ಮಲೆನಾಡಿನ ಆಡುಭಾಷೆಯಲ್ಲಿ ಚಗಳಿನೊಣ ಕುರಿತು ಪಶುವೈದ್ಯೆ ಡಾ ಯುವರಾಜ್ ಹೆಗಡೆ ಅವರು ಓದುಗರೊಂದಿಗೆ ಮಾಹಿತಿ ಹಂಚಿಕೊಂಡಿದ್ದಾರೆ.ಮುಂದೆ ಓದಿ…
(ಮಲೆನಾಡಿನ ಆಡುಭಾಷೆಯಲ್ಲಿ “ಚಗಳಿನೊಣ”ಎಂದು ಕರೆಯುತ್ತಾರೆ)
Family- Lorisidae
Phylum- chordata(ಕಶೇರುಕ)
Order- primates( ವಾನರ)
Scientific name- Lorisinae
ಕಾಡುಪಾಪಗಳು ಮೂಲತಃ ಭಾರತ ಮತ್ತು ಶ್ರೀಲಂಕಾ ದೇಶದಲ್ಲಿ ಕಂಡು ಬರುವ ಸಸ್ತನಿ ಪ್ರಾಣಿಗಳಾಗಿದ್ದು “ಲೋರಿಸಿಡೆ” ಕುಟುಂಬಕ್ಕೆ ಸೇರಿದವಾಗಿರುತ್ತವೆ.”ವಾನರ” ವರ್ಗಕ್ಕೆ ಸೇರಿದ ಇವು ಪಶ್ಚಿಮ ಘಟ್ಟದ ಅರಣ್ಯ, ಎಲೆ ಉದುರುವ ಕಾಡುಗಳು, ಬಯಲುಸೀಮೆಯ ಕುರುಚಲು ಕಾಡು ಹಾಗೂ ಪೊದೆಗಳಲ್ಲಿ ವಾಸಿಸುತ್ತವೆ. ಬೆಂಗಳೂರಿನಂತಹ ಪಟ್ಟಣ ಪ್ರದೇಶದಲ್ಲಿ ಇರುವ ದೊಡ್ಡ ಮರಗಳು,ಉದ್ಯಾನವನಗಳಲ್ಲಿ ಕೂಡ ಇವುಗಳ ಇರುವಿಕೆ ದಾಖಲಾಗಿದೆ. ಇವುಗಳು ರಾತ್ರಿ ವೇಳೆಯಲ್ಲಿ ಹೆಚ್ಚು ಕ್ರಿಯಾಶೀಲವಾಗಿರುವ “ನಿಶಾಚರಿ” ಪ್ರಾಣಿಯಾಗಿದ್ದು, ಇವುಗಳ ಜೀವಿತ ಅವಧಿಯು 12-
15 ವರ್ಷಗಳು ಎಂದು ತಿಳಿಯಲ್ಪಟ್ಟಿರುತ್ತದೆ.

ಸಾದು ಸ್ವಭಾವ, ಅತ್ಯಂತ ನಾಚಿಕೆ, ಮಾನವನಿಗೆ ನಿರುಪದ್ರವಿ ಪ್ರಾಣಿಯಾದ ಇವು ಮರಗಳ ತುದಿಗಳ ರೆಂಬೆಗಳಲ್ಲಿ ಹೆಚ್ಚಾಗಿ ವಾಸಿಸುತ್ತವೆ. ಅವುಗಳ ಸಾದು ಸ್ವಭಾವವನ್ನು ಗಮನಿಸಿ “ಕಾಡಿನ ಮಗು” ಎಂದು ಸಹ ಕರೆಯುತ್ತಾರೆ. ಇವುಗಳಲ್ಲಿ ಕಂದು ಮತ್ತು ಕಿತ್ತಳೆ ಬಣ್ಣದ ಎರಡು ಜಾತಿಗಳ ಕಾಡುಪಾಪಗಳು ಇರುತ್ತವೆ. ದೊಡ್ಡ ಗುಂಡಗಿನ ಕಣ್ಣುಗಳು ಅದರ ವಿಶೇಷ. ವಾನರ ವರ್ಗಕ್ಕೆ ಸೇರಿದ್ದವಾದರೂ ಅವುಗಳಂತೆ ಚಟುವಟಿಕೆಯಿಂದ ಇರಲಾರವು, ಬದಲಿಗೆ ಕಾಡುಪಾಪಗಳು ಮರದ ತುದಿಗಳಲ್ಲಿ ನಿಧಾನವಾಗಿ ರೆಂಬೆಯಿಂದ ರೆಂಬೆಗೆ ಚಲಿಸುವಾಗ ತನ್ನ ಉದ್ದವಾದ ಕೈಗಳನ್ನು ಉಪಯೋಗಿಸುತ್ತವೆ. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಹೆಚ್ಚು ಚಟುವಟಿಕೆಯನ್ನು ಕಾಣಬಹುದಾಗಿದೆ. ಕವಲು ಒಡೆದ ಮರದ ಹರೆಗಳಲ್ಲಿ ಗುಂಪಾಗಿ, ಚೆಂಡಿನಂತೆ ದೇಹವನ್ನು ಮುದುಡಿಕೊಂಡು ಮಲಗುತ್ತವೆ.
ಆಹಾರ- ಮರದ ಮೇಲಿನ ಕೀಟಗಳು ಇವುಗಳ ಪ್ರಮುಖ ಆಹಾರವಾಗಿದ್ದು ಅದಲ್ಲದೆ ಎಲೆ,ಹಣ್ಣುಗಳು, ಅಪರೂಪಕ್ಕೆ ಪಕ್ಷಿಗಳ ಮೊಟ್ಟೆಗಳನ್ನು ಸಹ ಆಹಾರವಾಗಿ ಸೇವಿಸುತ್ತವೆ.
ವಂಶಾಭಿವೃದ್ದಿ- ಸಾಮಾನ್ಯವಾಗಿ ಏಪ್ರಿಲ್-ಮೇ ತಿಂಗಳು ಹಾಗೂ ಅಕ್ಟೋಬರ್- ನವೆಂಬರ್ ನಲ್ಲಿ ವಂಶಾಭಿವೃದ್ದಿ ಕೈಗೊಳ್ಳುವ ಇವುಗಳ ಗರ್ಭಾವಸ್ಥೆಯ ಅವಧಿ 166-169 ದಿನಗಳು ( ಅಂದಾಜು ಐದೂವರೆ ತಿಂಗಳು). ಒಂದು ಬಾರಿಗೆ ಒಂದು ಅಥವಾ ಅಪರೂಪಕ್ಕೆ ಎರಡು ಮರಿಗಳಿಗೆ ಜನ್ಮ ನೀಡುವ ಇವು ಮರಿಗಳನ್ನು ಎರಡರಿಂದ ಮೂರು ವಾರಗಳವರೆಗೆ ತಮ್ಮೊಂದಿಗೆ ಇರಿಸಿಕೊಂಡು ಸಲಹುತ್ತವೆ.

ಫೋಟೋ ಕೃಪೆ : projectnoah
ಸಮಸ್ಯೆಗಳು – ಅಪರೂಪವಾಗುತ್ತಿರುವ ಕಾಡುಪಾಪಗಳ ಬದುಕು ಹಲವಾರು ಸಮಸ್ಯೆಗಳನ್ನು ಹೊಂದಿದೆ.
* ಅರಣ್ಯ ನಾಶದಿಂದ ಅವುಗಳಿಗೆ ವಾಸಸ್ಥಳದ ಕೂರತೆ ಹಾಗೂ ವಂಶಾಭಿವೃದ್ದಿಯಲ್ಲಿ ಸಮಸ್ಯೆ ಎದುರಾಗಿದೆ.
* ಮಾಂಸಕ್ಕಾಗಿ ನಿರಂತರ ಬೇಟೆ ಎಗ್ಗಿಲ್ಲದೆ ಸಾಗಿದೆ.
* ಅವುಗಳ ನಿಧಾನ ಗತಿಯ ಚಲನೆಯಿಂದಾಗಿ ಶತ್ರುಗಳ ಆಕ್ರಮಣಕ್ಕೆ ಸುಲಭವಾಗಿ ತುತ್ತಾಗುತ್ತವೆ. ಶತ್ರುಗಳ ಆಕ್ರಮಣದ ವೇಳೆ ಕೆಟ್ಟ ವಾಸನೆಯ ತಮ್ಮ ಮೂತ್ರವನ್ನು ಮುಖ ಮತ್ತು ದೇಹಕ್ಕೆ ಹಚ್ಚಿಕೊಳ್ಳುವುದು ಮಾತ್ರ ಇವುಗಳು ಕಂಡುಕೊಂಡಿರುವ ರಕ್ಷಣಾ ಮಾರ್ಗವಾಗಿದೆ.
* ಮೌಢ್ಯ-ದೊಡ್ಡ ಗಾತ್ರದ ಕಣ್ಣುಗಳನ್ನು ಗಮನಿಸಿ ನೇತ್ರ ಸಂಬಂದಿ ದೋಷಗಳನ್ನು ಗುಣಪಡಿಸಬಹುದೆಂಬ ಮೂಡನಂಬಿಕೆ ಹಾಗೂ ಅವುಗಳ ಮಾಂಸದಲ್ಲಿ ಮತ್ತು ಹಲ್ಲುಗಳಲ್ಲಿ ಔಷಧೀಯ ಗುಣಗಳಿವೆಯೆಂದು ತಪ್ಪು ಕಲ್ಪನೆಯಿಂದ ಕಾಡುಪಾಪಗಳನ್ನು ಬೇಟೆಯಾಡಿ ಭಕ್ಷಿಸಲಾಗುತ್ತಿದೆ.
ನಮ್ಮ ಪೂರ್ವಜರ ಗುಂಪಿಗೆ ಸೇರಿದ ಇವುಗಳು, ಮೇಲೆ ತಿಳಿಸಲಾಗಿರುವ ಹಲವಾರು ಕಾರಣಗಳಿಂದಾಗಿ ಹಂತ ಹಂತವಾಗಿ ನೆಲೆ ಕಳೆದುಕೊಂಡು ಅವಸಾನದತ್ತ ಸಾಗಿರುವುದು ವಿಷಾದನೀಯವೇ ಸರಿ. ಕೀಟಗಳನ್ನು ಭಕ್ಷಿಸಿ ಪ್ರಕೃತಿಯಲ್ಲಿ ಸಮತೋಲನ ಸಾಧಿಸಲು ಸಹಕರಿಸುವ ಮುಗ್ಧ ಜೀವಿ ಕಾಡುಪಾಪಗಳ ಬೇಟೆ ನಿಲ್ಲಲಿ. ಜಗತ್ತಿನ ಪ್ರತಿಯೊಂದು ಜೀವಿಗಳಿಗೂ ಕೂಡ ನಮ್ಮಂತೆಯೇ ಬದುಕುವ ಹಕ್ಕು ಪಡೆದಿರುತ್ತವೆ, ಭೂಮಿ ಮಾನವನಿಗಷ್ಟೇ ಸೀಮಿತವಾಗಿರದೆ ಸಕಲ ಜೀವರಾಶಿಗಳಿಗೂ ಸೇರಿದ್ದೆಂಬುದನ್ನು ಅರಿತು ಬಾಳೋಣ.
- ಡಾ ಯುವರಾಜ್ ಹೆಗಡೆ ಪಶುವೈದ್ಯರು, ತೀರ್ಥಹಳ್ಳಿ
