ಶಂಕರ್ ನಾಗ್ ರವರ ಸಮಾಧಿ ಇಲ್ಲ …

ನಟ ಶಂಕರ್ ನಾಗ್ ರವರ ಸಮಾಧಿ ಇಲ್ಲ ಅವರು ತೀರಿಕೊಂಡಾಗವಿದ್ಯುತ್ ಚಿತಾಗಾರದಲ್ಲಿ ಅವರ ದೇಹವನ್ನು ಸುಡಲಾಯಿತು. ಅದೇ ತರ ಟೈಗರ್ ಪ್ರಭಾಕರ್ ಅವರ ಸಮಾಧಿ ಇದೆ. ಆ ಸಮಾಧಿಯ ಪಕ್ಕದಲ್ಲಿ ಅವರ ಮೊದಲ ಮಡದಿ ಮೇರಿ ಪ್ರಭಾಕರ್‌ರವರ ಸಮಾಧಿ ಕೂಡ ಇತ್ತು. ಲೇಖಕರರಾದ ನಿತಿನ್ ಅಂಕೋಲಾ ಅವರು ಕನ್ನಡ ಧೀಮಂತ ನಟರ ಸಮಾಧಿಗಳ ಕುರಿತು ಬರೆದ ಲೇಖನ ಭಾವುಕರನ್ನಾಗಿ ಮಾಡುತ್ತದೆ, ತಪ್ಪದೆ ಮುಂದೆ ಓದಿ…

ಬೆಂಗಳೂರಿನ ರಘುನಹಳ್ಳಿಯಲ್ಲಿರುವ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿ ನನ್ನ ಅಣ್ಣ ಕಾರ್ಯನಿರ್ವಹಿಸುತ್ತಿದ್ದ. ಕುಮಾರಸ್ವಾಮಿ ಲೇಔಟ್ ನಲ್ಲಿರುವ ಒನ್ ಬಿ ಎಚ್ ಕೆ ಮನೆಯೊಂದರಲ್ಲಿ ವಾಸ್ತವ್ಯ ಹೂಡಿದ್ದ. ಬೆಳಿಗ್ಗೆ ಎಂಟರ ಹೊತ್ತಿಗೆ ನಮ್ಮ ಮೂವರ ಪ್ರಯಾಣ ಪ್ರಾರಂಭವಾಯಿತು. ಬಿಎಂಟಿಸಿ ಬಸ್ ನಲ್ಲಿ ಪ್ರಯಾಣಿಸಿ ಬೆಳಗ್ಗೆ 9:15ರ ಹೊತ್ತಿಗೆ ರವಿಶಂಕರ್ ಗುರೂಜಿ ಆಶ್ರಮವನ್ನು ತಲುಪಿದೆವು. ಅಲ್ಲಿನ ಸುತ್ತಮುತ್ತಲಿನ ಪರಿಸರವು ವಿಶೇಷ ಕೃತಕ ಜಗತ್ತನ್ನೇ ಸೃಷ್ಟಿಸಿ ನಾವಿನ್ಯತೆಯಿಂದ ಕೂಡಿದ ಆವರಣವೆಲ್ಲವು ಸ್ವಚ್ಛ ಕನ್ನಡಿಯಂತೆ ಶುಭ್ರವಾಗಿ ಹೊಳೆಯುತಿತ್ತು. ಮೂರು ತಾಸು ಆಶ್ರಮದಲ್ಲಿ ಕಾಲ ಕಳೆದು ಅಲ್ಲೇ ಪುಟ್ಟ ಉಪಹಾರ ಗೃಹದಲ್ಲಿ ಮಧ್ಯಾಹ್ನದ ಊಟ ಸೇವಿಸಿ ವಿಲ್ಸನ್ ಗಾರ್ಡನ್ ಸ್ಮಶಾಣಕ್ಕೆ ತೆರಳಲು ಮುಂದಾದೆವು. ಮಧ್ಯಾಹ್ನ ಎರಡರ ಹೊತ್ತಿಗೆ ಮೂರು ನಾಲ್ಕು ಬಸ್ ಬದಲಾಯಿಸಿ ಸರಿಯಾಗಿ ನಾಲ್ಕು ಹದಿನೈದರ ಹೊತ್ತಿಗೆ ನಾವು ಮೂವರು ವಿಲ್ಸನ್ ಗಾರ್ಡನ್ ಸ್ಮಶಾಣದ ಮುಖ್ಯದ್ವಾರಕ್ಕೆ ಬಂದು ತಲುಪಿದೆವು.

“ಅಣ್ಣ ಇದೊಂದು ದೊಡ್ಡ ಸ್ಮಶಾಣ. ಯಾಕೋ ಏನೋ ಮೆತ್ತ ಮೆತ್ತಗೆ ಏನೋ ಕಳೆದುಕೊಂಡ ಭಾಸ ಆಗ್ತಾ ಇದೆ!!”

ನಾಗೇಶ್ ನನ್ನ ಮುಖವನ್ನೇ ದಿಟ್ಟಿಸಿದ.

“ಹಾಗೇನು ಇಲ್ಲ ಬಾ ಒಳಗಡೆ ಹೋಗೋಣ ಅಲ್ಲಿ ಸ್ಮಶಾನದ ಇಂಚಾರ್ಜ್ ಯಾರಾದ್ರೂ ಇರಬಹುದು ಅವರತ್ರ ಮಾಹಿತಿ ಕೇಳೋಣ”..

ಸರಿ ಎಂದು ಮುನ್ನಡೆದೆ. ಅಣ್ಣ ಮತ್ತು ನಾಗೇಶ್ ನನ್ನನ್ನ ಹಿಂಬಾಲಿಸಿದರು. ಸ್ಮಶಾನದ ಮುಖ್ಯ ದ್ವಾರದ ಮುಂದೆ ಎರಡು ಪುರುಷರು ಮತ್ತೆ ಹಣೆಯ ತುಂಬ ತ್ರಿವಳಿ ವಿಭೂತಿ ಬಳಿದು ನಡು ಮಧ್ಯ ಕಡುಗೆಂಪು ಬಣ್ಣದ ದಟ್ಟ ಕುಂಕುಮವಿಟ್ಟ ಓರ್ವ ಧಡೂತಿ ಶರೀರದ ಮಹಿಳೆ ಪರಸ್ಪರ ಮಾತನಾಡುತ್ತಾ ಕುರ್ಚಿ ಮೇಲೆ ಕುಳಿತಿದ್ದರು. ನಮ್ಮ ಮೂವರ ಹೆಜ್ಜೆಯ ಸಪ್ಪಳವನ್ನು ಕೊಂಚ ದೂರದಿಂದ ಗಮನಿಸಿದ ಮಹಿಳೆ ಇಷ್ಟೊತ್ನಲ್ಲಿ ಇವರು ಯಾಕೆ ಇಲ್ಲಿಗ್ ಬಂದಿದ್ದಾರೆ ಎಂಬ ಸಹಜ ಕುತೂಹಲ ಮೂಡಿದ ಭಾವದಿಂದ ಅನುಮಾನಸ್ಪದ ನೋಟದಿಂದಲೇ ನಮ್ಮತ್ತ ದಿಟ್ಟಿಸಲಾರಂಬಿಸಿದಳು. ಆಕೆಯ ನೋಟ ಸ್ವಲ್ಪ ಭಯ ಹುಟ್ಟಿಸುವಂತೆ ಇತ್ತು. ಸೂಕ್ಷ್ಮ ಮನಸ್ಥಿತಿಯವರಾಗಿದ್ರೆ ಆ ಜಾಗದಲ್ಲಿ ಒಂದು ನಿಮಿಷ ಇರುತ್ತಿರಲಿಲ್ಲ ಅಂತ ನನಗೆ ಅನಿಸಿತು…

ಆಕೆಯ ನೇರನೋಟ ಕಂಡು ಒಬ್ಬರ ಮುಖ ಒಬ್ಬರು ನಾವು ನೋಡಿಕೊಂಡೆವು. ಇನ್ನುಳಿದ ಇಬ್ಬರು ಪುರುಷರು ನಮ್ಮತ್ತಲೆ ಮುಖ ಮಾಡಿದರು.ಮಹಿಳೆ ತುಂಬಾ ನಯ ವಿನಯದಿಂದಲೇ ಅತ್ಯಂತ ಮಧುರವಾಗಿ “ಯಾರಪ್ಪ ನೀವು “ಎಂದು ಪ್ರಶ್ನಿಸಿದಳು..

“ನಾನು ನಿತಿನ್ ಅಂತ ಇಂಜಿನಿಯರಿಂಗ್ ಕೊನೆಯ ವರ್ಷದಲ್ಲಿ ಅಭ್ಯಾಸ ಮಾಡ್ತಿದ್ದೇನೆ..ಇವನು ನನ್ನಣ್ಣ ಸಚಿನ್. ಇವನು ಬೆಂಗಳೂರಿನಲ್ಲಿ ಮೆಕ್ಯಾನಿಕಲ್ ಡಿಸೈನ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾನೆ.. ಇವನು ನನ್ನ ಸ್ನೇಹಿತ ನಾಗೇಶ್….ಊರಿನಲ್ಲಿ ಸ್ಟೇಷನರಿ ಶಾಪ್ ಇಟ್ಕೊಂಡಿದ್ದಾನೆ.. ನಮ್ಮ ಊರು ಬಂದ್ಬಿಟ್ಟು ಉತ್ತರ ಕನ್ನಡ ಜಿಲ್ಲೆ ಅಂಕೋಲಾ ತಾಲೂಕು ಶ್ರೀಕ್ಷೇತ್ರ ಗೋಕರ್ಣಕ್ಕೆ ತೀರ ಸಮೀಪ.. ನಾವು ಶಂಕರ್ ನಾಗ್ ರವರ ಸಮಾಧಿಯನ್ನು ನೋಡಬೇಕು ಅಂತ ಬಂದ್ವಿ.. ಇಲ್ಲಿ ಇದೆಯಾ ಶಂಕರ್ ನಾಗ್ ರವರ ಸಮಾಧಿ?? ”

” ಓಹೋ ಉತ್ತರ ಕನ್ನಡದವರ ನೀವು?? ಕಾರವಾರ ಹತ್ರನಾ?? ಬೆಂಗಳೂರಿನಲ್ಲೇ ಇರೋದಾ ” ಎಂದು ಓರ್ವ ಕುಳಿತಿದ್ದ ಪುರುಷ ಪ್ರಶ್ನಿಸಿದ…

ಅಣ್ಣ “ಹೌದು ಇಲ್ಲೇ ಕೆಲಸ ಮಾಡ್ಕೊಂಡಿದೀನಿ. ರಘುನಹಳ್ಳಿಯಲ್ಲಿ ನಮ್ಮ ಆಫೀಸ್ ಇದೆ”

“ಶಂಕರ್ ನಾಗ್ ರವರ ಸಮಾಧಿ ಇಲ್ಲ ಅವರು ತೀರಿಕೊಂಡಾಗ ಇಲ್ಲೇ ಒಳಗಡೆ ವಿದ್ಯುತ್ ಚಿತಾಗಾರದಲ್ಲಿ ಅವರನ್ನು ಬರ್ನ್ ಮಾಡಿದ್ದು ಇದೇ ಕಾಲುದಾರಿಯಿಂದ ನಡೆದುಕೊಂಡು ಹೋದರೆ ವಿದ್ಯುತ್ ಚಿತ್ರಗಾರರಾದ ಆವರಣ ಸಿಗತ್ತೆ. ಕೆಲವರನ್ನ ಇಲ್ಲಿ ಹೂಳ್ತಾರೆ, ಇನ್ನೂ ಕೆಲವರನ್ನ ಸುಡುತ್ತಾರೆ ಅದು ಅವರವರ ಜಾತಿ ಸಂಪ್ರದಾಯಕ್ಕೆ ಅನುಸಾರವಾಗಿ” ಸ್ಮಶಾನದ ಸಂಚಾಲಕಿ ಉತ್ತರಿಸಿದಳು.

ಆಗ ನನಗೆ ಖಾತರಿ ಆಯಿತು. ಶಂಕರ್ ನಾಗ್ ರವರಿಗೆ ಯಾವುದೇ ಸಮಾಧಿ ಕಟ್ಟಿಲ್ಲ ಅವರ ನೆನಪಿಗೋಸ್ಕರ ಕರ್ನಾಟಕ ಸರ್ಕಾರವಾಗಲಿ ಮತ್ತು ಕನ್ನಡ ಚಿತ್ರರಂಗವಾಗಲಿ ಯಾವುದೇ ಕೆಲಸವನ್ನು ಮಾಡಿಲ್ಲ. ಅಭಿಮಾನಿಗಳ ಅನಂತ ಅಭಿಮಾನದಿಂದಲೇ ಇಂದು ಅವರ ಹೆಸರು ಹಸಿರಾಗಿದೆ ಹೊರತುಪಡಿಸಿದರೆ ಇನ್ನೇನು ಇಲ್ಲ ಎಂದೆನಿಸಿ ನಿರಾಶಾ ಮನೋಭಾವದಿಂದಲೇ ಕೇಳಿದೆ.

“ಓಹೋ ಹೌದಾ… ನನಗೂ ಸುಮಾರು ಜನ ಕಮೆಂಟ್ ಮಾಡಿದ್ರು ಇಲ್ಲೇ ಇದೆ ಅಂತ ಹಾಗಾಗಿ ಖಾತರಿ ಪಡಿಸಿಕೊಳ್ಳೋಕೆ ಇಲ್ಲಿಗೆ ಬಂದ್ವಿ. ನಿಮ್ಮಿಂದಾಗಿ ಮಾಹಿತಿ ಸಿಕ್ತು ಥ್ಯಾಂಕ್ಸ್ ಅಂತೆ ಪ್ರಭಾಕರ್ ಅವರ ಸಮಾಧಿ ಕೂಡ ಇಲ್ಲಿ ಇರೋದ??” …

” ಇಲ್ಲ ಅದು ಇಂಡಿಯನ್ ಕ್ರಿಶ್ಚಿಯನ್ಸ್ ಸಿಮೆಟ್ರಿಯಲ್ಲಿ ಇಲ್ಲಿಂದ 2 km ದೂರದಲ್ಲಿದೆ ಇಲ್ಲೇ ಒಳದಾರಿಯಿಂದ ನಡೆದುಹೋದರೆ ಬಸ್ ಸ್ಟಾಪ್ ಇದೆ ಆ ಬಸ್ಸು ಆ ಸ್ಮಶಾನದ ಮುಂದೇನೆ ನಿಲ್ಸುತ್ತೆ”

“ಓಹ್ ಸರಿ ಇವ್ರೇ”

” ಓ ಓಕೆ ಜನ ಕೂಡ ಅದನ್ನು ಕೇಳಿದ್ದಾರೆ ಕನಿಷ್ಠ ಪಕ್ಷ ಅದನ್ನಾದರೂ ಶೂಟ್ ಮಾಡೋಣ ” ಎಂದು ಸಹೋದರ ಸಚಿನ್ಗೆ ಮತ್ತು ಸ್ನೇಹಿತ ನಾಗೇಶ್ ಗೆ ಹೇಳಿದೆ..

“ಸರಿ ಇದೆ ದಾರಿಯಿಂದ ಹೊರಡೋದ?? ಮತ್ತೆ ಬೇರೆ ದಾರಿ ಇಲ್ವಾ?? ಎಂದು ಅಣ್ಣ ಪ್ರಶ್ನಿಸಿದ

“ಬೇರೆ ದಾರಿ ಅಂದ್ರೆ ನೀವು ಅಲ್ಲಿಂದ ಹೊರಗಡೆಯಿಂದ ಸುತ್ತು ಹೊಡೆದು ಬರಬೇಕು ಸುಮ್ಮನೆ ದೂರ ಆಗುತ್ತೆ ಹೀಗೆ ಹೋಗಿ ಬೇಗ ಸಿಕ್ಕಿಬಿಡುತ್ತೆ”

ಥಟಕ್ಕನೆ ಹಿಂತಿರುಗಿದೆ.ಮಧ್ಯಮ ವೇಗದಲ್ಲಿ ಆಂಬುಲೆನ್ಸ್ ವೊಂದು ಬಂದು ನಿಂತಿತು ಅದರ ಹಿಂದೆ ಬೋಲೇರೋ ವಾಹನ. ನಾವು ಮೂವರು ವಾಹನವನ್ನು ದಿಟ್ಟಿಸುತ್ತಿದ್ದೇವೆ. ಬೋಲೇರೋ ಗಾಡಿಯಿಂದ ಇಳಿದ ಜನಗಳೆಲ್ಲ ಆ ದೃಶ್ಯ ಕಂಡವನ ಕರುಳು ಕಿತ್ತು ಬರೋ ಹಾಗೆ ಅಳುತ್ತಾ ಗೋಗರೆಯುತ್ತಿದ್ದಾರೆ. ಇನ್ನೂ ಎರಡು ಮೂರು ಮಹಿಳೆಯರು ಹಣೆ ಚಚ್ಚಿಕೊಳ್ಳುತ್ತ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ. ಒಂದಿಬ್ಬರು ಪುರುಷರು ಅವರನ್ನು ಸಮಾಧಾನಿಸುತ್ತಿದ್ದಾರೆ.ಸೂಕ್ಷ್ಮವಾಗಿ ಗಮನಿಸಿದಾಗ ನನಗೆ ತಿಳಿದಿದ್ದು ಬಂದೆ ಯಾರು ಕನ್ನಡ ಮಾತನಾಡುತ್ತಿಲ್ಲ. ಎಲ್ಲರೂ ತಮಿಳು ಭಾಷೆಯಲ್ಲಿ ಮಾತನಾಡುತ್ತಿದ್ದಾರೆ. ಯಾರೋ ಆಂಬುಲೆನ್ಸ್ ಸಿಬ್ಬಂದಿಗಳು ಬಾಗಿಲು ತೆರೆದು ಬಾಗಿಲು ತೆರೆದು ಆಗಷ್ಟೇ ಅಂತಿಮ ವಿಧಿವಿಧಾನಗಳನ್ನೆಲ್ಲ ಮುಗಿಸಿ ಪುಷ್ಪಗಳ ಸರಮಾಲೆಯಿಂದ ಆವೃತಗೊಂಡ ಮೃತ ದೇಹವಿದ್ದ ಚಟ್ಟವನ್ನು ಹೊರಗೆ ತಂದಾಗ ನಮಗೆ ಮೂವರಿಗೂ ಲಘು ಆಘಾತವಾಯಿತು. ಏಕೆಂದರೆ ಅಲ್ಲಿ ಮೃತಪಟ್ಟಿದ್ದು ಓರ್ವ ಹದಿಹರೆಯದ ಯುವಕ. ಆ ಕುಟುಂಬಸ್ಥರ ಒಬ್ಬರ ಹತ್ತಿರ ಹೋಗಿ ಸಮಾಧಾನದಿಂದಲೇ ಪ್ರಶ್ನಿಸಿದೆ

” ಸರ್ ಏನಾಯ್ತು?? ನಿಮಗೇನಾಗ್ಬೇಕು??

” ನನ್ನ ಅಣ್ಣನ ಮಗ ಸರ್ ಸೂಸೈಡ್ ಮಾಡ್ಕೊಂಡ ”

ಏನು ಮಾತನಾಡದೆ ಪರಿಸ್ಥಿತಿ ಗಮನಿಸಿದೆ.ಒಂದೊಳ್ಳೆ ಕೆಲಸಕ್ಕೆ ಬಂದು ಮನಸ್ಸು ಹಾಳು ಮಾಡಿಕೊಳ್ಳೋ ಹಾಗೆ ಆಗೋಗಿತ್ತು. ಆ ಕುಟುಂಬಿಕರು ಯಾವ ತರ ರೋಧಿಸ್ತಿದ್ರು ಅಂದ್ರೆ ಎಂತಹ ಕಲ್ಲು ಹೃದಯವು ನೋವು ಸಹಿಸಲಾರದೆ ಸ್ತಂಭಿಭೂತರಾಗುತ್ತಿದ್ದಿದ್ದು ದಿಟವೆನಿಸಿ ಇಲ್ಲಿ ನಿಂತ್ಕೊಳದು ಸರಿಯಲ್ಲ ಎಂದು ಆ ಜಾಗ ಖಾಲಿ ಮಾಡಲು ತತ್ ಕ್ಷಣ ಯೋಚಿಸದೆ ಹೊರಡಲು ಮುಂದಾದೆವು..

ವಿಲ್ಸನ್ ಗಾರ್ಡನ್ ಸ್ಮಶಾನದ ಮುಖ್ಯ ದ್ವಾರದ ಎದುರಿಗೆ ಅಭಿಮುಖವಾಗಿರುವ ಟೈಲ್ಸ್ ಮಾರ್ಗದಿಂದ ನಡೆಯಲಾರಂಭಿಸಿದೆವು. ವಿಶಾಲವಾಗಿ ಒಂದು ಎಕರೆಗಿಂತ ಜಾಸ್ತಿ ಬೃಹದಾಗಿರುವ ಸಮಾಧಿಯ ಆವರಣ.ನಾಲ್ಕು ದಿಕ್ಕಿನತ್ತ ಯಾವುದೇ ಕೋನದಿಂದಲೂ ಕಣ್ ಹಾಯಿಸಿದರು ಕಾಣುವ ಸಾವಿರಾರು ಸಮಾಧಿಗಳು,ಕಡುಗಪ್ಪು ಗ್ರಾನೈಟ್ನಲ್ಲಿ ಜನನ ಮರಣದ ದಾಖಲೆಯ ಸಮೇತ ಪೂರ್ಣ ನಾಮಧೇಯದಿಂದ ಕೂಡಿರುವ ಮೃತ ದುರ್ದೈವಿಗಳ ಗುರುತಿನ ಭಾವಚಿತ್ರ ಅದಕ್ಕೊಂದು ಕೇಸರಿ ಬಣ್ಣದ ಗೊಂಡೆ ಹೂವಿನ ಹಾರ,ತರೆಗೆಲೆಗಳಿಂದ ತುಂಬಿ ಹೋಗಿರುವ ಕೆಮ್ಮಣ್ಣು,ಆರಡಿ ದೇಹದೆತ್ತರಕ್ಕೆ ಬೆಳೆದಿರುವ ಹಾವಿನ ಹುತ್ತ, ಎಲ್ಲೆಂದರಲ್ಲಿ ನಿರಾಯಾಸವಾಗಿ ಬೆಳೆದಿರುವ ಮುಳ್ಳಿನ ಗಿಡ, ತಮ್ಮ ಒಡನಾಡಿಗಳಿಗೆ ಏನನ್ನೋ ತಮ್ಮ ಪರಿಭಾಷೆಯ ಮೂಲಕ ಕಾವ್ ಕಾವ್ ಎಂದು ಕಿರುಚಿ ತಿಳಿಸುತ್ತಿರುವ ಕಾಗೆಗಳ ಗುಂಪು,ತಲೆಕೂದಲು ಉದುರಿ ಬೋಳಾದಂತಿರುವ ಬೋಳು ಹುಣಸೆ ಮರ,ಮಂತ್ರಿಸಿ ಎಸೆದ ಅರಿಶಿನ ಕುಂಕುಮ ಬಳಿದ ನಿಂಬೆಹಣ್ಣು ಜೊತೆಗೆ ಚೆಲ್ಲಾಪಿಲ್ಲಿಯಾಗಿರುವ ಕುಂಕುಮಗಳು & ವಾಮಾಚಾರಕ್ಕೆ ಬಳಸಿದ ಪುಟ್ಟ ಗೊಂಬೆಗಳು ಇವೆಲ್ಲವುಗಳಿಂದ ಮಿಶ್ರಣಗೊಂಡಿದ್ದ ಪ್ರಖರ ಮೌನ.ಸೂಜಿ ಬಿದ್ದರು ಕೇಳಬೇಕು ಆ ಮಟ್ಟದ ಗಾಢ ಮೌನ.ನಾವ್ ಇಡೋ ಹೆಜ್ಜೆಯ ಪುಟ್ಟ ಪುಟ್ಟ ಹೆಜ್ಜೆ ನಮಗೆ ಪ್ರತಿಧ್ವನಿಸಿ ಕೇಳುತ್ತಿದೆ. ಸೂರ್ಯೋದಯದ ಮುನ್ಸೂಚನೆ ಬಿಸಿಲ ಬಣ್ಣವೇ ಹೇಳುತ್ತಿದೆ.ಇಂತಹ ಪ್ರಮೇಯವನ್ನು ಬದುಕಿನಲ್ಲಿ ಕಂಡಿದ್ದೆ ಇಲ್ಲ. ಚಲನಚಿತ್ರಗಳಲ್ಲಿ ನೋಡಿದ್ದಷ್ಟೇ. ಆದರೆ ಆ ಸಂಜೆ ಹೊತ್ತು ನಾನು ನನ್ನ ಅಣ್ಣ ಸಚಿನ್ ಮತ್ತು ಸ್ನೇಹಿತ ನಾಗೇಶ್ ನೊಡನೆ ನಡೆದು ಹೋಗುತ್ತಿದ್ದದ್ದು ಕಗ್ಗತ್ತಲಲ್ಲಿ ನಿಶಾಚರ ಜೀವಿಯಂತೆ ಅಲೆಮಾರಿಯಾಗಿ ಸ್ಮಶಾನ ಅಲೆಯುತ್ತಿರುವಂತೆ ಭಾಸವಾಯಿತು.ಹತ್ತರಿಂದ ಹದಿನೈದು ಹೆಜ್ಜೆ ನಡೆದೆವು ಅಷ್ಟೇ.

ನಾಗೇಶ್ “ನಾನ್ ಆ ಜಾತಿಯವನು ಈ ಜಾತಿಯವನು ತನ್ನ ಹತ್ರ ಅಷ್ಟು ಹಣ ಇದೆ ನಾನು ಸರ್ಕಾರಿ ಕೆಲಸದವನು ನಾನು ದೊಡ್ಡ ಬಿಸಿನೆಸ್ ಮೆನ್ ನಮ್ಮಪ್ಪನತ್ರ ಕೋಟಿ ಕೋಟಿ ಇದೆ ಕೂತು ತಿನ್ನುವಷ್ಟು ನಮ್ಮತ್ರ ಇದೆ, ನಮ್ಮ ಸೌಂದರ್ಯ ಯಾವ ಮಟ್ಟದ್ದು ನಾನು ಚೆಂದ ಇದ್ದೇನೆ ನಮ್ಮಂತ ಯಾರಿದ್ದಾರೆ ನಾ ಹುಟ್ಟುತ್ತಾನೆ ಶ್ರೀಮಂತರು ಕಾರು ತೋಟ ಬಂಗಲೆ ಎಲ್ಲ ಇರೋ ಆಗರ್ಭ ಶ್ರೀಮಂತರು ದೇವರ ನಮಗೆ ಎಲ್ಲ ಕೊಟ್ಟಿದ್ದಾನೆ.ನಮಗೆ ಎಂತೆಂಥ ಜನಗಳ ಸಂಪರ್ಕವಿದೆ ನಮ್ಮಂತವರು ಯಾರಿದ್ದಾರೆ??ಎಂದು ಕೂಪಮಂಡೂಕದಂತೆ ಇರುವ ಸ್ವಪ್ರತಿಷ್ಠೆಯ ಮೋಡಿಗಾರರಿಗೆ ಇಲ್ಲಿ ಒಂದು ಹತ್ತು ನಿಮಿಷ ಬಿಡಬೇಕು. ಅವರ ಅಹಂಕಾರ ವೆಲ್ಲ ಟಾಯ್ಲೆಟ್ ನೀರಿನಲ್ಲಿ ಫ್ಲಶ್ ಆದಂತೆ ಮಂಗ ಮಾಯವಾಗತ್ತೆ ಪಕ್ಕ.ತಾನು ತಮ್ಮಿಂದಲೇ ಎಂದು ಮೆರೆದವರೆಲ್ಲ ಮಣ್ಣಾಗಿದ್ದವರು ಕಾಣ ಸಿಗುತ್ತಾರೆ” ಎಂದು ಹುಬ್ಬೇರಿ ಮಾತನಾಡಿದ.

“ರೂಪ, ಹಣ, ಆಯಸ್ಸು, ಯೌವ್ವನ, ಉದ್ಯೋಗ, ವ್ಯವಹಾರ ಇವೆಲ್ಲವೂ ಕ್ಷಣಿಕ ಅಷ್ಟೇ. ಯಾವುದು ನಮ್ಮೊಟ್ಟಿಗೆ ಬರೋದಿಲ್ಲ. ಈ ಕ್ಷಣಮಾತ್ರ ನಮ್ಮದು.ಹೋಗುವಾಗಲು ಬೆತ್ತಲೆನೆ ಬರುವಾಗಲೂ ಬೆತ್ತಲೆ. ಬಂದು ಹೋಗೋ ಈ ಜೀವನದಲ್ಲಿ ಮನಸ್ಸಿನಲ್ಲಿ ಕಲ್ಮಶವನ್ನು ತುಂಬಿಕೊಂಡು ಆಂತರಿಕ ಯುದ್ಧವನ್ನೇ ಮಾಡ್ತಾನೆ ಇರ್ತೀವಿ ನಾವುಗಳು ಮನುಷ್ಯ ಜೀವಿಗಳು ” ಎಂದೆ..

ಸೋದರ “ಜೀವನನೇ ಅಷ್ಟೇ ಉಪೇಂದ್ರ ಎ ಪಿಚ್ಚರ್ ನಲ್ಲಿ ಹೇಳಿದ್ದಾನಲ್ಲ ಕೋಟಿ ಕೋಟಿ ಇದ್ರುನು ಹೊಟ್ಟೆಗ್ ತಿನ್ನೋದ್ ಅನ್ನನೆ ದೇಹ ಸೇರೋದ್ ಮಣ್ಣಿಗೆನೆ ಅಂತ. ಮುಂದಿನ ನಾವು ಇದೇ ತರ ಮಣ್ಣಲ್ಲಿ ಮಣ್ಣಾಗ್ತೀವಿ ಇರುವಷ್ಟು ವರ್ಷ ಜನರು ಜೊತೆಗೆ ಕುಟುಂಬ ಜೊತೆ ಚೆನ್ನಾಗಿರಬೇಕು ಇವತ್ತು ಇರೋರು ನಾಳೆ ಇರೋದಿಲ್ಲ ”

ನಾಗೇಶ್ : ಆದರೂ ಸಚಿನ್ ಈ ಜಾಗಕ್ಕೆ ಬರೋದಕ್ಕೆ ಧೈರ್ಯ ಬೇಕಪ್ಪ ಎಲ್ಲರ ಹತ್ತಿರ ಬರೋಕೆ ಆಗೋದಿಲ್ಲ…

ಪಟಪಟನೆ ಹೆಜ್ಜೆ ಇಟ್ಟು ನಡೆದುಹೋಗುವ ವೇಳೆ ಅಗೋಚರ ನಳಕೆಯಿಂದ ಗಾಳಿ ತೂರಿ ಹರಿಬಿಟ್ಟ ಹಾಗೆ ಆ ಗಾಳಿಯಲ್ಲಿ ನಮಗೆ ಯಾರು ಹೇಳಿದ ಹಾಗೆ ಅಲ್ಲಿನ ತರಂಗ ನಮಗೆ ಸೆಳೆದ ಹಾಗೆ ಭೀತಿ ಉಂಟುಮಾಡಲಾರಂಭಿಸಿತು. ಭಯದಿಂದ ಉದ್ವೇಗಕ್ಕೊಳಗಾಗಿ ಬೆವರಲಾರಂಭಿಸಿದೆ.

“ಅಣ್ಣ ಏನೋ ಒಂತರ ಹೇಳ್ದಂಗೆ ಆಗ್ತಾ ಇದೆ ಉಸಿರು ಕಾಲದ ಹಾಗೆ ಗಾಳಿಯಲ್ಲಿ ತೇಲಿ ಬಂದಂಗೆ ಅನುಭವ ಒಂತರಾ ಪ್ಯೂರ್ ನೆಗೆಟಿವ್ ರೇಡಿಯೇಷನ್ ಎಳೀತಾ ಇರೋ ಫೀಲ್ ”

“ನನಗೂ ಒಂತರ ಹಾಗೆ ಅನಿಸ್ತಾ ಇದೆ ಬಹುಶ ನಾವು ಪ್ರಥಮ ಬಾರಿಗಿಂತ ಜಾಗವನ್ನು ನೋಡುತ್ತಾ ಇರೋದಕ್ಕೆ ಏನೋ?? ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂತಹ ಸ್ಮಶಾನ ಎಲ್ಲೂ ಇಲ್ವೇ ಇಲ್ಲ. ಇಲ್ಲೆಲ್ಲ ಹುಗಿತಾರೆ ನಮ್ ಕಡೆ ಸುಡ್ತಾರೆ ಅಲ್ಲ..”

ಸ್ಪಷ್ಟ ಸೂರ್ಯನ ಬೆಳಕಿನಲ್ಲಿ ಕಿಡಿ ಹೊತ್ತಿಸಿದಂತ ಭಯ ಹೆಚ್ಚುತ್ತಲೇ ಹೋಯಿತು. ಅರ್ಧ ದಾರಿಗೆ ಬಂದು ತಲುಪಿದ್ದೆವು ಇನ್ನು ಮುಕ್ಕಾಲು ಕಿಮೀ ನಡೆಯುವುದು ಬಾಕಿ ಉಳಿದಿತ್ತು.

” ಫಸ್ಟ್ ಇಲ್ಲಿಂದ ಬೇಗ ಹೋಗ್ಬಿಡೋಣ. ಮೇನ್ ಗೇಟ್ ಬೇರೆ ತಲುಪಬೇಕು ಬೇಗ ಬೇಗ ನಡೀರಿ” ನಮ್ಮ ನಡೆ ಜೋರಾಯಿತು.

ಅದೇ ವೇಳೆ ಓರ್ವ ವಯೋವೃದ್ದ ಮಹಿಳೆ ಒಂದು ಕಿರಿದಾದ ಸಮಾಧಿಯ ಮುಂದೆ ಬಿಕ್ಕಳಿಸಿ ಬಿಕ್ಕಳಿಸಿ ಸ್ಮಶಾನಕ್ಕೆ ಪ್ರತಿಧ್ವನಿಸುವವಷ್ಟರಮಟ್ಟಿಗೆ ಜೋರಾಗಿ ರೋದಿಸುತ್ತಿದ್ದಳು. ಅಯ್ಯೋ ಅಯ್ಯೋ ಎಂದು ಹಣೆ ಚಚ್ಚಿಕೊಳ್ಳುತ್ತಿದ್ದಳು.

“ಯಾಕಮ್ಮ ನನ್ನನ್ನ ಬಿಟ್ಟು ಹೋದೆ… ಊ ಊ ಊ ಊ”
ನಾನು ಆಕೆಯತ್ತ ಗಮನಿಸುತ್ತಾ ಹೆಜ್ಜೆ ಹಾಕುತ್ತಿದ್ದದ್ದನ್ನು ಕಂಡು “ಆ ಕಡೆ ನೋಡ್ಬೇಡ ಬಾರೋ ಸುಮ್ನೆ ಎಂದು ಜೋರಾಗಿ ಗದರಿದ ”

ಏನು ಮಾತನಾಡಿದೆ ಅವಕ್ಕಾಗಿ ಪುನಃ ನೇರವಾಗಿ ನೆಲ ನೋಡುತ್ತಾ ಸಂಚರಿಸಿದೆ. ಒಂದು ಪುಟ್ಟ ತಿರುವು ದಾಟಿ ಮುನ್ನಡೆಯಬೇಕಾದರೆ ಐದಾರು ಪುಡಿ ರೌಡಿಗಳು ಇಸ್ಪೀಟ್ ಆಟ ಆಡ್ತಾ ಇದ್ದಾರೆ. ಅದು ಕೂಡ ಸ್ಮಶಾನದ ಮೇಲೆ ಕೂತು. ಇಬ್ಬರ ಕೈಯಲ್ಲಿ ಮಧ್ಯದ ಬಾಟಲಿ.

“ಥೂ ಇವರ ಜನ್ಮಕಿಷ್ಟು ಸ್ಮಶಾನನು ಬಿಡೋದಿಲ್ಲ ಎಲ್ಲೆಂದರಲ್ಲಿ ಇಸ್ಪೀಟ್ ಆಡ್ತಾರೆ ಎಲ್ಲೆಂದರಲ್ಲಿ ಕುಳಿತರೆ ಎಲ್ಲೆಂದರಲ್ಲಿ ಮಲಗುತ್ತಾರೆ ” ಎಂದು ಚಿಕ್ಕದಾಗಿ ಚೀಮಾರಿ ಹಾಕಿದೆ.

ಕಟ್ಟಕಡೆಯದಾಗಿ ಮುಖ್ಯದ್ವಾರ ಕಂಡಿತು.ಅಲ್ಲಿಂದ ಮಾರ್ಗದ ಮಧ್ಯ ಸಂಚರಿಸುವ ವಾಹನಗಳು ಕಾಣಹತ್ತಿತು.

” ಹಬ್ಬ ಅಂತೂ ಈ ರುದ್ರ ಭೂಮಿಯಿಂದ ಐದು ನಿಮಿಷಗಳ ತಾತ್ಕಾಲಿಕ ಬಂಧನದಿಂದ ಸ್ವಾತಂತ್ರ್ಯ ಸಿಕ್ಕಿದ ಸಮಾಧಾನ ನಮಗಾಯಿತು. ಗೇಟ್ ದಾಟಿ ಇನ್ನೇನು ಹೊರಗೆ ನಡಿಬೇಕು ಅನ್ನುವಷ್ಟರಲ್ಲಿ ವಿಲ್ಸನ್ ಗಾರ್ಡನ್ ಮುಕ್ತಿಧಾಮ ವಿದ್ಯುತ್ ಚಿತಾಗಾರ ಎಂದು ತಿಳಿ ನೀಲಿ ಬಣ್ಣದ ಅಕ್ಷರದಲ್ಲಿ ಬರೆದ ಸಾಲನ್ನು ಮನದಲ್ಲಿಯೇ ಓದಿದೆ. ನಮ್ಮನ್ನು ನೋಡಿದ ಸಿಬ್ಬಂದಿ” ಏನಾಗಬೇಕಿತ್ತು? ” ಎಂದು ಪ್ರಶ್ನಿಸಿದರು.

” ಹೌದು ಸಾರ್ ಸುಮಾರು 30 ವರ್ಷಗಳು ಆಗೋಯ್ತು. ಶಂಕರ್ ನಾಗ್ ಅವರ ಡೆಡ್ ಬೊಡಿಯನ್ನು ಇಲ್ಲ ಎಲೆಕ್ಟ್ರಿಕ್ ಬರ್ನರ್ ನಲ್ಲಿ ಬರ್ನ್ ಮಾಡಿದ್ದು. ಹಾಗೆ ಬರ್ನ್ ಮಾಡಿದ್ಮೇಲೆ ಕುಟುಂಬಕ್ಕೆ ಇಂತಿಷ್ಟು ಅಸ್ತಿ ಅಂತ ಮಡಿಕೆಯಲ್ಲಿ ತುಂಬಿ ಕೊಡ್ತೀವಿ. ಕುಟುಂಬಕರು ಅದನ್ನು ಗೋಕರ್ಣದ ತಾಮ್ರ ಗೌರಿಯಲ್ಲೊ ಅಥವಾ ಶ್ರೀರಂಗಪಟ್ಟಣದ ಕೆರೆಯಲ್ಲೊ ಅಥವಾ ನದಿ ಮತ್ತು ಸಾಗರ ಸೇರುವ ಸಂಗಮದಲ್ಲೊ ಹರಿಬಿಡ್ತಾರೆ”

” ಗೋಕರ್ಣ ನಮ್ ಪಕ್ಕದ ಊರು ಬರಿ ಎಂಟು ಕಿಲೋಮೀಟರ್”

” ಓಹೋ ಅಲ್ಲಿ ಅವರ ನೀವು ಸರಿ ”

ಥ್ಯಾಂಕ್ಯೂ ಎಂದು ಹೇಳಿ ವಿಲ್ಸನ್ ಗಾರ್ಡನ್ ಸ್ಮಶಾನದಿಂದ ಹೊರ ಬಂದಾಗ ನಾವು ಭೂಮಿ ಮೇಲೆ ಇರಲಿಲ್ಲ ಇಷ್ಟೊತ್ತು ಎಲ್ಲೋ ಇದ್ವಿ ಅಂತ ಭಾಸವಾಯಿತು. ಮತ್ತದೇ ಸಹಜ ಸ್ಥಿತಿಗೆ ಮರಳಿದೆವು.

ನಂತರ ಅಲ್ಲಿಂದ ಬಿಎಂಟಿಸಿ ಬಸ್ ಹತ್ತಿ ಟೈಗರ್ ಪ್ರಭಾಕರ್ ಅವರ ಸಮಾಧಿಯ ಚಿತ್ರೀಕರಣ ಮಾಡಲು ಇಂಡಿಯನ್ ಕ್ರಿಶ್ಚಿಯನ್ ಸಿಮೆಟ್ರಿಯ ಮುಂದೆ ಬಂದು ಇಳಿದೆವು.ಅಲ್ಲೂ ನಾಲ್ಕು ಉಚ್ಛಾಸನಗಳು. ಒಂದೊಂದು ಕಂಪಾರ್ಟ್ಮೆಂಟ್ ಎಕರೆಗಟ್ಟಲೆ ಇದೆ. ಆ ಎಕರೆಗಟ್ಲೆ ಸ್ಮಶಾನದಲ್ಲಿ ಎಲ್ಲಿ ಅಂತ ಹುಡುಕೋದು ಪ್ರಭಾಕರ್‌ ಅವರ ಸಮಾಧಿಯನ್ನ ಎಂಬುದು ನಮಗೆ ತಿಳಿಯಲೇ ಇಲ್ಲ. ಒಂದರ್ಧ ಗಂಟೆ ಅಲ್ಲೇ ಹುಡುಕಾಟದಲ್ಲಿಯೇ ಕಳೆದು ಹೋಯಿತು.ಅದೃಷ್ಟವಶಾತ್ ಮೊದಲನೇ ಕಮ್ಪಾರ್ಟ್ಮೆಂಟ್ ಗೆ ಹೋಗಿ ಸ್ಮಶಾನದ ಕಾವಲಿಗನನ್ನು ಕೇಳಿದಾಗ ಅಲ್ಲೇ ಮುಂದುಗಡೆ ಇದೆ ಹೋಗಿ ಸರ್ ಎಂದು ಕೈ ಸನ್ನೆ ಮಾಡಿ ತೋರಿಸಿದ. ಒಳ್ಳೆ ವಿಷಯ ಸಿಗ್ತಲ್ಲ ಎಂಬ ಖುಷಿಯ ನನಗಂತೂ ಪರಮಾನಂದ.ಏಕೆಂದರೆ ವೀಕ್ಷಕರು ಕೇಳಿದ್ದನ್ನೇ ಕೊಟ್ಟಿದ್ದೇನೆ ಅನ್ನೋ ತೃಪ್ತಿ. ಟೈಗರ್ ಪ್ರಭಾಕರ್ ಅವರ ಸಮಾಧಿಯ ಹತ್ತಿರ ಬಂದು ತಲುಪಿದೆವು. ಪಕ್ಕದಲ್ಲಿ ಅವರ ಮೊದಲ ಮಡದಿ ಮೇರಿ ಪ್ರಭಾಕರ್‌ರವರ ಸಮಾಧಿ ಕೂಡ ಇತ್ತು…

” ಸರ ಹತ್ತೇ ಹತ್ತು ನಿಮಿಷ. ಈಗ ಸ್ಮಶಾನದ ಬಾಗಿಲು ಮುಚ್ಚುತ್ತೀವಿ. ಗಂಟೆ ಆಗಲೇ ಆರು ಇಪ್ಪತ್ತಾಗಿದೆ, ಬೇಗ ಬೇಗ ನಿಮ್ಮ ಕೆಲಸ ಮುಗಿಸಿಕೊಳ್ಳಿ” ಎಂದರು..

ಹತ್ತರಿಂದ ಹದಿನೈದು ನಿಮಿಷ ಚಿತ್ರೀಕರಣ ಮಾಡಿ ಪ್ರಭಾಕರ್ ಅವರ ಸಾಧನೆ ಬದುಕಿನ ಕುರಿತು ಸಂಕ್ಷಿಪ್ತವಾಗಿ ಮಾತುಗಳನ್ನಾಡಿ ಆ ಮಸುಕು ಬೆಳಕಿನಲ್ಲಿ ವಿಡಿಯೋವನ್ನು ಚಿತ್ರೀಕರಿಸಿದೆ. ಸಹೋದರ ಸಚಿನ್ ಮತ್ತು ಆತ್ಮೀಯ ಸ್ನೇಹಿತ ನಾಗೇಶ್ ಇಬ್ಬರು ಪ್ರತ್ಯಕ್ಷವಾಗಿ ನನ್ನ ಕಾರ್ಯಕ್ಕೆ ನೆರವಾದರು. ಹೇಗೋ ಹತ್ತು ನಿಮಿಷದಲ್ಲಿ ಚಿತ್ರೀಕರಣ ಮಾಡಿ ಪ್ರಭಾಕರ್ ಅವರ ಸಮಾಧಿಯ ಮೇಲೆ ಒಂದು ಹೂವಿಟ್ಟು ನಮ್ಮ ಸ್ನೇಹಿತ  ನಿರ್ದೇಶಕನಾಗುವಂತೆ ಆಶೀರ್ವದಿಸಿ ಎಂದು ನಾನು ನನ್ನ ಅಣ್ಣ ಸಚಿನ್ ಕೇಳಿಕೊಂಡೆವು.ಆತ ನಮ್ಮನ್ನು ನೋಡಿ ನಸುನಕ್ಕ. ಗೇಟ್ ಹಾಕುವ ಶಬ್ದ ನಮಗೆ ಕೇಳಿತು. ಕೈಗಡಿಯಾರ ನೋಡಿದಾಗ ಸರಿಯಾಗಿ ಸಂಜೆ 6:30. ಓ ಬಂದ್ವಿ ಬಂದ್ವಿ ನಾವು ಹೊರಡುತ್ತೇವೆ ಎಂದು ಓಡಲಾರಂಭಿಸಿದವು. ಸ್ಮಶಾಣದ ಕಾವಲಿಗ ” ಸರ್ ಹಾಗೆ ಹೋಗ್ತಿದ್ದಿರಲ್ಲ ಸರ್, ಇಲ್ಲಿ ಏನಾದರೂ ಕೊಡಿ ಸರ್ ” ಎಂದು ಅಂಗಲಾಚಿ ಕೇಳಿಕೊಂಡ.

ಅವರಿಗೆ ಇಂತಿಷ್ಟು ರೂಪಾಯಿ ಅಂತ ಕೊಟ್ಟೆವು. ಆ ವೇಳೆ ಖ್ಯಾತ ಪತ್ರಕರ್ತರಾದ ಗಣೇಶ್ ಕಾಸರಗೋಡು ರವರ ಶುಭಪುಸ್ತಕ ಬಿಡುಗಡೆಯಾಗಿ ಮೂರು ತಿಂಗಳಾಗಿತ್ತು. ಪುಸ್ತಕವನ್ನು ಖರೀದಿಸಲು ನಾವುಗಳು ಶ್ರೀನಗರದಲ್ಲಿರುವ ಪರಮಾತ್ಮಿಯ ಪರಶಿವಪ್ಪನವರ ಸ್ನೇಹ ಬುಕ್ ಹೌಸ್ ಮಳಿಗೆಗೆ ಬಂದ ಕೆಲಸವನ್ನೆಲ್ಲ ನಿರ್ವಿಘ್ನವಾಗಿ ನೆರವೇರಿದ ಸಂತೃಪ್ತಿಯಿಂದ ಹೊರಟೆವು.

ಒಂದು ಕಾಲದಲ್ಲಿ ವಜ್ರದಂತಹ ಕಾಯವನ್ನು ಹೊಂದಿ ತಮ್ಮ ಗಡಸು ಶರೀರ ಮತ್ತು ಶಾರೀರ್ಯದಿಂದ ಇಡೀ ದಕ್ಷಿಣ ಭಾರತದ ಚಿತ್ರರಂಗವನ್ನು ಆಳಿದ ಸೂಪರ್ ಸ್ಟಾರ್ ಪ್ರಭಾಕರ್ ತಮ್ಮ ಜೀವನದ ರಸಯಾತ್ರೆಯನ್ನ ಹೇಗೆ ಮುಗಿಸಿ ಅರೆವಯಸ್ಸಿನಲ್ಲಿ ನಿರ್ಗಮಿಸಿದರು ಎಂದು ಬಳಿಕ ತಿಳಿದುಕೊಂಡಾಗ ಅವರ ಸಮಾಧಿಯ ವಿಡಿಯೋ ನಾನೇ ಒರುವ ವೀಕ್ಷಕನಾಗಿ ಕಂಡು ಆಶ್ಚರ್ಯವಾಯಿತು .ಡಾ. ರಾಜಕುಮಾರ್, ಶಂಕರ್ ನಾಗ್ ,ವಿಷ್ಣುವರ್ಧನ್ ,ರಜನಿಕಾಂತ್, ಕಮಲ್ ಹಾಸನ್, ಅಮಿತಾಬ್ ಬಚ್ಚನ್, ಎಂಜಿಆರ್, ಶಿವಾಜಿ ಗಣೇಶನ್, ಚಿರಂಜೀವಿ ಮೋಹನ್ ಲಾಲ್, ಮುಮ್ಮುಟ್ಟಿ ಅಂತಹ ಭಾರತ ಚಿತ್ರರಂಗ ಕಂಡ ಘಟಾನುಘಟಿ ನಾಯಕರೊಡನೆ ತೆರೆ ಹಂಚಿಕೊಂಡಂತಹ ಏಕೈಕ ನಟರಿದ್ದರೆ ಅದು ಪ್ರಭಾಕರ್ ಅವರು ಮಾತ್ರವೇ ಎಂದು ಈ ವಿಡಿಯೋ ಹರಿಬಿಟ್ಟ ಮೇಲೆ ತಿಳಿಯಿತು. ಜನ ಇವತ್ತಿಗೂ ಅವರಿಗೆ ಯಾವ ಮಟ್ಟಕ್ಕೆ ಪ್ರೀತಿಸುತ್ತಾರೆ ಅಭಿಮಾನಿಸ್ತಾರೆ ಎಂದು ಮನದಟ್ಟಾಯಿತು. ಅವರಂತಹ ಫೈಟರು ಮತ್ತೆ ಹುಟ್ಟೋದಿಲ್ಲ ಎಂಬ ಸತ್ಯ ಸತ್ಯತೆಯ ಅನಾವರಣವಾಯಿತು. ವಿಡಿಯೋ ಏಳು ಲಕ್ಷಕ್ಕೂ ಅಧಿಕ ವೀಕ್ಷಣೆಯಾಗಿ ಚಂದಾದಾರರ ಸಂಖ್ಯೆಯನ್ನು ಹೆಚ್ಚಿಸಿದ್ದಲ್ಲದೆ ಒಂದೊಳ್ಳೆ ಅಭಿಪ್ರಾಯದಿಂದ ನನಗೆ ಇನ್ನು ಹೆಚ್ಚಿನ ಕೆಲಸ ಮಾಡಲು ಜನರ ಪ್ರೀತಿಯನ್ನು ಗಳಿಸಲು ಹುಮ್ಮಸ್ಸು ಬಂದಿತು.


  • ನಿತಿನ್ ಅಂಕೋಲಾ

 

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW