ಸಿಯಾಚಿನ್ ನಲ್ಲಿ ಮಂಜುಗಡ್ಡೆಗಳ ಕೆಳಗೆ ಹುದುಗಿದ್ದರೂ ಸಹ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿ ಹುತಾತ್ಮನಾದ ವೀರಯೋಧ ಹನುಮಂತಪ್ಪ ಕೊಪ್ಪದ್ ಅವರಿಗೆ ಭಾರತೀಯ ಸೇನೆ ‘ಸೇನಾ ಮೆಡಲ್’ ನೀಡಿ ಗೌರವಿಸಿತು. ಆ ಮಹಾನ್ ಯೋಧನ ಕುರಿತಾದ ಲೇಖನವನ್ನು ವಿಂಗ್ ಕಮಾಂಡರ್ ಸುದರ್ಶನ ಅವರು ಬರೆದಿದ್ದಾರೆ, ಮುಂದೆ ಓದಿ…
ಸಿಯಾಚಿನ್ ಅಂತ ಕೇಳಿದರೇ ನಮಗೆ ಕುಳಿತಲ್ಲೇ ಸಣ್ಣಗೆ ನಡುಕ ಉಂಟಾಗುತ್ತದೆ, ಅಷ್ಟು ಛಳಿ, ಹಿಮಪಾತ, ಹಿಮಮಳೆ…ಅದೊಂದು ಹಿಮದ ತವರೂರು. ಸಮುದ್ರ ಮಟ್ಟದಿಂದ ಇಪ್ಪತ್ತು ಸಾವಿರ ಅಡಿಗೂ ಹೆಚ್ಚು ಎತ್ತರವಿರುವ ಈ ಪರ್ವತ ಶಿಖರ, ಸುಮಾರು 76 ಕಿಮೀಗಳಷ್ಟು ಉದ್ದವಿದೆ. ಮೊದಲೆಲ್ಲಾ ಇಲ್ಲಿಗೆ ಕೇವಲ ಸಾಹಸಿ ಪರ್ವತಾರೋಹಿಗಳು ಮಾತ್ರ ಏರಿ ಬರುವ ಸಾಹಸ ಮಾಡುತ್ತಿದ್ದರು ಆದರೆ ಈ ನೀರ್ಗಲ್ಲು ಈಗ ಭಾರತೀಯ ಸೈನ್ಯದ ಶಾಶ್ವತ ತಾಣ. ಇಲ್ಲಿನ ಉದ್ದಗಲಕ್ಕೂ ಇರುವ ಹಲವಾರು ಕಾವಲು ತಾಣಗಳಲ್ಲಿ ತಂಗಿರುವ ಈ ಸೈನಿಕರ ಇಲ್ಲಿನ ಕಠಿಣವಾದ ದೈನಂದಿನ ಜೀವನ ಹೇಗಿರುತ್ತದೆ ಎಂದು ಕೇಳಿದರೆ ಮೈ ಜುಮ್ ಎನ್ನುತ್ತದೆ.
1984 ರಲ್ಲಿ ‘ಆಪರೇಷನ್ ಮೇಘದೂತ’ ಎನ್ನುವ ಸೈನ್ಯದ ಕಾರ್ಯಾಚರಣೆಯೊಂದಿಗೆ ಭಾರತೀಯ ಸೇನೆ ಸಿಯಾಚಿನ್ ನೀರ್ಗಲ್ಲಿಗೆ ಪ್ರವೇಶಿಸಿತು.

(ಹುತಾತ್ಮನಾದ ವೀರಯೋಧ ಹನುಮಂತಪ್ಪ ಕೊಪ್ಪದ್)
ಪಾಕಿಸ್ತಾನ ಮತ್ತು ಭಾರತದ ನಡುವೆ ನಡೆದ 1948 ರ ಕದನ ವಿರಾಮ ರೇಖೆ ಮತ್ತು 1972 ನಲ್ಲಿ ನಡೆದ ಸಿಮ್ಲಾ ಒಪ್ಪಂದಗಳನ್ನು ಉಲ್ಲಂಘಿಸಿ, ಪಾಕೀಸ್ತಾನ ಈ ಪ್ರದೇಶ ತನ್ನದೇ ಎಂಬ ಧೋರಣೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹರಿಬಿಟ್ಟು, ಸಿಯಾಚಿನ್ ಶಿಖರದ ಮೇಲೆ ತನ್ನ ಅಧಿಪತ್ಯ ಸಾಧಿಸುವ ಹುನ್ನಾರದ ಸುಳಿವು ಸಿಗುತ್ತಲೇ ಭಾರತದ ಸೈನ್ಯ ಸಂಪೂರ್ಣ ಸಿದ್ಧತೆಯೊಂದಿಗೆ ಇಲ್ಲಿ ಬಂದು ತಿರಂಗ ಧ್ವಜವನ್ನು ಸ್ಥಾಪಿಸಿಯೇ ಬಿಟ್ಟಿತು. ಮುಂದೆ ನಡೆಯಲಿದ್ದ ಪಾಕೀಸ್ತಾನದ ದುಸ್ಸಾಹಸಕ್ಕೆ ತೆರೆಬಿತ್ತು.
ಈ ದುರ್ಗಮ ಸ್ಥಳದಲ್ಲಿ ಒಂದು ದಿನ ಸುಮ್ಮನೇ ಕೂತುಕೊಂಡು ಕಾಲಕಳೆಯುವುದೂ ಸಹಾ ಕಷ್ಟಸಾಧ್ಯ, ಇನ್ನು ಇಲ್ಲಿ ಯುದ್ಧ ಮಾಡಿ ಗೆದ್ದಿದ್ದಾರೆ, ಸದಾ ಸನ್ನದ್ಧರಾಗಿರುತ್ತಾರೆ ನಮ್ಮ ಸೈನಿಕರು ಎಂದರೆ ಅವರ ಸಾಹಸ, ದೈಹಿಕ ಮತ್ತು ಮಾನಸಿಕ ಸ್ಥೈರ್ಯಕ್ಕೊಂದು ಸಲ್ಯೂಟ್.
ವಿಶ್ವದಲ್ಲೇ ಅತಿ ಎತ್ತರವಾದ ಯುದ್ಧಭೂಮಿ ಇದು. ಆದರೆ ಇಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ನಡೆದ ಯುದ್ಧದಲ್ಲಿ ಮಡಿದವರಿಗಿಂತ ಹೆಚ್ಚಾಗಿ ಇಲ್ಲಿನ ಹಿಮಪಾತದಿಂದ, ರಕ್ತ ಹೆಪ್ಪುಗಟ್ಟಿಸುವ ಛಳಿಯಿಂದ ಮತ್ತು ಹಠಾತ್ತನೆ ಜರುಗುವ ಹಿಮಬಂಡೆಗಳಿಂದ ಆಗಿರುವ ಪ್ರಾಣಹಾನಿಗಳೇ ಹೆಚ್ಚು. ಸಿಯಾಚಿನ್ ನೀರ್ಗಲ್ಲು ಭಾರತಕ್ಕೆ ಯಾಕಿಷ್ಟು ಬಿಸಿತುಪ್ಪವಾಗಿದೆ? ಈ ಮೂವತ್ತೈದು ವರ್ಷಗಳಲ್ಲಿ ಸುಮಾರು 900 ಸೈನಿಕರ ಬಲಿ ಪಡೆದ ಈ ಸ್ಥಳಕ್ಕೆ ಯಾಕಿಷ್ಟು ಮಹತ್ವ ಕೊಡುತ್ತಿದೆ ಭಾರತೀಯ ಸೈನ್ಯ? ಇದನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಇತಿಹಾಸದ ಮತ್ತು ಭೌಗೋಳಿಕದ ಪುಟಗಳನ್ನು ತಿರುವಿ ಹಾಕಬೇಕು.
ಎಲ್ಲಿದೆ ಇದು ಸಿಯಾಚಿನ್?
ಇದು #ಹಿಮಾಲಯದ ಕಾರಕೋರಂ ಪರ್ವತ ಶ್ರೇಣಿಯಲ್ಲಿದೆ. ಕಾಶ್ಮೀರದ ಶ್ರೀನಗರದಿಂದ ಉತ್ತರಕ್ಕೆ ಸುಮಾರು 250 ಕಿಮೀಗಳಷ್ಟು ದೂರದಲ್ಲಿ. ಕಾಶ್ಮೀರ ಆಗಿನ್ನೂ ರಾಜಾ ಹರಿಸಿಂಗರ ಆಳ್ವಿಕೆಯಲ್ಲಿತ್ತು, 1947 – 48 ರಲ್ಲಿ ಪಾಕಿಸ್ತಾನದ ಸೈನ್ಯ ಮತ್ತು ಪಷ್ತೂನಿ ಬುಡಕಟ್ಟು ಜನಾಂಗದ ದರೋಡೆಕೋರರು ಕಾಶ್ಮೀರದ ಮೇಲೆ ಆಕ್ರಮಣ ನಡೆಸಲು ಪ್ರಾರಂಭಿಸಿದರು. ಅವರನ್ನು ಹಿಮ್ಮೆಟ್ಟಿಸಲು ಭಾರತೀಯ ಸೈನ್ಯಕ್ಕೆ ರಾಜಕೀಯ ಆದೇಶ ಕೊಡುವುದರಲ್ಲಿ ಬಹಳ ವಿಳಂಬವಾಯಿತು. ಇನ್ನೇನು ಅವರು ಶ್ರೀನಗರದವರೆಗೂ ತಲುಪಿದರು ಎನ್ನುವಷ್ಟರಲ್ಲಿ, ರಾಜಾ ಹರಿಸಿಂಗ್ ಕಾಶ್ಮೀರವನ್ನು ಭಾರತಕ್ಕೆ ಸೇರಿಸಿಕೊಳ್ಳುವ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ‘ಸರಿ ಅವರನ್ನು ಹಿಮ್ಮೆಟ್ಟಿಸಿ’ ಎಂದು ಭಾರತ ಸರ್ಕಾರ ಆದೇಶ ಹೊರಡಿಸಿತು. ಕೂಡಲೇ ಭಾರತೀಯ ಸೈನ್ಯ ಅವರನ್ನು ಅಟ್ಟಾಡಿಸಿಕೊಂಡು ಹೊಡೆದೋಡಿಸಲು ಪ್ರಾರಂಭಿಸಿತು. ಕಾಶ್ಮೀರದ ಅರ್ಧಕ್ಕೂ ಹೆಚ್ಚು ಭಾಗವನ್ನು ವಶಪಡಿಸಿಕೊಂಡಿದ್ದ ಪಾಕೀಸ್ತಾನದ ಸೈನ್ಯವನ್ನು ಹಿಮ್ಮೆಟ್ಟಿಸಿ, ವಶಪಡಿಸಿಕೊಂಡಿದ್ದ ಕಾಶ್ಮೀರದ ಭಾಗವನ್ನು ಅವರ ಹಿಡಿತದಿಂದ ಬಿಡಿಸಲಾಯಿತು. ಇನ್ನೇನು ಕೆಲವೇ ದಿನಗಳಲ್ಲಿ ಸಂಪೂರ್ಣವಾಗಿ ಕಾಶ್ಮೀರವನ್ನು ಪಾಕಿಸ್ತಾನಿ ಸೈನ್ಯದಿಂದ ಮುಕ್ತಗೊಳಿಸಲಿತ್ತು ಭಾರತೀಯ ಸೈನ್ಯ, ಅಷ್ಟರಲ್ಲೇ ಭಾರತದ ಪ್ರಧಾನಿ, ‘ಈ ಸಮಸ್ಯೆಯನ್ನು ಬಗೆಹರಿಸಿಕೊಡಿ’ ಎಂದು ವಿಶ್ವಸಂಸ್ಥೆಯ ಮೊರೆಹೋದರು. ಆಗ ವಿಶ್ವಸಂಸ್ಥೆ ಹೊರಡಿಸಿದ ಮೊದಲ ಆದೇಶವೆಂದರೆ ಎರಡೂ ಸೈನ್ಯಗಳು ಸದ್ಯಕ್ಕೆ ನಿಂತಿರುವ ಜಾಗಗಳಲ್ಲಿ ತಟಸ್ಥವಾಗಿಬಿಡಿ ಎಂದು. ಅದರ ಆಧಾರದ ಮೇಲೆ ಕಾಶ್ಮೀರದಲ್ಲಿ ಎರಡೂ ದೇಶಗಳ ಮಧ್ಯ ಒಂದು ಗೆರೆಯನ್ನು ಎಳೆಯಲಾಯಿತು, ಇದನ್ನು ‘ಕದನ ವಿರಾಮದ ಗೆರೆ’ ಎಂದು ಕರೆಯಲಾಯಿತು. ಸೈನ್ಯಕ್ಕೆ ಮುಕ್ತವಾಗಿ ಒಂದೆರಡು ವಾರಗಳ ಸಮಯ ಕೊಟ್ಟಿದ್ದರೆ, ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಬಿಡೋದು..ಏನು ಮಾಡೋದು ಮಿಂಚಿಹೋದ ಕಾಲ, ಕೈ ತಪ್ಪಿದ ಅವಕಾಶ.
ಜಮ್ಮುವಿನ ಮನವರ್ ಎಂಬ ಸ್ಥಳದಿಂದ ಪ್ರಾರಂಭವಾದ ಈ ಗೆರೆ ಈಶಾನ್ಯ ದಿಕ್ಕಿನಲ್ಲಿ ಹರಿದು ನಂತರ ಉತ್ತರಕ್ಕೆ ಹಿಮಚ್ಛಾದಿತ ಕಾಶ್ಮೀರದ ಮುಖಾಂತರ ಹಾದು ಹೋಗುತ್ತಾ
ಎನ್ ಜೆ 9842 ಎನ್ನುವ ಪಾಯಿಂಟಿಗೆ ಹೋಗಿ ನಿಂತುಬಿಡುತ್ತದೆ. ಮುಂದೆ ಆ ಗೆರೆ ಅಸ್ಪಷ್ಟವಾಗಿ ಚುಕ್ಕಿ ಚಕ್ಕಿಯಾಗಿ ಒಂದು ಅಂದಾಜಿನ ಗೆರೆಯಾಗಿ ಮುಂದುವರೆಯುತ್ತದೆ, ಏಕೆಂದರೆ ಅದು ಸಮೀಕ್ಷೆ ನಡೆಸಲು ಕಠಿಣವಾದ, ದುರ್ಗಮ, ದಟ್ಟವಾದ ಹಿಮಶಿಖರ, ಅದೇ ಸಿಯಾಚಿನ್ ಎನ್ನುವ ನೀರ್ಗಲ್ಲು.

ಫೋಟೋ ಕೃಪೆ : google
1971ರ ಭಾರತ ಪಾಕೀಸ್ತಾನದ ಯುದ್ಧದ ನಂತರ ನಡೆದ ಸಿಮ್ಲಾ ಒಪ್ಪಂದದ ಪ್ರಕಾರ ಈ ಕದನ ವಿರಾಮ ರೇಖೆಯನ್ನು ‘ ಗಡಿ ನಿಯಂತ್ರಣಾ ರೇಖೆ‘ ಎಂದು ಕರೆಯಲಾಯಿತು ಆದರೆ ಸಿಯಾಚಿನ್ ನೀರ್ಗಲ್ಲಿಗೆ ಸಂಬಂಧಿಸಿದ ಅಸ್ಪಷ್ಟತೆ ಹಾಗೇ ಉಳಿದುಕೊಂಡು ಬಿಟ್ಟಿತ್ತು. ಗಡಿವಿವಾದವನ್ನು ಶಾಶ್ವತವಾಗಿ ಪರಿಹರಿಸಲು ಸಿಕ್ಕ ಮತ್ತೊಂದು ಅವಕಾಶವಿತ್ತು, ಅದನ್ನು ಉಪಯೋಗಿಸಿಕೊಳ್ಳಲು ಆಗಲಿಲ್ಲವಲ್ಲಾ ಎನ್ನುವ ವಿಷಾದ ಈಗಲೂ ಇದೆ.
ಸಿಯಾಚಿನ್ ನೀರ್ಗಲ್ಲಿನಂತಹ ದುರ್ಗಮ, ಹಿಮಚ್ಛಾದಿತ ಪ್ರದೇಶವನ್ನು ಪ್ರವೇಶಿಸುವುದು, ಅಲ್ಲಿ ತನ್ನ ನಿಯಂತ್ರಣವನ್ನು ಸಾಧಿಸಲು ಪಾಕಿಸ್ತಾನ ಯೋಚಿಸಲಾರದು ಮತ್ತು ಅದು ಸಾಧ್ಯವಾಗದ ಮಾತು ಎಂದು ಭಾರತದ ಅಂದಿನ ಅಭಿಪ್ರಾಯ. ಆದರೆ ಕುಕೃತ್ಯಗಳಿಗೆ ಹೆಸರುವಾಸಿಯಾದ ಪಾಕೀಸ್ತಾನವನ್ನು ಕೇಳಬೇಕೇ, ಈ ಸಿಯಾಚಿನ್ ನಮ್ಮದೇ ಎಂದು ಅಂತಾರಾಷ್ಟ್ರೀಯ ವಲಯಗಳಲ್ಲಿ ಬಿಂಬಿಸಲು ಪ್ರಾರಂಭಿಸಿತು. ಇದರಿಂದ ಜಾಗೃತಗೊಂಡು ಭಾರತೀಯ ಸೈನ್ಯ 1978 ರಲ್ಲಿ ಕರ್ನಲ್ ನರೇಶ್ ಕುಮಾರ್ ಅವರ ನೇತೃತ್ವದಲ್ಲಿ 70 ಸೈನ್ಯದ ಪರ್ವತಾರೋಹಿಗಳ ತಂಡವೊಂದನ್ನು ಸಿಯಾಚಿನ್ ಗ್ಲೇಸಿಯರಿಗೆ ಕಳುಹಿಸಿತು. ಅಲ್ಲಿ ನಡೆಯುತ್ತಿದ್ದ ಪಾಕಿಸ್ತಾನದ ಕಿತಾಪತಿಯನ್ನು ಈ ತಂಡ ವರದಿ ಮಾಡಿತು. ಅಲ್ಲಿಂದ ಪ್ರಾರಂಭವಾಯಿತು ಸಿಯಾಚಿನ್ ಪ್ರದೇಶದಲ್ಲಿ ಭಾರತೀಯ ಸೈನ್ಯದ ಜಮಾವಣೆ. ಪೈಪೋಟಿಗೆ ಬಿದ್ದ ಪಾಕೀಸ್ತಾನವೂ ಸಹ ನೀರ್ಗಲ್ಲಿನ ಪಶ್ಚಿಮಕ್ಕೆ ತನ್ನ ಸೈನ್ಯವನ್ನೂ ಜಮಾವಣೆ ಮಾಡಿ ಶಿಖರದ ಅಧಿಪತ್ಯಕ್ಕೇರುವ ದುಸ್ಸಾಹಸಕ್ಕೆ ಕೈ ಹಾಕಿತು. 1984 ರಲ್ಲಿ ‘ಆಪರೇಷನ್ ಮೇಘದೂತ’ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಸೈನ್ಯದ ಷಡ್ಯಂತ್ರವನ್ನು ನಿಷ್ಕ್ರಿಯಗೊಳಿಸಿ ಭಾರತೀಯ ಸೈನ್ಯ ಸಿಯಾಚಿನ್ ಶಿಖರದ ಮೇಲೆ ತನ್ನ ಅಧಿಪತ್ಯವನ್ನು ಸಾಧಿಸುವುದರಲ್ಲಿ ಸಫಲವಾಯಿತು, ಹೀಗಾಗಿ ನಮ್ಮ ಸೈನಿಕರು ಇಲ್ಲಿ ಹವಾಮಾನದ ವೈಪರೀತ್ಯವನ್ನು ಸಹಿಸುತ್ತಾ ಗಡಿ ಕಾಯಬೇಕಾದ ಅನಿವಾರ್ಯತೆ ಉಂಟಾಯಿತು.
ಇಂದಿನವರೆಗೂ ಸಿಯಾಚಿನ್ ಒಂದು ಬಿಸಿ ತುಪ್ಪವಾಗಿ ಉಳಿದುಕೊಂಡಿದೆ.

ಫೋಟೋ ಕೃಪೆ : google
ಇಲ್ಲಿ ಚಳಿಗಾಲದಲ್ಲಿ ಸರಾಸರಿ ಸುಮಾರು ೧೦೦೦ ಸೆಂಟೀ ಮೀಟರಿನಷ್ಟು ಹಿಮಪಾತವಾಗುತ್ತದೆ ಹಾಗು ತಾಪಮಾನ ಸುಮಾರು -೫೦ ಡಿಗ್ರಿ ಸೆಂಟಿಗ್ರೇಡ್ ಗೆ ಇಳಿಯುತ್ತದೆ. ಆಮ್ಲಜನಕದ ಅಂಶ ತುಂಬಾ ಕಡಿಮೆ ಇರುವುದರಿಂದ ಉಸಿರಾಟ ಸರಾಗವಾಗಿ ನಡೆಯುವುದಿಲ್ಲ. High altitude pulmonary oedema..ಅಂದರೆ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳಲು ಕೆಲವೇ ಗಂಟೆಗಳು ಸಾಕು. ಮೂಗಿನ ತುದಿ, ಕೈಬೆರಳುಗಳಲ್ಲಿ ರಕ್ತಸಂಚಾರ ಕುಂಠಿತಗೊಂಡು ನೀಲಿ ಬಣ್ಣಕ್ಕೆ ತಿರುಗಿ ಹಿಮಹುಣ್ಣು ಮತ್ತು ಅಂಗಕ್ಷಯಗಳಾಗುವ ಸಾಧ್ಯತೆಗಳಿರುತ್ತವೆ. ಕೆಲವೊಮ್ಮೆ ರಭಸವಾಗಿ ಹಿಮಗಾಳಿ ಬೀಸಲು ಪ್ರಾರಂಭವಾದರೆ 100 ಕಿಮೀಗಳಷ್ಟು ವೇಗವಾಗಿ ಬೀಸುತ್ತಾ ಅಲ್ಲಿದ್ದ ಟೆಂಟುಗಳು, ಸಾಮಾನು ಸರಂಜಾಮುಗಳು ಕಿತ್ತೆದ್ದು ಹೋಗಿಬಿಡುತ್ತವೆ. ಹೊರಪ್ರಪಂಚದ ಜೊತೆಗೆ ಸಂಬಂಧ ಇರುವ ಒಂದೇ ಸಂಪರ್ಕ ಸಾಧನ ಎಂದರೆ ಹೆಲಿಕಾಪ್ಟರ್, ಅದು ಬಂದಿಳಿದರೆ ಮನೆಯಿಂದ ಬರುವ ಪತ್ರಗಳು, ಆಹಾರ ಸಾಮಗ್ರಿಗಳು, ಇಂಧನ, ಬೆಚ್ಚನೆಯ ವಸ್ತುಗಳ ಆಗಮನವಾಗುತ್ತದೆ. ಆಗ ಸೈನಿಕರಿಗೆ ಎಲ್ಲಿಲ್ಲದ ಖುಷಿ. ಕೆಲವೊಮ್ಮೆ ಹಿಮಗಾಳಿ, ಹಿಮಪಾತದ ಪ್ರಭಾವದಿಂದ ಎಷ್ಟೋ ದಿನಗಳವರೆಗೆ ಹೆಲಿಕಾಪ್ಟರ್ ಇಳಿಸಲು ಸಾಧ್ಯವಾಗದಿದ್ದಾಗ ಪರಿತಪಿಸುವ ಸೈನಿಕರ ಸ್ಥಿತಿ ದಯನೀಯ. ಇಷ್ಟು ಎತ್ತರದ ಹಿಮಶಿಖರದ ಮೇಲೆ ಇಂತಹ ಕಠಿಣ ವಾತಾವರಣದಲ್ಲಿ ಸೈನಿಕರ ದೈಹಿಕ ಮತ್ತು ಮಾನಸಿಕ ಕ್ಷಮತೆಗೆ ಸವಾಲೊಡ್ಡುತ್ತಿರುವ ಪರಿಸರದಲ್ಲಿ ಗಡಿಕಾಯುತ್ತಾ ದೇಶಸೇವೆ ಮಾಡುತ್ತಿರುವ ಉದಾಹರಣೆಗಳು ಪ್ರಪಂಚದ ಬೇರೆಲ್ಲೆಡೆ ಸಿಗದು.
ಅಂದು 3 ಫೆಬ್ರವರಿ 2016 ರ ಸಂಜೆ, ಪ್ರಕೃತಿಯ ವಿಕೃತ ನರ್ತನ ಪ್ರಾರಂಭವಾಯಿತು. ಭಯಂಕರ ಹಿಮಪಾತದಲ್ಲಿ ಸೋನಮ್ ಪೋಸ್ಟ್ ನಲ್ಲಿ ಕರ್ತವ್ಯನಿರತರಾಗಿದ್ದ ಮದ್ರಾಸ್ ರೆಜಿಮೆಂಟಿನ 19 ನೇ ಬೆಟಾಲಿಯನ್ನಿನ ಹತ್ತು ಸೈನಿಕರು ನಿಂತು ನಿಂತಿದ್ದಂತೇ ಮೂವತ್ತು ಅಡಿ ಆಳದ ಹಿಮದಲ್ಲಿ ಹುದುಗಿ ಹೋಗುತ್ತಾರೆ. ರಾತ್ರಿ ಎಂಟರವರೆಗೂ ಈ ಪೋಸ್ಟ್ ನಿಂದ ಯಾವ ಸಂಪರ್ಕ ಸಾಧ್ಯವಾಗುತ್ತಿಲ್ಲ. ಜಾಗೃತಗೊಂಡ ಸಿಯಾಚಿನ್ ಬೇಸ್ ಕಮಾಂಡರ್ ಉಧಮ್ ಪುರದ ಮುಖ್ಯಾಲಯಕ್ಕೆ ವಿಷಯ ತಿಳಿಸಿ ನೆರವು ಕೋರುತ್ತಾರೆ. ಹವಾಮಾನದ ಪ್ರತಿಕೂಲತೆಯಿಂದ ಮರುದಿನವೂ ಹೆಲಿಕಾಪ್ಟರ್ ಸೋನಮ್ ಪೋಸ್ಟ್ ತಲುಪಲು ಅಸಾಧ್ಯವಾಯಿತು. ಆವಾಗಲೇ ಅನ್ನಿಸಿಬಿಟ್ಟಿತ್ತು ಇಂತಹ ಘೋರ ಹಿಮಪಾಯದಲ್ಲಿ ಯಾರಾದರೂ ಬದುಕಿ ಉಳಿದಿರುವುದು ಸಾಧ್ಯವಿಲ್ಲ ಎಂದು.

ಫೋಟೋ ಕೃಪೆ : google
ಮರುದಿನ ಹವಾಮಾನ ಸ್ವಲ್ಪ ತಿಳಿಯಾಗುತ್ತಿದ್ದಂತೇ ಪ್ರಾರಂಭವಾಗುತ್ತದೆ ನೋಡಿ ಸಿಯಾಚಿನ್ನಿನ ಇತಿಹಾಸ ಕಂಡರಿಯದಂತಹ ಪರಿಶೋಧನೆ. ಮಡಿದ ಸೈನಿಕರ ಶವಗಳನ್ನು ಹುಡುಕಲು ದೊಡ್ಡದೊಂದು ಸಾಹಸ. ಸೋನಮ್ ಪೋಸ್ಟಿನ ಸಮೀಪವೇ ಇಪ್ಪತ್ತು ಅಡಿ ಸಮತಳ ಭಾಗದಲ್ಲಿ ಹೆಲಿಕಾಪ್ಟರ್ ಇಳಿಸಲು ವ್ಯವಸ್ಥೆ ಮಾಡಲಾಗುತ್ತದೆ. ಸತತವಾಗಿ ಸುಮಾರು ಒಂದು ಪಾಳಿಗೆ ಇಪ್ಪತ್ತು ಸೈನಿಕರನ್ನು ಹೊತ್ತುತರುವ ವ್ಯವಸ್ಥೆಯಾಗುತ್ತದೆ. ಒಟ್ಟು 150 ಸೈನಿಕರು ಸತತವಾಗಿ ಐದು ದಿನಗಳವರೆಗೂ ನಡೆದ ಕಾರ್ಯಾಚರಣೆಯಲ್ಲಿ ಭಾಗವಹಿಸುತ್ತಾರೆ. ಕಾಂಕ್ರೀಟಿಗಿಂತಲೂ ಗಟ್ಟಿಯಾದ ನೀಲಿ ಹಿಮವನ್ನು ಕೊರೆಯಲು ವಿದ್ಯುತ್ ಚಾಲಿತ ಗರಗಸಗಳು, ಕೊರೆಯುವ ಮಷೀನುಗಳು ಬರುತ್ತವೆ, ರೇಡಿಯೋ ಸಿಗ್ನಲ್ ಹುಡುಕುವ ಮಷೀನಿನ ಸಹಾಯದಿಂದ ಪೋಸ್ಟ್ ಇದ್ದ ಸ್ಥಳವನ್ನು ಪತ್ತೆ ಹಚ್ಚಲಾಗುತ್ತದೆ. ಸತತವಾಗಿ ಮೂರುದಿನ 35 ಅಡಿ ಆಳದವರೆಗೂ ಹಿಮವನ್ನು ಕೊರೆದು ಒಂದೊಂದಾಗಿ ಸೈನಿಕರ ಶವಗಳನ್ನು ಹುಡುಕಿ ಬೇಸ್ ಕ್ಯಾಂಪಿಗೆ ತಲುಪಿಸಲಾಗುತ್ತದೆ.
ಇಲ್ಲಿ ಯಾರಾದರೂ ಬದುಕಿರಬಹುದಾ ಎನ್ನುವ ಭರವಸೆಯನ್ನು ಕಳೆದುಕೊಂಡ ಸೈನಿಕರು ಹುದುಗಿದ್ದ ಒಂಬತ್ತು ಶವಗಳನ್ನು ಆಚೆ ಎಳೆದಿದ್ದಾರೆ, ಇನ್ನೊಂದು ಶವ ಸಿಗಬೇಕು, ಅಷ್ಟಾದರೆ ಆ ಪೋಸ್ಟ್ ನಲ್ಲಿದ್ದ ಹತ್ತೂ ಜನರ ಲೆಕ್ಕ ಸಿಕ್ಕಂತಾಯಿತು ಎನ್ನುವಷ್ಟರಲ್ಲೇ ಅಲ್ಲಿಗೆ ಕರೆತರಲಾಗಿದ್ದ ಮಿಷಾ ಮತ್ತು ಡಾಟ್ ಎನ್ನುವ ಸ್ನಿಫರ್ ನಾಯಿಗಳು ಹಿಮದಲ್ಲಿ ಕಾಣುತ್ತಿದ್ದ ತೂತಿನ ಹತ್ತಿರ ಹೋಗಿ ಬಾಲ ಅಲ್ಲಾಡಿಸುತ್ತಾ ನಿಂತು ಬಿಡುತ್ತವೆ. ಆಗ ಆಗುತ್ತದೆ ನೋಡಿ ಒಂದು ಪವಾಡ. ಹಿಮವನ್ನು ಇಂಚು ಇಂಚಾಗಿ ಬಗೆಯುತ್ತಾ ಇದ್ದವರಿಗೆ ಒಂದು ದೇಹ ಮಿಸುಗಾಡಿದ್ದು ಕಾಣುತ್ತದೆ, ಅಲ್ಲಿದ್ದವರು ನಂಬಲಾರರು ಇದನ್ನು..ಅರೆರೇ ಉಸಿರಾಡುತ್ತಿದ್ದಾನೆ, ನಿಧಾನ..ನಿಧಾನ..ಶಬ್ಬಾಶ್ ಎನ್ನುತ್ತಲೇ ಹಿಮವನ್ನು ಕೈಯಿಂದಲೇ ಬಗೆಯಲಾರಂಬಿಸುತ್ತಾರೆ ಆಗ ನಿಧಾನವಾಗಿ ಕೈಯೆತ್ತುತ್ತಾನೆ ಲಾನ್ಸ್ ನಾಯಕ್ ಹನುಮಂತಪ್ಪ ಕೊಪ್ಪದ್! ಕೂಡಲೇ ಅಲ್ಲಿಯೇ ಇದ್ದ ಡಾಕ್ಟರ್ ಆಕ್ಸಿಜನ್ ಕೊಟ್ಟು ಅವನ ಚಿಕಿತ್ಸೆ ಪ್ರಾರಂಭಿಸುತ್ತಾರೆ. ಮರುದಿನ ಬೆಳ್ಳಂಬೆಳಗ್ಗೆ ಹೆಲಿಕಾಪ್ಟರ್ ಮೂಲಕ ಉಧಾಂಪುರದ ಸೈನ್ಯದ ಆಸ್ಪತ್ರೆಗೆ ಸಾಗಿಸಲಾಗುತ್ತದೆ.

ಫೋಟೋ ಕೃಪೆ : Inida Tv
ಐದು ದಿನಗಳವರೆಗೆ 35 ಅಡಿ ಹಿಮದಲ್ಲಿ ಹುದುಗಿ ಹೋಗಿದ್ದ ಹನುಮಂತಪ್ಪ ಇನ್ನೂ ಬದುಕಿದ್ದಾನೆ ಎನ್ನುವ ವಿಷಯ ಎಲ್ಲೆಡೆ ಕಾಳ್ಗಿಚ್ಚಿನಂತೆ ಹರಡಿಬಿಡುತ್ತದೆ.
ದೇಶದ ಉದ್ದಗಲಕ್ಕೂ ವಿದ್ಯುತ್ ಸಂಚಾರವಾದಂತೆ ಜನಗಳು ‘ಅಬ್ಬಾ ಎಂತಹ ಸಾಹಸಿ’ ಎಂದು ಒಕ್ಕೊರಲಿನಿಂದ ಉದ್ಗರಿಸುತ್ತಾರೆ. ಅವನು ಪೂರ್ಣವಾಗಿ ಗುಣಮುಖನಾಗಲಿ ಎಂದು ಮನೆ ಮನೆಗಳಲ್ಲಿ ಪೂಜೆಗಳು, ದೇವಸ್ಥಾನಗಳಲ್ಲಿ ಹೋಮ ಹವನಗಳು, ವಾರಣಾಸಿಯಲ್ಲಿ ಆರತಿ, ಗುರುದ್ವಾರಗಳಲ್ಲಿ ಅರ್ದಾಸದ ಪಠನ….ದೇಶಕ್ಕೆ ದೇಶವೇ ಪ್ರಾರ್ಥಿಸಲು ಪ್ರಾರಂಭಿಸುತ್ತದೆ.
ವೈದ್ಯಕೀಯ ವಲಯದಲ್ಲೂ ಸಂಚಲನ ಪ್ರಾರಂಭವಾಗುತ್ತದೆ. ಇಂತಹ ಕೇಸ್ ಕೇಳಿರಲಿಲ್ಲ ಕಂಡಿರಲಿಲ್ಲ, ಅದೆಂತಹ ಛಲಗಾರ, ಹೋರಾಟಗಾರ ಎಂದು ದೇಶವೇ ನಿಬ್ಬೆರಗಾಗಿಬಿಡುತ್ತದೆ.
ಹೌದು ಹನುಮಂತಪ್ಪ ಹುಟ್ಟಿನಿಂದಲೂ ಹೋರಾಟಗಾರನೇ. ಧಾರವಾಡದ ಬೆಟದೂರಿನ ಬಡ ರೈತ ಕುಟುಂಬದಲ್ಲಿ ಹುಟ್ಟಿಬೆಳೆದ ಹನುಮಂತಪ್ಪ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದ.
ಅರಳಿಕಟ್ಟೆಯ ಹೈಸ್ಕೂಲು ಇದ್ದದ್ದು ಮನೆಯಿಂದ ಆರು ಕಿಲೋಮೀಟರುಗಳಷ್ಟು ದೂರ, ದಿನ ನಡೆದುಕೊಂಡು ಹೋಗುತ್ತಿದ್ದ. ಆಗಲೇ ದೈವಭಕ್ತಿ, ಯೋಗದಲ್ಲಿ ಆಸಕ್ತಿ ಆಳವಾಗಿ ಬೇರೂರಿತು. ಬಾಲ್ಯದಿಂದಲೇ ಸೈನಿಕನಾಗಬೇಕೆನ್ನುವ ಮಹದಾಸೆ. ಆದರೆ ಎರಡು ಸಲ ಆಯ್ಕೆಯ ಪ್ರಕ್ರಿಯೆಯಲ್ಲಿ ಫೇಲಾದ. ಛಲಬಿಡದ ತ್ರಿವಿಕ್ರಮನಂತೆ ಮೂರನೇ ಸಲ ಯಶಸ್ಸು ಕಂಡು ಆನಂದಕ್ಕೆ ಪಾರವಿಲ್ಲದಂತಾಯಿತು.
ಹದಿನಾಲ್ಕು ವರ್ಷಗಳ ಸೈನ್ಯದ ಸೇವೆಯಲ್ಲಿ ಹತ್ತು ವರ್ಷಗಳ ಸೇವೆ, ಜಮ್ಮು ಕಾಶ್ಮೀರದ, ಪೂರ್ವೋತ್ತರ ರಾಜ್ಯಗಳಲ್ಲಿ ಉಗ್ರ ನಿಗ್ರಹದ ದಳಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು ಲಾನ್ಸ್ ನಾಯಕ್ ಹನುಮಂತಪ್ಪ. 2015 ರಲ್ಲಿ ನಾನು ಸಿಯಾಚಿನ್ ನೀರ್ಗಲ್ಲಿನಲ್ಲಿ ಸೇವೆ ಸಲ್ಲಿಸಬೇಕು ಎನ್ನುವ ಕೋರಿಕೆಯನ್ನು ಸಲ್ಲಿಸಿ ಅಲ್ಲಿ ವರ್ಗಾವಣೆ ಮಾಡಿಸಿಕೊಂಡರು. ಯೋಗಪಟುವಾದ ಹನುಮಂತಪ್ಪ, ಸಿಯಾಚಿನ್ ಸೈನಿಕರಿಗೆ ಯೋಗ, ಧ್ಯಾನ ಕಲಿಸಲು ಪ್ರಾರಂಭಿಸಿದರು.

ವೀರಯೋಧನ ನುಮಂತಪ್ಪ ಕೊಪ್ಪದ್ ಅವರ ಕುಟುಂಬ (ಫೋಟೋ ಕೃಪೆ : hindustantimes)
ಈ ಮಧ್ಯ ಮಹಾದೇವಿಯವರೊಂದಿಗೆ ಮದುವೆಯೂ ಆಯಿತು, #ನೇತ್ರಾ ಎನ್ನುವ ಪುಟ್ಟ ಮಗುವಿನ ಆಗಮನವೂ ಆಯಿತು ಅವರ ಸಂಸಾರದಲ್ಲಿ. ಇನ್ನೇನು ಸಿಯಾಚಿನ್ ಸೇವೆಯ ನಂತರ ಕರ್ನಾಟಕದಲ್ಲಿರುವ ಹಲವಾರು ಮದ್ರಾಸ್ ರೆಜಿಮೆಂಟಿನ ಬೆಟಾಲಿಯನ್ನುಗಳಲ್ಲಿ ಪೋಸ್ಟಿಂಗ್ ಆದರೆ ಹೆಂಡತಿ ಮಗುವಿನ ಜೊತೆ ಕೆಲವು ವರ್ಷ ಇರಬಹುದೆಂದು ಆಸೆಯೂ ಇತ್ತು.
ಆದರೆ ವಿಧಿಯಾಟ ನೋಡಿ.?
ಸಾವಿಗೆ ಸವಾಲೊಡ್ಡಿ ನಿಂತು ಜಯಿಸಿ ಬಿಟ್ಟನೇನೋ ಎನ್ನವಷ್ಟರಲ್ಲಿ, ಕೊನೆ ಕ್ಷಣದವರೆಗೂ ಹೋರಾಡಿ 11 ಫೆಬ್ರವರಿ 2016 ರಂದು ಕೊನೆಯುಸಿರೆಳೆದರು. ವೀರಯೋಧ ಮತ್ತೊಮ್ಮೆ ಹುಟ್ಟಿ ಬಾ ಎಂದು ದೇಶದ ಜನಸ್ತೋಮ ಕಂಬನಿಧಾರೆಯೊಂದಿಗೆ ಬೀಳ್ಕೊಟ್ಟಿತು.
ಸಿಯಾಚಿನ್ ನಲ್ಲಿ ಮಂಜುಗುಡ್ಡಗಳ ಕೆಳಗೆ ಹುದುಗಿದ್ದರೂ ಸಹ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿ ಹುತಾತ್ಮನಾದ ವೀರಯೋಧ ಹನುಮಂತಪ್ಪ ಕೊಪ್ಪದ್ ಅವರಿಗೆ ಭಾರತೀಯ ಸೇನೆ ‘ಸೇನಾ ಮೆಡಲ್’ ನೀಡಿ ಗೌರವಿಸಿತು.
- ವಿಂಗ್ ಕಮಾಂಡರ್ ಸುದರ್ಶನ (ಇಪ್ಪತ್ತೈದು ವರ್ಷಗಳ ವಾಯುಸೇನೆಯ ಸೇವೆಯಿಂದ ನಿವೃತ್ತಿ ಪಡೆದ ನಂತರ ಇಂಡಿಗೋ ಏರ್ಲೈನ್ ನಿನಲ್ಲಿ ಏರ್ ಬಸ್ ವಿಮಾನಗಳ ವೈಮಾನಿಕ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ಪುಸ್ತಕಗಳನ್ನು ಓದುವ ಹಾಗು ಬರೆಯುವ ಹವ್ಯಾಸವನ್ನು ಇಟ್ಟುಕೊಂಡಿರುವ ಲೇಖಕರು, ‘ಹಸಿರು ಹಂಪೆ’ ಮತ್ತು ‘ಯೋಧ ನಮನ’ ಎನ್ನುವ ಎರಡು ಪುಸ್ತಕವನ್ನು ಬರೆದಿದ್ದಾರೆ).
