ಪೋಷಕರಾದ ಕೂಡಲೇ ತಮ್ಮ ಬಾಲ್ಯವನ್ನ ಮರೆಯುವುದು, ಶಿಕ್ಷಕರಾದ ಕೂಡಲೇ ತಮ್ಮ ಶಾಲಾ ಕಾಲೇಜು ದಿನಗಳಲ್ಲಿ ತಾವೇನೂ ತರ್ಲೆ ತಂಟೆಯನ್ನೇ ಮಾಡಿಲ್ಲವೆಂಬಂತೆ ಟಿಪಿಕಲ್ ಆಗಿ ಅಧಿಕಾರ ಚಲಾಯಿಸುವ ಮನಸ್ಥಿತಿಯನ್ನ ಅರಗಿಸಿಕೊಳ್ಳುವುದು ಕಷ್ಟ. ಇದನ್ನ ಶ್ರೀ ಎಷ್ಟು ಸರಳವಾಗಿ ಹೇಳಿದಳು ಅನ್ನಿಸಿತು.
ಶ್ರೀ ಅಂದ್ರೆ ಶ್ರೀದೇವಿ. ನನ್ನ ಕಾಲೇಜು ಸ್ನೇಹಿತೆ. ಸದಾ ಲವಲವಿಕೆಯ ಹುಡುಗಿ. ಕಾಲೇಜು ದಿನಗಳಲ್ಲೂ, ನಂತರವೂ ಅಷ್ಟೇ ಬಾಂಧವ್ಯವಿರುವ ಗೆಳತಿ. ನನಗೆ ‘ಹಿಂಡಿಗೆ ಸೇರದ ಕಾಗೆ’ ಅಂತ ನಾಮಕರಣ ಮಾಡಿದ್ದವಳು. ಕಾರಣವಿಷ್ಟೇ, ಎಲ್ಲರೊಟ್ಟಿಗೂ ಮಾತನಾಡುತ್ತಿದ್ದ ನಾನು ಯಾರೊಂದಿಗೂ ಗುಂಪು ಕಟ್ಟುತ್ತಿರಲಿಲ್ಲ. ಅವರೆಲ್ಲ ಹಿಂಡು ಹಿಂಡಾಗಿ ಸಿನಿಮಾ, ಪಿಕ್ನಿಕ್ ಅಂತ ಹೋದರೆ ನಾನು ಅದೆಲ್ಲಕ್ಕೂ ಹೊರತು. ಆ ಕಾರಣಕ್ಕೆ ಇವಳಿಂದ ಬೈಸಿಕೊಳ್ಳುತ್ತಿದ್ದೆ.
ಕಲ್ಪತರು ಕಾಲೇಜಿನಲ್ಲಿ ಪಿಯುಸಿ ಓದುವಾಗ ಇವಳ ತಂಗಿ ನಾನು ಸ್ನೇಹಿತರು, ವಿಜ್ಞಾನದ ಸಹವಾಸ ಸಾಕು ಅಂತ ಡಿಗ್ರಿಗೆ ಕಲಾ ವಿಭಾಗವನ್ನು ಆಯ್ದುಕೊಂಡಾಗ ನನಗೆ ಜೊತೆಯಾದವಳು ಶ್ರೀ. ಇವರ ಮನೆಯಲ್ಲಿ ಸದಾ ನಾಲ್ಕೈದು ಜನ ಇವಳ ಓರಗೆಯವರು – ಚಿಕ್ಕಮ್ಮನ ಮಕ್ಕಳು, ಅತ್ತೆ ಮಕ್ಕಳು, ಸ್ನೇಹಿತರು ಹೀಗೆ. ಯಾರೇ ಹೋದರೂ ಅನ್ನ ಸಂತರ್ಪಣೆ. ಇವರಮ್ಮ ಪಲ್ಲಾಗಟ್ಟಿ ಅಡವಪ್ಪ ಕಾಲೇಜಿನಲ್ಲಿ ಅರ್ಥಶಾಸ್ತ್ರದ ಲೆಕ್ಚರರ್. ಮೊದಲು ನನ್ನ ಬಾಯಲ್ಲಿ ಆಂಟಿ ಆಗಿದ್ದವರು ನಂತರ ಮೇಡಂ ಆದರು. ತುಂಬಾ ಪಾಪದವರು, ವಿಪರೀತ ಮೃದು ಸ್ವಭಾವ. ಇವಳು ಫ಼ಿಲ್ಟರ್ ಇಲ್ಲದೆ ಮನಸಿಗೆ ತೋಚಿದ್ದನ್ನ ಯಾರ ಹಂಗಿಲ್ಲದೇ ಮಾತಾಡುತ್ತಿದ್ದಳು. ಎಷ್ಟೊ ಜನ ಸೀನಿಯರ್ಸ್ ‘ನೀನು ನಿಜವಾಗ್ಲೂ ಗಾಯತ್ರಿ ಬಾಯಿ ಮೇಡಂ ಮಗಳಾ’ ಅಂತ ಹುಬ್ಬೇರಿಸಿದ್ದೂ ಇದೆ. ಇಬ್ಬರದೂ ಕಪಟವಿಲ್ಲದ ವ್ಯಕ್ತಿತ್ವ, ಆದರೆ ನಡವಳಿಕೆಯಲ್ಲಿ ಮಾತ್ರ ವೈರುಧ್ಯ.
ಇವಳು ಲೆಕ್ಚರರ್ಸ್ ಗೆ ಇಡುತ್ತಿದ್ದ ನಿಕ್ ನೇಮ್ ಗಳನ್ನ ನೆನೆದರೆ ಈಗಲೂ ನಗು ತಡೆಯಲಾಗಲ್ಲ, ಎಲ್ಲರಿಗೂ ಏನಾದ್ರೂ ಒಂದು ಹೆಸರು.
ಕಾಲೇಜಿಗೆ ಸೇರಿದ್ದ ಹೊಸತು, ಸೈಕಾಲಜಿ ಪ್ರಯೋಗಾಲಯದಲ್ಲಿ ಮೊದಲ ದಿನ. ನಮ್ಮ ಇಡೀ ಕ್ಲಾಸ್ ಮೂರು ಬ್ಯಾಚ್ ಗಳಾಗಿದ್ದರಿಂದ ಎಲ್ಲರಿಗೂ ಕುತೂಹಲ. ನಿಮಗೆ ಏನು ಮಾಡಿಸಿದರು ಅನ್ನೊ ಪ್ರಶ್ನೆ ಎಲ್ಲರಿಗೂ ಇತ್ತು. ದುರ್ದೈವಕ್ಕೆ ನಮಗೆ ಅಂದು ಪ್ಲೇಯಿಂಗ್ ಕಾರ್ಡ್ಸ್ ರೀತಿಯ ಕಾರ್ಡ್ಸ್ ಬಳಸಿ ಮಾಡುವ ಒಂದು ಪ್ರಯೋಗ (ಹೆಸರು ಮರೆತಿರುವೆ). ಹೊರಗೆ ಬಂದ ನಂತರ ಬೇರೆ ಬ್ಯಾಚಿನವರ ಬಳಿ “ಥೂ ನಮ್ಮ ಲೆಕ್ಚರರ್ ಮೊದಲನೇ ದಿನವೇ ಇಸ್ಪೀಟ್ ಆಡಿಸಿದರು” ಅಂತ ಹೇಳಿ ನಕ್ಕಿದ್ದಳು.
ಇನ್ನೊಮ್ಮೆ ಪ್ರಶಾಂತ್ ಅಂತೊಬ್ಬ ಕ್ಲಾಸ್ ಮೇಟ್, ಡಿ.ಎಡ್ ಮುಗಿಸಿ ಪದವಿ ಸೇರಿದ್ದ, ಶಿಕ್ಷಕರ ನೇಮಕಾತಿಗೆ ಅರ್ಜಿ ಹಾಕಿದಾಗ ಕೋಚಿಂಗಿಗೆ ಅಂತ ಕಾಲೇಜು ಕಡೆ ತಿರುಗಿಯೂ ನೋಡದ ಮಹಾನುಭಾವ, ಆಗೊಮ್ಮೆ ಒಂದು ಸೆಮಿಸ್ಟರ್ ನ ಲ್ಯಾಬ್ ರೆಕಾರ್ಡ್ ಪೂರ್ತಿ ಇದೇ ಶ್ರೀದೇವಿ ಬರೆದುಕೊಟ್ಟಿದ್ದಳು. ಮುಂದಿನ ಸೆಮಿಸ್ಟರ್ ಗೆ ನನಗೆ ಗಂಟುಬಿದ್ದ ‘ಈ ಸಾರಿ ನೀವು ಬರೆದುಕೊಡ್ರಿ’ ಅಂತ. ಸ್ಕೂಲ್ ದಿನಗಳಲ್ಲಿ ನನ್ನ ನೋಟ್ಸ್ ಅನ್ನೇ ಬೇರೆಯವರ ಬಳಿ ಬರೆಸುತ್ತಿದ್ದ ನಾನು ಶ್ರೀದೇವಿ ಶಿಫಾರಸ್ಸು ಮಾಡಿದಳು ಅಂತ ಇಡೀ ರೆಕಾರ್ಡ್ ಬರೆದುಕೊಟ್ಟಿದ್ದೆ. ನಾವಿಬ್ಬರೂ ಬರೆದುಕೊಟ್ಟಾಗ ಐದಕ್ಕೆ ಐದು ಅಂಕ ಬಂದಿತ್ತು, ಮುಂದಿನ ಬಾರಿ ಅವನು ಗೀಚಿದಾಗ ನಾಲ್ಕು ಅಂಕ. ಅವನ ಗ್ರಹಚಾರ ಕೆಟ್ಟು ನಾಲಿಗೆ ಹರಿಬಿಟ್ಟಿದ್ದ-‘ನೋಡ್ರೀ ಹುಡುಗೀರು ಬರೆದ್ರೆ ಫುಲ್ ಮಾರ್ಕ್ಸ್ ಕೊಡ್ತಾರೆ, ಹುಡುಗರು ಬರೆದ್ರೆ ಕೊಡಲ್ಲ’. ಸಹಾಯ ಮಾಡಿದ್ದ ಅದೇ ಶ್ರೀ ಅವನ ಬೆವರು ಇಳಿಸಿದ್ದಳು.

ಹಾಗಂತ ಇವಳು ಸುಮ್ಮನೆ ತಮಾಷೆ ಮಾಡಿಕೊಂಡಿದ್ದ ಹುಡುಗಿಯಲ್ಲ, ದಿಟ್ಟತನದಿಂದ ತನ್ನ ವೈಯಕ್ತಿಕ ಜೀವನದ ನಿರ್ಧಾರವನ್ನು ಅವಳೇ ತೆಗೆದುಕೊಂಡವಳು, ಅಕಾಲಿಕವಾಗಿ ಗಾಯತ್ರಿ ಮೇಡಂ ತೀರಿಕೊಂಡಾಗ ಮನೆಯ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ತಮ್ಮ, ತಂಗಿಯರ ಮದುವೆ ಮಾಡಿದವಳು. ಈಗಲೂ ಎಲ್ಲ ಸ್ನೇಹಿತರ ಹುಟ್ಟಿದ ದಿನವನ್ನ ನೆನಪಿಟ್ಟುಕೊಂಡು ಸಂದೇಶ ಕಳಿಸುತ್ತಾಳೆ. ಎಷ್ಟೋ ವರ್ಷ ಬೇರೆಯವರಿಗಿರಲಿ, ನನಗೇ ನನ್ನ ಬರ್ತ್ ಡೇ ಮರೆತುಹೋಗಿರುತ್ತೆ. ನಮ್ಮ ಮನೆಯಲ್ಲಿ ಅದು ಅಂತ ಮುಖ್ಯವೂ ಅಲ್ಲ. ಆದರೆ ಇವಳ ಮೆಸೇಜ್ ಅಥವಾ ಕಾಲ್ ಮಾತ್ರ ತಪ್ಪುವುದಿಲ್ಲ. ನನಗೆ ಅವಳ ಬರ್ತ್ ಡೇ ಖಂಡಿತ ನೆನಪಿಲ್ಲ, ನನ್ನ ಹಣೇಬರ ಗೊತ್ತಿರೋ ಅವಳು ಅದಕ್ಕೆ ತಲೆ ಕೆಡಿಸಿಕೊಳ್ಳಲ್ಲ.
ಇಂತಿಪ್ಪ ಶ್ರೀ ಯಾಕೋ ವಾಟ್ಸ್ ಆಪ್ ಡಿಪಿ ನೋಡಿದ್ದಾಳೆ. ಮೆಸೇಜ್ ಮಾಡಿದ್ದಾಳೆ. ಅವಳೊಂದಿಗೆ ಮಾತಾಡಿ ಬಹಳ ಕಾಲವಾಗಿದ್ದರಿಂದ ವಾಪಸ್ಸು ಮೆಸೇಜ್ ಮಾಡದೆ ಕಾಲ್ ಮಾಡಿದೆ. ಒಂದಷ್ಟು ಹರಟಿದೆವು. (ಒಂದಷ್ಟು ಅಂದ್ರೆ ಮಿನಿಮಮ್ ಅರ್ಧ ಗಂಟೆ ಅಂತ ಹೇಳಬೇಕಾಗಿಲ್ಲ )ಕಾಲೇಜಲ್ಲಿ ನೀನು ಹೇಗಿರ್ತೀಯಾ ತುಂಬಾ ಸ್ಟ್ರಿಕ್ಟಾ? ಸ್ಟೂಡೆಂಟ್ಸ್ ಹೆದರುಕೊಂತಾರಾ? ಅಂತ ಕೇಳಿದಳು. ‘ಇಲ್ಲ, ತೀರಾ ಅಗತ್ಯವಿಲ್ಲದ ಹೊರತು ನಾನು ಸ್ಟ್ರಿಕ್ಟ್ ಅಲ್ಲ. ನನಗ್ಯಾರೂ ಹೆದರೋದು ಇಲ್ಲ, ಅಷ್ಟಕ್ಕೂ ಯಾರನ್ನಾದ್ರೂ ಹೆದರಿಸಿ ಏನನ್ನಾದ್ರೂ ಕಲಿಸ್ತೀವಿ ಅನ್ನೋದ್ರಲ್ಲಿ ನಂಬಿಕೆ ಇಲ್ಲ. ಅಲ್ಲದೆ ನನ್ನದು ಲಾಂಗ್ವೇಜ್ ಕ್ಲಾಸ್ ಆಗಿರೋದ್ರಿಂದ ಸ್ಟೂಡೆಂಟ್ಸ್ ಆರಾಮಾಗಿರ್ತಾರೆ ಅಂದೆ. ಅದಕ್ಕವಳು ‘ ಹೂಂ ಕಣೆ ತುಂಬಾ ಸ್ಟ್ರಿಕ್ಟ್ ಮಾಡಬಾರದು, ನಾವೇನು ಕಾಲೇಜಿನಲ್ಲಿ ಕಡಿಮೆ ಆಡಿದ್ವಾ’ ಅಂದಳು, ಅದವಳ ಪ್ರಾಮಾಣಿಕ ಪ್ರತಿಕ್ರಿಯೆ.
ಪತ್ರಿಕೆಯಲ್ಲಿ ಜ್ಯೋತಿ ಅವರ ಒಂದು ಲೇಖನ ಓದಿದ್ದೆ. ಶಿಕ್ಷಕರು, ಪೋಷಕರು ತಮ್ಮ ಮನೋಭಾವವನ್ನ, ನಡವಳಿಕೆಯನ್ನ ವಿಮರ್ಶಿಸಿಕೊಳ್ಳಬೇಕು ಅನ್ನುವಂತ ಬರಹ. ಕಾಲೇಜಿನ ಗ್ರಂಥಾಲಯದಲ್ಲಿ ಈ ಬಗ್ಗೆ ಪರ ವಿರೋಧ ಚರ್ಚೆಗಳು ಜೋರಾಗಿಯೇ ನಡೆದಿದ್ದವು. ಎಲ್ಲವನ್ನೂ ಕೇಳಿಸಿಕೊಂಡು ನಕ್ಕು ಸುಮ್ಮನಾಗಿದ್ದೆ. ಪೋಷಕರಾದ ಕೂಡಲೇ ತಮ್ಮ ಬಾಲ್ಯವನ್ನ ಮರೆಯುವುದು, ಶಿಕ್ಷಕರಾದ ಕೂಡಲೇ ತಮ್ಮ ಶಾಲಾ ಕಾಲೇಜು ದಿನಗಳಲ್ಲಿ ತಾವೇನೂ ತರ್ಲೆ ತಂಟೆಯನ್ನೇ ಮಾಡಿಲ್ಲವೆಂಬಂತೆ ಟಿಪಿಕಲ್ ಆಗಿ ಅಧಿಕಾರ ಚಲಾಯಿಸುವ ಮನಸ್ಥಿತಿಯನ್ನ ಅರಗಿಸಿಕೊಳ್ಳುವುದು ಕಷ್ಟ. ಇದನ್ನ ಶ್ರೀ ಎಷ್ಟು ಸರಳವಾಗಿ ಹೇಳಿದಳು ಅನ್ನಿಸಿತು.
- ಆಶಾ ಟಿ.ಎಸ್
