ಪ್ರತಿ ವರ್ಷ “ಗುರು ಪೌರ್ಣಿಮೆ” ನಿಮಿತ್ತ ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಜರುಗುವ ಪ್ರವಚನಕ್ಕೆ ಹಲವು ವರ್ಷಗಳಿಂದ ನಾನು ಹೋಗುವ ರೂಢಿ ಬೆಳಸಿಕೊಂಡಿದ್ದೇನೆ.ಒಂದು ತಿಂಗಳು ಪರ್ಯಂತ, ಒಂದು ದಿನವೂ ತಪ್ಪದೇ ನಿಯಮಿತವಾಗಿ ಶ್ರೀಗಳವರ ಪ್ರವಚನಕ್ಕೆ ಹಲವು ವರ್ಷ ಹೋದ ನಾನು,ಅಲ್ಲಿ ಕಂಡುಂಡ ಅನುಭವಗಳು ಹತ್ತು-ಹಲವು. – ರಾಜಶೇಖರ ಎಸ್.ಬಿರಾದಾರತಪ್ಪದೆ ಮುಂದೆ ಓದಿ…
ಕೆಲ ಸಂಗತಿಗಳನ್ನು ತಮ್ಮೊಡನೆ ಇಲ್ಲಿ ಹಂಚಿಕೊಳ್ಳಲು ಇಚ್ಚಿಸುವೆ.ನಾನು ಪೂಜ್ಯರ ಪ್ರವಚನಕ್ಕೆ ಹೋಗಬೇಕೆಂದು ಪ್ರತಿ ವರ್ಷ ಮೊದಲೇ ನಿರ್ಧರಿಸುತ್ತಿದ್ದೆ. ಆದರೆ…ನಿರ್ಧರಿಸಿದಂತೆ ಸಮಯಕ್ಕೆ ಸರಿಯಾಗಿ ಹೋಗುವುದು ಮಾತ್ರ ಪ್ರಯಾಸದ ಕೆಲಸವೇ ಆಯಿತು. ಕಾರಣ,ಬುದ್ಧಿಜೀಯವರು ಸಮಯ ಪರಿಪಾಲಕರು.ಅವರ ಪ್ರವಚನ ಪ್ರಾತ:ಕಾಲ 6-00 ಘಂಟೆಗೆ ಆರಂಭ. ಹೀಗಾಗಿ,ಸಕ್ಕರೆಯ ನಿದ್ರೆಯಿಂದ 5-00 ಘಂಟೆಗೆ ಕರಾರುವಕ್ಕಾಗಿ ಏಳಲೇಬೇಕು.ಬೇಗ ಎದ್ದು ನಸುಕಿನ ಕ್ರಿಯಾವಿಧಿಗಳನ್ನು ಮುಗಿಸಿ,ಹೋಗುವುದು ಒಂದು “ತಪಸ್ಸು” ಎಂದೇ ನನ್ನ ಭಾವನೆ.ಅಲ್ಲಿ ಸೇರಿದ ಬಳಿಕ “ವಿಶ್ವ ದರ್ಶನ” ನಮಗಾಗುವುದು ಖಚಿತ. ಶ್ರೀಗಳವರ ಅದ್ಭುತ ಪಾವನ ನುಡಿಗಳಲ್ಲಿ ನಿಸರ್ಗದೊಂದಿಗೆ, ಜಗತ್ತಿನ ಮೇರು ಸಾಧಕರು, ಅನುಭಾವಿಗಳು, ತತ್ವಜ್ಞಾನಿಗಳು,ಶರಣರು,ವಿಜ್ಞಾನಿಗಳು,ಸಾಹಿತಿಗಳು ಹಾಗೂ ಶ್ರೀಸಾಮಾನ್ಯರು-ರೈತಾಪಿ-ಕೂಲಿ-ಕಾರ್ಮಿಕರು ಬಂದು ಹೋಗುವುದು ಸಹಜ.ಅವರ ಪ್ರವಚನದ ಮೂಲ ಧ್ಯೇಯವೇನೆಂದರೆ, ಇಲ್ಲಿ ನಾವು ಏಕೇ ?? ಬಂದಿದ್ದೇವೆ.

ಫೋಟೋ ಕೃಪೆ : google
ಬಂದಿದ್ದೇವೆ ಎಂದ ಬಳಿಕ ಈ ಜೀವನಕ್ಕೆ ಏನಾದರೊಂದು ಅರ್ಥವಿರಬೇಕಲ್ಲವೇ ?? ಹಾಗಾದರೆ…!! ಆ ಮಹಾ ಅರ್ಥವೇನು…??? ಆ ಅರ್ಥ “ಅರ್ಥಪೂರ್ಣ”ವಾಗಬೇಕಲ್ಲವೇ…??? ಹಾಗಾದರೆ,ನಾವು ಮಾಡಬೇಕಾದುದೇನು…??? ನಮ್ಮ ಮನಸ್ಸಿಗೆ, ಶರೀರಕ್ಕೆ ಇರುವ ಅಗೋಚರ ಶಕ್ತಿ-ಸಾಮರ್ಥ್ಯ ಎಷ್ಟು…??? ಅವುಗಳನ್ನು ಹೇಗೆ ಸದ್ಭಳಸಿಕೊಳ್ಳಬೇಕು…?? ಸದ್ಭಳಕೆ ಮಾಡಿಕೊಂಡು ನಮ್ಮ ಈ “ಪರಮ ಜೀವನ” ಹೇಗೆ ? ಅರಳಿಸಿಕೊಳ್ಳಬೇಕು ಎಂಬುದೇ ಅವರ ಪ್ರವಚನದ ಮುಖ್ಯ “ತಿರುಳು” ಆಗಿರುತ್ತದೆ.ಪೂಜ್ಯರು,ಸಮಯ ಪರಿಪಾಲನೆಯಲ್ಲಿ ಅವರಿಗೆ ಅವರೇ ಸರಿಸಾಟಿ. ಇವರ ಕಾರ್ಯಕ್ರಮಗಳಲ್ಲಿ ಹಾರ-ತುರಾಯಿಗಳಿಗೆ ಆಸ್ಪದವಿಲ್ಲ.ಪ್ರವಚನದ ಸಮಯದಲ್ಲಿ “ಮೌನವೇ ಇಲ್ಲಿ ಆಭರಣ”, “ಗಿಡಮರಗಳೇ ಇಲ್ಲಿ ಆಸರೆ”, ಆಕಾಶವೇ ಇಲ್ಲಿ ಹೊದಿಕೆ.ಪ್ರಕೃತಿಯ ನಡುವೆ ಕುಳಿತು ಶ್ರವಣ ಮಾಡುವುದೇ ಇಲ್ಲಿನ ದಿನಚರಿಯಾಗಿದೆ.ಹೀಗೆ ಇಲ್ಲಿ ಬಡವ-ಬಲ್ಲಿದ,ರೋಗಿ-ನಿರೋಗಿ,ಪಂಡಿತ-ಪಾಮರ,ಉಚ್ಛ-ನೀಚ,ಎಂಬಿತ್ಯಾದಿ ವರ್ಗೀಕರಣವಿಲ್ಲ. ಅಂಥ ಯಾವುದೇ ಭಾವಗಳಿಗೆ ಇಲ್ಲಿ ಅವಕಾಶವಿಲ್ಲ.”ಸಮಷ್ಟಿ” ಭಾವದ “ವಸುದೈವ ಕುಟುಂಬಕಂ” ಎಂಬ ತತ್ವವೇ ಇಲ್ಲಿ ಪ್ರಧಾನವಾಗಿರುವುದು. ಆಗಮಿಸಿದವರೆಲ್ಲರೂ ಸಮಾನರು, ಸಶಕ್ತರು ಎಂಬ ಸದ್ಭಾವವೇ ಈ ಪರಿಸರದ ಮೂಲ ಮಂತ್ರವಾಗಿದೆ.ಪ್ರವಚನದಲ್ಲಿ ಪಾಶ್ಚಿಮಾತ್ಯ ತತ್ವ ಚಿಂತಕರಿಂದ ಹಿಡಿದು ಪೌರಾತ್ಯ ದೇಶಗಳ ತತ್ವಜ್ಞಾನಿಗಳ “ಸತ್ಯದರ್ಶನ” ಅನಾವರಣ ಮಾಡುತ್ತಾರೆ. 12ನೇ ಶತಮಾನದಲ್ಲಿ ಆಗಿ ಹೋದ ಶಿವಶರಣರ ವಚನಗಳಿಂದ ಹಿಡಿದು ರಾಮಾಯಣ, ಮಹಾಭಾರತದಂಥ ಮಹಾಕಾವ್ಯಗಳನ್ನು ಸಂದರ್ಭಕ್ಕನ್ನುಸಾರ ತೆಗೆದುಕೊಂಡು ಉದಾಹರಿಸುವುದು ವಾಡಿಕೆ. ಮಧ್ಯೆದಲ್ಲಿ ತಿಳಿಹಾಸ ಸಾಮಾನ್ಯ. ಅದು ಯಾರ ಮನಸ್ಸನ್ನು ಗೇಲಿ ಮಾಡುವಂತದಲ್ಲ.ಅಲ್ಲದೇ,ಇವರ ಪ್ರವಚನದ ಮೂಲ ಧ್ಯೇಯ ಜೀವನದ “ಸತ್ಯದರ್ಶನ”ವಾಗಿದೆ.ಇವರದು ಎಲ್ಲ ಗಡಿ, ಭಾಷೆ, ಪ್ರಾಂತ, ಮತ, ಧರ್ಮ,ಜಾತಿ, ಪಕ್ಷ, ವರ್ಣಗಳನ್ನು ಮೀರಿದ ವಿಶಾಲ ಹೃದಯದ “ವಿಶ್ವ ಮಾನವತ್ವ”ದ ” ಆಧ್ಯಾತ್ಮ”. ಅದು ನೈಜ ಬದುಕಿಗೆ ಉಪಯೋಗವಾಗಿರಬೇಕು ಎಂಬುದು ಅವರ ಪ್ರವಚನದ ಮೂಲ ಆಶಯ.

ಫೋಟೋ ಕೃಪೆ : google
ಬಹು ಭಾಷಾ ಪಂಡಿತರಾದರೂ,ಪ್ರವಚಿಸುವ ರೀತಿ ಮಾತ್ರ ಗ್ರಾಮ್ಯ ಭಾಷೆ. ಅಬಾಲವೃದ್ಧರಾದಿಯಾಗಿ ಸರ್ವರಿಗೂ ಸುಲಲಿತವಾಗಿ ತಿಳಿಯುವ ಹಾಗೇ ಹೇಳುವುದು ಇವರ ವಿಶಿಷ್ಟ ಶೈಲಿಯಾಗಿದೆ.ಇವರ ಪ್ರವಚನದ ಗರಿಷ್ಟ ಸಮಯ ನಾಲ್ವತ್ತೈದು ನಿಮಿಷಗಳು ಮಾತ್ರ. “ಸಮಯ”ವನ್ನು ಪ್ರಾಣಕ್ಕಿಂತಲೂ ಹೆಚ್ಚಾಗಿ ಪ್ರೀತಿಸುವ ಇವರು ಅದರ ಆರಾಧಕರು ಹಾಗೂ “ಸಮಯಪರಿಪಾಲಕ”ರು ಆಗಿದ್ದಾರೆ. ಕಿಸೆ ಇಲ್ಲದ ಅಂಗಿ ಧರಿಸುವ ಪೂಜ್ಯರು “ನಡೆದಾಡುವ ದೇವರು” ಎಂದೇ ಜನಮಾನಸದಲ್ಲಿ ಹಚ್ಚಹಸಿರಾಗಿದ್ದಾರೆ. ಯಾವುದೇ ಬ್ಯಾಂಕಿನ ಅಕೌಂಟ್,ಒಂದಿಂಚು ಜಾಗ, ಹಣ,ಕಾರು,ಬಂಗಲೆ ಹಾಗೂ ಆಶ್ರಮ ಹೀಗೆ,ಯಾವುದನ್ನು ಹೊಂದದೇ ಇರುವ ಜಗತ್ತಿನ ಏಕೈಕ ನಿಸ್ಪೃಹ ಸಂತಶ್ರೇಷ್ಠರೆಂದರೇ…ಅದು ನಮ್ಮ ನೆಲದ ಶ್ರೀ ಸಿದ್ಧೇಶ್ವರ ಶ್ರೀಗಳವರು ಮಾತ್ರ.ಪೂಜ್ಯರೂ 12 ತಿಂಗಳು ಊರಿಂದೂರಿಗೆ ಸಂಚರಿಸುತ್ತಿರುತ್ತಾರೆ. ಅವರು ಎಲ್ಲಿ ನೆಲೆಸಿರುತ್ತಾರೆಯೋ ಅದೇ ಅವರ ಊರು ಮತ್ತು ಅವರ ಆಶ್ರಮ.ಅಲ್ಲಿ ಸೇರುವ ಭಕ್ತಜನವೇ ಅವರ ಸದ್ಭಕ್ತರು.ಆಡಂಬರದ ಬದುಕು ಹಾಗೂ ಪ್ರಚಾರ, ಪ್ರಶಸ್ತಿಗಳಿಂದ ಬಹುದೂರವಿರುವ ಶ್ರೀಗಳವರು,ತಮಗೆ ಬಂದ ಪದ್ಮಶ್ರೀ ಪ್ರಶಸ್ತಿಯನ್ನು ಹಾಗೂ ಆಶ್ರಮಕ್ಕೆ ಬಂದ ಸರಕಾರದ 50 ಲಕ್ಷ್ಯ ರೂಪಾಯಿ ಅನುದಾನವನ್ನು ನಯವಾಗಿಯೇ ತಿರಸ್ಕರಿಸಿದ ಮಹಾನುಭಾವರು.ಇಂಥ ತ್ಯಾಗಮೂರ್ತಿಗಳು ಇಂದು ಏಲ್ಲಿಯಾದರೂ ಸಿಗುತ್ತಾರೆಯೇನು…??? ಎಂಬುದನ್ನು ನೀವೇ… ಹೇಳಿರಿ.ಈ ಶತಮಾನ ಕಂಡ ನಮ್ಮ ನೆಲದ ಸರ್ವ ಶ್ರೇಷ್ಠ ಪರಿವ್ರಾಜಕ ಸಂತರೆಂದರೇ…ಅದು ಅತಿಶಯೋಕ್ತಿಯಾಗಲಾರದು ಎಂದು ನನ್ನ ಭಾವನೆ.
- ರಾಜಶೇಖರ ಎಸ್.ಬಿರಾದಾರ,(ಬಬಲೇಶ್ವರ)
