ಚಾರಣ ಮಾಡಬೇಕೆ ಬನ್ನಿ ‘ಓಂ ಬೆಟ್ಟ’ – ಟಿ.ಶಿವಕುಮಾರ್

ಪ್ರಕೃತಿ ಸೌಂದರ್ಯವನ್ನು ಸವಿಯಲು ನಾವುಗಳು ದೂರದ ಜಿಲ್ಲೆಗಳು ಮತ್ತು ಬೇರೆ ರಾಜ್ಯಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ. ಆದರೆ ಏಲಕ್ಕಿ ನಾಡು ಎಂದೇ ಪ್ರಸಿದ್ದಿಯನ್ನು ಪಡೆದಿರುವ ಹಾವೇರಿ ಜಿಲ್ಲೆಯಲ್ಲೊಂದು ಚಾರಣ ಪ್ರಿಯರನ್ನು ಕೈಬೀಸಿ ಕರೆಯುವ ಈ ಓಂಬೆಟ್ಟ ಪ್ರಕೃತಿ ಪ್ರಿಯರನ್ನು ಸಹ ತನ್ನತ್ತ ಸೆಳೆಯುವಂತೆ ಮಾಡುತ್ತಿದೆ. ಲೇಖಕ ಟಿ.ಶಿವಕುಮಾರ್ ಅವರು ಈ ಕುರಿತು ಬರೆದ ಲೇಖನವನ್ನು ತಪ್ಪದೆ ಓದಿ…

ಹಾವೇರಿ ಜಿಲ್ಲೆಯ ತಾಲ್ಲೂಕು ಕೇಂದ್ರವಾದ ರಟ್ಟೀಹಳ್ಳಿಯಿಂದ ಸ್ವಲ್ಪವೇ ದೂರವಿರುವ ಕಣವಿಸಿದ್ಗೇರಿ ಗ್ರಾಮ ಶ್ರೀಸಿದ್ದೇಶ್ವರ ದೇವಸ್ಥಾನ ಮತ್ತು ಓಂಬೆಟ್ಟದಿಂದ ಖ್ಯಾತಿಯನ್ನು ಪಡೆದಿದೆ.ಇಲ್ಲಿನ ಎರಡು ಬೆಟ್ಟಗಳ ಮಧ್ಯೆ ದೇವಸ್ಥಾನ ಇದ್ದು. ಕಣವಿ ಸಿದ್ದೇಶ್ವರ ಎಂದೇ ಕರೆಯುತ್ತಾರೆ. ಸಮೀಪದ ಒಂದು ಬೆಟ್ಟದ ಬಂಡೆಗಲ್ಲಿನ ಮೇಲೆ ಓಂ ಎಂದು ಬರೆದಿರುವುದರಿಂದ ಓಂಬೆಟ್ಟ ಎಂದು ಗುರುತಿಸಲಾಗಿದೆ. ಇದರ ತುದಿಯ ಮೇಲೆ ದೀಪ ಮಾಲೆ ಕಂಬವಿದೆ ಚಾರಣ ಪ್ರಿಯರಿಗೆ ಬಹು ಇಷ್ಟವಾದ ಸ್ಥಳವಿದು.

ಇಲ್ಲಿ ದೊರೆತಿರುವ ಶಿಲಾಶಾಸನಗಳ ಪ್ರಕಾರ ದೇವಸ್ಥಾನ ನಿರ್ಮಾಣವಾಗಿದ್ದು ಕ್ರಿ.ಶ 11-12 ನೇ ಶತಮಾನದಲ್ಲಿ. ಮೂಲ ಸಿದ್ದೇಶ್ವರ ದೇವಸ್ಥಾನ ಗುಹೆಯ ಒಳಗೆ ನಿರ್ಮಾಣ ಮಾಡಲಾಗಿದೆ. ಶಿವಲಿಂಗದ ಎದುರಿಗೆ ನಂದಿಯನ್ನು ಪ್ರತಿಷ್ಠಾಪಿಸಲಾಗಿದೆ, ಎಡ-ಬಲಕ್ಕೆ ಗಣೇಶ ಮತ್ತು ರೇವಣಸಿದ್ದೇಶ್ವರರನ್ನು ಸ್ಥಾಪಿಸಲಾಗಿದೆ.

ಗರ್ಭಗುಡಿಯ ಪ್ರದಕ್ಷಿಣೆಗೆ ಹೊರಟರೆ ಬಾವಲಿಗಳ ಹಿಂಡು ನಿಮ್ಮನ್ನು ಸ್ವಾಗತಿಸುತ್ತವೆ. ಸಾವಿರಾರು ಬಾವಲಿಗಳು ಒಂದೇ ಕಡೆ ಬಂಡೆಗಲ್ಲಿಗೆ ನೇತಾಡುತ್ತಿರುತ್ತವೆ. ಇಲ್ಲಿಂದ 3 ಕಿ ಮೀ ದೂರದಲ್ಲಿ ಭಗವತಿ ಘಟ್ಟವಿದೆ ಹಿಂದೊಮ್ಮೆ ವಿದೇಶಿಯರಿಗೆ ಬಹು ಪ್ರಿಯವಾದ ಸ್ಥಳವಿದು. ಇಲ್ಲೊಂದು ಸಣ್ಣ ನೀರಿನ ಝರಿ ಇದ್ದು ಭಗವತಿ ಕೆರೆ ಎಂದು ಕರೆಯುತ್ತಾರೆ. ಇದು ಯಾವ ಕಾಲಕ್ಕೂ ಬತ್ತುವುದಿಲ್ಲ. ಹೊರ ಜಗತ್ತಿಗೆ ಅಪರಿಚಿತವಾದ ಕಾರಣ ಭಗವತಿ ನಿರ್ಮಲ ಪ್ರಶಾಂತ ತಾಣವಾಗಿದೆ.

ಇಲ್ಲೊಂದು ಜಲಧಾರೆಯೊಂದಿದೆ ಇದಕ್ಕೆ ‘ಭಜನೆ ಬಾವಿ’ ಎಂದು ಕರೆಯುತ್ತಾರೆ. ಪ್ರತಿ ಅಮಾವಾಸ್ಯೆಯ ಮಧ್ಯರಾತ್ರಿ ದೇವತೆಯರು ಇಲ್ಲಿಗೆ ಬಂದು ಮಿಂದು ದೇವರ ಭಜನೆ ಮಾಡುತ್ತಾರೆ ಎಂಬ ಪ್ರತೀತಿ ಇದೆ. ಇಲ್ಲಿಂದ ಕಡಿದಾದ ರಸ್ತೆಯಲ್ಲಿ ಮುಂದೆ ಸಾಗಿದರೆ ಕಾಣುವುದೆ ‘ಓಂ ಬೆಟ್ಟ’ ‘ಇದೇ ಚಾರಣ ಪ್ರಿಯರನ್ನು ಮುದಗೊಳಿಸುವ ಸುಂದರ ತಾಣ. ಬೆಟ್ಟವನ್ನು ಹತ್ತಲು ಎರಡು ಮಾರ್ಗಗಳಿವೆ. ಬೆಟ್ಟದ ತುದಿಗೆ ದೀಪ ಮಾಲೆ ಕಂಬವಿದೆ. ಹಿಂದಿನ ಕಾಲದಲ್ಲಿ ಈ ಕಂಬದ ಮೇಲೆ ದೀಪವನ್ನು ಉರಿಸುತ್ತಿದ್ದರು ಎನ್ನುತ್ತಾರೆ. ಇಲ್ಲಿಂದ ಸುತ್ತಮುತ್ತಲಿನ ದೃಶ್ಯ ವೀಕ್ಷಿಸಿದರೆ ರೋಮಾಂಚನವಾಗುತ್ತದೆ. ಸಮೀಪದ ಜೋಕನಹಳ್ಳಿ ಕೆರೆ ಒಂದು ಕಪ್ ನಲ್ಲಿರುವ ಚಹಾದಂತೆ ಗೋಚರಿಸುತ್ತದೆ. ತಡಕನಹಳ್ಳಿ ಡಾಂಬರು ರಸ್ತೆ ಪ್ರಕೃತಿಯ ಮಡಿಲಿನಲ್ಲಿ ಮಲಗಿದ ಹೆಬ್ಬಾವಿನಂತೆ ಗೋಚರಿಸುತ್ತದೆ. ದೂರದ ಕುಮಾರಪಟ್ಟಣದ ಪಾಲಿಫೈಬರ್ಸ ಕಾರ್ಖಾನೆ ಗೋಚರಿಸಿ ವಿಸ್ಮಯವನ್ನುಂಟು ಮಾಡುತ್ತದೆ.ಸುತ್ತ ಮುತ್ತಲಿನ ಅನೇಕ ಗ್ರಾಮಗಳು ಚಿಕ್ಕ ಚಿಕ್ಕ ಪೆಟ್ಟಿಗೆಗಳಂತೆ ಕಾಣುತ್ತವೆ. ಮೋಡಗಳು ಬೆಟ್ಟಕ್ಕೆ ಮುತ್ತಿಕ್ಕುವ ಚಿತ್ರಗಳು ಮನಸೆಳೆಯುತ್ತವೆ. ಬೆಟ್ಟದ ಮೇಲೆ ಹೋದರೆ ಕೆಳಗೆ ಇಳಿದು ಬರುವ ಮನಸ್ಸು ಆಗುವುದೇ ಇಲ್ಲಾ ದಶಕಗಳ ಹಿಂದೆ ಇಲ್ಲಿ ಕರಡಿಗಳು ವಾಸವಾಗಿದ್ದವು ಆದರೆ ಈಗ ಈ ಬೆಟ್ಟದಲ್ಲಿ ಒಂದು ಕರಡಿಯೂ ಕಾಣುವುದಿಲ್ಲ

ಇಲ್ಲಿ ಪ್ರಕೃತಿ ಹಚ್ಚಹಸಿರು ಹೊದ್ದು ಮಲಗಿದ್ದಾಳೆ ಹಾಗಾದರೆ ನೀವು ಬರ್ತಿರಿ ತಾನೆ.


ಚಿತ್ರ ಲೇಖನ: ಟಿ.ಶಿವಕುಮಾರ್ಲೇಖಕರು ಮೂಲತಃ ದಾವಣಗೇರೆ ಜಿಲ್ಲೆ ಹರಿಹರ ತಾಲೂಕಿನ ಗಡಿ ಗ್ರಾಮ ಹಾಲಿವಾಣ. ಪ್ರಸ್ತುತ ಹಾವೇರಿ ಜಿಲ್ಲೆ ಹಾನಗಲ್ಲ ತಾಲೂಕಿನ ಲಕ್ಷ್ಮೀಪುರ ಗೊಲ್ಲರ ಬಿಡಾರ ಸ.ಕಿ. ಪ್ರಾ ಶಾಲೆಯಲ್ಲಿ ಸಹ ಶಿಕ್ಷಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದು. ಚಿಕ್ಕದಿಂನಿಂದಲೇ ಬರೆಯುವ ಗೀಳನ್ನು ಹಚ್ಚಿಕೊಂಡು ಈಗ ಅನೇಕ ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದಾರೆ. ಲಕ್ಷ್ಮೀಪುರ ಬಿಡಾರ, ತಾ. ಹಾನಗಲ್ಲ ಜಿ. ಹಾವೇರಿ.

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW