ಯಶೋದೀಕ್ಷೆ ಪುಸ್ತಕ ಪರಿಚಯ – ಅಮೃತ ಎಂ ಡಿ

ಲೇಖಕ ದೀಕ್ಷಿತ್ ನಾಯರ್ ಅವರ ಯಶೋದೀಕ್ಷೆ ಕೃತಿಯ ಕುರಿತು ಯುವ ಲೇಖಕಿ ಅಮೃತ ಎಂ ಡಿ ಅವರು ಓದುಗರೊಂದಿಗೆ ಹಂಚಿಕೊಂಡಿದ್ದಾರೆ, ತಪ್ಪದೆ ಮುಂದೆ ಓದಿ….

ಕೃತಿ :ಯಶೋದೀಕ್ಷೆ
ಲೇಖಕ : ದೀಕ್ಷಿತ್ ನಾಯರ್
ಬೆಲೆ :150
ಪುಟಗಳು:160
ಪ್ರಕಾಶನ : ಯುವ ವಾಗ್ಮಿ ಬಳಗ

ಬದುಕು ಅಣಿ ತಪ್ಪಿದಾಗ, ಅಲ್ಲೆಲ್ಲೋ ಎಣಿಸದ ಅಲೆ ಬಂದು ಬಡಿದಾಗ, ಮತ್ತೆಲ್ಲೋ ಅಂದುಕೊಂಡಿದ್ದು ನೆರವೇರದೆ ಉಳಿದಾಗ, ಎದೆಯೊಳಗೆ ಹತಾಶೆ ಜನಿಸುವಷ್ಟು ಸುಲಭವಾಗಿ ,ಸೋತು ಗೆಲ್ಲುತ್ತೇನೆ ಎಂಬ ಹುಂಬತನ ಜನಿಸದು.

ಬದುಕ ತುಂಬಾ ಸಾಲು ಸೋಲು ಎದೆಗವಚಿ ಕುಂತಾಗ ಗೆಲ್ಲಬೇಕೆಂಬ ಹಠ ಮನ ತುಂಬುವುದು ಬಹಳ ಅಪರೂಪ. ಆ ಅಪರೂಪ ಪ್ರತಿ ಸಲ ಎದೆಯ ಮಹಲಿನಲ್ಲಿ ಜನಿಸಬೇಕು ಎಂದರೆ ಸೋತವರ ಬದುಕು ನಮ್ಮ ಬದುಕನ್ನು ಸುತ್ತಬೇಕು. ಸಾಲು ಸೋಲಿನ ನಂತರ ಗೆದ್ದವರ ಚರಿತೆ ನಮ್ಮ ಎದೆ ತಾಗಬೇಕು.

ಆಗ ನಮ್ಮೊಳಗೆ ಮಲಗಿರುವ ಕೂಸು ಎದ್ದು ಹೊರ ಪ್ರಪಂಚ ನೋಡುತ್ತದೆ. ಆ ಕಾರಣಕ್ಕೆ ನಮ್ಮೊಳಗೆ ಬತ್ತುವ ಚಿಗುರನ್ನು ಚಿಮ್ಮಿಸಲು, ಹೊರ ಹೊಮ್ಮದ ಆಶಾಕಿರಣವನ್ನು ಹೊರಹೊಮ್ಮಿಸಲು ಔಷಧಿ ಬೇಕಾಗುತ್ತದೆ. ಅಂತಹ ಔಷಧಿಗಳು ಅಂಗಡಿಯಲ್ಲಿ ಸಿಗುವುದಿಲ್ಲ. ಪುಸ್ತಕದೊಳಗೆ ಮುಳಗಬೇಕು.ತೆರೆದ ಮನಸ್ಸಿನಿಂದ ಹೊರ ಪ್ರಪಂಚದ ಕಡೆ ಇಣುಕಬೇಕು, ಬಂದಿದ್ದೆಲ್ಲವನ್ನು ಎದೆಗೆ ಅಪ್ಪಿಕೊಂಡು ನಲಿಯಬೇಕು. ಎಲ್ಲ ಇಲ್ಲಗಳ ನಡುವೆ ಯಶಸ್ಸನ್ನು ಹುಡುಕಬೇಕು. ನಮ್ಮೊಳಗಿನ ಅಹಂ ದಹಿಸಿ,ಪರರ ನಡುವಿನ ಪರದೆ ಸರಿಸಿ, ನಮ್ಮವರೆಂಬ ಉತ್ಕಟ ಭಾವದಲ್ಲಿ ಬೆರೆಯಬೇಕು.

ಆಗ ಕಾಣುತ್ತದೆ ನೋಡಿ,ಯಶಸ್ಸು ಎಂದರೆ ಹಣ ಗಳಿಕೆ, ಹೆಸರು,ಅಸ್ತಿತ್ವ ಅಷ್ಟೇ ಅಲ್ಲ.ಅದರ ಆಚೆಗೆ ಕಟ್ಟಿಕೊಂಡ ಬದುಕಿನ ನಡತೆ ,ಅದರ ಆಚೆಗೆ ಒಪ್ಪಿಕೊಂಡ ಜೀವನ ಎಂದು. ಶ್ರೀಮಂತ ಎಂದಾಕ್ಷಣ ಆತನು ಯಶಸ್ವಿ ಅಂತಲ್ಲ, ಆತನು ಕನಿಷ್ಟ ತನ್ನ ಮನಸ್ಸನ್ನು ನೆಮ್ಮದಿ ಇಂದ ಸಂತೃಪ್ತಿಗೊಳಿಸಲಾರ, ಬಡವ ಎಂದಾಕ್ಷಣ ಅವನು ಬಲಹೀನನಲ್ಲ ತುಡಿಯುವ ಅಂತಃಕರಣದ ಮುಂದೆ.

ದೀಕ್ಷಿತ್ ನಾಯರ್

ಸೋಲು- ಗೆಲುವು ಅಂತಿಮ ಅಧ್ಯಾಯವಲ್ಲ, ಪದೇ ಪದೆ ನಾವು ನೀವು ಎದುರಿಸ ಬೇಕಾದ ದಿನನಿತ್ಯದ ಪಾಠ ಪ್ರವಚನಗಳು. ಹೀಗೆ ಇಡೀ ಪುಸ್ತಕದ ಉದ್ದಕ್ಕೆ ಇಂತಹದ್ದೆ ಕಥೆ ಮನ ಆವರಿಸುತ್ತದೆ. ಮನ ಆವರಿಸುವ ಗುಚ್ಚವ ಮನೆ ತಲುಪಿಸಿಕೊಳ್ಳಿ. ಯುವ ಲೇಖಕ ದೀಕ್ಷಿತ್ ನಾಯರ್ ಇಂದ ಕನ್ನಡ ಸಾರಸತ್ವ ಲೋಕ ವಿಜೃಂಭಿಸಲೀ ಎಂದು ಹಾರೈಸುವೆ.

ಇದರೊಟ್ಟಿಗೆ ಮಾತೃ ಭಾಷೆ ಅಲ್ಲದ ಭಾಷೆಯ ಹೃದಯ ಭಾಷೆಯಾಗಿ ಮಾಡಿಕೊಂಡು, ಯಾರ ಹಂಗಿಲ್ಲದೆ ಕನ್ನಡಕ್ಕಾಗಿ ತುಡಿಯುವ ವ್ಯಕ್ತಿತ್ವವುಳ್ಳ ಈ ಮನಸ್ಸು ಸಾಹಿತ್ಯ ಲೋಕದಲ್ಲಿ ಚಿರಸ್ಥಾಯಿ ಆಗಿ ಉಳಿಯಲಿ…


  • ಅಮೃತ ಎಂ ಡಿ  – ಕವಿಯತ್ರಿ, ಯುವ ಲೇಖಕಿ, ಶಿಕ್ಷಕಿ, ಶಿವಮೊಗ್ಗ

Leave a Reply

Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading