‘ಅಪ್ಪ’ ಕವನ – ನಾಗರಾಜ ಜಿ. ಎನ್. ಬಾಡ

ಸೋಲನ್ನು ಸೋಲಿಸುತ ಕಷ್ಟ ನಷ್ಟವ ದಾಟಿದೆ ನೀನು, ‘ಅಪ್ಪ’…ಕವಿ ನಾಗರಾಜ ಜಿ. ಎನ್.ಬಾಡ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನವನ್ನು ತಪ್ಪದೆ ಮುಂದೆ ಓದಿ…

ಅಪ್ಪ ಬದುಕುವುದು ಹೇಗೆಂದು
ಕಲಿಸಿ ಕೊಟ್ಟಿರುವೆ ನೀನು
ಕಷ್ಟದ ದಾರಿಯಲಿ ಸಾಗಿ
ಮುನ್ನುಗ್ಗುವುದ ಹೇಗೆಂದು
ತೋರಿಸಿ ಕೊಟ್ಟಿದ್ದೇ ನೀನು

ಕಲ್ಲು ಮುಳ್ಳಿನ ದಾರಿಯಲಿ
ಕೈಹಿಡಿದು ಮುನ್ನಡೆಸಿದೆ ನೀನು
ವೈಫಲ್ಯಗಳನ್ನೂ ಮೀರಿ ನಿಲ್ಲುವ
ಎದೆಗಾರಿಕೆಯ ತೋರಿದೆ ನೀನು

ಸೋಲನ್ನು ಸೋಲಿಸುತ
ಕಷ್ಟ ನಷ್ಟವ ದಾಟಿದೆ ನೀನು
ಸೋಲು ಗೆಲುವನ್ನೂ ಮೀರಿ
ಬದುಕುವುದು ಕಲಿಸಿದೆ ನೀನು

ಸತ್ಯ ಪ್ರಮಾಣಿಕತೆ ನಿನ್ನ ಹೆಗ್ಗುರುತು
ಬಡತನಕ್ಕೆ ಜಗ್ಗಲಿಲ್ಲ ನಿನ್ನ ಮನಸ್ಸು
ಬೆವರ ಸುರಿಸುತ್ತ ದುಡಿದೆ ಹಗಲಿರುಳು
ಕಷ್ಟಗಳಲ್ಲಿಯೇ ಕಳೆಯಿತು ನಿನ್ನ ವಯಸ್ಸು

ಕಷ್ಟ ಎಷ್ಟಾದರೂ ಯಾರ ಬಗ್ಗೆಯೂ
ಕಹಿ ಭಾವನೆಗಳನ್ನು ತೋರದೆಯೆ
ಯಾರಿಗೂ ಕೇಡನ್ನು ಬಯಸದೆಯೇ
ಎಲ್ಲರನ್ನೂ ಸದಾ ಪ್ರೀತಿಸಿ ಗೌರವಿಸಿ
ಆದರದಿಂದಲೇ ನೋಡಿದೆ ನೀನು

ಬಾಯಿಬಿಟ್ಟು ಏನನ್ನೂ ಹೇಳದೆಯೇ
ನಿನ್ನ ಬದುಕಿನ ರೀತಿನೀತಿಗಳಲ್ಲೇ
ಎಲ್ಲವನ್ನೂ ಹೇಳಿದೆ ನೀನು
ನಿಮ್ಮ ಸರಳ ವಿರಳ ನಡೆ ನುಡಿಗಳೇ
ನಮ್ಮ ಬದುಕಿಗೆ ಎಂದೆಂದೂ ದಾರಿದೀಪ

ನಿಮಗಿಂತ ಅತ್ಯುತ್ತಮ ಗುರು ಮಾರ್ಗದರ್ಶಿ
ನಮಗೆ ಬೇರೆ ಯಾರಾದರೂ ಸಿಗುವರೇನು
ನಿಮ್ಮ ಪ್ರೀತಿಯ ಆಶೀರ್ವಾದವೊಂದೇ
ನಮಗೆ ಜೀವನಪೂರ್ತಿ ನೆರಳಂತೆ ಕಾಯುವುದು
ಬಯಸುವುದಿಲ್ಲ ನಾವು ಮತ್ತೆ ಬೇರೆ ಇನ್ನೇನು


  • ನಾಗರಾಜ ಜಿ. ಎನ್. ಬಾಡ – ಕುಮಟ, ಉತ್ತರ ಕನ್ನಡ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading