ಬಹುಭಾಷಾ ತಾರೆ ಸಿಲ್ಕ ಸ್ಮಿತಾ




ಪ್ರತಿ ಯಶಸ್ಸಿನ ಹಿಂದೆ ಮನಕಲುಕುವ ಕತೆ ಇರುತ್ತದೆ. ಸಿಲ್ಕ್ ಸ್ಮಿತಾ ಬದುಕಿನ ಹಿಂದೆ ಕರಾಳ ನೋವಿನ ಕತೆ ಇದೆ. ಲೇಖಕ ಲೇಖನ ನಾಗರಾಜ್ ಅವರು ಮರೆತು ಹೋದ ಎಷ್ಟೋ ಕಲಾವಿದರನ್ನು ಮತ್ತೆ ತಮ್ಮ ಲೇಖನದ ಮೂಲಕ ನೆನಪಿಸುತ್ತಿದ್ದಾರೆ. ಓದಿ ನಿಮ್ಮ ಅಭಿಪ್ರಾಯ ಹಂಚಿಕೊಳ್ಳಿ.

ನಮ್ಮ ಬಣ್ಣದಲೋಕದಲ್ಲಿ,ಮಿಂಚಿದವರು ಹಲವರು, ಮಿಂಚಿ ಮರೆಯಾದವರು ಹಲವರು,ನೆನಪು ಉಳಿದವರು ಮಾತ್ರ ಕೆಲವರು. ತೆರೆಯ ಮೇಲಿನ ಜೀವನಕ್ಕೂ,ತೆರೆಯ ಹಿಂದಿನ ಜೀವನಕ್ಕೂ ಕೆಲವೊಂದು ಬಾರಿ ತುಂಬಾ ವ್ಯತ್ಯಾಸವಿರುತ್ತದೆ.ನಾವ್‌ ಅಂದುಕೊಂಡಷ್ಟು ತೆರೆಯ ಹಿಂದಿನ ಜೀವನ ಸುಲಭದ ಮಾತಂತು ಅಲ್ಲವೆ ಅಲ್ಲ. ಹೀಗೆ ದಶಕಗಳ ಕಾಲ ತೆರೆಯ ಮೇಲೆ ನಮ್ಮನ್ನೆಲ್ಲಾ ರಂಜಿಸಿ. ನಿಜ ಜೀವನದಲ್ಲಿ ದುರಂತ ನಾಯಕಿಯಾಗಿ ಕಂಡವರು “ಸಿಲ್ಕ್‌ ಸ್ಮಿತಾ”. ಹೌದು ಸೌಂದರ್ಯ ಪ್ರಿಯರಿಗೆ ಅವರು ಮನ ಮಾದಕ ನಟಿಯಾದರೆ. ಕಲಾ ಪ್ರಿಯರಿಗೆ ಮನ ಗೆದ್ದ ಮೋಹಕ ತಾರೆಯಾಗಿದ್ದರು. ಮೂಲತಃ ಆಂಧ್ರಪ್ರದೇಶದವರಾದ ಸಿಲ್ಕಸ್ಮಿತಾ ರವರ ಮೂಲ ಹೆಸರು ವಿಜಯಲಕ್ಷ್ಮಿ. ಕಡು ಬಡಕುಟುಂಬದಲ್ಲಿ ಜನಿಸಿದ ಇವರು. ತಮ್ಮ

ಎಂಟನೇ ವಯಸ್ಸಿನಲ್ಲಿ ವಿದ್ಯಾಭ್ಯಾಸವನ್ನು ನಿಲ್ಲಸಬೇಕಾಯಿತು. ಚಿಕ್ಕ ವಯಸ್ಸಿನಲ್ಲಿಯೆ ಚಿತ್ರರಂಗದ ಮೇಲೆ ಅಪಾರ ಆಸಕ್ತಿ ಹೊಂದಿದ್ದರಿಂದ. ಚಿಕ್ಕಮ್ಮನ ಜೊತೆ ಮದ್ರಾಸ್‌ ಗೆ ಹೋಗಿ ಮೇಕಪ್‌ ಕಲಾವಿದೆಯಾಗಿ ಗುರುತಿಸಿಕೊಂಡರು. ಅಲ್ಲಿಯೇ ಅವರಿಗೆ ಪ್ರಾಯೋಜಕರೊಬ್ಬರು ವಿಜಯಲಕ್ಷ್ಮಿ ಎಂಬ ಹೆಸರನ್ನು ಸ್ಮಿತಾ ಎಂದು ಬದಲಾಯಿಸಿದರು. ನಂತರ ತಮ್ಮ ೧೯ನೇ ವಯಸ್ಸಿನಲ್ಲಿ, ಕೆ.ವಿಜಯನ್ ನಿರ್ದೇಶನದ ತಮಿಳಿನ “ವಂಡೀ ಚಕ್ರಂ” ಚಿತ್ರದಲ್ಲಿ ಬಾರ್‌ಗರ್ಲ್‌ ಪಾತ್ರದ ಮೂಲಕ ನಟಿಯಾದರು. ಆ ಚಿತ್ರದಲ್ಲಿನ ಅವರ ʼಸಿಲ್ಕ್‌ʼ ಎಂಬ ಪಾತ್ರದ ಹೆಸರು ಬಹಳ ಹೆಸರು ತಂದು ಕೊಟ್ಟಿತು. ಮುಂದೆ ಅವರ ಹೆಸರಿನೊಂದಿಗೆ ಸಿಲ್ಕ್‌ ಎನ್ನುವುದು ಖಾಯಂ ಆಯಿತು.

ಸಿಲ್ಕಸ್ಮಿತಾ ರವರು ಇದ್ದಿದ್ದರೆ ಅವರಿಗೆ ಇಂದು ೬೦ ವರ್ಷವಾಗಿರುತ್ತಿತ್ತು. ನಮ್ಮೊಂದಿಗೆ ಇಲ್ಲದಿದ್ದರು, ಬೆಳ್ಳಿತೆರೆಯ ತಾರೆಯಾಗಿ ಮಾತ್ರ ಚಿತ್ರರಸಿಕರ ಮನದಲ್ಲಿ ಇಂದಿಗೂ ಜೀವಂತವಾಗಿದ್ದಾರೆ. ಕನ್ನಡ,ತಮಿಳು,ತೆಲುಗು,ಹಿಂದಿ ಎಲ್ಲಾ ಭಾಷೆಗಳಲ್ಲು ಸುಮಾರು ೪೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿ ಬಹುಭಾಷಾ ತಾರೆಯಾಗಿ ಗುರುತಿಸಿಕೊಂಡಿದ್ದರು. ಹೆಚ್ಚಾಗಿ ಮನ ಮೋಹಕ ಮಾದಕ ಕುಣಿತದ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರಿಂದ,ಅವರನ್ನು ಮಾದಕ ನಟಿಯೆಂದೆ ತುಂಬಾ ಜನ ಕರೆದರು.ಕೆಲವರು ಕಾಮೋತ್ತೇಜಕ ನಟಿ,ಮತ್ತೆ ಕೆಲವರು ಐಟಮ್‌ ಕ್ವೀನ್‌ ಎಂದೆಲ್ಲಾ ಹೇಳಿದರು. ಅವರ ಕೆಲವು ಐಟಮ್‌ ಸಾಂಗ್‌ ಚಿತ್ರಗಳು ಬಾಕ್ಸ್‌ ಆಫೀಸ್‌ಗಳಲ್ಲಿ ಒಂದು ಕಾಲದಲ್ಲಿ ಧೂಳೆಬ್ಬಿಸಿದ್ದು ಸುಳ್ಳಲ್ಲ. ನಮ್ಮ ಕನ್ನಡದಲ್ಲಿ ಶಂಕರ್‌ ನಾಗರವರೊಂದಿಗೆ ʼಗೆದ್ದಮಗʼ ಚಿತ್ರದಲ್ಲಿ ೩ನೇ ನಾಯಕಿಯಾಗುವ ಮೂಲಕ ಕನ್ನಡಕ್ಕೂ ಪ್ರವೇಶಿಸಿದರು.ನಂತರ ಲಾಕಪ್‌ ಡೆತ್‌,ಅಳಿಮಯ್ಯ,ಚಿನ್ನ,ಗಣೇಶನ ಗಲಾಟೆ ಚಿತ್ರಗಳಲ್ಲಿನ ಅವರ ಪಾತ್ರ, ಡ್ಯಾನ್ಸ್‌ ಸಾಂಗ್‌ ಇಂದಿಗೂ ತುಂಬಾ ಫೇಮಸ್‌ ಆಗಿದೆ.ಹಳ್ಳಿಮೇಷ್ಟ್ರು ಚಿತ್ರದಲ್ಲಿನ ಅವರ ಟೀಚರ್ ಪಾತ್ರ‌, ಅಭಿನಯ ಎರಡು ಇಷ್ಟವಾಗುತ್ತದೆ. ಶಂಕರ್‌ನಾಗ, ರವಿಚಂದ್ರನ್‌ರಂತಹ ಕೆಲವು ಒಳ್ಳೇಯ ನಿರ್ದೇಶಕರುಗಳು ಸಿಲ್ಕಸ್ಮಿತಾ ರವರಿಗೆ ಒಳ್ಳೇಯ ಪಾತ್ರಗಳನ್ನು ಕೊಟ್ಟರು. ಆದರೆ, ಅವರ ಬಿಕಿನಿ ಡ್ರೆಸ್,ಮೋಹಕ‌ ಪಾತ್ರಗಳನ್ನು ಕಂಡವರು ಅವರನ್ನು ಗ್ಲಾಮರಸ್‌ ನಟಿಯಾಗಿಯೆ ನೋಡಿದರು. ೮೦-೯೦ರ ದಶಕದಲ್ಲಿ ಜನಗಳ ಬಹುನಿರೀಕ್ಷೆಯ ಗ್ಲಾಮರಸ್‌ ನಾಯಕಿಯಾಗಿದ್ದರು.

ಫೋಟೋ ಕೃಪೆ : Youtube

ವಿ.ರವಿಚಂದ್ರನ್‌ರವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ಸಿಲ್ಕಸ್ಮಿತಾರವರು ರವಿಚಂದ್ರನ್‌ರವರನ್ನು ತುಂಬಾ ಗೌರವಿಸುತ್ತಿದ್ದರಂತೆ. ಒಮ್ಮೆ ಕಾರ್ಯಕ್ರಮವೊಂದರಲ್ಲಿ ರವಿಚಂದ್ರ್‌ರವರೆ ಹೇಳುತ್ತಿದ್ದರು. ಸಿಲ್ಕ್‌ ಸ್ಮಿತಾರವರ ವೈಕ್ತಿಕ ಜೀವನ ಅಷ್ಟೆನೂ ಚೆನ್ನಾಗಿರಲಿಲ್ಲ ಎಂದು ಕೆಲವು ನಿರ್ದೇಶಕರು ಹೇಳುತ್ತಾರೆ. ತಮ್ಮ ೧೭ನೇ ವಯಸ್ಸಿನಲ್ಲಿ ಎತ್ತಿನ ಗಾಡಿ ಚಾಲಕನನ್ನು ಮದುವೆಯಾದರು.ಗಂಡ-ಹಂಡತಿ ನಡುವೆ ಹೊಂದಾಣಿಕೆ ಆಗದೆ ಗಂಡನನ್ನು ಬಿಟ್ಟು ದೂರ ಉಳಿದಿದ್ದರು. ತುಂಬಾ ಆಸೆ ಆಕಾಂಕ್ಷೆಗಳನ್ನು ಹೊಂದಿದ್ದರು.ಓದಿದ್ದು ನಾಲ್ಕನೇ ಕ್ಲಾಸ್‌ ಆದರು ಇಂಗ್ಲೀಷ್‌,ಹಿಂದಿ,ತಮಿಳು ಎಲ್ಲಾ ಭಾಷೆಗಳನ್ನು ಇಷ್ಟಪಟ್ಟು ಕಲಿತಿದ್ದರಂತೆ.ನೇರ ನಡೆ ನುಡಿಗೆ ಹೆಸರಾಗಿದ್ದರು, ಹಾಗೂ ಕಡಿಮೆ ಸ್ನೇಹಿತರನ್ನು ಹೊಂದಿದ್ದರು.ತಮ್ಮ ವೃತ್ತಿಯ ಮೇಲೆ ಅಪಾರ ಗೌರವ ಹೊಂದಿದ್ದ ಸಿಲ್ಕ್‌ ಸ್ಮಿತಾರವರು ಶೂಟಿಂಗ್‌ಗೆ ತಡವಾಗಿ ಬರುತ್ತಿರಲಿಲ್ಲವಂತೆ. ಮೃದು ಸ್ವಭಾವ ಹಾಗೂ ಮಗುವಿನ ವ್ಯಕ್ತಿತ್ವ ಹೊಂದಿದ್ದರು ಎಂದು ಅವರೊಂದಿಗೆ ಕೆಲಸ ಮಾಡಿದಂತಹ ತಂತ್ರಜ್ಞರು ಹೇಳುತ್ತಾರೆ. ೮೦-೯೦ರ ದಶಕದಲ್ಲಿ ಸಿಲ್ಕ್‌ ಸ್ಮಿತಾರವರು ಬಹು ಬೇಡಿಕೆಯ ನಟಿಯಾಗಿದ್ದರಂತೆ. ನಾಯಕ-ನಾಯಕಿಗಿಂತ, ಹೆಚ್ಚು ಸಂಭಾವನೆ ಪಡೆಯುತ್ತಿದ್ದರಂತೆ. ಅವರ ಒಂದು ದಿನದ ಕಾಲ್‌ಶೀಟ್‌ಗೆ ಅಂದಿನ ಕಾಲದಲ್ಲೆ ಒಂದು ಲಕ್ಷ ಕೊಡಬೇಕಾಗಿತ್ತು.

ಒಂದು ಚಿತ್ರಕ್ಕೆ ೫ ರಿಂದ ೬ ಲಕ್ಷ ಪಡೆಯುತ್ತಿದ್ದರಂತೆ.ಆದರೆ, ಸಿಲ್ಕಸ್ಮಿತಾ ರವರ ಹತ್ತಿರ ಅತೀಯಾದ ಹಣವಿದ್ದರೂ,ಮಾನಸಿಕ ನೆಮ್ಮದಿ ಮಾತ್ರ ಅಲ್ಪವು ಇರಲಿಲ್ಲವಾಗಿತ್ತು. ಸಿಲ್ಕಸ್ಮಿತಾರವರೊಂದಿಗೆ ಕೆಲಸ ಮಾಡಿದಂತಹ ಆಪ್ತರೊಬರು ಹೇಳುವ ಪ್ರಕಾರ, ಸ್ಮಿತಾರವರು ಜೀವನದಲ್ಲಿ ತುಂಬಾ ನೊಂದಿದ್ದರು. ಅವರನ್ನು ಚಿತ್ರರಂಗದ ಕೆಲವರು ಕೆಟ್ಟ ದೃಷ್ಠಿಯಿಂದ ಕಂಡಿದ್ದರು.

ಫೋಟೋ ಕೃಪೆ : chiloka

ನೋಡಲು ಸುಂದರವಾಗಿ,ದೇಹ ಸೌಂದರ್ಯವನ್ನು ಹೊಂದಿದ ಅವರನ್ನು , ಅವಕಾಶ ಕೊಡಿಸುವುದಾಗಿ ದೈಹಿಕವಾಗಿ ಬಳಸಿಕೊಂಡವರು ಇದಾರೆ. ಮತ್ತೆ ಕೆಲವರು ಅವರ ಜೀವನದ ಕಹಿ ಘಟನೆಯನ್ನು ಕಂಡು ಹಣದ ಆಸೆ ತೋರಿಸಿ ದುರುಪಯೋಗ ಪಡಿಸಿಕೊಂಡಿದ್ದರು. ತುಂಬಾ ಜನ ಅವರ ಮಾನಸಿಕ ನೋವನ್ನು,ದೌರ್ಬಲ್ಯವನ್ನು ನೋಡಿ, ಮದ್ಯಪಾನ,ಧೂಮಪಾನದಂತಹ ಕೆಟ್ಟ ಅಭ್ಯಾಸಗಳನ್ನು ಅವರಿಗೆ ಕಲಿಸಿದ್ದರು. ಅವರ ದೇಹಸೌಂದರ್ಯಕ್ಕಷ್ಟೆ ಆಸೆ ಪಟ್ಟಿದ್ದರು. ಮಾನಸಿಕ ಕಿರುಕುಳ ಕೂಡ ಅನುಭವಿಸಿದ್ದರು ಎನ್ನುತ್ತಾರೆ. ಅವರ ಅಜಾರಿತನ, ಬಲಹೀನತೆ ಕಂಡಂತಹವರು ಅವರಿಗೆ ಕನಿಕರಿಸುವ ಬದಲು ಅವರನ್ನು ಕಡೆಗಣಿಸಿ ನೋಡಿದ್ದೆ ಹೆಚ್ಚಾಗಿತ್ತು. ಕೊನೆಗೆ ಚಿತ್ರರಂಗದಲ್ಲಿ ಇವೆಲ್ಲಾ ಸರ್ವೇ ಸಾಮಾನ್ಯ ಎನ್ನುವಷ್ಟರ ಮಟ್ಟಿಗೆ ಅವರ ಮನೋಭಾವನೆಯೆ ಬದಲಾಗಿತ್ತಂತೆ.ನಿರ್ಮಾಪಕಿಯಾಗಬೇಕೆಂಬ ಕನಸು ಕಂಡಿದ್ದ ಸಿಲ್ಮ್‌ ಸ್ಮಿತರವರು ಚಲನಚಿತ್ರ ನಿರ್ಮಾಣಗಳಲ್ಲು ಕೈ ಹಾಕಿ ಚಿತ್ರಗಳು ಸೋತು ಹಣವನ್ನು ಕಳೆದುಕೊಂಡಿದ್ದರು.ಹೀಗೆ ಒಂದು ಕಡೇ ಪ್ರೇಮ ವೈಫಲ್ಯ, ಮಾನಸಿಕ ನೋವು,ಹಣದ ಕೊರತೆಯಿಂದ ಕೊನೆಗೆ ಬಹಳ ಖಿನ್ನತೆಗೆ ಒಳಗಾದರು, ಮತ್ತಷ್ಟು ಮದ್ಯಪಾನಕ್ಕೆ ಶುರು ಮಾಡಿದ್ದರಂತೆ.



ಸೆಪ್ಟೆಂಬರ್‌ ೨೩,೧೯೯೬ ರಂದು ಸಿಲ್ಕ್‌ ಸ್ಮಿತ ತನ್ನ ಆಪ್ತ ಸ್ನೇಹಿತೆ ಅನುರಾಧ ಎನ್ನುವವರ ಹತ್ತಿರ ತಮ್ಮ ಮನೆಗೆ ಬಾ ಏನೊ ಮತಾಡಬೇಕು ಎಂದಿದ್ದರಂತೆ. ಸ್ನೇಹಿತೆ ಅನುರಾಧ ಅಂದು ಬೆಳಿಗ್ಗೆ ತನ್ನ ಮಗುವನ್ನು ಶಾಲೆಗೆ ಬಿಟ್ಟು ಸಿಲ್ಕಸ್ಮಿತರವರನ್ನು ನೋಡಲು ಅವರ ಅಪಾರ್ಟ್‌ಮೆಂಟ್‌ಗೆ ಹೋದಾಗ ಸಿಲ್ಕ್‌ ಸ್ಮಿತಾರವರು ತಮ್ಮ ಜೀವನವನ್ನು ಮುಗಿಸಿ ಶವವಾಗಿ ಮಲಗಿದ್ದರು. ವಿಷಯ ತಿಳಿಯುತ್ತಿದ್ದಂತೆ ಚಿತ್ರರಂಗಕ್ಕೆ ದೊಡ್ಡ ಆಘಾತವಾಯಿತು. ಯಾಕೆಂದರೆ ಅವರಿಗೆ ಆಗ ಕೇವಲ ೩೬ ವರ್ಷ ಅಷ್ಟೆ. ಲವಲವಿಕೆಯಿಂದ ಎಲ್ಲರೊಂದಿಗೆ ಜೊತೆಗಿದ್ದ ನಟಿ ಆತ್ಮಹತ್ಯೆಗೆ ಶರಣಾಗಿದ್ದರು ಎಂದರೆ ನಂಬಲು ಅಸಾಧ್ಯವಾಗಿತ್ತು. ಅವರ ನಗುಮುಖವನ್ನಷ್ಟೆ ಕಂಡ ಕೆಲವರಿಗೆ ಮನಸ್ಸಿನ ಮುಖ ಕಾಣಿಸಿರಲಿಲ್ಲ. ತನ್ನ ೩೬ ವರ್ಷಗಳಲ್ಲಿ ೧೬ ವರ್ಷಗಳ ಕಾಲ ಚಿತ್ರರಂಗದಲ್ಲಿದ್ದರು. ನಾಯಕನಟನಿಗಿಂತ ಬಹು ಬೇಡಿಕೆಯ ನಟಿಯಾಗಿ ಮೆರೆದಿದ್ದರು. ನಮ್ಮ ಕನ್ನಡದಲ್ಲಿ ರವಿಚಂದ್ರನ್‌ರವರೊಂದಿಗೆ ಒಳ್ಳೇಯ ಸ್ನೇಹಿತೆಯಾಗಿದ್ದ ಅವರು ತಮ್ಮ ಕೊನೆದಿನಗಳವರೆಗೂ ರವಿಚಂದ್ರನ್‌ರವರೊಂದಿಗೆ ಚೆನ್ನಾಗಿಯೆ ಮಾತಾಡುತ್ತಿದ್ದರಂತೆ.

ಎಷ್ಟೊ ನೋವಗಳನ್ನು ಮನಸ್ಸಲಿಯೆ ನುಂಗಿ,ಯಾರಿಗೂ ಹೇಳದೆ ಇರುತ್ತಿದ್ದರಂತೆ. ಅವರ ಸಾವನ್ನು ಕೆಲವರು ಆತ್ಮಹತ್ಯೆ,ಕೆಲವರು ಮಾನಸಿಕ ಕಿರುಕುಳದಿಂದ ಎಂದರು. ಆದರೆ, ನಿಜವಾದ ಕಾರಣ ಮಾತ್ರ ಇಂದಿಗೂ ಯಾರಿಗು ತಿಳಿದಿಲ್ಲ. ಸಿಲ್ಕ ಸ್ಮಿತಾ ಮಾತ್ರ ಬದುಕಿನಿಂದ ದೂರವಾಗಿದ್ದು ಮಾತ್ರ ನಿಜ. ಅವರ ಜೀವನದ ಕುರಿತಾಗಿ ಕೆಲ ಚಲನಚಿತ್ರಗಳು ಬಂದಿವೆ. ಅವರ ಬಯೋಪಿಕ್‌ ತಯಾರಿ ಕೂಡ ನಡೆಯುತ್ತಿದೆ. ನಮ್ಮ ಕನ್ನಡದಲ್ಲಿ ಮುಖ್ಯ ಪಾತ್ರದಲ್ಲಿ ಅವರು ನಟಿಸಿದ ಕೊನೆಯ ಚಿತ್ರ ೧೯೯೬ರಲ್ಲಿ ಬಂದಂತಹ “ಬದುಕು ಜಟಕಾ ಬಂಡಿ” ಚಿತ್ರ. ನಿಜ ಹೇಳಬೇಕೆಂದರೆ ಸಿಲ್ಕಸ್ಮಿತ ರವರು ನಮ್ಮ ಚಿತ್ರರಂಗ ಕಂಡಂತಹ ʼದುರಂತ ಬದುಕಿನ ಸುಂದರ ನಾಯಕಿʼ ಎಂದೆ ಹೇಳಬಹುದು.


  • ಲೇಖನ್ ನಾಗರಾಜ್

0 0 votes
Article Rating

Leave a Reply

0 Comments
Inline Feedbacks
View all comments
Home
Search
Menu
Recent
About
×

Discover more from ಆಕೃತಿ ಕನ್ನಡ

Subscribe now to keep reading and get access to the full archive.

Continue reading

0
Would love your thoughts, please comment.x
()
x
Aakruti Kannada

FREE
VIEW