಾವುದೇ ವಿಷಾದಗಳಿಲ್ಲ. ಅಪರಕರ್ಮದಲ್ಲಿ ಪಾರಂಗತನಾದ ಇನ್ನೊಬ್ಬ ವ್ಯಕ್ತಿ ಉದ್ಯಮ ಕುಂಠಿತವಾಗಿದೆ ಅದನ್ನು ಕುದುರಿಸಿಕೊಡು ಎನ್ನುವಂತೆ ನಿರೂಪಕನ ಸಹಾಯಕೇಳುವುದು ಇದರಿಂದ ವ್ಯಕ್ತವಾಗುತ್ತದೆ.
ಇಲ್ಲಿ ಬರುವ ಅಲಾಲ್ಟೋಪಿ, ಕಾಕಪುಡಿ ಚಿಕ್ಕಪ್ಪನ ಪಾತ್ರ ಮಾತ್ರ ಅದ್ಭುತ. ಇಂತಹ ವ್ಯಕ್ತಿ ಒಬ್ಬ ಜ್ಞಾನಿಯಾಗಿ ಬೆಳೆಯುತ್ತಾನೆ. ಈ ಎಲ್ಲಾ ಹಿಪಾಕ್ರಸಿಗೆ ಉತ್ತರವೋ ಎಂಬಂತೆ ನಿರೂಪಕನ ಅವರ ಕೈಲಿ “ನಾಲ್ಕು ಜನರಿಗೆ ಉಪಕಾರವಾಗುವಂತೆ ಬದುಕುವ” ಅರಿವನ್ನು ಸಾವು ಉಂಟುಮಾಡಬೇಕು ಎಂಬ ಪರಮ ಸತ್ಯವನ್ನು ಹೇಳಿಸುತ್ತೀರಿ. ‘ಸಾವು’ ಕೇವಲ ಮಾಹಿತಿಯಾಗಿ, ಮೇಲ್ಪದರದ ದ್ರವ್ಯವಾಗಿ ಸಿಗದೇ ನಮ್ಮ ಅನುಭವದ ಭಾಗವಾಗಿ ಆದಾಗ ಮಾತ್ರ ಈ ಅರಿವು ಉಂಟಾಗುವುದೆಂಬ ಸಂಗತಿ “ಕಲ್ಲುಂಡೆ (ಕಲ್ಲುಸಕ್ಕರೆ) ಕರಗಿತು ನಿಜ, ಸಿಹಿ ಕೂಡ ಲೀನವಾಗಬೇಕಲ್ಲ?” ಎಂಬ ಚಿಕ್ಕಪ್ಪ ನಾರಣಪ್ಪನ ಮಾತುಗಳಿಂದ ಸ್ಪಷ್ಟವಾಗುತ್ತದೆ. ಇದನ್ನು ಬರೆಯುವಾಗ ನೀವು ತೋರುವ ಎಚ್ಚರ ಮತ್ತು ತನ್ಮಯತೆ ಯಾರಿಗಾದರೂ ಬೆರಗು ಹುಟ್ಟಿಸುತ್ತದೆ.
- ಡಾ.ಗಿರಿಜಾ ಶಾಸ್ತ್ರಿ
