ಕವಿ ಪ್ರವೀಣ ಐತುಮನೆ ಅವರ ಕವನದಿಂದ ಮತ್ತೆ ಅಪ್ಪ ನೆನಪಾದ, ಲೇಖಕ, ಕವಿ ಡಾ ಗಜಾನನ ಶರ್ಮ ಅವರ ನೆನಪಿನ ಓಕಳಿಯಿಂದ ಹೊರಹೊಮ್ಮಿದ ಒಂದು ಕವನ ‘ಅವ’, ಶುದ್ದ ಅನ್ಯಾಯ ಮಾಡಿ ಹೊರಟು ಹೋಗೋ ಮುನ್ನ ಯೋಚಿಸಬೇಕಿತ್ತು ಅಪ್ಪ!…ಮುಂದೆ ಓದಿ ಸುಂದರ ನೆನಪಿನ ಸಾಲುಗಳು.
ಚಂಡಮಾರುತದ ಹೊಡೆತಕ್ಕೆ ಸಿಲುಕಿ, ಒದ್ದೆ ಮುದ್ದೆಯಾಗಿ ಇಡೀ ಬೆಂಗಳೂರು ಮುದುಡಿದ್ದಕ್ಕಿಂತ ಹೆಚ್ಚಾಗಿ ಈ ಕವನ ನನ್ನನ್ನು ಮುದುಡಿಸಿತು. ಅಪ್ಪ ಹೋದ ಮೇಲೆ ನಮ್ಮಲ್ಲಿ ಬಹುತೇಕರಿಗೆ, ಅವನು ಇನ್ನಷ್ಟು ಕಾಲ ಜೊತೆಗಿರಬೇಕಿತ್ತು, ಅವನನ್ನು ಇನ್ನಷ್ಟು ಚೆನ್ನಾಗಿ ನೋಡಿಕೊಳ್ಳಬೇಕಿತ್ತು ಎಂದೆಲ್ಲ ಅನ್ನಿಸುವುದು ಸತ್ಯ. (ನನಗಂತೂ ಆಗಾಗ ಹಾಗನ್ನಿಸುವುದು ಸುಳ್ಳಲ್ಲ) ಅಪ್ಪ ಅಂದ್ರೆ ಆಕಾಶ..ಅಪ್ಪ ಅಂದ್ರೆ ಸಾಗರ..ಹೀಗೆ ಅಪ್ಪನಿಗೆ ಜಗತ್ತಿನಲ್ಲಿ ವಿಸ್ತಾರವಾದುದನ್ನೆಲ್ಲ ಹೋಲಿಸುತ್ತೇವೆ. ಅಪ್ಪ ಅಂದರೆ ದುಡಿಮೆ, ಅಪ್ಪ ಅಂದರೆ ನಿರೀಕ್ಷೆ, ಅಪ್ಪ ಅಂದರೆ ಭದ್ರತೆ, ಅಪ್ಪ ಅಂದರೆ ಸುರಕ್ಷತೆ, ಅಪ್ಪ ಅಂದರೆ ಶಿಸ್ತು, ಶಿಕ್ಷೆ…ಏನೆಲ್ಲ….
ಈ ಕವನವನ್ನು ಬರೆದ ಕವಿ, ಪ್ರವೀಣ ಐತುಮನೆ ಕೂಡ ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡವನು. ಸ್ವಂತ ಪರಿಶ್ರಮದಿಂದ ಬದುಕನ್ನು ಕಟ್ಟಿಕೊಂಡವನು. ಅಪರೂಪಕ್ಕೆ ಒಂದೊಂದು, ಮನಸ್ಸನ್ನು ಹಿಡಿದು ಅಲ್ಲಾಡಿಸುವ ಕವನ ಬರೆದು ಮತ್ತೆಷ್ಟೋ ದಿನ ತೆಪ್ಪಗಾಗುವ ಪ್ರತಿಭಾವಂತ ‘ಜಡಭರತ’. ಇಂದು ಬೆಳ್ಳಂ ಬೆಳಗ್ಗೆ ಈ ಕವನ ಓದಿ ಅಪ್ಪನನ್ನು ನೆನೆದು ನನ್ನ ಮನಸ್ಸು ಬಿಕ್ಕಳಿಸಿತು. ನಾಳೆ ಅಮ್ಮನ ಶ್ರಾದ್ಧ. ಇಂದು ಊರಿಗೆ ಹೋಗಬೇಕಿದೆ. ಮನಸ್ಸು ಹೆತ್ತವರ ಸುತ್ತಲೇ ಸಂಚರಿಸುತ್ತಿದೆ. ನನ್ನನ್ನು ಹೆತ್ತು ಒಂದೂವರೆ ವರ್ಷಕ್ಕೇ ದೂರವಾದ ಅಮ್ಮನ ಶ್ರಾದ್ಧದ ಹಿಂದಿನ ದಿನ ಈ ಪ್ರವೀಣ, ಹದಿನಾಲ್ಕು ವರ್ಷದ ಹಿಂದೆ ತೀರಿಕೊಂಡ ನನ್ನ ಅಪ್ಪನ ನೆನಪು ಮಾಡಿಬಿಟ್ಟ. ಇಡೀ ಬದುಕಿನುದ್ದಕ್ಕೂ ಕಾಲಿಗೆ ಚಪ್ಪಲಿ ತೊಡದ ನನ್ನ ಅಪ್ಪ, ಪ್ರವೀಣ ಕವನದಲ್ಲಿ ಹೇಳಿದ ಹಾಗೆ ನನಗೆ ಆತನ ಕಾಲಿನ ಚಪ್ಪಲಿಯನ್ನು ಒರೆಸಲೂ ಅವಕಾಶ ನೀಡಲಿಲ್ಲ. ಶರಾವತಿಯ ಮುಳುಗಡೆಯ ಮಹಾ ಅವಗಡದಲ್ಲಿ ಬದುಕಿನ ಭದ್ರತೆ ಮತ್ತು ಭರವಸೆಯನ್ನು ಕಳೆದುಕೊಂಡಿದ್ದ ಆತ ಎಂಬತ್ತು ವರ್ಷ ಬದುಕಿದ್ದ ಎಂಬುದೇ ಸಮಾಧಾನ… ಆದರೂ…
“ಅವ”
ನಿನ್ನ ಮೇಲೆ ಒಂದಿಷ್ಟು ಶಿಕಾಯತ್‌ಗಳಿವೆ ಅಪ್ಪ!
ನನ್ನಿಡೀ ಪುಟ್ಟ ದೇಹವನ್ನು ಎದೆ ಮೇಲೆ ಹರವಿಕೊಂಡು ಮಲಗಿದಾಗ,
ಮಗಳು ನನ್ನನ್ನೊಂದು ದಿನ ಹೀಗೆ ಬಸಿದುಕೊಳ್ಳುತ್ತಾಳೆ ಎಂದು ಯೋಚಿಸಿದ್ದೆಯಾ?
ಸ್ವಾರ್ಥಿಯಲ್ಲ ನೀನು, ಯೋಚಿಸಿರಲಿಕ್ಕಿಲ್ಲ!
ಖಾಲಿ ಗಾಳಿಯಲ್ಲಿ ಅದೆಷ್ಟು ದಿನ ಬರಗಿಕೊಂಡಿದ್ದೀನೋ,
ದೊಡ್ಡವಳಾಗಿದ್ದೀನಿ ಕಣೋ, ಮಲಗಿಸಿಕೊಳ್ಳುತ್ತಿದ್ದೆ
ಶುದ್ದ ಅನ್ಯಾಯ ಮಾಡಿ ಹೊರಟು ಹೋಗೋ ಮುನ್ನ ಯೋಚಿಸಬೇಕಿತ್ತು!
ಕಂಕುಳಿಗೆ ಕಚಗುಳಿ ಇಟ್ಟು, ಕಿಸಕ್ಕನೆ ನಕ್ಕು
ಹಿಂತಿರುಗಿ ಓಡುವ ಭರದಲ್ಲಿ ಕಬ್ಬಿಣದ ಕುರ್ಚಿ ಗೇಲಿ ಮಾಡಿ, ಕೆಳಗೆ ಕೆಡಗಿ, ಲಂಗದ ಫ್ರಿಲ್ಲುಗಳನ್ನು ಹರಿದಿತ್ತು.
ಅಮ್ಮನಿಗೆ ವಾಚಾಮಗೋಚರ ಬೈದು ಕುರ್ಚಿ ಎಸೆದವ ನೀನು!
ವಯಸ್ಸಾದ ನೀನು ನೆಡೆಯೋ ಒಂದೊಂದು ಹೆಜ್ಜೆಯಲ್ಲಿ ಬೀಳೋ ಹೆಜ್ಜೆಗಳನ್ನು ಹೆಕ್ಕುವ ಭಾಗ್ಯವಿಲ್ಲವಲ್ಲ ಎಂದು ಕೊಸರುತ್ತೇನೆ;
ಚೂರೇ ಚೂರು ಇದ್ದುಬಿಡಬೇಕಿತ್ತು, ಗಾಲಿ ಕುರ್ಚಿಯಲ್ಲಾದರೂ ಸರಿ!
ಅದೆಲ್ಲಿ ಆ ಚೌಕಚೌಕ ಅಂಗಿ ಹಾಕಿಕೊಂಡು ದುಡಿಯಲು ಹೋಗುತ್ತಿದ್ದೆಯೋ,
ಬರುವಾಗ ಮಾತ್ರ ಪುಟ್ಟ ಪೊಟ್ಟಣದಲ್ಲಿ ಶೇಂಗಾ,
ಮತ್ತೊಂದರಲ್ಲಿ ಬೋಂಡಾ, ಮರೆಯುತ್ತಿರಲಿಲ್ಲ ನೋಡು!
ಮಗಳು ಮನೆಯಲ್ಲಿ ಬದುಕಿರುತ್ತಾಳೆ ಎನ್ನುವ ನಿನ್ನ ನಂಬಿಕೆ ಮುಂದೆ, ನೀನು ಬರುವುದೇ ಇಲ್ಲ ಎನ್ನುವ ನನ್ನ ಹತಾಶೆಯೇ ದೊಡ್ಡದು ಬಿಡು!
ಹಾರಿ ಬಂದು ಅವಚಿಕೊಳ್ಳುವಾಗ, ಮೇಲಿನ ಗುಂಡಿ ನಾನೇ ಬಿಚ್ಚಿ, ಎದೆಗೂದಲಿಗೆ ಕಿವಿ ಕೊಟ್ಟಾಗ ಮಾತ್ರ, ಅಪ್ಪ ಎನಿಸುತ್ತಿತ್ತು!
ನಾ ತೊಡುವ ಸೀರೆ ಯಾರಿಗೆ ತೋರಲಿ ಈಗ?
ಅವಸರಕ್ಕೆ ಹುಟ್ಟಿದ ಪೂರ್ವಾವಾಧಿ ಶಿಶು ನೀನು!
ನೀನು ಬೂಟುಗಳ ಅದಲಿ ಬದಲಿ ಮಾಡಲೆಂದೇ ನಾನು ತಪ್ಪಾಗಿ ತೊಡುತ್ತಿದ್ದೆ,
ನೀ ಬಗ್ಗುವಾಗ ಹಣೆಗೆ ಮುತ್ತು ಕೊಡಲು ಅನುವಾಗುತ್ತಿತ್ತು!
“ಪ್ರತಿ ಬಾರಿ ಹೇಳಿಕೊಡಕ್ಕ ಮಗಾ?” ಎಂದು ಪಾದುಕೆ ರೀತಿ ಜೋಡಿಸುತ್ತಿದ್ದೆ,
ಮಗಳೆಂಬ ದೇವರದ್ದಲ್ಲವೇ?
ನಿನ್ನ ಕಾಲ ಹೆಬ್ಬೆರಳಿಗೆ ದಾರ ಕಟ್ಟುವುದನ್ನು ನೋಡಲಲ್ಲ ನಾನು ಬದುಕಿದ್ದಿದ್ದು,
ಅದನ್ನೂ ತೋರಿಸಿಬಿಟ್ಟೆ! ನಿನ್ನ ಮಳೆಗಾಲದ ಚಪ್ಪಲಿಗಳನ್ನು ಈಗಲೂ ಒರೆಸುತ್ತೇನೆ,
ಹೊರಗಿನ ಹನಿಗಳಿಗೆ ನಿನ್ನ ಪಾದ ಸೋಕುವ ಪುಣ್ಯವಿಲ್ಲದಿದ್ದರೂ!
ಎಷ್ಟು ದುಡಿಯುತ್ತೇನೆ ಗೊತ್ತಾ? ಚಂದ ಚಪ್ಪಲಿ ಕೊಡಿಸುತ್ತೇನೆ, ಬಾರೋ!
ಕಣ್ಣೀರಾಗಲು ಇದನ್ನು ಬರೆಯುತ್ತಿಲ್ಲ,
“ಮೇರಾ ಜ಼ಮೀನ್ ಔರ್ ಆಸ್ಮಾ ತುಮ್ ಹೋ”
ಎನ್ನುವ ಘಜ಼ಲ್ ಕೇಳುವಾಗ, ಎದೆಯೊಳಗೆ
ಕೂತವ ಮನಸ್ಸೊಳಗೆ ಬಂದು ಕೆನ್ನೆ ಸವರಿ ಹೋದೆಯಲ್ಲ,ಇಷ್ಟೊಂದು ಬರೆಸಿದ್ದು ಅದೇ!
ಬರಲಾಗದಿದ್ದರೆ ಸುಮ್ಮನಾದರೂ ಇದ್ದುಬಿಡು!
ಹೃದಯದ ಕವಾಟುಗಳ ದಾಟಿ ಮನಸ್ಸೆಂಬ ಜಾರಿಣಿಗೆ ಸಿಗಬೇಡ,ಮನೆಹಾಳಿ ಅವಳು!
ನಿನ್ನ ಎಚ್ ಎಂ ಟಿ ವಾಚ್ ಇನ್ನೂ ನೆಡೆಯುತ್ತಿದೆ,
ಅದಕ್ಕೂ ನಿಲ್ಲು ಹೇಳಲು ಮನಸ್ಸಿಲ್ಲದವಳು ನಾನು
ನಿನ್ನ ಹೇಗೆ ಕಳಿಸಿಕೊಟ್ಟೇನೋ! ಇರು, ಘಜ಼ಲ್ ಮುಗಿಯಿತು! ಬರುತ್ತೇನೆ
ಆದರೂ ಶುದ್ದ ಅನ್ಯಾಯ ಮಾಡಿ ಹೊರಟು ಹೋಗೋ ಮುನ್ನ ಯೋಚಿಸಬೇಕಿತ್ತು ಅಪ್ಪ!
- ಡಾ ಗಜಾನನ ಶರ್ಮ – ಹಿರಿಯ ಖ್ಯಾತ ಲೇಖಕರು, ಚಿಂತಕರು, ಸಾಹಿತಿಗಳು.

ನನ್ನದೇ ಆತ್ಮದ ಆಕ್ರಂದನದಂತಿದೆ ನಿಮ್ಮ ಬರಹ. ನಾ ದುಡಿಯುವ ಸಮಯದಲ್ಲಾದರೂ ಆತ ಇರಬೇಕಿತ್ತು, ಅದೆಷ್ಟು ದಣಿದಿತ್ತೋ ಆ ಜೀವ, ರಾತ್ರಿ ಮಲಗಿದವ ಮುಂಜಾನೆ ಮೇಲೇಳಲಿಲ್ಲ.
“ಅಪ್ಪ”
ಆಗಾಗ ನೆನಪಾಗಿ
ಬಿಟ್ಟು ಹೋದದ್ದಕ್ಕೆ ನೆಪವೇಳಿ
ಕನಸಲ್ಲಿಯೆ ಅಪ್ಪುಗೆಯ ನೀಡಿ
ಮಿಂಚಿ ಮಾಯವಾಗುವರು.