ನಾನು ಮೆಚ್ಚಿದ ಪುಸ್ತಕ ‘ನಾನು ಭಾರ್ಗವಿ’ ಆತ್ಮ ಕಥನ

ಸಹಜ ಸೌಂದರ್ಯಕ್ಕೊಂದು ರೂಪಕದಂತಿದ್ದ ಬೆಳ್ಳಿತೆರೆ, ಕಿರುತೆರೆ, ರಂಗಭೂಮಿಯಲ್ಲಿ ಸಕ್ರಿಯರಾಗಿದ್ದ ಅಭಿಜಾತ ಕಲಾವಿದೆ ಭಾರ್ಗವಿ ನಾರಾಯಣ್ ಅವರು ನಮ್ಮನ್ನು ಅಗಲಿದ್ದಾರೆ.ಅವರ ‘ನಾನು ಭಾರ್ಗವಿ’ ಆತ್ಮ ಕಥನದ ಕುರಿತು ಲೇಖಕ ಬಿ. ಎಸ್. ಶಿವಕುಮಾರ ಅವರು ಬರೆದ ಪುಸ್ತಕ ಪರಿಚಯ ಈಗ ಓದುಗರ ಮುಂದಿದೆ, ತಪ್ಪದೆ ಓದಿ…

ಪುಸ್ತಕ : ನಾನು ಭಾರ್ಗವಿ
ಮುನ್ನುಡಿ :ಅನಂತನಾಗ್
ಲೇಖಕರು: ಭಾರ್ಗವಿ ನಾರಾಯಣ್

ಪ್ರಕಾರ : ಆತ್ಮ ಕಥನ
ಪುಟಗಳು :೪೦೦
ಪ್ರಕಾಶನ: ಅಂಕಿತ ಪುಸ್ತಕ

ಅವರ ಆತ್ಮ ಕಥನ ‘ನಾನು ಭಾರ್ಗವಿ’ ೪೦೦ ಪುಟಗಳ ಪುಸ್ತಕ ಹಲವಾರು ಕಾರಣಗಳಿಂದ ವಿಶಿಷ್ಟವಾಗಿದೆ. ಇದು ಕೇವಲ ಭಾರ್ಗವಿಯವರ ಜೀವನದ ಕಥಾನಕವಷ್ಟೇ ಆಗಿರದೇ, ರಂಗಭೂಮಿ – ಕಿರುತೆರೆ – ಕಲಾತ್ಮಕ ಚಲನಚಿತ್ರಗಳ ಬಗೆಗೂ ಹಲವಾರು ಮಾಹಿತಿಗಳನ್ನು ಹೊಂದಿರುವುದರಿಂದ ಹೆಚ್ಚು ಮೌಲಿಕವಾಗಿದೆ.

ಆತ್ಮ ಕಥೆಯ ಹೆಸರೇ “ನಾನು ಭಾರ್ಗವಿ” ಸರಳ ಸುಂದರವಾಗಿದೆ. ಆತ್ಮವಿಶ್ವಾಸದ ಪ್ರತೀಕದಂತಿದೆ. ಈ ಪುಸ್ತಕದ ಅರ್ಪಣೆ “ನನ್ನನ್ನು ನಾನಾಗಿ ಉಳಿಯಲು ಅನುವು ಮಾಡಿಕೊಟ್ಟ ಅಮ್ಮ ಹಾಗೂ ನಾಣಿ – ಅವರಿಗೆ ” ಎಂದಿರುವುದು ಅರ್ಥಪೂರ್ಣವಾಗಿದೆ. ಪ್ರತಿ (ಅ)ಯಶಸ್ವೀ ಮಹಿಳೆಯ ಹಿಂದಿನ ಎರಡು ಪ್ರಬಲ ಶಕ್ತಿಗಳು ಅಮ್ಮ ಮತ್ತು ಪತಿ ತಾನೆ?ಮೊದಲ ಬಾರಿ ಈ ಆತ್ಮಕಥೆ ಓದುವಾಗ ಸ್ವಲ್ಪ ಗೊಂದಲವಾಗುವುದು ಸಹಜ. ಕಾರಣ ಇದರಲ್ಲಿ ಬರುವ ಪಾತ್ರಗಳು. ಭಾರ್ಗವಿಯವರ ತಾಯಿಯ ಅಪಾರ ಸಂಖ್ಯೆಯ ಬಂಧುಗಳು, ತಂದೆ ಕಡೆಯ ಸಂಬಂಧಿಗಳು, ಮದುವೆಯ ನಂತರ ನಾರಾಯಣ (ನಾಣಿ) ರವರ ದೊಡ್ಡ ಬಳಗದವರು, ಭಾರ್ಗವಿ ನಾರಾಯಣ್ ರವರ ಸ್ನೇಹಿತ ಬಳಗದವರು, ಆಫೀಸಿನ ಸಿಬ್ಬಂದಿಗಳು! ಎಷ್ಟೊಂದು ವ್ಯಕ್ತಿಗಳು!!

ಪತಿ ಮೇಕಪ್ ನಾಣಿ ಜೊತೆ ಭಾರ್ಗವಿ ಅಮ್ಮ

ಅನಂತನಾಗ್ ರವರ ಪುಟ್ಟ ಮುನ್ನುಡಿ ಮತ್ತು ಸಿ. ಆರ್. ಸಿಂಹ ಅವರ ‘ಭಾರ್ಗವಿ ನಾರಾಯಣ’ ಎಂಬ ಪುಟ್ಟ ಪರಿಚಯಾತ್ಮಕ ಲೇಖನ ಬಹಳ ವಿಷಯಗಳನ್ನು ತಿಳಿಸುವಂತಿದೆ. “ಶಾಲೆ – ಕಾಲೇಜುಗಳಲ್ಲಿ ಸಣ್ಣ – ಪುಟ್ಟ ನಾಟಕ ಬರೆದಿರುವುದನ್ನು ಬಿಟ್ಟರೆ ನನಗೆ ಹೆಚ್ಚು ಬರೆದು ಅಭ್ಯಾಸವಿಲ್ಲ” ಎಂದೂ, “ನನಗೆ ತಿಳಿದಂತೆ ಬರೆಯುತ್ತಾ ಹೋದೆ” ಎಂದು ಭಾರ್ಗವಿಯವರು ಹೇಳಿಕೊಂಡಿದ್ದಾರೆ. ಇಡೀ ಪುಸ್ತಕದಲ್ಲಿ ಭಾರ್ಗವಿಯವರು ಎಷ್ಟೇ ಕಷ್ಟ ಅನುಭವಿಸಿದ್ದರೂ ಅದಕ್ಕೆ ಯಾರೇ ಕಾರಣವಾಗಿದ್ದರೂ ಅವರ ಬಗ್ಗೆ ಭಾರ್ಗವಿಯವರ ಆಕ್ಷೇಪವಿಲ್ಲ. ದೂರಿಲ್ಲ. ಸುಖ – ಸಂತೋಷ ಸಹಾಯ ಬಂದಾಗ ಭಗವಂತನ ಕರುಣೆ ಎಂಬ ವಿನಯವಿದೆ. ಸಾಲುಗಳ ಮಧ್ಯೆ ಓದಿಕೊಂಡಾಗ ಮಾತ್ರ ಭಾರ್ಗವಿಯವರ ಕಷ್ಟದ ಬಗ್ಗೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯ. ಬಾಲ್ಯದಲ್ಲಿ ಬಹುಬೇಗ ತಂದೆಯನ್ನು ಕಳೆದುಕೊಂಡಿದ್ದರೂ, ತನ್ನನ್ನು “ಭಾರ್ಗವಿಯ ಭಾಗ್ಯರೂಪ” ಎಂದೇ ಕರೆಯುತ್ತಿದ್ದ ತಂದೆಯ ಮಾತೇ ಅವರಿಗೆ ಆಶೀರ್ವಾದ ಎನ್ನುತ್ತಾರೆ. “ಹಣದ ಆ ಕಷ್ಟ ಕಾರ್ಪಣ್ಯಗಳೆಲ್ಲಾ ನಮ್ಮಮ್ಮ, ಅಪ್ಪ, ಅತ್ತೆಯ ಕಾಲಕ್ಕೇ ಕಟ್ಟಿಟ್ಟಿದ್ದ ಬುತ್ತಿಯೆಂದು ಕಾಣುತ್ತದೆ. ಮುಂದೆಂದೂ ಹಣದ ಅಭಾವ ಕಾಣಲಿಲ್ಲ” ಎನ್ನುತ್ತಾರೆ.

ವೈವಾಹಿಕ ಜೀವನದ ಮೊದಲು ವಿಧವೆ ತಾಯಿ ತಾವಿದ್ದ ಮನೆಯಲ್ಲೇ ಅರ್ಧ ಭಾಗ ಬಾಡಿಗೆ ನೀಡಿ ಜೀವನ ಮಾಡುತ್ತ ಇದ್ದುದು, ಹೇಗೇಗೋ ದೈವ ಸಹಾಯದಿಂದ ವಿದ್ಯಾಭ್ಯಾಸ ಮಾಡಿದ್ದು, ಆಗಲೇ ಲೈಬ್ರರಿಯಲ್ಲಿ ಓದು, ಶಾಲೆ – ಕಾಲೇಜುಗಳಲ್ಲಿ ನಾಟಕದಲ್ಲಿ ಭಾಗವಹಿಸಿದ್ದು, ಅದಕ್ಕೆಲ್ಲ ತಾಯಿಯ ಪ್ರೋತ್ಸಾಹ ಭಾರ್ಗವಿಯವರ ಜೀವನ ರೂಪಿಸಿತೆಂದು ತೋರುತ್ತದೆ.

ಮಗಳು ಸುಧಾ ಬೆಳವಾಡಿ, ಮೊಮ್ಮಗಳು ಸಂಯುಕ್ತ ಹೊರನಾಡು ಜೊತೆ ಭಾರ್ಗವಿ ಅಮ್ಮ

ಆಂಗ್ಲ ಭಾಷೆಯ ವಾಕ್ಯಗಳನ್ನು ಧಾರಾಳವಾಗಿ ಬಳಸಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಓದಿದ್ದು, ನಾಟಕಗಳಲ್ಲಿ ಭಾಗವಹಿಸಿದಾಗ ಸಂಭಾಷಣೆಗಳಲ್ಲಿ ಸಹಜವಾಗಿ ಬಳಸಬಹುದಾದ ಇಂಗ್ಲಿಷಿನ ವಾಕ್ಯಗಳು ಇದರ ಪ್ರಭಾವವಿರಬಹುದು. ಮೇಕಪ್ ನಾಣಿಯವರ ಪರಿಚಯ, ನಂತರ ಅವರ ಜೊತೆ ಆದ ಮದುವೆ ಬಗ್ಗೆ ಅವರ ಅಭಿಪ್ರಾಯ ಗುಪ್ತವಾಗಿಯೇ ಉಳಿಯುತ್ತದೆ. ಎಲ್ಲೂ ಅದನ್ನು ಹೇಳಿಲ್ಲ. ಮೌನಂ ಸಮ್ಮತಿ ಲಕ್ಷಣಂ ಎಂಬಂತೆ ಅವರ ಮದುವೆ ಆಗುತ್ತದೆ.

“ಅದ್ಯಾಕೋ ಅದು (ಮದುವೆ) ನನ್ನಂತಹ ಹೆಣ್ಣುಮಕ್ಕಳು – ಅಂದರೆ ಅಸಾಧಾರಣವಾದ ತಾಳ್ಮೆ, ಶಾಂತ ಸ್ವಭಾವ ಇತ್ಯಾದಿ ಹೆಣ್ಣಲ್ಲಿ ಇರಲೇಬೇಕಾದ ಸದ್ಗುಣಗಳ ಕೊರತೆ ಇರುವ ಹೆಣ್ಣುಗಳು – ನಿಭಾಯಿಸುವುದಕ್ಕೇ ಆಗದ ಜವಾಬ್ದಾರಿ ಅನ್ನೋ ಭಾವನೆ ಇತ್ತು ಎನ್ನುತ್ತಾರೆ. “ಮದುವೆ ಆದ ಹೊಸದರಲ್ಲಿ ಹೆಣ್ಣುಮಕ್ಕಳು ೧೦೦ ರಲ್ಲಿ ಕಡೇಪಕ್ಷ ೮೫ ಜನರಾದರೂ ಈ ಆತ್ಮಹತ್ಯೆ ಸಾಹಸಕ್ಕೆ ಕೈಹಾಕಿರುತ್ತಾರೆ. ಆದರೆ ಅದರಲ್ಲಿ ಯಶಸ್ವಿ ಆಗೋರು ಕೇವಲ ಐದು ಜನ ಮಾತ್ರ ಅಂತ” ಈ ಮಾತುಗಳು ತಣ್ಣಗೆ ಹೇಳಬೇಕಾದುದನ್ನೆಲ್ಲ ಹೇಳುತ್ತವೆ. ಭಾರ್ಗವಿ ಮತ್ತು ಅವರ ಅಮ್ಮನ ಬಸಿರು, ಬಾಣಂತಿತನದ ಗೋಳಿನ ಕಥೆ (ಕುಟುಂಬ ಯೋಜನೆ ಇರದ ಕಾಲದಲ್ಲಿ) ಆಗಿನ ಕಾಲದ ಎಲ್ಲ ಹೆಣ್ಣುಗಳ ಕಥೆಯೂ ಆಗಿದೆ.

ಕುಟುಂಬದ ಜೊತೆ ಭಾರ್ಗವಿ ಅಮ್ಮ

ಸರ್ಕಾರಿ ನೌಕರಿ ಮಾಡುತ್ತ, ಸಂಸಾರ ನಿರ್ವಹಣೆಗೆ ಲೋಪ ಬಾರದಂತೆ, ರಂಗ ಕಲಾವಿದೆಯಾಗಿಯೂ ಯಶಸ್ಸು ಗಳಿಸಿದ್ದು ಭಾರ್ಗವಿಯವರ ಶಾಂತ ಸಮಚಿತ್ತದ ವ್ಯಕ್ತಿತ್ವದಿಂದಾಗಿಯೇ ಇರಬೇಕು. ಅತ್ತೆ ಮಾವನವರ ಜೊತೆ ಒಂದೇ ಮನೆಯಲ್ಲಿದ್ದಾಗ ಒಮ್ಮೆ ಭಾರ್ಗವಿಯವರ ಅಮ್ಮ ಅವರ ಮನೆಯಲ್ಲಿ ಬಂದು ಜೊತೆಗಿರುತ್ತಾರೆ. ಭಾರ್ಗವಿಯವರ ಅತ್ತೆ ತಮ್ಮ ಬೀಗಿತ್ತಿಗೆ “ನೀವು ಹೇಗೆ ಮಗಳ ಮನೆಯಲ್ಲಿ ಇಷ್ಟು ಆರಾಮಾಗಿ ಇರುತ್ತೀರೋ ಏನೋ? ನನಗೆ ಮಗಳ ಮನೆಯಲ್ಲಿ ಇರಲಿಕ್ಕೇ ಆಗುವುದಿಲ್ಲ” ಎಂದಾಗ ಭಾರ್ಗವಿಯವರ ತಾಯಿ “ನನ್ನ ಮಗಳೇ ಆರ್ಥಿಕವಾಗಿ ಈ ಮನೆ ಮುನ್ನಡೆಸುತ್ತಿರುವುದರಿಂದ ನನಗೆ ಸಂಕೋಚವಿಲ್ಲ” ಎನ್ನುವುದು ವಿಶೇಷ ಗಮನ ಸೆಳೆಯುತ್ತದೆ.

ಮೇಕಪ್ ಕಲಾವಿದ ನಾರಾಯಣ್ ರವರ ಪತ್ನಿಯಾಗಿ ತಮ್ಮದೇ ಸ್ವತಂತ್ರ ವ್ಯಕ್ತಿತ್ವ ಉಳಿಸಿಕೊಂಡು, ನಾಲ್ಕು ಪ್ರತಿಭಾವಂತ ಮಕ್ಕಳ ತಾಯಿಯಾಗಿ (ಸುಜಾತ, ಪ್ರಕಾಶ, ಸುಧಾ, ಪ್ರದೀಪ) “ನಾನು ಭಾರ್ಗವಿ” ಎಂದು ಶಾಂತವಾಗಿಯೇ ಹೇಳಿಕೊಳ್ಳುತ್ತಾ ಕನ್ನಡ ರಂಗಭೂಮಿಯಲ್ಲಿ ತಮ್ಮ ಸಹಜಾಭಿನಯದ ಛಾಪಿನಿಂದ ಗಟ್ಟಿ ಹೆಜ್ಜೆಗಳ ಗುರುತನ್ನು ಬಿಟ್ಟು ಹೋಗಿರುವುದು ಬಹು ದೊಡ್ಡ ಸಾಧನೆಯೇ ಸರಿ.


  • ಬಿ. ಎಸ್. ಶಿವಕುಮಾರ – ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ಕೆಪಿಸಿಲ್, ಲೇಖಕರು, ಶಿವಮೊಗ್ಗ.

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading