ಟೆನ್ನಿಸ್ ಅಂಕಣದಿ ಚಿರವಿರಲಿ ನಿನ್ನ ಛಾಪು, ನಾವೆಲ್ಲ ಅನ್ನುತ್ತಿರುವೆವು ಬಾಪುರೆ ಬಾಪು….ಕವಿ ಬೆಂಶ್ರೀ ರವೀಂದ್ರ ಅವರ ಲೇಖನಿಯಲ್ಲಿ ಅರಳಿದ ಸುಂದರ ಕವನ ,ಮುಂದೆ ಓದಿ…
ನೀನಿಲ್ಲದಂಗಳವು ಕಲ್ಮುಳ್ಳು ಕಾನನವು
ಚೆಂಡುಗಳಿನ್ನು ಪುಟಿಯಲಾರವು
ಬ್ಯಾಟುಗಳ ಧಬಕ್ ಧಬಕ್ ಕೇಳವು
ಅಭಿಮಾನಿಗಳ ಚಪ್ಪಾಳೆ ಜಯಕಾರವು
ಮಾಯವಾಗುವುದು ಝೆಂಕಾರವು
ಮ್ಯಾಚು ಪಾಯಿಂಟಿನೊಡನೆ ಜಿಗಿದು ಮುಗಿಲೆತ್ತರಕೆ ಕೆಳಗಿಳಿದು ಇಳೆಗೆ
ಮುತ್ತಿಕ್ಕುವ ಕಕ್ಕುಲಾತಿ ಕಂಡೀತೆಲ್ಲಿ
ಸೋತವರ ಬೆಚ್ಚಗೆ ಅಪ್ಪುತಲಿ
ಫಲಕವನು ಮುದ್ದಿಸುವ ಸುಭಗವೆಲ್ಲಿ
ಕಾರ್ಮುಗಿಲ ಹೊಡೆತಕ್ಕೆ ಮಿಂಚಾಗಿ ಧರೆಗಿಳಿದ ಹುಡುಗಿ
ಬಲೆಯ ಮೇಗಡೆ ಸ್ಯುಂಯನೆ
ಅಂಗದೊಳಗೆ ಚಳ್ಳನೆ ಸುಳಿಸುಳಿದು
ಪುಟಿವ ಚೆಂಡನು ಅತ್ತಿತ್ತ ಇಟ್ಟಾಡಿ
ಅಂಗಳದ ತುಂಬೆಲ್ಲಾ ಸರಸರನಾಡಿಸಿ ನಿಷ್ಕರುಣೆಯ ಮುಂಗೈ ಹೊಡೆತದಲಿ
ಮಿತಿಯಿಲ್ಲದ ಶಕ್ತಿಯ ಉತ್ಪಾತದಲಿ
ಮೇರೆಗೆರೆಯೊಡನಾಡುವ ವೈಯ್ಯಾರದಲಿ
ಆಯತದಂಗಳವ ಹರಿದು ಮುಕ್ಕುತಲಿ
ಎದುರಾಳಿಗಳ ಕಂಗೆಡಿಸಿ
ಉಬ್ಬಿದೆದೆಯ ಮೇಲೇರಿಸಿಕೊಂಡೆಯಲ್ಲಾ
ಒಂದಲ್ಲ ಎರಡಲ್ಲ
ಇಪ್ಪತ್ತ್ಮೂರು ಗ್ರ್ಯಾಂಡ್ ಸ್ಲಾಮ್
ಇಪ್ಪತ್ತ್ನಾಲ್ಕನೆಯದ್ಯಾಕೆ ಬಿಟ್ಟೆ.
ಟೆನಿಸ್‌ನ ಅಂಕಣದಲಿ ಕಾಲು ಶತಮಾನ
ಕಾಲನನು ಗೆದ್ದ ಚುರುಕು ಕಾಲಿನ ಒಡತಿ
ಸೃಷ್ಟಿಕರ್ತನೆಲ್ಲಿಂದ ಆರಿಸಿದ ನಿನಗಾಗಿ
ಹೊಳೆವ ಈ ಕಪ್ಪುಶಿಲೆಯ
ವರ್ಣಭೇದವ ದಾಟಿ ಭುಗಿಲೆದ್ದು
ಮುಗಿಲಿಗೆ ಜಿಗಿದ ಅಂತಃಸತ್ವವ
ಮತ್ತೆ ಮತ್ತೆ ಬರುವೆ
ಗೆಲುವ ಮನದಲಿಟ್ಟು ನಡೆವೆ
ಕೊನೆಯ ಹೊಡೆತವು ನನ್ನದೆ
ಎಂಬ ಛಲವ
ಎಂತು ಎಳೆಎಳೆಯ ಚೊಕ್ಕದಲಿ
ಬಿಡಿಸಿ ತುಂಬಿದನು ಜಗದ ಕಣ್ಣು
ಸೌಂದರ್ಯ ಲಾಲಿತ್ಯದಲಿ ಬೆಸೆದ
ಬಿರುಸು ಹೊಡೆತದ ಹೆಣ್ಣು
ನಮ್ಮೆಲ್ಲರಲಿ ಉತ್ಸಾಹ ಚಿಮ್ಮಿಸಿದ
ಶಿಸ್ತಿನ ಹುಡುಗಿ ಸಂಭಾವಿತ ಬೆಡಗಿ
ಹೆತ್ತವರ ಹೆಗಲಿಗೇರಿಸಿಕೊಂಡೆ
ಪ್ರೀತಿ ಪ್ರೇಮ ಫಲವಂತಿಕೆಯ ದೇವಿ
ನಿನ್ನಕ್ಕ ವೀನಸ್‌ಗೆ ಅರ್ಪಿಸಿದೆ
ಅಕ್ಕರದ ಗೆಲುವು
ಮಿಂಚುವ ಗೊಂಚಲೆ ಶಿಸ್ತು ನಡೆಯೆ
ಹೊನ್ನ ಹೊಳಪೆ ಸೆರೆನಾ
ಅದಕ್ಕೆ ವಿಲಿ ನಿನಗೆ ಹೆಸರಿಟ್ಟಿದ್ದು
ಸೂರ್ಯನ ತಂಗಿ ಸೆರೆನಾ
ಗೆಲುವಿರಲಿ ನಿನಗೆ
ಸಮಯವಿರಲಿ ಒಲಂಪಿಯಾಗೆ
ಟೆನಿಸ್ ಅಂಕಣದಿ ಚಿರವಿರಲಿ ನಿನ್ನ ಛಾಪು
ನಾವೆಲ್ಲ ಅನ್ನುತ್ತಿರುವೆವು ಬಾಪುರೆ ಬಾಪು
ಅಷ್ಟಕ್ಕೂ ಸೆರೇನಾ ನೀ ಮಾಡಿದ್ದು ಸರಿನಾ
ನೇರಾನೇರ ಪ್ರಸಾರದಲಿ ನಿನ್ನ ಕಾಣದೆ
ನಮ್ಮ ಕಣ್ಮನ ಸೊರಗುವುದು ಸರಿನಾ.
- ಬೆಂಶ್ರೀ ರವೀಂದ್ರ (ಹಿರಿಯ ಸಾಹಿತಿಗಳು, ಕವಿ, ಲೇಖಕರು, ಚಿಂತಕರು), ಬೆಂಗಳೂರು
