ಅಪಾರ ಕಕ್ಕುಲತೆಯನ್ನು ತನ್ನ ಒಡಲಲ್ಲಿ ತುಂಬಿಕೊಂಡ ಪರ್ವಕಾಲ ಶ್ರಾವಣ. ವರಕವಿ ಬೇಂದ್ರೆಗೂ ಶ್ರಾವಣಕ್ಕೂ ಅವಿನಾ ನಂಟು.ಶ್ರಾವಣ ಅದೊಂದು ಋತುವಿಲಾಸದ ಭಾಗ. ಹಿರಿಯ ಸಾಹಿತಿಗಳಾದ ಕೆ.ರಾಜಕುಮಾರ್ ಅವರ ಲೇಖನಿಯಲ್ಲಿ ಮೂಡಿದ ಶ್ರವಣದ ವಿಶೇಷತೆಯನ್ನು ತಪ್ಪದೆ ಮುಂದೆ ಓದಿ….
ಆಡಾಡುತ್ತಲೇ ಆಷಾಢಮಾಸ ಮಾಸುತ್ತಾ ಬಂದಿದೆ. ಹೊಸ ಹುರುಪಿನ ಕಳೆ ಹೊತ್ತು, ಹೊಸ ಭಾವನೆಗಳ ಮಳೆ ಸುರಿಸಲು ಶ್ರಾವಣ ಅಣಿಯಾಗಿದೆ. ಸಾವನ್ ಕೋ ಆನೇ ದೋ ಎನ್ನೋಣ. ಸಂಭ್ರಮಾತಿರೇಕಗಳಿಂದ ಪುಳಕಗೊಳಿಸಿ ತೆರಳಿದ ಚೈತ್ರ-ವೈಶಾಖವೆಂಬ ಮಧುಮಾಸದ ನೆನಪೂ ಮೆಲ್ಲಲು ಉಳಿದಿದೆ.
ಶ್ರಾವಣದ ಅನಂತರ? “ಮೇರೇ ನೈನಾ ಸಾವನ್ ಬಾದೋ ಫಿರ್ ಭೀ ಮೇರಾ ಮನ್ ಪ್ಯಾಸಾ” ಎಂಬುದು ಹಾಡೊಂದರ ಮೊದಲ ಸಾಲು. ಸಾವನ್ ಎಂದರೆ ಶ್ರಾವಣ. ಬಾದೋ ಎಂದರೆ ಭಾದ್ರಪದ. ಶ್ರಾವಣವೆಂದರೆ ಸಂತಸ ಮೂಟೆಗಟ್ಟಿಕೊಂಡು ಬರುವ ಸಮಯ. ಮೃದು ಮಂದಹಾಸ ಈ ಶ್ರಾವಣಮಾಸ! ಹಬ್ಬ-ಹರಿದಿನ, ಸಭೆ-ಸಮಾರಂಭ, ಮದುವೆ-ಮುಂಜಿ, ಧ್ಯಾನ-ಯಾನ, ವ್ಯಾಪಾರ-ವ್ಯವಹಾರ ಎಲ್ಲಕ್ಕೂ ಶುಭ ಘಳಿಗೆಗಳನ್ನು ಉಳ್ಳ ಚೈತನ್ಯದಾಯಕ ಮಾಸವಿದು. ಶ್ರಾವಣ ಕುರಿತಂತೆ “ವಿರಹಗೀತೆ ಇನ್ನಿಲ್ಲ, ಪ್ರಣಯಗೀತೆ ಬಾಳೆಲ್ಲ” ಎಂದು ಸಾರುವ ಹಾಡೂ ಇದೆಯಲ್ಲ.
ಅಪಾರ ಕಕ್ಕುಲತೆಯನ್ನು ತನ್ನ ಒಡಲಲ್ಲಿ ತುಂಬಿಕೊಂಡ ಪರ್ವಕಾಲ ಶ್ರಾವಣ. ಅದು ಹಬ್ಬಗಳ ಸಾಲು ಸಾಲು ಮೆರೆವಣಿಗೆ. “ಪ್ರೀತಿ ಇಲ್ಲದ ಮೇಲೆ ಹೂವು ಅರಳೀತು ಹೇಗೆ? ಮೋಡ ಕಟ್ಟೀತು ಹೇಗೆ?” ಎಂದು ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರು ತರ್ಕಿಸಿದ್ದಾರೆ. ಶ್ರಾವಣದಲ್ಲಿ ಪ್ರೀತಿಯ ಬಿಸುಪು ಇರುವುದರಿಂದಲೇ ಹೂವು ಅರಳುವಿಕೆ, ಮೋಡ ಕಟ್ಟುವಿಕೆ ನಡೆಯುತ್ತವೆ ಎಂದು ತರ್ಕಿಸಬಹುದು.
ವರಕವಿ ಬೇಂದ್ರೆಗೂ ಶ್ರಾವಣಕ್ಕೂ ಅವಿನಾ ನಂಟು. ಅವರ ಕಲಮಿನಲ್ಲಿ ಮೂಡಿಬಂದ ಶ್ರಾವಣಗೀತೆಯ ಸಾಲುಗಳನ್ನು ಗುನುಗಿಕೊಳ್ಳೋಣ:
ಬನ ಬನ ನೋಡು
ಈಗ ಹ್ಯಾಂಗ
ಮದುವೆ ಮಗನ್ಹಾಂಗ ತಲೆಗೆ ಬಾಸಿಂಗ ಕಟ್ಟಿಕೊಂಡು ನಿಂತ್ಯಾವ ಹರುಷಗೊಂಡು!
ಇನ್ನೇಕೆ ತಡ? “ಕುಣಿಯೋಣು ಬಾರಾ, ಕುಣಿಯೋಣು ಬಾ. ತಾಳ್ಯಾಕ, ತಂತ್ಯಾಕ, ರಾಗಾದ ಹಂಗ್ಯಾಕ; ಕುಣಿಯೋಣು ಬಾರಾ ಕುಣಿಯೋಣು ಬಾ.” ಎಂಬ ಅವರದೇ ಗೀತೆಗೆ ಹೆಜ್ಜೆಹಾಕೋಣ. ಶ್ರಾವಣವೆಂದರೆ ತುಂತುಂತುಂತುಂ, ತುಂತುಂತುಂತುಂ ಎಂದು ತುಂಬಿಬರುವ ತೃಪ್ತಭಾವ.
ಬೆಂದು, ಬೆಂದು ಬೇಂದ್ರೆಯಾದವರು ಅವರು. ಮಾಗಿದ ಮನಸ್ಥಿತಿ. ಹಾಗಾಗಿ ಅವರ ಕೆಲವು ಉಪಮೆಗಳು, ರೂಪಕಗಳಿಗಿಂತ ಹೆಚ್ಚು ತೀವ್ರವಾದವು! ಶ್ರಾವಣದಲ್ಲಿನ ಬನವನ್ನು ತಲೆಗೆ ಬಾಸಿಂಗ ಕಟ್ಟಿಕೊಂಡು ವಧುವಿಗೆ ಮಾಂಗಲ್ಯಧಾರಣೆ ಮಾಡಲು ಅಣಿಯಾಗಿ ನಿಂತ ಮದುಮಗನ ಜೊತೆಗೆ ಹೋಲಿಸುತ್ತಾರಲ್ಲವೆ? ವರಕವಿ ಎಂಬುದು ಖಂಡಿತ ಉತ್ಪ್ರೇಕ್ಷೆಯಲ್ಲ.
ಕಡಲಿಗೆ ಬಂತು ಶ್ರಾವಣ ಕುಣಿದ್ಹಾಂಗ ರಾವಣ: ಇದಕ್ಕೆ ಯಾವ ವಿವರಣೆಯೂ ಬೇಡ. ಇದೊಂದು ರಸಾಸ್ವಾದ. ಕಡಲಿನ ತೀವ್ರ ಉಬ್ಬರವಿಳಿತಗಳನ್ನು ಕಲ್ಪಿಸಿಕೊಳ್ಳಬಹುದು. ಚಂಡೆ-ಮದ್ದಳೆಗಳ ಹಿನ್ನೆಲೆಯಲ್ಲಿ ಯಕ್ಷಗಾನದಲ್ಲಿ ರಾವಣ ಕುಣಿಯುವುದನ್ನು ಊಹಿಸಿಕೊಳ್ಳಬಹುದು. ಮುಂಗಾರಿನ ಮುಸಲಧಾರೆಯಿಂದಾಗಿ ಶ್ರಾವಣವು ಕಡಲಿನಲೆಗಳ ರಕ್ಕಸ ನರ್ತನಕ್ಕೆ ಕಾರಣವಾಗುತ್ತದೆ. ಅದನ್ನೇ ಬೇಂದ್ರೆ ಕುಣಿದ್ಹಾಂಗ ರಾವಣ ಎಂದಿರುವುದು. ಶ್ರಾವಣ ಎನೆ ಥಕಧಿಮಿ ಥಕಧಿಮಿ ತಾಳ ಮೃದಂಗ! ಶ್ರಾವಣವೆಂಬುದು ಮೇಘಗಳ ಜಾವಳಿ. ಹಾಗಾಗಿ ಅದು ಕುಣಿತಕ್ಕೊಂದು ಪಂಥಾಹ್ವಾನ.
ಆಷಾಢವೆಂಬುದು ಕ್ರಿಯಾಶೀಲ ಕಾಯಕಮಾಸ. ಅದರ ಹಿಂದೆಯೇ ಧಾವಿಸಿ ಬರುವ ಶ್ರಾವಣ ಸಂಭ್ರಮ, ಸಡಗರಗಳಿಗೆ ತೆರೆದಬಾಗಿಲು. ಶ್ರಾವಣ ಅದೊಂದು ಋತುವಿಲಾಸದ ಭಾಗ. ಅದು ವರ್ಷ ಋತು ಮತ್ತು ಶರದೃತು ನಡುವಿನ ಭಾವಾನುಸಂಧಾನ! ಶ್ರಾವಣದಲ್ಲಿ ಹಬ್ಬ, ಹರಿದಿನಗಳಿಗೆ ಅಗ್ರಮಣೆ. ಒಟ್ಟಾರೆ ಶ್ರಾವಣ ಸಂಭ್ರಮಕ್ಕೊಂದು ಶಕ್ತ ರೂಪಕ. ನೋವು, ನಿಟ್ಟುಸಿರು, ದುಗುಡ, ದುಮ್ಮಾನ, ಸಂಕಟ, ಯಾತನೆಗಳಿಂದ ಬಸವಳಿದ ಮನಕ್ಕೆ ಚೈತನ್ಯ ತುಂಬುವ ಶ್ರಾವಣ ನೀರದ ಮಾಸವಿದು!
- ಕೆ. ರಾಜಕುಮಾರ್ – ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳು, ಬೆಂಗಳೂರು
