ದಾಸರ ಕೃತಿಗಳಲ್ಲಿ ಶಿವ : ಸುಜಾತಾ ರವೀಶ್

ದಾಸ ಸಾಹಿತ್ಯ ಕನ್ನಡ ವಾಂಙ್ಮಯಕ್ಕೆ ಒಂದು ಅಪರೂಪದ ಕೊಡುಗೆಯಾಗಿದೆ. ವಿಷ್ಣು ಹಾಗೂ ಅವನ ಅವತಾರಗಳ ಭಕ್ತಿಯ ಬೋಧಕರು ಈ ಹರಿದಾಸರು. ಕನ್ನಡದಲ್ಲಿ ದಾಸ ಎಂದರೆ ಸೇವಕ ಹಾಗೂ ಇವರಿಗೆ ಸಂಬಂಧಪಟ್ಟ ಸಾಹಿತ್ಯವನ್ನು ದಾಸ ಸಾಹಿತ್ಯ ಎನ್ನುತ್ತಾರೆ. ಲೇಖಕಿ ಸುಜಾತಾ ರವೀಶ್ ಅವರು ಶಿವನ ಮಹಿಮೆ ಕುರಿತು ಬರೆದ ಲೇಖನವನ್ನು ತಪ್ಪದೆ ಮುಂದೆ ಓದಿ …

ದಾಸ ಸಾಹಿತ್ಯ ಕರ್ನಾಟಕದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಜೀವನದಲ್ಲಿ ಅಳಿಸಲಾರದ ಛಾಪು ಮೂಡಿದೆ ಎಂದರೆ ಅತಿಶಯೋಕ್ತಿ ಏಏನಲ್ಲ.ಭಗವಂತನನ್ನು ಸಾಮಗಾನ ಪ್ರಿಯ ಎಂದು ವರ್ಣಿಸಿ ಸಂಗೀತದ ಮೂಲಕ ಭಕ್ತಿಯಿಂದ ಅವನನ್ನು ತಲುಪುವ ಒಂದು ಉತ್ತಮ ಮಾರ್ಗವಾಗಿದೆ. ಮುಖ್ಯವಾಗಿ ದಾಸರ ಸಂಬಂಧ ವಿಷ್ಣುವಿನೊಡನಾದರೂ ಅವರು ಸಗುಣ ಬ್ರಹ್ಮ ಸ್ವರೂಪ ಎಂದು ಕರೆಯುವ ಹಿಂದೂ ದೇವರುಗಳ ಇತರ ರೂಪಗಳ ಮೇಲೆ ಹಾಡನ್ನು ರಚಿಸಿದ್ದಾರೆ ಎಂಬುದು ಗಮನಾರ್ಹ .

ವ್ಯಾಸರಾಜರಂತಹ ಪೀಠಾಧಿಪತಿಗಳಿಂದ “ದಾಸರೆಂದರೆ ಪುರಂದರ ದಾಸರಯ್ಯ” ಎಂದು ಕೀರ್ತಿಸಿಕೊಂಡ ಅಪರೂಪದ ದಾಸರು ಪುರಂದರದಾಸರು. ಪುರಂದರಗಡದ ವರದಪ್ಪ ನಾಯಕ ಲೋಭವೆಂಬ ಲೋಪವನ್ನು ನಿವಾರಿಸಿಕೊಂಡು ವಿರಕ್ತಿಯಿಂದ ಹರಿಯ ಕಾಣಲು ಹರಸಾಹಸ ಗೈದು ಪುರಂದರ ದಾಸರಾದರು. ಪುರಂದರ ವಿಠಲ ಎಂಬ ಅಂಕಿತದಿಂದ ನಾಲ್ಕು ಲಕ್ಷ ಎಪ್ಪತ್ತೈದು ಸಾವಿರ ಕೀರ್ತನೆಗಳನ್ನು ರಚಿಸಿದ್ದಾರೆ ಎಂಬ ಎಂಬ ಪ್ರತೀತಿ ಉಂಟು. ಆದರೆ ಎಲ್ಲವೂ ಲಭ್ಯವಾಗಿಲ್ಲ.

ಪುರಂದರದಾಸರು ವಿಷ್ಣುವಿನ ಬಗ್ಗೆ ಮಾತ್ರವಲ್ಲದೆ ಹನುಮಂತ ಸರಸ್ವತಿ ಗಣಪತಿ ಶಿವ ಇನ್ನಿತರ ದೇವರುಗಳ ಬಗ್ಗೆಯೂ ಸಹ ಕೀರ್ತನೆಗಳನ್ನು ರಚಿಸಿದ್ದಾರೆ. ಪ್ರಸ್ತುತ ಲೇಖನದಲ್ಲಿ ಪುರಂದರದಾಸರ ಶಿವನ ಬಗ್ಗೆ ಸಂಬಂಧಪಟ್ಟ ಕೃತಿಗಳ ಬಗ್ಗೆ ಒಂದು ನೋಟ ಹರಿಸೋಣ.

ದಾಸರ ಕೃತಿಗಳಲ್ಲಿ ಶಿವನು ಭವರೋಗವೈದ್ಯನೆಂದು ಮನೋ ಚಿಂತೆ ಪರಿಹಾರಕನೆಂದೂ ಚಿತ್ರಣಗೊಂಡಿದ್ದಾನೆ. ವಿಷ್ಣು ಪಾರಮ್ಯಕ್ಕೆ ಪ್ರಾಶಸ್ತ್ಯವಿದ್ದರೂ ಶಿವನನ್ನು ಯಾವ ಹರಿದಾಸರೂ ಕಡೆಗಣಿಸಿಲ್ಲ. ದಾಸರ ಕೃತಿಗಳಲ್ಲಿನ ಈ ಹರಭಕ್ತಿ ದಾಸ ಸಾಹಿತ್ಯದ ಭಕ್ತಿಪಥದ ವೈಶಾಲ್ಯತೆಯನ್ನು ಎತ್ತಿ ತೋರಿಸುತ್ತದೆ.

ಚಂದ್ರ ಚೂಡ ಶಿವಶಂಕರ

ಇದು ಪುರಂದರ ದಾಸರ ಅತ್ಯಂತ ಜನಪ್ರಿಯವಾದ ಶಿವಸ್ತುತಿ. ಶಿವನನ್ನು ಪಾರ್ವತಿ ರಮಣ ಪಿನಾಕ ಧನುಧರ ಗಜ ಚರ್ಮಾಂಬರ ಎಂದೆಲ್ಲ ವರ್ಣಿಸುತ್ತಾರೆ. ಅಮೃತಮಥನ ಸಮಯದಲ್ಲಿ ವಿಷವನ್ನು ಭುಜಿಸಿದವ ಕಾಮನನ್ನು ಕ್ರೋಧದ ಕಣ್ತೆರೆದು ಕೊಂದವನು ಎಂದು ಹೊಗಳುತ್ತಾರೆ.‌ ಹಾಗೆಯೇ ಬಾಲಮೃಕಂಡಜನ ಕಾಲು ಎಳೆದಾಗ ಪಾಲಿಸಿದವನು, ಕಪಾಲ ಪಿಡಿದು ಭಿಕ್ಷೆ ಬೇಡುವ ದಿಗಂಬರನು ನೀಲಕಂಠ ಎಂದೆಲ್ಲಾ ಸ್ತುತಿಸುತ್ತ ಮೋಹಿನಿ ರೂಪದ ವಿಷ್ಣುವಿಗೆ ಮರುಳಾದವ ಎಂದು ಹೇಳುತ್ತಾರೆ. ಕಾವೇರಿ ತೀರದ ಕುಂಭಾಪುರವಾಸ ರುದ್ರಾಕ್ಷಿ ಭಸ್ಮವ ಧರಿಸಿದ ವೈಷ್ಣವನು ನೀನೆ ಉರಗಭೂಷಣ ಎಂದೆಲ್ಲ ವರ್ಣಿಸುತ್ತ ತಮ್ಮ ಅಂಕಿತನಾಮ ಪುರಂದರ ವಿಠಲನಿಗೆ ಪ್ರಾಣಪ್ರಿಯ ನೀನು ಎಂದು ಗೀತೆಯನ್ನು ಕೊನೆಗೊಳಿಸುತ್ತಾರೆ. ಶ್ರೀ ರಾಮ ನಾಮದ ಮಹತ್ವವನ್ನು ಶಿವ ಪಾರ್ವತಿಗೆ ಬೋಧಿಸುವ ಸಂದರ್ಭದ ಉಲ್ಲೇಖವು ಇದೆ. ರುದ್ರಾಕ್ಷಿ ಭಸ್ಮವನ್ನು ಧರಿಸಿದ್ದರೂ ಶಿವ ಪರಮ ವೈಷ್ಣವ ಎಂಬ ನಿಲುವನ್ನು ಇಲ್ಲಿ ಗಮನಿಸಲೇಬೇಕು.

ಜಂಗಮರು ನಾವು ಜಗದೊಳು

ಮಧ್ವಾಚಾರ್ಯರ ತತ್ವ ಸಿದ್ಧಾಂತದ ಪ್ರಕಾರ ಗುರುವಿನ ಸ್ಥಾನದಲ್ಲಿ ನಿಲ್ಲುವವನು ಶಿವ. ಶಿವನು ಮನೋನಿಯಾಕನಾದ ಗುರುವಾಗಿ ಹರಿದಾಸ ಪ್ರಜ್ಞೆಯಲ್ಲಿ ನೆಲೆ ನಿಂತ ದೈವ ವಾಗಿದ್ದಾನೆ. ಮಾನವ ಮನಸ್ಸುಗಳ ಆಗು ಹೋಗುಗಳ ಚಿಂತೆ ಚಿಂತನೆಗಳನ್ನು ನಡೆಸುವ ಯಜಮಾನ್ಯ ದೈವವೆಂದು ಹರಿದಾಸರು ಅವನನ್ನು ಆರಾಧಿಸಿದ್ದಾರೆ. ಪ್ರಸ್ತುತ ಈ ದೇವರನಾಮದಲ್ಲೂ ನಾವು ಜಗದೊಳಗೆ ಜಂಗಮರು ಮಂಗಳವಂತರು ಎಂದು ಹೇಳುತ್ತಾರೆ.‌ ಗುರು ಹರನೆಂಬ ಗುರು ದ್ರೋಹ ಮಾಡಿದ ಪರವಾದಿಯು ರೌರವ ನರಕದಲ್ಲಿ ಮುಳುಗುತ್ತಾನೆ ಎನ್ನುತ್ತಾರೆ. ವಿಶ್ವೇಶ ವಿಭೂತಿ ನಮಗುಂಟು ನಾಮ ಮುದ್ರೆಗಳಂತೆ ಅವು ಸಹ ಎನ್ನುವ ದಾಸರು ಭಾಗೀರಥಿಯ ಸ್ನಾನವು ನಮಗುಂಟು ನಾವು ಮಹಂತನ ಮಠದವರು ಎನ್ನುತ್ತಾರೆ. ವೀರಭದ್ರನ ಪ್ರಿಯ ಭಕ್ತರು ವಿರಕ್ತರು ಶೀಲವಂತರು ನಾವು ಎಂದು ಹೇಳುತ್ತಾ ಪುರಂದರ ವಿಠಲನ ಕಾರುಣ್ಯಕ್ಕೆ ಮುಖ್ಯ ಪಾತ್ರರಾದವರು ಎಂದು ಭೋದಿಸುತ್ತಾರೆ. ಅಷ್ಟೇನೂ ಪ್ರಚಲಿತವಲ್ಲದ ದೇವರ ನಾಮ ಇದು. ದಾಸ ತತ್ವ ಜಂಗಮ ತತ್ವಗಳು ಪರಸ್ಪರ ಪೂರಕ ಎಂದು ಸಾರುವಂತ ವಿಶಾಲ ಮನೋಭಾವದ ಗೀತೆಯಂತೆ ತೋರುತ್ತದೆ.

ಎಂಥಾ ಚೆಲುವಗೆ ಮಗಳನ್ನು ಕೊಟ್ಟನು

ಗಿರಿಜೆಯು ಶಿವನಿಗೆ ಒಲಿದ ನಂತರ ಗಿರಿರಾಜನು ಅವಳನ್ನು ಶಿವನಿಗೆ ಮದುವೆ ಮಾಡಿಕೊಡುತ್ತಾನೆ . ಆ ಸಂದರ್ಭದಲ್ಲಿ ಶಿವನ ವರ್ಣನೆಯನ್ನು ಮಾಡುವಂತ ಗೀತೆ ಇದು. ಐದು ಮುಖ ಮೂರು ಕಣ್ಣುಗಳ ವಿಪರೀತದವನು, ಕೊರಳೊಳಗೆ ರುಂಡಮಾಲೆ ಹಾಗೂ ಹಾವನ್ನು ಧರಿಸಿದವನನ್ನು ನೋಡಮ್ಮ ಎಂದು ಅಚ್ಚರಿ ವ್ಯಕ್ತಪಡಿಸುತ್ತಾರೆ. ತಲೆ ಜಟೆಯಾಗಿ ಹೊಳೆಯುತ್ತಿದೆ, ಹಲವು ಕಾಲದ ತಪಸ್ಸು ನಡೆಸಿದ ರುದ್ರನ ಮೈಯ ವಿಭೂತಿ ನೋಡು ಎಂದು ವರ್ಣಿಸುತ್ತಾರೆ . ಭೂತ ಪ್ರೇತ ಪಿಶಾಚಿಗಳೆಲ್ಲ ಇವನ ಪರಿವಾರವಾದರೂ ಇವನ ನಾಮ ಒಂದೇ ಸಾಕು ಮಂಗಳಕರ ಎನ್ನುತ್ತಾರೆ . ಸ್ಮಶಾನವಾಸಿ, ಗಜ ಚರ್ಮಾಂಬರಧರ ಎಂದೆಲ್ಲ ವರ್ಣಿಸಿ ನಂದಿವಾಹನ ನೀಲಕಂಠ ಇವನು ನಿರ್ಗುಣ ನೋಡಮ್ಮ ಎಂದು ಆಶ್ಚರ್ಯದಿಂದ ಬಣ್ಣಿಸುವ ಈ ಈ ಹಾಡು ಶಿವನ ವರ್ಣನೆಯನ್ನು ತುಂಬಾ ಸಮರ್ಪಕವಾಗಿ ಮಾಡಿ ಪೂರೈಸುತ್ತದೆ.

ಬೂಚಿ ಬಂದಿದೆ ರಂಗ

ಕಂದ ಕೃಷ್ಣನನ್ನು ಮಲಗಿಸುವ ಪ್ರಯತ್ನದಲ್ಲಿ ಯಶೋದೆ ಅವನನ್ನು ಹೆದರಿಸುವ ಸಲುವಾಗಿ ಬೂಚಿ ಬಂದಿದೆ ಎಂದು ಶಿವನನ್ನು ಕುರಿತು ಹೇಳುತ್ತಾಳೆ. 4 ಮುಖದ ಗುಮ್ಮನೊಂದು ಗೋಕುಲಕ್ಕೆ ಬಂದಿದೆ ಮೂರು ಕಣ್ಣುಳ್ಳ ಅದು ಊರೆಲ್ಲಾ ಸುತ್ತಿ ಬಂದು ಮನೆಯ ಬಾಗಿಲಲ್ಲಿ ನಿಂತಿದೆ. ಗಲಾಟೆ ಮಾಡುವ ಪೋರರನ್ನು ಎಳೆದೊಯ್ಯುತ್ತದೆ ಎಂದು ಮಗುವನ್ನು ಬೆದರಿಸುತ್ತಾಳೆ. ಇಲ್ಲಿ ಅವತಾರವೆತ್ತಿದ ವಿಷ್ಣು ವೈಕುಂಠವನ್ನು ತ್ಯಜಿಸಿ ಇಲ್ಲಿ ಗೋಕುಲಕ್ಕೆ ಬಂದಿರುವನು. ಅವನನ್ನು ಹುಡುಕಿಕೊಂಡು ಕರೆದುಕೊಂಡು ಹೋಗಲು ಶಿವ ಹೊರಗೆ ಬಾಗಿಲಲ್ಲಿ ನಿಂತಿದ್ದಾನೆ ಎಂಬ ಗೂಡಾರ್ಥವು ಅಡಗಿದೆ.

ಕಾರುಣ್ಯ ಮೂರ್ತಿಯ ಕಂಗಳು ಮೂರುಳ್ಳ ದೊರೆಯೇ

ಇದು ಸಹ ಅಷ್ಟೇನು ಪ್ರಚಲಿತವಿಲ್ಲದ ಕೃತಿ. ಶಿವ ಎಂದರೆ ಆದಿ ಗುರು ಎನ್ನುವ ತತ್ವ ಮಧ್ವ ಮತದಲ್ಲಿಯೂ ಇದೆ .ಹಾಗಾಗಿಯೇ ಇಲ್ಲಿ ಗುರುದೇವ ಎಂದು ಶಿವನನ್ನು ಸಂಬೋದಿಸುತ್ತಾರೆ ದಾಸರು. “ಧಾರುಣಿಯೊಳು ನಿನಗೆ ಎಣೆಯೇ ಗುರುದೇವ ಶಿಖಾಮಣಿ” ಎಂದು ಹೇಳುತ್ತಾರೆ ಮುಂದೆ ಗುಹಾಸುರನನ್ನು ಮರ್ಧಿಸಿದ ವೃಷಭ ವಾಹನ ಗಜ ಚರ್ಮಪೀತಾಂಬರನೇ ಮಹಾದೇವನೇ ಎಂದೆಲ್ಲಾ ವರ್ಣಿಸುತ್ತಾ ತ್ರಿಪುರಾವಳಿ ಸಂಗರನೇನೆ ತ್ರೈಲೋಕ್ಯ ಪಾವನನೆ ಅಪಾರ ಮಹಿಮನೆ ಎಂದು ಶಿವನನ್ನು ಕೊಂಡಾಡುತ್ತಾರೆ. ತಮ್ಮ ಅಂಕಿತನಾಮವನ್ನು ಬಳಸುತ್ತ ಪುರಂದರ ವಿಠಲನ ಪ್ರಿಯ ಎಂದು ಮುಕ್ತಾಯಗೊಳಿಸುತ್ತಾರೆ.


ಶಿವ ದರುಷನ ನಮಗಾಯಿತು

ಶ್ರೀಶೈಲ ಮಹಾತ್ಮೆಯನ್ನು ಶಿವರಾತ್ರಿಯ ಜಾಗರಣೆಯ ವಿಷಯವನ್ನು ಹೇಳುವಂತಹ ಈ ಕೃತಿ ಸ್ವಲ್ಪ ಅಪರೂಪದ್ದೇ ಎಂದು ಹೇಳಬಹುದು.

ಶಿವ ದರುಶನ ನಮಗಾಯಿತು ಕೇಳಿ ಶಿವರಾತ್ರಿಯ ಜಾಗರಣೆ |ಪ|

ಹಾಡಿನ ಪಲ್ಲವಿಯಲ್ಲಿ ಶುಭರಾತ್ರಿ ಎಂದು ಶಿವನ ದರುಶನ ಆಯಿತು ಎಂದು ಹೇಳುತ್ತಾರೆ ಜಾಗರಣೆ ಹಬ್ಬದ ಭಾಗ ಹಾಗಾಗಿ ಈ ಪದದ ಬಳಕೆ ವಿಶಿಷ್ಟವಾಗಿದೆ.

ಪಾತಾಳ ಗಂಗೆಯ ಸ್ನಾನವ ಮಾಡಲು ಪಾತಕವೆಲ್ಲ ಪರಿಹಾರವು
ಜ್ಯೋತಿರ್ಲಿಂಗನ ಧ್ಯಾನವ ಮಾಡಲು ದ್ಯೂತಗಳಿಲ್ಲ ಅನುದಿನವು |೧|

ಈ ಚರಣದಲ್ಲಿ ಶ್ರೀಶೈಲ ಕ್ಷೇತ್ರದ ಬಗ್ಗೆ ನಿರ್ದಿಷ್ಟವಾಗಿ ಹೇಳುತ್ತಾರೆ ಶ್ರೀಶೈಲವು ಕೃಷ್ಣಾ ನದಿಯ ದಡದಲ್ಲಿದೆ ಹಾಗೂ ಈ ಸ್ಥಳವನ್ನು ಪಾತಾಳ ಗಂಗಾ ಎಂದು ಕರೆಯಲಾಗುತ್ತದೆ ಹಾಗಾಗಿ ಪಾತಾಳ ಗಂಗೆಯ ಸ್ನಾನವ ಮಾಡಿ ಪಾತಕವನ್ನು ಪರಿಹರಿಸಿಕೊಂಡೆವು ಎಂದು ಶ್ರೀಶೈಲದ ಬಗ್ಗೆ ಹೇಳುತ್ತಾ ಮುಂದೆ ಜ್ಯೋತಿರ್ಲಿಂಗದ ಧ್ಯಾನವ ಮಾಡಲು ಕಷ್ಟಗಳು ಖೇದಗಳು ಇರುವುದಿಲ್ಲ ಎಂದು ಹೇಳುತ್ತಾರೆ.

ಬೇಡಿದ ವರಗಳ ಕೊಡುವನು ತಾಯಿ ಬ್ರಹ್ಮನ ರಾಣಿಯ ನೋಡುವನು
ಹಾಡುತ ಪಾಡುತ ಏರುತ ಬಸವನ ಆನಂದದಲ್ಲಿ ನಲಿದಾಡುವನು

ಇಲ್ಲಿ ಬ್ರಹ್ಮನ ರಾಣಿ ಎಂಬುದು ಕಾಲಾಂತರದಲ್ಲಿ ಅಥವಾ ಮುದ್ರಣದಲ್ಲಿ ಉಂಟಾದ ದೋಷವಿರಬಹುದು .ಇದು ಭ್ರಮರನ ರಾಣಿ ಅಂದರೆ ಇಲ್ಲಿನ ಭ್ರಮರಾಂಬಿಕೆಯ ಕುರಿತು ಹೇಳಿರಬಹುದು ಎಂದು ವಿದ್ವಾಂಸರು ಅಭಿಪ್ರಾಯಪಡುತ್ತಾರೆ. ಶ್ರೀಶೈಲದಲ್ಲಿ ಶಿವರಾತ್ರಿಯ ಸಂದರ್ಭದಲ್ಲಿ ಏಳನೆಯ ಸಂಜೆ ಶಿವ ಪಾರ್ವತಿಯರ ವಿವಾಹವನ್ನು ಆಚರಿಸಲಾಗುತ್ತದೆ. ಆ ಸಂದರ್ಭವನ್ನು ಇಲ್ಲಿ ಹೇಳಲಾಗಿದೆ ಎನಿಸುತ್ತದೆ .ವಿವಾಹ ಸಂದರ್ಭದಲ್ಲಿ ವೃಷಭ ವಾಹನನಾಗಿ ಶಿವನನ್ನು ಇಲ್ಲಿಗೆ ಕರೆತರಲಾಗುತ್ತದೆ. ಅದನ್ನೇ ಬಸವನ ಏರುತ ಆನಂದದಲಿ ನಲಿದಾಡುವನು ಎಂಬುದನು ಅರ್ಥೈಸಬಹುದು‌.

ಹರನನು ಕಂಡೆನು ಪುರಂದರ ವಿಠಲನ ಹರಿನಾರಾಯಣನ ಧ್ಯಾನದಲಿ

ಹೀಗೆ ಶ್ರೀ ಕ್ಷೇತ್ರದಲ್ಲಿ ಶಿವನನ್ನು ದರ್ಶನ ಮಾಡುತ್ತಾ ತನ್ನ ಇಷ್ಟದೈವವಾದ ಪುರಂದರ ವಿಠಲನನ್ನು ಧ್ಯಾನಿಸಿದೆ ಎಂದು ಹೇಳುತ್ತಾರೆ.

ಅಂತೆಯೇ ಪುರಂದರದಾಸರು ರುದ್ರ ಸುಳಾದಿಯನ್ನು ಸಹ ರಚಿಸಿದ್ದಾರೆ. ಮಧ್ವ ತತ್ವದ ಪ್ರಕಾರ ಶಿವನನ್ನು ವಿಷ್ಣುವಿನ ಮೊಮ್ಮಗ ಅಂದರೆ ವಿಷ್ಣುವಿನ ನಾಭಿಯಿಂದ ಜನಿಸಿದ ಬ್ರಹ್ಮನ ಮಗ ಎಂದು ಸಹ ನಂಬಲಾಗುತ್ತದೆ ಅಲ್ಲದೆ ಮಹಾ ಗುರುವಾಗಿ ಮನೋ ನಿಯಾಮಕನಾಗಿ ಆರಾಧಿಸಲಾಗುತ್ತದೆ. ಹಾಗಾಗಿಯೇ ಅವನನ್ನು “ತೈಲಧಾರೆಯಂತೆ ಮನಸ ಕೊಡು” ಎಂದು ಪ್ರಾರ್ಥಿಸುತ್ತಾರೆ. ಆತ ಕರುಣಾಸಾಗರ ಕಾಮಿತ ಫಲದಾತ ಎಂದು ಹೇಳುತ್ತಲೇ ಶಿವನ ರುದ್ರರಮಣೀಯತೆಯ ಕುರಿತು ಸಹ ಹೇಳುತ್ತಾರೆ. ಭಯಂಕರ ರೂಪನಾದರೂ ಭಕ್ತ ಜನ ವತ್ಸಲ ಎಂಬುದನ್ನು ಎತ್ತಿ ಹಿಡಿಯುತ್ತಾರೆ.


  • ಸುಜಾತಾ ರವೀಶ್ – ಮೈಸೂರು.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW