ಕರಾಟೆಕಿಂಗ್ ಶಂಕರನಾಗ್ ಅವರು ಕನ್ನಡ ಚಿತ್ರರಂಗದ ಆಭರಣದಂತಿದ್ದರು, ಕನಸುಗಳ ಬೆನ್ನಟ್ಟಿ, ಕಾಲಿಗೆ ಚಕ್ರಕಟ್ಟಿಕೊಂಡು ಅಹೋರಾತ್ರಿ ದುಡಿದ ಜಂಗಮ ಈ ಶಂಕರಣ್ಣ.ಇಂದು ಶಂಕರನಾಗ್ ಪುಣ್ಯ ಸ್ಮರಣೆ. ಖ್ಯಾತ ಸಿನಿ ಬರಹಗಾರ ಗಣೇಶ ಕಾಸರಗೋಡು ಲೇಖನಿಯಲ್ಲಿ ಶಂಕರಣ್ಣ ಬ್ರೈಲ್ ಲಿಪಿಯ ಕುರಿತು. ಮುಂದೆ ಓದಿ…
ಕನ್ನಡ ಚಿತ್ರರಂಗದ ಆಭರಣದಂತಿರುವ ಶಂಕರನಾಗ್ ಈಗಲೂ ಬದುಕಿದ್ದಿದ್ದರೆ 67 ವರ್ಷ ವಯಸ್ಸಾಗಿರುತ್ತಿತ್ತು! ಶಂಕರನಾಗ್ ಹುಟ್ಟಿದ್ದು 1954ರಲ್ಲಿ. ನಿಧನರಾದದ್ದು 1990ರಲ್ಲಿ. ಒಟ್ಟು ಕೇವಲ 35 ವರ್ಷ, 10 ತಿಂಗಳು, 21 ದಿನಗಳ ಕಾಲದ ಬದುಕಿನಲ್ಲಿ ಕನ್ನಡ ಚಿತ್ರರಂಗದ ಮೂರು ಲೋಕವನ್ನೇ ಅಳೆದು ಸುರಿದು ತೂಗಿದ ಸಾಹಸಿ ಈ ಕರಾಟೆಕಿಂಗ್!

ಫೋಟೋ ಕೃಪೆ : Deccan herald
ನಿಜಕ್ಕೂ ಇದು ಶತಮಾನದ ಅಚ್ಚರಿ. ಒಬ್ಬ ವ್ಯಕ್ತಿಯ ನೆನಪು ಅವನು ಶಾರೀರಿಕವಾಗಿ ನಮ್ಮ ಕಣ್ಣಿಂದ ಮರೆಯಾಗಿ 31 ವರ್ಷ ಕಳೆದರೂ ಆ ವ್ಯಕ್ತಿ ಜೀವಂತ ವ್ಯಕ್ತಿಗಳಿಗಿಂತ ಜನಪ್ರಿಯನಾಗಿರುವುದು ಅದ್ಭುತವಲ್ಲವೇ? ಆಟೋ, ಆಟೋ ಸ್ಟ್ಯಾಂಡ್, ಬ್ಯಾನರ್, ಸ್ಮಾರಕಗಳಲ್ಲಿ ನಿತ್ಯನೂತನವಾಗುವುದು ನಿಜಕ್ಕೂ ವಿಸ್ಮಯ ಹುಟ್ಟಿಸುವ ವಿಚಾರವಲ್ಲವೇ? “ನ ಭೂತೋ ನ ಭವಿಷ್ಯತಿ” – ಎಂಬ ಉದ್ಗಾರಕ್ಕೆ ಯೋಗ್ಯನಾದ ಒಬ್ಬ ವ್ಯಕ್ತಿ ಇದ್ದರೆ ಅದು ಈ ಅಮರಜೀವಿ ಶಂಕರನಾಗ್!

ಕನ್ನಡ ಚಿತ್ರರಂಗದಲ್ಲಿ ಬಾಳಿ ಬದುಕಿದ್ದು ಕೇವಲ 12 ವರ್ಷಗಳ ಕಾಲ. ಭಾಗಿಯಾದದ್ದು 90 ಚಿತ್ರಗಳಲ್ಲಿ. ಮೊದಲಿನಿಂದ ಕೊನೆಯ ಚಿತ್ರದ ತನಕವೂ ಸೂಪರ್ ಸ್ಟಾರ್! ಅಭಿನಯಿಸಿದ ಮೊದಲ ಚಿತ್ರ : “ಒಂದಾನೊಂದು ಕಾಲದಲ್ಲಿ”. ಮೊದಲ ಚಿತ್ರದ ಅಭಿನಯಕ್ಕೆ ರಾಷ್ಟ್ರಪ್ರಶಸ್ತಿಯ ಗೌರವ. “#ಮಾಲ್ಗುಡಿ_ಡೇಸ್” – ಶಂಕರ್ ವೃತ್ತಿ ಬದುಕಿನ ಉತ್ತುಂಗ ಕೃತಿ. “ಸಂಕೇತ್ ಎಲೆಕ್ಟ್ರಾನಿಕ್ಸ್” – ಶಂಕರ್ ಸಾಧನೆಯ ಮೈಲುಗಲ್ಲು! “ಕಂಟ್ರಿ ಕ್ಲಬ್”, ಮೆಟ್ರೋ ರೈಲಿನ ಯೋಜನೆ, ನಂದಿಬೆಟ್ಟಕ್ಕೆ ರೋಪ್’ವೇ, ಸ್ವಚ್ಛ ರಾಜಕಾರಣ…ಇನ್ನೂ ಏನೇನೋ ಕನಸು ಕಂಡವ. ಈ ಕನಸುಗಳ ಬೆನ್ನಟ್ಟಿ, ಕಾಲಿಗೆ ಚಕ್ರಕಟ್ಟಿಕೊಂಡು ಅಹೋರಾತ್ರಿ ದುಡಿದ ಜಂಗಮ ಈ ನಮ್ಮ ಶಂಕರ!
ಸಾಮಾನ್ಯ ಸಾಧಕ ಒಂದಿಡೀ ಜನ್ಮದಲ್ಲಿ ಸಾಧಿಸಬಹುದಾಗಿದ್ದ ಸಾಧನೆಯನ್ನು ಕೇವಲ 35 ವರ್ಷಗಳಲ್ಲಿ ಮಾಡಿ ಮುಗಿಸಿದ ಮಹಾರಥಿ ಈ ನಮ್ಮ ಕರಾಟೆಕಿಂಗ್!
ಶಂಕರನಾಗ್ ನೆನಪು ಕನ್ನಡ ಚಿತ್ರರಂಗದ ಕ್ರೀಯಾಶೀಲರಿಗೆ ನಿತ್ಯೋತ್ಸವ! ಅವರ ಕೃತಿ, ಕ್ರೀಯಾಶೀಲತೆ ದಾರಿದೀಪ! ಆ ಮೂಲಕ ಪ್ರತಿಯೊಬ್ಬರಲ್ಲೂ ಶಂಕರ್ ಮತ್ತೆ ಹುಟ್ಟಿ ಬರಬೇಕು….
ಇದೊಂದು ವಿಶೇಷ ಗೌರವ. ಜಗತ್ತಿನ ಹಲವು ಭಾಷೆಗಳ ಪುಸ್ತಕಗಳು ಇತರ ಹಲವು ಭಾಷೆಗಳಿಗೆ ಭಾಷಾಂತರಗೊಂಡಿರಬಹುದು. ಆದರೆ ಕನ್ನಡದ ಪುಸ್ತಕವೊಂದು ಬ್ರೈಲ್ ಲಿಪಿಗೆ ಭಾಷಾಂತರಗೊಂಡಿರುವುದು ಸಿನೆಮಾ ಪುಸ್ತಕ ಲೋಕದಲ್ಲೊಂದು ಕೌತುಕ! ಈ ಕೌತುಕಕ್ಕೆ ಕಾರಣವಾದ ಪುಸ್ತಕದ ಹೆಸರು : “ನೆನಪಿನಂಗಳದಲ್ಲಿ ಶಂಕರನಾಗ್”. ನಾನು ಬರೆದಿರುವ ಈ ಪುಸ್ತಕದ ಅಸಂಖ್ಯ ಕಾಪಿಗಳು ಈಗಾಗಲೇ ರಾಜ್ಯಾದ್ಯಾಂತ ಇರುವ ಬುಕ್ ಸ್ಟಾಲ್’ಗಳಲ್ಲಿ ಮಾರಾಟವಾಗಿದೆಯಾದರೂ ಬ್ರೈಲ್ ಲಿಪಿಯ ಪುಸ್ತಕದ ಗೌರವವೇ ಬೇರೆ. 2010ರಲ್ಲಿ ಮೊದಲ ಮುದ್ರಣ ಕಂಡ ಈ ಶಂಕರನಾಗ್ ಬಗೆಗಿನ ಪುಸ್ತಕವನ್ನು ಆಗ “ಸ್ನೇಹಾ ಬುಕ್ ಹೌಸ್”ನ ಪರಶಿವಪ್ಪ ಮುದ್ರಿಸಿದ್ದರು. ಐದು ವರ್ಷಗಳ ನಂತರ ಅಂದರೆ 2015ರಲ್ಲಿ ಇದನ್ನು ಮರು ಮುದ್ರಿಸಲೆಂದು ಹಕ್ಕು ಪಡೆದದ್ದು ನನ್ನದೇ ಸಂಸ್ಥೆಯಾದ “ಅಮ್ಮ ಪ್ರಕಾಶನ”! ಇದನ್ನು ಬ್ರೈಲ್ ಲಿಪಿಗೆ ಭಾಷಾಂತರಿಸಲು ಮುಂದೆ ಬಂದವರೆಂದರೆ ಮುದಿಗೆರೆ ರಮೇಶ್ ಕುಮಾರ್. ತಮ್ಮ ಗೆಳೆಯ ಶ್ರೀನಿವಾಸುಲು ಮೂಲಕ ನನ್ನನ್ನು ಸಂಪರ್ಕಿಸಿದ ಮುದಿಗೆರೆಯವರು ಅಂಧ ಶಾಲಾ ಮಕ್ಕಳಿಗಾಗಿ ಶಂಕರನಾಗ್ ಬದುಕನ್ನು ಓದಲು ಅನುಕೂಲವಾಗುವಂತೆ ಬ್ರೈಲ್ ಲಿಪಿಗೆ ಅಳವಡಿಸಿಕೊಳ್ಳಲು ಒಪ್ಪಿಗೆ ಪಡೆದುಕೊಂಡರು. ಹಾಗೆ ಸಿದ್ಧಗೊಂಡದ್ದೇ ಈ ಬ್ರೈಲ್ ಲಿಪಿಯ ಪುಸ್ತಕ! ಕಣ್ಣಿಲ್ಲದವರ ಕಣ್ಮಣಿಯಾಗಿರುವ ಶಂಕರನಾಗ್ ಪುಣ್ಯ ಸ್ಮರಣೆ …ಮತ್ತೆ ಹುಟ್ಟಿ ಬಾ ಗೆಳೆಯಾ…
- ಗಣೇಶ ಕಾಸರಗೋಡು (ಖ್ಯಾತ ಸಿನಿ ಬರಹಗಾರರು, ಪತ್ರಕರ್ತರು, ಹಳೆಯ ಸಿನಿಮಾದ ಕೊನೆಯ ಫ್ರೆಮ್ ‘ಶುಭಂ’ ಕೃತಿಯ ಲೇಖಕರು)
