ಕದರಮಂಡಲಗಿ ಪ್ರಾಣದೇವ ಶ್ರೀಕಾಂತೇಶ – ಟಿ.ಶಿವಕುಮಾರ್

ಬ್ಯಾಡಗಿ ತಾಲೂಕಿನ ಕದರಮಂಡಲಗಿ ಕ್ಷೇತ್ರ ಶ್ರೀಕಾಂತೇಶ(ಮಾರುತಿ) ಮಹಿಮೆಗೆ ಪ್ರಸಿದ್ಧಿ ಪಡೆದ ಒಂದು ಪ್ರಮುಖ ಸ್ಥಳ. ಸಾಮಾನ್ಯವಾಗಿ ದೇವಾಲಯಗಳಲ್ಲಿ ಹನುಮಂತ ವಾರೆ ಮುಖ ಮಾಡಿ ನಿಂತಿರುತ್ತಾನೆ. ಆದರೆ ಇಲ್ಲಿ ಎದುರು ಮುಖವಾಗಿ ನಿಂತು ಭಕ್ತರಿಗೆ ದರ್ಶನಕೊಡುತ್ತಿದ್ದಾನೆ. ಈ ದೇವಾಲಯದ ಕುರಿತು ಲೇಖಕ ಟಿ.ಶಿವಕುಮಾರ್ ಅವರು ಬರೆದ ಲೇಖನ ತಪ್ಪದೆ ಮುಂದೆ ಓದಿ…

ಪ್ರತಿ ಶನಿವಾರ ಹಾಗೂ ಶ್ರಾವಣ ಮಾಸದ ಶನಿವಾರಗಳಂದು ನಡೆಯುವ ವಿಶೇಷ ಪೂಜೆಗೆ ರಾಜ್ಯದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ತಮ್ಮ ಇಷ್ಟಾರ್ಥಗಳಿಗೆ ಹಾಗೂ ಬದುಕಿನಲ್ಲಿ ಎದುರಾದ ಕಷ್ಟಗಳ ನಿವಾರಣೆಗೆ ಪ್ರಾರ್ಥಿಸಲು ಜನರು ಈ ಹನುಮನ ಸನ್ನಿಧಿಗೆ ಬರುತ್ತಾರೆ.

ಕದರಮಂಡಲಗಿ ಹಾವೇರಿ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ರಾಣೇಬೆನ್ನೂರಿನಿಂದ 12 ಕಿ.ಮೀ ಇದ್ದು, ಕನಕದಾಸರನ್ನು ನೆನಪಿಸುವ ಕ್ಷೇತ್ರ ಕಾಗಿನೆಲೆಗೆ ಹೋಗುವ ಮಾರ್ಗ ಮಧ್ಯದಲ್ಲಿದೆ. ಪ್ರತಿವರ್ಷ ಕಾರ್ತಿಕಮಾಸದಲ್ಲಿ ಕಾಂತೇಶನ ರಥೋತ್ಸವ ನಡೆಯುತ್ತದೆ. ಮಾರ್ಗಶಿರ ಮಾಸದ ಮೊದಲನೇ ರವಿವಾರ ದೇವಸ್ಥಾನದ ಪಕ್ಕದಲ್ಲಿರುವ ಪುಷ್ಕರಣಿಯಲ್ಲಿ ತೆಪ್ಪೋತ್ಸವ ಜರಗುತ್ತದೆ. ರಥೋತ್ಸವದಂಗವಾಗಿ ಮೂರುದಿನಗಳ ಕಾಲ ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳು ಹಾಗೂ ಉತ್ಸವಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಬೆಳಗಿನ 11 ರಿಂದ ರಾತ್ರಿ 8ಗಂಟೆಯವರಿಗೆ ಅನ್ನಸಂತರ್ಪಣೆ ನಡೆಯುತ್ತದೆ. ಉಳಿದ ದಿನಗಳಲ್ಲಿ ಪ್ರತಿ ದಿನ ಮದ್ಯಾನ್ಹ 12 ರಿಂದ 3 ಗಂಟೆಯವರಿಗೆ ಅನ್ನದಾಸೋಹದ ವ್ಯವಸ್ಥೆ ಇರುತ್ತದೆ. ದೂರದ ಊರುಗಳಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ರಾತ್ರಿವೇಳೆ ಉಳಿದುಕೊಳ್ಳಲು ದೇವಸ್ಥಾನ ಸಮಿತಿ ಕೊಠಡಿಗಳನ್ನು ನಿರ್ಮಿಸಿದೆ . ಸರಳ ವಿವಾಹಗಳಿಗೆ ಇಲ್ಲಿ ಅವಕಾಶವಿದೆ. ಅದಕ್ಕಾಗಿ ಕಲ್ಯಾಣಮಂಟಪವಿದೆ. ಪ್ರತಿ ದಿನ ಬೆಳಗಿನ ಜಾವದಿಂದ 8ರವರೆಗೆ ಅಭಿಷೇಕ ಹಾಗೂ ಪೂಜೆ ನಡೆಯುತ್ತದೆ. ಇಡೀ ದಿನ ಕಾಂತೇಶನ ದರ್ಶನಕ್ಕೆ ಅವಕಾಶವಿದೆ.

ಕರ್ನಾಟಕದಲ್ಲಿ ಸಾಮಾನ್ಯವಾಗಿ ಹನುಮಂತನ ದೇವಸ್ಥಾನಗಳಿಲ್ಲದ ಊರು ಒಂದೂ ಇಲ್ಲ. ಆದರೂ ಕದರಮಂಡಲಗಿ ಶ್ರೀಕಾಂತೇಶ, ಹಿರೇಕೇರೂರು ತಾಲೂಕಿನ ಸಾತೇನಹಳ್ಳಿ ಶ್ರೀ ಶಾಂತೇಶ, ಶಿಕಾರಿಪುರದ ಶ್ರೀ ಭ್ರಾಂತೇಶ ಈ ಮೂವರು ಪ್ರಾಣದೇವರ(ಹನುಮ)ನ್ನು ಒಂದೇ ದಿನ ದರ್ಶನ ಪಡೆದರೆ ಕಷ್ಟ-ಕಾರ್ಪಣ್ಯಗಳು ಪರಿಹಾರವಾಗುತ್ತವೆ ಎಂಬ ಪ್ರತೀತಿ ಇದೆ. ಕಾಂತೇಶ ದೇವಾಲಯದ ಎದುರಿಗಿರುವ ಕಲ್ಲಿನ ದ್ವಜಸ್ತಂಭದಲ್ಲಿಯ ಕ್ರಿ.ಶ.1503 ಶಾಸನದ ಪ್ರಕಾರ ಕದರಮಂಡಲಗಿ ಗ್ರಾಮ ಇತಿಹಾಸ ಪ್ರಸಿದ್ಧ. ಕಲ್ಲೇಶ್ವರ, ರಾಮಲಿಂಗೇಶ್ವರ, ನೀಲಕಂಠೇಶ್ವರ, ಮುಕ್ಕಣ್ಣೇಶ್ವರ, ಗವಿಸಿದ್ಧೇಶ್ವರ ಎಂಬ ಇತಿಹಾಸವನ್ನು ಹೇಳುವ ಪ್ರಾಚೀನ ದೇವಾಲಯಗಳು ಇವೆ. ಕಾಂತೇಶ ದೇವಸ್ಥಾನದ ಆವರಣದಲ್ಲಿಯೇ ಕನಕದಾಸರ ಗುಡಿ, ರಾಘವೇಂದ್ರ ಸ್ವಾಮಿ ಮಠ ಇದೆ. ಇಲ್ಲಿಯ ಲಕ್ಷ್ಮಿನಾರಾಯಣನ ದೇವಾಲಯಕ್ಕೆ ಕನಕದಾಸರ ಗುಡಿ ಎಂದು ಕರೆಯುತ್ತಾರೆ. ಕನಕದಾಸರು ಹುಟ್ಟಿದ್ದು ಬಾಡ ಗ್ರಾಮವಾದರೂ ಕಾಗಿನೆಲೆಗೆ ಬಂದು ನೆಲೆಸಿದರು. ಕುಲದೈವ ತಿರುಪತಿ ವೆಂಕಟೇಶನ ದರ್ಶನ ಪಡೆಯಲು ಆಗಾಗ ತಿರುಪತಿಗೆ ಪ್ರಯಾಣ ಮಾಡುತ್ತಿದ್ದರಂತೆ. ಆಗ ಕದರಮಂಡಲಗಿ ಕಾಂತೇಶನ ದರ್ಶನ ಪಡೆದು ಲಕ್ಷ್ಮಿನಾರಾಯಣನ ಗುಡಿಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರಂತೆ. ಕಾರಣ ಈ ದೇವಸ್ಥಾನ ಕನಕದಾಸರ ಗುಡಿಯಾಯಿತು ಎಂದು ಹೇಳುತ್ತಾರೆ.

 

ಪೂಜಾ ವಿವರ:

ಶ್ರೀ ಕಾಂತೇಶಸ್ವಾಮಿಯನ್ನು ದಿನಾಲು ಮೂರು ಅವತಾರಗಳಲ್ಲಿ ಅಲಂಕರಿಸಿ ಪೂಜೆ ಸಲ್ಲಿಕೆಯಾಗುತ್ತದೆ. ಹನುಮಾವತಾರ, ಭೀಮಾವತಾರ, ಮಧ್ವಾವತಾರ ಗಳಲ್ಲಿ ತ್ರಿಕಾಲದಲ್ಲಿ ಪೂಜೆ ಆಗುತ್ತವೆ. ಅರುಣೋದಯ ಪೂರ್ವದಲ್ಲಿ ಕಾಕಡಾರತಿಯ ಸೇವಾನಂತರ ಹನುಮಾವತಾರದ ಪೂಜಾ ಅಭಿಷೇಕ, ಬೆಳಗಿನ ನಾಲ್ಕು ತಾಸಿನೊಳಗಾಗಿ ಭೀಮಾವತಾರದ ಮಹಾಪೂಜೆಯು ನಡೆದು ನೈವೇದ್ಯ ಸಮರ್ಪಣೆ, ಸಾಯಂಕಾಲ ಎಂಟು ಗಂಟೆಗೆ ಹರಿನಾಮ ಸಂಕೀರ್ತನೆಯ ಸಂಗೀತ ಸೇವೆಯ ಅವಧಿಯಲ್ಲಿ ಮಧ್ವಾವತಾರದ ಪೂಜೆಗಳು ನಡೆಯುತ್ತವೆ. ನಂತರ ರಾತ್ರಿ 9 ಗಂಟೆಗೆ ನಿತ್ಯ ಸೇವಾ ಪೂರ್ತಿಯಾಗುವುದು. ಪ್ರತಿ ಶುಕ್ರವಾರ ದೇವರಿಗೆ ತೈಲಾಭ್ಯಂಜನವಾಗುವುದು. ಅಲ್ಲದೇ ಹೂ-ಪೂಜೆ ನಡೆಯುತ್ತದೆ. ಕಾತೇಶನ ಪೂಜೆಗೆ ಮತ್ತು ಅಲಂಕಾರಕ್ಕೆ ಸೇವಂತಿ ಹೂವು ಬೇಕೆ ಬೇಕು. ಕಾರಣ ಸುತ್ತ-ಮುತ್ತಲ ಗ್ರಾಮಗಳು ಸೇವಂತಿ ಬೆಳೆಗೆ ಪ್ರಸಿದ್ಧವಾಗಿವೆ. ಪ್ರತಿ ಶನಿವಾರ ಸಾಯಂಕಾಲ ಮಂಗಳಾರತಿಯಾದ ನಂತರ ಶ್ರೀ ಕಾಂತೇಶಸ್ವಾಮಿಯನ್ನು ರಂಗಮಂಟಪದ ತೂಗುಮಂಚದಲ್ಲಿ ಕೂಡ್ರಿಸಿ ವಿಜ್ರಂಭಣೆಯಿಂದ ಪೂಜಾದಿಗಳನ್ನು ನೆರವೇರುಸುತ್ತಾರೆ.

ಕ್ಷೇತ್ರದ ದಾರಿ :

ರಾಣೇಬೆನ್ನೂರಿನಿಂದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ 3 ಕಿ.ಮೀ ಪ್ರಯಾಣಿಸಿ ಮುಖ್ಯರಸ್ತೆಯಿಂದ ಬ್ಯಾಡಗಿ- ಕಾಗಿನೆಲೆಗೆ ಹೋಗುವ ಒಳರಸ್ತೆಯಲ್ಲಿ (ಉತ್ತಮ ರಸ್ತೆ ಸಂಪರ್ಕವಿದೆ) 9 ಕಿ.ಮೀ. ಹೋದರೆ ಕದರಮಂಡಲಗಿ ಸಿಗುತ್ತದೆ. ಹಾವೇರಿ, ಬ್ಯಾಡಗಿ, ರಾಣೇಬೆನ್ನೂರು ಗಳಿಂದ ಈ ಕ್ಷೇತ್ರಕ್ಕೆ ಬೆಳಿಗ್ಗೆ 6 ರಿಂದ ರಾತ್ರಿ 9 ರವರೆಗೆ ಕೆಎಸ್‍ಆರ್‍ಟಿಸಿ ಹಾಗೂ ಖಾಸಗಿ ವಾಹನಗಳ ಸಂಚಾರವಿರುತ್ತದೆ.


  • ಟಿ.ಶಿವಕುಮಾರ್ – ಲೇಖಕರು ಮೂಲತಃ ದಾವಣಗೇರೆ ಜಿಲ್ಲೆ ಹರಿಹರ ತಾಲೂಕಿನ ಗಡಿ ಗ್ರಾಮ ಹಾಲಿವಾಣ. ಪ್ರಸ್ತುತ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಲಕ್ಷ್ಮೀಪುರ ಗೊಲ್ಲರ ಬಿಡಾರ ಸ.ಕಿ. ಪ್ರಾ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಚಿಕ್ಕದಿಂನಿಂದಲೇ ಬರೆಯುವ ಗೀಳನ್ನು ಹಚ್ಚಿಕೊಂಡು ಈಗ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಲಕ್ಷ್ಮೀಪುರ ಬಿಡಾರ, ತಾ. ಹಾನಗಲ್ಲ ಜಿ. ಹಾವೇರಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW