ನನ್ನ ನೋಡಿದೊಡನೆ ಜನರ ಮಾತು ಮಧ್ಯಕ್ಕೇ ನಿಂತು ಬಿಡುತ್ತಿತ್ತು, ನಗು ಅಡಗಿ ಬಿಡುತಿತ್ತು…ಆದರೆ ಅವರನ್ನೆಲ್ಲ ಪ್ರೀತಿಸುತ್ತಿದ್ದೆ ನಾನು. ಕವಿ ವಿಸ್ಲಾವಾ ಸಿಂಬೋರ್ಸ್ಕ ಅವರ ಮೂಲ ಕವಿತೆಯನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಕವಿ ಮೇಗರವಳ್ಳಿ ರಮೇಶ್ ಅವರು, ತಪ್ಪದೆ ಮುಂದೆ ಓದಿ…
ಕವಿತೆ : ಸಾಲಿಲೋಕಿ ಫ಼ಾರ್ ಕಸ್ಸಾಂಡ್ರ
ಮೂಲ : ವಿಸ್ಲಾವಾ ಸಿಂಬೋರ್ಸ್ಕ
ಮೂಲ : ವಿಸ್ಲಾವಾ ಸಿಂಬೋರ್ಸ್ಕ
ಕನ್ನಡಕ್ಕೆ: ಮೇಗರವಳ್ಳಿ ರಮೇಶ್
ಟಿಪ್ಪಣಿ:
ಕಸ್ಸಾಂಡ್ರ ಗ್ರೀಕ್ ಪುರಾಣದಲ್ಲಿ ಬರುವ ಟ್ರೊಜನ್ ನ ಒಬ್ಬಳು ಪ್ರವಾದಿನಿ ( ಭವಿಷ್ಯ ನುಡಿಯುವವಳು), ದೊರೆ ಪ್ರಿಯಮ್ ಮತ್ತು ರಾಣಿ ಹೆಕ್ಯೂಬ ರ ಮಗಳು. ಅಪೋಲೋದೇವತೆಗೆ ಪ್ರಿಯಳಾಗಿದ್ದವಳು ಯಾವುದೋ ಕಾರಣಕ್ಕೆ ಅವನ ಕೆಂಗಣ್ಣಿಗೆ ಗುರಿಯಾಗಿ “ನೀನು ನುಡಿಯುವುದೆಲ್ಲವೂ ಸತ್ಯವಾಗಲಿ, ಆದರೆ ಯಾರೂ ಅದನ್ನು ನಂಬದಿರಲಿ” ಎಂದು ಶಪಿಸಲ್ಪಟ್ಟಳು.
ಟ್ರೋಜನ್ ಯುದ್ಧದಲ್ಲಿ ಜಯಗಳಿಸಿದ ದೊರೆ ಆಗಮೆಮ್ನನ್ ಕಸ್ಸಾಂಡ್ರಾಳನ್ನು ತನ್ನ ದಾಸಿಯಾಗಿ ಆರ್ಗೋಸಾಗೆ ಕರೆತರುತ್ತಾನೆ. ಕಸ್ಸಾಂಡ್ರ ಟ್ರಾಯ್ ನಗರದ ವಿಧ್ವಂಸದ ಬಗ್ಗೆ ಭವಿಷ್ಯ ನುಡಿಯುತ್ತಾಳೆ. ಅದನ್ನು ಯಾರೂ ನಂಬುವುದಿಲ್ಲ. ಅವಳು ನುಡಿದಂತೆ ಟ್ರಾಯ್ ನಗರ ಸುಟ್ಟು ಬೂದಿಯಾಗುತ್ತದೆ. ಅವಳು ತನ್ನ ಮತ್ತು ಆಗಮೆಮ್ನನ್ ನ ಅಂತ್ಯವನ್ನೂ ಮುಂಗಾಣುತ್ತಾಳೆ. ಆಗಮೆಮ್ನನ್ ನ ಜತೆಗೆ ಕಸ್ಸಾಂಡ್ರಾಳನ್ನೂ ಆಗಮೆಮ್ನನ್ ನ ಹೆಂಡತಿ ಕ್ಲೈಟಮ್ನೆಸ್ಟ್ರಾ ಕೊಲ್ಲುತ್ತಾಳೆ.
ಕಸ್ಸಾಂಡ್ರಾಗೊಂದು ಸ್ವಗತ
ಇಲ್ಲಿದ್ದೇನೆ ನಾನು, ಕಸ್ಸಾಂಡ್ರ
ಮತ್ತಿದೋ ಇಲ್ಲಿದೆ ಬೂದಿಯಾಗಿರುವ ನನ್ನ ನಗರ
ಇವರು ಪ್ರವಾದಿನಿಯಾದ ನನ್ನ ಸಿಬ್ಬಂದಿ, ಮತ್ತಿದು ನನ್ನ ಗುರುತು ಪಟ್ಟಿ
ಮತ್ತಿದು ಅನುಮಾನಗಳು ತುಂಬಿರುವ ನನ್ನ ತಲೆ
ನಿಜ ನಾನು ದಿಗ್ವಿಜಯಿಯಾಗಿದ್ದೇನೆ
ನನ್ನ ಭವಿಷ್ಯ ನುಡಿಗಳು ಬೆಂಕಿಯ ಹಾಗೆ ಉರಿಯುತ್ತಿವೆ ಆಗಸದಲ್ಲಿ
ಕೇವಲ ಗುರುತಿಸದ ಪ್ರವಾದಿಗಳು ಮಾತ್ರ
ಇಂತಹ ನಿರೀಕ್ಷೆಗಳಿಗೆ ಬಾಧ್ಯ ರಾಗುತ್ತಾರೆ
ಯಾರ ಭವಿಷ್ಯವಾಣಿ ತಕ್ಷಣವೇ ನಿಜವಗುತ್ತದೋ
ಅಂಥವರು ಮಾತ್ರ ಬಚಾವಾಗುತ್ತಾರೆ ತಮ್ಮ ಎಡವಟ್ಟುಗಳಿಂದ
ಅವರು ಎಂದೂ ಬದುಕಿಯೇ ಇರಲಿಲ್ಲವೆಂಬಂತೆ
ಸ್ಪಷ್ಟವಾಗಿ ನೆನಪಿದೆ ನನಗೆ –
ನನ್ನ ನೋಡಿದೊಡನೆ ಜನರ ಮಾತು ಮಧ್ಯಕ್ಕೇ ನಿಂತು ಬಿಡುತ್ತಿತ್ತು
ನಗು ಅಡಗಿ ಬಿಡುತಿತ್ತು.
ಪ್ರೇಮಿಗಳ ಬೆಸೆದ ಹಸ್ತಗಳು ಸಡಿಲಗೊಳ್ಳುತ್ತಿದ್ದವು.
ಮಕ್ಕಳು ಬೆದರಿ ತಾಯಂದಿರ ಮಡಿಲು ಸೇರುತ್ತಿದ್ದವು.
ನನಗವರ ಆ ಅಲ್ಪಾಯುಷಿ ಹೆಸರುಗಳೂ ಗೊತ್ತಿರಲಿಲ್ಲ.
ಮತ್ತೆ ಆ ಹಾಡು,ಹಸಿರಿನೆಲೆಯ ಮೇಲಿನದು
ಯಾರೂ ಅದನ್ನು ಪೂರ್ಣಗೊಳಿಸುತ್ತಿರಲಿಲ್ಲ
ನಾನು ಹತ್ತಿರವಿದ್ದರೆ.
ಅವರನ್ನೆಲ್ಲ ಪ್ರೀತಿಸುತ್ತಿದ್ದೆ ನಾನು.
ಆದರೆ ನಾನವರನ್ನು ಪ್ರೀತಿಸುತ್ತಿದ್ದೆ ದರ್ಪದಿಂದ
ಬದುಕನ್ನು ಮೀರಿದೆತ್ತರದಿಂದ
ಯಾವಗಲೂ ಖಾಲಿಯಾಗಿರುವ ಮತ್ತು
ಸಾವನ್ನು ಬಿಟ್ಟು ಮತ್ತೇನನ್ನೂ ನೋಡಲು ಸುಲಭವಲ್ಲದ
ಭವಿಷ್ಯದಿಂದ.
ಕ್ಷಮಿಸಿ, ನನ್ನ ಧ್ವನಿ ಕಠಿಣವಾದದ್ದಕ್ಕೆ.
ನಕ್ಷತ್ರಗಳಿಂದ ಕೆಳಗೆ ಬಾಗಿ ನಿಮ್ಮನ್ನೇ ನೀವು ನೋಡಿಕೊಳ್ಳಿ
ನಾನು ಕೂಗಿದೆ, ನಕ್ಷತ್ರಗಳಿಂದ ಕೆಳಗೆಬಾಗಿನಿಮ್ಮನ್ನೇ ನೀವು ನೋಡಿಕೊಳ್ಳಿ.
ನನ್ನ ಕೂಗನ್ನವರು ಕೇಳಿದರು ಮತ್ತು ತಮ್ಮನೋಟವನ್ನುಕೆಳಗೆಹರಿಸಿದರು.
ಬದುಕಿನೊಳಗವರು ಬಾಳಿದರು
ಬಿರುಗಾಳಿಯಿಂದವರು ಛೇದಿಸಲ್ಪಟ್ಟರು
ನಿಂದಿಸಲ್ಪಟ್ಟರು
ಹುಟ್ಟಿನಿಂದ ನಶ್ವರ ದೇಹಗಳೊಳಗೆ ಸಿಕ್ಕಿ ಬಿದ್ದರು.
ಆದರವರು ಇಟ್ಟುಕೊಂಡಿದ್ದರು ತಮ್ಮೊಳಗೊಂದು ಆರ್ದ್ರ ಭರವಸೆಯನ್ನು
ತನ್ನದೇ ಬೆಳಕಿಂದ ಉದ್ದೀಪಿಸಲ್ಪಟ್ಟ ಒಂದು ಜ್ವಾಲೆಯನ್ನು.
ಮೊದಲೇ ಅವರು ಅರಿತಿದ್ದರು ಕ್ಷಣವೆಂದರೇನೆಂದು
ಯಾವುದೇ ಕ್ಷಣ,ಯಾವುದೇ ಒಂದು.
ನಾನು ಸರಿಯೆಂದು ಅರಿವಾಗುವ ಮೊದಲು.
ಆದರದರಿಂದ ಏನೂ ಆಗಲಿಲ್ಲ.
ಮತ್ತಿದೋ ನನ್ನ ಬಟ್ಟೆ, ಸ್ವಲ್ಪ ಸುಟ್ಟಿದೆ
ಇದು ಪ್ರಾವಾದಿನಿಯ ಚಿಂದಿ.
ಮತ್ತಿದು ನನ್ನ ತಿರುಚಿದ ಮುಖ
ತಾನೂ ಸುಂದರವಾಗಿದ್ದಿರಬಹುದೆಂದು
ಅರಿಯದ ಮುಖ.
- ಮೇಗರವಳ್ಳಿ ರಮೇಶ್ – ನಿವೃತ್ತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕಾರಿ
