ಹನಿಗವನಗಳು

ಸಾಹಿತ್ಯಲೋಕದಲ್ಲಿ ಅತ್ಯಂತ ಕ್ರಿಯಾಶೀಲರಾಗಿರುವ ಲೇಖಕಿ ಸವಿತಾ ಪ್ರಭಾಕರ್ ಅವರು ಸಾಕಷ್ಟು ಕವಿತೆ ಹಾಗು ಕತೆಗಳನ್ನು ಬರೆದಿದ್ದಾರೆ. ಅವರ ಸಾಹಿತ್ಯ ಸೇವೆಗೆ ಸಾಕಷ್ಟು ಪ್ರಶಸ್ತಿ, ಗೌರವಗಳು ಸಂದಿವೆ. ಅವರು ಆಕೃತಿಕನ್ನಡಕ್ಕೆ ಬರೆದ ಮೊದಲ ಕವಿತೆಯಿದು. ಅವರಿಗೆ ಆಕೃತಿಕನ್ನಡ ತುಂಬು ಹೃದಯದಿಂದ ಸ್ವಾಗತಿಸುತ್ತಾ ಅವರ ರಚನೆಯ ಹನಿಗವನಗಳನ್ನು ಪ್ರಕಟಿಸುತ್ತಿದೆ, ತಪ್ಪದೆ ಮುಂದೆ ಓದಿ…

ಪರಿಚಯ

ಮೈಸೂರಿನ ‘ಜಯವರ್ಧನ ಬಾಲ ಸಂಸ್ಕಾರ ಕೇಂದ್ರ’ದ ಸಂಸ್ಥಾಪಕಿ ಶ್ರೀಮತಿ ಸವಿತಾ ಪ್ರಭಾಕರ್ ಅವರು ಸಾಹಿತ್ಯ, ಸಂಗೀತ ಮತ್ತು ಸಮಾಜಸೇವೆಯಲ್ಲಿ ಆಸಕ್ತಿ ಹೊಂದಿದ್ದಾರೆ. ಇವರ 23 ಕೃತಿಗಳು ಬಿಡುಗಡೆಯಾಗಿವೆ. ಇದಲ್ಲದೆ, 10 ಸಂಪಾದಿತ, ಸಹ ಸಂಪಾದಿತ ಕೃತಿಗಳು (ಸ್ನೇಹ ಬಳಗ, ಮೈಸೂರು ಇವರ ವತಿಯಿಂದ) ಪ್ರಕಟವಾಗಿವೆ.

ಹಲವು ಲೇಖನಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಸಾವಿತ್ರಿ ಜ್ಯೋತಿ ಬಾಪುಲೆ ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದಿಂದ ಕಾಕೋಳು ಸರೋಜಮ್ಮ ಕಾದಂಬರಿ ಬಹುಮಾನ, ಸವಿಗನ್ನಡ ಸಾಹಿತ್ಯ ಪ್ರಶಸ್ತಿ, ಕನ್ನಡಿಗರ ಕೂಟ ಚೆನ್ನೈ ಅವರಿಂದ ಹಾಸ್ಯ ಲೇಖನ ಮತ್ತು ಹಾಸ್ಯ ಚುಟುಕುಗಳಿಗೆ ಬಹುಮಾನ ಸೇರಿದಂತೆ ಹಲವು ಸಂಸ್ಥೆಗಳಿಂದ ಪ್ರಶಸ್ತಿ ಮತ್ತು ಸನ್ಮಾನಗಳು ಇವರಿಗೆ ದೊರಕಿವೆ.

  • ಮರ – ಮನ
    ಮರಕ್ಕೆ ಬೇಕು
    ಹಸಿರು ಎಲೆಗಳು |
    ಮನಕ್ಕೆ ಬೇಕು
    ಹಸಿರು ನೆನಪುಗಳು
  • ನಶ್ವರ

ಮರದ ಮೇಲೆ ಬೀಗುತ್ತಿದ್ದ
ಇಂದಿನ ಚಿಗುರನ್ನು ನೋಡಿ
ಮುಗುಳ್ನಕ್ಕ ಕಣ್ಣು ಹೊಡೆದ
‘ವಸಂತ’
ಈ ಆಟವ ಕಂಡು
ಮುದುಡಿದವು ಕಣ್ಣೀರಿಟ್ಟವು
ಕೆಳಗುರುಳಿದ ಹಣ್ಣೆಲೆಗಳು
ಹಿಂದಿನ ಚಿಗುರುಗಳು

  •  ವಿಪರ್ಯಾಸ

ಎಲ್ಲಾದಕ್ಕೂ ‘ರೈಟ್’
ಎನ್ನುತ್ತಾನೆಂದು
ಕಂಡಕ್ಟರನ್ನು ಕಟ್ಟಿಕೊಂಡರೆ
ಎಲ್ಲಾದಕ್ಕೂ ‘ಹೋಲ್ಡಾನ್’
ಎನ್ನಬೇಕೆ ಆತ
ತಲೆ ಚೆಚ್ಚಿಕೊಂಡಳು
ಕಂಡಕ್ಟರನ ಹೆಂಡತಿ

  • ಬದಲಾದ ಕಾಲ

‘ಏಳೋ ಬೇಗ’ ಅನ್ನುತ್ತಿದ್ದೆ
ಬಾಲಕನಾಗಿದ್ದಾಗ |
‘ಮಲಗೋ ಬೇಗ’ ಅನ್ನಬೇಕಾಗಿದೆ
ಯುವಕನಾದ ಮೇಲೆ
ಅದು ‘ರೆಡಿಯೋ ಕಾಲ’
ಇದು ‘ಮೊಬೈಲ್ ಕಾಲ’

  •  ಕೆರೆ

ಆಗ : ಕೆರೆಯ ನೀರನ್ನು
ಬಳಸಿ ಬೆಳೆಸುತ್ತಿದ್ದರು
ಹಸಿರು ಗಿಡಗಳನ್ನು
ಈಗ : ಕೆರೆಯ ನೀರನ್ನು
ಬತ್ತಿಸಿ ಕಟ್ಟಿಸುತ್ತಾರೆ
ದೊಡ್ಡ ಮಹಲುಗಳನ್ನು

  • ಜೊತೆಗಾರ

ತನ್ನ ಜೊತೆಗಿರಲು
ಬಂದ ಚಂದ್ರಮನಿಗೆ
ನಕ್ಷತ್ರದ ಹಾರ ಹಾಕಿ
ಸ್ವಾಗತಿಸಿದಳು
ನಿಶಾರಾಣಿ

  • ತೃಪ್ತಿ – ಅತೃಪ್ತಿ

ಬಡತನವಿದ್ದರೂ
ಬೇರೆಯವರ ದುಡ್ಡು
ಬೇಡವೆನ್ನುವರು
‘ಕೆಲವರು’
ಸಿರಿತನವಿದ್ದರೂ
ಸಂಬಳ ಸಾಲದೆನ್ನುವರು
‘ಹಲವರು’

  • ನೆನಪಾಗುವುದಿಲ್ಲವೇ

ರಾತ್ರಿಯೆಲ್ಲಾ ಚಂದಿರನ
ಸುತ್ತಾ ಸುತ್ತುತ್ತಿವೆ
ತಾರಾಮಣಿಗಳ ಗುಂಪು
ಆಗುವುದೇ ಇಲ್ಲವೇ
ಅವನಿಗೆ ತನ್ನ ಪತ್ನಿ
ರೋಹಿಣಿಯ ನೆನಪು?

  • ಲೆಕ್ಕಾಚಾರ

ಅಮ್ಮ ಮಗುವಿಗೆ
ಕೈತುತ್ತು ಹಾಕಿದಳು
ಇಡಲಿಲ್ಲ ಅದರ ಲೆಕ್ಕ
ಅಪ್ಪ ಮಗನ ಕೈಹಿಡಿದು
ಹೆಜ್ಜೆ ಹಾಕಿಸಿದ
ಇಡಲಿಲ್ಲ ಅದರ ಲೆಕ್ಕ
ಮಗ ಮಾತ್ರ ಅವರುಗಳನ್ನು
ನೋಡಿಕೊಂಡದ್ದಕ್ಕೆ ಇಟ್ಟ
ಖರ್ಚಾದ ಹಣದ ಲೆಕ್ಕ

  • ಪರ್ಯಾಯ

ನಡೆದು ಬಂದ ಹಾದಿ
ಎಂದಿಗೂ ಚೆನ್ನವೇ
ಆದರೆ ಹಿಂದಕ್ಕೆ
ಜಿಗಿಯಲು ಸಾಧ್ಯವೇ
ಅದಕ್ಕೇ ನಡೆದಿದೆ
ಸವಿನೆನಪಿನ
ಮೆರವಣಿಗೆ
ಮನದೊಳಗೆ


  • ಸವಿತಾ ಪ್ರಭಾಕರ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW