ಕಾದಂಬರಿಕಾರ ಸಚಿನ್ ತೀರ್ಥಹಳ್ಳಿ ಅವರ ‘C/O ಚಾರ್ಮಾಡಿ’ ಅವರ ಕಾದಂಬರಿ ಕುರಿತು ಹೇಮಂತ್ ಪಾರೇರ ಅವರು ಬರೆದಿರುವ ಪರಿಚಯವನ್ನು ತಪ್ಪದೆ ಓದಿ…
ಪುಸ್ತಕ : C/O ಚಾರ್ಮಾಡಿ
ಲೇಖಕರು : ಸಚಿನ್ ತೀರ್ಥಹಳ್ಳಿ
ಪ್ರಕಾರ : ಕಾದಂಬರಿ
ಪ್ರಕಾಶಕರು : ಸ್ವಪ್ನ ಬುಕ್ ಹೌಸ್
C/o ಚಾರ್ಮಾಡಿ ಪುಸ್ತಕವನ್ನು ಓದಲು ಕೈಗೆತ್ತಿಕೊಂಡಿದ್ದೆ. ಮೈಸೂರಿಗೆ ಯಾವುದೋ ಕೆಲಸ ನಿಮಿತ್ತ ತೆರಳಿದ ನನಗೆ ಶೂನ್ಯ ಸಮಯದಲ್ಲಿ ಸಚಿನ್ ತೀರ್ಥಹಳ್ಳಿ ಅವರು ಬರೆದಿರುವ c/o ಚಾರ್ಮಾಡಿ ಜೊತೆಯಾಗಿತ್ತು .
ಕಥೆಯೊಂದು ಶುರುವಾಗುವ ಮೊದಲು, ಎಂಬುವ ಕೃತೀಯ ಬಗೆಗಿನ ಸಣ್ಣ ಪರಿಚಯದಿಂದ ಅಧ್ಯಾಯಗಳು ಶುರುವಾದವು.
ಕೆಲವು ಅಧ್ಯಾಯಗಳನ್ನು ಓದುವವರೆಗೂ , ಲೇಖಕರ ಅನುಭವವನ್ನು ಎಳೆ ಎಳೆಯಾಗಿ ವಿವರಿಸುತ್ತಿರುವರೆಂದು ಇನ್ನೂ ಸ್ವಲ್ಪದರಲ್ಲೆ, ಕಥೆ ಶುರುವಾಗುವುದೆಂದು ನಂಬಿದೆನು.
ಅಥರ್ವ ಹೇಳಿದ ಪ್ರೇಮ ಕಥೆಗಳಿಂದ, ಚಾರ್ಮಾಡಿ ನೋಡಿದ ಕಥಾನಾಯಕನ ಬೆರಗಿನಿಂದ ಕಥೆಯೊಂದು ಶುರು ಮಾಡುವಿರೆಂದು ಅಂದುಕೊಂಡಿದ್ದ ನನಗೆ ,ಕಥೆಯೊಂದು ಶುರುವಾಗಿ ಅಧ್ಯಾಯ ಮೂರಕ್ಕೆ ಹೋಗಿದ್ದು ಗೊತ್ತೇ ಆಗಲಿಲ್ಲ.

ತೀರ್ಥಹಳ್ಳಿಯ ಸುತ್ತಮುತ್ತಲಿನ ವನಸಿರಿ ವೈಯಾರಗಳನ್ನು , ಹಸಿರನ್ನು ಹೊದ್ದ ಚಾರ್ಮಾಡಿಯ ಗಿರಿ ಸಾಲಿನ ಯವ್ವನವನ್ನು ಯುವತಿಯ ಪ್ರೇಮದೊಂದಿಗೆ ದಾರ ಪೋಣಿಸಿ ಹೆಣೆದಿರುವ ಕಥೆಯೋಳಗೊಂದು ಕಥೆಯನ್ನು ಕಟ್ಟಿ ಕೊನೆಯವರೆಗೂ ಕುತೂಹಲದಿಂದ ಪುಟ ತಿರುಗುವಂತೆ ಓದಿಸಿಕೊಂಡು ಹೋಗುವಂತೆ ಯೋಜಿಸಲಾದ ಚಾರ್ಮಾಡಿ , ಕುತೂಹಲವನ್ನು ಕೊನೆಯವರೆಗೂ ಬಿಟ್ಟುಕೊಡಲಿಲ್ಲ.
ಅಲೆಕಾನ್ ವೆನ್ನೆಲ್ಲಾಳ ಪ್ರೀತಿಯ ಪರಿತಾಪಕ್ಕೆ ಸಿಕ್ಕಿ, ಅನುಭವಿಸುವ ಹೃದಯದ ತಳಮಳಗಳಿಗೆ ಹಳ್ಳಿ ಸೊಗಡಿನ ಲೇಪಕೊಟ್ಟು, ಪಟ್ಟಣದ ಪ್ರೇಮ ಜ್ವರದ ಶಾಖ ಕೊಟ್ಟು , ವಿರಹದ ಬೇಗೆಯಲ್ಲಿ ಕಾಯಿಸಿ, ಅಯ್ಯೋ ಎನ್ನುವಷ್ಟು ಓದುಗರಿಗೂ ,ಹೃದಯ ಚುರುಕ್ ಎನ್ನುವಂತೆ ಮಾಡಿಬಿಟ್ಟಿರುವಿರಿ.
ವೆನ್ನೆಲಾ ಯಾರು?, ಅವಳೊಬ್ಬಳು ಪರಸ್ತ್ರೀಯೆ?, ವೇಶ್ಯೆಯೇ? ರಾ ಏಜೆಂಟೇ?, ಹಳ್ಳಿ ಹುಡುಗಿಯೇ ಎಂದು, ಕೊನೆವರೆಗೂ ಅಷ್ಟಿಷ್ಟು ಕಾಡಲಿಲ್ಲ.

‘C/O ಚಾರ್ಮಾಡಿ’ ಲೇಖಕ ಸಚಿನ್ ತೀರ್ಥಹಳ್ಳಿ
ಅವಳ ಪ್ರೀತಿ ಸಿಗದ ಹುಡುಗನ ಬಗ್ನ ಜೀವನದಲ್ಲಿ ಕುಡಿತದ ಚಟ ಅವನ ಜೀವನವನ್ನು ಮುಗಿಸೆ ಬಿಟ್ಟಿತ್ತು ಎನ್ನುತ್ತಿರುವಾಗಲೇ ರೋಚಕ ತಿರುವುಗಳನ್ನು ಕೊಟ್ಟು ಕಥೆಯ ಕೊನೆಯ ಭಾಗ ತುಂಬಾ ಸುಂದರವಾಗಿರುವಂತೆ ಅಲಂಕರಿಸಿರುವಿರಿ. ಕಥೆಯ ಪ್ರಾರಂಭದಲ್ಲಿ, ವನ್ಶಿಕಾಳ ಅಪ್ಪ ಅಮ್ಮ ಕೂಡ ಯುವ ಪ್ರೇಮಿಗಳ ಹಾಗೆ ವೀಕೆಂಡು ಕಳೆಯುವುದಕ್ಕೆ ಇಬ್ಬರೇ,ಮಡಿಕೇರಿಯ ರೆಸಾರ್ಟಿಗೆ ಹೋಗುತ್ತಿರುತ್ತಾರೆ. ಎನ್ನುವಂತೆ ,ಮುದುಡಿದ ಮನಸುಗಳನ್ನೂ ,ವಯಸ್ಸುಗಳ ಪರಿಮಿತಿ ಇಲ್ಲದೆ ರಿಚಾರ್ಜ್ ಮಾಡಲು ಮಡಿಕೇರಿಯನ್ನು ನೆನೆದಿರುವಿರಿ.
ನಾಯಕನ ಜೀವನದಲ್ಲಿ, ಅವಳ ಜೀವನದ ಬಗೆಗಿನ ದ್ವಂದ್ವ ಸತ್ಯಗಳನ್ನು ಪುಷ್ಠಿಕರಿಸಲು ಸಾಧ್ಯವಾಗದೆ ,ಇಷ್ಟೆಲ್ಲ ನಡೆದರೂ ಕೂಡ ವೆನ್ನೆಲಾ ಬಗೆಗಿನ ವ್ಯಾಮೋಹವನ್ನು ಕೊನೆಯವರೆಗೂ ಅಳಿಸಲಾಗಲಿಲ್ಲ. ಅವಳ ನೆನಪಾಗಿ ಬರೆದ ಕೃತಿಯನ್ನೇ ಬೆಂಕಿಗಾಹುತಿ ಮಾಡಿ , ಅವಳೆಡೆಗೆ ಸಾಗುವವನ ಕನಸು, ಮನುಜ ಲೋಕವನ್ನು ಬಿಟ್ಟು, ಚಾರ್ಮಾಡಿ ಎಂಬ ಹಸಿರ ತೇರನ್ನೂ
ಹತ್ತಿ ದೇವಕನ್ಯೆ ಬಳಿಗೆ ಸಾಗುವ ಪ್ರೇಮ ಮಾರ್ಗದ ದಾರಿ ಕಂಡುಕೊಂಡನೆಂದು ಅನಿಸಿತ್ತು. ಅವಳು ಅಲ್ಲಿಯೇ ಅವನಿಗಾಗಿ ಕಾಯುತ್ತಿದ್ದಳು.
ತುಂಬಾ ಸುಂದರವಾದ ಕೊನೆಯನ್ನು ಮಾಡಿರುವಿರಿ. ಇನ್ನು ಮುಂದೆ ,ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ , ನೆಚ್ಚಿನ ಕ್ರಿಕೆಟ್ ಪಂದ್ಯ ವೀಕ್ಷಿಸಲು ನಮ್ಮ ಜೋಗಿ ಸರ್ ಅವರನ್ನು ಸಂಪರ್ಕಿಸಬಹುದೆಂದು ಪರೋಕ್ಷವಾಗಿ ತಿಳಿಸಿಕೊಟ್ಟಿರುವಿರಿ.
- ಹೇಮಂತ್ ಪಾರೇರ – ಕುಶಾಲನಗರ
